ಮಹಾಶೈವೋಪದೇಶ –೦೪ : ಅರಿವು — ಗುರು :  ಮುಕ್ಕಣ್ಣ ಕರಿಗಾರ

ವಿಶ್ವದ ಕಾರಣಸ್ಥಾನವಾಗಿ,ವಿಶ್ವದ ಆಧಾರವಾಗಿ ಮತ್ತು ಭಕ್ತರ ಮೋಕ್ಷಸ್ಥಾನವಾಗಿರುವ ಕೈಲಾಸದಲ್ಲಿ ಪರಶಿವನು ತನ್ನ ಸತಿ ಪಾರ್ವತಿಯೊಂದಿಗೆ ಕುಳಿತಿದ್ದಾನೆ.ಪಾರ್ವತಿದೇವಿಯು ಎಂದಿನಂತೆ ಲೋಕಕಲ್ಯಾಣಕಾರಕವಾದ ಆಧ್ಯಾತ್ಮಿಕ ತತ್ತ್ವವನ್ನು ಲೋಕೇಶ್ವರನಿಂದ ತಿಳಿಯಲು ಉತ್ಸುಕಗಳಾಗಿದ್ದಾಳೆ.ಶಂಕರಿಯು ವಿಶ್ವೇಶ್ವರನನ್ನು ಪ್ರಶ್ನಿಸುವಳು,’ ಲೋಕನಾಥನೆ,ನಿನ್ನ ಸನ್ನಿಧಿಯಾದ ಮೋಕ್ಷವನ್ನು ಪಡೆಯಲು ಗುರುವು ಅನಿವಾರ್ಯನೆ? ಗುರೂಪದೇಶ ಇಲ್ಲದಿದ್ದರೆ ಮೋಕ್ಷ ದೊರಕದೆ?’. ನಾಗಭೂಷಣನು ಸಂತುಷ್ಟ ಚಿತ್ತನಾಗಿ ‘ ದೇವಿ ದುರ್ಗೆಯೆ,ಬಹುಮಹತ್ವದ ಪ್ರಶ್ನೆಯನ್ನು ಕೇಳಿರುವಿ.ನಿನ್ನ ಈ ಪ್ರಶ್ನೆಯು ಲೋಕದ ಜನರ ಗೊಂದಲವನ್ನು ನಿವಾರಿಸುತ್ತದೆಯಾದ್ದರಿಂದ ಅದನ್ನು ವಿವರಿಸಿ ಹೇಳುವೆನು ಕೇಳು’ ಎಂದು ತತ್ತ್ವೋಪದೇಶವನ್ನಾರಂಭಿಸುವನು ವಿಶ್ವೇಶ್ವರನು.

‘ ಪಾರ್ವತಿ,ಮೋಕ್ಷ ಸಾಧನೆಗೆ ಗುರು ಇರಬೇಕು ಆದರೆ ಗುರುವೇ ಅನಿವಾರ್ಯನಲ್ಲ.ಗುರೂಪದೇಶವು ಶಿಷ್ಯನನ್ನು ಮೋಕ್ಷಪಥದತ್ತ‌ ಕರೆದೊಯ್ಯುವುದು ಎನ್ನುವ ಮಾತು ದಿಟವಾದರೂ ಗುರೂಪದೇಶ ಇಲ್ಲದಿದ್ದರೆ ಮೋಕ್ಷ ಇಲ್ಲ ಎನ್ನುವ ಮಾತು ದಿಟವಲ್ಲ.