ಮೂರನೇ ಕಣ್ಣು : ಕಾಂಗ್ರೆಸ್ ಸರಕಾರ ಅಸ್ಥಿರಗೊಳ್ಳದೆ ಇರಲು ತೆಗೆದುಕೊಳ್ಳಬೇಕಾದ ಕ್ರಮಗಳು : ಮುಕ್ಕಣ್ಣ ಕರಿಗಾರ

ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಸಿಂಗಪುರದಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ದೀರ್ಘಕಾಲಿನ ಸಿಂಗಪುರ ಪ್ರವಾಸದ ಕುರಿತು ಬೆಂಗಳೂರಿನಲ್ಲಿ ಪತ್ರಕರ್ತರುಗಳು ಕೇಳಿದ ಪ್ರಶ್ನೆಗಳಿಗೆ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆಗಿರುವ ಉಪಮುಖ್ಯ ಡಿ.ಕೆ.ಶಿವಕುಮಾರ ಅವರು ಉತ್ತರಿಸುತ್ತ ಈ ಕುರಿತು ತಮಗೆ ಮಾಹಿತಿ ಇರುವುದಾಗಿಯೂ ಸ್ಪಷ್ಟ ಪಡಿಸಿದ್ದಾರೆ.ಈ ಮಾತಿನ ಸತ್ಯಾಸತ್ಯತೆ ಏನೇ ಇರಲಿ ಪ್ರಬಲರಾಗಿರುವ ಅವರ ವಿರೋಧಿಗಳು ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಉರುಳಿಸಬಹುದು ಎನ್ನುವ ಭಯ,ಆತಂಕ ಕಾಂಗ್ರೆಸ್ಸಿಗರಲ್ಲಿದೆ.135 ಸ್ಥಾನಗಳನ್ನು ಗೆದ್ದು ಅಧಿಕಾರದಲ್ಲಿದ್ದರೂ ರಾಜ್ಯದ ಕಾಂಗ್ರೆಸ್ ಸರಕಾರವು ನಿರಾತಂಕವಾಗಿ ಆಡಳಿತ ನಡೆಸುವಂತಿಲ್ಲ.ಪಕ್ಕದ ಮಹಾರಾಷ್ಟ್ರ ರಾಜ್ಯದ ರಾಜಕೀಯ ವಿದ್ಯಮಾನಗಳು ಕಣ್ಣೆದುರಿಗಿವೆ.

ಸರಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಶಾಸಕರುಗಳ ನೆರವು ಪಡೆಯುವ ಯೋಜನೆ ರೂಪುಗೊಳ್ಳಬಹುದು.ಅದಕ್ಕಾಗಿ ಮುಖ್ಯಮಂತ್ರಿ ಸಿದ್ರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು ಆಗಿರುವ ಡಿ.ಕೆ.ಶಿವಕುಮಾರ ಅವರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ‘ ಆಪರೇಶನ್ ಸಿಂಗಪುರ ಅಸ್ತ್ರ’ ವನ್ನು ಪ್ರಯೋಗಪೂರ್ವದಲ್ಲಿಯೇ ನಿಷ್ಕ್ರೀಯಗೊಳಿಸಬಹುದು.

