ವಿಡಂಬನೆ : ಕೃತಕಬುದ್ಧಿವಂತಿಕೆ ! : ಮುಕ್ಕಣ್ಣ ಕರಿಗಾರ

ಕೃತಕಬುದ್ಧಿವಂತಿಕೆ( Artificial intelligence ) ಯ ಬಗ್ಗೆ ಈಗ ಎಲ್ಲರೂ ‘ತಲೆಕೆಡಿಸಿ’ ಕೊಳ್ಳುತ್ತಿದ್ದಾರೆ.ಕೃತಕ ಬುದ್ಧಿವಂತಿಕೆಯ ಚಾಟ್ ಜಿಪಿಟಿ ಯಂತಹ ಮಶಿನ್ನುಗಳು ಉದ್ಯೋಗ ಕಸಿದುಕೊಳ್ಳಬಹುದು,ನಿರುದ್ಯೋಗ ಸಮಸ್ಯೆಯನ್ನುಂಟು ಮಾಡಬಹುದು ಎಂದೆಲ್ಲ ಲೆಕ್ಕ ಹಾಕುತ್ತಿರುವ ಮಂದಿಗೆ ಈಗ ‘ ತಲೆಯಬೆಲೆ’ ಅರ್ಥವಾಗತೊಡಗಿದೆ.ಹಾಗೆ ನೋಡಿದರೆ ನಾವೆಲ್ಲ ‘ ಕೃತಕ ಬುದ್ಧಿ’ ಯವರೆ! ‘ ಕೃತಕಬುದ್ಧಿವಂತಿಕೆ’ ಮಶಿನ್ನುಗಳ ಬಗ್ಗೆ ಚಿಂತಾಕ್ರಾಂತರಾಗುವ ನಾವುಗಳು ಎಂದಾದರೂ ‘ ಸ್ವತಂತ್ರಬುದ್ಧಿ’ ಯನ್ನು ಹೊಂದಿದ್ದೇವೋ ಹೇಗೋ ಎನ್ನುವುದನ್ನು ಯಾವ ತನಿಖಾ ಆಯೋಗವೂ ನಿರ್ಧರಿಸಲಾರದು.

ಮನೆಯಲ್ಲಿ ದಿನ ಬೆಳಗಾದರೆ ಹೆಂಡತಿಯ ಆಜ್ಞೆಯನ್ನು ಪಾಲಿಸುವ ಅನಿವಾರ್ಯತೆ ಇರುವ ನಮಗೆ ‘ ಸ್ವತಂತ್ರ ಬುದ್ಧಿ’ ಯಿಂದ ಉಪಯೋಗವೇನೂ ಇಲ್ಲ ಎನ್ನುವುದು ಮನೆಯಲ್ಲಿಯೇ ಮನದಟ್ಟಾದ ಸುಖಿಜೀವನದ ಮೊದಲ ಸೂತ್ರ.ಮನೊಯೊಡತಿಯ ಬುದ್ಧಿಯನ್ನೋ ಬುದ್ಧಿಮಾತುಗಳನ್ನೋ ಪಾಲಿಸುವ ನಮ್ಮದು ಕೃತಕ ಬುದ್ಧಿಯೇ ಅಲ್ಲವೆ ? ಹೆಂಡತಿಯ ಆಜ್ಞೆ ಎನ್ನುವುದು ಸ್ವಲ್ಪ ಒರಟಾಯಿತು ಎನ್ನುವವರು ‘ ಹೆಂಡತಿಯ ಆಪ್ತವಾಕ್ಯ’ ಎಂದು ತಿದ್ದಿಕೊಂಡು ಓದಬಹುದು.ಅಂತೂ ನಮ್ಮ ಸ್ವಂತ ಇಚ್ಛೆಗೆ ಏನೂ ಬೆಲೆಯಿಲ್ಲ ಎನ್ನುವುದಂತೂ ದಿಟಕ್ಕೆ ದಿಟವೆ.ಅಮ್ಮನವರ ಬುದ್ಧಿಯನ್ನು ಆರೋಹಿಸಿಕೊಂಡೋ,ಆಜ್ಞೆಯನ್ನು ಪಾಲಿಸಿಯೋ ಮನೆಗಳಲ್ಲಿ ಗೋಣು ಅಳ್ಳಾಡಿಸುವುದಕ್ಕಷ್ಟೇ ಸ್ವತಂತ್ರರಿರುವ ನಾವು ಮನೆಗಳಲ್ಲಿ ‘ ಕೃತಕಬುದ್ಧಿವಂತಿಕೆ’ ಯ ಮಾನವ‌ ಮಶಿನ್ನುಗಳಲ್ಲವೆ?

