ಶಬ್ದಾರ್ಥ ಪ್ರಪಂಚ : ಆಶ್ರಮ– ಮೋಕ್ಷ : ಮುಕ್ಕಣ್ಣ ಕರಿಗಾರ

ನಮ್ಮೂರು ಗಬ್ಬೂರಿನ ನಿಷ್ಠಾವಂತ ಶಕ್ತಿ ಉಪಾಸಕರೂ ಗಾಯತ್ರಿ ಪೀಠದ ಅಧ್ಯಕ್ಷರೂ ಆಗಿರುವ ಉದಯಕುಮಾರ ಪಂಚಾಳ ಅವರು ನಿನ್ನೆ ನಮ್ಮ ಮಠದಲ್ಲಿ ನಡೆದ ೫೬ ನೆಯ’ ಶಿವೋಪಶಮನ ಕಾರ್ಯ’ ದ ನಂತರದ ‘ ಆತ್ಮವಿಚಾರಗೋಷ್ಠಿ’ ಯಲ್ಲಿ ಎತ್ತಿದ ಮಹತ್ವದ ಸಂದೇಹ, ಸಂನ್ಯಸಾಶ್ರಮದಿಂದ ಮೋಕ್ಷ ಲಭಿಸುವುದೆ?’.ಸಂನ್ಯಸಾಶ್ರಮ ಶ್ರೇಷ್ಠ,ಅದರಿಂದ ಮುಕ್ತಿ ಸಾಧ್ಯ ಎನ್ನುವ ಭಾವನೆ ಅವರದು.ವೃತ್ತಿಯಲ್ಲಿ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಅವರು ಅದೃಷ್ಟವಂತರು,ಬುದ್ಧಿವಂತರಾದ ಮಕ್ಕಳನ್ನು,ಸೊಸೆಯನ್ನು ಪಡೆದಿದ್ದಾರೆ.ಅವರ ಮಗ ಮತ್ತು ಸೊಸೆ ಇಬ್ಬರೂ ಡಾಕ್ಟರ್; ಮಗಳು ಲಾ ಪದವಿಧರೆಯಾಗಿ ಉತ್ತಮ ವಕೀಲೆಯಾಗುವ ಲಕ್ಷಣಗಳನ್ನು ಈಗಾಗಲೇ ತೋರಿಸಿದ್ದಾರೆ.ಈ ಸಂತೃಪ್ತಿಯ ಜೀವನವು ಬಂಧನವೆನ್ನಿಸಿ ಉದಯಕುಮಾರ ಅವರು ‘ ಈ ಯಾವ ಅಡೆ ತಡೆಗಳೂ ಬೇಡ,ಮೋಕ್ಷಮಾರ್ಗಕ್ಕಾಗಿ ಸಂನ್ಯಾಸಿಯಾದರಾಯಿತು ಎಂದು ನಿರ್ಧರಿಸಿದ್ದರಂತೆ.ಸಂನ್ಯಾಸದೀಕ್ಷೆಗಾಗಿ ಕೆಲವರನ್ನು ಕೋರಿದ್ದರಂತೆ.ಆ ಎಲ್ಲ ಸಂಗತಿಗಳನ್ನು ನನಗೆ ತಿಳಿಸಿದ ಅವರ ಸಂದೇಹನಿವಾರಣೆಗಾಗಿ ‘ ಸಂನ್ಯಾಸಿಯಾಗುವುದು ನಿಮ್ಮ ಯೋಗದಲ್ಲಿ ಇಲ್ಲವಾದ್ದರಿಂದ ನೀವು ಸಂನ್ಯಾಸಿಯಾಗಲಿಲ್ಲ’ ಎನ್ನುವ ಪೀಠಿಕೆಯ ಮಾತಿನೊಂದಿಗೆ ಅವರ ಸಂದೇಹ ನಿವಾರಣೆಯ ಮಾತುಗಳಿಗುಪಕ್ರಮಿಸಿದೆ.

