ಶಬ್ದಾರ್ಥ ಪ್ರಪಂಚ : ಪೂರ್ವಾಶ್ರಮ : ಮುಕ್ಕಣ್ಣ ಕರಿಗಾರ

ಸಂನ್ಯಾಸದೀಕ್ಷೆ ತೆಗೆದುಕೊಳ್ಳುವಾಗ ‘ ಪೂರ್ವಾಶ್ರಮದಿಂದ ಬಂಧಮುಕ್ತ’ ರಾಗುವ ಸಂಸ್ಕಾರಕ್ರಿಯೆ ಇದೆ.ಸಂನ್ಯಾಸಿಯಾಗುವವನು ಕೇಶಮುಂಡನ ಮಾಡಿಕೊಂಡು,ನದಿಸ್ನಾನ ಮಾಡಿ ಉಟ್ಟಬಟ್ಟೆಗಳನ್ನು ನದಿಯಲ್ಲಿ ಹರಿಯಬಿಟ್ಟು ಹೊಸಬಟ್ಟೆಗಳನ್ನುಟ್ಟುಕೊಂಡು ದೀಕ್ಷೆಕೊಡುವ ಹಿರಿಯ ಸಂನ್ಯಾಸಿಯಿಂದ‌ ಕಾಷಾಯ,ದಂಡ,ಕಮಂಡಲುಗಳನ್ನು ಸ್ವೀಕರಿಸಿ ಸಂನ್ಯಾಸ ದೀಕ್ಷೆ‌ಪಡೆದು ಸಂನ್ಯಾಸಾಶ್ರಮ ಸ್ವೀಕರಿಸುವನು.ಈಗಿನದು ‘ ಸಂನ್ಯಸಾಶ್ರಮ’ ವಾಗಿದ್ದರೆ ಅದರ ಹಿಂದಿನದು ‘ ಗೃಹಸ್ಥಾಶ್ರಮ’. ಸಂನ್ಯಾಸಿಗಳಿಗೆ ಮುಂಚಿನ ಗೃಹಸ್ಥಾಶ್ರಮವು ‘ ಪೂರ್ವಾಶ್ರಮ’ ಎನ್ನಿಸಿಕೊಂಡಿದ್ದು ಅದನ್ನು ಸ್ಮರಿಸಬಾರದು ಎನ್ನುವ ಕಟ್ಟುನಿಟ್ಟಿನ ನಿಯಮವಿದೆ.ಸಂನ್ಯಾಸಾಶ್ರಮ ಸ್ವೀಕರಿಸುವ ಪೂರ್ವದಲ್ಲಿ ಆ ವ್ಯಕ್ತಿ ತನ್ನ ತಂದೆ- ತಾಯಿ,ಬಂಧು- ಬಳಗ,ಕುಲ- ಗೋತ್ರ ಸಂಬಂಧಗಳಿಗೆಲ್ಲ ತರ್ಪಣ ನೀಡಿರುತ್ತಾನೆ.ಅಂದರೆ ಅವರೆಲ್ಲರು ತನ್ನ ಪಾಲಿಗೆ ಸತ್ತರು,ನಾನು ಅವರ ಪಾಲಿಗೆ ಸತ್ತವನು ಎನ್ನುವ ವೈರಾಗ್ಯಭಾವವನ್ನುಂಟು ಮಾಡುವ ಕ್ರಿಯೆ ಅದು.ನಿಜವಾದ ಸಂನ್ಯಾಸಿಗಳಾಗುವವರಿಗೆ ಇದರ ಅಗತ್ಯವಿದೆ.ಆದರೆ ‘ ಕಪಟ ಸಂನ್ಯಾಸಿ’ ಗಳಿಗೆ?

