ಶರಣತತ್ತ್ವ ಚಿಂತನೆ –೦೩ : ಗುರುವನ್ನಾಗಲಿ ದೇವರನ್ನಾಗಲಿ ಪರೀಕ್ಷಿಸದೆ ಒಪ್ಪಬಾರದು !  : ಮುಕ್ಕಣ್ಣ ಕರಿಗಾರ

ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನಚಳುವಳಿಯ ಸಂದರ್ಭದಲ್ಲಿ ಹೊರಹೊಮ್ಮಿದ ಶಿವಾತ್ಮಚೇತನರುಗಳಾದ ಶರಣರನೇಕರ ಜೀವನ ವೃತ್ತಾಂತ ಲಭ್ಯವಾಗಿಲ್ಲ ಇಂದಿಗೂ.ಬಸವಣ್ಣ,ಚೆನ್ನಬಸವಣ್ಣ,ಅಲ್ಲಮಪ್ರಭು,ಅಕ್ಕಮಹಾದೇವಿ,ಸಿದ್ಧರಾಮರಂತಹ ಪ್ರಮುಖ ವಚನಕಾರರು ಮತ್ತು ಕೆಲವು ಜನ ಹಿರಿಯ ವಚನಕಾರರ ಬಗೆಗಷ್ಟೇ ಆಸಕ್ತರಾಗಿ ಅವರ ಬಗ್ಗೆ ಲೇಖನ,ಪುಸ್ತಕಗಳನ್ನು ಬರೆಯುವ ,ಸಂಶೋಧನೆಗಳನ್ನು ಕೈಕೊಳ್ಳುವ ಸಂಶೋಧನಾಸಕ್ತರುಗಳು ಉತ್ತಮವಚನಗಳನ್ನು ರಚಿಸಿಯೂ ಅಜ್ಞಾತರಾಗಿಯೇ ಉಳಿದ ವಚನಕಾರರ ಬಗ್ಗೆ ಸಂಶೋಧನಾಸಕ್ತಿ ತಳೆಯುವುದಿಲ್ಲ.ಆದರೆ ಅಂತಹ ವಚನಕಾರರು ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಸಣ್ಣದೇನಲ್ಲ.ಬೆಳಕಿಗೆ ಬಾರದ ಸತ್ವಯುತ ವಚನಕಾರರಲ್ಲೊಬ್ಬರು ಅಂಗಸೋಂಕಿನ ಲಿಂಗತಂದೆಗಳು.ಭೋಗಬಂಕೇಶ್ವರಲಿಂಗದ ಅಂಕಿತದಲ್ಲಿ ವಚನಗಳನ್ನು ಬರೆದಿರುವ ಅಂಗಸೋಂಕಿನ ಲಿಂಗತಂದೆಗಳ ಹನ್ನೊಂದು ವಚನಗಳು ಉಪಲಬ್ಧವಾಗಿವೆ.