* ಶಾಸಕರುಗಳ ಕ್ಷೇತ್ರಾಭಿವೃದ್ಧಿಗೆ ಅನುದಾನ ನೀಡಬೇಕು — ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಗ್ಯಾರಂಟಿಗಳ ಅನುಷ್ಠಾನಕ್ಕೆ ಸರ್ಕಾರವು ಹೆಣಗಾಡುತ್ತಿದ್ದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ರಾಮಯ್ಯನವರು ಗ್ಯಾರಂಟಿಯೋಜನೆಗಳಿಗೆ ತಗಲುವ ನಲವತ್ತು ಸಾವಿರ ಕೋಟಿಗೂ ಮಿಕ್ಕ ಹಣ ಹೊಂದಾಯಿಸಲೇ ಕಷ್ಟಪಡುತ್ತಿದ್ದಾರೆ.ಹಾಗಾಗಿ ಎಂಟು ತಿಂಗಳಗಳ ಕಾಲ ಅನುದಾನ ಕೇಳಬೇಡಿ ಎಂದು ಅವರು ಪಕ್ಷದ ಶಾಸಕರಲ್ಲಿ ಮನವಿ ಮಾಡಿದ್ದಾರೆ.ಮುಖ್ಯಮಂತ್ರಿ ಸಿದ್ರಾಮಯ್ಯನವರು ತಮ್ಮ ನಿಲುವನ್ನು ಕೊಂಚ ಬದಲಿಸಬೇಕು.ಸರಕಾರದ ಅನಗತ್ಯ ವೆಚ್ಚದ ಬಾಬ್ತುಗಳನ್ನು ಕಡಿತಗೊಳಿಸಿಯಾದರೂ ಶಾಸಕರುಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಒದಗಿಸಬೇಕು.ಶಾಸಕರುಗಳು ಗ್ಯಾರಂಟಿಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಹೇಳಿಕೊಂಡು ತಿರುಗಿದರೆ ವಿಧಾನಸಭಾ ಕ್ಷೇತ್ರಗಳ ಮತದಾರರು ಸುಮ್ಮನೆ ಇರುವುದಿಲ್ಲ.ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ತುರ್ತು ಅಭಿವೃದ್ಧಿ ಕಾರ್ಯಗಳಿವೆ,ಚುನಾವಣೆಯ ಸಂದರ್ಭದಲ್ಲಿ ಶಾಸಕರುಗಳು ಮತದಾರರಿಗೆ ನೀಡಿದ ಭರವಸೆಗಳಿವೆ.ಅಲ್ಲದೆ ಶಾಸಕರುಗಳಿಗೆ ಅವರದೆ ಆದ ಕೆಲವು ಆದ್ಯತೆಗಳಿರುತ್ತವೆ.ಶಾಸಕರುಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ನೀಡುತ್ತಿಲ್ಲ ಎನ್ನುವ ಅಸಮಾಧಾನವು ತೀವ್ರಗೊಂಡು ವಿಕೋಪಕ್ಕೆ ಹೋಗದಂತೆ ಮುಖ್ಯಮಂತ್ರಿ ಸಿದ್ರಾಮಯ್ಯನವರು ಆರಂಭದಲ್ಲಿಯೇ ಎಚ್ಚರಿಕೆ ವಹಿಸಬೇಕು.

** ಶಾಸಕರುಗಳನ್ನು ನಿಗಮ ಮಂಡಲಿಗಳ ಅಧ್ಯಕ್ಷರುಗಳನ್ನಾಗಿ ನೇಮಿಸಬೇಕು

ಸಚಿವ ಸ್ಥಾನ ಸಿಗದೆ‌ ಅತೃಪ್ತರಾಗಿರುವ ಪ್ರಭಾವಿ ಶಾಸಕರುಗಳು ಸೇರಿದಂತೆ ಕಾಂಗ್ರೆಸ್ ಪಕ್ಷದ ಶಾಸಕರುಗಳನ್ನು ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು,ಸದಸ್ಯರುಗಳನ್ನಾಗಿ ಆದಷ್ಟು ಶೀಘ್ರವಾಗಿ ನೇಮಿಸಬೇಕು.ಅತೃಪ್ತ ಶಾಸಕರುಗಳನ್ನು ಸಂತೃಪ್ತಗೊಳಿಸಲು ಇದು ಪರಿಣಾಮಕಾರಿ ಮದ್ದು.

