ಮೂರನೇ ಕಣ್ಣು : ಲೋಕಸಭೆ-ವಿಧಾನಸಭೆಗಳಿಗೆ ಸ್ಪರ್ಧಿಸುವ ವಯೋಮಿತಿ ಇಳಿಕೆ ಸರಿಯಲ್ಲ : ಮುಕ್ಕಣ್ಣ ಕರಿಗಾರ

ಸಂಸತ್ತಿನ ಸಂಸದೀಯ ಸಮಿತಿಯೊಂದು ಲೋಕಸಭೆ ಮತ್ತು ವಿಧಾನ ಸಭೆಗಳಿಗೆ ಸ್ಪರ್ಧಿಸುವ ವಯೋಮಿತಿಯನ್ನು 18 ವರ್ಷಗಳಿಗೆ ಇಳಿಸಬೇಕು ಎನ್ನುವ ವಿಚಿತ್ರ ಸಲಹೆಯೊಂದನ್ನು ಮಂಡಿಸಿದೆ.ಮತದಾನದ ವಯಸ್ಸನ್ನು 18 ಕ್ಕೆ ಇಳಿಸಿದಂತೆ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಸ್ಪರ್ಧಿಸುವ ವಯಸ್ಸನ್ನು 18 ವರ್ಷಕ್ಕೆ ಇಳಿಸಬೇಕು ಎಂದು ಸಂಸದೀಯ ಸಮಿತಿಯು ಶಿಫಾರಸ್ಸು ಮಾಡಿರುವುದು ಭಾರತದ ಪ್ರಜಾಪ್ರಭುತ್ವದ ದೃಷ್ಟಿಯಿಂದ ಆರೋಗ್ಯಕರ ಬೆಳವಣಿಗೆಯಲ್ಲ.ಸಂಸತ್ತಿನ ಸಿಬ್ಬಂದಿ,ಸಾರ್ವಜನಿಕ ಕುಂದುಕೊರತೆಗಳು,ಕಾನೂನು ಮತ್ತು ನ್ಯಾಯ ಸ್ಥಾಯಿಸಮಿತಿಯು ಫ್ರಾನ್ಸ್ ಮತ್ತು ಜಪಾನ್ ಮಾದರಿಯಲ್ಲಿ ದೇಶದಲ್ಲೂ ವಿಧಾನಸಭೆ ಮತ್ತು ಲೋಕಸಭೆಗಳಿಗೆ ಸ್ಪರ್ಧಿಸುವ ವಯಸ್ಸಿನ ಅರ್ಹತೆಯನ್ನು 18 ವರ್ಷಗಳಿಗೆ ಇಳಿಸಬೇಕು ಎನ್ನುವ ಅವಾಸ್ತವಿಕ ಶಿಫಾರಸ್ಸು ಮಾಡಿರುವುದು ದುರದೃಷ್ಟಕರ.