ಮನೆಯಿಂದ ಹೊರಗೆ ಬಂದು ಕಛೇರಿಗಳಿಗೆ ಹೋದೆವೆಂದಿಟ್ಟುಕೊಳ್ಳಿ.ಅಲ್ಲಿಯೂ ನಾವು ಕೃತಕಬುದ್ಧಿಯವರೆ.ಆಫೀಸಿನಲ್ಲಿ ಸಾಹೇಬರೋ ಬಾಸ್ ಗಳೋ ಆದವರು ಹೇಳಿದ್ದಕ್ಕೆ ಹ್ಞೂಂಗುಟ್ಟಿ ಬರುವುದಷ್ಟೇ ಕೆಲಸ.ಸಾಹೇಬರ ತಲೆಯಲ್ಲಿ ಏನಿರುತ್ತದೋ ಯಾರು ಬಲ್ಲರು?ಅವರ ಸಿಂಡರಿಸಿದ ಮುಖಕಮಲದಿಂದ ಹೊರಬಿದ್ದ ಅಣಿಮುತ್ತುಗಳಲ್ಲಿ ಅರ್ಥವಾದ ಕೆಲವನ್ನೇ ಕಡತಗಳ ಕಂಡಿಕೆಗಳಲ್ಲಿ ಮಂಡಿಸಿ ಸಾರ್ಥಕತೆ ಮೆರೆಯುವುದು ಸರಕಾರಿ ಸೇವೆಯ ಬಹಿರಂಗ ರಹಸ್ಯ.ಸರಕಾರಿ ಕಛೇರಿಗಳಲ್ಲಿ ಕೆಲವೊಮ್ಮೆ ತಿರುವು ಮುರುಗಾಗುವುದೂ ಉಂಟು.ಸಾಹೇಬರು ಆದವರೆಲ್ಲ ತಲೆಯುಳ್ಳವರೇ ಆಗಿರಬೇಕು ಎನ್ನುವ ನಿಯಮವೇನೂ ಇಲ್ಲವಾದ್ದರಿಂದ ಗಡಿಗೆಯ ತಲೆಯವರೂ ವಕ್ಕರಿಸುವುದುಂಟು ಸಾಹೇಬರ ಖುರ್ಚಿಗಳಿಗೆ.ಗಡಿಗೆತಲೆಯ ಸಾಹೇಬರುಗಳಿದ್ದ ಕಛೇರಿಗಳಲ್ಲಿ ಸ್ವಲ್ಪ ಆರೋಗ್ಯಕರ ವಾತಾವರಣ ಇರುತ್ತದೆ ಎನ್ನಿ.ಆ ಸಾಹೇಬ ಮಹಾಶಯರು ಕ್ಲರ್ಕ್ಕುಗಳು,ಪಿ.ಎ ಗಳಾದವರನ್ನೇ ಆಶ್ರಯಿಸುವ ‘ ಕೃತಕಬುದ್ಧಿವಂತಿಕೆ’ ಯನ್ನು ಹೊಂದಿರುವುದರಿಂದ ಅಂತಹ ಸಾಹೇಬರ ಕಛೇರಿಗಳಲ್ಲಿ ಉಸಿರಾಡುವ ಸ್ವಾತಂತ್ರ್ಯ ಇರುತ್ತದೆ ಎನ್ನಿ.ಸಾಹೇಬರ ಕೃತಕಬುದ್ಧಿವಂತಿಕೆಯಿಂದ ಕಾರಕೂನರುಗಳಿಗೆ ಖುಷಿಯುಂಟಾದರೂ ಸಾರ್ವಜನಿಕರಿಗೆ ಸಂಕಷ್ಟ ಎನ್ನುವುದು ಸರಕಾರಿ ಕಛೇರಿಗಳಿಗೆ ಅಲೆದು ಸುತ್ತಿ ಬೇಸತ್ತವರ ಅನುಭವದ ಮಾತು.ಗುಮಾಸ್ತರು ಹೇಳಿದ ಮಾತೇ ಸಾಹೇಬರ ಬಾಯಲ್ಲಿ ಬರುವುದರಿಂದ ಗುಮಾಸ್ತರ ಬುದ್ಧಿಗೂ ಸಾಹೇಬರ ಬುದ್ಧಿಗೂ ಎಲ್ಲೋ ವೈರೋ,ವೈರಲೆಸ್ಸೋ ಜೋಡಣೆ ಆಗಿರುವುದರಿಂದ ಸಾರ್ವಜನಿಕರು ತಬ್ಬಿಬ್ಬು ಆಗುವುದಂತೂ ಸಹಜವೆ.