ವಿಡಂಬನೆ : ವಾಟ್ಸಾಪ್ ವಿಶ್ವವಿದ್ಯಾಲಯದ ಮೇಲೊಂದು ಪ್ರಬಂಧ : ಮುಕ್ಕಣ್ಣ ಕರಿಗಾರ

ವಾಟ್ಸಾಪ್ ವಿಶ್ವವಿದ್ಯಾಲಯ’ ಹುಟ್ಟಿಕೊಂಡ ಮೇಲೆ ವಿದ್ಯಾವಂತರಾಗದಿದ್ದರೂ ‘ ಬುದ್ಧಿವಂತ’ ರಾಗುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂಬುದು ಸಂತಸಾಭಿಮಾನಗಳ ಸಂಗತಿಯೇ ಸರಿ.ವಾಟ್ಸಾಪ್ ವಿಶ್ವವಿದ್ಯಾಲಯವು ದೊಡ್ಡವರು- ಸಣ್ಣವರು,ಪಂಡಿತರು- ಪಾಮರರು,ಶ್ರೀಮಂತರು- ಬಡವರು ಎನ್ನದೆ ಎಲ್ಲರ ಮನೆ ಮನಗಳ ಮೇಲೆ ದಾಳಿಯನ್ನಿಟ್ಟಿರುವುದಂತೂ ಸತ್ಯ.ಪುಸ್ತಕಗಳು,ಲೆಕ್ಚರ್ ಗಳು,ಪ್ರೊಫೆಸರ್ಗಳ ಕಿರಿಕಿರಿ ಯಾಕೆ ಎನ್ನುವವರಿಗೆ,ಕ್ಲಾಸ್ ರೂಂಗಳ ನಡುವೆ ಬಂಧಿಯಾಗಿರಲೊಪ್ಪದ ಸ್ವಚ್ಛಂದವಿಹಾರ ಮನಸ್ಕರಿಗೆ ವಾಟ್ಸಾಪ್ ವಿಶ್ವವಿದ್ಯಾಲಯವೆಂಬ ‘ ಓಪನ್ ಯುನಿವರ್ಸಿಟಿ’ ಯೇ ಸೂಕ್ತ ವಿದ್ಯಾಸಂಸ್ಥೆಯು.ಹೆಸರಿಗೆ ತಕ್ಕ ಹಾಗೆ ವಾಟ್ಸಾಪ್ ಓಪನ್ ಯುನಿವರ್ಸಿಟಿಯಲ್ಲಿ ಎಲ್ಲವೂ ಓಪನ್ನೆ!

ಓಪನ್ ಯುನಿವರ್ಸಿಟಿಯಾಗಿರುವ ವಾಟ್ಸಾಪ್ 24×7 ಓಪನ್ ಆಗಿಯೇ ಇರುತ್ತದೆ.ವರ್ಷದ 365 ದಿನಗಳೂ ಓಪನ್ ಆಗಿಯೇ ಇರುತ್ತದೆ.ನಿಮ್ಮ‌ಜೇಬಿನಲ್ಲಿ ಹಣ‌ಇದ್ದರಷ್ಟೆ ಸಾಕು ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಯಾವಾಗಲೂ ಓದುತ್ತಿರಬಹುದು.ವಾಟ್ಸಾಪ್ ಯುನಿವರ್ಸಿಟಿಯಿಂದ ‘ ಸರ್ಟಿಫಿಕೇಟ್’ ಸಿಗೋದಿಲ್ಲ ಎನ್ನುವುದು ಒಂದನ್ನು ಬಿಟ್ಟರೆ ಎಲ್ಲವೂ ಸಿಕ್ಕುತ್ತದೆ.ಸಂತೆಯಲ್ಲಿ ತರಹೆವಾರಿ ತರಕಾರಿಕೊಂಡಂತೆ ‘ ವಾಟ್ಸಾಪ್ ಸಂತೆ’ ಯಲ್ಲಿ ಜೇಬಿನಲ್ಲಿ ಹಣಖರ್ಚಾಗುವವರೆಗೆ ಬೇಕುಬೇಕಾದುದನ್ನೆಲ್ಲ ಕೊಂಡುಕೊಳ್ಳಬಹುದು.