ಮೋಕ್ಷಕ್ಕೂ ಸಂನ್ಯಾಸಕ್ಕೂ ಯಾವ ಸಂಬಂಧವೂ ಇಲ್ಲ.ಸಂನ್ಯಾಸಿಗಳಾದವರೆಲ್ಲರಿಗೂ ಮೋಕ್ಷ ಸಿಗುತ್ತದೆ ಎನ್ನುವ ಖಾತ್ರಿಯಿಲ್ಲ.ಬಹಳಷ್ಟು ಜನ ಸಂನ್ಯಾಸಿಗಳು ‘ ಪುನರಪಿ ಜನನಂ,ಪುನರಪಿ ಮರಣಂ’ ಭವಬಂಧನಕ್ಕೆ ಸಿಕ್ಕಿ ಬೀಳುತ್ತಿದ್ದಾರೆ.ಶಿವಾನುಗ್ರಹಪಡೆದವರಿಗೆ ಮಾತ್ರ ಮೋಕ್ಷ ಸಿಗುವುದರಿಂದ ಮೋಕ್ಷಪಡೆಯಲು ಸಂನ್ಯಾಸಿಗಳಾಗಬೇಕಿಲ್ಲ.ಸಂಸಾರಿಯಾಗಿದ್ದುಕೊಂಡೇ,ಹೆಂಡಿರು ಮಕ್ಕಳುಗಳ ಸಂಸಾರದಲ್ಲಿಯೇ ಶಿವನನ್ನು ಕಾಣಬಹುದು,ಮೋಕ್ಷಪಡೆಯಬಹುದು.ಆದರೆ ಬಹಳಷ್ಟು ಜನರು ಸಂನ್ಯಾಸಾಶ್ರಮ ಸ್ವೀಕರಿಸಿದರೆ ಮೋಕ್ಷ ಸಿಕ್ಕುತ್ತದೆ ಎಂದು ಭಾವಿಸಿದ್ದಾರೆ.ಸಂನ್ಯಾಸಾಶ್ರಮ ಸ್ವೀಕರಿಸಿದ ಎಲ್ಲರೂ ಶಿವಶರಣರಲ್ಲ,ಶಿವಚೇತನರಲ್ಲವಾದ್ದರಿಂದ ಅವರುಗಳೆಲ್ಲರಿಗೂ ಮೋಕ್ಷಸಿಗುವುದಿಲ್ಲ.ಸಂನ್ಯಾಸಿಗಳೂ ಸತ್ತ ನಂತರ ಪಿಶಾಚಿಗಳು,ಬ್ರಹ್ಮಪಿಶಾಚಿಗಳು ಆಗಿದ್ದಾರೆ ಆಸೆಯನ್ನು ತೊರೆಯಲರಿಯದ ಕಾರಣದಿಂದ!

