ಬ್ರಾಹ್ಮಣ’ ನೆಂದರೆ ಯಾರು? ಬ್ರಾಹ್ಮಣರು ಎಂದು ಹೇಳಿಕೊಳ್ಳುತ್ತಿರುವ ಹಾರುವರು ಬ್ರಾಹ್ಮಣರಲ್ಲ.’ಬ್ರಾಹ್ಮಣ ‘ಎನ್ನುವುದು ಜಾತಿಸೂಚಕ ಪದವಲ್ಲ,ಅದು ತತ್ತ್ವಸೂಚಕ ಪದ.’ಬ್ರಾಹ್ಮಣ ‘ಎನ್ನುವುದು ಒಂದು ತತ್ತ್ವವೇ ಹೊರತು,ಜಾತಿಯಲ್ಲ.’ ಬ್ರಹ್ಮ’ ನಿಂದ ಬ್ರಾಹ್ಮಣರು.ಹಾರುವರು ಮಾತ್ರ ಬ್ರಹ್ಮನಿಂದ ಹುಟ್ಟಲಿಲ್ಲ.ಎಲ್ಲ ಮನುಷ್ಯರು ಅಷ್ಟೇ ಏಕೆ ಇರುವೆ ಮೊದಲ್ಗೊಂಡು ಆನೆಕಡೆಯಾಗಿ ಎಂಬತ್ನಾಲ್ಕು ಲಕ್ಷಜೀವರಾಶಿಗಳು ಸೃಷ್ಟಿಕರ್ತನಾದ ಬ್ರಹ್ಮನಿಂದಲೇ ಹುಟ್ಟಿವೆ.ನಾವು ಬ್ರಹ್ಮನಿಂದ ಹುಟ್ಟಿದ್ದೇವೆ,ಬ್ರಹ್ಮನ ವಂಶಜರು ಎಂದು ಬ್ರಾಹ್ಮಣರು ಹೇಳಿಕೊಳ್ಳುವುದು ಅರ್ಥಹೀನ ಮಾತು.ಜೀವಿಗಳಾದಿ ಎಲ್ಲವೂ ಬ್ರಹ್ಮನಿಂದಲೇ ಸೃಷ್ಟಿಕೊಂಡ ಬಳಿಕ ಎಲ್ಲರೂ ಬ್ರಾಹ್ಮಣರೇ ಎಂದಾಯಿತು.ಹಾರುವರ ವಿಶೇಷತೆ ಎಲ್ಲಿದೆ ?
‘ ಬ್ರಾಹ್ಮಣ’ ಎಂದರೆ ಬ್ರಹ್ಮಜ್ಞ ಎಂದರ್ಥ.ಬ್ರಹ್ಮವನ್ನು ತಿಳಿದವನೇ ಬ್ರಾಹ್ಮಣ.ಬ್ರಹ್ಮ ಎಂದರೆ ಏನು? ಸೃಷ್ಟಿಕರ್ತ ಬ್ರಹ್ಮನೇ ಬ್ರಹ್ಮನಲ್ಲ.ಚತುರ್ಮುಖ ಬ್ರಹ್ಮನು ಜಗತ್ತನ್ನು ಸೃಷ್ಟಿಸುವ ಸೃಷ್ಟಿಕರ್ತ ಮಾತ್ರ,ಆತ ಬ್ರಹ್ಮನಲ್ಲ.ಈ ಚತುರ್ಮುಖನಿಗೂ ನಿಯಂತ್ರಕನಾಗಿ ಒಬ್ಬ ಪರಮಾತ್ಮನಿದ್ದಾನೆ.ಆ ಪರಮಾತ್ಮನೇ ಪರಶಿವನಾಗಿದ್ದು ಅವನನ್ನು ಸಾಮಾನ್ಯಾರ್ಥದಲ್ಲಿ ಬ್ರಹ್ಮನೆಂದೂ ವಿಶೇಷಾರ್ಥದಲ್ಲಿ ಪರಬ್ರಹ್ಮನೆಂದೂ ಕರೆಯಲಾಗುತ್ತದೆ.ಬ್ರಹ್ಮ,ವಿಷ್ಣು ಮತ್ತು ರುದ್ರರೆಂಬ ಮೂವರು ಮೂರ್ತಿಗಳನ್ನು ಸೃಷ್ಟಿಸಿ ಅವರುಗಳಿಂದ ತನ್ನ ಪ್ರಪಂಚಲೀಲೆಯಾದ ಸೃಷ್ಟಿ,ಸ್ಥಿತಿ,ಲಯ ಕಾರ್ಯಗಳನ್ನು ಮಾಡಿಸುತ್ತಿದ್ದಾನೆ ಪರಶಿವನು.ಪರಶಿವನು ಬ್ರಹ್ಮ,ವಿಷ್ಣು ಮತ್ತು ರುದ್ರರುಗಳಿಗೂ ನಿಲುಕದವನು ಆದ್ದರಿಂದ ಅವನು ಅತೀತ,ಅವ್ಯಕ್ತ,ಅಚಿಂತ್ಯ.
