ಮಹಾಶೈವೋಪದೇಶ–೦೫ : ವ್ಯಕ್ತಿಪೂಜೆ– ವಿಭೂತಿಪೂಜೆ : ಮುಕ್ಕಣ್ಣ ಕರಿಗಾರ

ಶಿವಪರಮೇಶ್ವರನ ನೆಲೆಯಾದ ಕೈಲಾಸದಲ್ಲಿ ಪರಶಿವನೊಂದಿಗೆ ಕುಳಿತ ಪಾರ್ವತಿ ದೇವಿಯು ಪರಶಿವನನ್ನು ಪ್ರಶ್ನಿಸುವಳು;’ ಪ್ರಭು,ಭೂಲೋಕದಲ್ಲಿ ಜನರು ನಾನಾ ಬಗೆಯ ಆಚರಣೆಗಳನ್ನು ಆಚರಿಸುತ್ತಿದ್ದಾರೆ.ಪರಮೇಶ್ವರನಾದ ನಿಮ್ಮನ್ನು ಪೂಜಿಸುವ ಬದಲು ನರಮನುಷ್ಯರನ್ನು ಗುರುಗಳು,ಹಿರಿಯರೆಂದು ಪೂಜಿಸುತ್ತಿದ್ದಾರೆ.ಗುರುಗಳು,ಶರಣರು,ಹಿರಿಯರು ಎಂದು ಅವರುಗಳನ್ನು ಮೆರವಣಿಗೆ ಮಾಡುವುದು,ತುಲಾಭಾರಾದಿಗಳನ್ನು ಮಾಡುವುದು,ಪಾದಪೂಜೆ ಮಾಡುವುದು ಇತ್ಯಾದಿ ಶಿವವಿರೋಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ.ಇದು ನಿಮಗೆ ಸಮ್ಮತವೆ?’ ಮುಗುಳುನಗುತ್ತ ಪರಬ್ರಹ್ಮನು ಪರಾಶಕ್ತಿಗೆ ಉತ್ತರಿಸುವನು’ ದೇವಿ ದುರ್ಗೆ,ಲೋಕದ ಜನರ ವಿಚಾರವನ್ನು ಪ್ರಚೋದಿಸುವ ಬಹುಮಹತ್ವದ ಪ್ರಶ್ನೆಯನ್ನು ಕೇಳಿರುವಿ.ಭೂಲೋಕದ ಮನುಷ್ಯರಲ್ಲಿ ಜ್ಞಾನಿಗಳಿಗಿಂತ ಅಜ್ಞಾನಿಗಳ ಸಂಖ್ಯೆಯೇ ಹೆಚ್ಚು ಇದೆ.ವಿವೇಕಿಗಳ ಸಂಖ್ಯೆಗಿಂತ ಅವಿವೇಕಿಗಳು ಬಹಳಷ್ಟಿದ್ದಾರೆ.ಅಜ್ಞಾನಿ ಮನುಷ್ಯರು,ಅವಿವೇಕಿಗಳು ನನ್ನನ್ನು ಪೂಜಿಸಿ,ಸೇವಿಸುವ ಬದಲು ನರರನ್ನು ಪೂಜಿಸಿ ನರಕಸೇರುತ್ತಾರೆ.ಆದರೆ ದೇವಿ ನಾನು ನನ್ನ ಭಕ್ತರು,ವಿಭೂತಿಗಳನ್ನು ಪೂಜಿಸಿದರೆ ನನ್ನನ್ನೇ ಪೂಜಿಸಿದಂತೆ ಎಂದು ಭಾವಿಸಿರುವೆನಾದ್ದರಿಂದ ಜನರು ಶರಣರು,ಮಹಾಂತರು,ವಿಭೂತಿಪುರುಷರುಗಳನ್ನು ಪೂಜಿಸಬಹುದು.ನರರನ್ನು ಪೂಜಿಸುವ ವ್ಯಕ್ತಿಪೂಜೆ ನನಗೆ ಸಮ್ಮತವಲ್ಲ’.

