ಚಿಂತನೆ : ವ್ಯರ್ಥಕಾಯರುಗಳು’ ಗುರುಗಳಲ್ಲ : ಮುಕ್ಕಣ್ಣ ಕರಿಗಾರ

ಗುರುಬೋಧೆ ಕೊಡುವುದು ಕೆಲವರ ಉದ್ಯೋಗವಾದರೆ ಗುರುದೀಕ್ಷೆ ಪಡೆದೆವು ಎನ್ನುವುದು ಕೆಲವರ ಭ್ರಮೆ! ಗುರುವಾಗಲು ಯೋಗ್ಯನಾದವನು ಕೊಟ್ಟರೆ ಅದು ಬೋಧೆ,ಶಿಷ್ಯನಾಗಲು ಅರ್ಹನೆನಿಸಿದವನು ಸ್ವೀಕರಿಸಿದರೆ ಅದು ಸಾರಾಯಸಂಪತ್ತು.ಗುರುತತ್ತ್ವವನ್ನರಿಯದ ನರಕುನ್ನಿಗಳು ಕೊಡುವ ಗುರುಬೋಧೆ ಗುರುಬೋಧೆಯಲ್ಲ,ನರಕುನ್ನಿಗಳಿಂದ ದೀಕ್ಷೆಪಡೆದ ಶಿಷ್ಯನು ಮೋಕ್ಷವನ್ನು ಕಾಣಲಾರ.ಅಂಬಿಗರ ಚೌಡಯ್ಯನವರು ಇಂತಹ ಹೆಡ್ಡಶಿಷ್ಯ ದಡ್ಡ ಗುರುವನ್ನು ಕುರಿತು ಬಹುಸೊಗಸಾಗಿ ಹೇಳಿದ್ದಾರೆ ;

ಅಡ್ಡಬಿದ್ದು ಶಿಷ್ಯನ ಮಾಡಿಕೊಂಬ ದಡ್ಡ ಪ್ರಾಣಿಗಳನೇನೆಂಬೆನಯ್ಯ.
ಏನೇನೂ ಅರಿಯದ ಎಡ್ಡ ಮಾನವರಿಗೆ ಉಪದೇಶವ ಮಾಡುವ
ಗೊಡ್ಡ ಮಾನವನ ಮುಖವ ತೋರದಿರಯ್ಯಾ.
ಅದೇನು ಕಾರಣವೆಂದಡೆ :
ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ.
ಅವನ ಪಂಚೇಂದ್ರಿಯಂಗಳು,ಸಪ್ತವ್ಯಸನಂಗಳು,ಅಷ್ಟಮದಗಳೆಂಬ
ಖೊಟ್ಟಿ ಗುಣಂಗಳ ಬಿಡಿಸಲಿಲ್ಲ.
ಸೂತಕ ಪಾತಕಂಗಳ ಕೆಡಿಸಿ,ಮೂರು ಮಲಗಳ ಬಿಡಿಸಿ
ಮುಕ್ತಿಪಥವನರುಹಲಿಲ್ಲ.
ಮಹಾಶೂನ್ಯ ನಿರಾಳ ನಿರಂಜನಲಿಂಗವ
ಕರ- ಮನ- ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ.
ಇದನರಿಯದ ವ್ಯರ್ಥಕಾಯರುಗಳ ಗುರುವೆಂದಡೆ ಪ್ರಮಥರು ಮೆಚ್ಚುವರೆ?
ಇಂತಪ್ಪ ಗುರುಶಿಷ್ಯರೀರ್ವರು ಅಜ್ಞಾನಿಗಳು.
ಅವರು ಇಹಲೋಕ ಪರಲೋಕಕ್ಕೆ ಹೊರಗೆಂದಾತನಂಬಿಗ ಚೌಡಯ್ಯ.