ಪರಶಿವನು ಜಗತ್ತಿನ ಕಾರಣಕರ್ತನಾಗಿಯೂ ಜಗತ್ತಿಗೆ ಅಂಟಿಕೊಳ್ಳಲಾರನು.ಪ್ರಪಂಚವು ಪರಮಾತ್ಮನ ಸಂಕಲ್ಪವಾದರೂ ಪರಶಿವನು ಪ್ರಪಂಚದ ಆಗು ಹೋಗುಗಳಿಗೆ ಸಿಲುಕನು.ಪರಶಿವನು ಜೀವರುಗಳನ್ನು ಸೃಷ್ಟಿಸಿರುವನಾದರೂ ಆ ಜೀವರುಗಳ ಬಗ್ಗೆ ನಿರ್ಲಿಪ್ತಭಾವ ತಳೆದಿರುವನು.ಜೀವರುಗಳ ಹುಟ್ಟು- ಸಾವು,ಗುಣ- ಕರ್ಮಗಳಿಗೆ ಪರಶಿವನು ಕಾರಣನಲ್ಲ,ಜೀವರುಗಳೇ ಅವರುಗಳ ಗತಿನಿರ್ಧಾರಕರುಗಳು.ವಿಶ್ವವನ್ನೆಲ್ಲ ವ್ಯಾಪಿಸಿ ವಿಶ್ವೇಶ್ವರನೆನ್ನಿಸಿಕೊಂಡಿರುವ ಪರಶಿವನು ವಿಶ್ವೋತ್ತೀರ್ಣನೂ ಅಹುದು,ವಿಶ್ವಾತೀತನೂ ಅಹುದು.ಪರಶಿವನ ಈ ರಹಸ್ಯವನ್ನು ತಿಳಿದವರೇ ಜ್ಞಾನಿಗಳು.ಪರಮಾತ್ಮನ ರಹಸ್ಯವನ್ನು ಅರಿತವರು ಅಪರೋಕ್ಷಜ್ಞಾನಿಗಳು.ಅಪರೋಕ್ಷಜ್ಞಾನಿಗಳೇ ಬ್ರಾಹ್ಮಣರು.
ಹಾರುವರು ತಮ್ಮನ್ನು ತಾವು ಬ್ರಾಹ್ಮಣರೆಂದು ಕರೆದುಕೊಂಡು ಕೆಲವು ಸಂಸ್ಕಾರಗಳಿಂದ ಬ್ರಾಹ್ಮಣತ್ವ ಪ್ರಾಪ್ತಿಯಾಯಿತು ಎನ್ನುತ್ತಾರೆ.ಆದರೆ ಯಾವ ಸಂಸ್ಕಾರವೂ ಬ್ರಾಹ್ಮಣತ್ವವನ್ನು ತಂದುಕೊಡದು.ಸಂಸ್ಕಾರವು ದೇಹಕ್ಕೆ ಹೊರತು ಆತ್ಮನಿಗಲ್ಲ.ದೇಹಕ್ಕೆ ಮಾಡಿದ ಸಂಸ್ಕಾರವು ಅದನ್ನು ದಹನ ಮಾಡಿದಾಗ ದೇಹದೊಂದಿಗೆ ಹೊರಟುಹೋಗುತ್ತದೆಯಾದ್ದರಿಂದ ದೇಹಸಂಸ್ಕಾರದಿಂದ ಬ್ರಾಹ್ಮಣತ್ವದ ಸಿದ್ಧಿಯಾಗುವುದಿಲ್ಲ.ಜುಟ್ಟು ಜನಿವಾರಗಳಿಂದಲೂ ಬ್ರಾಹ್ಮಣತ್ವ ಬರದು.ಉಪನಯನ ಎನ್ನುವುದು ವೇದೋಕ್ತ ಸಂಸ್ಕಾರ ಕ್ರಿಯೆಯಲ್ಲವಾದ್ದರಿಂದ ಉಪನಯನ ಸಂಸ್ಕಾರಹೊಂದಿದ ಮಾತ್ರಕ್ಕೆ ಬ್ರಾಹ್ಮಣರು ಆಗುವುದಿಲ್ಲ.ವೇದದಂತೆ ಗಾಯತ್ರಿ ತತ್ತ್ವವೇತ್ತನೂ ಮಾತ್ರ ಬ್ರಾಹ್ಮಣನು.ಕ್ಷತ್ರಿಯನಾಗಿದ್ದ ವಿಶ್ವಾಮಿತ್ರನು ಗಾಯತ್ರಿ ಮಂತ್ರ ದ್ರಷ್ಟಾರನಾಗಿ ಬ್ರಹ್ಮರ್ಷಿಯಾದ,ಬ್ರಾಹ್ಮಣರಿಂದಲೂ ಪೂಜೆಗೊಳ್ಳುವ ಅರ್ಹತೆ ಪಡೆದ.ತಪಸ್ಸಾಧನೆಯಿಂದ ಬ್ರಹ್ಮತ್ವವು ಲಭಿಸುತ್ತದೆ ಎನ್ನುವುದೇ ವಿಶ್ವಾಮಿತ್ರನ ಜೀವನ ಸಂದೇಶ.ಕ್ಷತ್ರಿಯರು ಮಾತ್ರವಲ್ಲ,ಯಾರು ಬೇಕಾದರೂ ಬ್ರಾಹ್ಮಣರಾಗಬಹುದು ತತ್ತ್ವಸಾಧನೆಯಿಂದ.ಗಾಯತ್ರಿ ಮಂತ್ರೋಪಾಸನೆಯು ಬ್ರಾಹ್ಮಣ್ಯವನ್ನು ಪಡೆಯುವ ಒಂದು ವಿಧಾನವು.ಒಂದು ಲಕ್ಷ ಗಾಯತ್ರಿ ಮಂತ್ರವನ್ನು ಜಪಿಸುವ ಮೂಲಕ ಬ್ರಾಹ್ಮಣ್ಯವನ್ನು ಸಂಪಾದಿಸಿಕೊಳ್ಳಬಹುದು.ಗಾಯತ್ರಿ ಮಂತ್ರದ ಕೋಟಿಜಪದಿಂದ ಬ್ರಹ್ಮರ್ಷಿಯೇ ಆಗಬಹುದು.
