ಮೂರನೇ ಕಣ್ಣು : ಪ್ರಬಲಜಾತಿಗಳ ಹಿಡಿತದಲ್ಲಿರುವ ಭಾರತದ ನ್ಯಾಯಾಂಗ– ವಿಚಾರಿಸಬೇಕಾದ ಕೆಲವು ಸಂಗತಿಗಳು : ಮುಕ್ಕಣ್ಣ ಕರಿಗಾರ

ದೇಶದ ಹೈಕೋರ್ಟ್ ಗಳಲ್ಲಿ ಶೇಕಡಾ 75 ರಷ್ಟು ನ್ಯಾಯಾಧೀಶರುಗಳು ಪ್ರಬಲವರ್ಗಗಳಿಗೆ ಸೇರಿದವರಾಗಿದ್ದಾರೆ ಎನ್ನುವ ಅಧಿಕೃತ ಮಾಹಿತಿಯು ಪ್ರಕಟಗೊಂಡಿದೆ.ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಒವೈಸಿ ಅವರ ಪ್ರಶ್ನೆಗೆ ಕೇಂದ್ರ ಕಾನೂನು ಸಚಿವ ಅರ್ಜುನ್ ಮೆಘವಾಲ್ ಅವರು ನೀಡಿದ ಲಿಖಿತ ಉತ್ತರದಲ್ಲಿ ದೇಶದ ಹೈಕೋರ್ಟ್ ಗಳಿಗೆ 2018 ರಿಂದ ಜುಲೈ 17 ರ ವರೆಗೆ ನೇಮಕಗೊಂಡಿರುವ 604 ನ್ಯಾಯಮೂರ್ತಿಗಳ ಪೈಕಿ 459 ( ಶೇ75.58)ಮಂದಿ ಪ್ರಬಲ ಜಾತಿಗಳಿಗೆ ಸೇರಿದವರು ಎನ್ನುವುದು ಲೋಕಸಭೆಯಲ್ಲಿ ಕೇಂದ್ರಸರಕಾರವು ಸ್ಪಷ್ಟಪಡಿದ ಅಂಶ.ಇವರಲ್ಲಿ 18 ನ್ಯಾಯಮೂರ್ತಿಗಳು ( ಶೇ 2.98) ಪರಿಶಿಷ್ಟಜಾತಿ,9 ಮಂದಿ ( ಶೇ1.49)ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಹಿಂದುಳಿದ ವರ್ಗಗಳಿಗೆ ಸೇರಿದ ನ್ಯಾಯಮೂರ್ತಿಗಳ ಸಂಖ್ಯೆ 72( ಶೇ 11.92)ಇದ್ದರೆ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ನ್ಯಾಯಮೂರ್ತಿಗಳ ಸಂಖ್ಯೆ 34(ಶೇ 5.6) ( ಪ್ರಜಾವಾಣಿ, ಜುಲೈ 22,2023.ಪುಟ 11)ಕೇಂದ್ರ ಸರ್ಕಾರದ ಈ ಅಧಿಕೃತ ಮಾಹಿತಿಯು ದೇಶದ ಪ್ರಜ್ಞಾವಂತ ನಾಗರಿಕರುಗಳಿಗೆಲ್ಲ ಆಘಾತವನ್ನುಂಟು ಮಾಡುವ ಸಂಗತಿ.ದೇಶಕ್ಕೆ ಸ್ವಾತಂತ್ರ ಬಂದು,ಪ್ರಬುದ್ಧ ಸಂವಿಧಾನವನ್ನು ಹೊಂದಿ ಏಳು ದಶಕಗಳು ಮೀರಿದರೂ ‘ ಸಂವಿಧಾನದ ರಕ್ಷಕನಾಗಿರುವ ನ್ಯಾಯಾಂಗ’ ದಲ್ಲಿ ಮೇಲ್ವರ್ಗದ ನ್ಯಾಯಾಧೀಶರ ಸಂಖ್ಯೆಯೇ ಸಿಂಹಪಾಲು ಇದೆ ಎನ್ನುವುದು ಗಂಭೀರವಾಗಿ ಆಲೋಚಿಸಬೇಕಾದ ವಿಷಯ.