ಭಾರತದ ಸಾಮಾಜಿಕ ಸಾಂಸ್ಕೃತಿಕ ಪರಿಸರದಲ್ಲಿ ಬ್ರಹ್ಮಚರ್ಯ,ಗೃಹಸ್ಥ,ವಾನಪ್ರಸ್ಥ ಮತ್ತು ಸಂನ್ಯಾಸಗಳೆನ್ನುವ ನಾಲ್ಕು ಆಶ್ರಮಗಳ ವ್ಯವಸ್ಥೆಯನ್ನು ಪರಿಕಲ್ಪಿಸಲಾಗಿದೆ.ಈ ಆಶ್ರಮ ವ್ಯವಸ್ಥೆಯು ಉಪನಿಷತ್ತುಗಳ ಕಾಲದ ನಂತರದ ಬೆಳವಣಿಗೆ.ವೇದಗಳ ಕಾಲದಲ್ಲಿ ಸಂನ್ಯಾಸಾಶ್ರಮ ಇರಲಿಲ್ಲ,ಋಷಿಗಳು ಸಂನ್ಯಾಸಿಗಳು ಆಗಿರಲಿಲ್ಲ.ಸಂಸಾರವು ಬಂಧನ ಎಂದು ಋಷಿಗಳು ಭಾವಿಸಿರಲಿಲ್ಲವಾದ್ದರಿಂದ ಅವರು ಹೆಂಡತಿ ಮಕ್ಕಳು ಮತ್ತು ಶಿಷ್ಯರುಗಳೊಂದಿಗೆ ವಾಸಿಸುತ್ತಿದ್ದರು.ವ್ಯತ್ಯಾಸ ಇಷ್ಟೆ ಅವರು ಕಾಡುಗಳಲ್ಲಿ ವಾಸಿಸುತ್ತಿದ್ದರು,ಜನರು ನಾಡುಗಳಲ್ಲಿ ವಾಸಿಸುತ್ತಿದ್ದರು.ವೇದಕಾಲದಲ್ಲಿ ಋಷಿಯಾಗುವುದು ಬಹುದೊಡ್ಡ ಸಾಧನೆಯಾಗಿತ್ತು.ಯಜ್ಞ,ಧ್ಯಾನ- ತಪಸ್ಸುಗಳ ಮೂಲಕ ಆಧ್ಯಾತ್ಮಿಕ ಸಾಧನಾಕಾಂಕ್ಷಿಗಳು ‘ ಋಷಿಗಳು’ ಆಗುತ್ತಿದ್ದರು.ಕಾಡಿನಲ್ಲಿ ಆಶ್ರಮಕಟ್ಟಿಕೊಂಡು ಹೆಂಡತಿ ಮಕ್ಕಳು,ಶಿಷ್ಯಪರಿವಾರದೊಂದಿಗೆ ಇರುತ್ತ ತ್ರಿಸಂಧ್ಯೆಗಳಲ್ಲಿ ಯಜ್ಞ- ಹೋಮ,ಧ್ಯಾನಗಳನ್ನು ಕೈಗೊಳ್ಳುತ್ತ ಅವರು ಋಷಿಗಳಾಗುತ್ತಿದ್ದರು.ಅರಣ್ಯವಾಸಿಗಳಾಗಿದ್ದ ಋಷಿಗಳಲ್ಲಿ ಕೆಲವರು ಉಗ್ರತಪೋನುಷ್ಠಾನ ಕೈಗೊಳ್ಳಲು ಆಶ್ರಮದಿಂದ ಹೊರಗೆ ದಟ್ಟಕಾಡಿನ ಪ್ರಶಾಂತ ಎಡೆಯಲ್ಲಿ ಹನ್ನೆರಡು ವರ್ಷಗಳವರೆಗೆ ತಪಸ್ಸನ್ನಾಚರಿಸಿ ಬ್ರಹ್ಮಸಾಕ್ಷಾತ್ಕಾರ ಪಡೆಯುತ್ತಿದ್ದರು.ಆಧ್ಯಾತ್ಮಿಕ ಸಾಧನೆಯಲ್ಲಿ ಋಷಿ ಆಗುವುದಕ್ಕೆ ಮಹತ್ವ ಇದೆಯೇ ಹೊರತು ಸಂನ್ಯಾಸಿ ಆಗುವುದಕ್ಕೆ ಮಹತ್ವ ಇಲ್ಲ.

