ಮೂರನೇ ಕಣ್ಣು : ‘ಸಾಮಾಜಿಕ ನ್ಯಾಯ’ದ ಪರಿಕಲ್ಪನೆಯಲ್ಲಿ ಅರಳಿದ ದುರ್ಬಲರಿಗೆ ಬಲತುಂಬುವ ಸರ್ವರುನ್ನತಿಯ ಆಶಯದ ಬಜೆಟ್ : ಮುಕ್ಕಣ್ಣ ಕರಿಗಾರ

ಮುಖ್ಯಮಂತ್ರಿ ಸಿದ್ರಾಮಯ್ಯನವರು ನಿನ್ನೆ ತಮ್ಮ ಹದಿನಾಲ್ಕನೆಯ ಬಜೆಟ್ ಅನ್ನು ಮಂಡಿಸಿದ್ದಾರೆ. ₹3,27,747 ಕೋಟಿಗಳ ಗಾತ್ರದ ಬಜೆಟ್ ಅನ್ನು ಮಂಡಿಸಿರುವ ಮುಖ್ಯಮಂತ್ರಿ ಸಿದ್ರಾಮಯ್ಯನವರು ಈ ಬಾರಿ ಕೊರತೆ ಬಜೆಟ್ ಅನ್ನು ಮಂಡಿಸಿದ್ದು ₹12,552 ಕೋಟಿ ರೂಪಾಯಿಗಳ ರಾಜಸ್ವ ಕೊರತೆಯ ಬಜೆಟ್ ಅನ್ನು ಮಂಡಿಸಿ ಹೊಸದಾಗಿ ₹86,608ಕೋಟಿಗಳ ಸಾಲ ಪಡೆಯುವ ಮೂಲಕ ಕೊರತೆ ಸರಿದೂಗಿಸಲು ಪ್ರಯತ್ನಿಸಿದ್ದಾರೆ.ಈ ಹಿಂದೆ ಉಳಿತಾಯ ಇಲ್ಲವೆ ಮಿಗುತೆ ಬಜೆಟ್ ಗಳನ್ನು ಮಂಡಿಸಿದ್ದ ಆರ್ಥಿಕತಜ್ಞರಿಗೂ ಮಿಗಿಲಾದ ಆರ್ಥಿಕಶಿಸ್ತಿನ ಬಜೆಟ್ ಗಳನ್ನು ಮಂಡಿಸುತ್ತಿದ್ದ ಸಿದ್ರಾಮಯ್ಯನವರು ಕಾಂಗ್ರೆಸ್ ಪಕ್ಷವು ಚುನಾವಣಾಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಿಗೆ ಬಜೆಟಿನಲ್ಲಿ ಅನುದಾನ ಒದಗಿಸುವ ಅನಿವಾರ್ಯತೆಗೆ ಸಿಕ್ಕಿದ್ದರಿಂದ 2023-24 ನೇ ಸಾಲಿಗಾಗಿ ಕೊರತೆಬಜೆಟ್ ಮಂಡಿಸಲೇಬೇಕಾದ ಅನಿವಾರ್ಯತೆ ಇತ್ತು .₹12,552 ಕೋಟಿ ರೂಪಾಯಿಗಳ ಕೊರತೆ ಬಜೆಟ್ ಮಂಡಿಸಿದ್ದರೂ ಯಾವ ಜನಸಮುದಾಯದ ಹಿತವನ್ನು ಕಡೆಗಣಿಸದಂತೆ,ಎಲ್ಲರನ್ನು ಒಳಕೊಳ್ಳುವ, ಸಾಮಾಜಿಕಮುಖದ ಬಜೆಟ್ ಅನ್ನು ಮಂಡಿಸಿದ್ದಾರೆ ಎನ್ನುವುದು ಗಮನಾರ್ಹವಾದುದು.ಬಜೆಟ್ ಎಂದರೆ ಕೇವಲ ಕೈಗಾರಿಕೆಗಳು,ಉದ್ಯಮಿಗಳು,ಐ ಟಿ , ಬಿಟಿ ಕ್ಷೇತ್ರಗಳನ್ನು ಬಲಪಡಿಸುವ ‘ ಲಾಭೋದ್ದೇಶದ ವ್ಯಾವಹಾರಿಕ ನೀತಿ’ ಯಲ್ಲ; ಬದಲಿಗೆ ಜನಸಮುದಾಯಗಳನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ,ಸಮಷ್ಟಿಕಲ್ಯಾಣವನ್ನು ಸಾಧಿಸುವುದೇ ಉತ್ತಮ ಬಜೆಟ್ಟಿನ ಲಕ್ಷಣ.ಜನತೆಯ ಅವಶ್ಯಕತೆ- ಆದ್ಯತೆಗಳಿಗನುಗುಣವಾಗಿ ಬಜೆಟ್ಟಿನ ರೂಪು- ರೇಷೆಗಳು ಬದಲಾಗಬೇಕಾಗುತ್ತದೆ.ಹಣ ಇರುವುದು ಕಲ್ಯಾಣ ಸಾಧನೆಗಾಗಿಯೇ ಹೊರತು ಹಣಗಳಿಸಿಕೊಡಲೆಂದೇ ಜನತೆ ಇಲ್ಲ.ಜನರಿಂದ ಸಂಗ್ರಹವಾಗುವ ಸಾರ್ವಜನಿಕ ಸಂಪತ್ತನ್ನು ಜನಸಮುದಾಯಗಳ ಗರಿಷ್ಠ ಕಲ್ಯಾಣಕ್ಕಾಗಿಯೇ ಬಳಸುವ ಜನಕಲ್ಯಾಣಕೇಂದ್ರಿತ ಬಜೆಟ್ಟುಗಳನ್ನು ಮಂಡಿಸುವುದು ಪ್ರಜಾಪ್ರಭುತ್ವ ಸರ್ಕಾರಗಳ ಕರ್ತವ್ಯವೂ ಹೌದು.ಸಂಪತ್ತಿನ ಅಸಮಾನ ಹಂಚಿಕೆಯನ್ನು ತಪ್ಪಿಸಿ,ಸಮಾಜದ ಹಿಂದುಳಿದವರು,ಅಲ್ಪಸಂಖ್ಯಾತರು ಮತ್ತು ದಲಿತರನ್ನು ಮುನ್ನಲೆಗೆ ತರುವ ಪ್ರಾಮಾಣಿಕ ಪ್ರಯತ್ನಗಳು ಮಾಡಿದ್ದಾರೆ ಸಿದ್ರಾಮಯ್ಯನವರು ತಮ್ಮ 2023-24ನೇ ಸಾಲಿನ ಬಜೆಟ್ಟಿನಲ್ಲಿ.