ಸಮಾನತೆಯು ನಮ್ಮ ಸಂವಿಧಾನದ ಆಧಾರಸ್ತಂಭವಾಗಿದ್ದು ದೇಶದ ನಾಗರಿಕರೆಲ್ಲರೂ ಸಮಾನರು ಮಾತ್ರವಲ್ಲ, ಸಾರ್ವಜನಿಕ ಹುದ್ದೆಗಳನ್ನು ಪಡೆಯುವಲ್ಲಿ ಜಾತಿ ಮತ ಧರ್ಮಗಳ ಆಧಾರದಲ್ಲಿ ತಾರತಮ್ಯವನ್ನೆಸಲಾಗದು ಎನ್ನುತ್ತದೆ ಸಂವಿಧಾನ.ಸಂವಿಧಾನವನ್ನು ಅರ್ಥೈಸುವ ಪರಮೋಚ್ಚ ಸಂಸ್ಥೆಯಾಗಿರುವ ,ದೇಶದ ಜನತೆಯ ಮೂಲಭೂತ ಹಕ್ಕುಗಳ ರಕ್ಷಕನಾಗಿರುವ ಸುಪ್ರೀಂಕೋರ್ಟಿನ ಈ ನಡೆ ಸಾರ್ವಜನಿಕರಲ್ಲಿ ಸಂಶಯವನ್ನುಂಟು ಮಾಡುತ್ತಿದೆ.’ಸ್ವತಂತ್ರನ್ಯಾಯಾಂಗ’ ವನ್ನು ಬಯಸುವ ದೇಶದ ನಾಗರಿಕರಿಗೆ ಸುಪ್ರೀಂಕೋರ್ಟು ಹೆಚ್ಚಿನ ನ್ಯಾಯಾಧೀಶರುಗಳ ಹುದ್ದೆಯನ್ನು ಮೇಲ್ವರ್ಗಗಳ ಜನರಿಗೇ ನೀಡಿದೆ ಎನ್ನುವುದು ನ್ಯಾಯಾಂಗದ ಬಗೆಗಿನ ನಂಬಿಕೆ ಕುಸಿಯಲು ಕಾರಣವಾಗಿದೆ.

ಹೈಕೋರ್ಟ್ಗಳ ನ್ಯಾಯಾಧೀಶರುಗಳನ್ನು ಸುಪ್ರೀಂಕೋರ್ಟಿನ ‘ ಕೊಲಿಜಿಯಂ’ ನ ಶಿಫಾರಸ್ಸುಗಳಂತೆ ಕೇಂದ್ರ ಸರಕಾರವು ನೇಮಿಸುತ್ತದೆ. ‘ಕೊಲಿಜಿಯಂ’ ಶಿಫಾರಸ್ಸು ಮಾಡಿದ ಪಟ್ಟಿಯಲ್ಲಿನ ಹೆಸರುಗಳಲ್ಲಿ ಕೇಂದ್ರ ಸರಕಾರವು ಕೆಲವು ನ್ಯಾಯಾಧೀಶರ ಹೆಸರುಗಳನ್ನು ಒಪ್ಪದಿರಬಹುದು,ಪುನರ್ ಪರಿಶೀಲಿಸಲು ಸುಪ್ರೀಂಕೋರ್ಟ್ ಅನ್ನು ಕೋರಬಹುದು.ಸುಪ್ರೀಂಕೋರ್ಟ್ ಪುನಃ ಅವೇ ಹೆಸರುಗಳನ್ನು ಶಿಫಾರಸ್ಸು ಮಾಡಿದರೆ ಕೇಂದ್ರ ಸರ್ಕಾರವು ಒಪ್ಪಲೇಬೇಕಾಗುತ್ತದೆ.ಹೆಚ್ಚೆಂದರೆ ಕೇಂದ್ರ ಸರ್ಕಾರವು ಹೈಕೋರ್ಟ್ ನ್ಯಾಯಾಧೀಶರುಗಳ ನೇಮಕಾತಿಯನ್ನು ಕೆಲವು ತಿಂಗಳುಗಳ ಮಟ್ಟಿಗೆ ತಡೆಹಿಡಿಯಬಹುದಷ್ಟೆ.