ನಮ್ಮಲ್ಲಿ ನಿಜ ಸಂನ್ಯಾಸಿಗಳಿಗಿಂತ ಕಪಟಸಂನ್ಯಾಸಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಮಂದಿಯನ್ನು ಮೆಚ್ಚಿಸುವ ಸಂನ್ಯಾಸಿಗಳೇ ಹೊರತು ಇವರುಗಳು ನಿಜವಾದ ಸಂನ್ಯಾಸಿಗಳಲ್ಲ.ಬಿಳಿಬಟ್ಟೆಯನ್ನು ಅಥವಾ ಬಣ್ಣದ ಬಟ್ಟೆಯನ್ನಷ್ಟೆ ಬಿಟ್ಟಿರುತ್ತಾರಲ್ಲದೆ ಈ ಕಪಟ ಸಂನ್ಯಾಸಿಗಳು ಮತ್ತೇನನ್ನೂ ಬಿಟ್ಟಿರುವುದಿಲ್ಲ.ಶಾಲೆಗಳಲ್ಲಿ ವಿದ್ಯಾರ್ಥಿಗಳು ಯುನಿಫಾರಂ ಹಾಕುವಂತೆ ಕಾವಿ,ಕಾಷಾಯಾಂಬರ ಧರಿಸಿರುತ್ತಾರಷ್ಟೆ.ಜನರೆದುರು ಪೂರ್ವಾಶ್ರಮದ ಸ್ಮರಣೆ ಮಾಡಬಾರದು ಎನ್ನುತ್ತಾರಾದರೂ ಇವರು ನಿತ್ಯಪೂರ್ವಾಶ್ರಮದ ಮಡದಿ ಮಕ್ಕಳ ಚಿಂತೆಯಲ್ಲಿ ಕೊರಗುವವರು.ನಾನು ಈ ಹಿಂದೆ ಬಳ್ಳಾರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಯಾಗಿದ್ದಾಗ ನನ್ನ ಆಧೀನದಲ್ಲಿದ್ದ ಬ್ರಾಹ್ಮಣ ಸಮುದಾಯದ ಸಹಾಯಕ ಕಾರ್ಯದರ್ಶಿಯಾಗಿದ್ದ ಒಬ್ಬರು ‘ಮಾಧ್ವ ಸಂಪ್ರದಾಯದ ಮಠ ಒಂದರ ಪೀಠಾಧಿಪತಿಗಳು ಪ್ರತಿದಿನವೂ ಅವರ ಪೂರ್ವಾಶ್ರಮದ ಹೆಂಡತಿ ಮಕ್ಕಳುಗಳೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಾರೆ’ ಎನ್ನುವುದನ್ನು ನನ್ನ ಗಮನಕ್ಕೆ ತಂದು ಆ ಸ್ವಾಮಿಗಳ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿದ್ದರು.ಸಹಾಯಕ ಕಾರ್ಯದರ್ಶಿ ಆಗಿದ್ದ ಅವರಿಗೆ ಮಾಧ್ವ ಮಠದಸ್ವಾಮಿ ಮಾಡುತ್ತಿರುವುದು ಸರಿ ಅಲ್ಲ ಅನ್ನಿಸಿತು.ಅದು ನಿಜವೆ ಆದರೂ ಅವರೊಬ್ಬರನ್ನೇ ದೂರಿ ಫಲವಿಲ್ಲವಲ್ಲ.ಅಂತಹ ಸ್ವಾಮಿಗಳೇ ಬಹಳಷ್ಟು ಜನರು ಇರುವಾಗ ನಾವು ಅಂತಹ ವಿಷಯಗಳ ಬಗ್ಗೆ ಉದ್ವಿಗ್ನರಾಗುವ ಅವಶ್ಯಕತೆ ಇಲ್ಲ ಎನ್ನುವ ನನ್ನ ಉತ್ತರ ಅವರಿಗೆ ಸಮಾಧಾನವನ್ನುಂಟು ಮಾಡಿತೋ ಇಲ್ಲವೋ ನಾನರಿಯೆ.ವೈಷ್ಣವ,ಮಾಧ್ವ ಸಂಪ್ರದಾಯದ ಕಾವಿಧಾರಿಗಳಿಗಷ್ಟೇ ಅನ್ವಯವಾಗುವ ಮಾತಲ್ಲ ಇದು ,ಶೈವ -ವೀರಶೈವ ಸ್ವಾಮಿಗಳಿಗೂ ಇದು ಅನ್ವಯವಾಗುತ್ತದೆ.