ಕಾಂಗ್ರೆಸ್ ಪಕ್ಷವು ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಅಂದಾಜು ₹53 ಸಾವಿರ ಕೋಟಿಗಳಷ್ಟಾಗಬಹುದು ಎಂದು ಲೆಕ್ಕಿಸಲಾಗಿತ್ತು.ಐದು ಗ್ಯಾರಂಟಿ ಯೋಜನೆಗಳಿಗಾಗಿ ಬಜೆಟಿನಲ್ಲಿ ಸಿದ್ರಾಮಯ್ಯನವರು ₹42,075 ಕೋಟಿ ರೂಪಾಯಿಗಳ ಅನುದಾನ ಒದಗಿಸಿದ್ದು ಅದರಲ್ಲಿ ಗೃಹಲಕ್ಷ್ಮೀ ಯೋಜನೆಗೆ ₹17,500ಕೋಟಿ ,ಅನ್ನಭಾಗ್ಯ ಯೋಜನೆಗೆ ₹10,275 ಕೋಟಿ,ಗೃಹಜ್ಯೋತಿ ಯೋಜನೆಗಾಗಿ ₹ 19,000 ಕೋಟಿ,ಶಕ್ತಿಯೋಜನೆಗಾಗಿ ₹ 2800 ಕೋಟಿ ಮತ್ತು ಯುವನಿಧಿಗಾಗಿ ₹ 2500 ಕೋಟಿಗಳ ಅನುದಾನ ಹಂಚಿಕೆ ಮಾಡಿದ್ದಾರೆ.5 ಗ್ಯಾರಂಟಿ ಯೋಜನೆಗಳಿಗೆ ಬಜೆಟ್ಟಿನಲ್ಲಿ ಅನುದಾನ ತೆಗೆದಿರಿಸುವ ಮೂಲಕ ಗ್ಯಾರಂಟಿಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲಿವೆ ಎನ್ನುವ ಭರವಸೆಯನ್ನು ನಾಡಿನ ಜನತೆಗೆ ನೀಡಿದ್ದಾರೆ ಮುಖ್ಯಮಂತ್ರಿ ಸಿದ್ರಾಮಯ್ಯನವರು.5 ಗ್ಯಾರಂಟಿಯೋಜನೆಗಳು’ ಪ್ರಜಾಪ್ರಭುತ್ವ ಪದ್ಧತಿಯ ರಾಜ್ಯಸರ್ಕಾರ ಒಂದರ ದೂರಗಾಮಿ ಪರಿಣಾಮಗಳನ್ನು ಬೀರುವ ಕ್ರಾಂತಿಕಾರಕ ಯೋಜನೆಗಳು’ ಎನ್ನುವುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕಿದೆ.ಮಹಿಳೆಯರು ಮತ್ತು ನಿರುದ್ಯೋಗಿ ಯುವಕರ ಬದುಕುಗಳಿಗೆ ಬಲತುಂಬುವ,ಬಡಜನರ ಹಸಿವಿನ ಸಮಸ್ಯೆಯನ್ನು ಪರಿಹರಿಸುವ,ದುರ್ಬಲವರ್ಗಗಳ ಸ್ವಾಭಿಮಾನಿ ಬದುಕಿಗೆ ಪೂರಕವಾಗುವ ಐದು ಗ್ಯಾರಂಟಿಯೋಜನೆಗಳಿಗೆ ವಿನಿಯೋಗಿಸುವ ಹಣ ‘ ಸರ್ವೋದಯ ಸಮಾಜ ನಿರ್ಮಾಣ’ ಕ್ಕೆ ಅವಕಾಶವನ್ನು ಒದಗಿಸುತ್ತದೆ.

