ಮಹಾಶೈವೋಪದೇಶ –೦೨ : ನಾಮ– ಮಂತ್ರ : ಮುಕ್ಕಣ್ಣ ಕರಿಗಾರ

ಪಾರ್ವತಿಯು ಪರಮೇಶ್ವರ ಶಿವನನ್ನು ಪ್ರಶ್ನಿಸುವಳು ‘ ನಾಥ ನಾಮ ಮತ್ತು ಮಂತ್ರಗಳಲ್ಲಿ ಯಾವುದು ನಿನಗೆ ಪ್ರಿಯವಾದುದು?’ ಪರಶಿವನು ಉತ್ತರಿಸುವನು ‘ ದೇವಿ ನಾಮ ಮತ್ತು ಮಂತ್ರಗಳಲ್ಲಿ ನಾಮವೇ ನನಗೆ ಹೆಚ್ಚುಪ್ರಿಯವಾದುದು’. ಅಗಜೆಯು ಅಘಹರನನ್ನು ಪ್ರಶ್ನಿಸುವಳು ‘ ದೇವಾದಿದೇವ,ಮಂತ್ರಗಳು ಪರಮಾತ್ಮನ ಸಾಕ್ಷಾತ್ಕಾರದ ಸಾಧನಗಳು.ಮಂತ್ರಗಳು ದೇವತಾಸೂತ್ರಗಳು ಎಂದು ನೀವೇ ಹೇಳಿದ್ದೀರಿ.ಈಗ ಮಂತ್ರಕ್ಕಿಂತ ನಾಮವೇ ನನಗೆ‌ ಪ್ರಿಯ ಎನ್ನುತ್ತಿದ್ದೀರಿ’ ಎಂದು ತನ್ನ ಮನದ ಸಂದೇಹವನ್ನು ವಿಶ್ವೇಶ್ವರನ ಮುಂದೆ ಇಟ್ಟಳು.ಜಗದೀಶ್ವರನು ನಗುತ್ತ ನುಡಿಯುವನು ‘ ಜಗದೀಶ್ವರಿಯೆ ಕೇಳು,ಮಂತ್ರವು ಸಂಸ್ಕೃತಾಕ್ಷರಗಳ ಸಂಯೋಜನೆಯಾಗಿದ್ದು ಅದು ಛಂದಾದಿ ವ್ಯಾಕರಣಯುಕ್ತವಾದುದು.ಅದರ ಉಚ್ಚಾರಕ್ಕೆ ನಿಯಮ ನಿಷೇಧಗಳಿವೆ.ಜನಸಾಮಾನ್ಯರು ಸಂಸ್ಕೃತಭಾಷೆಯನ್ನರಿಯರು.ಸಂಸ್ಕೃತ ಭಾಷೆ ಬಾರದ ಕಾರಣಕ್ಕೆ ಜನಸಾಮಾನ್ಯರು ಪರಮೇಶ್ವರನಾದ ನನ್ನ ಅನುಗ್ರಹದಿಂದ ವಂಚಿತರಾಗಬೇಕೆ ? ಅದಕ್ಕೆಂದೇ ನಾನೇ ನನ್ನ ಗಣರುಗಳ ಮೂಲಕ ಭೂಲೋಕದಲ್ಲಿ ನಾಮತತ್ತ್ವವನ್ನು ಪ್ರಚುರಗೊಳಿಸಿರುವೆನು’