ಮೊಬೈಲ್ ಬಂದಮೇಲೆ ಮಾನವ ಸಂಬಂಧಗಳು ಖುಷಿಯುತ್ತಿವೆ ಎಂದು ಆಕ್ಷೇಪಿಸುವವರು ವಾಟ್ಸಾಪ್ ಹೊಸಬಗೆಯ ಮಾನವ ಸಂಬಂಧಗಳನ್ನು ಹುಟ್ಟುಹಾಕಿದೆ ಎನ್ನುವುದನ್ನು ಮರೆಯುತ್ತಾರೆ.ಇಷ್ಟಪಟ್ಟಿದ್ದನ್ನು ತಮ್ಮಂತೆ ಇಷ್ಟಪಡುವವರ ಗುಂಪಿಗೆ ‘ ಶೇರ್ ‘ ಮಾಡುವ ಮೂಲಕ ಸಮಾನಮನಸ್ಕ ಗೆಳೆಯರ ಗುಂಪು ಹುಟ್ಟಿಕೊಳ್ಳುತ್ತಿದೆ.ಒಬ್ಬರು ಮತ್ತೊಬ್ಬರ ವಿಚಾರಕ್ಕೆ ‘ ಲೈಕ್’ ಒತ್ತುವ ಮೂಲಕ ‘ ಲೈಕ್ ಮೈಂಡೆಂಡ್ ಪೀಪಲ್ಸ್ ಸೊಸೈಟಿ’ ಎನ್ನುವ ಹೊಸಬಗೆಯ ಸಮಾಜ ಒಂದು ಹುಟ್ಟಿಕೊಂಡಿದ್ದು ಅದರ ಗುಣ ಲಕ್ಷಣ ಸ್ವಭಾವಗಳ ಬಗ್ಗೆ ಸಮಾಜಶಾಸ್ತ್ರಜ್ಞರು ಅಧ್ಯಯನ ನಡೆಸಬೇಕಿದೆ.ಗುಂಪು ಎದ್ದರೆ ಗದ್ದಲ ಗಲಾಟೆ ಎನ್ನುವ ಕಿರಿಕಿರಿ ಇಲ್ಲದೆ ಕುಳಿತಲ್ಲೆ ‘ ಗುಂಪುಕಟ್ಟಿಕೊಳ್ಳುವ ಗುಂಪುಶೂರರ’ ವರ್ತನೆಯನ್ನು ವಿಜ್ಞಾನಿಗಳು ಸಂಶೋಧಿಸಲು ಅರ್ಹ,ಹೊಸ ವಿಷಯ.

‌ವಾಟ್ಸಾಪ್ ವಿಶ್ವವಿದ್ಯಾಲಯ ಮಹಾಕವಿಗಳನ್ನು,ಮಹಾನ್ ಲೇಖಕರುಗಳನ್ನು ಹುಟ್ಟುಹಾಕಿದೆ ಎಂಬುದಂತೂ ಕಾಲಮಾನದ ಅಚ್ಚರಿಯೇ ಸರಿ.ಹಿಂದೆ ಆದರೆ ಬರೆದುದನ್ನು‌ ಪ್ರಕಟಿಸಲು ಹತ್ತುಸಲ ಯೋಚಿಸುವ ಪರಿಸ್ಥಿತಿ ಇತ್ತು.ಪತ್ರಿಕೆಗಳಿಗೆ ಕಥೆ,ಕವನ ಕಳಿಸಿದರೆ ಅಂಚೆವೆಚ್ಚ ದಂಡವಾಗುತ್ತಿತ್ತೇ ವಿನಹ ಸ್ವಯಂ ಕವಿಗಳು, ಸಾಹಿತಿಗಳು ಎಂದು ಘೋಷಿಸಿಕೊಂಡವರ ‘ಅಮೂಲ್ಯ ಸಾಹಿತ್ಯ’ವು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರಲಿಲ್ಲ.