ಈಗಾಗಲೇ ಮತದಾನದ ವಯಸ್ಸನ್ನು 18 ವರ್ಷಗಳಿಗೆ ಇಳಿಸಿದ ಪರಿಣಾಮ ಅಪಕ್ವ ವಯಸ್ಸಿನ ಯುವಕರುಗಳು ಸೊಶಿಯಲ್ ಮೀಡಿಯಾಗಳ ಪ್ರಭಾವಕ್ಕೆ ಒಳಗಾಗಿ ಮತದಾನ ಮಾಡುತ್ತಿರುವುದು ದೇಶದ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.ಯುವಜನತೆಯು ರಾಷ್ಟ್ರನಿರ್ಮಾಣದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ಮತದಾನದ ವಯಸ್ಸನ್ನು 18 ವರ್ಷಗಳಿಗೆ ಇಳಿಸಿದ್ದರ ಹಿಂದೆ ಸದುದ್ದೇಶ ಇರಬಹುದಾದರೂ ಅದು ಬೀರಬಹುದಾದ ರಾಜಕೀಯ ಪರಿಣಾಮಗಳನ್ನು ಲೆಕ್ಕಿಸದೆ,ಅಧ್ಯಯನ- ಸಂಶೋಧನೆ ಕೈಗೊಳ್ಳದೆ ಅತ್ಯುತ್ಸಾಹದಲ್ಲಿ ಕೈಗೊಂಡ ರಾಜಕೀಯ ನಿರ್ಧಾರವಾಗಿದ್ದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸೊರಗುತ್ತಿದೆ.ವಾಸ್ತವವು ಹೀಗಿರುವಾಗ ವಿಧಾನಸಭೆ ಮತ್ತು ಲೋಕಸಭೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿಯನ್ನು 18 ವರ್ಷಗಳಿಗೆ ಇಳಿಸಬೇಕು ಎನ್ನುವ ಶಿಫಾರಸ್ಸಂತೂ ಮೂರ್ಖತನದ ಸಲಹೆ.ಇಂತಹ ಶಿಫಾರಸ್ಸು ಮಾಡಲು ಚುನಾವಣಾ ಆಯೋಗದಿಂದ ಶಿಫಾರಸ್ಸು ಬಂದಿದ್ದರೆ ಮಾತ್ರ ಪರಿಗಣಿಸಬೇಕು.ಆದರೆ ಚುನಾವಣಾ ಆಯೋಗವೇ ಸಂಸದೀಯಸ್ಥಾಯಿ ಸಮಿತಿಯ ಶಿಫಾರಸ್ಸನ್ನು ಬಲವಾಗಿ ವಿರೋಧಿಸಿದೆಯಲ್ಲದೆ ಈ ಶಿಫಾರಸ್ಸು ದೂರಗಾಮಿ ಪರಿಣಾಮಗಳನ್ನು ಬೀರುವುದರಿಂದ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ವಯೋಮಿತಿಯನ್ನು ಈಗಿರುವಂತೆಯೇ 25 ವರ್ಷಗಳ ವಯೋಮಿತಿಯೇ ಸೂಕ್ತವಾದುದು ಎಂದು ಅಭಿಪ್ರಾಯಿಸಿದೆ.ವಿಧಾನಪರಿಷತ್ತು ಮತ್ತು ರಾಜ್ಯಸಭೆಗೆ ಸ್ಪರ್ಧಿಸಲು 30 ವರ್ಷಗಳ ವಯೋಮಿತಿಯನ್ನು ನಿಗದಿ ಪಡಿಸಿದೆ.ಈ ವಯೋಮಿತಿಯನ್ನು ಮುಂದುವರೆಸುವುದು ಸೂಕ್ತ.

ಸಂಸದೀಯ ಸಮಿತಿಯು ಇಂತಹ ದೂರಗಾಮಿ ಪರಿಣಾಮಬೀರುವ ಶಿಫಾರಸ್ಸು ಮಾಡಲು ಕೆನಡಾ,ಇಂಗ್ಲಂಡ್,ಆಸ್ಟ್ರೇಲಿಯಾಗಳಂತಹ ದೇಶಗಳ ಮಾದರಿಯನ್ನು ಅವಲಂಬಿಸಿದೆ.ಆದರೆ ಜಗತ್ತಿನ ದೊಡ್ಡಣ್ಣನೆಂಬ ಖ್ಯಾತಿಯ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೇರಿಕಾದಲ್ಲಿ ಪ್ರಜಾಪ್ರತಿನಿಧಿಗಳ ಸದನದ ಸದಸ್ಯರಾಗಲು 25 ವರ್ಷಗಳು ಹಾಗೂ ಸೆನೆಟಿನ ಸದಸ್ಯರಾಗಲು 30 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ ಎಂಬುದನ್ನು ಸಂಸದೀಯ ಸಮಿತಿಯು ಗಮನಿಸಿಲ್ಲವೆಂದು ತೋರುತ್ತದೆ.18 ವರ್ಷಗಳಿಗೆ ಶಾಸಕರು,ಸಂಸದರು ಆಗುವವರು ಪಕ್ವಪ್ರಜಾಪ್ರತಿನಿಧಿಗಳಾಗಬಲ್ಲರೆ? ಯೌವ್ವನದ ಹುಚ್ಚುಕನಸುಗಳ ಹೊಳೆಯಲ್ಲಿ ತೇಲುತ್ತಿರುವವರಿಗೆ ರಾಜ್ಯ, ರಾಷ್ಟ್ರವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಡುವುದು ಸರ್ವಥಾಸರಿಯಲ್ಲ.

