ವಿಡಂಬನೆ : ಬುದ್ಧಿಯ ಸುತ್ತ ಒಂದು ಪ್ರದಕ್ಷಿಣೆ : ಮುಕ್ಕಣ್ಣ ಕರಿಗಾರ

ಮನುಷ್ಯ ತನ್ನನ್ನು ತಾನು ‘ ಬುದ್ಧಿವಂತ’ ಎಂದು ಘೋಷಿಸಿಕೊಂಡಿದ್ದಾನೆ.ಪ್ರಾಣಿಪಕ್ಷಿಗಳಂತೂ ಮನುಷ್ಯನಿಗೆ ‘ ಬುದ್ಧಿವಂತ’ ಎಂದು ಬಿರುದುಕೊಟ್ಟಿಲ್ಲ ಮನುಷ್ಯ ಅವುಗಳಿಗೆ ‘ ಬುದ್ಧಿ ಇಲ್ಲ’ ಎಂದು ಟೀಕಿಸಿದ್ದರಿಂದ.ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಂಡು ದೊಡ್ಡವನಾಗುವ ಚಪಲ ಮನುಷ್ಯನಿಗೆ ಹುಟ್ಟುಸಹಜ ಗುಣವಾದ್ದರಿಂದ ‘ಮನುಷ್ಯ ಬುದ್ಧಿವಂತ’ ಎಂದೊಪ್ಪಲಡ್ಡಿಯಿಲ್ಲ.

‘ ಬುದ್ಧಿ’ ಎಂದರೆ ತಿಳಿವಳಿಕೆ,ಜ್ಞಾನ ಎಂದರ್ಥ.’ಬುದ್ಧಿ’ ಯನ್ನು ಉಳ್ಳವನೇ ಬುದ್ಧಿವಂತ.ಹಾಗಾದರೆ ಎಲ್ಲರಿಗೂ ‘ಬುದ್ಧಿ’ ಇಲ್ಲವೆ? ಎಲ್ಲರೂ ‘ಬುದ್ಧಿವಂತರು’ ಅಲ್ಲವೆ? ವಿಶ್ವವಿದ್ಯಾಲಯಗಳ ಡಾಕ್ಟರೇಟ್ ಮಂದಿಯು ತುಸು’ಮಂದಬುದ್ಧಿಯವರು’ ಆದುದರಿಂದ ಇದನ್ನು ನಿರ್ಧರಿಸಲು ಬುದ್ಧಿವಂತರಾದ ವಿಜ್ಞಾನಿಗಳಿಗೆ ಬಿಡುವುದೇ ವಾಸಿ.ಅಂದಹಾಗೆ ಡಾಕ್ಟರೇಟ್ ಪಡೆದವರನ್ನು ಮಂದಬುದ್ಧಿಯವರು ಎಂದದ್ದಕ್ಕೆ ತಮ್ಮನ್ನು ತಾವು ಬುದ್ಧಿವಂತರು ಎಂದುಕೊಂಡಿರುವ ಆ ಜನರು ಆಕ್ಷೇಪಿಸಬಹುದು.ಆದರೆ ಇತ್ತೀಚೆಗೆ ಹೊರಬರುತ್ತಿರುವ ಪಿ.ಎಚ್.ಡಿ ಪ್ರಬಂಧಗಳನ್ನು,ಡಾಕ್ಟರೇಟ್ ಪಡೆದ ಮಂದಿ ಬರೆದ ಪುಸ್ತಕಗಳನ್ನು ಓದಿದರೆ ಅವರ ಬುದ್ಧಿ’ ಪ್ರಖರ’ ವಾಗಿಲ್ಲ ಎಂದೇ ಹೇಳಬೇಕಾಗುತ್ತದೆ.ಒಂದರ್ಥದಲ್ಲಿ ಅವರೂ ಬುದ್ಧಿವಂತರೇ ಎನ್ನಿ ಹತ್ತಾರು ಪುಸ್ತಕಗಳನ್ನು ಓದಿ,ಎಲ್ಲಿ ಯಾವುದು ಬೇಕೋ ಅದನ್ನು ಎತ್ತಿಕೊಂಡು ತಮ್ಮ ಹೆಸರಿನಲ್ಲಿ ಒಂದು ‘ ಸಂಶೋಧನಾ ಪ್ರಬಂಧ’ ಪ್ರಕಟಿಸುತ್ತಾರೆ.