ಅಂಗಸೋಂಕಿನ ಲಿಂಗತಂದೆಗಳು ಬಸವಾದಿ ಶರಣರ ಪ್ರಭಾವಕ್ಕೆ ಒಳಗಾಗಿಯೂ ಸ್ವತಂತ್ರಮತಿಗಳಾಗಿದ್ದ ಶರಣರು,ವಚನಕಾರರು.ಇತರ ವಚನಕಾರರಂತೆ ಗುರು ಲಿಂಗ ಜಂಗಮವಾದಿ ತತ್ತ್ವಗಳ ಬಗ್ಗೆ ಹೆಚ್ಚು ಚರ್ಚಿಸದೆ ಸಮಾಜಮುಖಿಯಾಗಿ ಚಿಂತಿಸುವ ಅಂಗಸೋಂಕಿನ ಲಿಂಗತಂದೆಗಳು ಗುರು ಲಿಂಗ ಜಂಗಮವನ್ನಾದರೂ ಪರೀಕ್ಷಿಯೇ ಒಪ್ಪಬೇಕು,ಪರೀಕ್ಷಿಸದೆ ಯಾವುದನ್ನು ಒಪ್ಪಬಾರದು ಎನ್ನುತ್ತಾರೆ.ಆಧ್ಯಾತ್ಮಿಕ ಪಥದಲ್ಲಿ,ಶಿವಪಥದಲ್ಲಿ ನಡೆಯುವವರಿಗೆ ಇಂತಹ ನಿಶ್ಚಲ,ನಿರ್ವಿಕಾರ ಬುದ್ಧಿಯು ಅವಶ್ಯಕವಾಗಿ ಬೇಕು.ಗುರುವೆಂದು ಜಡದೇಹಿಗಳನ್ನು ಆಶ್ರಯಿಸಲಾಗದು,ಲಿಂಗವೆಂದು ಶಕ್ತಿಹೀನ ಕಳಾಹೀನ ಲಿಂಗಗಳನ್ನು ಪೂಜಿಸಲಾಗದು,ಪೃಥ್ವಿಯಾದಿ ಪಂಚಭೂತಗಳ ಗುಣಗಳನ್ನಳಿದುಕೊಂಡು ,ಪ್ರಕೃತಿಯ ಮೇಲೆ ಪ್ರಭುತ್ವವನ್ನು ಪಡೆಯದ ವ್ಯಕ್ತಿಯನ್ನು ಜಂಗಮ ಎಂದು ಪರಿಗಣಿಸಲಾಗದು ಎನ್ನುವ ಅಂಗಸೋಂಕಿನ ಲಿಂಗತಂದೆಗಳ ಒಂದು ವಚನ ;

ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ ?
ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ ತಾನೆ ಬೆಳಗಬಲ್ಲುದೆ ?
ಆ ತೆರನಂತೆ ಕುಟಿಲನ ಭಕ್ತಿ,ಕಿಸುಳನ ವಿರಕ್ತಿ
ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು.
ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿಯಲ್ಲದೆ
ನಿಶ್ಚಯವನರಿಯಬಾರದು.
ಗುರುವಾದಡೂ ಲಿಂಗವಾದಡೂ ಜಂಗಮವಾದಡೂ
ಪರೀಕ್ಷಿಸಿ ಹಿಡಿಯದವನ ಭಕ್ತಿ,ವಿರಕ್ತಿ
ತೂತಕುಂಭದಲ್ಲಿಯ ನೀರು,ಸೂತ್ರ ತಪ್ಪಿದ ಬೊಂಬೆ,ನಿಜನೇತ್ರ ತಪ್ಪಿದ ದೃಷ್ಟಿ;
ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ ?
ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು
ಭೋಗಬಂಕೇಶ್ವರಲಿಂಗದ ಸಂಗದ ಶರಣನ ಸುಖ.

