ಮಹಾಶೈವೋಪದೇಶ –೦೩ : ಶಾಸ್ತ್ರ– ಗುರು : ಮುಕ್ಕಣ್ಣ ಕರಿಗಾರ

ಲೋಕೇಶ್ವರನಾದ ಪರಶಿವನನ್ನು ಲೋಕಮಾತೆಯಾದ ಪಾರ್ವತಿಯು ಪ್ರಶ್ನಿಸುವಳು ‘ ಪರಮೇಶ್ವರನೆ, ಲೋಕದ ಜನರಲ್ಲಿ ಕೆಲವರು ಶಾಸ್ತ್ರ ಹಿರಿದು ಎನ್ನುತ್ತಾರೆ ,ಮತ್ತೆ ಕೆಲವರು ಗುರು ಹಿರಿಯನು ಎನ್ನುತ್ತಾರೆ.ಜನರು ಶಾಸ್ತ್ರ ಮತ್ತು ಗುರು ಈ ಎರಡು ತತ್ತ್ವಗಳಲ್ಲಿ ಯಾವುದನ್ನು ನಂಬಿ,ಅನುಸರಿಸಬೇಕು?’. ಪಾರ್ವತಿಯ ಪ್ರಶ್ನೆಯಿಂದ ಪರಮಾನಂದ ಭರಿತನಾದ ಪರಶಿವನು ‘ ಸರ್ವಮಂಗಳೆ,ಲೋಕಕಲ್ಯಾಣಕಾರವಾದ ಬಹು ಮಹತ್ವದ ಪ್ರಶ್ನೆಯನ್ನು ಕೇಳಿರುವಿ.ಶಾಸ್ತ್ರ ಮತ್ತು ಗುರು ಈ ಎರಡು ತತ್ತ್ವಗಳಲ್ಲಿ ಗುರುತತ್ತ್ವವೇ ಹಿರಿದಾದ ತತ್ತ್ವ.ಗುರು ತತ್ತ್ವಕ್ಕೆ ಯಾವ ಶಾಸ್ತ್ರವೂ ಸಮನಾಗಲಾರದು.ಆದ್ದರಿಂದ ಲೋಕದ ಜನರು ಗುರುವನ್ನು ಆಶ್ರಯಿಸಿ ಉದ್ಧಾರವಾಗಬೇಕು.ಶಾಸ್ತ್ರಗಳು ಲೌಕಿಕ ಜೀವನವನ್ನು ಉತ್ತಮ ಪಡಿಸಲು ಇರುವ ನಿಯಮಗಳು,ಸಂಸ್ಕಾರವಿಧಿಗಳು.ಭೂಲೋಕದಲ್ಲಿರುವ ಬಹುವಿಧವಾದ ಮತಧರ್ಮೀಯರು ಅವರವರ ಮತ ಧರ್ಮಕ್ಕೆ ಅನುಗುಣವಾದ ಶಾಸ್ತ್ರಗಳನ್ನು ಸೃಷ್ಟಿಸಿಕೊಂಡಿದ್ದಾರೆ.ನ್ಯಾಯ,ವೈಶೇಷಿಕ,ಸಾಂಖ್ಯ,ಯೋಗ,ವೇದಾಂತ ಮತ್ತು ಪೂರ್ವಮೀಮಾಂಸೆ ಎನ್ನುವ ಆರು ದರ್ಶನ ಇಲ್ಲವೆ ಆರುತರ್ಕಗಳನ್ನು ಆರು ಶಾಸ್ತ್ರಗಳೆಂದು ಅಭ್ಯಾಸ ಮಾಡುತ್ತಾರೆ ಭರತ ಖಂಡದ ಜನರು.ಆದರೆ ಈ ಯಾವ ಶಾಸ್ತ್ರವು ನನ್ನ ಅನುಗ್ರಹವನ್ನು ಕರುಣಿಸದು.ಗುರುವಿದ್ದಲ್ಲಿ ಮಾತ್ರ ನಾನು ಇರುತ್ತೇನೆ.ನರಲೋಕದಲ್ಲಿ ಶಿವಾಲಯಗಳಿಗಿಂತ ನಾನು ಹೆಚ್ಚಾಗಿ ಗುರುವಿನ ಹೃದಯದಲ್ಲೇ ನೆಲೆಸಿ ಲೋಕವನ್ನು ಉದ್ಧರಿಸುವೆನು.ಶಿಷ್ಯರಿಗೆ ಗುರುವೇ ದೇವರು,ಪರಬ್ರಹ್ಮನು.ಗುರುವಿನ ಮೂಲಕ ಶಿಷ್ಯರು ನನ್ನನ್ನು ಸುಲಭವಾಗಿ ಪಡೆಯಬಹುದು.ವೇದ,ಉಪನಿಷತ್ತುಗಳ ಮಹಾವಾಕ್ಯಗಳಿಂದ ಸಾಧಿಸಲಾಗದ ನನ್ನ ಅನುಗ್ರಹವನ್ನು ಗುರುವಾಕ್ಯದಿಂದ ಸಾಧಿಸಬಹುದು.ಶಾಸ್ತ್ರಗಳಿಂದ ಹೊಟ್ಟೆಹೊರೆಯಬಹುದಲ್ಲದೆ ಸಾಧಿಸಲಾಗದು ಪರತತ್ತ್ವವನ್ನು. ಗುರು ಕರುಣೆಯು ಶಿಷ್ಯನ ಭವಬಂಧನವನ್ನು ಹರಿದೊಗೆದು ಅವನಿಗೆ ಮೋಕ್ಷವನ್ನು ಒದಗಿಸಿಕೊಡುವುದು.ಆದ್ದರಿಂದ ಮಹೇಶ್ವರಿಯೆ,ಲೋಕದಲ್ಲಿ ಮನುಷ್ಯರು ಶಾಸ್ತ್ರಗಳನ್ನು ಅವಲಂಬಿಸದೆ ಗುರುವನ್ನು ಆಶ್ರಯಿಸುವುದೇ ಶ್ರೇಯಸ್ಕರವು’ ಎಂದು ಪರಶಿವನು ಶಾಸ್ತ್ರಗಳ ಮಿತಿಯನ್ನು ಗುರುವಿನ ಮಹಿಮೆಯನ್ನು ವಿಶ್ವೇಶ್ವರಿ ದುರ್ಗಾಮಾತೆಗೆ ವಿವರಿಸುವನು.