ಜೀವಿಯು ದೇಹಭಾವ ಇರುವವರೆಗೆ ಹುಟ್ಟುಸಾವುಗಳ ಚಕ್ರದ ಭವಬಂಧನಕ್ಕೆ ಒಳಗಾಗುವನು.ದೇಹಭಾವದಿಂದ ಮುಕ್ತನಾದೊಡನೆ ಅವನು ಸಂಸಾರದಿಂದ ಮುಕ್ತನಾಗುವನು.ಮುಖ್ಯವಾದ ಮಾತೆಂದರೆ ಜೀವರುಗಳು ದೇಹಭಾವದಿಂದ ಮುಕ್ತರಾಗುವುದು.ನಾನು ದೇಹಿಯಲ್ಲ,ಆತ್ಮನು ಎನ್ನುವ ಭಾವವು ಅಳವಟ್ಟರೆ ಅದೇ ಸಂನ್ಯಾಸವು,ವೈರಾಗ್ಯವು.ಆತ್ಮಭಾವದಲ್ಲಿ ಸ್ಥಿತನಾಗುವುದೇ ಮೋಕ್ಷದ ಮೂಲಸೂತ್ರವು.ಜೀವರುಗಳು ನಾನು ದೇಹಿ ಎಂದು ಭಾವಿಸದೆ ನಾನು ಆತ್ಮನು ಎಂದು ಭಾವಿಸಿದರೆ ಮೋಕ್ಷವು ದೂರದ ವಸ್ತುವೇನಲ್ಲ.ಆದರೆ ದೇಹದ ವ್ಯಾಮೋಹಪೀಡಿತರಾಗಿ ಜೀವರುಗಳು ತಮ್ಮ ಸ್ವಸ್ವರೂಪವನ್ನು ಅರಿಯದವರಾಗಿದ್ದಾರೆ.ಸ್ವರೂಪತಃ ಎಲ್ಲರೂ ಆತ್ಮರೆ! ಆದರೆ ಆತ್ಮಭಾವವು ಜಾಗೃತವಾಗದೆ ಜೀವರುಗಳು ತಾವು ದೇಹಿಗಳೆಂದು ಭ್ರಮಿಸಿ,ಬಳಲುತ್ತಿದ್ದಾರೆ.ನಮ್ಮಲ್ಲಿ ಆತ್ಮಭಾವವು ಜಾಗೃತವಾದರೆ ನಾವೇ ವಿರಕ್ತರು,ನಾವೇ ಮುಕ್ತಾತ್ಮರು.

ಅಷ್ಟಕ್ಕೂ ಸಂನ್ಯಾಸವು ದೇಹಕ್ಕಲ್ಲದೆ ಆತ್ಮನಿಗಲ್ಲ! ಸಂನ್ಯಾಸಾಶ್ರಮವನ್ನು ವಿಧಿವತ್ತಾಗಿ ಸ್ವೀಕರಿಸಿ ಕಾವಿಯನ್ನು ಧರಿಸುತ್ತಾರೆ,ಕೆಲವು ನಿಯಮಗಳನ್ನು ಅನುಸರಿಸುತ್ತಾರೆ ಎನ್ನುವುದನ್ನು ಬಿಟ್ಟರೆ ಸಂನ್ಯಾಸಿಗಳಿಗೂ ಸಂಸಾರಿಗಳಿಗೂ ಯಾವ ವ್ಯತ್ಯಾಸವಿಲ್ಲ.ಸಂಸಾರಿಗಳಂತೆ ಸಂನ್ಯಾಸಿಗಳಿಗೂ ಹಸಿವೆ ಆಗುತ್ತದೆ,ಅವರೂ ಉಣ್ಣುತ್ತಾರೆ.ಸಂಸಾರಿಗಳಂತೆ ಸಂನ್ಯಾಸಿಗಳೂ ನಿದ್ದೆ ಮಾಡುತ್ತಾರೆ.ಸಂಸಾರಿಗಳಂತೆ ಸಂನ್ಯಾಸಿಗಳನ್ನೂ ಕಾಡುತ್ತಿದೆ ‘ ಕಾಮ’! ಅವರು ಕಾಮನನ್ನು ಗೆದ್ದೆ ಎಂದು ಸುಳ್ಳೇ ಕೊಚ್ಚಿಕೊಳ್ಳುತ್ತಾರೆ.ಕಾಮವನ್ನು ಗೆದ್ದ ಸಂನ್ಯಾಸಿ ನೂರಕ್ಕೆ ಒಬ್ಬರು ಮಾತ್ರ!