ಮಹಾಶೈವೋಪದೇಶ –೦೮ : ಲಿಂಗ– ಮೂರ್ತಿ : ಮುಕ್ಕಣ್ಣ ಕರಿಗಾರ 

ವಿಶ್ವೋದ್ಧಾರಲೀಲೆಗಾಗಿ ಶಿವನಾಗಿ ಕೈಲಾಸದಲ್ಲಿ ಲೀಲೆಯನ್ನಾಡುತ್ತಿರುವ ಪರಬ್ರಹ್ಮ ಶಿವನನ್ನು ಪರಾಶಕ್ತಿಯು ಕುತೂಹಲದಿಂದ ಪ್ರಶ್ನಿಸುವಳು ‘ ಪತಿದೇವನೆ, ಜಗತ್ತಿನಲ್ಲಿ ಜನರು ನಿಮ್ಮನ್ನು ಲಿಂಗ ಮತ್ತು ಮೂರ್ತಿಯ ರೂಪದಲ್ಲಿ ಪೂಜಿಸುತ್ತಿದ್ದಾರೆ.ಇದರಲ್ಲಿ ಯಾವುದು ಶ್ರೇಯಸ್ಕರವು? ಯಾವ ಪೂಜೆಯಿಂದ ನೀವು ಪ್ರಸನ್ನರಾಗುವಿರಿ?’. ಪಾರ್ವತಿಯ ಲೋಕಾನುಗ್ರಾಹಕಾರಕ ಪ್ರಶ್ನೆಯಿಂದ ಪ್ರಸನ್ನಚಿತ್ತನಾದ ಪರಶಿವನು ಉತ್ತರಿಸುವನು ;’ ದೇವಿ,ಬಹಳ ಮಹತ್ವದ ಪ್ರಶ್ನೆಯನ್ನು ಕೇಳಿರುವಿ.ನಿನ್ನ ಪ್ರಶ್ನೆಯು ಭೂಲೋಕದ ನನ್ನ ಭಕ್ತರ ಸಂದೇಹಗಳನ್ನು ಪರಿಹರಿಸುತ್ತದೆಯಾದ್ದರಿಂದ ವಿವರಿಸಿ ಹೇಳುವೆನು,ಕೇಳು.ಲೋಕಮಾತೆಯೆ,ನನಗೆ ಸಾಕಾರ ,ನಿರಾಕಾರಗಳೆಂಬ ಎರಡು ಅವಸ್ಥೆಗಳಿಹವು ಎಂಬುದನ್ನು ನೀನು ಬಲ್ಲೆಯಷ್ಟೆ.ಬ್ರಹ್ಮ,ವಿಷ್ಣ್ವಾದಿ ಇತರ ದೇವತೆಗಳಿಗೆ ಸಾಕಾರ ರೂಪ ಒಂದೇ ಇರುವುದು ಅವರಾರೂ ಪರಬ್ರಹ್ಮರಲ್ಲವಾದ್ದರಿಂದ.ನಾನೊಬ್ಬನೇ ಪರಬ್ರಹ್ಮನೂ ಪರಮೇಶ್ವರನೂ ಆಗಿರುವುದರಿಂದ ನನಗೆ ಸಾಕಾರ ಮತ್ತು ನಿರಾಕಾರಗಳೆಂಬ ಇತ್ತೆರನಾದ ರೂಪು ನಿರೂಪಗಳ ಅವಸ್ಥೆಯುಂಟು.ಮೂಲತಃ ನಿರಾಕಾರ ಪರಬ್ರಹ್ಮನಾಗಿರುವ ನಾನು ವಿಶ್ವಲೀಲೆಗಾಗಿ ಸಾಕಾರ ರೂಪವನ್ನು ಧರಿಸಿ,ನಿನ್ನ‌ಪತಿಯೆಂದೆನಿಸಿ,ಗಣಪ- ಷಣ್ಮುಖರ ಪಿತನಾಗಿ ಕೈಲಾಸವಾಸನೆಂದೆನಿಸಿ ಲೀಲೆಯನ್ನಾಡುತ್ತಿರುವೆನು.