ಗುರುದೀಕ್ಷೆಯ ಮಹತ್ವವನ್ನರಿಯದೆ ಲೋಕದ ಮರುಳ ಮಾನವರು ಗುರುವಲ್ಲದವನನ್ನು ಗುರುವೆಂದು ಭ್ರಮಿಸುತ್ತಾರೆ.ಗುರುವಾಗುವ ಅರ್ಹತೆ ಇಲ್ಲದೆ ಹೊಟ್ಟೆಹೊರೆಯಲು ಶಿಷ್ಯರ ಪಡೆಕಟ್ಟಿಕೊಂಡು ಅಜ್ಞಾನ ಮೆರೆಯುತ್ತಿದ್ದಾನೆ ದಡ್ಡಗುರು.ದಾರಿತಪ್ಪಿ ಗುರುತತ್ತ್ವವನ್ನರಿಯದೆ ಶಿಷ್ಯರನ್ನು ಮಾಡಿಕೊಡು ಗುರುವೆಂಬುವನು ‘ ದಡ್ಡಪ್ರಾಣಿ’ ಯೇ ಅಹುದು.ಶಿವತತ್ತ್ವ,ಆಧ್ಯಾತ್ಮ,ಮೋಕ್ಷ ಮೊದಲಾದ ವಿಷಯಗಳ ಬಗ್ಗೆ ಏನೇನೂ ತಿಳಿವಳಿಕೆ ಇಲ್ಲದ ಬುದ್ಧಿಶೂನ್ಯರಿಗೆ ಉಪದೇಶಮಾಡುವವರು ಮಂದಮತಿಗಳಲ್ಲದೆ ಬುದ್ಧಿವಂತವರಲ್ಲ.ಅಂತಹ ದಾರಿತಪ್ಪಿದ ಮಂದಮತಿಗಳ ಮುಖವನ್ನು ನಿಜಶರಣರು ನೋಡಲಾಗದು.ಗುರುವಾದವನು ಶಿಷ್ಯನ ಅವಗುಣಗಳನ್ನು ಕಳೆದು ಅವನನ್ನು ಶಿವಗುಣಸಂಪದನನ್ನಾಗಿ ಮಾಡಬೇಕು.ಗೊಡ್ಡಗುರುಗಳು ಅದನ್ನರಿಯರು.ಸ್ವತಃ ತಾವೇ ಅವಗುಣಿಗಳು,ದುರ್ಗುಣಿಗಳು ಆಗಿರುವ ಜಡಜೀವಿಗಳು ಶಿಷ್ಯರಲ್ಲಿರ್ಪ ಮೃಡಚೇತನವನ್ನು ಜಾಗೃತಗೊಳಿಸಬಲ್ಲರೆ? ಆಗದು.

ಗುರುವಾದವನು ತನ್ನನ್ನು ಗುರುವೆಂದು ಒಪ್ಪಿ ಬಂದ ಶಿಷ್ಯನನ್ನು ಹುಟ್ಟು ಸಾವುಗಳ ಪ್ರಪಂಚ ಬಂಧನದಿಂದ ಮುಕ್ತಗೊಳಿಸಲು ಸಮರ್ಥನಿರಬೇಕು.ಶಿಷ್ಯನನ್ನು ಕಾಡಿ,ಕೆಡಹುತ್ತಿರುವ ಕಣ್ಣು,ಕಿವಿ,ಮೂಗು,ನಾಲಗೆ ಮತ್ತು ಚರ್ಮವೆನ್ನುವ ಪಂಚೇಂದ್ರಿಯಗಳ ಬಾಧೆಯಿಂದ ಶಿಷ್ಯನನ್ನು ಮುಕ್ತನನ್ನಾಗಿಸಲು ಗುರುವಾದವನು ಶಕ್ತನಾಗಿರಬೇಕು.ಶಿವಪಥದಲ್ಲಿ ಇಂದ್ರಿಯಗಳ ಮೇಲಿನ ವಿಜಯವು ಮೊದಲ ಮೆಟ್ಟಿಲು ಇಲ್ಲವೆ ಮೊದಲ ಹೆಜ್ಜೆ ಎಂದರಿತಿರಬೇಕು.ಜೂಜು,ಮಾಂಸಭಕ್ಷಣ,ಸುರಾಪಾನ,ವೇಶ್ಯಾಗಮನ,ಪರನಾರೀ ಗಮನ,ಮೃಗಯಾ ಮತ್ತು ಚೌರ್ಯ ಎನ್ನುವ ಸಪ್ತವ್ಯಸನಗಳಿಗೆ ಈಡಾಗಿ ದಾರಿತಪ್ಪಿದ ಶಿಷ್ಯನನ್ನು ಆ ಏಳು ದುಶ್ಚಟಗಳಿಂದ ಪಾರುಗಾಣಿಸಲರಿಯದ ಗುರುವು ಗುರುವಲ್ಲ.ಮನುಷ್ಯರನನ್ನು ಅಧಃಪತನದತ್ತ ಎಳೆದೊಯ್ಯುತ್ತಿರುವ ಅನ್ನ,ಅರ್ಥ,ಯೌವ್ವನ,ಸ್ತ್ರೀ,ವಿದ್ಯೆ,ಕುಲ,ರೂಪ,ಉದ್ಯೋಗ ಎನ್ನುವ ಅಷ್ಟಮದಗಳಿಂದ ಶಿಷ್ಯನಾದವನನ್ನು ರಕ್ಷಿಸಿ,ಕಾಪಾಡಬಲ್ಲವನೇ ನಿಜವಾದ ಗುರು.ಪಂಚೇಂದ್ರಿಯಗಳು,ಸಪ್ತವ್ಯಸನಗಳು ಮತ್ತು ಅಷ್ಟಮದಗಳು ನರರನ್ನು ಹರಪಥದಿಂದ ದೂರಮಾಡುವ ದುರ್ಗುಣಗಳು.ಈ ದುರ್ಗುಣಗಳಿಂದ ಶಿಷ್ಯನನ್ನು ಮುಕ್ತನನ್ನಾಗಿಸಿ ಅವನನ್ನು ಸದ್ಗುಣಸಂಪನ್ನನನ್ನಾಗಿಸಲು ಶಕ್ತನಾಗಿರಬೇಕು ಗುರುವಾದವನು.