ಸಂಸದೀಯ ಸಮಿತಿಯ ಶಿಫಾರಸ್ಸಿನಂತೆ ಲೋಕಸಭೆ ಮತ್ತು ವಿಧಾನಸಭೆಗಳ ಸ್ಪರ್ಧಿಸುವ ವಯೋಮಿತಿಯನ್ನು 18 ವರ್ಷಗಳಿಗೆ ಇಳಿಸಿದರೆ ಏನೇನು‌ ಪರಿಣಾಮಗಳಾಗಬಹುದು ಎಂಬುದನ್ನು ಅವಲೋಕಿಸೋಣ.

1. ದುರ್ಬಲ ವರ್ಗಗಳ ರಾಜಕೀಯ ಅವಕಾಶಗಳನ್ನು ಪ್ರಬಲವರ್ಗಗಳು ಕಸಿದುಕೊಳ್ಳುವ ಅಪಾಯ

ಲೋಕಸಭೆ ಮತ್ತು ವಿಧಾನ ಸಭೆಗಳಿಗೆ ಸ್ಪರ್ಧಿಸುವ ವಯೋಮಿತಿಯನ್ನು 18 ಕ್ಕೆ ಇಳಿಸಿದರೆ ದೇಶದ ಉಳ್ಳವರು,ಶ್ರೀಮಂತರು,ಉದ್ಯಮಿಗಳ ಮಕ್ಕಳುಗಳಷ್ಟೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಾಗುತ್ತದೆ.ದಲಿತರು,ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಯುವ ಜನತೆ ಬಡತನದ ಕಾರಣದಿಂದಾಗಿ 18 ನೆಯ ವಯಸ್ಸಿಗೆ ಚುನಾವಣೆಗೆ ಸ್ಪರ್ಧಿಸಲು ಮನಸ್ಸು ಮಾಡುವುದಿಲ್ಲ.ದಲಿತರು ಸೇರಿದಂತೆ ಶೂದ್ರಸಮುದಾಯದ ವಿದ್ಯಾವಂತರು ಸರಕಾರಿ ಉದ್ಯೋಗಕ್ಕೆ ಮೊದಲ ಆದ್ಯತೆ ಕೊಡುತ್ತಾರೆ.ಓದಿನಲ್ಲಿ ಆಸಕ್ತಿ ಇಲ್ಲದವರು ಮತ್ತು ಸರಕಾರಿ ಉದ್ಯೋಗ ಸಿಗದವರು ಅನಿವಾರ್ಯವಾಗಿ ರಾಜಕೀಯದತ್ತ ಮುಖಮಾಡುತ್ತಾರೆ.ಅಂದರೆ ಕನಿಷ್ಟ ಮುವ್ವತ್ತು ವರ್ಷಗಳ ವಯಸ್ಸು ಆಗುವವರೆಗೆ ದುರ್ಬಲವರ್ಗಗಳ ಯುವಕರು ರಾಜಕೀಯದತ್ತ ಆಸಕ್ತಿ ವಹಿಸುವುದಿಲ್ಲ.ಇದರಿಂದಾಗಿ ಶ್ರೀಮಂತರ ಮಕ್ಕಳುಗಳೇ ರಾಜಕೀಯದಲ್ಲಿ ಯಶಸ್ವಿ ನಾಯಕರುಗಳು ಆಗಲು ಅವಕಾಶಮಾಡಿಕೊಟ್ಟಂತೆ ಆಗುತ್ತದೆ.ಮೀಸಲಾತಿಯ ಕಾರಣದಿಂದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಸಮುದಾಯದ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುವುದಿಲ್ಲ ಎಂದು ವಾದಿಸಬಹುದಾದರೂ ಅಲ್ಲಿಯೂ ಪರಿಶಿಷ್ಟಜಾತಿ,ಪರಿಶಿಷ್ಟ ವರ್ಗಗಳ ಶ್ರೀಮಂತರು,ಐಎಎಸ್,ಕೆಎಎಸ್ ಗಳಂತಹ ಉನ್ನತ ಹುದ್ದೆಗಳಲ್ಲಿದ್ದು ‘ಸಂಪಾದನೆ ‘ ಮಾಡಿದ ಮುಂದುವರೆದ ದಲಿತರಿಗೆ ರಾಜಕೀಯ ಅವಕಾಶ ಸಿಗುತ್ತದೆಯೇ ಹೊರತು ಹಳ್ಳಿಗಾಡಿನ ಸಾಮಾನ್ಯ ದಲಿತರು ಅವಕಾಶವಂಚಿತರಾಗಬೇಕಾಗುತ್ತದೆ.

