ಮಹಾಶೈವೋಪದೇಶ –೦೯ : ಗುರುಬೋಧೆಯ ಸ್ವರೂಪ, ಶಿಷ್ಯರ ಸಂಖ್ಯೆ — ಸತ್ವ : ಮುಕ್ಕಣ್ಣ ಕರಿಗಾರ

ಮಹಾಕಲ್ಯಾಣಕಾರಕನಾದ ಮಹಾದೇವನ ನೆಲೆಯಾದ ಕೈಲಾಸಲ್ಲಿ ಪರಶಿವನು ಪರಾಶಕ್ತಿಯೊಂದಿಗೆ ಕುಳಿತಿಹನು.ದೇವಿ ಪಾರ್ವತಿಯು ಪರಮೇಶ್ವರನನ್ನು ಪ್ರಶ್ನಿಸುವಳು, ‘ ಲೋಕನಾಥನೆ,ಭೂಲೋಕದಲ್ಲಿ ನಿಮ್ಮ ಅನುಗ್ರಹ ಪಡೆಯಲು ಗುರೂಪದೇಶವು ಸರಳ ಮಾರ್ಗವಾಗಿದ್ದುದರಿಂದ ಗುರೂಪದೇಶಕ್ಕೆ ಮಹತ್ವವಿದೆ.ಆದರೆ ಗುರುಬೋಧೆಯ ಹೆಸರಿನಲ್ಲಿ ಅನಾಚಾರ ನಡೆಯುತ್ತಿದೆ.ಗುರುವಾಗಲು ಅರ್ಹತೆ ಇಲ್ಲದವರು ನೂರಾರು,ಸಾವಿರಾರು ಜನ ಶಿಷ್ಯರನ್ನು ಮಾಡಿಕೊಂಡು ಶಿಷ್ಯರುಗಳಿಂದ ಸೇವೆ ಪೂಜೆ ಮಾಡಿಸಿಕೊಂಡು ಮೆರೆಯುತ್ತಿದ್ದಾರೆ.ಲೋಕದ ಮನುಜರು ಗುರುಗಳಾದೆವು ಎಂದು ಭ್ರಮಿಸಿ ಬೋಧೆ ಕೊಡಲು ನಾ ಮುಂದು ತಾನು ಮುಂದು ಎಂದು ಓಡಾಡುತ್ತಿದ್ದಾರೆ.ಇಂತಹ ಗುರುಗಳಿಂದ ಉಪದೇಶ ಪಡೆದವರ ಪಾಡೇನು? ನಿಜವಾದ ಗುರು ಯಾರು? ಶ್ರೇಷ್ಠ ಶಿಷ್ಯನಾರು? ನೀವು ಯಾರಿಗೆ ಮೋಕ್ಷವನ್ನು ಅನುಗ್ರಹಿಸುತ್ತೀರಿ? ಕೃಪೆ ಮಾಡಿ ನನ್ನ ಸಂದೇಹ ನಿವಾರಿಸಿ’ ಎಂದು ಪ್ರಶ್ನಿಸುವಳು.ಪರಶಿವನು,’ ದೇವಿ ಕಲ್ಯಾಣಿಯೆ,ಆಧ್ಯಾತ್ಮಿಕ ಮಹತ್ವದ ಪ್ರಶ್ನೆಯನ್ನು ಕೇಳಿರುವಿ.ಲೋಕದಲ್ಲಿ ಗುರುದೀಕ್ಷೆಯ ಹೆಸರಿನಲ್ಲಿ ದುರುಳ ಮಾನವರು ಅನಾಚಾರ ಎಸಗುತ್ತಿದ್ದಾರೆ.ಗುರು ಎಂದರೆ ಯಾರು ಎಂದರಿಯದ ಮರುಳರು ಕಂಡಕಂಡವರನ್ನು ಗುರುವೆಂದು ಭ್ರಮಿಸಿ ಕೆಡುತ್ತಿದ್ದಾರೆ.ನೂರು,ಸಾವಿರ ಸಂಖ್ಯೆಯಲ್ಲಿ ಶಿಷ್ಯರುಗಳನ್ನು ಮಾಡಿಕೊಳ್ಳುತ್ತಿದ್ದಾರೆ.