ಮನಸ್ಸನ್ನು ಕೆಡಿಸಿ,ಮೈಯನ್ನು ಹಾಳು ಮಾಡುತ್ತಿರುವ ಸೂತಕ ಪಾತಕಗಳ ತೊಡರುಗಳಿಂದ ಶಿಷ್ಯನನ್ನು ಸಂರಕ್ಷಿಸಬೇಕು ಗುರುವಾದವನು.ಸೂತಕ ಎಂದರೆ ಮೈಲಿಗೆ ಎಂದರ್ಥವಿದ್ದು ಅದನ್ನು ಮನಸ್ಸನ್ನು ಘಾಸಿಗೊಳಿಸುವ ಅವಗುಣವೆಂದು ಅರ್ಥೈಸಿಕೊಳ್ಳಬೇಕು.ಪಾತಕ ಎಂದರೆ ದೋಷ,ಪಾಪಕೃತ್ಯಗಳಾಗಿದ್ದು ಬ್ರಹ್ಮಹತ್ಯೆ,ಸುರಾಪಾನ,ಗುರುಪತ್ನೀಗಮನ,ಸ್ರೇಯ( ಕಳ್ಳತನ) ಮತ್ತು ಈ ಪಾಪಕೃತ್ಯಗಳನ್ನೆಸಗಿದವರ ಸಹವಾಸ ಮಾಡುವುದು ಎನ್ನುವ ಐದು ಮಹಾಪಾಪಗಳಿದ್ದು ಅವು ಮನುಷ್ಯರನ್ನು ಶಿವಪಥದಿಂದ ವಿಮುಖರನ್ನಾಗಿಸುತ್ತವೆ.ಇಂತಹ ಪಾತಕಗಳಿಂದ ಶಿಷ್ಯನನ್ನು ಪರಿಶುದ್ಧನನ್ನಾಗಿಸಬೇಕಾಗುತ್ತದೆ ಗುರುವೆನ್ನುವವನು.ಅಲ್ಲದೆ ಅಣವ,ಮಾಯಾ,ಕಾರ್ಮಿಕವೆಂಬ ಮೂರು ಬಗೆಯ ಮಲಗಳು ಶಿಷ್ಯನನ್ನು ಮಲಿನಗೊಳಿಸುತ್ತಿರುತ್ತವೆ.ಈ ಮಲಗಳಿಂದ ಶಿಷ್ಯನನ್ನು ಪರಿಶುದ್ಧಿಗೊಳಿಸಬೇಕು ಗುರುವಾದವನು.ಸ್ವಯಂ ಮಲಭಾಂಡದೇಹಿಯಾದ ಗೊಡ್ಡಗುರುವು ಶಿಷ್ಯನ ಮಲತ್ರಯಗಳನ್ನು ಕಳೆಯಬಲ್ಲನೆ?ಸೂತಕ,ಪಾತಕ ಮತ್ತು ಮಲಗಳಿಂದ ಮುಕ್ತನಾಗದೆ ಮುಕ್ತಿಪಥವು ಕಾಣಿಸದು.ಗುರುವಾದವನು ತಾನು ಸರ್ವಸಮರ್ಥನಿದ್ದರೆ ಮಾತ್ರ ಶಿಷ್ಯನಿಗೆ ಮುಕ್ತಿಪಥವನ್ನು ತೋರಬಲ್ಲನು.