ಸಂನ್ಯಾಸದ ನಿಜ ಉದ್ದೇಶವೇ ವೈರಾಗ್ಯವನ್ನು ಹೊಂದುವುದು.ಮನೆ,ಮಡದಿ ಮಕ್ಕಳು,ಬಂಧು- ಸಂಬಂಧಿಕರುಗಳ ಬಗ್ಗೆ ಅಷ್ಟೇ ಅಲ್ಲ ವಿಶ್ವದ ಎಲ್ಲ ವ್ಯಕ್ತಿ ವಸ್ತುಗಳಲ್ಲಿ ಅನಾಸಕ್ತಿಭಾವ ತಳೆಯುವುದೇ ವೈರಾಗ್ಯವು.ಕಾವಿ ಇಲ್ಲವೇ ಕಾಷಾಯವನ್ನು ತೊಡುವುದು ವಿರಕ್ತಭಾವವನ್ನು ಹೊಂದಿದ್ದೇನೆ ಎನ್ನುವುದನ್ನು ಸೂಚಿಸಲು.ಸಂನ್ಯಾಸಿಯಾದವನು ಹಳ್ಳಿಗೊಂದು ನಿದ್ದೆ,ಪಟ್ಟಣಕ್ಕೆ ಮೂರು ನಿದ್ದೆಗಳಂತೆ ಎಲ್ಲಿಯೂ ನಿಲ್ಲದೆ ನಿರಂತರವಾಗಿ ಸಂಚರಿಸುತ್ತಿರಬೇಕು.ಎಲ್ಲಿಯೂ ಆಶ್ರಮ ಮಠಗಳನ್ನು ಕಟ್ಟಿಕೊಳ್ಳಬಾರದು.ಹಾಳುದೇವಾಲಯ,ಗಿಡಗಳ ಬದಿಯಲ್ಲೇ ನಿದ್ದೆ ಮಾಡಿ ಮರುದಿನ ಎದ್ದು ಮತ್ತೆ ಪ್ರಯಾಣ ಆರಂಭಿಸಬೇಕು. ‘ತರುತಲವಾಸ ಕರತಲಭಿಕ್ಷೆ’ಯು ಸಂನ್ಯಾಸಿಗಳ ನಿಯಮ.ಹೊಟ್ಟೆ ತುಂಬ ಊಟ ಮಾಡಬಾರದು.ಅನ್ನವನ್ನು ಸಂಗ್ರಹಿಸಿಟ್ಟುಕೊಳ್ಳಲೂ ಬಾರದು.ಹಸಿವೆ ಆದಾಗ ಐದುಮನೆ ಭಿಕ್ಷೆ ಬೇಡಬೇಕು.ಅವರು ನೀಡಿದರೆ ಉಣ್ಣಬೇಕು, ನೀಡದಿದ್ದರೆ ಅಂದಿಗೆ ಅದೇ ಗತಿ ಎಂದು ಸುಮ್ಮನಾಗಬೇಕು.ಇದು ನಿಜವಾದ ಸಂನ್ಯಾಸ.ಎಲ್ಲಿಯೂ ನಿಲ್ಲದೆ ನಿತ್ಯ ನಿರಂತರವಾಗಿ ಸಂಚರಿಸುತ್ತಿರುವನಾದ್ದರಿಂದ ಆ ಸಂನ್ಯಾಸಿ ಜಂಗಮ ಎನ್ನಿಸಿಕೊಳ್ಳುತ್ತಾನೆ. ವೈರಾಗ್ಯವನ್ನು ಒಪ್ಪಿ,ಅಪ್ಪಿದ ಅಂತಹ ವ್ಯಕ್ತಿಗಳು ನಿಜ ಸಂನ್ಯಾಸಿಗಳಾಗಿದ್ದು ಇಂದು ಅಂಥವರ ಸಂಖ್ಯೆ ನೂರಕ್ಕೆ ಒಂದರಷ್ಟಾದರೂ ಇದೆಯೋ ಇಲ್ಲವೊ!