ಗಿರಿಜೆಯು ಹರನನ್ನು ಕುತೂಹಲದಿಂದ ಪ್ರಶ್ನಿಸುವಳು ‘ ನಾಮತತ್ತ್ವದ ಮಹಿಮಾಧಿಕ್ಯವನ್ನು ಬೋಧಿಸಿ ,ಉದ್ಧರಿಸಿ ಮಹಾದೇವ’. ಶ್ರೀಕಂಠನು ಲೋಕಕಲ್ಯಾಣಾರ್ಥವಾಗಿ ನಾಮತತ್ತ್ವದ ಮಹಿಮೆಯನ್ನು ಸರ್ವಮಂಗಳೆಗೆ ಉಪದೇಶಿಸುವನು.’ ಮಹಾಕಲ್ಯಾಣಿಯೆ ಕೇಳು,ನಾಮ ಎನ್ನುವುದು ನನ್ನ ಸಾಕಾರ ರೂಪಗಳ ಹ್ರಸ್ವ ಇಲ್ಲವೆ ಸಂಕ್ಷಿಪ್ತ ರೂಪ.ಶಿವ,ಹರ,ಶಂಕರ,ಶಂಭು, ಮಹಾದೇವ,ಸದಾಶಿವ ಇವೆ ಮೊದಲಾದ ನನ್ನ ನಾಮಗಳಲ್ಲಿ ಭಕ್ತರು ತಮಗಿಷ್ಟವಾದ ಯಾವುದಾದರೂ ಒಂದು ನಾಮವನ್ನು ಸದಾ ಜಪಿಸುತ್ತಿರುವುದೇ ನಾಮತತ್ತ್ವವು.ಸದಾಕಾಲ ನನ್ನ ನಾಮವನ್ನು ಜಪಿಸುತ್ತಿರುವುದರಿಂದ ಇದು ಜಪಯೋಗ,ಜಪಯಜ್ಞ ಎನ್ನಿಸಿಕೊಳ್ಳುವುದು.ಒಬ್ಬನು ಸದಾಕಾಲವು ಶಿವ ಶಿವ ಎಂದು ನನ್ನ ನಾಮವನ್ನು ಜಪಿಸಬಹುದು,ಮತ್ತೊಬ್ಬನು ಹರಹರ ಎಂದು ನನ್ನ ಮತ್ತೊಂದು ನಾಮವನ್ನು ಸದಾ ಜಪಿಸಬಹುದು.ಹಾಗೆಯೇ ಶಂಕರ ಶಂಕರ,ಶಂಭು ಶಂಭು,ಸದಾಶಿವ ಸದಾಶಿವ ಎಂದು ಭಕ್ತರುಗಳು ತಮಗಿಷ್ಟವಾದ ನನ್ನ ನಾಮಗಳನ್ನು ಅನುಗಾಲವು ಜಪಿಸಬಹುದು.ನಾಮ ಜಪವು ಸರಳವಾಗಿದ್ದು ಭಕ್ತರು ನಾಮಜಪದ ಮೂಲಕವೂ ನನ್ನ ಅನುಗ್ರಹ,ಸಾಕ್ಷಾತ್ಕಾರವನ್ನು ಪಡೆಯಬಹುದು.ನಾಮ ಮತ್ತು ನನ್ನಲ್ಲಿ ಯಾವ ವ್ಯತ್ಯಾಸವೂ ಇಲ್ಲ.ಮಂತ್ರಗಳಲ್ಲಿ ನಾನು ಹೇಗೆ ಇರುತ್ತೇನೆಯೋ ಹಾಗೆಯೇ ನಾನು ನನ್ನ ನಾಮಗಳಲ್ಲಿರುತ್ತೇನೆ.ಕಲಿಯುಗದಲ್ಲಿ ಭಕ್ತರುಗಳು ಉಗ್ರತಪೋನುಷ್ಠಾನಾದಿಗಳನ್ನು ಕೈಗೊಳ್ಳಲು ಸಮರ್ಥರಿರುವುದಿಲ್ಲವಾದ್ದರಿಂದ ಕಲಿಯುಗದ ಜನಸಾಮಾನ್ಯ ಭಕ್ತರಿಗಳಿಗೋಸ್ಕರ ನಾನೇ ಭೂತಳದಲ್ಲಿ ನಾಮತತ್ತ್ವವನ್ನು ಪ್ರಸಿದ್ಧಪಡಿಸಿರುವೆನು.ನನ್ನ ಭಕ್ತರು ನನ್ನ ನಾಮವನ್ನು ಜಪಿಸುತ್ತ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು’

