ಶಬ್ದಾರ್ಥ ಪ್ರಪಂಚ :;ದ್ವಿಜ ::ಮುಕ್ಕಣ್ಣ ಕರಿಗಾರ

ದ್ವಿಜ’ ಎಂದರೆ ಎರಡು ಹುಟ್ಟುಗಳನ್ನುಳ್ಳವನು ಎಂದರ್ಥ.ಎರಡು ಬಾರಿ ಹುಟ್ಟಿದವನೆ ದ್ವಿಜನು.ಹಾರುವರು ಜನ್ಮ ಮತ್ತು ಉಪನಯನ ಎನ್ನುವ ಎರಡು ಹುಟ್ಟುಗಳನ್ನು ಹೊಂದಿದ್ದೇವೆ ಎಂದು ತಮ್ಮನ್ನು ತಾವು ದ್ವಿಜರು ಎಂದು ಕರೆದುಕೊಂಡಿದ್ದಾರೆ.ಉಪನಯನವು ಷೋಡಶ ಸಂಸ್ಕಾರಗಳಲ್ಲಿ ಒಂದು.ಉಪನಯನ ಸಂಸ್ಕಾರದಿಂದ ದ್ವಿಜತ್ವಪ್ರಾಪ್ತಿಯಾಯಿತು ಎಂದು ನಂಬುತ್ತಾರೆ ಬ್ರಾಹ್ಮಣರು.

ಉಪನಯನದಲ್ಲಿ ಯಜ್ಞೋಪವೀತ ಧಾರಣೆ ಮಾಡುವುದರಿಂದ ದ್ವಿಜತ್ವದ ಪ್ರಾಪ್ತಿ ಎನ್ನುವುದು ಹಾರುವರ ಭಾವನೆ.ಯಜ್ಞೋಪವೀತಧಾರಣೆ ಒಂದು ಶುಷ್ಕ ಧಾರ್ಮಿಕ ವಿಧಿ ಅಷ್ಟೆ.ಬ್ರಾಹ್ಮಣವಟುವಿಗೆ ಅವನ ತಂದೆಯೇ ಗುರುವಾಗಿ ಗಾಯತ್ರಿ ಮಂತ್ರವನ್ನು ಉಪದೇಶಿಸುವನು.ಜನ್ನಿವಾರಧಾರಣೆಗಿಂತ ಗಾಯತ್ರಿ ಮಂತ್ರೋಪದೇಶವೇ ಶ್ರೇಷ್ಠವಾದುದು.ಆದರೆ ಬ್ರಾಹ್ಮಣರೆನ್ನಿಸಿಕೊಂಡವರೆಲ್ಲರೂ ತಮ್ಮ ಮಕ್ಕಳಿಗೆ ಗಾಯತ್ರಿ ಮಂತ್ರೋಪದೇಶ ನೀಡಲು ಅರ್ಹರೆ ಎನ್ನುವುದು ಪ್ರಶ್ನೆ.ಕನಿಷ್ಟ ಹನ್ನೆರಡು ಸಾವಿರ ಗಾಯತ್ರಿ ಜಪಮಾಡಿದರೆ ಮಾತ್ರ ತಂದೆಯಾದವನು ಮಗನಿಗೆ ಗಾಯತ್ರಿ ಮಂತ್ರೋಪದೇಶ ಮಾಡಲು ಅರ್ಹತೆ ಪಡೆಯುತ್ತಾನೆ.ಆದರೆ ಈಗಿನ ಕಾಲದ ಬ್ರಾಹ್ಮಣರಲ್ಲಿ ಗಾಯತ್ರಿ ಮಂತ್ರಾನುಷ್ಠಾನ ವಿರಳವೆಂಬಷ್ಟು ಕಡಿಮೆಯಾಗಿದೆ.ಗಾಯತ್ರಿ ಅನುಷ್ಠಾನದಿಂದ ಬ್ರಾಹ್ಮಣ್ಯವನ್ನು ಪಡೆಯಬೇಕಿದ್ದ ಹಾರುವರಲ್ಲಿ ಗಾಯತ್ರಿಮಂತ್ರಾನುಷ್ಠಾನವನ್ನು ಮರೆತು ಶುಷ್ಕ ಶಾಸ್ತ್ರಾಧ್ಯಯನ,ಪುರಾಣ,ತರ್ಕಗಳೆಂದು ಕೆಲವರು ಕೆಟ್ಟರೆ ಆಧುನಿಕ ನಾಗರಿಕತೆಯ ಮೋಹಕ್ಕೆ ಒಳಗಾದ ಬ್ರಾಹ್ಮಣ ಯುವಕರು ಗಾಯತ್ರಿ ಮಂತ್ರವನ್ನೇ ಪಠಿಸದೆ ಕೆಡುತ್ತಿದ್ದಾರೆ. ಹಾಗಿದ್ದೂ ಇವರು ಬ್ರಾಹ್ಮಣರು! ಕೆಲವರು ದಿನ ಒಂದಕ್ಕೆ ೨೪ ಬಾರಿ ಗಾಯತ್ರಿಯನ್ನು ಪಠಿಸುವುದೇ ಮಹಾ ಸಾಧನೆ ಎಂದುಕೊಂಡಿದ್ದಾರೆ.ಗಾಯತ್ರಿ ಮಂತ್ರವನ್ನು ಪ್ರತಿದಿನ ಸಾವಿರಸಾರೆ ಆಗದಿದ್ದರೂ ಒಂದು ನೂರಾ ಎಂಟು ಬಾರಿಯಾದರೂ ಜಪಿಸಿದರೆ ಮಾತ್ರ ಬ್ರಾಹ್ಮಣ್ಯವನ್ನು ಹೊಂದಬಹುದು.ಗಾಯತ್ರಿ ಮಂತ್ರಾನುಷ್ಠಾನವಿಲ್ಲದವರು ಬೋಧಿಸುವ ಗಾಯತ್ರಿಯಿಂದ ಫಲವಿಲ್ಲವಾದ್ದರಿಂದ ಗಾಯತ್ರಿಸಿದ್ಧರಲ್ಲದವರಿಂದ ಹೊಂದುವ ಉಪದೇಶದಿಂದ ದ್ವಿಜತ್ವವನ್ನು ಪಡೆಯಲು ಸಾಧ್ಯವಿಲ್ಲ.

