ಮೂರನೇ ಕಣ್ಣು : ವಿಜ್ಞಾನಿಗಳೂ ಮನುಷ್ಯರೆ,ದೇವರನ್ನು ನಂಬಿದರೆ ತಪ್ಪೇನು ? :ಮುಕ್ಕಣ್ಣ ಕರಿಗಾರ

ಇಸ್ರೋದ ವಿಜ್ಞಾನಿಗಳು ಚಂದ್ರಯಾನ 3 ರ ಉಪಗ್ರಹ ಉಡಾವಣೆಯ ಪೂರ್ವದಲ್ಲಿ ತಿರುಪತಿಯಲ್ಲಿ ಪೂಜೆ ಸಲ್ಲಿಸಿ, ಉಪಗ್ರಹದ ಮಾದರಿ ಒಂದನ್ನು ತಿಮ್ಮಪ್ಪನ ಸನ್ನಿಧಿಯಲ್ಲಿಟ್ಟು ಉಪಗ್ರಹ ಉಡಾವಣೆ ಯಶಸ್ವಿಯಾಗಲಿ ಎಂದು ವೆಂಕಟೇಶ್ವರನನ್ನು ಪ್ರಾರ್ಥಿಸಿದ್ದನ್ನು ಆಕ್ಷೇಪಿಸಿದ್ದಾರೆ ಕೆಲವರು.’ ಇದು ವೈಜ್ಞಾನಿಕ ಮನೋಭಾವವೆ? ತಮ್ಮ ವೈಜ್ಞಾನಿಕ ಸಾಧನೆ,ಸಂಶೋಧನೆಯಲ್ಲಿ ನಂಬಿಕೆ ಇಲ್ಲವೆ ಇಸ್ರೋದ ವಿಜ್ಞಾನಿಗಳಿಗೆ? ಎಂದು ಪ್ರಶ್ನಿಸಿರುವವರು ಸಂವಿಧಾನವನ್ನೂ ಎಳೆತಂದಿದ್ದಾರೆ ತಮ್ಮ ವಾದದ ಸಮರ್ಥನೆಗಾಗಿ.ಭಾರತದ ಸಂವಿಧಾನಕ್ಕೆ 3.1.1977 ರಿಂದ ಜಾರಿಗೆ ಬರುವಂತೆ ಸೇರಿಸಲಾದ ಭಾಗ 4 ಎ ‘ ಮೂಲಭೂತ ಕರ್ತವ್ಯಗಳು’ ತಿದ್ದುಪಡಿಯ 51– ಎ ( ಹೆಚ್) ಉಪನಿಯಮವನ್ನು ಉಲ್ಲೇಖಿಸಿ ಇಸ್ರೋ ವಿಜ್ಞಾನಿಗಳ ನಡೆ ವೈಜ್ಞಾನಿಕ ಮನೋಭಾವವಲ್ಲವೆಂದು ಖಂಡಿಸಿದ್ದಾರೆ.ಸಂವಿಧಾನದ 51-ಎ( ಹೆಚ್) ಅನುಚ್ಛೇದವು ” ವೈಜ್ಞಾನಿಕ ಮನೋಭಾವನೆ,ಮಾನವೀಯತೆ,ಜಿಜ್ಞಾಸೆ ಮತ್ತು ಸುಧಾರಣೆಯ ಪ್ರವೃತ್ತಿಗಳನ್ನು ಬೆಳೆಸುವುದು” ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿರತಕ್ಕದ್ದು ಎನ್ನುತ್ತದೆ.ಸಂವಿಧಾನದ ಈ ಅನುಚ್ಛೇದವು ಇಸ್ರೋ ವಿಜ್ಞಾನಿಗಳ ನಡೆ ತಪ್ಪು ಎಂದು ಹೇಳುವುದಿಲ್ಲ.ಆದರೂ ನಮ್ಮ‌ಪ್ರಗತಿಪರರಿಗೆ ಇಸ್ರೋ ವಿಜ್ಞಾನಿಗಳು ತಿರುಪತಿಯ ತಿರುಮಲದೇವಸ್ಥಾನದಲ್ಲಿ ಪ್ರಾರ್ಥಿಸಿದ್ದು ತಪ್ಪಾಗಿ ಕಂಡಿದೆ.ಪ್ರಗತಿಪರರು ಉಲ್ಲೇಖಿಸಿದ ಸಂವಿಧಾನದ 51 -ನೆಯ ಅನುಚ್ಚೇದವು ಸಂವಿಧಾನದ ಮೂಲಭಾಗವಲ್ಲ,ನಲವತ್ತೆರಡನೆಯ ತಿದ್ದುಪಡಿಯಂತೆ ಸಂವಿಧಾನಕ್ಕೆ ಸೇರಿಸಿದ ಭಾಗ ಅದು.ನಮ್ಮ ಸಂವಿಧಾನ ಮೂಲಭಾಗವಾಗಿಯೇ ಇರುವ ಸಂವಿಧಾನದ ಪೀಠಿಕೆಯೇ ದೇಶದ ಪ್ರಜೆಗಳೆಲ್ಲರಿಗೂ ಧಾರ್ಮಿಕ ಉಪಾಸನೆಯ ಸ್ವಾತಂತ್ರ್ಯ ನೀಡಿದೆ.ಹೀಗಿರುವಾಗ ತಮ್ಮ ವಾದ ಮಂಡನೆಗೆ ಸಂವಿಧಾನದ ಯಾವುದೋ ಭಾಗವನ್ನು ಎತ್ತಿತೋರಿಸಿ ಅಲ್ಲಗಳೆಯುವುದು ಸಂವಿಧಾನ ತಜ್ಞರಿಗೆ ಒಪ್ಪಿಗೆಯಾಗದ ಮಾತು.