ಪರಶಿವನು ಮಹಾಶೂನ್ಯ ನಿರಾಳ ನಿರಂಜನಲಿಂಗವಾಗಿದ್ದು ಗುರುವು ಕೊಟ್ಟ ಲಿಂಗಾನುಸಂಧಾನ ಇಲ್ಲವೆ ಮಂತ್ರಾನುಷ್ಠಾನದ ಮೂಲಕ ಆ ಮಹಾನಿರಂಜನಲಿಂಗವನ್ನು ಕೈ ಮನ ಭಾವಗಳು ಸೇರಿದಂತೆ ಸರ್ವಾಂಗಗಳಲ್ಲಳವಡಿಸಿಕೊಂಡು ಸರ್ವಾಂಗಲಿಂಗಿಯಾಗಿ ಅಂದರೆ ಅಂಗಗುಣಗಳನ್ನು ಅಳಿದುಕೊಂಡು ಲಿಂಗಗುಣಗಳನ್ನು ಅಳವಡಿಸಿಕೊಂಡರೆ ಮಾತ್ರ ಅವರು ಮುಕ್ತಾತ್ಮರು,ಪರಿಶುದ್ಧಾತ್ಮರು.ಇಂತಹ ಮಹತ್ತನ್ನು ಅಂಗವಿಸಿಕೊಳ್ಳದ ಭಂಗಿತರು ವ್ಯರ್ಥಕಾಯರಲ್ಲದೆ ಅವರು ಗುರುಗಳಲ್ಲ.ಜಡದೇಹಿಗಳು ಗುರುವಾಗಲಾರರು.ಅಯೋಗ್ಯಗುರುವನ್ನು ನಂಬುವ ಶಿಷ್ಯನು ಪಥಭ್ರಷ್ಟನಾಗುತ್ತಾನಲ್ಲದೆ ಉದ್ಧಾರವಾಗುವುದಿಲ್ಲ.ದಡ್ಡಗುರು ಮತ್ತು ಹೆಡ್ಡ ಶಿಷ್ಯರಿಬ್ಬರೂ ವ್ಯರ್ಥಜೀವಿಗಳಾಗಿ ಅವರು ಇಹಲೋಕಕ್ಕೂ ಸಲ್ಲುವುದಿಲ್ಲ,ಪರಲೋಕಕ್ಕೂ ಸಲ್ಲುವುದಿಲ್ಲ,ನರಕಕ್ಕೆ ಭಾಜನರಾಗುವ ಅಲ್ಪಜೀವಿಗಳವರು.ವ್ಯರ್ಥಕಾಯರುಗಳಾದ ಗುರು ಶಿಷ್ಯರಿಬ್ಬರಿಗೂ ಮೋಕ್ಷವಿಲ್ಲ,ನರಕವೇ ಗತಿ ಅವರಿಗೆ ಎನ್ನುವುದನ್ನು ಸಾರಿಹೇಳಿರುವ ಅಂಬಿಗರ ಚೌಡಯ್ಯನವರು ಗುರುದೀಕ್ಷೆಯ ಮಹಿಮೆ,ಗುರುವಾಗಲು ಯಾರು ಅರ್ಹರು,ಶಿಷ್ಯನ ಅರ್ಹತೆಗಳೇನು ಎನ್ನುವುದನ್ನು ಈ ವಚನದಲ್ಲಿ ಮನೋಜ್ಞವಾಗಿ ವಿವರಿಸಿದ್ದಾರೆ.ಗುರುತ್ವವಿಲ್ಲದೆ ಗುರುಗಳೆಂದು ಕೊಚ್ಚಿಕೊಳ್ಳುವ ತುಚ್ಛಜೀವಿಗಳು,ಗುರುವಾಗದವನಿಂದ ಬೋಧೆ ಪಡೆದು ಮುಕ್ತರಾದೆವು ಎಂದು ಭ್ರಮಿಸುವ ಮತಿಗೇಡಿಗಳು ಅರ್ಥಮಾಡಿಕೊಳ್ಳಬೇಕು ಅಂಬಿಗರ ಚೌಡಯ್ಯನವರ ಈ ವಚನವನ್ನು.

About The Author