ನಾವು ನಿತ್ಯವೂ ಕಾಣುತ್ತಿರುವ ಕಾವಿಧಾರಿಗಳು ಸಂನ್ಯಾಸಿಗಳೆ? ವಿರಕ್ತರೆ? ಖಂಡಿತ ಅಲ್ಲ.ಶೈವ -ವೀರಶೈವ ಮಠಗಳ ಸ್ವಾಮಿಗಳು ತಮ್ಮ ನಂತರ ಆ ಮಠಗಳಿಗೆ ಉತ್ತರಾಧಿಕಾರಿಗಳನ್ನಾಗಿ ತಮ್ಮ ಬಂಧು ಸಂಬಂಧಿಕರ ಮಕ್ಕಳುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.ಹಾಗಿದ್ದರೆ ಇವರಿಗೆ ‘ ಪೂರ್ವಾಶ್ರಮ’ ದ ಸ್ಮರಣೆ ಇಲ್ಲವೆ? ಪೂರ್ವಾಶ್ರಮದ ಹಂಗು ಹರಿದೊಗೆದಿದ್ದಾರೆಯೆ ಈ ಮಹಾನುಭಾವರುಗಳು? ಮಠ ಮಂದಿರಗಳನ್ನು ಕಟ್ಟಿಸುವುದು,ಅದಕ್ಕೊಂದು ಸುಳ್ಳು ಪ್ರತಿಷ್ಠೆಯ‌ ಇತಿಹಾಸ ಪರಂಪರೆ ಕಲ್ಪಿಸುವುದು,ಮಠದ ಉದ್ಧಾರ ನಿತ್ಯ ನೈಮಿತ್ತಿಕ ಕಾರ್ಯಗಳ ಹೆಸರಿನಲ್ಲಿ ಭಕ್ತರಲ್ಲಿ ಬೇಡಿ ತಿನ್ನುವುದು,ಮಠ ಮಂದಿರದ‌ನಿರ್ಮಾಣ,ಉದ್ಧಾರ,ಜೀರ್ಣೋದ್ಧಾರ ಎಂದು ಭಕ್ತರುಗಳ ಮನೆಮನೆಗೆ ತೆರಳಿ ಕಾಡಿ ಬೇಡಿ ಹಣಪಡೆದು ಬದುಕುವ ಇವರುಗಳು ಹೇಗೆ ಸಂನ್ಯಾಸಿಗಳಾಗಬಲ್ಲರು? ಶ್ರೀಮಂತರು,ರಾಜಕಾರಣಿಗಳನ್ನು ಮಠ ಮಂದಿರಗಳಿಗೆ ಆಹ್ವಾನಿಸಿ ಅವರುಗಳಿಂದ ಲಕ್ಷ ಲಕ್ಷ ಹಣಪಡೆದು ಶಾಲು ಹೊದಿಸಿ ಸನ್ಮಾನಿಸುವ ಇಂಥವರಿಗೆ ಆಶೀರ್ವದಿಸುವ ಶಕ್ತಿ ಇರುತ್ತದೆಯೆ? ಸಂನ್ಯಾಸಿಯಾದವನು ಸಂಪಾದಿಸಬೇಕಾದದ್ದು ಲೋಕಾನುಗ್ರಹಶಕ್ತಿಯನ್ನೇ ಹೊರತು ಹಣವನ್ನಲ್ಲ.ಬಹುತೇಕ ಸಂನ್ಯಾಸಿಗಳು ಕೋಟಿ ಕೋಟಿ ಹಣ ಸಂಪಾದಿಸಿ ತಿಜೋರಿಗಳಲ್ಲಿಟ್ಟು ಅದರ ಧ್ಯಾನದಲ್ಲಿಯೇ ಇರುತ್ತಾರೆ.ಕೆಲವು ಸಂನ್ಯಾಸಿಗಳು ಬ್ಯಾಂಕುಗಳಲ್ಲಿ ಹಣ ಠೇವಣಿ ಇರಿಸಿ ಚೆಕ್ಕುಗಳಿಗೆ ಸಹಿ ಮಾಡಿ ಹಣಕಾಸಿನ ವ್ಯವಹಾರ ನಿರ್ವಹಿಸುತ್ತಾರೆ.ಇನ್ನೂ ಕೆಲವು ಮಹಾನುಭಾವರಾದ ಕಾವಿಧಾರಿಗಳು ಬಡ್ಡಿಗೆ ಸಾಲ ಕೊಡುತ್ತಾರೆ,ಬ್ಯಾಂಕು,ಫೈನಾನ್ಸ್,ಪತ್ತಿನ ಸಹಕಾರಿ ಸಂಘಗಳನ್ನು ಸ್ಥಾಪಿಸಿ ಹಣದ ವ್ಯವಹಾರ ಮಾಡುತ್ತಾರೆ.ಇದು ಸಂನ್ಯಾಸಿಗಳು ಮಾಡಬಹುದಾದ ಕೆಲಸವೆ ?