ಈ ಸಂದೇಹವು ಲೋಕಕಲ್ಯಾಣದ ದೃಷ್ಟಿಯಿಂದಲೇ ನಿನ್ನಲ್ಲಿ ಉದ್ಭವಿಸಿದೆ.ಅಗಜೆಯೆ ಕೇಳು,ಭೂಲೋಕದಲ್ಲಿ ನನ್ನ ಅನುಗ್ರಹ ಪಡೆಯಲು ಗುರೂಪದೇಶವು ಸುಲಭ ಸಾಧನವು.ಗುರುವಿನಿಂದ ಜನರು ಹರನಾದ ನನ್ನೆಡೆಗೆ ಬರುವುದು ಸುಲಭೋಪಾಯವು.ನಾನೇ ಗುರು ತತ್ತ್ವವನ್ನು ಲೋಕದಲ್ಲಿ ಪ್ರಚುರಪಡಿಸಿರುವೆನು.ಶಿಷ್ಯನ ಭವಬಂಧನವನ್ನು ಕಳೆಯಬಲ್ಲವನೇ ಗುರು.ನನ್ನ ಮಂತ್ರಗಳನ್ನು ಸಿದ್ಧಿ ಮಾಡಿಕೊಂಡಲ್ಲದೆ ಗುರುವಾಗಲಾರರು. ಏಕಾಕ್ಷರಿ,ದ್ವ್ಯಕ್ಷರಿ,ತ್ರ್ಯಯಕ್ಷರಿ,ಚತುರಾಕ್ಷರಿ,ಪಂಚಾಕ್ಷರಿ,ಷಡಕ್ಷರಿ,ಸಪ್ತಾಕ್ಷರಿ,ಅಷ್ಟಾಕ್ಷರಿ,ನವಾಕ್ಷರಿ,ದಶಾಕ್ಷರಿ,ಏಕಾದಶಾಕ್ಷರಿ ಮತ್ತು ದ್ವಾದಶಾಕ್ಷರಿ ಮಂತ್ರ ಎನ್ನುವ ನನ್ನ ಮಂತ್ರಗಳಿವೆ.ಮಂತ್ರವು ಸಿದ್ಧಿಯಾಗಬೇಕಾದರೆ ಅಕ್ಷರಕ್ಕೆ ಲಕ್ಷದಂತೆ ಜಪಿಸಬೇಕು ಅದರ ಕಾಲುಭಾಗ ಪುರಶ್ಚರಣೆ ಮಾಡಬೇಕು.ಅಂದರೆ ಮಾತ್ರ ಮಂತ್ರವು ಸಿದ್ಧಿಸುವುದು.ಹೀಗೆ ಮಂತ್ರಸಿದ್ಧಿ ಪಡೆದವನು ತನಗುಪದೇಶಿಸಿದ ಮಂತ್ರವನ್ನು ಹನ್ನೆರಡು ಲಕ್ಷ ಜಪಿಸಬೇಕು.ಅಂದಾಗ ಮಾತ್ರ ಅವನು ಗುರುವೆನ್ನಿಸಿಕೊಂಡು ಶಿಷ್ಯರಿಗೆ ಬೋಧಿಸಲು ಅರ್ಹನಾಗುವನು.ಲೋಕದಲ್ಲಿ ಸಂನ್ಯಾಸಿಯು ಸಂಸಾರಿಗಳಿಗೆ ಮಂತ್ರೋಪದೇಶ ಮಾಡಕೂಡದು.ಶ್ರೇಷ್ಠ ಸಂನ್ಯಾಸಿಯು ಮಾತ್ರ ಉತ್ತಮಸಾಧಕರಾದ ಮೂರು ಜನ ಸಂಸಾರಿಗಳಿಗೆ ಉಪದೇಶಿಸಬಹುದು.ಉಳಿದ ಸಂನ್ಯಾಸಿಗಳು ಸಂಸಾರಿಗಳಿಗೆ ಉಪದೇಶಿಸುವುದು ಪಾಪಕಾರ್ಯವು.ಅದರಿಂದ ಅವರಿಗೆ ನರಕಪ್ರಾಪ್ತಿಯಾಗುವುದು.