ಅಹಿಂದ ವರ್ಗಗಳ ಬಲದಿಂದ ರಾಜಕೀಯ ಉತ್ತುಂಗಕ್ಕೇರಿರುವ ಮುಖ್ಯಮಂತ್ರಿ ಸಿದ್ರಾಮಯ್ಯನವರು ಈ ಬಜೆಟ್ಟಿನಲ್ಲಿ ಅಹಿಂದ ವರ್ಗಗಳತ್ತ ವಿಶೇಷ ಕಾಳಜಿ ತೋರಿಸಿದ್ದಾರೆ.ಪರಿಶಿಷ್ಟಜಾತಿ,ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಿದ ಅನುದಾನದ ಪ್ರಮಾಣವನ್ನು ಹೆಚ್ಚಿಸಿದ್ದಲ್ಲದೆ ಎಸ್ ಸಿ ಪಿ ಮತ್ತು ಟಿ ಎಸ್ ಪಿ ಯೋಜನೆಗಳಿಗಾಗಿ ಮೀಸಲಿರಿಸಿದ ಅನುದಾನ ಅನ್ಯ ಉದ್ದೇಶಗಳಿಗೆ ಬಳಸುವುದನ್ನು ನಿರ್ಬಂಧಿಸುವ ಬದ್ಧತೆಯನ್ನು ಬಜೆಟ್ಟಿನಲ್ಲಿಯೇ ವ್ಯಕ್ತಪಡಿಸಿದ್ದಾರೆ ಮುಖ್ಯಮಂತ್ರಿ ಸಿದ್ರಾಮಯ್ಯನವರು.ಈ ಹಿಂದೆ ಅವರು ಮುಖ್ಯಮಂತ್ರಿ ಆಗಿದ್ದ 2013–2018 ರ ಅವಧಿಯಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನದ ಹಂಚಿಕೆ ಮತ್ತು ಆ ಉದ್ದೇಶಕ್ಕಾಗಿಯೇ ಹಣ ಬಳಸುವಂತಹ ನಿರ್ಬಂಧನೆಗಳನ್ನುಳ್ಳ ‘ ಕರ್ನಾಟಕ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ( ಎಸ್ ಸಿ ಪಿ,ಟಿ ಎಸ್ ಪಿ) ಕಾಯ್ದೆ -2013’ ಅನ್ನು ಜಾರಿಗೆ ತಂದಿದ್ದ ಸಿದ್ರಾಮಯ್ಯನವರು ಇಡೀ ದೇಶದಲ್ಲಿ ಆಂಧ್ರಪ್ರದೇಶ ರಾಜ್ಯ ಒಂದನ್ನು ಬಿಟ್ಟು ಇಂತಹ ಮಹತ್ವದ ಯೋಜನೆಯನ್ನು ರೂಪಿಸಿದ ಶ್ರೇಯಸ್ಸನ್ನು ತಮ್ಮದಾಗಿರಿಸಿಕೊಂಡಿದ್ದರು.ಎಸ್.ಸಿ.ಪಿ ಮತ್ತು ಟಿ ಎಸ್ ಪಿ ಕಾರ್ಯಕ್ರಮಗಳಿಗಾಗಿ ₹ 34,294 ಕೋಟಿಗಳ ಅನುದಾನ ಒದಗಿಸುವ ಮೂಲಕ ಪರಿಶಿಷ್ಟಜಾತಿ,ಪರಿಶಿಷ್ಟ ಪಂಗಡಗಳ ಜನತೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ ಮುಖ್ಯಮಂತ್ರಿ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ.ಇದಕ್ಕಿಂತ ಮಹತ್ವದ್ದು ಎಂದರೆ ಈ ಕಾಯ್ದೆಯ ಸೆಕ್ಷನ್ 7(ಡಿ) ಯನ್ನು ರದ್ದುಗೊಳಿಸುವುದಾಗಿ ಬಜೆಟ್ಟಿನಲ್ಲಿಯೇ ಘೋಷಿಸಿದ್ದಾರೆ.ಈ ಕಾಯ್ದೆಯ ಸೆಕ್ಷನ್ 7(ಡಿ) ಯು ಎಸ್ ಸಿ ಪಿ,ಟಿ ಎಸ್ ಪಿ ಯೋಜನೆಯಡಿ ಮೀಸಲಿರಿಸಿದ ಅನುದಾನವು ಬಳಕೆಯಾಗದಿದ್ದ ಸಂದರ್ಭದಲ್ಲಿ ಅದನ್ನು ಅನ್ಯ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುತ್ತಿತ್ತು.