ನಿಜವಾದ ಸಂನ್ಯಾಸಿಗಳು ಹೇಗಿರುತ್ತಾರೆ ಎನ್ನುವುದಕ್ಕೆ ನನ್ನ ಗುರುಗಳಾದ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು ಉತ್ತಮ ನಿದರ್ಶನ.ನಾವು ಅವರ ಹೆಸರಿನಲ್ಲಿ ಶಾಲೆ ಕಾಲೇಜುಗಳನ್ನು ಸ್ಥಾಪಿಸಬಹುದೆ ಎಂದು ಕೇಳಿದ್ದಕ್ಕೆ ಅವರು ನಿರಾಕರಿಸಿ ನುಡಿದ ಸ್ಪಷ್ಟ ಮಾತು ‘ ನನ್ನ ಹೆಸರಿನಲ್ಲಿ ಯಾವುದೇ ವ್ಯಾಪಾರ ವ್ಯವಹಾರ ಮಾಡುವಂತಿಲ್ಲ.ಖಾಸಗಿ ಶಾಲೆಗಳನ್ನು ತೆರೆಯುವುದು ವ್ಯಾಪಾರವೆ! ನನ್ನ ಹೆಸರಿನಲ್ಲಿ ಅನ್ನದಾನ,ವಸ್ತ್ರದಾನ,ಅಭಯದಾನಗಳನ್ನು ಮಾತ್ರ ಮಾಡಬಹುದೇ ವಿನಃ ಶಾಲೆ ಕಾಲೇಜುಗಳನ್ನು ತೆರೆಯಬಾರದು’. ಇಂತಹ ಸಂನ್ಯಾಸಿಗಳೇ ಸಂತಶ್ರೇಷ್ಠರೆನ್ನಿಸಿಕೊಂಡು ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗಿ ಮನುಕುಲವನ್ನು ಉದ್ಧರಿಸುತ್ತಾರೆ,ಮನುಕುಲಕ್ಕೆ ಆದರ್ಶವಾಗುತ್ತಾರೆ.

ನಮ್ಮಲ್ಲಿ ಪತ್ರಿಕೆ ಒಂದಕ್ಕೆ ಅಂಕಣ‌ ಲೇಖನ ಬರೆಯುತ್ತಿರುವ ಸ್ವಾಮಿಗಳೊಬ್ಬರು ತಮ್ಮ ತಾಯಿ ನಿಧನರಾದಾಗ ತಾವು ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲವೆಂದೂ ಶಂಕರಾಚಾರ್ಯರು ಅವರ ತಾಯಿಯ ಅಂತ್ಯಕ್ರಿಯೆ ಮಾಡಿದುದನ್ನು ಉಲ್ಲೇಖಿಸಿ ತಾವು ಶಂಕರಾಚಾರ್ಯರಿಗಿಂತ ದೊಡ್ಡವರು ಎಂಬಂತೆ ಕೊಚ್ಚಿಕೊಂಡಿದ್ದರು.ಅವರ ಅಜ್ಞಾನವನ್ನು ಕಂಡು ನಗೆ ಬಂದಿತ್ತು ನನಗೆ.ಶಂಕರಾಚಾರ್ಯರ ಪಾದಧೂಳಿಗೂ ಸಮನಾಗದ ಈ ಸಂನ್ಯಾಸಿ ಪೂರ್ವಾಶ್ರಮದ ತಾಯಿಯ ಶವಸಂಸ್ಕಾರದಲ್ಲಿ ಭಾಗವಹಿಸದೆ ಸಂನ್ಯಾಸಾಶ್ರಮವನ್ನು ಎತ್ತಿಹಿಡಿದೆ ಎಂದು ಕೊಚ್ಚಿಕೊಂಡಿದ್ದಾರೆ.ಆದರೆ ಆ ಸ್ವಾಮಿಯೇ ದೊಡ್ಡ ಮಠ ಕಟ್ಟಿಕೊಂಡು,ಲಕ್ಷಾಂತರ ಶಿಷ್ಯರುಗಳನ್ನು ,ಕೋಟಿ ಕೋಟಿ ಹಣವನ್ನು ಸಂಪಾದಿಸಿಕೊಂಡು ಶಾಲೆ- ಕಾಲೇಜು,ವೈದ್ಯಕೀಯ ಕಾಲೇಜುಗಳನ್ನು ನಡೆಸುತ್ತಿದ್ದಾರೆ.ಎ.ಸಿ ರೂಮಿನಲ್ಲಿರುತ್ತಾರೆ,ವಿಲಾಸಿ ಎ ಸಿ ಕಾರಿನಲ್ಲಿ ಸಂಚರಿಸುತ್ತಾರೆ ! ಶಂಕರಾಚಾರ್ಯರು ತಾಯಿಯ ಅಂತ್ಯಸಂಸ್ಕಾರ ಮಾಡುವ ಮೂಲಕ ಮಾತೃಋಣ ತೀರಿಸಲಾಗದ ಮಹಾತತ್ತ್ವ ಎಂದು ಲೋಕಕ್ಕೆ ಸೇರಿದ್ದಾರೆ ಎನ್ನುವುದು ಕಾವಿಮಾತ್ರಸಂನ್ಯಾಸಿಗಳಾದವರಿಗೆ ಅರ್ಥವಾಗುವುದಿಲ್ಲ.