ಕಾಮವನ್ನು ನಿಗ್ರಹಿಸಲಾಗದೆ ಏನೇನೋ ಅವಾಂತರಗಳನ್ನು ಮಾಡಿಕೊಂಡಿರುವ ಸಂನ್ಯಾಸಿಗಳೇ ಬಹಳಷ್ಟು ಜನರಿದ್ದಾರೆ.ಹಾಗಾಗಿ ಕಾವಿಯನ್ನು ಉಟ್ಟ ಮಾತ್ರಕ್ಕೆ ಕಾಮವನ್ನು ಗೆದ್ದರು,ಮೋಕ್ಷವನ್ನು ಸಂಪಾದಿಸಿದರು ಎಂದು ಭ್ರಮಿಸಬಾರದು.ಸಂನ್ಯಾಸಾಶ್ರಮ ಸ್ವೀಕರಿಸುವುದು ಸಂಸಾರದಲ್ಲಿ ವಿರಕ್ತನಾಗಿ,ವೈರಾಗ್ಯವನ್ನು ಹೊಂದಿ ಮೋಕ್ಷ ಸಂಪಾದಿಸಲು.ಆದರೆ ನಮ್ಮ ಸಂನ್ಯಾಸಿಗಳು ಮಠ ಪೀಠಗಳ ಹೆಸರಿನಲ್ಲಿ ಶಾಲೆ ಕಾಲೇಜುಗಳನ್ನು ನಡೆಸುತ್ತಿದ್ದಾರೆ,ಆಸ್ಪತ್ರೆಗಳನ್ನು,ಮೆಡಿಕಲ್ ಕಾಲೇಜುಗಳನ್ನು ನಡೆಸುತ್ತಿದ್ದಾರೆ.ಡೊನೇಶನ್- ದೇಣಿಗೆ,ಕಾಣಿಕೆ- ಉಂಬಳಿಗಳನ್ನು ಪಡೆಯುತ್ತಿದ್ದಾರೆ.ಚೆಕ್ಕುಗಳಿಗೆ ಸಹಿ ಮಾಡುತ್ತ ಬ್ಯಾಂಕ್ ವ್ಯವಹಾರಗಳನ್ನು ನಿರ್ವಹಿಸುತ್ತಾರೆ.ಮಠ ಪೀಠಗಳ ಹೆಸರಿನಲ್ಲಿ ಆಸ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಇದ್ದಾರೆ.ಹೀಗಿರುವಾಗ ಇವರು ಎಂತಹ ಸಂನ್ಯಾಸಿಗಳು? ಆಸೆಬಡುಕ ಸಂನ್ಯಾಸಿಗೂ ಸಂಸಾರಿಗೂ ಏನು ವ್ಯತ್ಯಾಸ? ಸಂಸಾರಿಗಾದರೋ ಸಣ್ಣ ಸಂಸಾರ,ಸಂಸಾರವನ್ನು ತೊರೆದೆ ಎನ್ನುವ ಸಂನ್ಯಾಸಿ ತನ್ನದೆ ಆಸೆ ಆಮಿಷಗಳ,ಕಾಮ- ಕ್ರೋಧ,ಲೋಭ- ಮೋಹಗಳ ಮೂಲವಾದ ಮಹಾಸಂಸಾರವನ್ನೇ ಕಟ್ಟಿಕೊಂಡಿದ್ದಾನೆ.ಈ ಮೋಹಪೀಡಿತನಿಗೆಂತು ಮುಕ್ತಿ? ಇದು ವಿಚಾರಿಸಬೇಕಾದ ಸಂಗತಿ.ಸಂನ್ಯಾಸಿಯಾದವನು ಪರಸ್ತ್ರೀಯರ ಸಂಗದೊಳಿದ್ದು ಮೋಕ್ಷಪಡೆಯುತ್ತಾನೆ ಎನ್ನುವುದು ಮೂರ್ಖರಾಡುವ ಮಾತು,ವಿವೇಕಿಗಳು ಒಪ್ಪುವ ಮಾತಲ್ಲ.ದಡ್ಡ ಜನರು ‘ ಹೇಗಿದ್ದರೂ ಅಪ್ಪನವರು ದೊಡ್ಡವರು’ ಎನ್ನುತ್ತ ಅಪ್ಪನವರ ತಪ್ಪುಗಳಿಗೆ ಕುರುಡು ಒಪ್ಪಿಗೆಯನ್ನು ಸೂಚಿಸಿ ಅಪ್ಪನವರೊಂದಿಗೆ ಅಪ್ಪನವರ ಮರುಳ ಮಕ್ಕಳುಗಳು ಹಾಳಾಗುತ್ತಿದ್ದಾರೆ.