ಪತ್ರಿಕೆಗಳು ಪ್ರತಿಭೆಯನ್ನು ಗುರುತಿಸುವುದಿಲ್ಲ ,ತಮಗೆ ಬೇಕಾದವರಿಗೆ,ಸಂಪಾದಕ ಮಂಡಲಿಯವರ ಜಾತಿಯವರಿಗೆ ಮನ್ನಣೆ ಜಾಸ್ತಿ ಎನ್ನುವ ದೂರುಗಳಿಗೆ ಮಂಗಲಹಾಡಿರುವ ವಾಟ್ಸಾಪ್ ವಿಶ್ವವಿದ್ಯಾಲಯವು ಬರೆದ ಎಲ್ಲವನ್ನೂ ಯಾರಿಗೂ ಕೇರ್ ಮಾಡದೆ ಶೇರ್ ಮಾಡುವ ಅವಕಾಶ ನೀಡಿದೆಯಾಗಿ ‘ಮಹಾನ್ ಪ್ರತಿಭೆಗಳು’ ಘಂಟೆಗೊಬ್ಬರು,ಘಳಿಗೆಗೊಬ್ಬರಂತೆ ಹೊರಬರುತ್ತಿದ್ದಾರೆ.ವಾಟ್ಸಾಪ್ ಯುನಿವರ್ಸಿಟಿಯಿಂದಾಗಿ ಪತ್ರಿಕೆಗಳ ಸಂಪಾದಕ ಮಂಡಳಿಯವರ ‘ಕೊಬ್ಬುಕರಗಿದೆ’ ಎನ್ನುವುದಂತೂ ದಿಟ.ಅದಕ್ಕೆಂದೇ ಅವರು ವಾಟ್ಸಾಪ್ ಯುನಿವರ್ಸಿಟಿಯ ಬರಹಗಳನ್ನು ‘ ಹುಬ್ಬೇರಿಸಿ ನೋಡು’ ತ್ತಿದ್ದಾರೆ.ದೊಡ್ಡ ದೊಡ್ಡ ಕವಿಗಳೆನ್ನುವವರು ಮೊಬೈಲ್ ಬಳಸುವುದಿಲ್ಲ ಎಂದು ಹೊರಗಡೆ,ಸಾರ್ವಜನಿಕ ವೇದಿಕೆಗಳಲ್ಲಿ ಕೊಚ್ಚಿಕೊಳ್ಳುತ್ತಾರಾದರೂ ಒಳಗೆ ಮೊಬೈಲ್ ನಲ್ಲಿ ಕಣ್ಣಾಡಿಸಿ ವಾಟ್ಸಾಪ್ ವಿಶ್ವವಿದ್ಯಾಲಯಗಳ ಪ್ರತಿಭೆಗಳನ್ನು ಕಂಡು ಕುದಿಯುತ್ತಿರುವುದು ಸುಳ್ಳೇನಲ್ಲ.ಆದರೆ ವಾಟ್ಸಾಪ್ ಸಾಹಿತಿಗಳು ಪ್ರಶಸ್ತಿಗಳನ್ನು ಹೊಡೆಯುವ ಇಲ್ಲವೆ ಪಡೆಯುವ ತಮ್ಮ ‘ ಮಹಾಬುದ್ಧಿವಂತಿಕೆ’ ಗೆ ಅಡ್ಡಬರುವುದಿಲ್ಲ ಎಂದು ಒಳಗೊಳಗೆ ಸಂಭ್ರಮಿಸುತ್ತಿದ್ದಾರೆ.