ವಿಶ್ವವ್ಯವಹಾರವು ಸಾಕು ಎನಿಸಿದಾಗ ಪ್ರಳಯ ನಾಟ್ಯಗೈದು ಜಗತ್ತಿನ ಪ್ರಳಯವನ್ನುಂಟು ಮಾಡಿ ಈ ವಿಶ್ವವನ್ನೆಲ್ಲ ನನ್ನಲ್ಲಿ ಸೂಕ್ಷ್ಮರೂಪದಿಂದ ಅಡಗಿಸಿಕೊಂಡು ನನ್ನ ಸಹಜಸ್ವರೂಪಾನಂದದಲ್ಲಿ ತಲ್ಲೀನನಾಗುವೆನು ಅನಂತಕಾಲ.ಮತ್ತೆ ಜಗದುತ್ಪತ್ತಿಯ ಸಂಕಲ್ಪವು ಅಂಕುರಿಸೆ ಸಹಜಾನಂದಯೋಗದಿಂದೆದ್ದು ನನ್ನೊಳಗೆ ಅಡಗಿದ್ದ ವಿಶ್ವವನ್ನು ಹೊರಹೊಮ್ಮಿಸುವೆನು.ಇದುವೇ ನವ ಸೃಷ್ಟಿಯು.ನನ್ನ ನಿರಾಕಾರ ಪರಬ್ರಹ್ಮತತ್ತ್ವಸೂಚಕವಾದುದೇ ಲಿಂಗವು,ನನ್ನ‌ಜಗದ್ವಿಲಾಸರೂಪವೇ ಸಾಕಾರ ಶಿವನೆಂಬುದು.ನಿರಾಕಾರ ತತ್ತ್ವವು ಯೋಗಿಗಳು,ಉನ್ನತ ಆಧ್ಯಾತ್ಮ ಸಾಧಕರುಗಳಿಗೆ ರುಚಿಸುವುದಲ್ಲದೆ ಸಾಮಾನ್ಯ ಭಕ್ತರಿಗೆ ಹಿಡಿಸದು.ಜನಸಾಮಾನ್ಯರಾದ ಭಕ್ತರ ಉದ್ಧಾರಕ್ಕಾಗಿ ನಾನು ಸಾಕಾರಶಿವನ ರೂಪಧರಿಸಿಹೆನು.ನನ್ನ ಭಕ್ತರು ಲಿಂಗ ಮತ್ತು ಮೂರ್ತಿ ಈ ಎರಡು ರೂಪಗಳಲ್ಲಿ ತಮಗೆ ಇಷ್ಟವಾದ ಯಾವ ರೂಪದಿಂದಲಾದರೂ ನನ್ನನ್ನು ಪೂಜಿಸಬಹುದು.ಎರಡೂ ಪೂಜೆಗಳು ನನಗೆ ಪ್ರಿಯವೆ,ಎರಡೂ ಶ್ರೇಯಸ್ಕರವೆ.ಇದರಲ್ಲಿ ಒಂದು ಹಿರಿದು ಮತ್ತೊಂದು ಕಿರಿದು ಎನ್ನುವ ಭೇದವಿಲ್ಲ.ಲೋಕದಲ್ಲಿ ಕೆಲವರು ನಿರಾಕಾರ ಲಿಂಗಪೂಜೆಯೇ ಶ್ರೇಷ್ಠವೆಂದೂ ಮೂರ್ತಿಪೂಜೆಯು ಕನಿಷ್ಟವೆಂದೂ ವಾದಿಸುತ್ತಿದ್ದಾರೆ.ಇದು ಅವರ ಭಾವನೆಯಲ್ಲದೆ ನನಗೆ ಸಮ್ಮತವಾದ ವಿಚಾರವಲ್ಲವು.ನಾನು ನನ್ನ ಭಕ್ತರಲ್ಲಿ ಯಾವ ಭೇದವನ್ನೂ ಎಣಿಸೆನು.ಯಾರು ಯಾವ ಮಾರ್ಗದ ಮೂಲಕ ಬಂದರೂ ಅವರು ನನಗೆ‌ ಪ್ರಿಯರೆ.ನಾನು ಭಕ್ತರ ಶುದ್ಧಾಂತಃಕರಣವನ್ನು ನೋಡುವೆನಲ್ಲದೆ ಅವರು ಲಿಂಗಪೂಜೆಯನ್ನು ಮಾಡುತ್ತಿದ್ದಾರೆಯೋ ಇಲ್ಲವೆ ಮೂರ್ತಿಪೂಜೆಯನ್ನು ಮಾಡುತ್ತಿದ್ದಾರೆಯೇ ಎಂದು ಭೇದವನ್ನೆಣಿಸುವುದಿಲ್ಲ’.