2. ಅಪಕ್ವ ವಯಸ್ಸಿನ ಕಾರಣದಿಂದ ಯಶಸ್ವಿ ಸಂಸದೀಯ ಪಟುಗಳಾಗಲಾರರು

ಅಪ್ರಬುದ್ಧ ವಯಸ್ಸಿಗೆ ಶಾಸಕರು,ಸಂಸದರು ಆಗುವ ವ್ಯಕ್ತಿಗಳಲ್ಲಿ ರಾಜ್ಯ,ರಾಷ್ಟ್ರ,ಶಾಸನಸಭೆಗಳ ಮಹತ್ವ,ಶಾಸನದ ಮಹತ್ವ ಮೊದಲಾದ ಗಂಭೀರವಿಷಯಗಳ ತಿಳುವಳಿಕೆಯ ಕೊರತೆಯ ಕಾರಣದಿಂದ ಶಾಸನಸಭೆಗಳು ‘ ಹುಡುಗಾಟಿಕೆಯ ಅಡ್ಡೆಗಳು’ ಆಗಿ ಪರಿವರ್ತನೆಯಾಗುವ ಅಪಾಯವಿದೆ.ಪ್ರೇಮೋನ್ಮಾದ,ಮದುವೆಯ ಗುಂಗಿನಲ್ಲಿರುವ ತರುಣ ತರುಣಿಯರಿಗೆ ಚಿಕ್ಕವಯಸ್ಸಿನಲ್ಲಿಯೇ ಅಧಿಕಾರ ಒದಗಿ ಬಂದರೆ ಏನೆಲ್ಲ ಅನಾಹುತಗಳಾಗಲಿಕ್ಕಿಲ್ಲ? ಅಷ್ಟಮದಗಳಲ್ಲಿ ಅಧಿಕಾರಮದವು ಅತ್ಯಂತ ಕೆಟ್ಟದಾಗಿದ್ದು ಅಧಿಕಾರ ಒಂದಿದ್ದರೆ ಏನೆಲ್ಲ ಮಾಡಬಹುದು,ಏನೆಲ್ಲವನ್ನು ಮಾಡಿಯೂ ದಕ್ಕಿಸಿಕೊಳ್ಳಬಹುದು ಎನ್ನುವ ಭಾವನೆಯೇ ವ್ಯಾಪಕವಾಗಿರುವ ದಿನಗಳಲ್ಲಿ ಅಪ್ರಬುದ್ಧ ವಯಸ್ಸಿನ ಪ್ರಜಾಪ್ರತಿನಿಧಿಗಳಿಂದ ಸಮಾಜಕ್ಕೆ ತೊಂದರೆ ಆಗುವುದಿಲ್ಲ ಎನ್ನುವುದಕ್ಕೆ ‘ ಗ್ಯಾರಂಟಿ’ ಏನು ?

3. ಸರಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಕಂದರ ನಿರ್ಮಾಣವಾಗುತ್ತದೆ.