ಹಾಗೆಯೇ ಗುರುವಾದವನು ಗಂಡ ಹೆಂಡತಿ ಇಬ್ಬರಿಗೂ ಉಪದೇಶಿಸಬಾರದು,ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಉಪದೇಶಿಸಬೇಕು.ಗುರುವಾದವನು ಮೂರು ಜನ ಶಿಷ್ಯರಿಗೆ ಉಪದೇಶಿಸುವುದು ಶ್ರೇಷ್ಠವಾದುದು.ಹತ್ತುಜನರಿಗೆ ಇಲ್ಲವೆ ಹೆಚ್ಚೆಂದರೆ ಇಪ್ಪತ್ತೈದು ಜನರಿಗೆ ಮಾತ್ರ ಉಪದೇಶಿಸಬೇಕು.ನೂರು,ಸಾವಿರ,ಹತ್ತುಸಾವಿರ,ಲಕ್ಷ ಶಿಷ್ಯರನ್ನು ಪಡೆದ ಕುನ್ನಿಗುರುಗಳು ಆ ಶಿಷ್ಯರ ಸಮೇತ ನರಕಸೇರುವರು.ಶಿವತತ್ತ್ವವು ಬೆಳೆದು ಫಲ ಕೊಡಬಹುದಾದ ನೆಲದಲ್ಲಿ ಬಿತ್ತುವವನೇ ಶ್ರೇಷ್ಠ ಗುರುವು.ಗುರುವಾದವನು ತನ್ನ ಶಿಷ್ಯನಾಗುವ ವ್ಯಕ್ತಿಯ ಅಂತರಂಗ- ಬಹಿರಂಗಗಳೆರಡನ್ನು ಪರೀಕ್ಷಿಸಿ ಅವನು ಪರಿಶುದ್ಧನಾಗಿದ್ದಾನೆ ಎಂದು ದೃಢಪಟ್ಟರೆ ಮಾತ್ರ ಮಂತ್ರೋಪದೇಶ ನೀಡಬೇಕು.ಹಾಗೆಯೇ ಶಿಷ್ಯನಾದವನು ಗುರುವಾದವನು ಯೋಗ್ಯನಿದ್ದಾನೆ,ಪರಿಪೂರ್ಣನಿದ್ದಾನೆ ಎಂದು ಮನವರಿಕೆಯಾದರೆ ಮಾತ್ರ ಅವನಲ್ಲಿ ಶಿಷ್ಯತ್ವವಹಿಸಬೇಕು.ಗುರುವಾದವನು ಶಿಷ್ಯನಾಗುವವನ ಯೋಗ್ಯತಾನುಸಾರ ಏಕಾಕ್ಷರಿಯಿಂದ ದ್ವಾದಶಾಕ್ಷರಿಯವರೆಗಿನ ಯಾವುದಾದರೂ ನನ್ನ ಮಂತ್ರವನ್ನು ಉಪದೇಶಿಸಬೇಕು.ಶಿಷ್ಯನು ಗುರುಮುಖದಿಂದ ಅನುಗ್ರಹಿಸಲ್ಪಟ್ಟ ಮಂತ್ರವು ನನ್ನ ಸ್ವರೂಪವೇ ಎಂದು ತಿಳಿದು ಸಾಧನಾನುಷ್ಠಾನ ಮಾಡಬೇಕು.ಇದು ನಿಜವಾದ ಗುರುಬೋಧೆಯ ಕ್ರಮವು.ಇಂತಲ್ಲದ ಯಾವ ಉಪದೇಶವೂ ಫಲಕೊಡದು’ ಎಂದು ಪರಶಿವನು ತನ್ನ ಸತಿಯಾದ ಪಾರ್ವತಿದೇವಿಗೆ ಗುರೂಪದೇಶ ತತ್ತ್ವವನ್ನರಹುವನು.