ದೇವರನ್ನು ನಂಬುವುದು,ಪೂಜಿಸುವುದು ಅವೈಜ್ಞಾನಿಕವೆ? ಹಾಗಾದರೆ ಯಾವುದು ವೈಜ್ಞಾನಿಕತೆ ಯಾವುದು ವೈಜ್ಞಾನಿಕತೆಯಲ್ಲ? ಇದನ್ನು ನಿರ್ಧರಿಸುವವರು ಯಾರು? ಪ್ರಗತಿಪರರೆ,ಸರಕಾರವೆ,ಜನತೆಯೆ? ಮಹಾಮೇಧಾವಿ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ದೇವರನ್ನು ನಂಬುತ್ತಿದ್ದರು,ದೇವರನ್ನು ಪ್ರಾರ್ಥಿಸುತ್ತಿದ್ದರು.’ ವಿಜ್ಞಾನವಿಲ್ಲದ ಧರ್ಮ ಕುಂಟನಂತೆ,ಧರ್ಮವಿಲ್ಲದ ವಿಜ್ಞಾನ ಹೆಳವನಂತೆ’ ಎಂಬುದು ಐನ್ಸ್ಟೀನ್ ಅವರ ಪ್ರಸಿದ್ಧ ಮಾತು.ಐನ್ ಸ್ಟೀನ್ ಅವರೊಬ್ಬರು ಮಾತ್ರವಲ್ಲ ಬಹಳಷ್ಟು ಜನ ವಿಜ್ಞಾನಿಗಳು ದೇವರನ್ನು ನಂಬಿದ್ದಾರೆ.ದೇವರ ಹೆಸರಿನಲ್ಲಿ ನಡೆಯುತ್ತಿರುವ ಕಂದಾಚಾರ,ಶೋಷಣೆ,ಭೇದಭಾವಗಳನ್ನು ಖಂಡಿಸಬಹುದೇ ಹೊರತು ದೇವರ ಮೇಲಿನ ನಂಬಿಕೆ ಅವೈಜ್ಞಾನಿಕ ಎನ್ನುವುದು ಅಪಕ್ವಮತಿಗಳು ಆಡುವ ಮಾತು.ಇನ್ನೊಂದು ಸಂಗತಿಯನ್ನು ಪ್ರಗತಿಪರರು ಅರ್ಥಮಾಡಿಕೊಂಡಿರಬೇಕು, ಈ ಜಗತ್ತಿನಲ್ಲಿ ವಿಜ್ಞಾನಿಗಳು ಯಾವ ಹೊಸ ವಸ್ತುವನ್ನೂ ಸೃಷ್ಟಿ ಮಾಡಿಲ್ಲ.ಅದಾಗಲೇ ಪ್ರಕೃತಿಯಲ್ಲಿದ್ದ ಅಣುಗಳ ಸಂಯೋಜನೆಯಿಂದ,ವಸ್ತುಗಳ ರೂಪಾಂತರ ಕ್ರಿಯೆಯಿಂದ ವೈಜ್ಞಾನಿಕ ಸಂಶೋಧನೆಗಳಾಗಿವೆ,ಸಾಧನೆಗಳಾಗಿವೆ.ಮೂಲಪದಾರ್ಥ ಅಥವಾ ಮೂಲದ್ರವ್ಯವು ಪ್ರಕೃತಿಯಲ್ಲಿ ಅದಾಗಲೇ ಇತ್ತು .ಪ್ರಕೃತಿಯಲ್ಲಿ ಇಲ್ಲದ ಯಾವ ಹೊಸವಸ್ತುವನ್ನು ವಿಜ್ಞಾನಿಗಳು ಸೃಷ್ಟಿಸಿಲ್ಲ.ವಿಜ್ಞಾನಿಗಳು,ವಿಚಾರವಾದಿಗಳು,ಪ್ರಗತಿಪರರು ಸೇರಿದಂತೆ ಎಲ್ಲರನ್ನೂ ಪರಮಾತ್ಮನೇ ಹುಟ್ಟಿಸಿದ್ದಾನೆ.ಈ ಜಗತ್ತು ಪರಮಾತ್ಮನಿಂದ ನಿರ್ಮಾಣಗೊಂಡಿದೆಯೇ ಹೊರತು ಯಾವುದೇ ವಿಜ್ಞಾನಿ ಜಗತ್ತನ್ನು ಹುಟ್ಟಿಸಿಲ್ಲ.