ಪ್ರಾಥಮಿಕ , ಪ್ರೌಢ ಶಾಲೆ- ಕಾಲೇಜುಗಳಲ್ಲಿ ಕಾಪಿ ಹೊಡೆಯುವುದು ಅಪರಾಧವಾದರೂ ಯುನಿವರ್ಸಿಟಿಗಳಲ್ಲಿ ಕಾಪಿ ಹೊಡೆಯುವುದು ಅಪರಾಧವಲ್ಲ!ಅದಕ್ಕೆಂದೇ ಪಿ ಎಚ್ ಡಿ ಮಾಡುವವರಿಗೆ ಒಬ್ಬ ಗೈಡೂ ಇರುತ್ತಾರೆ ಎಲ್ಲೆಲ್ಲಿ ಹೇಗೆ ಹೇಗೆ ಕಾಪಿ ಮಾಡಬಹುದು ಅಂತ ನಿರ್ದೇಶಿಸಲು.ಪಿ.ಎಚ್.ಡಿ ಪ್ರಬಂಧದ ಮೌಲ್ಯವನ್ನು ‘ ಪರಾಮರ್ಶಿಸಲು’ ನಾಲ್ಕಾರು ಮಂದಿಗೆ ಕಳಿಸುತ್ತಾರಂತೆ.ಪಾಪ! ಅವರೇನು ಪರಾಮರ್ಶೆ ಮಾಡುತ್ತಾರೋ ಅಥವಾ ಅವರ ‘ ಬುದ್ಧಿ’ ಯು ಯಾವುದೋ ಒಂದರ ಪ್ರಭಾವಕ್ಕೆ ಒಳಗಾಗುತ್ತದೆಯೋ ಅಂತೂ ಇದು ಪಿಎಚ್ ಡಿ ಪಡೆಯಲು ಅರ್ಹ ಪ್ರಬಂಧ ಎಂದು ಶಿಫಾರಸ್ಸು ಮಾಡುತ್ತಾರೆ.

ರಾಜಕಾರಣಿಗಳ ಲೆಟರ್ ಹೆಡ್ಗಳಂತೆ ಈ ‘ ಬುದ್ಧಿಜೀವಿ’ ಗಳ ಶಿಫಾರಸ್ಸು ಪತ್ರಗಳು.ರಾಜಕಾರಣಿಗಳು ಯಾರಿಗೆ ಬೇಕಾದರೂ ಯಾವುದಕ್ಕೆ ಬೇಕಾದರೂ ಲೆಟರ್ ಹೆಡ್ ನೀಡಬಲ್ಲರು,ಅದು ಅವರ ವಿಶೇಷಹಕ್ಕು.ಹಾಗೆಯೇ ವಿಶ್ವವಿದ್ಯಾಲಯಗಳ ಪರಾಮರ್ಶಕ ಮಂಡಳಿಯವರು ಒಂದು ಶಿಫಾರಸ್ಸು ಪತ್ರ ನೀಡುತ್ತಾರೆನ್ನಿ.ಇನ್ನು ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯಗಳ ಕುಲಪತಿಗಳು ಈ ಬುದ್ಧಿಜೀವಿಗಳಿಗೆ ಡಾಕ್ಟರೇಟ್ ಪ್ರದಾನಿಸುತ್ತಾರಲ್ಲ,ಅವರು ಪರಿಶೀಲಿಸುವುದಿಲ್ಲವೆ ಎಂದರೆ ಅವರ ಬಗ್ಗೆ ‘ ಅಯ್ಯೋ ಪಾಪ’ ಎಂದು ಸುಮ್ಮನಾಗಬೇಕಾಗುತ್ತದೆ.

