ಚಿಂತನೆ : ಯೋಗಿ ಮತ್ತು ಭಕ್ತ : ಮುಕ್ಕಣ್ಣ ಕರಿಗಾರ

ಕೈಲಾಸದಲ್ಲಿ ಪಾರ್ವತಿದೇವಿಯು ಒಮ್ಮೆ ಶಿವನನ್ನು ಪ್ರಶ್ನಿಸುವಳು ; ‘ ದೇವಾ,ಯೋಗಿ ಮತ್ತು ಭಕ್ತ ಈ ಇಬ್ಬರಲ್ಲಿ ನಿಮಗೆ‌ ಪ್ರಿಯರಾದವರು ಯಾರು?’ ಶಿವನು ಉತ್ತರಿಸುವನು ‘ ದೇವಿ,ಭಕ್ತರೇ ನನಗೆ ಪ್ರಿಯರು’.ಪಾರ್ವತಿಗೆ ಆಶ್ಚರ್ಯವಾಯಿತು,ತನ್ನ ಮನದ ಸಂದೇಹವನ್ನು ಪರಿಹರಿಸಿಕೊಳ್ಳಲು ಆಕೆಯು ಕೈಲಾಸನಾಥನನ್ನು‌ ಪ್ರಶ್ನಿಸುವಳು’ ಸ್ವಾಮಿ,ಯೋಗಿಗಳು ನಿಮಗಾಗಿ ಕಡುಕಷ್ಟಕರವಾದ ದೇಹದಂಡನೆಯಿಂದ ಯೋಗಸಾಧನೆ ಮಾಡುವರು. ಭಕ್ತರು ಯಾವ ವಿಶೇಷ ಸಾಧನೆ ಮಾಡುವುದಿಲ್ಲ.ಆದರೂ ಭಕ್ತರು ನಿಮಗೆ ಹೇಗೆ ಪ್ರಿಯರಾಗುವರು?’. ನಗುತ್ತ ಪರಮೇಶ್ವರನು ಉತ್ತರಿಸುವನು,’ ಶಾಂಭವಿ ಕೇಳು,ಯೋಗಿಯಾದವನಲ್ಲಿ ನಾನು ಯೋಗ ಸಾಧನೆ ಮಾಡುವೆ,ಯೋಗಬಲದಿಂದ ಶಿವನನ್ನು ಕಾಣುವೆ ಎನ್ನುವ ಅಹಂ ಇರುತ್ತದೆ.ಅಹಂಕಾರವು ನನಗೆ ಹಿಡಿಸದು,ಆದ್ದರಿಂದ ಯೋಗಿಯನ್ನು ಪರೀಕ್ಷಿಸಿ,ಪರೀಕ್ಷಿಸಿ ಕೊನೆಗೆ ಪಕ್ವನಾದನು ಎಂದು ಕಂಡಾಗ ಅವನನ್ನು ಅನುಗ್ರಹಿಸುವೆನು.ಆದರೆ ಭಕ್ತ ಹಾಗಲ್ಲ,ಅವನು ತನ್ನನ್ನು ತಾನು ನನಗೆ ಸಮರ್ಪಿಸಿಕೊಂಡಿರುವನು.ಯಾವ‌ಪ್ರತಿಫಲಾಪೇಕ್ಷೆ ಇಲ್ಲದೆ ನನ್ನ ಮೇಲಿನ ಭಕ್ತಿಯಿಂದಲೇ ಭಕ್ತಿಯನ್ನಾಚರಿಸುವನು.ತನ್ನ ಬದುಕಿನಲ್ಲಿ ಅದೃಷ್ಟ ಬಂದರೆ ಶಿವಕೃಪೆ ಎನ್ನುವನು,ದುರಾದೃಷ್ಟ ಬಂದರೆ ಒಡೆಯನಾದ ನನ್ನನ್ನು ನಿಂದಿಸದೆ ‘ ಇದು ನನ್ನ ಕರ್ಮದ ಫಲ’ ಎಂದು ಬಗೆಯುವನು.ಉಣ್ಣುವುದು,ಉಡುವುದನ್ನು‌ ಒಳಗೊಂಡಂತೆ ತನ್ನ ಬದುಕಿನ ಎಲ್ಲವನ್ನೂ ನನಗೆ ಅರ್ಪಿಸುವನು.ಆದ್ದರಿಂದ ಇಂತಹ ಭಕ್ತರೇ ನನಗೆ ಪ್ರಿಯರು.ಭಕ್ತರಲ್ಲಿ ಬೇಗನೆ ಪ್ರಸನ್ನನಾಗಿ ಅನುಗ್ರಹಿಸುವ ನಾನು ಯೋಗಿಜನರನ್ನು ನಿಧಾನವಾಗಿ ಅನುಗ್ರಹಿಸುವೆನು’.