ಪರಶಿವ ಪರಶಿವೆಯರ ಈ ಸಂವಾದವು ಪರಮಾತ್ಮನ ಸಾಕಾರ ನಿರಾಕಾರಗಳೆಂಬ ‘ಉಭಯೇಕೋಪರಶಿವ’ ತತ್ತ್ವಾರ್ಥ ನಿರೂಪಣೆಯಾಗಿದೆ.ಶಿವನೊಬ್ಬನೇ ಪರಬ್ರಹ್ಮನು,ಪರಮೇಶ್ವರನು ಆಗಿರುವುದರಿಂದ ಅವನನ್ನು ಪರಶಿವ ಎನ್ನುತ್ತಾರೆ.ಬ್ರಹ್ಮನಾಗಲಿ ವಿಷ್ಣುವಾಗಲಿ ಪರಬ್ರಹ್ಮರಲ್ಲವಾದ್ದರಿಂದ ಅವರಿಗೆ ನಿರ್ದಿಷ್ಟವಾದ ಆಕಾರವೊಂದು ಮಾತ್ರ ಇದೆ.ಶಿವನು ಮೂಲತಃ ನಿರಾಕಾರನಾಗಿದ್ದು ಶಿವನ ನಿರಾಕಾರಸ್ವರೂಪವೇ ಲಿಂಗವು.ಶಿವಾಲಯಗಳಲ್ಲಿರುವ ಶಿವನ ಲಿಂಗವು ನಿರಾಕಾರ ಪ್ರತೀಕವು.ಶಿವಾಲಯಗಳ ಲಿಂಗರೂಪವು ಸ್ಥಾವರವೆಂದು ಬಗೆದ ಕೆಲವರು ಪರಶಿವ ತತ್ತ್ವವನ್ನು ಸೂಕ್ಷ್ಮರೂಪದಲ್ಲಿ ಇಷ್ಟಲಿಂಗರೂಪದಲ್ಲಿ ಶಿರ,ಕಂಠ,ಬಾಹುಗಳಲ್ಲಿ ಧರಿಸಿ ಪೂಜಿಸುವುದುಂಟು.ವಸ್ತುತಃ ಸ್ಥಾವರಲಿಂಗ,ಇಷ್ಟಲಿಂಗಗಳಲ್ಲಿ ವ್ಯತ್ಯಾಸವೇನಿಲ್ಲ.ಜನರು ತಮ್ಮ ತಮ್ಮ ಮತಧರ್ಮವೇ ಶ್ರೇಷ್ಠವೆಂದು ಬಿಂಬಿಸಲು ಹೀಗೆ ವಾದಿಸುತ್ತಾರೆ.ಸ್ಥಾವರಲಿಂಗದಲ್ಲಿ ಇರುವವನೂ ಶಿವನೇ ಇಷ್ಟಲಿಂಗದಲ್ಲಿ ಇರುವವನೂ ಶಿವನೇ ಎಂದಾದ ಬಳಿಕ ಭಕ್ತರ ಭಾವನೆಯಲ್ಲಿ ಭೇದವಾಗಿದೆಯಲ್ಲದೆ ಶಿವತತ್ತ್ವದಲ್ಲಿ ಭೇದವಿಲ್ಲ.ಇಷ್ಟಲಿಂಗೋಪಾಸಕರ ಸಂಖ್ಯೆಯು ಕರ್ನಾಟಕ,ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಬಸವಣ್ಣನವರ ಪ್ರಭಾವಕ್ಕೆ ಒಳಗಾದ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದೆಯಲ್ಲದೆ ಅದು ರಾಷ್ಟ್ರವ್ಯಾಪಿ ಶಿವತತ್ತ್ವವಲ್ಲ; ಆದರೆ ಸ್ಥಾವರಲಿಂಗೋಪಾಸನೆಯು ದೇಶದಾದ್ಯಂತ ಕಂಡುಬರುವ ಸಾರ್ವತ್ರಿಕ ,ಸಾರ್ವಕಾಲಿಕ ಶಿವೋಪಾಸನೆಯು.