ಇದು ದಲಿತಬರಹಗಾರರು,ಚಿಂತಕರು ಮತ್ತು ಸಂಘಟನೆಗಳ ಆಕ್ರೋಶದ ಕಾರಣವಾಗಿತ್ತು ಮತ್ತು ಈ ಉಪನಿಯಮವನ್ನು ರದ್ದುಪಡಿಸಲು ಅವರೆಲ್ಲರೂ ಸರ್ಕಾರವನ್ನು ಒತ್ತಾಯಿಸುತ್ತಿದ್ದರು.ಸಿದ್ರಾಮಯ್ಯನವರು ಎಸ್ ಸಿ ಪಿ,ಟಿ ಎಸ್ ಪಿ ಕಾಯ್ದೆಯ ಸೆಕ್ಷನ್ 7(ಡಿ) ಯನ್ನು ಕೈ ಬಿಡುವುದಾಗಿ ಬಜೆಟ್ಟಿನಲ್ಲಿಯೇ ಘೋಷಿಸುವ ಮೂಲಕ ದಲಿತಸಮುದಾಯಗಳ ಉದ್ಧಾರದ ಬಗೆಗಿನ ತಮ್ಮ ಬದ್ಧತೆಯನ್ನು ಸಾಬೀತುಪಡಿಸಿದ್ದಾರೆ.ಬುಡಕಟ್ಟು ಪಂಗಡಗಳಾದ ಕೊರಗ,ಜೇನುಕುರುಬ,ಸೋಲಿಗ,ಎರವ,ಕಾಡುಕುರುಬ,ಮಲೆಕುಡಿಯ,ಸಿದ್ಧಿ,ಹಸಲರು,ಗೌಡಲು,ಗೊಂಡ ಮತ್ತು ಬೆಟ್ಟಕುರುಬ ಜನಾಂಗದ ಕುಟುಂಬಗಳಿಗೆ ಪೌಷ್ಟಿಕ ಆಹಾರ ಯೋಜನೆಯ ವಿಸ್ತರಣೆಗಾಗಿ ₹50ಕೋಟಿ, ಸೋಲಿಗ,ಜೇನುಕುರುಬ,ಕಾಡುಕುರುಬ,ಕೊರಗ,ಇರುಳಿಗ,ಬೆಟ್ಟಕುರುಬ ಮೊದಲಾದ ಅಲೆಮಾರಿ ಹಾಗೂ ಅರೆಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ₹50 ಕೋಟಿಗಳನ್ನು ಬಜೆಟ್ಟಿನಲ್ಲಿ ಒದಗಿಸಿದ್ದಾರೆ.

ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ –1 ಮತ್ತು ಪ್ರವರ್ಗ – 2 ಎ ಯಲ್ಲಿ ಬರುವ ಜಾತಿಗಳಿಗೆ ₹1 ಕೋಟಿಯ ಮೊತ್ತದವರೆಗಿನ ಕಾಮಗಾರಿಗಳಿಗೆ ಮೀಸಲಾತಿಯನ್ನು ಘೋಷಿಸುವ ಮೂಲಕ ಹಿಂದುಳಿದ ವರ್ಗಗಳಿಗೆ ಆರ್ಥಿಕಬಲತುಂಬಿದ್ದಾರೆ ಮುಖ್ಯಮಂತ್ರಿ ಸಿದ್ರಾಮಯ್ಯನವರು.ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣಾಸಕ್ತಿಯನ್ನು ಪ್ರೋತ್ಸಾಹಿಸಲು ವಿದ್ಯಾಸಿರಿ,ವಿದ್ಯಾರ್ಥಿ ವೇತನ,ಶುಚಿ ಸಂಭ್ರಮ ಕಿಟ್ ವಿತರಿಸುವ ಕಾರ್ಯಕ್ರಮಗಳನ್ನು ಮುಂದುವರೆಸುವುದಾಗಿ ಘೋಷಿಸಿದ್ದಾರೆ.ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಡಿ.ದೇವರಾಜು ಅರಸು ಸಂಶೋಧನಾ ಸಂಸ್ಥೆಯ ಮೂಲಕ ಈ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ₹ 2 ಕೋಟಿಗಳನ್ನು ಒದಗಿಸಿರುವ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿಯೂ ಸಾಕಷ್ಟು ಯೋಜನೆಗಳನ್ನು ಘೋಷಿಸಿದ್ದಾರೆ ಎನ್ನುವುದು ಗಮನಾರ್ಹ.ಅಲ್ಪಸಂಖ್ಯಾತರ ಜನಾಂಗದ ವಿದ್ಯಾರ್ಥಿಗಳಿಗೆ ನೀಟ್,ಜೆಇಇ,ಸಿಇಟಿ ಹಾಗೂ ಇತರ ಸ್ಪರ್ಧಾಪರೀಕ್ಷೆಗಳ ತಯಾರಿಗಾಗಿ ಪ್ರತಿಷ್ಠಿತ ತರಬೇತಿ ಕೇಂದ್ರಗಳಿಂದ ತರಬೇತಿ ಪಡೆಯಲು ₹ 8 ಕೋಟಿ ಅನುದಾನ ಒದಗಿಸಿದ್ದಾರಲ್ಲದೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಐಎಎಸ್,ಕೆಎಎಸ್ ಗಳಂತಹ ಸ್ಪರ್ಧಾ ಪರೀಕ್ಷೆಗಳನ್ನು ಬರೆಯಲು ಅನುಕೂಲವಾಗುವಂತೆ 10 ತಿಂಗಳ ವಸತಿಸಹಿತ ತರಬೇತಿಗೂ ಅವಕಾಶಕಲ್ಪಿಸಲಾಗಿದೆ.ಶಾದಿಮಹಲ್,ಸಮುದಾಯ ಭವನಗಳ ನಿರ್ಮಾಣಕ್ಕೆ₹ 54 ಕೋಟಿ,ಹಿಂದೂಯೇತರ 868 ಧಾರ್ಮಿಕ ಸಂಸ್ಥೆಗಳಿಗೆ ನೀಡುವ ತಸ್ತಿಕ್ ಮೊತ್ತವನ್ನು ₹60,000 ಗಳಿಗೆ ಹೆಚ್ಚಿಸಿದ್ದಲ್ಲದೆ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ ಮತ್ತು ಅಲ್ಪಸಂಖ್ಯಾತರ ಕಾಲೋನಿಯಡಿ ಅವಶ್ಯಕ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹360 ಕೋಟಿಗಳನ್ನು ನೀಡಲಾಗಿದೆ.ಜೈನರ ಪುಣ್ಯಕ್ಷೇತ್ರಗಳ ಅಭಿವೃದ್ಧಿಗಾಗಿ ₹25 ಕೋಟಿ,ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪಿಸುವುದಲ್ಲದೆ ಅದಕ್ಕೆ ₹100 ಕೋಟಿಗಳ ಅನುದಾನ ಘೋಷಿಸಲಾಗಿದೆ.ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ₹50 ಕೋಟಿಯನ್ನು ಒದಗಿಸಿರುವ ಮುಖ್ಯಮಂತ್ರಿಯವರು ಮೈಸೂರು,ಕಲ್ಬುರ್ಗಿ ಮತ್ತು ಹುಬ್ಬಳ್ಳಿಯಲ್ಲಿರುವ ಸಿಖ್ಖರ ಪವಿತ್ರ ಧಾರ್ಮಿಕ ಕೇಂದ್ರಗಳಾದ ಗುರುದ್ವಾರಗಳ ಅಭಿವೃದ್ಧಿಗೆ ₹5 ಕೋಟಿಗಳಷ್ಟು ಅನುದಾನ ಒದಗಿಸಿದ್ದಾರೆ.