ಶಿವ ಪಾರ್ವತಿಯರ ಈ ಸಂವಾದವನ್ನು ಆಧ್ಯಾತ್ಮಸಾಧಕರಾದವರೆಲ್ಲರೂ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು.ಶಿವನು ಭಕ್ತವತ್ಸಲನಾದುದರಿಂದ ಅವನು ಯೋಗಿಗಳಿಗಿಂತಭಕ್ತರುಗಳಲ್ಲಿಯೇ ಬಹುಬೇಗನೆ ಪ್ರಸನ್ನನಾಗುವನು.ಅಂದರೆ ಶಿವನನ್ನು ಕಾಣಲು,ಶಿವನ ಅನುಗ್ರಹವನ್ನು ಪಡೆಯಲು ಭಕ್ತಿ ಮಾರ್ಗವೇ ಶ್ರೇಷ್ಠ ಎಂದರ್ಥ.ಸರ್ವಸಮರ್ಪಣಾ ಭಾವದಿಂದ ಶಿವನಲ್ಲಿ ಶರಣುಹೋಗುವ ಭಕ್ತನು ಬಹುಬೇಗನೆ ಶಿವಾನುಗ್ರಹವನ್ನು ಪಡೆಯುತ್ತಾನೆ.ಯೋಗಿಯಾದವನು ಸಾತ್ತ್ವಿಕವಾದದ್ದಾದರೂ ಅವನಲ್ಲಿ ಸ್ವಲ್ಪ ಅಹಂಕಾರ ಇರುವುದರಿಂದ,ತನ್ನ ಪ್ರಯತ್ನದಿಂದ ಶಿವನನ್ನು ಕಾಣುವೆ ಎನ್ನುವ ಭಾವ ಇರುವುದರಿಂದ ಅವನು ಶಿವನ ಅನುಗ್ರಹವನ್ನು ಪಡೆಯಲ್ಲಿ ನಿಧಾನಗತಿಯಲ್ಲಿದ್ದಾನೆ.ಆದರೆ ಭಕ್ತನು ತನ್ನ ದೋಷ ದೌರ್ಬಲ್ಯಗಳ ನಡುವೆಯೂ ಶಿವನಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುವುದರಿಂದ ಶಿವನು ಭಕ್ತನ ಮುಗ್ಧಭಕ್ತಿಗೆ ಒಲಿದು,ಓಗೊಡುವನು.