‌ ಗುರುದೀಕ್ಷೆಯ ಕುರಿತಾದ ಶಿವ ಪಾರ್ವತಿಯರ ಈ ಸಂವಾದವು ಲೋಕದಲ್ಲಿ ಯಾವುದು ದಿಟವಾದ ಗುರುಬೋಧೆ,ಯಾರು ನಿಜವಾದ ಗುರುಗಳು,ಯಾರು ಯೋಗ್ಯ ಶಿಷ್ಯರು ಎನ್ನುವುದನ್ನು ಸ್ಪಷ್ಟವಾಗಿ ನಿರೂಪಿಸಿದೆ.ಲೋಕದ ಮರುಳ ಮಾನವರುಗಳೆಲ್ಲರೂ ಗುರುಗಳಲ್ಲ,ಮತಿಭ್ರಾಂತರೆಲ್ಲ ಶಿಷ್ಯರಲ್ಲ.ಅರಳ್ದ ಚೇತನರೇ ಗುರುವಾಗಲರ್ಹರು,ಅಳಿ ಮನಸ್ಕರು ಗುರುಗಳಲ್ಲ,ಗುರುತತ್ತ್ವವನ್ನು ಅರಿಯದವನು ಶಿಷ್ಯನಲ್ಲ.ಪರಶಿವನು ಮೇಲಿನ ಸಂವಾದದಲ್ಲಿ ಒಂದಕ್ಷರಿಂದ ಹನ್ನೆರಡಕ್ಷರದವರೆಗೆ ತನ್ನ ಮಂತ್ರಗಳಿವೆ ಎಂದು ತಿಳಿಸಿದ್ದಾನೆ.” ಓಂ” ಎನ್ನುವುದು ಶಿವನ ಏಕಾಕ್ಷರಿ ಮಂತ್ರವಾಗಿದು ಅದು ಪ್ರಣವ ಎನ್ನಿಸಿಕೊಂಡಿದೆ.ಈ ಪ್ರಣವ ಮಂತ್ರವು ಶಿವನ ಪರಶಿವ,ಪರಬ್ರಹ್ಮ ಸೂಚಕ ಮಂತ್ರವು.ಪ್ರಣವ ಮಂತ್ರವನ್ನು ಒಂದು ಲಕ್ಷಬಾರಿ ಜಪಿಸಿ,ನಂತರ ಇಪ್ಪತ್ತೈದು ಸಾವಿರ ಪುನಃ ಜಪಿಸಿದರೆ ಈ ಮಂತ್ರವು ಸಿದ್ಧಿಯಾಗುವುದು.ಗುರುವಾಗಿ ಈ ಮಂತ್ರವನ್ನು ಉಪದೇಶಿಸಬೇಕು ಎನ್ನುವವನು ಸಿದ್ಧಿಗೊಂಡ ಈ ಮಂತ್ರವನ್ನು ಹನ್ನೆರಡು ಲಕ್ಷಸಾರೆ ಜಪಿಸಿದರೆ ಅವನು ಶಿಷ್ಯರಿಗೆ ಮಂತ್ರೋಪದೇಶ ನೀಡಲು ಅರ್ಹನಾಗುವನು.ಇದೇ ತೆರನಾಗಿ ಎಲ್ಲ ಮಂತ್ರಗಳನ್ನು ಆ ಮಂತ್ರದಲ್ಲಿ ಎಷ್ಟು ಅಕ್ಷರಗಳಿವೆಯೋ ಅಷ್ಟು ಲಕ್ಷಸಂಖ್ಯೆಯಲ್ಲಿ ಮಂತ್ರ ಜಪಿಸಿ ಮಂತ್ರಸಿದ್ಧಿಯನ್ನು ಪಡೆಯಬೇಕು.