ಕಲ್ಯಾಣ ಕಾವ್ಯ : ಎತ್ತರಕ್ಕೇರಿ ಬೆಳೆದಾಗ…ಮುಕ್ಕಣ್ಣ ಕರಿಗಾರ

 

ಬೆಳೆದು ಎತ್ತರಕ್ಕೇರಿ ನಿಂತಾಗ ನೀನು
ಮೆಚ್ಚುವವರು ಕೆಲವರು
ಕಿಚ್ಚುಕಾರುವವರು ಹಲವರು
ತುಚ್ಛವಾಗಿ ಕಾಣುವವರುಂಟು
ಸ್ವಚ್ಛವ್ಯಕ್ತಿತ್ವದ ನಿನ್ನ ಸಾಧನೆಯನ್ನು
ಹಚ್ಚಿಕೊಳ್ಳದೆ ತಲೆಗೆ ನೀನಿದಾವುದನ್ನು
ಮುನ್ನಡೆ,ಮುನ್ನುಗ್ಗು,ಮೇಲೇರು.

ಈ ಪ್ರಪಂಚ ಇರುವುದೇ ಹೀಗೆ
ಹೆಳವರು ಕುಂಟರು ಕುರುಡರ ಜಗತ್ತಿನಲ್ಲಿ
ಕನಸುಗಳಿಗೆ ರೆಕ್ಕೆಪುಕ್ಕಗಳ ಕಟ್ಟಿಕೊಂಡು
ಹಾರಬೇಕು ನೀನು ನಭದೆತ್ತರಕೆ.
ಎತ್ತರಕೆ,ಬಲು ಎತ್ತರಕೆ ನಿನ್ನ
ಹತ್ತಿರಕೆ ಇತರರು ಬಾರದಷ್ಟು ಎತ್ತರಕೆ
ನೀನು ಹಾರಿ
ಹಾರಿದ ಬಗ್ಗೆ ಅಹಂ ಮೂಡಿಸಿಕೊಳ್ಳದೆ
ಮತ್ತಷ್ಟು ಎತ್ತರಕ್ಕೆ ಏರುವ,ಹಾರುವ
ಕನಸುಕಾಣು.
ಕೆಳಗೆ ಬಿದ್ದು ಒದ್ದಾಡಿ
ಒದರುವಲ್ಪಜೀವಿಗಳ ಮಾತಿಗೆ
ಕೊಡದಿರು ಕಿವಿಯನ್ನು.
ಮೇಲೆ ಏರಬೇಕು,ಹಾರಬೇಕು
ನಾಳೆ ಮೇಲೆ ಏರುವವರಿಗೆ
ಹಾರುವವರಿಗೆ ಸ್ಫೂರ್ತಿಯಾಗಿ.

About The Author