ಮೋಕ್ಷವನ್ನು ಅನುಗ್ರಹಿಸುವ ನಾನು ಭಕ್ತರು ನನ್ನಲ್ಲಿ ನಿಜ ನಿಷ್ಠೆಯನ್ನು ಇಟ್ಟಿದ್ದಾರೋ ಇಲ್ಲವೋ ಎನ್ನುವುದನ್ನು ಮಾತ್ರ ಪರೀಕ್ಷಿಸುತ್ತೇನೆಯೇ ಹೊರತು ಗುರು ಇದ್ದಾನೋ ಇಲ್ಲವೋ ಎನ್ನುವುದನ್ನಲ್ಲ.ಲೋಕದ ಮಾನವರುಗಳೆಲ್ಲ ಗುರುಗಳಾಗಲು ಅರ್ಹರಲ್ಲ. ಪರಿಶುದ್ಧನಲ್ಲದ ವ್ಯಕ್ತಿಯಿಂದ ಪಡೆದ ಬೋಧೆಯು ಫಲಕಾರಿಯಲ್ಲ.ಗುರು ಪರಿಶುದ್ಧನಿದ್ದಾಗಲೇ ಅವನು ಮಂತ್ರಸಿದ್ಧನಾಗುವನು.ಮಂತ್ರಸಿದ್ಧರಿಂದ ಉಪದೇಶಿಸಲ್ಪಟ್ಟ ಮಂತ್ರದಿಂದ ಮಾತ್ರ ಮೋಕ್ಷವು.ಲೋಕದ ಆಡಂಬರ ಜೀವಿಗಳು ಗುರುವೆಂದು ಒಪ್ಪದೆ ವಿಚಾರವಂತರು ನನ್ನಲ್ಲಿ ಭಕ್ತಿ,ನಿಷ್ಠೆಗಳನ್ನು ಇಟ್ಟು ನನ್ನ ಪೂಜೆ,ಸೇವೆಗಳನ್ನು ಮಾಡಿದರೆ ನಾನು ಅಂತಹ ಭಕ್ತರುಗಳಲ್ಲಿ ಪ್ರಸನ್ನನಾಗಿ ಮೋಕ್ಷವನ್ನು ಕರುಣಿಸುವೆನು.ನಾನು ಎಲ್ಲ ಜೀವರುಗಳ ಎದೆಯಲ್ಲಿ ಆತ್ಮಸ್ವರೂಪದಿಂದ ಸುಪ್ತವಾಗಿರುವೆನು.ಯಾರು ನನ್ನಲ್ಲಿ ಭಕ್ತಿಯನ್ನಾಚರಿಸುವರೋ ಅವರಲ್ಲಿ ಅಂತರ್ಚೇತನನಾಗಿರುವ ನಾನು ಪ್ರಕಟಗೊಂಡು ಅಂತಹ ಸಾಧಕ ಭಕ್ತರನ್ನು ಉದ್ಧರಿಸುವೆನು.ಅಂತರ್ ಬೋಧೆ,ಸ್ಫುರಣಸಾಮರ್ಥ್ಯಗಳಿಂದ ನನ್ನ ಭಕ್ತರಿಗೆ ಮೋಕ್ಷ ಪಥವನ್ನು ತೋರುವೆನು. ಭಕ್ತರ ಉದ್ಧಾರಕ್ಕೆ ಅವಶ್ಯಕವಾದ ಮಂತ್ರ- ಸಾಧನೆಗಳನ್ನು ಸ್ವಯಂ ನಾನೇ ಉಪದೇಶಿಸುವೆನು’.ಪರಶಿವನ ಈ ಉತ್ತರದಿಂದ ಪರಬ್ರಹ್ಮೆಯು ಆನಂದಿತಳಾದಳು.

ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರ ಈ ಸಂವಾದವು ಅತಿ ಮಹತ್ವದ ಸಂವಾದವಾಗಿದ್ದು ಲೋಕಸಮಸ್ತರುಗಳಿಗೆ ಬೆಳಕು,ಭರವಸೆಯನ್ನು ನೀಡುತ್ತದೆ.ಮೋಕ್ಷಕ್ಕೆ ಗುರುವು ಬೇಕೇ ಬೇಕು ಎಂದು ಭಾವಿಸಿರುವ ಭಾವುಕಭಕ್ತರು ಗುರುವಾಗಲು ಅರ್ಹತೆ ಇಲ್ಲದ ಭವಿಗಳನ್ನೇ ಗುರುವೆಂದು ಭ್ರಮಿಸಿ ಕೆಡುತ್ತಿದ್ದಾರೆ.ಉಪದೇಶ ಕೊಡುವವನು ಮುಕ್ತನಾಗಿದ್ದರೆ ಮಾತ್ರ ತನ್ನ ಶಿಷ್ಯರಿಗೆ ಮೋಕ್ಷಪಥವನ್ನು ತೋರಬಲ್ಲ.ಮೈತುಂಬ ವಿಭೂತಿ ಬಳಿದುಕೊಂಡು,ರುದ್ರಾಕ್ಷಿ ,ಲಿಂಗ ಧರಿಸಿದವರೆಲ್ಲ ಗುರುಗಳಲ್ಲ.ಮಲಭಾಂಡದೇಹಿಗಳು ಗುರುಗಳಲ್ಲ,ಮಲಮುಕ್ತನಾದ ಮಹಾಂತನೇ ಗುರುವು.ಯಾರು ರಾಗ- ದ್ವೇಷ,ಮೋಹ- ಮಮಕಾರ ಮುಕ್ತರೋ ಅವರೇ ಗುರುಗಳು.ಯಾರು ಭವದೊಳಿದ್ದೂ ನಿತ್ಯವೂ ಅಭವಶಿವನ ಅನುಸಂಧಾನದಲ್ಲಿರುತ್ತಾರೋ ಅವರೇ ನಿಜವಾದ ಗುರುಗಳು.ಜಾತಿ ಗುರುಗಳು ಗುರುಗಳಲ್ಲ,ಜಾತಿಯಿಂದ ಹಿರಿಯರೆನ್ನಿಸಿಕೊಂಡವರೂ ಗುರುಗಳಲ್ಲ.ಸಾಧನೆಯ ಬಲದಿಂದ ಗುರುತ್ವ ಸಿದ್ಧಿಸುತ್ತದೆ.ಆಧ್ಯಾತ್ಮ,ಯೋಗಸಾಧಕರಲ್ಲದ ಯಾರೂ ಗುರುಗಳಲ್ಲ.ದಡ್ಡ ಜನರು ಮೂಢರುಗಳನ್ನು ಗುರುವೆಂದು ಭ್ರಮಿಸಿ ಅಡ್ಡ ಉದ್ದ ಬೀಳುತ್ತಾರೆ.ಒಬ್ಬ ಕುರುಡನ ಕೈಯನ್ನು ಮತ್ತೊಬ್ಬ ಕುರುಡ ಹಿಡಿದುಕೊಂಡಂತೆ ಲೋಕದ ಮರುಳಜನರು ಹಾಳಾಗುತ್ತಿದ್ದಾರೆ.

ಗುರೂಪದೇಶ,ಗುರುಬೋಧೆಗಳ ಹೆಸರಿನಲ್ಲಿ ಅನಾಚಾರ ತಾಂಡವವಾಡುತ್ತಿದೆ.’ ನಗುರೋರಧಿಕಂ’ ಎನ್ನುವ ಮಾತುಶಿವ ಸಾಕ್ಷಾತ್ಕಾರವನ್ನುಂಡ ಮಹಾಂತರುಗಳಿಗೆ ಅನ್ವಯಿಸುತ್ತದೆಯೇ ಹೊರತು ಲೋಕದ ನರಕುನ್ನಿಗುರುಗಳಿಗೆ ಅನ್ವಯಿಸುವುದಿಲ್ಲ.ಇದನ್ನು ಅರ್ಥಮಾಡಿಕೊಳ್ಳದೆ ಮರುಳ ಮಾನವರು ಕಂಡಕಂಡವರೆನ್ನೆಲ್ಲ ಗುರುವೆಂದು ಭ್ರಮಿಸಿ ಕೆಡುತ್ತಿದ್ದಾರೆ.