*** ಸಚಿವರುಗಳಿಗೆ ಶಾಸಕರುಗಳ ಕೆಲಸ- ಕಾರ್ಯಗಳನ್ನು ಮಾಡಿಕೊಡುವಂತೆ ಸೂಚಿಸಬೇಕು.

ಕೆಲವು ಜನ ಸಚಿವರುಗಳು ಶಾಸಕರುಗಳ ಮಾತುಗಳಿಗೆ ಬೆಲೆ ನೀಡುತ್ತಿಲ್ಲ ಎನ್ನುವ ಅತೃಪ್ತಿ ಈಗಾಗಲೆ ಶಾಸಕರುಗಳಲ್ಲಿ ಮನೆಮಾಡಿದೆ.ಇದಕ್ಕೆ ಆರಂಭದಲ್ಲೇ ಚಿಕಿತ್ಸೆ ಮಾಡಬೇಕು.ಸಚಿವರುಗಳು ತಮ್ಮ ಬೆಂಬಲಿಗರುಗಳೊಂದಿಗೆ ಛೇಂಬರಿನಲ್ಲಿ ದಿನವಿಡೀ ಕಾಲಕಳೆಯುವ ಬದಲು ತಮ್ಮ ಭೇಟಿಗೆ ಬಂದ ಶಾಸಕರುಗಳೊಂದಿಗೆ ಸೌಜನ್ಯದಿಂದ ವರ್ತಿಸಿ,ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು.ಶಾಸಕರುಗಳು ಅವರ ಕ್ಷೇತ್ರದ ಅಭಿವೃದ್ಧಿ ವಿಷಯಗಳು ಮತ್ತು ಸರಕಾರಿ ಅಧಿಕಾರಿಗಳ ವರ್ಗಾವಣೆಯ ವಿಷಯಕ್ಕಾಗಿ ಸಚಿವರುಗಳ ಬಳಿ ಬಂದಾಗ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕಾರ್ಯವನ್ನು ಸಚಿವರುಗಳು ಮಾಡಿದರೆ ಸಮಸ್ಯೆ ಉದ್ಭವಿಸುವುದಿಲ್ಲ.ಶಾಸಕರುಗಳು ಎಲ್ಲ ಸಂದರ್ಭಗಳಲ್ಲಿಯೂ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಾಧ್ಯವಿಲ್ಲವಾದ್ದರಿಂದ ಶಾಸಕರ ಅತೃಪ್ತಿಯು ಸ್ಫೋಟಗೊಳ್ಳದಂತೆ ಎಲ್ಲ ಸಚಿವರುಗಳು ಕ್ರಮವಹಿಸಬೇಕು.

**** ಜಿಲ್ಲಾ ಉಸ್ತುವಾರಿ ಸಚಿವರುಗಳು ಶಾಸಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

ಜಿಲ್ಲಾ ಉಸ್ತುವಾರಿ ಸಚಿವರುಗಳು ತಮ್ಮ ಪಕ್ಷದ ಶಾಸಕರುಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು.ಶಾಸಕರುಗಳೊಂದಿಗೆ ನಿರಂತರವಾಗಿ ಅಲ್ಲದಿದ್ದರೂ ಕಾಲಕಾಲಕ್ಕೆ ಮಾತನಾಡುತ್ತ,ಸಂಪರ್ಕದಲ್ಲಿಟ್ಟುಕೊಳ್ಳಬೇಕು.ಜಿಲ್ಲೆಗಳಿಗೆ ಭೇಟಿ ನೀಡಿದಾಗ ಪಕ್ಷದ ಶಾಸಕರುಗಳನ್ನೆಲ್ಲ ಕರೆದು,ಮಾತನಾಡಿಸಿ ಅವರ ಸಮಸ್ಯೆಗಳನ್ನು ಆಲಿಸಬೇಕು.ಜಿಲ್ಲಾ ಮಟ್ಟದ ಕೆ.ಡಿ.ಪಿ ಸಭೆಗಳಿಗೆ ಶಾಸಕರುಗಳನ್ನು ಖುದ್ದಾಗಿ ಆಹ್ವಾನಿಸಿ, ಅವರುಗಳನ್ನು ಸಭೆಯಲ್ಲಿ ಭಾಗವಹಿಸುವಂತೆ ಮಾಡಬೇಕು.ಕೆ.ಡಿ.ಪಿ ಸಭೆಗಳಲ್ಲಿ ಶಾಸಕರು ಎತ್ತುವ ಸಮಸ್ಯೆಗಳನ್ನು ಸಭೆಯಲ್ಲಿಯೇ ಇಲ್ಲವೆ ಸಭೆ ಮುಗಿದ ಬಳಿಕವಾದರೂ ಪರಿಹರಿಸಲು ಕ್ರಮಕೈಗೊಳ್ಳಬೇಕು.ಅಧಿಕಾರಿಗಳು ಹೇಳಿದ್ದಕ್ಕೆಲ್ಲ ಹ್ಞೂಂಗುಟ್ಟುವ ಬದಲು ಶಾಸಕರ ಸಮಸ್ಯೆಗಳ ಸತ್ಯಾಸತ್ಯತೆಯನ್ನು ಅರಿತು ಅಧಿಕಾರಿಗಳಿಗೆ ಅಗತ್ಯಸೂಚನೆ ನೀಡಬೇಕು.ಸರಕಾರಿ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದ ಕೆಲಸ ಕಾರ್ಯಗಳನ್ನು ಸ್ವಯಂ ಆಸಕ್ತಿಯಿಂದ ಮಾಡುತ್ತಾರೆ, ಆದರೆ ಶಾಸಕರು ಹೇಳಿದ ಕೆಲಸ ಕಾರ್ಯಗಳಿಗೆ ನೂರೆಂಟು ಸಬೂಬು ಹೇಳುತ್ತಾರೆ.ಗ್ರಾಮ ಪಂಚಾಯತಿಗಳ ಪಿಡಿಒಗಳ ಬಗ್ಗೆಯೇ ಬಹಳಷ್ಟು ಶಾಸಕರುಗಳಿಗೆ ಸಮಸ್ಯೆಗಳು ಇರುವುದರಿಂದ ತಾಲೂಕಾ ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು,ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಾಸಕರುಗಳೊಂದಿಗೆ ಗೌರವಯುತವಾಗಿ ವರ್ತಿಸುವಂತೆ,ಶಾಸಕರು ಸೂಚಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಸ್ಪಷ್ಟವಾದ ಸೂಚನೆಗಳನ್ನು ನೀಡಬೇಕು.