ರಾಜ್ಯಪಾಲರಾದವರಿಗೆ ತಾವು ನೇಮಕಗೊಂಡ ರಾಜ್ಯದ ಭಾಷೆ ಅರ್ಥವಾಗುವುದಿಲ್ಲ,ನಾನು ಡಾಕ್ಟರೇಟ್ ಪದವಿ ಕೊಡುವ ಮನುಷ್ಯ ‘ಮಹಾಬುದ್ಧಿವಂತ’ ನೇ ಇರಬೇಕು ಎಂದು ಭಾವಿಸುತ್ತಾರೆ ಅವರು.ಅಲ್ಲದೆ ರಾಜ್ಯಪಾಲರುಗಳಾದವರಿಗೆ ರಾಜಭವನದ ಅಧಿಕಾರಿಗಳು ಒಪ್ಪಿಸುವ ಟಿಪ್ಪಣಿಗಳನ್ನೇ ‘ ಆಶ್ರಯಿಸುವ ಬುದ್ಧಿ’ ಇರುವುದರಿಂದ ಅವರು ಡಾಕ್ಟರೇಟ್ ಕೊಡುತ್ತಾರೆ.ಇನ್ನು ವಿಶ್ವವಿದ್ಯಾಲಯಗಳ ಕುಲಪತಿಗಳ ಪಾಡೋ! ಹೇಳತೀರದು.ಕುಲಪತಿಗಳ ಸಮಸ್ಯೆಗಳ ಬಗ್ಗೆಯೇ ಹತ್ತು ಪಿಎಚ್ ಡಿ ಪ್ರಬಂಧಗಳನ್ನು ಬರೆಯಬಹುದು.ಆದರೆ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಗೈಡುಗಳಿಗೆ ಯಾಕೋ ಆ ‘ ಬುದ್ಧಿಹೊಳೆ’ ದಂತಿಲ್ಲ.ಸಿಂಡಿಕೇಟ್ ಸದಸ್ಯರುಗಳೆಂಬ ಮಹಾನುಭಾವರುಗಳ ‘ ವಿಪರೀತಬುದ್ಧಿ’ ಯೆದುರು ಕಂಗಲಾಗಿ,ಕೈಕಟ್ಟಿ ಕುಳಿತುಕೊಳ್ಳುವ ಕುಲಪತಿಗಳು ತಾವು ‘ ಬುದ್ಧಿವಂತರು’ ಎನ್ನುವುದನ್ನೇ ಮರೆತಿರುತ್ತಾರೆ! ತಾವು ಬುದ್ಧಿವಂತರು ಎನ್ನುವ ಅರಿವು ಇದ್ದರೂ ಸಿಂಡಿಕೇಟ್ ಸಭೆಯಲ್ಲಿ ‘ ಬುದ್ಧಿಯ ಆಟ’ ನಡೆಯುವುದಿಲ್ಲವಾಗಿ ಅಪಾಯವನ್ನು ಏಕೆ ಮೈಮೇಲೆ ಆಹ್ವಾನಿಸಿಕೊಳ್ಳಬೇಕು ಎಂದು ಸುಮ್ಮನಿದ್ದು ‘ ಬುದ್ಧಿವಂತಿಕೆ ಪ್ರದರ್ಶಿಸು’ ತ್ತಾರೆ ಎನ್ನಬಹುದೇನೋ.