ನಮ್ಮಲ್ಲಿ ಪ್ರಜಾಪ್ರಭುತ್ವವು ಯಶಸ್ವಿಯಾಗಲು ಪ್ರಬುದ್ಧರಾಜಕಾರಣಿಗಳಂತೆಯೇ ರಾಜಕೀಯ ನಿರ್ಲಿಪ್ತ ನಿಲುವಿನ,ಸೇವಾಬದ್ಧ ಸರಕಾರಿ ಅಧಿಕಾರಿಗಳೂ ಕಾರಣ ಎನ್ನುವುದನ್ನು ಮರೆಯುವಂತಿಲ್ಲ.ಸರಕಾರಿ ಅಧಿಕಾರಿಗಳು ಉನ್ನತಹುದ್ದೆಗೆ ತಲುಪಲು ಹತ್ತಿಪ್ಪತ್ತು ವರ್ಷಗಳಷ್ಟು ದೀರ್ಘ ಅವಧಿ ಹಿಡಿಯುತ್ತದೆ.18 ವಯಸ್ಸಿಗೆ ಸಂಸದರು,ಶಾಸಕರು ಆಗುವ ಅಪ್ರಬುದ್ಧರು ತಮಗಿಂತ ವಯಸ್ಸಿನಲ್ಲಿ ಹಿರಿಯರಾಗಿರುವ ಸರಕಾರಿ ಅಧಿಕಾರಿಗಳೊಂದಿಗೆ ಅಸಭ್ಯವಾಗಿ,ಅನುಚಿತವಾಗಿ ವರ್ತಿಸುತ್ತಾರೆ.ಇದರಿಂದ ಸೇವೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಸರಕಾರಿ ಅಧಿಕಾರಿಗಳು ಕಾಟಾಚಾರಕ್ಕೆ ಕೆಲಸ ಮಾಡುವ ಪರಿಸ್ಥಿತಿಯುಂಟಾಗಿ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ.

4. ಸಾರ್ವಜನಿಕ ಸಂಪತ್ತಿನ ದುಂದು ವೆಚ್ಚ,ವ್ಯರ್ಥಪೋಲು ಆಗುವ ಸಂಭವ

ಅಪಕ್ವ ವಯಸ್ಸಿಗೆ ಶಾಸಕರು,ಸಂಸದರುಗಳು ಆಗುವವರಿಗೆ ಕೌಟುಂಬಿಕ ನಿರ್ವಹಣೆಯೂ ಸೇರಿದಂತೆ ಯಾವುದೇ ಜವಾಬ್ದಾರಿ ನಿರ್ವಹಿಸಿದ ಅನುಭವ ಇರುವುದಿಲ್ಲವಾದ್ದರಿಂದ ಶಾಸಕರು,ಸಂಸದರುಗಳಾಗಿ ದುಂದುವೆಚ್ಚ,ಅನಗತ್ಯವೆಚ್ಚವನ್ನುಂಟು ಮಾಡುವ ಪ್ರವೃತ್ತಿಯಿಂದ ಸಾರ್ವಜನಿಕರ ತೆರಿಗೆಯ ಹಣವನ್ನು ವ್ಯರ್ಥಪೋಲು ಮಾಡುವ ಸಂಭವವಿದೆ.

ಅಪ್ರಬುದ್ಧರು ರಾಜಕೀಯ ಚುಕ್ಕಾಣಿ ಹಿಡಿದರೆ ಆಗಬಹುದಾದ ಅಪಾಯಗಳನ್ನು ಇನ್ನಷ್ಟು ಪಟ್ಟಿ ಮಾಡಬಹುದು.ಈ ನಾಲ್ಕು ಗಂಭೀರ ಅಪಾಯಗಳು ಆಗಿದ್ದರಿಂದ ಅವುಗಳನ್ನಷ್ಟೇ ವಿವರಿಸಿದ್ದೇನೆ.ದೇಶದ ಪ್ರಜ್ಞಾವಂತರುಗಳು ಗಂಭೀರವಾಗಿ ಆಲೋಚಿಸಬೇಕಾದ ವಿಷಯ ಇದು. ದಲಿತರು,ದುರ್ಬಲ ವರ್ಗಗಳನ್ನು ಕಡೆಗಣಿಸುತ್ತಲೇ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತ ನಡೆದಿರುವವರು ರಾಜಕೀಯ ಅಧಿಕಾರವನ್ನು ಉಳ್ಳವರು,ಉದ್ಯಮಿಗಳು,ಕಾರ್ಪೋರೇಟ್ ದೊರೆಗಳ ಮಕ್ಕಳುಗಳ ಹಕ್ಕನ್ನಾಗಿ ಪರಿವರ್ತಿಸುತ್ತಿದ್ದಾರೆಯೋ ಏನೋ ಎನ್ನುವ ಅನುಮಾನ ಕಾಡುತ್ತಿದೆ.

About The Author