ಹೈಕೋರ್ಟ್ ಗಳ ನ್ಯಾಯಾಧೀಶರ ನೇಮಕದಲ್ಲಿ ಸರಕಾರದ ಅಧಿಕೃತ ಅಂಗೀಕಾರ ಮುದ್ರೆಯನ್ನು ಒತ್ತುವುದು ಬಿಟ್ಟರೆ ಕೇಂದ್ರಸರ್ಕಾರದ ನಿಯಂತ್ರಣ ಇಲ್ಲವೇ ಇಲ್ಲವೆನ್ನುವಷ್ಟಿದೆ. ಶೇಕಡಾ 75 ರಷ್ಟು ಮಂದಿ ಪ್ರಬಲ ಜಾತಿಯ ನ್ಯಾಯಾಧೀಶರುಗಳನ್ನು ಸುಪ್ರೀಂಕೋರ್ಟಿನ ಕೊಲಿಜಿಯಂ ಶಿಫಾರಸ್ಸು ಮಾಡಿದೆ ಎಂದ ಹಾಗಾಯಿತು.ಹಾಗಾದರೆ ಸುಪ್ರೀಂಕೋರ್ಟ್ ದೇಶದ ನಾಗರಿಕರಿಗೆ ಯಾವ ಸಂದೇಶವನ್ನು ನೀಡಹೊರಟಿದೆ? ಸಂವಿಧಾನವು ನ್ಯಾಯಾಂಗದ ಸ್ವಾತಂತ್ರ್ಯ,ಪಾರಮ್ಯವನ್ನು ಪ್ರತಿಷ್ಠಾಪಿಸಿದ್ದು ಈ ಕಾರಣಕ್ಕಾಗಿಯೆ? ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು ಸೇರಿದಂತೆ ಕೊಲಿಜಿಯಂನ ಸದಸ್ಯ ನ್ಯಾಯಾಧೀಶರುಗಳು ಕೇಳಿಕೊಳ್ಳಲೇಬೇಕಾದ ಪ್ರಶ್ನೆ ಇದು.

ಸಮಾನತೆಯನ್ನು,ಮಾನವ ಹಕ್ಕುಗಳ ಘನತೆಯನ್ನು ಎತ್ತಿಹಿಡಿಯಬೇಕಾದ ಸುಪ್ರೀಂಕೋರ್ಟ್ ಹೈಕೋರ್ಟಿನ ನ್ಯಾಯಾಧೀಶರುಗಳನ್ನು ನೇಮಿಸುವಾಗ ದಲಿತರು,ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಜನಾಂಗಗಳ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ ಎಂದು ಹೇಳದೆ ವಿಧಿಯಿಲ್ಲ.ಮೇಲ್ವರ್ಗದ ಜನರಷ್ಟೇ ಬುದ್ಧಿವಂತರು,ನ್ಯಾಯ ನಿಪುಣರು ಎನ್ನುವ ತೀರ್ಮಾನಕ್ಕೆ ಬಂದಿದೆಯೇ ಸುಪ್ರೀಂಕೋರ್ಟ್ ? ಹಾಗಿಲ್ಲದಿದ್ದರೆ ಯಾಕೆ ಈ ತಾರತಮ್ಯ? ಮಹಾರ್ ಜನಾಂಗಕ್ಕೆ ಸೇರಿದ ದಲಿತರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿನ ದೇಶದ ವಿವಿಧ ಜಾತಿ- ಜನಾಂಗಗಳನ್ನು ಪ್ರತಿನಿಧಿಸಿದ್ದ ಸಂವಿಧಾನ ರಚನಾ ಸಮಿತಿಯ ಸಭೆಯಿಂದ ರಚಿಸಲ್ಪಟ್ಟ,ಭಾರತದ ಜನತೆಯ ಪ್ರಾತಿನಿಧಿಕ ಸಂಸ್ಥೆಯಾದ ಸಂಸತ್ತು ಅಂಗೀಕರಿಸಿದ, ದೇಶದ ಜನಸಮಸ್ತರ ಸಮರ್ಪಣಾಭಾವದ ಸಂವಿಧಾನದ ಆಧಾರದ ಮೇಲೆ ನ್ಯಾಯ ತೀರ್ಮಾನ ಮಾಡುವ ,ಸಂವಿಧಾನದ ರಕ್ಷಕನಾಗಿರುವ ಸುಪ್ರೀಂಕೋರ್ಟಿನ ಈ ನಿಲುವು ದೇಶದ ಜನರ ಸಂಶಯ- ಸಂದೇಹಗಳಿಗೆ ಕಾರಣವಾಗಿದೆ.ಜನಪ್ರತಿನಿಧಿಗಳು ಹೆದರಿ ಸುಮ್ಮನಿರಬಹುದು,ದೇಶದ ಜನತೆ ‘ ನ್ಯಾಯಾಂಗ ನಿಂದನೆ’ ಯ ಪ್ರಸ್ತುತತೆಯನ್ನು ಪ್ರಶ್ನಿಸುವ ಕಾಲ ಬಂದಿದೆ.ನಮ್ಮ ನ್ಯಾಯಾಧೀಶರುಗಳು ‘ ನ್ಯಾಯಾಂಗ ನಿಂದನೆ’ ಎನ್ನುವ ಸಾಂವಿಧಾನಿಕ ಅಸ್ತ್ರದಿಂದಾಗಿಯೇ ವಿಶೇಷ ಸ್ಥಾನ ಮಾನ ಪಡೆದಿದ್ದಾರೆ.’ ನ್ಯಾಯಾಂಗ ನಿಂದನೆ’ ಎನ್ನುವುದು ಮುಕ್ತ,ನ್ಯಾಯ ಸಮ್ಮತ ತೀರ್ಪು ನೀಡಲು ನ್ಯಾಯಾಧೀಶರುಗಳಿಗೆ ಒದಗಿಸಲಾದ ಸಂವಿಧಾನದ ರಕ್ಷಣೆಯೇ ಹೊರತು ಸುಪ್ರೀಂಕೋರ್ಟಿನ ನ್ಯಾಯಾಧೀಶರುಗಳು ದೇಶದ ಪ್ರಜಾಸಮಸ್ತರುಗಳಿಗಿಂತ ದೊಡ್ಡವರಲ್ಲ.ಈ ದೇಶದಲ್ಲಿ ಪ್ರಜೆಗಳಿಂತ ದೊಡ್ಡವರು ಯಾರೂ ಇಲ್ಲ,ಅದಕ್ಕೆ ನ್ಯಾಯಾಧೀಶರೂ ಹೊರತಲ್ಲ.ದೇಶದ ಜನಸಂಖ್ಯೆಯಲ್ಲಿ 90% ರಷ್ಟಿರುವ ಶೂದ್ರರು,ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಹೈಕೋರ್ಟಿನ ನ್ಯಾಯಾಧೀಶರ ಹುದ್ದೆಗಳಲ್ಲಿ ಅವರ ಜಾತಿ,ಜನಾಂಗದ ಸಂಖ್ಯೆಗನುಗುಣವಾದ ಪ್ರಾತಿನಿಧ್ಯ ಇಲ್ಲ ಎನ್ನುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯೇ ಜನರು ಸಂದೇಹ ವ್ಯಕ್ತಪಡಿಸುವಂತೆ ಆಗುತ್ತದೆ.ಸುಪ್ರೀಂಕೋರ್ಟ್ ಕೆಲವು ವಿಷಯಗಳಲ್ಲಿ ಕೇಂದ್ರ ಸರ್ಕಾರದ ನಿಯಂತ್ರಣ ಮುಕ್ತ ಸಂಸ್ಥೆ ಎಂಬಂತೆ ವರ್ತಿಸುತ್ತಿದೆ.