ಮೋಕ್ಷಕ್ಕೆ ಸಂಸಾರವೇ ಶ್ರೇಷ್ಠ ಮಾರ್ಗವು.ಸಂಸಾರಿಯು ಕಷ್ಟ ನಷ್ಟ,ಸುಖ- ದುಃಖಗಳನ್ನು ಅನುಭವಿಸುತ್ತಾನೆಯಾಗಿ ಅವನಲ್ಲಿ ಆಸೆ ಉಂಟಾಗದು.ಕಾಮವನ್ನು ಅನುಭವಿಸಿ ಗೆದ್ದಿರುವುದರಿಂದ ಸಂಸಾರಿಗೆ ಕಾಮವಾಸನೆ ಪೀಡಿಸುವುದಿಲ್ಲ.ಶೋಕಿಗಾಗಿ ಸಂನ್ಯಾಸಿಯಾದವನು ಕಾಮವನ್ನು ಗೆಲ್ಲಲಾಗದೆ ಒದ್ದಾಡುತ್ತಾನೆ,ಪರಸ್ತ್ರೀಯರ ಸಂಗಕ್ಕೆಳಸಿ ಮಣ್ಣು ಮುಕ್ಕುತ್ತಾನೆ.ಸಂಸಾರಿಯು ಎಲ್ಲವನ್ನು ಅನುಭವಿಸಿ ಸಂತೃಪ್ತನಿರುವುದರಿಂದ ‘ ಸಾಕಪ್ಪ ಶಿವನೆ’ ಎನ್ನುತ್ತಾನೆ; ಸಂನ್ಯಾಸಿಯು ‘ ಬೇಕು ಬೇಕು’ ಎನ್ನುತ್ತಾನೆ.ಸಂಸಾರಿಯ ಬಾಯಲ್ಲಿ ಬರುವ ಶಿವ ಶಬ್ದ ಸಂನ್ಯಾಸಿಯ ಬಾಯಲ್ಲಿ ಬರುವುದಿಲ್ಲ ಎನ್ನುವುದು ಸೋಜಿಗ.

ಸಂಸಾರವನ್ನು ತೊರೆದು ಗುಡ್ಡ ಗುಹೆಗಳನ್ನು ಹುಡುಕಿ ಹೋಗಬೇಕಿಲ್ಲ.ಸಂಸಾರದಲ್ಲಿದ್ದೇ ಪಡೆಯಬಹುದು ಶಿವಾನುಗ್ರಹವನ್ನು.ಪ್ರತಿದಿನ ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಮೂರು ತಾಸುಗಳ ಕಾಲ ಸಾಧನೆ ಮಾಡಿದರಾಯಿತು,ಯಾವ ವಿಶೇಷಪರಿಶ್ರಮವೂ ಬೇಕಿಲ್ಲ.ಶಿವನು ಒಲಿಯುತ್ತಾನೆ,ಮೋಕ್ಷವನ್ನು ಕರುಣಿಸುತ್ತಾನೆ.ಮೋಕ್ಷವೇ ಜೀವನದ ಗುರಿಯಾಗಿದ್ದರೆ ಅದಕ್ಕೆ ಸಂನ್ಯಾಸಿಯಾಗಲೇಬೇಕು ಎನ್ನುವ ನಿಯಮವಿಲ್ಲ.ಮೋಕ್ಷವು ಸತ್ತಮೇಲೆ ಸಂಪಾದಿಸುವ ‘ ದಿವ್ಯತ್ವ’ ವಲ್ಲ,ಇದ್ದಾಗಲೇ ಅನುಭವಿಸುವ ಪರಮೋನ್ಮಾದದ,ಪರಮಾನಂದ ಸ್ಥಿತಿ ಅದು.