ಹಾರುವರನ್ನು ಅನುಸರಿಸುವ ವೈದಿಕ ಶೈವ,ವೀರಶೈವ ಪರಂಪರೆಗಳಲ್ಲಿಯೂ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರಾಗಲು ದೀಕ್ಷೆ ಕೊಡಿಸುವ ಸಂಪ್ರದಾಯ ಬೆಳೆದಿದ್ದು ಗುರುವಾನುಗ್ರಹದಿಂದ ಶಿಷ್ಯನು ಮರುಹುಟ್ಟು ಪಡೆದು ‘ ಗುರುಕರಕಮಲಸಂಜಾತ’ ನೆಂದೆನ್ನಿಸಿಕೊಳ್ಳುವನು.ಹಾರುವರಲ್ಲಿ ತಂದೆಯಿಂದ ಬಂದ ಹುಟ್ಟನ್ನು ತಂದೆಯಿಂದಲೇ ದ್ವಿಜತ್ವಪಡೆದು ನಿವಾರಿಸಿಕೊಂಡರೆ ವೈದಿಕ ಶೈವಾನುಮಾರ್ಗಿಗಳು ತಂದೆಯಿಂದ ಬಂದ ಹುಟ್ಟಿನ ಭವವನ್ನು ಗುರುವಿನಿಂದ ನಿವಾರಿಸಿಕೊಂಡು ‘ ಗುರುಪುತ್ರರು’ ಆಗುತ್ತಾರೆ.ಜನಸಾಮಾನ್ಯರಲ್ಲಿ ರೂಢಿಯಲ್ಲಿರುವ ಗುರುಬೋಧೆಯೂ ಇದೇ ತೆರನಾದ ಮರುಹುಟ್ಟು ಪಡೆಯುವ ಧಾರ್ಮಿಕ ಕ್ರಿಯೆ.ಅದುವರೆಗೂ ತಂದೆಯ ಮಗನಾಗಿದ್ದವನು ಗುರುಬೋಧೆ ಪಡೆಯುವ ಮೂಲಕ ‘ ಗುರುವಿನ ಮಗ’ ನಾಗುತ್ತಾನೆ.ಗುರುವಿನ ಮಗನಾಗುವುದು ಎಂದರೆ ಅರಿವಿನತ್ತ ಮುಖ ಮಾಡುವುದು ಎಂದರ್ಥ.ಗುರುವಿನ ಮಕ್ಕಳಾದವರಲ್ಲಿ ಎಷ್ಟುಜನರು ಅರಿವಿನತ್ತ ಮುಖ ಮಾಡಿದ್ದಾರೆ? ಗುರುಗಳು ಎಂಬುವವರಲ್ಲಿಯೇ ಆ ಅರಿವು ಮೈದೋರದೆ ಇರುವಾಗ ಅವರನ್ನು ಆಶ್ರಯಿಸುವ ಶಿಷ್ಯರು ಅರಿವಿನತ್ತ ಮುಖ ಮಾಡುವುದಾದರೂ ಹೇಗೆ?

ದ್ವಿಜತ್ವ, ಗುರುಪುತ್ರ ಮತ್ತು ಗುರುವಿನ ಮಗ ಎನ್ನುವ ಪದಗಳೆಲ್ಲವೂ ಸಮಾನ ಅರ್ಥ,ಉದ್ದೇಶ ಉಳ್ಳ ಪದಗಳಾಗಿದ್ದು ಅವುಗಳ ಆಚರಣೆಯಲ್ಲಿ ಭಿನ್ನತೆ ಇರಬಹುದಷ್ಟೆ.ಈ ಮೂರು ಪದಗಳ ಹೊರಾರ್ಥ ಸಂಸ್ಕಾರ.ಹೊರ ಅರ್ಥದಲ್ಲಷ್ಟೆ ನಿಂತರೆ ಸಾಧಿಸಲಾಗದು ಪರಾರ್ಥವನ್ನು.ಪರಾರ್ಥ ಸಂಪಾದನೆಯೇ ಉಪನಯನ,ಗುರೂಪದೇಶಗಳ ಮೂಲ ಉದ್ದೇಶ.ಅದನ್ನು ಮರೆತು ಜನರು ಸಾಮಾಜಿಕ ಪ್ರತಿಷ್ಠೆಯ ಸಾಧನವನ್ನಾಗಿ ಸ್ವೀಕರಿಸಿದ್ದಾರೆ ಉಪನಯನ ಮತ್ತು ಉಪದೇಶ ಎಂಬ ಸಂಸ್ಕಾರ ಕ್ರಿಯೆಗಳನ್ನು.

About The Author