ಬಸವಣ್ಣನವರು ಜನಸಾಮಾನ್ಯರನ್ನು ಪುರೋಹಿತರು ಮತ್ತು ಪಟ್ಟಭದ್ರರ ಕಪಿಮುಷ್ಟಿ,ಶೋಷಣೆಗಳಿಂದ ಮುಕ್ತಗೊಳಿಸಲು ಪರಶಿವನ ಇಷ್ಟಲಿಂಗತತ್ತ್ವವನ್ನು ಆವಿಷ್ಕರಿಸಿ,ಪ್ರಚಾರಕ್ಕೆ ತಂದರು.ಭಾರತದಲ್ಲಿ ಸಿಂಧೂನದಿಯ ನಾಗರಿಕತೆಯ ಪೂರ್ವದಿಂದಲೂ ಶಿವನನ್ನು ಬಾಣಲಿಂಗ,ಮರುಳುಲಿಂಗ,ಉದ್ಭವಲಿಂಗಗಳಾದಿ ಸ್ಥಾವರಲಿಂಗ ರೂಪದಲ್ಲಿಯೇ ಪೂಜಿಸಲಾಗುತ್ತಿತ್ತು.ಇಷ್ಟಲಿಂಗದ ಕಲ್ಪನೆಯು ಬಸವಣ್ಣನವರ ವಿಶಿಷ್ಟಕೊಡುಗೆ,ಧಾರ್ಮಿಕ ಕ್ರಾಂತಿ.ಬಸವಣ್ಣನವರ ಪೂರ್ವದಲ್ಲಿ ಇಷ್ಟಲಿಂಗ ಪೂಜೆ ಇತ್ತು ಎಂದು ಕೆಲವರು ವಾದಿಸುತ್ತಾರಾದರೂ ಅಂತಹ ವಾದಗಳಿಗೆ ಐತಿಹಾಸಿಕ ಆಧಾರಗಳಿಲ್ಲ.ಬಸವಣ್ಣನವರಾದಿ ಶರಣರು ಪೂಜ್ಯಭಾವದಿಂದ ಕಾಣುವ ಅತಿಪುರಾತನ ಶಿವಭಕ್ತರಾದ ಅರವತ್ತುಮೂರು ಮಂದಿ ಪುರಾತನವರು ಸ್ಥಾವರಲಿಂಗಪೂಜಕರು ಎನ್ನುವುದನ್ನು ಗಮನಿಸಿದರೆ ಇಷ್ಟಲಿಂಗೋಪಾಸನೆಯು ಬಸವಣ್ಣನವರು ಆವಿಷ್ಕರಿಸಿದ,ಸಂಸ್ಥಾಪಿಸಿದ ಶಿವಪೂಜಾವಿಶೇಷ ಎನ್ನುವುದು ಮನದಟ್ಟಾಗುತ್ತದೆ.ಇಷ್ಟಲಿಂಗೋಪಾಸನೆಯು ಆಗಮೋಕ್ತವೆಂದು ಕೆಲವರು ಆಗಮ ಪ್ರಮಾಣವನ್ನು ನೀಡುತ್ತಾರಾದರೂ ಆಗಮಗಳು ಇತ್ತೀಚಿನ ರಚನೆಗಳೇ ಹೊರತು ಅವು ವೇದ,ಉಪನಿಷತ್ತುಗಳಂತೆ ಸನಾತನ ಸಾಹಿತ್ಯವಲ್ಲ.ಆಗಮಗಳಲ್ಲಿ ಬಳಸಿದ ಸಂಸ್ಕೃತ ಭಾಷೆಯು ಇತ್ತೀಚಿನ ಸಂಸ್ಕೃತ ಎನ್ನುವುದು ಸಂಸ್ಕೃತ ಭಾಷೆಯನ್ನು ಬಲ್ಲ ಯಾರಿಗಾದರೂ ಅರ್ಥವಾಗುವ ಸಂಗತಿ.ಅಲ್ಲದೆ ಆಗಮಗಳಲ್ಲಿ ದೇವರುಗಳ ಪೂಜಾ ವಿಧಾನ,ದೇವಸ್ಥಾನಗಳ ನಿರ್ಮಾಣ ವಿಧಾನ,ವಿಶೇಷ ಪೂಜಾದಿ ಸಂಸ್ಕಾರಗಳ ಪ್ರಸ್ತಾಪ ಇದೆ.