ಕೆಲವು ಜನ ಬುದ್ಧಿವಂತರು ‘ ಆ ಸಾಹೇಬನಲ್ಲಿ ಹೋಗಿ ಮಾಡುವುದೇನು,ಈ ಗುಮಾಸ್ತನನ್ನೇ ಕಂಡರೆ ಸಾಕು ಕೆಲಸ ಆಗುತ್ತದೆ’ ಎಂದು ಸಾಹೇಬರುಗಳ ಸಹವಾಸಕ್ಕೆ ಹೋಗುವುದಿಲ್ಲ.ಸಾಹೇಬರ ಕೃತಕಬುದ್ಧಿವಂತಿಕೆಯಿಂದ ಮನೆಯಲ್ಲಿ ಅವರ ಹೋಮ್ ಮಿನಿಸ್ಟರ್ ಗಳು ಕೆಂಡಾಮಂಡಲರಾಗುತ್ತಾರೆ.ಸಾಹೇಬ‌ ಕಛೇರಿಯಲ್ಲಿ ಕಾರಕೂನರ,ಪಿಎಗಳ ಬುದ್ಧಿವಂತಿಕೆಯನ್ನು ಅಳವಡಿಸಿಕೊಂಡ ಕೃತಕಬುದ್ಧಿವಂತಿಕೆಯವಾರದುದರಿಂದ ಕಛೇರಿಯಲ್ಲಿ ಸಂಪಾದಿಸುವ ಆದಾಯ( ಸಂಬಳೇತರಮೂಲದ ಆದಾಯ) ದಲ್ಲಿ ಸಿಂಹಪಾಲು ಗುಮಾಸ್ತರುಗಳಿಗೇ ಹೋಗುತ್ತಿದ್ದರೆ ಮನೆಯೊಡತಿ ಯರು ಸುಮ್ಮನಿರುತ್ತಾರೆಯೆ?ಕೆಲವು ಸಾಹೇಬರುಗಳ ಹೆಂಡಂದಿರು ದಿನ ಆಫೀಸಿನಿಂದ ಬರುವಾಗ ಇಂತಿಷ್ಟು ತರಲೇಬೇಕು ಎಂದು ಕಟ್ಟಪ್ಪಣೆ ಹೊರಡಿಸಿರುತ್ತಾರಂತೆ! ಆಫೀಸುಗಳಲ್ಲಿ ಸಾಹೇಬರುಗಳು ಆಪ್ತರುಗಳ ಮುಂದೆ ಹೀಗೆ ಅಲವತ್ತುಕೊಳ್ಳುವುದೂ ಉಂಟು.

‘ ಕೃತಕಬುದ್ಧಿವಂತಿಕೆ’ ಯಿಂದ ತೊಂದರೆ ಅನುಭವಿಸುವ ನಿಜವಾದ ಕೃತಕಬುದ್ಧಿಯವರು ಇದ್ದಾರೆ ಸರಕಾರಿ ಸೇವೆಯಲ್ಲಿ.ಅಂಥವರಿಗೆ ಕೃತಕಬುದ್ಧಿವಂತಿಕೆಯ ಮಶಿನ್ನುಗಳಿಂದರೆ ತೊಂದರೆ ಎಂಬ ಮುನ್ಸೂಚನೆ ಬಂದಿದೆ ಹವಾಮಾನ ಇಲಾಖೆಯವರು ಹೇಳುವ ಮಳೆಯ ಮುನ್ಸೂಚನೆಯಂತೆ.ಮಳೆಬರುತ್ತದೊ ಬಿಡುತ್ತದೊ ಹವಾಮಾನ ಇಲಾಖೆಯವರಂತೂ ‘ ಸಾಧಾರಣವಾಗಿ ಭಾರಿ ಮಳೆಯಾಗುವ ಸಂಭವ ಉಂಟೆಂದೋ’ ‘ ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವ ಉಂಟೆಂದೋ’ ಸುಂಟರಗಾಳಿಯನ್ನು ಎಬ್ಬಿಸುವುದುಂಟು.ಹವಾಮಾನ ಇಲಾಖೆಯವರು ಹೇಳಿದಕೂಡಲೆ ಮಳೆ ಬರಬೇಕೆಂದೂ ಇಲ್ಲವಾದ್ದರಿಂದ ನಮ್ಮ ರೈತರಾರೂ ಹವಾಮಾನ ಇಲಾಖೆಯನ್ನು ನಂಬುವುದಿಲ್ಲ ಬಿಡಿ.