ಮರದೊಳಗೆ ಕಿಚ್ಚು ಇದೆ,ಆದರೆ ಮರದೊಳಗಿನ ಬೆಂಕಿ ತನ್ನಿಂದ ತಾನೇ ಹೊತ್ತಿ ಉರಿಯದು.ಕಲ್ಲಿನೊಳಗೆ ಬೆಂಕಿಯ ಬೆಳಕು ಇದೆ,ಆದರೆ ಕಲ್ಲಿನೊಳಗಿನ ಆ ಬೆಳಕು ತನ್ನಿಂದ ತಾನೆ ಹೊಳೆಯದು.ಕುಟಿಲವ್ಯಕ್ತಿಯ ಭಕ್ತಿ ಮತ್ತು ತುಚ್ಛಜೀವಿಯ ವಿರಕ್ತಿ ವ್ಯರ್ಥ.ಕುಟಿಲವ್ಯಕ್ತಿ ಮತ್ತು ತುಚ್ಛ ವಿರಕ್ತ ತಾವು ಭಕ್ತ,ವಿರಕ್ತ ಎಂದು ಹೇಳಿಕೊಳ್ಳುತ್ತಾರಾಗಲಿ ಜನರು ಅವರನ್ನು ಪರೀಕ್ಷಿಸಿಲ್ಲ.ಪರೀಕ್ಷಿಸದೆ ಅವರಾಡುವ ಹುಸಿ ಮಾತುಗಳಿಂದ ಕುಟಿಲರು,ತುಚ್ಛರುಗಳನ್ನು ನಂಬುವುದು ಬುದ್ಧಿವಂತಿಕೆಯಲ್ಲ.ಮರ ಮತ್ತು ಕಲ್ಲನ್ನು ಮಥಿಸಿಯಲ್ಲದೆ ಅವುಗಳ ಒಳಗಣ ಬೆಂಕಿಯು ಹೊರಬರದು.ಮಥಿಸಿದಾಗ ಮಾತ್ರ ಸತ್ಯವಾವುದು,ಅಸತ್ಯವಾವುದು ಎಂದು ಗೊತ್ತಾಗುತ್ತದೆ.ಹಾಗೆಯೇ ಒಬ್ಬನು ಡಾಂಬಿಕ ಭಕ್ತನೋ ನಿಜಭಕ್ತನೋ ಎನ್ನುವುದು ಅವನನ್ನು ಪರೀಕ್ಷಿಸಿದ ಬಳಿಕವಷ್ಟೇ ಸಿದ್ಧವಾಗುತ್ತದೆ.ಬರಿಯ ಬಾಯಿಂದ ವಿರಕ್ತಿಯನ್ನು ಬೊಗಳುವ ವ್ಯಕ್ತಿಯು ನಿಜವಾಗಿಯೂ ವಿರಕ್ತನು ಅಹುದೆ ಅಲ್ಲವೆ ಎಂಬುದು ಅವನನ್ನು ಪರೀಕ್ಷಿಸಿದರೆ ಮಾತ್ರ ಗೊತ್ತಾಗುತ್ತದೆ.ಪರೀಕ್ಷಿಸದೆ ಯಾರನ್ನೂ ಭಕ್ತರು,ಹಿರಿಯರು ಎಂದು ಒಪ್ಪಬಾರದು.ಗುರುವಾದರೇನು ಲಿಂಗವಾದರೇನು ಜಂಗಮವೇ ಆದರೇನು ಅವರನ್ನು ಪರೀಕ್ಷಿಸಿಯೇ ಒಪ್ಪಬೇಕು.ಸತ್ವ ಇದೆ,ತತ್ತ್ವ ಇದೆ ಎಂದರೆ ಮಾತ್ರ ಗುರು ಲಿಂಗ ಜಂಗಮಗಳನ್ನು ಒಪ್ಪಿ,ಆಶ್ರಯಿಸಬೇಕು.ಪರೀಕ್ಷಿಸದೆ ಹೆಡ್ಡನಾಗಿ ಗುರು ಲಿಂಗ ಜಂಗಮ ಎಂದು ಒಪ್ಪುವವನ ಭಕ್ತಿ ತೂತುಳ್ಳ ಕೊಡದಲ್ಲಿ ನೀರ ಹಿಡಿದಿಟ್ಟಂತೆ,ಸೂತ್ರತಪ್ಪಿದ ಗೊಂಬೆ ಕುಣಿಯದಂತೆ,ಕೆಟ್ಟದರತ್ತ ಹಾಯುವ ಉದ್ದೇಶತಪ್ಪಿದ ಕಣ್ಣ ನೋಟದಂತೆ ವ್ಯರ್ಥವೆನ್ನುವ ಅಂಗಸೋಂಕಿನ ಲಿಂಗತಂದೆಗಳು ನಿಜವನ್ನಾರೈದು ನೋಡದ ಭಕ್ತಿ ಬುಡಮೇಲಾಗಿ ಬಿದ್ದ ಮರಕ್ಕೆ ನೀರೆರೆದಂತೆ ನಿಷ್ಪ್ರಯೋಜಕ ಎಂದು ಸೊಗಸಾಗಿ ಹೇಳಿದ್ದಾರೆ.ಭಾವಶುದ್ಧಿಯೇ ದೇವನೊಲುಮೆಯ ಸಾಧನವಾದ್ದರಿಂದ ಪರೀಕ್ಷಿಸಿ ಪರಮಾತ್ಮನನ್ನು ಒಪ್ಪುವ ಭಕ್ತನು ಪರಶಿವನ ಆಶ್ರಯದಲ್ಲಿ ಸುಖಿಯಾಗಿಪ್ಪನು ಎನ್ನುತ್ತಾರೆ ಅಂಗಸೋಂಕಿನ ಲಿಂಗ ತಂದೆಗಳು.