‘ಬುದ್ಧಿವಂತ’ ರುಗಳನ್ನೇ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಬೇಕು ಎನ್ನುವುದು ‘ ಬುದ್ಧಿಗೇಡಿ’ ಗಳು ಆಡುವ ಮಾತು.ನಿಗಮ ಮಂಡಲಿಗಳ ಸ್ಥಾನಗಳೆಲ್ಲ ಭರ್ತಿಯಾದ ಮೇಲೆ ಉಳಿದ ಹಿಂಬಾಲಕರುಗಳ ‘ ಬಾಲಬಡುಕ ಬುದ್ಧಿ’ ಯನ್ನು ಸಂತೃಪ್ತಗೊಳಿಸಲು ರಾಜಕಾರಣಿಗಳು ಕಂಡುಕೊಂಡ ‘ ರಾಜಬುದ್ಧಿ’ ಮಾರ್ಗವೇ ಸಿಂಡಿಕೇಟ್ ಗಳಿಗೆ ಅವರುಗಳನ್ನು ಸದಸ್ಯರುಗಳನ್ನಾಗಿ ನೇಮಿಸುವುದು.ಎಲ್ಲಿಯೂ ಸಲ್ಲದವರು ಸಿಂಡಿಕೇಟ್ ಗಳಲ್ಲಿ ಸಲ್ಲುತ್ತಾರೆ ಎಂದು ಕೂಡ ಹೇಳಬಹುದು.ಅವರುಗಳನ್ನು ಸಿಂಡಿಕೇಟ್ ಸದಸ್ಯರುಗಳನ್ನಾಗಿ ನೇಮಿಸುವವರ ‘ ಬುದ್ಧಿವಂತಿಕೆ’ ಯನ್ನಂತೂ ಮೆಚ್ಚಲೇಬೇಕು.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲಲಾಗದವರು ಸಿಂಡಿಕೇಟ್ ಸದಸ್ಯರಾಗಿ ಸಭೆಗಳಲ್ಲಿ ಗ್ರಾಮಪಂಚಾಯತಿಯಗಳ ವಾದವೈಖರಿಯ ‘ ತಳಮಟ್ಟದ ರಣಬುದ್ಧಿ’ಯನ್ನೇ‌ ಪ್ರದರ್ಶಿಸುತ್ತಾರೆ.ರಾಜಕಾರಣಿಗಳೇನು ದಡ್ಡರಲ್ಲ ಬಿಡಿ.’ಜಗಳಗಂಟ ಬುದ್ಧಿ’ ಯವರನ್ನೇ ಸಿಂಡಿಕೇಟ್ ಸದಸ್ಯರುಗಳನ್ನಾಗಿ ನೇಮಿಸಿ ಬುದ್ಧಿವಂತರು ಎಂದು ಕೊಚ್ಚಿಕೊಳ್ಳುವ ವಿ ಸಿ ಗಳನ್ನು ತಮ್ಮಬಳಿ ಬರುವಂತೆ ಮಾಡಿ ತಮ್ಮ ‘ ಬುದ್ಧಿಬಲ’ ವನ್ನು ಪ್ರದರ್ಶಿಸುತ್ತಾರೆ.ಸಿಂಡಿಕೇಟ್ ಸದಸ್ಯರ ರಣೋತ್ಸಾಹದೆದುರು ಕಳೆಗುಂದುವ ವಿ ಸಿ ಗಳು ‘ ಬುದ್ಧಿತೋಚದೆ’ ಸಿಂಡಿಕೇಟ್ ಸದಸ್ಯರುಗಳಿಂದ ರಕ್ಷಿಸುವಂತೆ ರಾಜಕೀಯ ನಾಯಕರುಗಳನ್ನು ಆಶ್ರಯಿಸುತ್ತಾರೆ.ಅಲ್ಲಿಗೆ ‘ರಾಜಕಾರಣಿಗಳು ಬುದ್ಧಿವಂತರು’ ಎಂದ ಹಾಗಾಯಿತು.ನಿಜಕ್ಕೂ ರಾಜಕಾರಣಿಗಳು ಬುದ್ಧಿವಂತರೇ.ಮತದಾರಪ್ರಭುಗಳ ‘ ಬುದ್ಧಿಮಂಕಾ’ಗುವಂತೆ ಏನೇನೋ ಕಸರತ್ತುಗಳನ್ನು ಮಾಡಿ ಆರಿಸಿ ಬಂದಿರುವ ರಾಜಕಾರಣಿಗಳನ್ನು ದಡ್ಡರು ಎನ್ನಲು ಸಾಧ್ಯವೆ ?