ಆ ಬಳಿಕ ಸಿದ್ಧಮಂತ್ರವನ್ನು ಹನ್ನೆರಡು ಲಕ್ಷಸಾರೆ ಜಪಿಸಿದರೆ ಗುರುವಾಗುವನು.ಅಂಥಹವನು ಮಾತ್ರ ಶಿಷ್ಯರಿಗೆ ಉಪದೇಶಿಸಲು ಅರ್ಹತೆ ಪಡೆಯುವನು.” ಶಿವ” ಎನ್ನುವುದು ಶಿವನ ಎರಡಕ್ಷರ ಮಂತ್ರವು.” ಓಂ ಶಿವ” ಎನ್ನುವುದು ಮೂರಕ್ಷರ ಮಂತ್ರವು.” ಓಂ ಹ್ರೀಂ ಶಿವ” ಎನ್ನುವುದು ನಾಲ್ಕಕ್ಷರ ಮಂತ್ರವು.” ನಮಃ ಶಿವಾಯ” ಎನ್ನುವುದು ಐದಕ್ಷರದ,ಪಂಚಾಕ್ಷರಿ ಮಂತ್ರವು.” ಓಂ ನಮಃ ಶಿವಾಯ” ಎನ್ನುವುದು ಆರಕ್ಷರದ ಷಡಕ್ಷರ ಮಂತ್ರವು.” ಓಂ ನಮಃ ಶಿವಾಯ ಓಂ” ಎನ್ನುವುದು ಏಳಕ್ಷರಗಳ ಮಹಾಶೈವರ ಶಿವಸಪ್ತಾಕ್ಷರಿ ಮಂತ್ರವು.” ಹ್ರೀಂ ಓಂ ನಮಃ ಶಿವಾಯ ಹ್ರೀಂ” ಎನ್ನುವ ಶಿವಾಷ್ಟಾಕ್ಷರಿ ಮಂತ್ರವು.” ಓಂ ಹ್ರೀಂ ಕ್ಲೀಂ ಶ್ರೀಂ ನಮಃ ಶಿವಾಯ” ಎನ್ನುವುದು ಶಿವ ನವಾಕ್ಷರಿ ಮಂತ್ರವು.” ಓಂ ಹ್ರಾಂ ಹ್ರೀಂ ಹ್ರೂಂ ಹ್ರೈಂ ಶಿವಾಯ ನಮಃ” ಎನ್ನುವುದು ಶಿವ ದಶಾಕ್ಷರಿ ಮಂತ್ರವು.” ಓಂ ನಮೋ ಭಗವತೇ ರುದ್ರಾಯ” ಎನ್ನುವುದು ಶಿವನ ಹನ್ನೊಂದು ಅಕ್ಷರಗಳ ಏಕಾದಶಾಕ್ಷರಿ ಮಂತ್ರವು.” ಓಂ ನಮೋ ಭಗವತೇ ಸದಾಶಿವಾಯ” ಎನ್ನುವುದು ಶಿವನ ಹನ್ನೆರಡು ಅಕ್ಷರಗಳ ದ್ವಾದಶಾಕ್ಷರಿ ಮಂತ್ರವಾಗಿದೆ.ಈ ಮಂತ್ರಗಳನ್ನು ಉಕ್ತಕ್ರಮದಲ್ಲಿ ಸಿದ್ಧಿಸಿಕೊಂಡು ಸಾಧನಾನುಷ್ಠಾನ ಗೈದವರು ಮಾತ್ರ ಮಂತ್ರೋಪದೇಶ ನೀಡಲು ಅರ್ಹರಾಗುತ್ತಾರೆ.