ದೇವರನ್ನು ನಂಬುವುದು,ಬಿಡುವುದು ಅವರವರ ವೈಯಕ್ತಿಕ ವಿಚಾರ.ಆದರೆ ಇನ್ನೊಬ್ಬರ ನಂಬಿಕೆಯನ್ನು ಅಲ್ಲಗಳೆಯುವುದು,ತಪ್ಪು ಎನ್ನುವುದು ಜನರ ವೈಯಕ್ತಿಕ ಹಕ್ಕುಗಳ ಮೇಲಿನ ದಾಳಿ ಎನ್ನುವುದನ್ನು ತಿಳಿದುಕೊಳ್ಳಬೇಕು.ನಮ್ಮ ಸಂವಿಧಾನವೇ ಧಾರ್ಮಿಕ ಉಪಾಸನೆಯ ಸ್ವಾತಂತ್ರ್ಯವನ್ನು ನೀಡಿರುವಾಗ,ಈ ದೇಶದ ಪ್ರಜೆಗಳು ತಮಗೆ ಇಷ್ಟವಾದ ಧರ್ಮ ಮತ್ತು ಅದರ ನಂಬಿಕೆಯನ್ನು ಪಾಲಿಸುವ ಹಕ್ಕನ್ನು ಸಂವಿಧಾನವೇ ನೀಡಿರುವಾಗ ಭಾರತೀಯ ಪ್ರಜೆಗಳಾಗಿ ಇಸ್ರೋದ ವಿಜ್ಞಾನಿಗಳು ತಿರುಪತಿಯ ವೆಂಕಟೇಶ್ವರನನ್ನು ಪೂಜಿಸಿ,ಪ್ರಾರ್ಥಿಸಿದರೆ ಅದು ತಪ್ಪಲ್ಲ,ಅವೈಜ್ಞಾನಿಕವೂ ಅಲ್ಲ. ಹಿಂದೊಮ್ಮೆ ಉಪಗ್ರಹದ ಉಡಾವಣೆಯ ಸಂದರ್ಭದಲ್ಲಿ ಇಸ್ರೋದ ಅಧ್ಯಕ್ಷರು ಪಂಚಾಂಗ ನೋಡಿ,ರಾಹುಕಾಲ ತಪ್ಪಿಸಿ ಉಪಗ್ರಹ ಉಡಾವಣೆ ಮಾಡಿದ್ದರು.ಅದು ತಪ್ಪು,ಅವೈಜ್ಞಾನಿಕ ವಿಚಾರ ಎನ್ನಬಹುದು. ಇಂದು ತಿರುಪತಿಯ ವೆಂಕಟೇಶ್ವರನ ಸನ್ನಿಧಿಯಲ್ಲಿ ಪೂಜಿಸಿದ್ದು ತಪ್ಪಲ್ಲ,ಅವೈಜ್ಞಾನಿಕ ವಿಚಾರವೂ ಅಲ್ಲ.ಭಾರತದ ಸರಕಾರವೇನು ಚಂದ್ರಯಾನ –3 ಕ್ಕೆ ತಗಲುವ ಖರ್ಚು ವೆಚ್ಚಗಳ ಅನುದಾನ ಬಿಡುಗಡೆ ಮಾಡುವಾಗ ಉಪಗ್ರಹ ಉಡಾವಣೆಯ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಪೂಜೆ ಮಾಡಬಾರದು ಎನ್ನುವ ನಿಬಂಧನೆಯನ್ನೇನೂ ವಿಧಿಸಿರುವುದಿಲ್ಲ,ಪ್ರಗತಿಪರರು ಆಕ್ಷೇಪಿಸಲು.ಸುಮ್ಮನೆ ಪ್ರಚಾರಪ್ರಿಯತೆಗಾಗಿ ಇಂತಹ ವಿಷಯಗಳನ್ನು ಪ್ರಸ್ತಾಪಿಸುವ ಬದಲು ನಮ್ಮ ಪ್ರಗತಿಪರರು ಸಮಾಜದಲ್ಲಿ ತಾಂಡವವಾಡುತ್ತಿರುವ ಬಡತನ,ನಿರುದ್ಯೋಗ,ಆಸ್ತಿಯ ಅಸಮಾನ ಹಂಚಿಕೆ,ಮುಗ್ಧರ ಮೇಲಾಗುತ್ತಿರುವ ಅನ್ಯಾಯ ಶೋಷಣೆ ಮತ್ತು ಗ್ರಾಮೀಣ ಜನತೆಯ ಜೀವನಮಟ್ಟ ಸುಧಾರಿಸುವ ಜೀವನೋಪಾಯಕ್ರಮಗಳಂತಹ ಸಕಾರಾತ್ಮಕ ಚಿಂತನಾಕ್ರಮವನ್ನು ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ಪ್ರಯತ್ನಿಸುವುದು,ಆರೋಗ್ಯವಂತ ಸಮಾಜವನ್ನು ಕಟ್ಟಲು ಪ್ರಯತ್ನಿಸುವುದು ಒಳ್ಳೆಯದು.

About The Author