ವಿಚಾರಶಕ್ತಿಯನ್ನು ಪ್ರಚೋದಿಸುವ ಅಂಗಸೋಂಕಿನ ಲಿಂಗತಂದೆಗಳ ಈ ವಚನವು ಕನ್ನಡ ವಚನ ವಾಙ್ಞ್ಮಯದೊಳಗೊಂದು ಮಹತ್ವದ ವಚನವು.ಗುರುವೆಂದು ಲಿಂಗವೆಂದು ಜಂಗಮವೆಂದು ಸುಮ್ಮನೆ ಒಪ್ಪಿ ಅಂಧತ್ವವನ್ನಾಚರಿಸುವ ಬದಲು ಅವುಗಳನ್ನು ಪರೀಕ್ಷಿಸಿಯೇ ಒಪ್ಪಬೇಕು,ಪರೀಕ್ಷಿಸಿ ಸತ್ವವು ದೃಢಪಟ್ಟರೆ ಅದೇ ತತ್ತ್ವ ಎಂದಪ್ಪಬೇಕು ಎನ್ನುವ ಈ ವಚನವು ಬಸವಣ್ಣನವರ ಮುಗ್ಧಭಕ್ತಿಯು ಸರ್ಮಸಮ್ಮತವಲ್ಲ ಎನ್ನುವ ಅರ್ಥವನ್ನು ವ್ಯಕ್ತಪಡಿಸುತ್ತಿದೆ.ಬಸವಣ್ಣನವರು ವೇಷಲಾಂಛನಧಾರಿಗಳೆಲ್ಲರನ್ನೂ ಶಿವಸ್ವರೂಪಿಗಳು,ಗುರುಗಳು,ಲಿಂಗಮೂರ್ತಿಗಳು ಮತ್ತು ಜಂಗಮರು ಎಂದು ಒಪ್ಪಿ,ಆರಾಧಿಸುತ್ತಿದ್ದರು ಶಿವಭಕ್ತಿಮುಗ್ಧತೆಯಿಂದ.ಕಪಟಜೀವಿಗಳನ್ನು ಶರಣರೆನ್ನುವ ಬಸವಣ್ಣನವರ ಮುಗ್ಧಭಕ್ತಿಯು ಸರಿ ಅಲ್ಲ ಎನ್ನಿಸಿತ್ತು ಕೆಲವು ಜನ ವಚನಕಾರರುಗಳಿಗೆ.ಬಸವಣ್ಣನವರ ಮುಗ್ಧಭಕ್ತಿ ವಿಪರೀತ ಎಂದು ತಿಳಿದ ವಿಚಾರವಂತ ವಚನಕಾರರಲ್ಲೊಬ್ಬರು ಅಂಗಸೋಂಕಿನ ಲಿಂಗತಂದೆಗಳು.ಅವರ ಈ ವಚನವೇ ಅವರ ವೈಚಾರಿಕ ನಿಲುವಿಗೆ ಸಾಕ್ಷಿ.