ಕೃತಕಬುದ್ಧಿಯ ಆಗಮನದಿಂದ ಅತಂತ್ರರಾಗುವ ಭೀತಿಯನ್ನು ಎದುರಿಸುತ್ತಿರುವ ಕೆಲವರು ಯಾವ ಯಾವ ಅಸ್ತ್ರವನ್ನು ಪ್ರಯೋಗಿಸಿ ಕೃತಕಬುದ್ಧಿವಂತಿಕೆಯ ಯಂತ್ರಗಳನ್ನು ತಡೆಯಬಹುದೆಂದು ತಲೆಕೆಡಿಸಿಕೊಳ್ಳುತ್ತಿದ್ದಾರಂತೆ.ಸರಕಾರಿ ಕಛೇರಿ ಎಂದ ಮೇಲೆ ಬಂದರೂ ನಡೆದೀತು ಬರದಿದ್ದರೂ ನಡೆದೀತು ಎನ್ನುವ ಮಂದಿಯೂ ಇದ್ದಾರೆನ್ನುವುದೇನು ಹೊಟ್ಟೆಕಿಚ್ಚಿನ ಮಾತಲ್ಲ.ಜಾತಿ,ಮತ ,ಧರ್ಮಗಳ ಅಸ್ತ್ರಪ್ರಯೋಗಿಸಿ ಮನೆಯಲ್ಲೋ ವೈನ್ಸ್ ಶಾಪ್ ಗಳಲ್ಲೋ ಕಾಲಕಳೆಯುತ್ತಿದ್ದ ಮಂದಿಗೆ ಕೃತಕಬುದ್ಧಿವಂತಿಕೆಯ ಮಶಿನ್ನುಗಳು ತೊಂದರೆ ಕೊಡುವುದಂತೂ ಕಾಲಮಾನದ ಅಚ್ಚರಿಯೇ ಸರಿ.ಕೃತಕಬುದ್ಧಿವಂತಿಕೆಯ ಮಶಿನ್ನುಗಳು ಬರಿ ಡೇಟಾ ಅನಲೈಸಿಸ್ ಮಾಡಿ ರಿಸಲ್ಟ್ ನೀಡುವುದರಿಂದ,ಕಛೇರಿ ಮುಖ್ಯಸ್ಥರೊಂದಿಗೆ ಗಲಾಟೆ ಗದ್ದಲ ಮಾಡಿಕೊಳ್ಳುವುದಿಲ್ಲವಾದ್ದರಿಂದ ಕಛೇರಿ ಮುಖ್ಯಸ್ಥರುಗಳೆಲ್ಲ ಸರಕಾರಿ ಕಛೇರಿಗಳಲ್ಲಿ ಚಾಟ್ ಜಿಪಿಟಿ ಯಂತ್ರಗಳ ಅನಿವಾರ್ಯತೆಯ ಬಗ್ಗೆ ಮಂತ್ರಿಗಳಿಗೆ ಸೊಗಸಾದ ಪಿಪಿಟಿಯಲ್ಲಿ ವಿವರಿಸಿ ಎಐ ಮಶಿನ್ನುಗಳನ್ನು ಅಡ್ವಾನ್ಸ್ ಬುಕ್ಕಿಂಗ್ ಮಾಡಬಹುದು.ಮಂತ್ರಿಗಳಾದವರಿಗೂ ಇಲಾಖೆಯ ಅಧಿಕಾರಿಗಳ ಮಾತುಗಳನ್ನೇ ನಂಬುವ ಅನಿವಾರ್ಯತೆಯ ಕೃತಕಬುದ್ಧಿ ಇರುತ್ತದೆಯಾಗಿ ಎಐ ಮಶಿನ್ನುಗಳ ಖರೀದಿ ಪ್ರಸ್ತಾವನೆಗಳಿಗೆ ಕಣ್ಮುಚ್ಚಿ ಸಹಿ ಮಾಡುತ್ತಾರೆನ್ನಿ. ಅಂತೂ ‘ ಕೂಸು ಹೊಟ್ಟೆಯಲ್ಲಿರುವಾಗಲೇ ಕುಲಾಯಿ ಹೊಲಿಸಿದಂತೆ’ ಎಐ ಬರುವುದೋ ಇಲ್ಲವೋ ಬಂದರೆ ಎಂದು ಬರುವುದೋ ಗೊತ್ತಿಲ್ಲದೆ ಇದ್ದರೂ ಜನರಂತು ತಲೆಕೆಡಿಸಿಕೊಂಡು ಚುರುಕಾಗುತ್ತಿದ್ದಾರೆ ಎಐ ಮಶಿನ್ನುಗಳೊಡನೆ ಸಂಘರ್ಷಕ್ಕೆ ಇಳಿಯಲು ಇಲ್ಲವೆ ಹೊಂದಾಣಿಕೆ ಮಾಡಿಕೊಳ್ಳಲು.

About The Author