ಶಿವ ಪಾರ್ವತಿಯರ ಈ ಸಂವಾದವು ಲೋಕದ ಜನರನ್ನು ಕಾಡುತ್ತಿರುವ ಬಹುಮುಖ್ಯ ಸಂದೇಹ ಒಂದಕ್ಕೆ ಪರಿಹಾರ ನೀಡಿದೆ.ಲೋಕದಲ್ಲಿ ಶಾಸ್ತ್ರಗಳ ಮೋಹಕ್ಕೆ ವಶರಾಗಿರುವ ಜನರು ಶಾಸ್ತ್ರಗಳೇ ಸರ್ವಸ್ವ ಎಂದು ಸಾರುತ್ತಿದ್ದಾರೆ.ಆರು ಶಾಸ್ತ್ರಗಳು,ಹದಿನೆಂಟು ಪುರಾಣಗಳನ್ನು ಓದಿ ಪಂಡಿತರು ಎನ್ನಿಸಿಕೊಂಡು ಜನರನ್ನು ಮೆಚ್ಚಿಸಬಹುದೇ ಹೊರತು ಜಗದೀಶ್ವರನಾದ ಶಿವನನ್ನು ಮೆಚ್ಚಿಸಲು ಸಾಧ್ಯವಿಲ್ಲ.ಗುರುವು ಆಧ್ಯಾತ್ಮಿಕ ಪಥದಲ್ಲಿ ಸಾಧನೆಗೈದು ಯೋಗಬಲದಿಂದ ಶಿವನ ದರ್ಶನ,ಆಶೀರ್ವಾದ ಪಡೆದಿರುವನಾದ್ದರಿಂದ ಶಿಷ್ಯನಿಗೆ ಗುರುವು ಹರನನ್ನು ತೋರಿಸಬಲ್ಲನು.ಶಾಸ್ತ್ರವಾಕ್ಯಗಳ ಚಿಂತನ,ಚರ್ಚೆಗಳಿಂದ ಪರಮಾತ್ಮನನ್ನು ಪಡೆಯಲು ಸಾಧ್ಯವಿಲ್ಲ.ಆದರೆ ಗುರುವಾಕ್ಯದಲ್ಲಿ ನಂಬಿಕೆಯನ್ನಿಟ್ಟು ನಡೆದದ್ದಾರೆ ಪರಶಿವನ ಅನುಗ್ರಹವನ್ನು ಪಡೆಯಬಹುದು.ಸಮರ್ಥಗುರು ತನ್ನಲ್ಲಿ ನಿಷ್ಠೆಯನ್ನಿಟ್ಟಿರುವ ಶಿಷ್ಯರುಗಳಿಗೆ ಶಿವನ ದರ್ಶನ ಮಾಡಿಸಬಲ್ಲನು.ಶಾಸ್ತ್ರವಾಕ್ಯಗಳು ಶುಷ್ಕವಾಗಾಡಂಬರವಾದರೆ ಗುರುವಾಕ್ಯವು ಶಿವಸಾಕ್ಷಾತ್ಕಾರದ ಸಾಧನವು.ಆದ್ದರಿಂದ ಮೋಕ್ಷಾಪೇಕ್ಷಿಗಳು ಶಾಸ್ತ್ರಗಳನ್ನು ಅವಲಂಬಿಸದೆ ಗುರುವನ್ನು ಆಶ್ರಯಿಸಿ ಉದ್ಧಾರವಾಗಬೇಕು.

About The Author