ಮೂರನೇ ಕಣ್ಣು : ಮುಖ್ಯಮಂತ್ರಿ ಸಿದ್ರಾಮಯ್ಯನವರು ‘ ಗ್ಯಾರಂಟಿ ಕಾರ್ಡ್’ ಗಳಿಗೆ ಸಹಿ ಮಾಡಿದ್ದು ‘ ಚುನಾವಣಾ ಭ್ರಷ್ಟಾಚಾರವಲ್ಲ : ಮುಕ್ಕಣ್ಣ ಕರಿಗಾರ

ಮುಖ್ಯಮಂತ್ರಿ ಸಿದ್ರಾಮಯ್ಯನವರು ಚುನಾವಣಾ ಪೂರ್ವದಲ್ಲಿ ಗ್ಯಾರಂಟಿಗಳಿಗೆ ಸಹಿ ಮಾಡುವ ಮೂಲಕ ‘ ಮತದಾರರಿಗೆ ಆಮಿಷ ಒಡ್ಡಿದ್ದು ಅವರು ಚುನಾವಣೆಯಲ್ಲಿ ಗೆದ್ದದ್ದು ಅಕ್ರಮ ಎಂದು ಘೋಷಿಸಬೇಕು” ಎಂದು ಕೆ.ಎಂ.ಶಂಕರ ಎನ್ನುವವರು ಹೈಕೋರ್ಟ್ ಮೆಟ್ಟಿಲೇರಿದ್ದು ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಜುಲೈ 28 ರಂದು ನಿಗದಿಪಡಿಸಿದೆ.ಕೆ.ಎಂ.ಶಂಕರ ಎನ್ನುವವರು ಪ್ರಜಾಪ್ರತಿನಿಧಿಗಳ ಕಾಯ್ದೆ 1950 ರ ನಿಯಮ 123(1) ರಂತೆ ಸಿದ್ರಾಮಯ್ಯನವರು ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಐದು ಗ್ಯಾರಂಟಿಗಳ ಆಮಿಷವನ್ನು ಒಡ್ಡಿದ್ದು ಅದು ಮತದಾರರ ಮೇಲೆ ಪ್ರಭಾವ ಬೀರಿದ್ದರಿಂದ ಸಿದ್ರಾಮಯ್ಯನವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾಪ್ರತಿನಿಧಿ ಕಾಯ್ದೆ1950 ರಂತೆ ರೂಪಿಸಲಾದ ನಿಯಮಗಳ ನಾಲ್ಕನೇ ವಿಭಾಗವು Corrupt Practices and Electoral Offences”ಎನ್ನುವ ಭಾಗದ ಮೊದಲ ಅಧ್ಯಾಯವು Corrupt Practices ಗಳ ಬಗ್ಗೆ ವಿವರಿಸುತ್ತದೆ.ನಿಯಮ 123(1) “Bribery”, that is to say–(A) “any gift,offer or promise by a candidate or his agent or by any other person with the consent of a candidate or his election agent of any gratification ,to any person whomsoever ,with the object,directly or indirectly of inducing–
(a) a person to stand or not to stand as, or to withdraw or not to withdraw from being a candidate at an election,or
( b) an elector to vote or refrain from voting at an election,or as a reward to–”
ಎಂದು ಕೆಲವು ಸಂಗತಿಗಳನ್ನು ಹೆಸರಿಸುತ್ತದೆ ಲಂಚ ಇಲ್ಲವೆ ಆಮಿಷದ ಅರ್ಥ ವ್ಯಾಪ್ತಿಯಲ್ಲಿ.ಕೆ.ಎಂ.ಶಂಕರ ಎನ್ನುವವರು ಸಿದ್ರಾಮಯ್ಯನವರ ವಿರುದ್ಧ ಉದ್ದೇಶಪೂರ್ವಕವಾಗಿ ಈ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.ಸಿದ್ರಾಮಯ್ಯನವರು ಚುನಾವಣಾ ಪೂರ್ವದಲ್ಲಿ ಒಬ್ಬ ವ್ಯಕ್ತಿಯಾಗಿ ಇಲ್ಲವೆ ವರುಣಾ ಕ್ಷೇತ್ರದ ಅಭ್ಯರ್ಥಿ ಮಾತ್ರರಾಗಿ ಗ್ಯಾರಂಟಿ ಕಾರ್ಡುಗಳಿಗೆ ಸಹಿ ಮಾಡಿಲ್ಲ.ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕರಾಗಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಘೋಷಣೆಗಳ ಗ್ಯಾರಂಟಿ ಕಾರ್ಡುಗಳಿಗೆ ಸಹಿ ಮಾಡಿದ್ದಾರೆ.ರಾಜಕೀಯ ಪಕ್ಷಗಳು ಘೋಷಿಸುವ ಉಚಿತಕೊಡುಗೆಗಳು ,ಗ್ಯಾರಂಟಿಗಳು ಚುನಾವಣಾ ಆಮಿಷದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ 2022 ರಲ್ಲೇ ತೀರ್ಪನ್ನು ನೀಡಿದೆ.ಹಾಗಾಗಿ ಸಿದ್ರಾಮಯ್ಯನವರ ವಿರುದ್ಧದ ಈ ಪ್ರಕರಣವು ಹೈಕೋರ್ಟಿನಲ್ಲಿ ನಿಲ್ಲುವುದಿಲ್ಲ.

ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಘೋಷಿಸುವ ಉಚಿತಕೊಡುಗೆಗಳು( Freebies)ತೆರಿಗೆದಾರರ ಬೊಕ್ಕಸಕ್ಕೆ ಹೊರೆ ಅದನ್ನು ನಿರ್ಬಂಧಿಸಿ ಆದೇಶಿಸಬೇಕು ಎಂದು ಬಿಜೆಪಿಯ ಧುರೀಣ ಮತ್ತು ವಕೀಲರಾದ ಅಶ್ವಿನಿ ಉಪಾಧ್ಯಾಯರು ಸುಪ್ರೀಂಕೋರ್ಟಿನ ಮೊರೆಹೋಗಿದ್ದರು.ಸುಪ್ರೀಂಕೋರ್ಟಿನ ಮುಖ್ಯನ್ಯಾಯಾಧೀಶರಾಗಿದ್ದ ಎನ್ .ವಿ.ರಮಣ ಅವರ ನೇತೃತ್ವದ‌ ಮೂವರು ನ್ಯಾಯಮೂರ್ತಿಗಳ ಪೀಠವು ‘ ರಾಜಕೀಯ ಪಕ್ಷಗಳು ಮತದಾರರಿಗೆ ನೀಡುವ ಆಮಿಷಗಳು ಚುನಾವಣಾ ಭ್ರಷ್ಟಾಚಾರದ ವ್ಯಾಪ್ತಿಯಡಿಯಲ್ಲಿ ಬರುವುದಿಲ್ಲ’ ಎಂದು ತೀರ್ಪು ನೀಡಿದೆ.