***** ಶಾಸಕರುಗಳನ್ನು ದೇಶದ ಇತರ ರಾಜ್ಯಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಿಬರಲು ‘ ಅಧ್ಯಯನ ಪ್ರವಾಸ’ ಕ್ಕೆ ಕಳುಹಿಸಬೇಕು.

ಶಾಸಕರುಗಳಲ್ಲಿ ಅತೃಪ್ತಿಯ ಬೀಜಗಳು ಮೊಳೆಯದಂತೆ ಅವರನ್ನು ಕ್ರಿಯಾಶೀಲರುಗಳನ್ನಾಗಿ ಇಡುವ ಅವಶ್ಯಕತೆ ಇರುವುದರಿಂದ ದೇಶದ ಇತರ ರಾಜ್ಯಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆ,ಕಾರ್ಯಕ್ರಮಗಳನ್ನು ಪರಿಚಯಿಸಿಕೊಳ್ಳುವ ಉದ್ದೇಶದ ‘ ಅಧ್ಯಯನ ಪ್ರವಾಸ’ ಕ್ಕೆ ಅವರುಗಳನ್ನು ಕಳುಹಿಸಬೇಕು.

****** ಶಾಸಕಾಂಗ ಪಕ್ಷದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿಗಳು ಆಗಾಗ ತಮ್ಮ ಪಕ್ಷದ ಶಾಸಕರುಗಳ ಸಭೆ ಜರುಗಿಸಿ ಅವರ ಸಮಸ್ಯೆಗಳನ್ನು ಆಲಿಸಬೇಕು.ಶಾಸಕರ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧ ಪಟ್ಟ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಬೇಕು.

******* ಕಾಂಗ್ರೆಸ್ ಪಕ್ಷದ ಶಾಸಕರುಗಳು ವಿದೇಶ ಪ್ರವಾಸ ಕೈಗೊಳ್ಳದಂತೆ ಎಚ್ಚರಿಕೆ ವಹಿಸಬೇಕು.ಒಂದು ವೇಳೆ ಅವರು ಕುಟುಂಬಸಮೇತ ಖಾಸಗಿಯಾಗಿ ವಿದೇಶಗಳಿಗೆ ಹೋಗುವಂತಿದ್ದರೆ ಅದಕ್ಕೆ ಅನುಮತಿಸಬಹುದು.ಶಾಸಕರುಗಳು ಜೊತೆಯಾಗಿ ವಿದೇಶಗಳಿಗೆ‌ ಪ್ರಯಾಣ ಮಾಡುವುದನ್ನು ನಿರ್ಬಂಧಿಸಬೇಕು ಹಾಗೊಂದು ವೇಳೆ ಶಾಸಕರುಗಳು ಒಟ್ಟಾಗಿ ವಿದೇಶಪ್ರಯಾಣ ಕೈಗೊಳ್ಳುವಂತಿದ್ದರೆ ವಿದೇಶಗಳಲ್ಲಿ ಅವರ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾವಹಿಸಬೇಕು.

ಮುಖ್ಯಮಂತ್ರಿ ಸಿದ್ರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ ಅವರು ಈ ‘ ಸಪ್ತಸೂತ್ರ’ ಗಳನ್ನು ಅನುಷ್ಠಾನಗೊಳಿಸಿದರೆ ಯಾವಚಾಣಾಕ್ಷ ರಾಜನೀತಿಜ್ಞನೂ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲಾರ.

About The Author