‘ ಗುರುತ್ವ’ ವನ್ನು ಸರ್ಟಿಫಿಕೇಟ್ ನಿಂದ ಸಂಪಾದಿಸಲಾಗದು.ಗುರುವೆಂದು ಹೇಳಿಕೊಂಡು ತಿರುಗುವವರೆಲ್ಲ ಗುರುಗಳಲ್ಲ.ಜಾತಿ,ಮನೆತನಗಳಿಂದಲೂ ಗುರುತ್ವವು ಸಿದ್ಧಿಸದು.ಸಾಧನೆಯಿಂದ,ಅರ್ಹತೆಯಿಂದ ಗುರುತ್ವವಲ್ಲದೆ ಹುಟ್ಟಿನಿಂದಾಗಲಿ,ಮನೆತನದಿಂದಾಗಲಿ,ಜಾತಿಯಿಂದಾಗಲಿ ಗುರುಪಟ್ಟವು ದೊರೆಯದು.ಕರಣೇಂದ್ರಿಯಗಳ ಅವಗುಣಗಳನ್ನು ಕಳೆದುಕೊಂಡು ಪರಿಶುದ್ಧಾತ್ಮನಾದವನೆ ಗುರು.ಅವಗುಣಗಳನ್ನಳಿದುಕೊಂಡು ಶಿವಗುಣಗಳನ್ನಳವಡಿಸಿಕೊಂಡವನೇ ಗುರು.ಭವಪ್ರಪಂಚದಲ್ಲಿ ಅಭವಶಿವನ ಕರುಣೆಯನ್ನುಂಡವನೇ ಗುರು.ಇಂತಪ್ಪ ಗುರುವನ್ನು ಶಿಷ್ಯನಾದವನು ಪರೀಕ್ಷಿಸಿ ಒಪ್ಪಬೇಕು.ಗುರುತತ್ತ್ವವನ್ನರಿಯದ ಲೋಕದ ಕುನ್ನಿಮಾನವರುಗಳೆಲ್ಲ ಗುರುಗಳಲ್ಲ.ಮನೆತನದಿಂದ ಗುರುಗಳಾದೆವು ಎಂದು ಕೊಚ್ಚಿಕೊಳ್ಳುವ ಕುಲಗುರುಗಳೆಂಬ ಅಜ್ಞಾನಿಗಳು ಗುರುಗಳಲ್ಲ.ಮನೆಮನೆಗೆ ತಿರಿದುಣ್ಣಲು ಬರುವ ತಿರಬೋಕಿಗಳು ಗುರುಗಳಲ್ಲ.ಅಭವ ತತ್ತ್ವಕ್ಕೆ ಅರ್ಥವಾದವನೇ ಗುರುವು.

ಲಿಂಗವು ಅದು ಸ್ಥಾವರಲಿಂಗವಾಗಲಿ ಇಲ್ಲವೆ ಇಷ್ಟಲಿಂಗವಾಗಲಿ ಅದರಲ್ಲಿ ಕಳೆಯು ಸಮನಿಸಿದ್ದಾದರೆ ಮಾತ್ರ ಅದು ಲಿಂಗವು.ಸುಮ್ಮನೆ ಹಮ್ಮಿಗಾಗಿ ಪ್ರತಿಷ್ಠಾಪಿಸಿದ ಶಿವಲಿಂಗವು ಲಿಂಗವಲ್ಲ ಅದರಲ್ಲಿ ಶಿವನ ಚಿತ್ಕಳೆಯು ತೊಳಗಿ ಬೆಳಗದಿದ್ದರೆ.ಇಷ್ಟಲಿಂಗವು ಕರದಲ್ಲಿ ‘ ಚುಳುಕು’ ಆಗದಿದ್ದರೆ ಅದು ಇಷ್ಟಲಿಂಗವಲ್ಲ ಗುರುವು ಅನುಗ್ರಹಿಸಿ ಕೊಟ್ಟರೂ ಸಹ.ಕಳೆ,ಬೆಳಕು ಇದ್ದುದೇ ಲಿಂಗ.