ಪ್ರಶಸ್ತಿಗಳನ್ನು ಪಡೆಯುವುದಕ್ಕಿಂತ ಅದನ್ನು ಹೊಡೆಯುವುದೇ ಇಲ್ಲವೆ ‘ ಗಳಿಸುವುದೇ’ ದೊಡ್ಡಸ್ತಿಕೆಯಾಗಿರುವ ದಿನಗಳಲ್ಲಿ ಮತ್ತು ‘ಪ್ರಶಸ್ತಿ ಸಂಪಾದಿಸಿದ’ ವರೇ ಸಾರ್ವಜನಿಕ ಸಭೆ- ಸಮಾರಂಭಗಳಲ್ಲಿ ‘ ಮೂಗು ತೂರಿಸುವದನ್ನಷ್ಟೇ ಅಲ್ಲ, ಮೈಯನ್ನು ತೋರಿಸುತ್ತಿರುವುದರಿಂದಾಗಿ’ ಅವಕಾಶವಂಚಿತಪ್ರತಿಭೆಗಳು ವಾಟ್ಸಾಪ್ ವಿಶ್ವವಿದ್ಯಾಲಯದಲ್ಲಿ ಮುಕ್ತವಾಗಿ ಮೆರೆಯಬಹುದಾಗಿದೆ. ಪಂಪಯುಗ,ಬಸವಯುಗ,ಕುಮಾರವ್ಯಾಸಯುಗ,ಮುದ್ದಣಯುಗ ಮೊದಲಾಗಿ ಸಾಹಿತ್ಯದಲ್ಲಿ ಯುಗಗಳನ್ನು ಸೃಷ್ಟಿಕೊಂಡು ತೊಳಲಿಬಳಲುತ್ತಿರುವ ವಿದ್ವನ್ನ್ಮಣಿಗಳು,ಸಂಶೋಧಕರು ಇನ್ನು ಮುಂದೆ ‘ ವಾಟ್ಸಾಪ್ ಸಾಹಿತ್ಯ ಯುಗ’ ದ ವೈಭವವನ್ನು ಸಂಶೋಧಿಸುವ ಅನಿವಾರ್ಯತೆ ಇದೆ.ವಾಟ್ಸಾಪ್ ಸಾಹಿತ್ಯಯುಗವನ್ನು ಅಧ್ಯಯನ ಮಾಡದವರು ಪಂಡಿತರಲ್ಲ,ಸಂಶೋಧಕರಲ್ಲ ಎಂದು ಹೇಳುವ ಕಾಲವೂ ಬಂದಿದೆ ಎನ್ನಿ.

ವಾಟ್ಸಾಪ್ ನಲ್ಲಿ ಶೇರ್ ಆಗುವುದೆಲ್ಲ ಸತ್ಯವಾದುದಲ್ಲ ಎನ್ನುವ ಕೆಲವರ ಆಕ್ಷೇಪವನ್ನು ವಾಟ್ಸಾಪ್ ಪ್ರಿಯ ಬಹುಜನರು ಒಪ್ಪಿಲ್ಲವಾದ್ದರಿಂದ ಬಹುಮತಕ್ಕೆ ಬೆಲೆ ಇರುವ ಪ್ರಜಾಪ್ರಭುತ್ವದಲ್ಲಿ ಅಂತಹ ದೂರುಗಳಲ್ಲಿ ‘ ಸತ್ಯಾಂಶ ಇಲ್ಲವೆಂದೋ’ ದುರುದ್ದೇಶಪೂರಿತ ಹೇಳಿಕೆ’ ಗಳೆಂದೋ ತಳ್ಳಿಹಾಕಬಹುದು.ವಾಟ್ಸಾಪ್ ನ ಗುಂಗು ಹಚ್ಚಿಕೊಂಡವರಿಂದ ವಾಟ್ಸಾಪ್ ಪ್ರಿಯರಿಗೆ ಎಷ್ಟು ಲಾಭವೋ ಗೊತ್ತಿಲ್ಲ,ಆದರೆ ವಾಟ್ಸಾಪ್ ಕಂಪನಿಯ ಲಾಭವಂತೂ ಘಂಟೆಘಂಟೆಗೆ ಸಹಸ್ರಪಟ್ಟು ಹೆಚ್ಚುತ್ತಲೇ ಇದೆ.