ದೇಶದ ಸಂಸತ್ತು ಅಂಗೀಕರಿಸಿದ ‘ ನ್ಯಾಯಾಂಗ ಪರಾಮರ್ಶೆ ಆಯೋಗ’ ದ ಸ್ಥಾಪನೆಯ ಕಾಯ್ದೆಯನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟಿನ ನಡೆಯನ್ನು ಈಗ ಜನತೆ ಪ್ರಶ್ನಿಸಬೇಕಾಗಿದೆ.ನಮ್ಮದು ‘ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ’. ದೇಶದ ನಾಗರಿಕ ಸಮಸ್ತರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಸಂಸತ್ತಿಗೆ ಪರಮಾಧಿಕಾರವಿದೆಯೇ ಹೊರತು ಸಂಸತ್ತನ್ನು‌ ಪ್ರಶ್ನಿಸುವ ಅಧಿಕಾರ ಸುಪ್ರೀಂಕೋರ್ಟಿಗೆ ಇಲ್ಲ.ಕೇಂದ್ರಸರ್ಕಾರವು ಸಂಸತ್ತಿಗೆ ಹೊಣೆಯಾಗಿರುತ್ತದೆ.ಸಂಸತ್ತು ಅಂಗೀಕರಿಸಿದ ‘ನ್ಯಾಯಾಂಗ ಪರಾಮರ್ಶೆ ಆಯೋಗ’ ವನ್ನು ರದ್ದು ಪಡಿಸಿದ ಸುಪ್ರೀಂಕೋರ್ಟಿನ ತೀರ್ಮಾನವನ್ನು ಸಂಸತ್ತು ಚರ್ಚಿಸಬೇಕಿತ್ತು,ಪರ್ಯಾಯೋಪಾಯಗಳನ್ನು ಕೈಗೊಳ್ಳಬೇಕಿತ್ತು.ನ್ಯಾಯಾಂಗಕ್ಕೆ ಸ್ವಾತಂತ್ರ್ಯವಿರಬೇಕು ನಿಜ ಆದರೆ ಅದು ದೇಶದ ಜನತೆಯ ಆಶೋತ್ತರಗಳನ್ನು ಬದಿಗೊತ್ತುವ ಮಟ್ಟಿಗೆ ಇರಬಾರದು.ಸುಪ್ರೀಂಕೋರ್ಟಿನ ನ್ಯಾಯಾಧೀಶರುಗಳೂ ಮನುಷ್ಯರೆ.ಹಾಗಿದ್ದಾಗ ಅವರು ತಪ್ಪು ನಿರ್ಣಯ ಕೈಗೊಳ್ಳಲಾರರು,ಪ್ರಭಾವಕ್ಕೆ ಒಳಗಾಗಲಾರರು ಎನ್ನುವುದಕ್ಕೆ ಏನು ಆಧಾರವಿದೆ? ಸುಪ್ರೀಂಕೋರ್ಟಿನ ಇತ್ತೀಚಿನ ವರ್ಷಗಳ ಕೆಲವು ತೀರ್ಪುಗಳು ಜನರಲ್ಲಿ ಅತೃಪ್ತಿಯನ್ನುಂಟು ಮಾಡಿವೆ.ಆದರೂ ದೇಶದ ಸರ್ವೋಚ್ಚ ನ್ಯಾಯ ಸಂಸ್ಥೆ ಎಂದು ಜನತೆ ಅದನ್ನು ಗೌರವಿಸುತ್ತಲೇ ಬಂದಿದ್ದಾರೆ.ಹೀಗಿರುವಾಗ ಸುಪ್ರೀಂಕೋರ್ಟ್ ದೇಶದ ಜನತೆಯ ಭಾವನೆಗಳನ್ನು ಗೌರವಿಸಬೇಕಾದದ್ದು ಅದರ ಕರ್ತವ್ಯ ತಾನೆ?