ಆಧ್ಯಾತ್ಮಿಕ ಸಾಧನೆಯಲ್ಲಿ ಹಲವು ಪಥಗಳಿದ್ದು ಅವುಗಳಲ್ಲಿ ಭಕ್ತಿಯೇ ಪರಮಾತ್ಮನ ಅನುಗ್ರಹ ಪಡೆಯುವ ಸರ್ವಶ್ರೇಷ್ಠ ಸಾಧನವು.ಯೋಗ ಮತ್ತು ಜ್ಞಾನ ಮಾರ್ಗಗಳು ಎಲ್ಲರಿಗೂ ಸುಲಭಸಾಧ್ಯ ಮಾರ್ಗಗಳಲ್ಲ; ಆದರೆ ಭಕ್ತಿಯನ್ನು ಎಲ್ಲರೂ ಆಚರಿಸಬಹುದು.ಪರಮಾತ್ಮನಲ್ಲಿ ಶರಣಾಗುವುದೇ ಭಕ್ತಿಯಾಗಿದ್ದು ತನ್ನಲ್ಲಿ ಶರಣುಬಂದವರ ಹೊಣೆಯನ್ನು ಪರಮಾತ್ಮನೇ ಹೊರುವುದರಿಂದ ಭಕ್ತರು ಬದುಕಿನ ಜಡರು- ಜಂಜಾಟಗಳಿಂದ ಮುಕ್ತರಾಗುವರು.ಯೋಗಿಯು ಪರಮಾತ್ಮನಲ್ಲಿನ ನಂಬಿಕೆಗಿಂತ ತನ್ನ ಸಾಧನೆಯಲ್ಲಿ ಹೆಚ್ಚಿನ ವಿಶ್ವಾಸವನ್ನು ಹೊಂದಿರುವನು.ಪ್ರಯತ್ನ ಎಂದ ಬಳಿಕ ಏಳುವುದು,ಬೀಳುವುದು ಇದ್ದುದೆ.ರಾಗ- ದ್ವೇಷಗಳು, ಅಹಂಕಾರ- ಮಮಕಾರಗಳಿಗೆ ವಶನಾಗಿ ಯೋಗಿಯು ತನ್ನ ಸಾಧನೆಯ ಪಥದಲ್ಲಿ ಮುಗ್ಗರಿಸಬಹುದು.ಮುಗ್ಗರಿಸಿ ಬಿದ್ದಾಗಲೂ ಗೆಲ್ಲುವೆನು,ಸಾಧಿಸುವೆನು ಎನ್ನುವ ದೃಢಸಂಕಲ್ಪದಿಂದ ಮುನ್ನಡೆದದ್ದಾದರೆ,ಸಾಧನೆಯನ್ನು ಮುಂದುವರೆಸಿದ್ದಾದರೆ ಯೋಗಿಯು ಪರಮಾತ್ಮನ ಅನುಗ್ರಹವನ್ನು ಪಡೆಯುವನು.

ಪರಮಾತ್ಮನ ದರ್ಶನಾನುಗ್ರಹವನ್ನು ಪಡೆಯಲು ಕಲಿಯುಗದಲ್ಲಿ ಭಕ್ತಿಯು ಶ್ರೇಷ್ಠ ಮತ್ತು ಸುಲಭ ಉಪಾಯವಾಗಿದೆ.ಕಾಡು,ಬೆಟ್ಟ ಗುಹೆಗಳಲ್ಲಿ ಹೋಗಿ ತಪಸ್ಸು ಮಾಡಬೇಕಾದ ಅವಶ್ಯಕತೆಯಿಲ್ಲ ಕಲಿಯುಗದಲ್ಲಿ.ದೇಹದಂಡನೆಯ ವ್ಯರ್ಥ ಕಸರತ್ತಿನ ಅಗತ್ಯವೂ ಇಲ್ಲ.ಹೋಮ,ಹವನ,ವ್ರತಗಳೆಂಬ ಆಡಂಬರದ ಖರ್ಚಿನ ಪೂಜೆ- ಸೇವೆಗಳ ಅಗತ್ಯವೂ ಇಲ್ಲ.ಪರಮಾತ್ಮನಲ್ಲಿಅನನ್ಯ ಭಾವದಿಂದ ಶರಣುಹೊಕ್ಕು ಮೊರೆಯೆ ಭಕ್ತನಕರೆಗೆ ಓಗೊಡುವನು ಪರಮಾತ್ಮನು.’ ನಂಬಿ ಕರೆದರೆ ಓ ಎನ್ನನೆ ಶಂಭು?’ ಎನ್ನುವ ಅನುಭವೋಕ್ತಿಯು ಶಿವನಲ್ಲಿ ನಂಬಿಕೆಯನ್ನಿಟ್ಟು ಕರೆದದ್ದಾದರೆ ಶಿವನೊಲುಮೆಯನ್ನು ಪಡೆಯಬಹುದು ಎನ್ನುವ ಸತ್ಯವನ್ನು ಸಾರುತ್ತದೆ.ನಂಬಿಕೆಯಿಂದ ಭಕ್ತಿಯು ಬೆಳೆದು ಭಗವದನುಗ್ರಹಪ್ರಾಪ್ತಿಯಾಗಲು ಕಾರಣವಾಗುತ್ತದೆ.

About The Author