ವಿಧಾನಸಭೆ ,ಸಂಸತ್ತುಗಳನ್ನು ಪ್ರವೇಶಿಸಲು ‘ ಬುದ್ಧಿಬಲ’ ವೇನೂ ಅರ್ಹತೆಯಲ್ಲವಲ್ಲ! ಬುದ್ಧಿವಂತರಿಗೆ ಎಲ್ಲಾ ಕಡೆ ಬೆಲೆ ಇರುತ್ತದೆ ಎನ್ನುವ ಮಾತನ್ನು ಸುಳ್ಳು ಮಾಡಿದ್ದು ನಮ್ಮ ಪ್ರಜಾಪ್ರಭುತ್ವದ ಸೌಂದರ್ಯ ಎಂದು ವ್ಯಾಖ್ಯಾನಿಸಬಹುದೇನೋ.ವಿಧಾನಸಭೆ ಮತ್ತು ಸಂಸತ್ತಿನಲ್ಲಿ ‘ ಬುದ್ಧಿವಂತರುಗಳಿಗೆ’ ‘ ಬುದ್ಧಿಪೂರ್ವಕ’ ನಿಷೇಧ ಹೇರಲಾಗಿರುತ್ತದೆ ಎನ್ನುವುದು ರಾಜಕಾರಣಿಗಳೂ ಒಪ್ಪುವ ಮಾತೇ.ವಿಧಾನಪರಿಷತ್ತು ಮತ್ತು ರಾಜ್ಯಸಭೆಗಳಿಗೆ ‘ ಬುದ್ಧಿವಂತ’ ರನ್ನು ಆರಿಸುತ್ತೇವಲ್ಲ ಎನ್ನಬಹುದು ರಾಜಕಾರಣಿಗಳು.ವಿಧಾನ ಪರಿಷತ್ತು ಇಲ್ಲವೆ ರಾಜ್ಯಸಭೆಗಳಿಗೆ ನೇಮಕಗೊಳ್ಳುವವರು ತಮ್ಮನ್ನು ಆರಿಸುವ ರಾಜಕೀಯ ಪಕ್ಷಕ್ಕೆ ತಮ್ಮ ‘ ಬುದ್ಧಿಯನ್ನು ಒತ್ತೆ ಇಟ್ಟಿರುತ್ತಾರೆ’ ಎನ್ನುವುದು ಬಹಿರಂಗ ಸತ್ಯ.ಯುದ್ಧದಲ್ಲಿ ಸೋತಸೈನಿಕರನ್ನು ಸೆರೆಹಿಡಿದು ತರುವಂತೆ ಅಲ್ಪಸ್ವಲ್ಪ ಬುದ್ಧಿ ಇರುವವರನ್ನೇ ‘ ಒತ್ತೆಯಾಳು ಬುದ್ಧಿಜೀವಿಗಳು’ ಎಂದು ಘೋಷಿಸುತ್ತವೆ ರಾಜಕೀಯ ಪಕ್ಷಗಳು ಅವರುಗಳನ್ನು ವಿಧಾನಪರಿಷತ್ತು,ರಾಜ್ಯಸಭೆಗೆ ಆರಿಸಿಕಳಿಸುವ ಮೂಲಕ.ಇಂತಹ ಬುದ್ಧಿವಂತರಾಜಕಾರಣಿಗಳು ‘ ವಿಶೇಷಬುದ್ಧಿವಂತರ’ ಲ್ಲವೆ? ಬ್ರಹ್ಮನೇ ರಾಜಕಾರಣಿಗಳಿಗೆ ವಿಶೇಷ ವರ ಒಂದನ್ನು ಇತ್ತಂತೆ ಕಾಣಿಸುತ್ತದೆ.ಯಾರಿಗೂ ಒಲಿಯದ,ಸಮಯ – ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ‘ ಸಮಯೋಚಿತ ಬುದ್ಧಿ’ ರಾಜಕಾರಣಿಗಳಿಗೆ ಮಾತ್ರ ಸೀಮಿತ ಎನ್ನಬಹುದು.