ಅಂಗಗುಣಗಳನ್ನಳಿದು ಲಿಂಗಗುಣವನ್ನಳವಡಿಸಿಕೊಂಡು ಸರ್ವಾಂಗಲಿಂಗಿಯಾದವನೇ ಜಂಗಮ.ಶಿವಸ್ವರೂಪಿಯಾದ ಅಂತಹ ಮಹಾತ್ಮನನ್ನು ಜಂಗಮ ಎಂದು ಒಪ್ಪಬೇಕೇ ಹೊರತು ನಾವು ಜಂಗಮರು ಜಂಗಮರು ಎಂದು ಬರಿದೆ ಕೊಚ್ಚಿಕೊಳ್ಳುವ ಜನರನ್ನು ಜಂಗಮ ಎಂದು ಒಪ್ಪಿಕೊಳ್ಳಬಾರದು.ಜಂಗಮವು ತತ್ತ್ವವೇ ಹೊರತು ಜಾತಿಯಲ್ಲ.ಹುಟ್ಟಿನಿಂದ,ಜಾತಿಯಿಂದ ಯಾರೂ ಜಂಗಮರಾಗಲಾರರು.ಬಸವಣ್ಣನಾದಿ ಶರಣರು ಅಲ್ಲಮಪ್ರಭುದೇವರನ್ನು ಮಾತ್ರ ಜಂಗಮ ಎಂದು ಒಪ್ಪಿದ್ದರಲ್ಲದೆ ಅಯ್ಯಗಳ ಜಾತಿಯ ಜನರನ್ನು ಜಂಗಮರು ಎಂದು ಒಪ್ಪಿರಲಿಲ್ಲ ಎನ್ನುವುದನ್ನು ಮತಿಭ್ರಾಂತರು ಅರ್ಥಮಾಡಿಕೊಳ್ಳಬೇಕು.ಅಲ್ಲಮಪ್ರಭು ಸಾಧನೆಯಿಂದ,ಸಿದ್ಧಿಯಿಂದ,ತಪೋಬಲದಿಂದ ಜಂಗಮರಾದರು,ಶೂನ್ಯತತ್ತ್ವವನ್ನು ಅಳವಡಿಸಿಕೊಂಡು ಶೂನ್ಯಸಿಂಹಾಸನಾಧೀಶ್ವರರು ಆದರು.ನಿರಂಜನತ್ವವನ್ನು ಒಳಕೊಳ್ಳದ ಯಾರೂ ಜಂಗಮರಲ್ಲ.

ಗುರು ಲಿಂಗ ಜಂಗಮವನ್ನು ಪರೀಕ್ಷಿಸಿಯೇ ಅವುಗಳಲ್ಲಿ ಸತ್ಯ ಮತ್ತು ಸತ್ವ ಇದ್ದರೆ ಮಾತ್ರ ಒಪ್ಪಬೇಕು ಎನ್ನುವ ಅಂಗಸೋಂಕಿನ ಲಿಂಗತಂದೆಗಳ ವಚನವು ಸಂಪ್ರದಾಯಶರಣರ ಬುದ್ಧಿ ವೈಕಲ್ಯಕ್ಕೆ ಮದ್ದು ಆಗಿದೆ.ಸತ್ವಹೀನರನ್ನು ತತ್ತ್ವಹೀನರನ್ನು‌ ಒಪ್ಪಬಾರದು,ಗೌರವಿಸಬಾರದು ಎನ್ನುವ ಸಾರ್ವಕಾಲಿಕ ಸತ್ಯವಾದ ಮಾತು.ಆದರೆ ಮನುಷ್ಯರ ಮಂದ ಬುದ್ಧಿಯಿಂದಾಗಿ ಅಸತ್ಯವು ಸತ್ಯದಂತೆ ಮೆರೆಯುತ್ತದೆ,ಸತ್ವಹೀನರು ಸತ್ವಶೀಲರಂತೆ ಮೆರೆಯುತ್ತಿದ್ದಾರೆ,ತತ್ತ್ವಹೀನರು ಮಹಾತಾತ್ವಿಕರುಗಳಂತೆ ಗೌರವಾದರಗಳನ್ನು ಪಡೆಯುತ್ತಿದ್ದಾರೆ.