ಮೇಲಿನ ಸಂವಾದದಲ್ಲಿ ಪರಶಿವನು ಸಂನ್ಯಾಸಿಯು ಸಂಸಾರಿಗಳಿಗೆ ಮಂತ್ರೋಪದೇಶ ಮಾಡಬಾರದು ಎಂದು ನಿಯಮ ವಿಧಿಸಿದ್ದಾನೆ.ಆದರೆ ನಮ್ಮಲ್ಲಿ ಸಂನ್ಯಾಸಿಗಳೆನ್ನಿಸಿಕೊಂಡವರು‌ ಕೂಳಿನಾಸೆಗಾಗಿ ಸಂಸಾರಿಗಳಿಗೆ ಉಪದೇಶ ಮಾಡುತ್ತಿದ್ದಾರೆ.ಇದು ಶಿವಾಚಾರವಲ್ಲವಾದ್ದರಿಂದ ಇಂತಹ ಅನಾಚಾರಿ ಸಂನ್ಯಾಸಿಗಳು ನರಕಭಾಜನರಾಗುತ್ತಾರೆ.ಶ್ರೇಷ್ಠ ಸಂನ್ಯಾಸಿ ಎಂದರೆ ಕೋಟಿ ಶಿವಮಂತ್ರವನ್ನು ಜಪಿಸಿರುವ ಸಂನ್ಯಾಸಿಯು ಶಿವಕಾರಣ ಪುರುಷರಾದ,ಶಿವ ವಿಭೂತಿಗಳಾದ ಮೂರು ಜನ ಗೃಹಸ್ಥರಿಗೆ ಉಪದೇಶಿಸಬಹುದು.ಒಂದು ಕೋಟಿ ಶಿವ ಮಂತ್ರವನ್ನು ಜಪಿಸಲಾರದ ಸಂನ್ಯಾಸಿಯು ಸಂಸಾರಿಗಳಿಗೆ ದೀಕ್ಷೆ ನೀಡುವಂತಿಲ್ಲ.ಹಾಗೆಯೇ ಗುರುವಾದವನು ಒಂದೇ ಕುಟುಂಬವಾಗಿರುವ ಗಂಡ ಮತ್ತು ಹೆಂಡತಿ ಇಬ್ಬರಿಗೆ ಉಪದೇಶಿಸಬಾರದು.ಗಂಡ ಹೆಂಡತಿಯರು ರತಿಕ್ರೀಡೆಯನ್ನಾಡುವುದರಿಂದ ಒಬ್ಬ ಗುರುವಿನಲ್ಲಿಯೇ ಗಂಡ ಮತ್ತು ಹೆಂಡತಿ ಇಬ್ಬರೂ ಉಪದೇಶ ಪಡೆದರೆ ಅವರಿಬ್ಬರೂ ಒಬ್ಬ ಗುರುವಿನ ಮಕ್ಕಳಾಗಿ ಅಣ್ಣ ತಂಗಿಯರು ಆಗುತ್ತಾರೆ.ಅಣ್ಣ ತಂಗಿಯರ ನಡುವೆ ಸಂಸಾರಸುಖಕ್ಕೆ ಅವಕಾಶವಿಲ್ಲವಾದ್ದರಿಂದ ಗುರುವಾದವನು ಗಂಡ ಹೆಂಡತಿ‌ ಇಬ್ಬರಿಗೆ ಉಪದೇಶಿಸಬಾರದು.ಅವಿವೇಕಿ ಗುರುಗಳು ಗಂಡ ಹೆಂಡತಿ ಇಬ್ಬರಿಗೂ ಬೋಧಿಸಿ ಅನಾಚಾರವನ್ನು ಆಚರಿಸುತ್ತಿದ್ದಾರೆ.