ಇಷ್ಟೆಲ್ಲ ವಿಶೇಷಗಳಿದ್ದರೂ ರಾಜಕಾರಣಿಗೆ ‘ ಸ್ವಂತಬುದ್ಧಿ’ ಇರುವುದಿಲ್ಲ ಎಂದು ಕೆಲವರು ಆಕ್ಷೇಪಿಸುವುದು ಕಾಲಮಾನದ ವಿಪರೀತವೇ ಸರಿ.ಸದನಗಳಲ್ಲಿ ಪ್ರಶ್ನೆ ಕೇಳುವಾಗ ರಾಜಕಾರಣಿಗಳಿಗೆ ‘ ಸ್ವಂತಬುದ್ಧಿ’ ಇದೆಯೇ ಎನ್ನುವ ಅನುಮಾನ ಕಾಡುವುದು ಸಹಜ ಕೆಲವು ಸಂದರ್ಭಗಳಲ್ಲಿ.ಸದನಗಳಲ್ಲಿ ಕೆಲವರು ತಮ್ಮ ಕ್ಷೇತ್ರದ ಜನತೆಯ ಸಮಸ್ಯೆಗಳಿಗಿಂತ ಹೆಚ್ಚಾಗಿ ಸರಕಾರಿ ನೌಕರರ ಬಡ್ತಿಯಂತಹ ಸೇವಾವಿಷಯಗಳ ಪ್ರಶ್ನೆ ಕೇಳುತ್ತಾರೆ.ಅದೂ ಅವರ ‘ ಬುದ್ಧಿವಂತಿಕೆ’ ಯೇ ಹೊರತು ದಡ್ಡತನವಲ್ಲ.ತಮ್ಮವರನ್ನು, ಸ್ವಜನರನ್ನು,ತಮಗೆ ಬೇಕಾದ ಜನರನ್ನು ಉದ್ಧರಿಸುವಷ್ಟು ಸಾರ್ವಜನಿಕ ಬದ್ಧತೆಯಾದರೂ ಬೇಡವೆ? ಕೆಲವು ಜನ ‘ ಬುದ್ಧಿವಂತ ರಾಜಕಾರಣಿಗಳು’ ಇದ್ದಾರೆ.ಸದನ ಮುಕ್ತಾಯವಾಗುವ ಸಂದರ್ಭದಲ್ಲಿ ಅವಸರವಸರವಾಗಿ ಚರ್ಚೆಗೆ ಅವಕಾಶ ಇಲ್ಲದಂತೆ ಮಸೂದೆ ಮಂಡಿಸಿ ಶಾಸನಮಾಡುವ ‘ ಬುದ್ಧಿಯಬೆಲೆ’ ಯನ್ನರಿತ ರಾಜಕಾರಣಿಗಳು ಅವರು.ಸರಕಾರದ ಮುಖ್ಯಭಾಗವಾಗಿರುವ ಐಎಎಸ್ ಅಧಿಕಾರಿಗಳು ತಮ್ಮನ್ನು ತಾವು ‘ ಧರೆಯಮೇಲಿನ ವಿಶೇಷ ಬುದ್ಧಿವಂತರು’ , ‘ ಸ್ವರ್ಗದಿಂದ ಧರೆಗಿಳಿದ ಅಪ್ರತಿಮ ಬುದ್ಧಿವಂತರು’ ಎಂದುಕೊಳ್ಳುತ್ತಾರಾದರೂ ಸರಕಾರಿ ಸೇವೆಯಲ್ಲಿ ‘ ಬುದ್ಧಿವಂತರಿಗೆ ಬೆಲೆ’ ಇದೆ ಎನ್ನುವುದನ್ನು ಹೈಕೋರ್ಟಿನ ಹಾಲಿ ನ್ಯಾಯಾಧೀಶರ ನೇತೃತ್ವದ ‘ ಸತ್ಯಶೋಧನಾ ಸಮಿತಿ’ ಯಿಂದ ಕಂಡುಕೊಳ್ಳಬೇಕಾದ ಸಂಗತಿ ಎನ್ನುವುದು ನಿರ್ವಿವಾದದ ವಿಷಯ.ಸರಕಾರಿ ಸೇವೆಯಲ್ಲಿ ಯಶಸ್ವಿಯಾಗಲು ‘ ಎತ್ತು ಈಯಿತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟು’ ಎನ್ನುವಷ್ಟು ಬುದ್ಧಿ ಇದ್ದರೆ ಸಾಕು ! ಬುದ್ಧಿವಂತಿಕೆ,ಪ್ರಾಮಾಣಿಕತೆ ಮತ್ತು ದಕ್ಷತೆಗಳು ಎನ್ನುವ ಸೇವಾಮೌಲ್ಯಗಳನ್ನು ಸರಕಾರಿ ಸೇವೆಯಲ್ಲಿ ‘ ಸಲ್ಲದ ನಾಣ್ಯಗಳು’ ಎಂದು ವಸ್ತುಸಂಗ್ರಹಾಲಯಕ್ಕೆ ರವಾನಿಸಿದ್ದಾರೆ ಅವುಗಳನ್ನು.

About The Author