ಬಜೆಟ್ಟಿನಲ್ಲಿ ಕೃಷಿಕ್ಷೇತ್ರಕ್ಕೆ ₹5860 ಕೋಟಿಗಳಷ್ಟು ಹಣವನ್ನು ಹಂಚಿಕೆ ಮಾಡಿದ್ದಲ್ಲದೆ ಬಿಜೆಪಿ ಸರ್ಕಾರವು ಜಾರಿಗೆ ತಂದಿದ್ದ ಎ ಪಿ ಎಂ ಸಿ ಕಾಯ್ದೆಯ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿರುವುದು ಮಹತ್ವದ ಸಂಗತಿ.ಕೃಷಿಭಾಗ್ಯ ಯೋಜನೆಯನ್ನು ನರೆಗಾಯೋಜನೆಯಡಿ ಸಂಯೋಜಿಸಿ ₹100 ಕೋಟಿಗಳ ವೆಚ್ಚದಲ್ಲಿ ಪುನಃ ಜಾರಿಗೊಳಿಸುತ್ತಿರುವುದು ಉತ್ತಮಕ್ರಮವಾಗಿದೆ.ನವೋದ್ಯಮಗಳ ಪ್ರೋತ್ಸಾಹಕ್ಕೆ ₹10 ಕೋಟಿ ಒದಗಿಸಲಾಗಿದೆ.ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುತ್ತಿರುವ ಅಲ್ಪಾವಧಿ ಸಾಲದ ಮಿತಿಯನ್ನು ₹ 3 ಲಕ್ಷಗಳಿಂದ ₹ 5 ಲಕ್ಷಗಳಿಗೆ ಹೆಚ್ಚಿಸಿದ್ದು,ಶೇ 3 ರ ಬಡ್ಡಿ ದರದಲ್ಲಿ ನೀಡುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯನ್ನು ₹ 10 ಲಕ್ಷಗಳಿಂದ ₹15 ಲಕ್ಷಗಳಿಗೆ ಹೆಚ್ಚಿಸಲಾಗಿದೆ.35ಲಕ್ಷಕ್ಕಿಂತ ಹೆಚ್ಚಿನ ರೈತರುಗಳಿಗೆ ₹25000 ಕೋಟಿಗಳಷ್ಟು ಸಾಲ ವಿತರಿಸುವ ಗುರಿ ಹೊಂದಲಾಗಿದೆ.ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರ ಸಂಕಷ್ಟನಿವಾರಣೆಗಾಗಿ ಅನುಗ್ರಹ ಯೋಜನೆಯ ಪುನರಾರಂಭಿಸಿ ಕುರಿ ಮತ್ತು ಆಡುಗಳಿಗೆ ₹ 5000 ಹಾಗೂ ಹಸು,ಎತ್ತು,ಎಮ್ಮೆಗಳಿಗೆ ₹10,000 ಗಳ ಪರಿಹಾರ ನೀಡಲು ಉದ್ದೇಶಿಸಲಾಗಿದೆ.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯೂ ಸೇರಿದಂತೆ ಪ್ರಾದೇಶಿಕ ಅಭಿವೃದ್ಧಿಯ ಅಸಮತೋಲನ ತಪ್ಪಿಸಲು ಮಹತ್ವದ ಕ್ರಮಗಳಿಗೆ ಒತ್ತು ನೀಡಲಾಗಿದೆ.ಶಿಕ್ಷಣ,ಆರೋಗ್ಯ ಮತ್ತು ಮೂಲಸೌಕರ್ಯ ಕ್ಷೇತ್ರಗಳ ಅಭಿವೃದ್ಧಿ ಒತ್ತು ನೀಡಲಾಗಿದೆ.ಕೆಲವು ಕ್ಷೇತ್ರಗಳಿಗೆ ಒದಗಿಸಿದ ಅನುದಾನ ಕಡಿಮೆ ಆಗಿರಬಹುದಾದರೂ ಅದರಿಂದ ದೊಡ್ಡ ಪರಿಣಾಮವೇನೂ ಆಗದು.ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರು ಜನಕೇಂದ್ರಿತ ಅರ್ಥವ್ಯವಸ್ಥೆಯಡಿ ಸಮಷ್ಟಿ ಕಲ್ಯಾಣದ ಸರ್ವೋದಯ ಬಜೆಟ್ ಅನ್ನು ನೀಡಿದ್ದಾರೆ.

About The Author