ತೂತುಕೊಡದಲ್ಲಿ ನೀರು ತುಂಬಿಡುವುದು ಮೂರ್ಖತನವಲ್ಲದೆ ಬುದ್ಧಿವಂತಿಕೆಯಲ್ಲ.ತೊಗಲುಬೊಂಬೆಯಾಟದಲ್ಲಿ ಕುಣಿವ ಬೊಂಬೆಯ ಸೂತ್ರವು ಆಟಗಾರನ ಕೈಯಲ್ಲಿ ಇರುತ್ತದೆ.ಸೂತ್ರದ ದಾರದಿಂದ ಡೊಂಬನು ತನ್ನ ಇಷ್ಟದಂತೆ ಬೊಂಬೆಯನ್ನು ಕುಣಿಸುತ್ತಾನೆ.ಸೂತ್ರದ ದಾರವು ಹರಿಯೆ ಬೊಂಬೆಯು ಡೊಂಬನ ಇಚ್ಛೆಯಂತೆ ಕುಣಿಯದು,ಆಡದು.ಯೋಗಸಾಧನೆಯಲ್ಲಿ ಭ್ರೂಮಧ್ಯದಲ್ಲಿ ಲಕ್ಷ್ಯವನ್ನಿರಿಸಿ ದೃಷ್ಟಿನಿಲ್ಲಿಸುವ,ದೃಷ್ಟಿಯನ್ನು ಬಲಿಸುವ ಸಾಧನೆ ಒಂದುಂಟು.ಮೂಗಿನ ತುದಿಯಲ್ಲಿ ದೃಷ್ಟಿಯನ್ನಿಟ್ಟು ಅನಿಮಿಷಸಿದ್ಧಿಯನ್ನು ಪಡೆಯಬೇಕಾದವನು ಅಂಗನೆಯರ ದೇಹದಲ್ಲಿ ಲಕ್ಷ್ಯವನ್ನಿಟ್ಟನಾದರೆ ಅವನು ಭ್ರಮಿತಚಿತ್ತನು,ಲಂಪಟನು ಎಂದರ್ಥ.ಇಂತಹ ವ್ಯರ್ಥಜೀವರುಗಳನ್ನು ಗುರುಗಳು,ಹಿರಿಯರು,ಜಂಗಮರು ಎಂದು ಪೂಜಿಸುವುದು ಬೇರು ಮೇಲುಮಾಡಿಕೊಂಡು ಬಿದ್ದ ಮರಕ್ಕೆ ನೀರೆರದಂತೆ ನಿಷ್ಪ್ರಯೋಜಕ ಸಂಗತಿಯು.ಬೇರು ನೆಲದಾಳದಲ್ಲಿ ಭದ್ರವಿದ್ದರೆ ಮಾತ್ರವು ಮರವು ಪಲ್ಲವಿಸಿ ಬೆಳೆಯಬಲ್ಲದು.ಬೇರು ಸಮೇತ ಕಿತ್ತು ಹಾಕಿದ ಮರದ ಬೇರಿಗೆ ನೀರೆರದರೆ ಫಲವೇನು? ಹಾಗೆಯೇ ಸತ್ವಹೀನರು,ತತ್ತ್ವಹೀನರುಗಳನ್ನು ಗುರುಗಳು,ಪೂಜ್ಯರು,ಜಂಗಮರು ಎಂದು ಒಪ್ಪಬಾರದು,ಅವರಿಗೆ ಮನ್ನಣೆಯನ್ನು ನೀಡಲೂಬಾರದು ಎನ್ನುವ ಅಂಗಸೋಂಕಿನ ಲಿಂಗತಂದೆಗಳ ವಚನವು ತತ್ತ್ವಾಂಧ ಜನತೆಯ ಹುಚ್ಚು ಬಿಡಿಸುವ ಸತ್ಯಾರ್ಥದ ವಚನವು; ಸತ್ಯವನ್ನು,ಸತ್ವವನ್ನು ಮಾತ್ರ ಆದರಿಸಬೇಕು ಎನ್ನುವ ಶಿವತತ್ತ್ವ ವಚನವು.

About The Author