ವಾಟ್ಸಾಪ್ ಪ್ರಿಯರಿಂದಾಗಿ ಡಾಕ್ಟರ್ ಗಳಿಗೂ ಲಾಭವಾಗುತ್ತಿದೆ ಎನ್ನುವುದಕ್ಕೇನೂ ಸಂಶೋಧನೆ ಕೈಗೊಳ್ಳುವ ಅಗತ್ಯವಿಲ್ಲ. ಪೇಶೆಂಟ್ ಗಳನ್ನೇ ಕಾಣದೆ ಪರಿತಪಿಸಿ,ಅದೃಷ್ಟದೇವತೆ ಮನೆಬಾಗಿಲಿಗೆ ಬಂದಂತಹ ‘ಕೊವಿಡ್ ಯುಗ’ದಲ್ಲಿ ‘ಕೊರೊನಾದೇವಿ’ ಯ ಮಹಿಮೆಯನ್ನು ಮೆರೆಸಿ ಕೋಟ್ಯಾಧೀಶರುಗಳಾಗಿದ್ದು ಕೊವಿಡ್ ಕಾಣೆಯಾದ ದಿನಗಳಲ್ಲಿ ಪೇಶಂಟ್ ಗಳಿಲ್ಲದೆ ಮತ್ತೆ ಪರಿತಪಿಸುತ್ತಿದ್ದ ಡಾಕ್ಟರ್ಗಳ ಆಸ್ಪತ್ರೆಗಳ ಮುಂದೆ ‘ವಾಟ್ಸಾಪ್ ವ್ಯಸನ ಪೀಡಿತರ ‘ ದೊಡ್ಡ ಕ್ಯೂ ಕಂಡು ಬರುತ್ತಿದೆ.ಕಣ್ಣು ಕಳೆದುಕೊಂಡವರು,ಬುದ್ಧಿ ಕಳೆದುಕೊಂಡವರು ಮತ್ತೆ ಏನನ್ನೋ ಕಳೆದುಕೊಂಡವರು ಕಳೆದುಕೊಂಡ ಆರೋಗ್ಯ ಸಂಪತ್ತನ್ನು ಮರಳಿ ಪಡೆಯಲು ಡಾಕ್ಟರ್ ಗಳ ಬಳಿ ಎಡತಾಕುತ್ತಿದ್ದಾರೆ.ವಾಟ್ಸಾಪ್ ಗಳ ಕಾರಣದಿಂದ ಪೇಶಂಟ್ ಗಳಿಲ್ಲದೆ ಪರದಾಡುತ್ತಿದ್ದ ಹುಚ್ಚಾಸ್ಪತ್ರೆಯ ವೈದ್ಯರುಗಳಿಗೆ ‘ ಶುಕ್ರದೆಸೆ’ ಯುಂಟಾಗಿ ನರರೋಗ ತಜ್ಞರೆನ್ನುವವರು ನಾವು ಯಾರಿಗೇನು ಕಮ್ಮಿ ಎಂದು ಬೀಗುವಂತಾಹದದ್ದು ಮಾತ್ರ ವಾಟ್ಸಾಪ್ ಪ್ರಿಯರಿಗೆ ‘ಹಿಡಿಸಲಾರದ ಸುದ್ದಿ’ ಎಂದು ಪಿಎಚ್ ಡಿ ಹೊಡೆಯುವವರಿಗೆ ಸ್ಫೂರ್ತಿಯಾಗಬಲ್ಲ ವಾಟ್ಸಾಪ್ ಮಹಿಮೆಯ ‘ ವಾಟ್ಸಾಪ್ ವಿಶ್ವವಿದ್ಯಾಲಯದ ಮಹಿಮಾಧಿಕ್ಯವನ್ನು ‘ ಕರಿಯನ್ನು ಕನ್ನಡಿಯಲ್ಲಿ ತೋರಿದಂತೆ’ ಎನ್ನುವದನ್ನು ಸವಿನಯದಿಂದ ಒಪ್ಪಿಕೊಂಡು ಈ ಸಂಕ್ಷಿಪ್ತ ಪ್ರಬಂಧವನ್ನು ಮುಕ್ತಾಯಗೊಳಿಸಬಹುದೇನೋ.

About The Author