ಗುರುವಾದವನು ಎಷ್ಟು ಶಿಷ್ಯರಿಗೆ ಉಪದೇಶಿಸಬಹುದು ಎಂದು ಸ್ವಯಂ ಪರಶಿವನೇ ನಿಯಮಿಸಿರುವುದರಿಂದ ಹೊಟ್ಟೆಹೊರೆಯಲು ನೂರಾರು,ಸಾವಿರಾರು ಶಿಷ್ಯರನ್ನು ಮಾಡಿಕೊಳ್ಳುತ್ತಿರುವ ಕುನ್ನಿಗುರುಗಳು ತಮಗೆ ನರಕವೇ ಗತಿ ಎಂದರಿತುಕೊಳ್ಳಬೇಕು.ಶಿಷ್ಯರ ಸಂಖ್ಯೆ ಮುಖ್ಯವಾಗಬಾರದು ಗುರುವಿಗೆ,ಅವರ ಸತ್ವ ಮುಖ್ಯವಾಗಬೇಕು.ಮನೆಯಲ್ಲಿ ಹೆಂಡಿರು ಮುಕ್ಕಳು ಸೇರುವುದಿಲ್ಲವೆಂದು ಕೂಳಿನಾಸೆಗಾಗಿ,ಹೆಂಡ ಮಾಂಸಗಳ ತೆವಲಿಗಾಗಿ ಕಂಡವರನ್ನು ಶಿಷ್ಯರನ್ನಾಗಿ ಮಾಡಿಕೊಳ್ಳುವ ಭಂಡಗುರುಗಳು ನರಕಸೇರುತ್ತಾರೆ.ನಿಜಗುರುವಾದವನು ಒಬ್ಬ ಸಮರ್ಥ ಶಿಷ್ಯನಿಗೆ ಬೋಧಿಸಿ ಅವನಲ್ಲಿ ಶಿವತತ್ತ್ವವನ್ನು ಬಿತ್ತಿ ಬೆಳೆಯಬೇಕು.ಉತ್ತಮರಾದ ಮೂವರು ಶಿಷ್ಯರಿಗೆ ಬೋಧಿಸಬಹುದು.ಸಚ್ಚರಿತರಾದ ಹತ್ತು ಜನರಿಗೂ ಉಪದೇಶಿಸಬಹುದು.ತೀರ ಹೆಚ್ಚು ಎಂದರೆ ಒಬ್ಬ ಗುರುವು ಇಪ್ಪತ್ತೈದು ಜನ ಶಿಷ್ಯರಿಗೆ ಮಾತ್ರ ಉಪದೇಶಿಸಬೇಕು.ಅದಕ್ಕಿಂತ ಹೆಚ್ಚುಜನ ಶಿಷ್ಯರಿಗೆ ಉಪದೇಶಿಸುವ ಮಲಭಾಂಡದೇಹಿಗುರುವು ತನ್ನ ಶಿಷ್ಯಸಮಸ್ತರೊಡನೆ ನರಕ ಸೇರುವನು.ಇಂತಹ ಕೂಳಿನಾಸೆಯ ಕುನ್ನಿ ಗುರುಗಳಿಗೆ ಮೋಕ್ಷವಿಲ್ಲ.ಮೋಕ್ಷವಿದ್ಯೆಯು ಉದರಂಭರಣವಿದ್ಯೆಯಲ್ಲವಾದ್ದರಿಂದ ಹೊಟ್ಟೆಪಾಡಿಗಾಗಿ,ಹಣಸಂಪಾದಿಸುವಾಸೆಗಾಗಿ ಸಾವಿರಾರು ಜನ ಶಿಷ್ಯರನ್ನು ಮಾಡಿಕೊಳ್ಳುವ ಅಧಮರು ನರಕಸೇರುವರಲ್ಲದೆ ಅವರಿಗೆ ಮೋಕ್ಷವಿಲ್ಲ.

About The Author