ಗಾಯತ್ರಿ ತತ್ತ್ವಾರ್ಥವೂ ಪರಬ್ರಹ್ಮ,ಪರಶಿವ ವಾಚಕವೇ ! ಗಾಯತ್ರಿಯೂ ಪರಶಿವನ,ಪರಬ್ರಹ್ಮತತ್ತ್ವವು.ಸವಿತೃ ತತ್ತ್ವ ಇಲ್ಲವೆ ಸೂರ್ಯನ ತತ್ತ್ವ ಎನ್ನುವುದು ತಪ್ಪು ತಿಳಿವಳಿಕೆ.’ ಭರ್ಗೋದೇವಸ್ಯ ಧೀಮಹಿ’ ಎನ್ನುವುದು ಗಾಯತ್ರಿ ತತ್ತ್ವದ ಮಹದುದ್ದೇಶವಾಗಿದ್ದು ಭರ್ಗದೇವನನ್ನು ಅರಿತುಕೊಳ್ಳುವುದೇ ಗಾಯತ್ರಿಯ ವಿಶೇಷವು.ಆ ಭರ್ಗನೆಂದರೆ ಶಿವನೇ ಅಲ್ಲವೆ? ಶಿವನು ಸಾಕಾರನೂ ಅಹುದು ನಿರಾಕಾರನೂ ಅಹುದು,ಶಿವನ ಪರಬ್ರಹ್ಮಸ್ವರೂಪವನ್ನು ಅರಿತವರು ಜೀವನ್ಮುಕ್ತರಾಗುತ್ತಾರೆ,ಮೋಕ್ಷಸಂಪಾದಿಸುತ್ತಾರೆ ಎನ್ನುವುದೇ ವಿಶ್ವಾಮಿತ್ರ ಋಷಿ ಕಂಡ ಗಾಯತ್ರಿ ಮಂತ್ರ ರಹಸ್ಯಾರ್ಥವು.ವಿಶ್ವಾಮಿತ್ರ ಋಷಿಯು ಶಿವಭಕ್ತನೆಂಬುದು ಹಾರುವರು ಅರಿಯದ ಸಂಗತಿ ಏನಲ್ಲ.ಹಾಗಿದ್ದೂ ಹಾರುವರು ಗಾಯತ್ರಿ ಮಂತ್ರದಲ್ಲಿ ಆ ತತ್ತ್ಚವಿದೆ,ಈ ತತ್ತ್ವವಿದೆ,ಇಪ್ಪತ್ನಾಲ್ಕು ದೇವತೆಗಳಿದ್ದಾರೆ ಎಂದು ಏನು ಏನನ್ನೋ ಕಲ್ಪಿಸಿಕೊಳ್ಳುತ್ತಿದ್ದಾರೆ.ಗಾಯತ್ರಿ ಮಂತ್ರದಲ್ಲಿ ಇರುವವನು ಒಬ್ಬನೇ ಸೂರ್ಯನಿಂದ ಪೂಜಿಸಲ್ಪಡುವ,ಸೂರ್ಯನಿಗೆ ಪ್ರಕಾಶವನ್ನು ಅನುಗ್ರಹಿಸುವ ಪರಶಿವನು.ಗಾಯತ್ರಿಯು ಪರಶಿವವಾಚಕವಾದ ಮಹಾತತ್ತ್ವ,ಪರತತ್ತ್ವ,ಪರಬ್ರಹ್ಮತತ್ತ್ವ ಎಂದು ತಿಳಿದವನೇ ಬ್ರಾಹ್ಮಣನು,ಮಿಕ್ಕುಳಿದವರಲ್ಲ !