ಹಿಂದೆ ದೇಶದಲ್ಲಿ ಸಾಕ್ಷರತೆಯ‌ ಪ್ರಮಾಣ ಕಡಿಮೆ‌ ಇದ್ದ ಕಾಲದಲ್ಲಿ ಮೇಲ್ಜಾತಿಯ ಜನರೇ ವಿದ್ಯಾವಂತರು,ವಕೀಲರುಗಳು ಆಗಿದ್ದರಿಂದ ಅವರಲ್ಲೇ ಅರ್ಹರಾದವರನ್ನು ಹೈಕೋರ್ಟಿನ ನ್ಯಾಯಾಧೀಶರುಗಳನ್ನಾಗಿ ನೇಮಿಸುತ್ತಿದ್ದರೆ ಅದನ್ನು ಒಪ್ಪಬಹುದಿತ್ತು.ಈಗ ದಲಿತರಲ್ಲೂ ಮೇಧಾವಿ ವಕೀಲರುಗಳಿದ್ದಾರೆ.ಹಿಂದುಳಿದ ವರ್ಗಗಳಲ್ಲೂ ಪ್ರತಿಭಾವಂತ ವಕೀಲರುಗಳಿದ್ದಾರೆ.ಅಲ್ಪ ಸಂಖ್ಯಾತರಲ್ಲೂ ನೆಲದ ಕಾನೂನಿನಲ್ಲಿ ಪರಿಣತರಿರುವ ಸಾಕಷ್ಟು ಜನ ವಕೀಲರುಗಳಿದ್ದಾರೆ.ಹೈಕೋರ್ಟಿನ ನ್ಯಾಯಾಧೀಶರುಗಳನ್ನಾಗಿ ನೇಮಿಸಲು ಶಿಫಾರಸ್ಸು ಮಾಡುವಾಗ ಸುಪ್ರೀಂಕೋರ್ಟಿನ ಕೊಲಿಜಿಯಂ ‘ಸಾಮಾಜಿಕ ನ್ಯಾಯ ತತ್ತ್ವ’ವನ್ನು ಎತ್ತಿ ಹಿಡಿಯಬೇಕಲ್ಲವೆ ? ಹೈಕೋರ್ಟಿನ ನ್ಯಾಯಾಧೀಶರುಗಳ ನೇಮಕಾತಿಯಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಪಾಲ್ಗೊಳ್ಳುವಂತಾದರೆ ಈ ಸಮಸ್ಯೆಗೆ ಪರಿಹಾರ ಕಾಣಬಹುದು.ಇಲ್ಲವೆ ಕೇಂದ್ರ ಸರಕಾರವು ದೇಶದ ಎಲ್ಲ ರಾಜ್ಯಗಳ ವಿಧಾನಸಭೆಗಳ ಮೂಲಕ ಅಂಗೀಕರಿಸುವ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಿ,ಅಂಗೀಕರಿಸಿ ಸುಪ್ರೀಂಕೋರ್ಟ್ ದೇಶದ ಜನತೆಯ ಹಕ್ಕುಗಳನ್ನು ಎತ್ತಿಹಿಡಿಯಬೇಕಾದ ಸಂಸ್ಥೆಯೇ ಹೊರತು ದೇಶದ ಜನತೆಗಿಂತ ಹಿರಿದಾದ ಸಂಸ್ಥೆಯಲ್ಲ,ದೇಶದ ಜನಸಮಷ್ಟಿಯ ಪ್ರತೀಕವಾದ ಸಂಸತ್ತಿನ ಕಾನೂನುಗಳನ್ನು ಧಿಕ್ಕರಿಸದೆ ತನಗಿರುವ ‘ಲಕ್ಷ್ಮಣರೇಖೆ’ ಯಲ್ಲಿಯೇ ಕಾರ್ಯನಿರ್ವಹಿಸಬೇಕು ಎಂದು ನಿರ್ಬಂಧಿಸುವ ಕಾನೂನನ್ನು ಮಾಡಬೇಕಾದ ಅಗತ್ಯವಿದೆ.ನ್ಯಾಯಾಂಗದ ಸ್ವಾತಂತ್ರ್ಯವು ಅದರ ಪಾರದರ್ಶಕ ಕಾರ್ಯನಿರ್ವಹಣೆಯ ಆಧಾರದ ಮೇಲೆ ನಿರ್ಣಯವಾಗಬೇಕೇ ಹೊರತು ವಿವೇಚನಾಧಿಕಾರ ಇಲ್ಲವೆ ವಿಶೇಷಾಧಿಕಾರದ ಆಧಾರದ ಮೇಲೆ ಅಲ್ಲ.

About The Author