ಆಧ್ಯಾತ್ಮಿಕ ಪಥದಲ್ಲಿ ಪಯಣಿಸುವವರು ಪರಮೇಶ್ವರ ಶಿವ,ಪರಾಶಕ್ತಿ ಪಾರ್ವತಿಯರ ಈ ಸಂವಾದವನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕು.ವ್ಯಕ್ತಿಪೂಜೆಯು ಮಾನವಘನತೆಗೆ ಎಸಗುವ ಅಪಚಾರವಾಗಿರುವುದು ಮಾತ್ರವಲ್ಲ ಅದು ಜಗದೀಶ್ವರನಾದ ಶಿವನಿಗೂ ಇಷ್ಟವಿಲ್ಲದ ಸಂಗತಿ.ಗುರುಗಳು,ಸ್ವಾಮಿಗಳು,ಮಠಾಧೀಶರುಗಳು ಎಂದು ಜನರು ಲೋಕದ ಜನರನ್ನು ಪೂಜಿಸುತ್ತಾರೆ,ಅವರ ಪಾದಪೂಜೆ ಮಾಡಿ ಅವರನ್ನು ಪಲ್ಲಕ್ಕಿಗಳಲ್ಲಿ ಕೂಡಿಸಿ ಮೆರೆಸುವ ಮೂಲಕ ಅಜ್ಞಾನ ಪ್ರದರ್ಶಿಸುತ್ತಾರೆ.ಎಲ್ಲರ ಹೃದಯದಲ್ಲೂ ಪರಶಿವನು ಇರುವಾಗ ಒಬ್ಬ ನರನಿಗಿಂತ ಇನ್ನೊಬ್ಬ ನರನು ಹೇಗೆ ವಿಶೇಷನಾಗುತ್ತಾನೆ? ಧಾರ್ಮಿಕ ವ್ಯಕ್ತಿಗಳಿಗೆ ಮಾಡುವ ಪೂಜೆ- ಪುರಸ್ಕಾರಗಳು ಅರ್ಥಹೀನ ಸಂಗತಿಗಳು.’ಹರನು ನರನಾಗಿ ಹುಟ್ಟಲಾರ; ನರನು ಹರನಾಗಲಾರ’ ಎನ್ನುವ ಮಹಾಶೈವಸೂತ್ರವನ್ನು ಜನರು ಅರ್ಥಮಾಡಿಕೊಳ್ಳಬೇಕು.ಲೋಕದ ಮಾನವರುಗಳು ಮಠ ಮಂದಿರಗಳ ಪೀಠ- ಗದ್ದುಗೆಗಳಲ್ಲಿ ಕುಳಿತ ಮಾತ್ರಕ್ಕೆ ಅವರು ದಿವ್ಯಾತ್ಮರಾಗುವುದಿಲ್ಲ.ಮಠ ಮಂದಿರಗಳ ಪೀಠಗಳಲ್ಲಿ ಕುಳಿತುಕೊಳ್ಳುವುದು ಪರಶಿವನ ಪೂಜೆ,ಸೇವೆ,ಉತ್ಸವಾದಿಗಳನ್ನು ಕೈಗೊಂಡು ತಾವು ಉದ್ಧಾರವಾಗಬೇಕು ಎನ್ನುವ ಉದ್ದೇಶದಿಂದ.ಅದನ್ನು ಬಿಟ್ಟು ಶಿವಬದ್ಧತೆಯಿಲ್ಲದ ಜೀವಿಗಳು ತಾವೇ ಶಿವಸ್ವರೂಪರೆಂದೂ ಒಮ್ಮೆಮ್ಮೆ ಶಿವನಿಗೂ ಮಿಗಿಲಾದವರು ಎಂಬಂತೆ ಜಂಬಕೊಚ್ಚಿಕೊಂಡು ಜನರಿಂದ ಪಾದಪೂಜೆ- ತುಲಾಭಾರ ಸೇವೆಗಳನ್ನು ಮಾಡಿಸಿಕೊಳ್ಳುತ್ತಾರೆ; ಪಲ್ಲಕ್ಕಿ ಸೇವೆ ಮಾಡಿಸಿಕೊಳ್ಳುತ್ತಾರೆ.ಶಿವನಿಗೆ ಸಲ್ಲಬೇಕಾದ ಈ ಪೂಜೆ ಸೇವೆಗಳನ್ನು ತಾವು ಸ್ವೀಕರಿಸುವ ಮೂಲಕ ಈ ಜೀವಿಗಳು ಶಿವನ ಆಗ್ರಹಕ್ಕೆ ತುತ್ತಾಗಿ ನರಕಸೇರುತ್ತಾರೆ.ಇವರನ್ನು ಪೂಜಿಸುವ ಮರುಳ ಜನರು ಕೂಡ ನರಕಭಾಜನರಾಗುತ್ತಾರೆ.

ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆದವರು,ಶಿವಯೋಗಿಗಳು,ಶರಣರು ಮತ್ತು ಶಿವನ ವಿಭೂತಿ ಪುರುಷರುಗಳಲ್ಲಿ ಶಿವನ ಚಿತ್ಕಳೆ ಜಾಗೃತವಾಗಿರುವುದರಿಂದ ಅಂಥವರನ್ನು ಪೂಜಿಸಿದರೆ ಶಿವನು ತನ್ನನ್ನೇ ಪೂಜಿಸಿದಷ್ಟೇ ಸಂತೃಪ್ತನಾಗುವನು.ನರರು ವ್ಯಕ್ತಿಗಳನ್ನು ಪೂಜಿಸುವ ಬದಲು ಚೇತನಾತ್ಮರಾದ ಶಿವಶಕ್ತಿಗಳನ್ನು ಪೂಜಿಸಬೇಕು.ವ್ಯಕ್ತಿಪೂಜೆಯು ಅನರ್ಥಕಾರಿಯಾದರೆ ಶಕ್ತಿಪೂಜೆಯು ಮುಕ್ತಿದಾಯಕವಾದುದು.ಲೋಕದ ಜೀವರುಗಳು ತಂದೆ- ತಾಯಿ ಮತ್ತು ಗುರುವನ್ನು ಮಾತ್ರಪೂಜಿಸಬೇಕು.ಇವರನ್ನು ಹೊರತುಪಡಿಸಿ ಪೂಜಿಸಬಹುದಾದವರೆಂದರೆ ಶಿವಚೇತನರುಗಳಾದ ಮಹಾಂತರುಗಳನ್ನು.ಜಡಜೀವಿಗಳನ್ನು ಪೂಜಿಸದೆ ಮೃಡಚೇತನರನ್ನು ಪೂಜಿಸುವುದೇ ಮುಕ್ತಿಮಾರ್ಗವು.ತಂದೆ ತಾಯಿಗಳಿಗೆ ಸಮಾನರು ಯಾರೂ ಇರುವುದಿಲ್ಲವಾದ್ದರಿಂದ ಲೋಕದ ಜನರು ತಾಯಿಯಲ್ಲಿ ಪಾರ್ವತಿಯನ್ನು,ತಂದೆಯಲ್ಲಿ ಪರಶಿವನನ್ನು ಕಂಡು ಅವರಿಬ್ಬರನ್ನು ಗೌರವಿಸಬೇಕು,ಪೂಜಿಸಬೇಕು.ತಂದೆ ತಾಯಿಗಳ ನಂತರ ಗುರುವನ್ನು ಮಾತ್ರ ಪೂಜಿಸಬೇಕು.ಇಲ್ಲಿ ಗುರುವೆಂದರೆ ತನಗೆ ಉಪದೇಶಿಸಿದ,ಬೋಧೆ ನೀಡಿದ ಗುರು ಎಂದರ್ಥ.ಕುಲಗುರುಗಳು,ಜಾತಿಗಳ ಮಠ ಪೀಠಾಧೀಶರುಗಳು ಗುರುಗಳಲ್ಲ,ಅವರಿಗೆ ಮಾಡುವ ಪೂಜೆ- ಪುರಸ್ಕಾರಗಳಿಂದ ಅಜ್ಞಾನವೇ ಬೆಳೆಯುತ್ತದೆಯಾಗಲಿ ಜ್ಞಾನ ಉದಯಿಸುವುದಿಲ್ಲ.ಮನುಷ್ಯರು ವಿವೇಕಿಗಳಾಗಬೇಕು.ತನ್ನಂತೆ ಇರುವ ಜೀವಿಗಳನ್ನು ಪೂಜಿಸುವುದು ಆತ್ಮದ್ರೋಹ ಎಂಬುದನ್ನರ್ಥ ಮಾಡಿಕೊಳ್ಳಬೇಕು.ದೇಹದ ದೌರ್ಬಲ್ಯ,ವಿಕಾರಗಳನ್ನು ಮೆಟ್ಟಿನಿಲ್ಲದೆ ಕೆಟ್ಟುಹೋಗುವ ಜೀವಿಗಳನ್ನು ಗುರುಗಳು,ಹಿರಿಯರು ಎಂದು ಭಾವಿಸಬಾರದು.ಎಲ್ಲರಂತೆಯೇ ಯೋನಿಜರಾಗಿ ಹುಟ್ಟಿರುವ ಮನುಷ್ಯರಲ್ಲಿ ಜಾತಿ,ಕುಲಗಳಿಂದ ಕೆಲವರು ಶ್ರೇಷ್ಠರಾಗುತ್ತಾರೆ ಎನ್ನುವುದು ಅಜ್ಞಾನಿಗಳ ಮಾತು.ಮನುಷ್ಯರು ಅವರು ಯಾರೇ ಇರಲಿ ಮನುಷ್ಯರೇ! ಮನುಷ್ಯರನ್ನು ಪೂಜಿಸದೆ ಮಹಾದೇವನನ್ನು ಪೂಜಿಸುವುದೇ ಮೋಕ್ಷಪಥವು.

About The Author