ಈಗೀಗ ಜಾತಿಗೊಂದೋ ನಾಲ್ಕರಂತೆಯೋ ಮಠಗಳು ಹುಟ್ಟಿತ್ತಿವೆ.ಇವರು ಕಾವಿಧರಿಸಿರುತ್ತಾರಲ್ಲದೆ ಸಂನ್ಯಾಸಿಗಳಲ್ಲ.ಯಾಕೆಂದರೆ ಸಂನ್ಯಾಸಾಶ್ರಮದ ಮೂಲ ತತ್ತ್ವವೇ ಇವರಲ್ಲಿ ಇರುವುದಿಲ್ಲ.ಕಾವಿಯನ್ನು ಧರಿಸಿದವನು ಯಾವುದೇ ಜಾತಿ,ಮತಕ್ಕೆ ಅಂಟಿಕೊಳ್ಳಬಾರದು,ಸಮತ್ವವನ್ನು ಅಳವಡಿಸಿಕೊಳ್ಳಬೇಕು.ತಮ್ಮ ಜಾತಿಯ ಜನರ ಉದ್ಧಾರಕ್ಕಾಗಿಯೇ ಮಠ ಪೀಠಗಳನ್ನು ಪ್ರವೇಶಿಸುವ ಇವರುಗಳನ್ನು ಸಂನ್ಯಾಸಿಗಳು ಎನ್ನಲಾಗದು,ಬೇಕಿದ್ದರೆ ಜಾತಿಯ ಗುರುಗಳು ಎನ್ನಬಹುದು.ಜಾತಿಯ ಮಠಗಳ ಸ್ವಾಮಿಗಳಿಗೆ ಪೂರ್ವಾಶ್ರಮವೇ ದೊಡ್ಡದು ಆಗಿರುತ್ತದೆ! ಜಾತಿಯ ಜನರನ್ನು ಕರೆದು ಅವರ ಉದ್ಧಾರಕ್ಕೆ ಪರಿಶ್ರಮಿಸುವುದೇ ಜೀವನದ ಸಾರ್ಥಕತೆ ಎಂದು ಭ್ರಮಿಸುವ ಜಾತಿಗುರುಗಳು ಸಂನ್ಯಾಸ ತತ್ತ್ವಕ್ಕೆ ಅಪಚಾರ.ಆದರೆ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಮತದಾನವೇ ಇಲ್ಲಿ ದೊಡ್ಡದಾನವಾಗಿರುವುದರಿಂದ ಮತದ ಹೆಸರಿನಲ್ಲಿ ಮೌಲ್ಯಗಳು ಅಪಮೌಲ್ಯಗಳಾಗುತ್ತಿವೆ,ಅನಾಚರಣೆಗಳು ಸಂಸ್ಕೃತಿಯಾಗುತ್ತಿವೆ.’ಕಾಲಾಯತಸ್ಮೈ ನಮಃ’ ಎಂದು ಈಗಿನ ಸಂನ್ಯಾಸಿಗಳಿಗೆ ಪೂರ್ವಾಶ್ರಮದ ಸ್ಮರಣೆಯೇ ‘ ಅಪೂರ್ವ ದರ್ಶನ’ ವೆಂದೂ ಜೀವನದ ಸಾರ್ಥಕತೆ ಎಂದೂ ಬಗೆದು ಸುಮ್ಮನಾಗದೆ ಬೇರೆ ದಾರಿಯಿಲ್ಲ !

About The Author