ಗುರುಪರಬ್ರಹನು ಎಂದು ತಿಕತೊಳೆದುಕೊಳ್ಳಲು ಬಾರದ ವ್ಯರ್ಥಕಾಯರುಗಳನ್ನು ಪೂಜಿಸುತ್ತಿದ್ದಾರೆ.ಕಾಂಚನ,ಕಾಮಿನಿಯರ ಆಸೆ ತೊರೆಯದ‌ಪಶುಗಳನ್ನು‌ ಪಶುಪತಿಯ ಸಮನಾಗಿ ಪೂಜಿಸಿ ಹಾಳಾಗುತ್ತಿದ್ದಾರೆ.ಸಮರ್ಥನಲ್ಲದ ಗುರುವಿನಿಂದ ಉಪದೇಶ ಪಡೆದವರಿಗೆ ಮೋಕ್ಷವು ಲಭಿಸುವುದಿಲ್ಲ.ಗುರು ಎನ್ನುವುದು ಜಾತಿಯಲ್ಲ ,ಅದು ಜ್ಯೋತಿತತ್ತ್ವ.ಹುಟ್ಟಿದ ಕುಲದಿಂದ,ಕುಲಾಚಾರದಿಂದ ಯಾರೂ ಗುರುಗಳಾಗುವುದಿಲ್ಲ.ಯೋಗಬಲದಿಂದ,ಆಧ್ಯಾತ್ಮಿಕ ಸಾಧನೆಯಿಂದ ಮಾತ್ರ ಗುರುಗಳಾಗಬಹುದು.ಮಠ ಪೀಠಗಳ ಗದ್ದುಗೆಗಳಲ್ಲಿ ಕುಳಿತ ಮಾತ್ರಕ್ಕೆ ಗುರುಗಳು ಆಗುವುದಿಲ್ಲ.ಮಠ ಪೀಠಗಳ ಸ್ವಾಮಿಗಳಾದ ಮಾತ್ರಕ್ಕೆ ಗುರುಗಳು ಆಗುವುದಿಲ್ಲ.ಆಧ್ಯಾತ್ಮಿಕ ಸಾಧನೆಯ ಬಲದಿಂದ ಪರತತ್ತ್ವವನ್ನು ಅರಿತು,ಅಳವಡಿಸಿಕೊಂಡವನೇ ಗುರುವಾಗುವನು.ಕಾಷಾಯಾಂಬರ ಧರಿಸಿದ ಮಾತ್ರಕ್ಕೆ ಗುರುವಾಗಲಾರ.ಪಟ್ಟಕಟ್ಟಿದ ಮಾತ್ರಕ್ಕೆ ಭವದ ಬಳ್ಳಿಯನ್ನು ಸುಟ್ಟುರುಹಲಾರ.ಲೋಕದ ಮರುಳ ಮಾನವರು ಗುರುತತ್ತ್ವವನ್ನು ಅರಿಯದೆ ಬಳಲುತ್ತಿದ್ದಾರೆ,ವೇಷಲಾಂಛನಧಾರಿಗಳೆಂದು ಗುರುವೆಂದು ಭ್ರಮಿಸಿ ನರಕಭಾಜನರಾಗುತ್ತಿದ್ದಾರೆ.

‌ ಗುರು ಎನ್ನುವುದು ಆಡಂಬರವಲ್ಲ,ಅಂತಃಸತ್ತ್ವ.ಉಪದೇಶ ಎನ್ನುವುದು ತೋರಿ,ಆಡುವ ಮಾತಲ್ಲ,ಅಂತರ್ಗತ ದಿವ್ಯತ್ವವನ್ನು‌ಪ್ರಚೋದಿಸುವ ಮಹಾಮಾರ್ಗ.ಹರಸ್ವರೂಪಿಗಳಾಗದ ಯಾರೂ ಗುರುಗಳಲ್ಲ.ಲೋಕದ ಗುರುಗಳಿಂದ ಉಪದೇಶ ಪಡೆದವರಿಗೆ ಮೋಕ್ಷವಂತೂ ಇಲ್ಲವೇ ಇಲ್ಲ.’ ಲಕ್ಷಕ್ಕೊಬ್ಬ ಭಕ್ತ,ಕೋಟಿಗೆ ಒಬ್ಬ ಮುಕ್ತ’ ಎನ್ನುವ ಮಾತನ್ನು ಲಕ್ಷ್ಯದಲ್ಲಿರಿಸಿಕೊಳ್ಳಬೇಕು.ಗುರುವೆಂದು ಘೋಷಿಸಿಕೊಂಡವರಿಗೂ ಮೋಕ್ಷವಿಲ್ಲ ಎಂದ ಬಳಿಕ ಅವರನ್ನು ಅನುಸರಿಸುವ ಮೂಢಶಿಷ್ಯರುಗಳಿಗೆ ಮೋಕ್ಷ ಲಭಿಸುವುದೆ?

About The Author