ವೇದ ಮತ್ತು ಉಪನಿಷತ್ತುಗಳ ಕಾಲದಲ್ಲಿ ದೇವಾಲಯಗಳಿರಲಿಲ್ಲ,ವಿಗ್ರಹಾರಾಧನೆಯೂ ಇರಲಿಲ್ಲ ಎನ್ನುವುದನ್ನು ಗಮನಿಸಿದರೆ ಆಗಮಗಳು ನಿಶ್ಚಿತವಾಗಿಯೂ ಇತ್ತೀಚಿನವರ ರಚನೆಗಳೆಂದೂ ಅವುಗಳಿಗೆ ನೀಡುವ ವ್ಯುತ್ಪತ್ತಿ,ಮಹತ್ವಗಳೇನಿದ್ದರೂ ಇತ್ತೀಚಿನ ಕಲ್ಪನೆಗಳೆಂದು ದೃಢಪಡುತ್ತದೆ.ಆಗಮಗಳ ಸರಳಾರ್ಥವು ಶಿವನಿಂದ ಪಾರ್ವತಿಗೆ ಉಪದೇಶಿಸಲ್ಪಟ್ಟ ವಾಸುದೇವನಿಂದ ಅನುಮೋದಿಸಲ್ಪಟ್ಟ ಮತ,ತತ್ತ್ವ ಎಂದರ್ಥ.ಆದರೆ ವಾಸುದೇವನು ವೇದೋಕ್ತ ದೇವರಲ್ಲ ಎನ್ನುವದನ್ನರಿತರೆ ಆಗಮೋಕ್ತ ಇಷ್ಟಲಿಂಗೋಪಾಸನೆಯು ಬಹುಪುರಾತನ ಪದ್ಧತಿಯಲ್ಲವೆಂದೂ ಬಸವಣ್ಣನವರಿಂದಲೇ ಲೋಕಪ್ರಸಿದ್ಧಿಯನ್ನು ಪಡೆದ ಶಿವಪೂಜಾವಿಶೇಷ ಎಂಬುದು ಸುವ್ಯಕ್ತವಾಗುತ್ತದೆ.

ಶಿವನು ಪಂಡಿತರ ದೇವರಲ್ಲ; ಜನಪದರ ದೇವನು.ಜನಸಾಮಾನ್ಯರ ಉದ್ಧಾರದಲ್ಲಿಯೇ ಶಿವನಿಗೆ ಆಸಕ್ತಿ ಎನ್ನುವುದಕ್ಕೆ ತಮಿಳುನಾಡಿನ ಅರವತ್ತುಮೂರು ಮಂದಿ ಪುರಾತನರು ಸೇರಿದಂತೆ ದೇಶದಾದ್ಯಂತ ಶಿವಭಕ್ತಿಯನ್ನಾಚರಿಸಿ ಮಹಿಮೆ ಮೆರೆದವರೆಲ್ಲ ಶ್ರೀಸಾಮಾನ್ಯರೇ ಎನ್ನುವಲ್ಲಿ ಸುವ್ಯಕ್ತವಾಗುವ ಸಂಗತಿಯು.ಜನಸಾಮಾನ್ಯರು ಶಿವನ ಮೂರ್ತಿಯನ್ನೋ ಸ್ಥಾವರಲಿಂಗವನ್ನೋ ಪೂಜಿಸುತ್ತಾರೆ.ಅಂತಹ ಪೂಜೆ ತಪ್ಪು,ನಿಷ್ಫಲ ಎನ್ನುವುದು ದುರುದ್ದೇಶವಲ್ಲದೆ ಸತ್ಯವಲ್ಲ.ಲೋಕಸಮಸ್ತರ ಉದ್ಧರಣಕ್ಕೆ ಶಿವನು ಮೂರ್ತಿ ರೂಪದಲ್ಲಿ ಪ್ರಕಟಗೊಂಡಿರುವನು.ಶಿವನನ್ನು ಭಕ್ತರು ತಮಗೆ ಇಷ್ಟವಾದ ಲಿಂಗರೂಪದಲ್ಲಿಯಾದರೂ ಪೂಜಿಸಬಹುದು ಅಥವಾ ಮೂರ್ತಿ ರೂಪದಲ್ಲಿಯಾದರೂ ಪೂಜಿಸಬಹುದು.ಭಾವದಂತೆ ಭಕ್ತಿ.ಯಾವ ಭಾವದಿಂದ ಪೂಜಿಸಿದರೂ ದೇವದೇವನೂ ಪರಮೇಶ್ವರನೂ ಪರಬ್ರಹ್ಮನೂ ಆಗಿರುವ ಪರಶಿವನ ಅನುಗ್ರಹವು ಉಂಟು ಭಕ್ತರುಗಳಿಗೆ.

About The Author