ಸರ್ವೋದಯ ತತ್ತ್ವವು ಕಲಿಯುಗದ ಯುಗತತ್ತ್ವವಾಗಿದ್ದು ಎಲ್ಲರಿಗೂ ಉದ್ಧಾರದ ಹಕ್ಕು ಇದೆ.ಶಿವಾನುಗ್ರಹವು ಜೀವರುಗಳೆಲ್ಲರ ಜನ್ಮಸಿದ್ಧಹಕ್ಕು ಎಂದು ಉದ್ಘೋಷಿಸುವ ಮಹಾಶೈವ ಧರ್ಮವು ಲೋಕಸಮಸ್ತರ ಕಲ್ಯಾಣಕ್ಕಾಗಿ ಶಿವಾನುಗ್ರಹಪ್ರಾಪ್ತಿಯ ಸುಲಭೋಪಾಯಗಳನ್ನು ಕರುಣಿಸಿದ್ದು ಅವುಗಳಲ್ಲಿ ನಾಮಜಪವೂ ಒಂದು.ಶಿವಭಕ್ತರಾದವರು ಸಂಸ್ಕೃತಮಯವಾದ ಶಿವನ‌ ನಾಮಗಳನ್ನು ಉಚ್ಚರಿಸಲು ಬರುವುದಿಲ್ಲ ಎಂದು ಆತಂಕಿತರಾಗಬೇಕಿಲ್ಲ.ಮಂತ್ರದಲ್ಲಿರುವ ಶಕ್ತಿಯೇ ನಾಮದಲ್ಲಿ ಇರುವುದರಿಂದ ಶಿವಭಕ್ತರಾದವರು ಶಿವ,ಶಂಭು,ಶಂಕರ,ಹರ,ಮಹಾದೇ,ಸದಾಶಿವ ಮೊದಲಾದ ಶಿವನ ಹೆಸರುಗಳನ್ನು ಸದಾಕಾಲವು ಜಪಿಸುತ್ತಿದ್ದರೆ ಶಿವನ ಅನುಗ್ರಹ ಪಡೆಯಬಹುದು.ಶಿವನ ನಾಮಗಳು ಅತ್ಯಂತ ಸಂಕ್ಷಿಪ್ತ ಮತ್ತು ಎಲ್ಲರಿಗೂ ಉಚ್ಚರಿಸಲು ಅನುಕೂಲವಾಗುಂತೆ ಸರಳ,ಸುಲಭವಾಗಿರುವುದರಿಂದ ಮಕ್ಕಳು- ಮುದುಕರು- ಮಹಿಳೆಯರೆನ್ನದೆ ವಿದ್ಯಾವಂತರು- ಅವಿದ್ಯಾವಂತರು ಎನ್ನದೆ ಯಾರು ಬೇಕಾದರೂ ನಾಮಜಪವನ್ನು ಕೈಗೊಳ್ಳಬಹುದು.ಸ್ನಾನ ಸಂಧ್ಯಾವಂದನೆಗಳ‌ ಸಮಯದಲ್ಲಿ ಇಲ್ಲವೆ ಹಬ್ಬ ಉತ್ಸವಾದಿ ಪರ್ವದಿನಗಳಲ್ಲಿ ನಾಮ ಜಪಿಸಬೇಕು ಎನ್ನುವ ನಿರ್ಬಂಧ ಇಲ್ಲ.ಪ್ರತಿದಿನವೂ ಅನುಕ್ಷಣವೂ ಜಪಿಸಬಹುದು ತಮಗಿಷ್ಟವಾದ ಶಿವನಾಮವನ್ನು.ಉಣ್ಣುವಾಗ, ವಸ್ತ್ರಗಳನ್ನು ಉಡುವಾಗ,ನಡೆಯುವಾಗ,ಕೆಲಸ ಮಾಡುವಾಗ,ಮಲಗುವಾಗ ಹೀಗೆ ಯಾವಾಗಲೂ ನೆನೆಯುತ್ತಿರಬಹುದು ಶಿವನಾಮವನ್ನು.

ಶಿವನಾಮ ಜಪದಿಂದ ಮನಸ್ಸು ಪರಿಶುದ್ಧವಾಗಿ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗಬಹುದು.ಸದಾಕಾಲವು ಶಿವನಾಮವನ್ನು ಸ್ಮರಿಸುವುದರಿಂದ ಪಾಪ ಕರ್ಮಗಳೆಲ್ಲ ಸುಟ್ಟು ಪರಿಶುದ್ಧಾತ್ಮರಾಗಬಹುದು.ಅನುಗಾಲವು ಶಿವನಾಮ ಸ್ಮರಣೆ ಮಾಡುವ ಮೂಲಕ ಭೋಗ ಮೋಕ್ಷಗಳನ್ನು ಪಡೆಯಬಹುದು.ಕಲಿಯುಗದ ಯುಗಶಿವತತ್ತ್ವವು ನಾಮಜಪವಾಗಿದ್ದು ಸದಾಕಾಲ ಶಿವನಾಮವನ್ನು ಜಪಿಸುತ್ತ ಭಕ್ತರುಗಳು ತಾವಿದ್ದ ಎಡೆಯನ್ನೇ ಕೈಲಾಸವನ್ನಾಗಿ ಮಾಡಿಕೊಳ್ಳಬಹುದು.ನಾಮ ಇದ್ದಲ್ಲಿ ಪ್ರೇಮಮೂರ್ತಿ ಪರಶಿವನು ಇರುವನಾಗಿ ಶಿವನಾಮ ಜಪಿಸುವವರ ಮನೆಗಳೇ ಮಹಾದೇವನ ಮಂದಿರಗಳಾಗುತ್ತವೆ.ಶಿವನಾಮ ಜಪಿಸುವವರ ದೇಹವೇ ದೇವಾಲಯವಾಗಿ ನಾಮಸರ್ವಾಂಗಿಯಾಗಿ ನಾಮಜಪವ್ರತಿಯಾದ ಭಕ್ತನು ಸರ್ವಾಂಗಲಿಂಗಿಯಾಗುವನು,ಶಿವಸ್ವರೂಪಿಯಾಗುವನು

About The Author