ನಿತ್ಯ ನಿರಂತರ ಧ್ಯಾನ- ಸಾಧನೆಗಳಿಂದ ಮೋಕ್ಷಸುಖವನ್ನು ಅನುಭವಿಸಬಹುದು.ಸತ್ತಬಳಿಕ ಕೈಲಾಸ ಸೇರುವೆವು ಎನ್ನುವುದು ಭ್ರಾಂತಿ.ಇಲ್ಲಿ ಇದ್ದಾಗಲೇ ಕಾಣಬೇಕು ಪರಶಿವನ ಆನಂದದ ನೆಲೆ ಕೈಲಾಸವನ್ನು.ನಮ್ಮ ಮನೆಯಲ್ಲಿದ್ದುಕೊಂಡು ಕೈಲಾಸದಲ್ಲಿ ಶಿವನು ಏನು ಮಾಡುತ್ತಿದ್ದಾನೆ ಎನ್ನುವುದು ನೋಡಬಹುದು.ಮತ್ತೆ ಏಕೆ ಸಂನ್ಯಾಸಿಗಳಾಗುವ ಭ್ರಮೆ? ಮನೆಯಲ್ಲಿಯೇ ಶಿವನನ್ನು ಕಾಣದೆ ಹಿಮಾಲಯ- ಹೃಷಿಕೇಶಗಳಿಗೆ ಹೋದರೆ ಕಾಣುವನೆ ಶಿವನು? ಭಕ್ತನಿದ್ದಲ್ಲಿಗೆ ಭಗವಂತನು ಬರಬೇಕೇ ಹೊರತು ಭಗವಂತನನ್ನು ಹುಡುಕಿ ಭಕ್ತ ಹೋಗಬಾರದು.ಗಟ್ಟಿ ನಿಷ್ಠೆ,ಭಕ್ತಿಯು ನಿಮ್ಮಲ್ಲಿ ಇದ್ದುದಾರೆ ಭಗವಂತನು ನಿಮ್ಮನ್ನು ಹುಡುಕಿಕೊಂಡು ಬರುತ್ತಾನೆ ಮನೆಯಲ್ಲಿನ ಎಳೆಕರುವನ್ನು ಹುಡುಕಿಕೊಂಡು ತಾಯಿ ಹಸು ಬರುವಂತೆ.ಭಗವಂತನಿಗಾಗಿ ನೀವು ತೀರ್ಥ- ಕ್ಷೇತ್ರಗಳನ್ನು ಸುತ್ತಿ ಬಳಲಬೇಕಾಗಿಲ್ಲ.ಭಾವಮುಕ್ತರಾದರೆ ಭವದಿಂದ ಮುಕ್ತಿ.ದೇಹಭಾವ ಮುಕ್ತನಾಗಿ ಆತ್ಮಭಾವವನ್ನಳವಡಿಸಿಕೊಂಡರೆ ಆತನೇ ದೇವರಾಗುವನು.ತಾನೇ ದೇವರಾಗುವ ಘನತೆಯನ್ನು ಪರಮಾತ್ಮನು ಜೀವರುಗಳಿಗೆ ಕರುಣಿಸಿರುವಾಗ ಮನುಷ್ಯರು ತಮ್ಮ ಆತ್ಮದ ಘನತೆಯನ್ನರಿಯದೆ ದೇವರನ್ನು ಹುಡುಕುತ್ತ ಅಲೆಯುವುದು ಸೋಜಿಗದ ಸಂಗತಿ.

About The Author