ಸುಪ್ರೀಂಕೋರ್ಟಿನ ಮುಖ್ಯನ್ಯಾಯಾಧೀಶರಾಗಿದ್ದ ಎನ್.ವಿ.ರಮಣ ಅವರ ನೇತೃತ್ವದ ಪೀಠವು ಈ ಹಿಂದೆ ಸುಪ್ರೀಂಕೋರ್ಟಿನ ಇಬ್ಬರು ನ್ಯಾಯಾಧೀಶರುಗಳ ಪೀಠವು ಸುಬ್ರಹ್ಮಣಿಯನ್ ಬಾಲಾಜಿ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಅವಗಾಹಿಸಿ, ಈ ತೀರ್ಪು ನೀಡಿದೆ.ತಮಿಳುನಾಡು ವಿಧಾನಸಭೆಗೆ 2006 ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿ.ಎಂ.ಕೆ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಬಣ್ಣದ ಟಿ ವಿ ಇಲ್ಲದ ಕುಟುಂಬಗಳಿಗೆ ಉಚಿತವಾಗಿ ಬಣ್ಣದ ಟಿ.ವಿ.ಗಳನ್ನು ಕೊಡುವುದಾಗಿ ಚುನಾವಣಾ ಭರವಸೆ ನೀಡಿತ್ತು.ಅದರಂತೆ ಡಿ.ಎಂ.ಕೆ ಪಕ್ಷವು ಅಧಿಕಾರಕ್ಕೆ ಬಂದಿತ್ತು ಹಾಗೂ ಮತದಾರರಿಗೆ ಬಣ್ಣದ ಟಿ.ವಿ.ಗಳನ್ನು ಉಚಿತವಾಗಿ ನೀಡಲು ಬಜೆಟಿನಲ್ಲಿ 750 ಕೋಟಿಗಳ ಅನುದಾನ ಒದಗಿಸಿತ್ತು.ಆ ಬಳಿಕ ತಮಿಳುನಾಡಿನಲ್ಲಿ ನಡೆದ 2011 ರ ವಿಧಾನಸಭಾ ಚುನಾವಣೆಯಲ್ಲಿ ಎ.ಐ.ಎ.ಡಿ.ಎಂ.ಕೆ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಮತದಾರರಿಗೆ ಉಚಿತವಾಗಿ ಮಿಕ್ಸರ್ಗಳು,ಗ್ರೈಂಡರ್ಗಳು,ವಿದ್ಯುತ್ ಫ್ಯಾನ್ಗಳು,ಕಂಪ್ಯೂಟರ್ ಲ್ಯಾಪ್ ಟಾಪ್ ಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಡಿ.ಎಂ.ಕೆ ಪಕ್ಷವು ಮತ್ತಷ್ಟು ಉಚಿತ ಕೊಡುಗೆಗಳ ಭರವಸೆ ನೀಡಿತ್ತು.ಎ.ಐ.ಎ.ಡಿ.ಎಂ.ಕೆ ಪಕ್ಷವು ಅಧಿಕಾರಕ್ಕೆ ಬಂದಿತ್ತು.ಡಿ.ಎಂ.ಕೆ ಮತ್ತು ಎ.ಐ.ಡಿ.ಎಂ.ಕೆ ಪಕ್ಷಗಳು ಉಚಿತಕೊಡುಗೆಗಳನ್ನು ಘೋಷಿಸಿ ಮತದಾರರ ಮೇಲೆ ಪ್ರಭಾವ ಬೀರಿ ಚುನಾವಣೆ ಗೆಲ್ಲುತ್ತಿವೆಯಾದ್ದರಿಂದ ಉಚಿತಕೊಡುಗೆಗಳನ್ನು ನಿರ್ಬಂಧಿಸಿ ಆದೇಶಿಸಬೇಕು ಎಂದು‌ ಸುಬ್ರಹ್ಮಣಿಯನ್ ಬಾಲಾಜಿ ಕೋರ್ಟ್ ಮೆಟ್ಟಿಲೇರಿದ್ದರು.ಈ ಪ್ರಕರಣವನ್ನು ಆಲಿಸಿದ್ದ ಸುಪ್ರೀಂಕೋರ್ಟಿನ ಇಬ್ಬರು ನ್ಯಾಯಾಧೀಶರ ಪೀಠವು ರಾಜ್ಯವು ಸಂವಿಧಾನದ ರಾಜ್ಯನೀತಿ ನಿರ್ದೇಶಕ ತತ್ತ್ವಗಳಡಿ ಅರ್ಹರಿರುವ ಮತ್ತು ಅವಶ್ಯಕತೆ ಇರುವ ಜನರಿಗೆ ಕಲ್ಯಾಣ ಯೋಜನೆಗಳನ್ನು ಪ್ರಕಟಿಸುವ ಹಕ್ಕು ಹೊಂದಿರುವುದರಿಂದ ಕೋರ್ಟಿನ ಮಧ್ಯಪ್ರವೇಶ ಅಗತ್ಯವಿಲ್ಲ ಎಂದು ತೀರ್ಪು ನೀಡಿತ್ತು.

ಸುಬ್ರಹ್ಮಣಿಯನ್ ಬಾಲಾಜಿ‌ ಪ್ರಕರಣದ ತೀರ್ಪಿನ ಪರಿಶೀಲನೆಯೊಂದಿಗೆ ‘ ರಾಜಕೀಯ ಪಕ್ಷಗಳು ಘೋಷಿಸುವ ಉಚಿತಕೊಡುಗೆಗಳು ಚುನಾವಣಾ ಭ್ರಷ್ಟಾಚಾರದ ವ್ಯಾಪ್ತಿಗೆ‌ ಒಳಪಡುವುದಿಲ್ಲ’ ಎಂದು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ತೀರ್ಪು ನೀಡಿದೆ.ನ್ಯಾಯಾಲಯದ ತೀರ್ಪಿನ ನಿರ್ಣಾಯಕ ಸಾಲುಗಳು ” ಪ್ರಜಾಪ್ರಭುತ್ವದಲ್ಲಿ ಮತದಾರರೇ ಅಂತಿಮ ನಿರ್ಣಾಯಕರಾಗಿದ್ದು ಅವರು ತಮಗೆ ಸರಿಕಂಡ ಪಕ್ಷವನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದ್ದಾರೆ ಮತ್ತು ತಮ್ಮ ಆಶೋತ್ತರಗಳು ಈಡೇರಿಸಲು ವಿಫಲವಾದ ರಾಜಕೀಯ ಪಕ್ಷವನ್ನು ಅಧಿಕಾರದಿಂದ ಕಿತ್ತೆಸೆಯುವ ಸ್ವಾತಂತ್ರ್ಯ ಪಡೆದಿದ್ದಾರೆ”.

About The Author