ಮೂರನೇ ಕಣ್ಣು : ಸಂವಿಧಾನದ ಪೀಠಿಕೆ : ಮುಕ್ಕಣ್ಣ ಕರಿಗಾರ

ಪ್ರಪಂಚದ‌ ಲಿಖಿತ ಸಂವಿಧಾನವನ್ನುಳ್ಳ ರಾಷ್ಟ್ರಗಳೆಲ್ಲವುಗಳ ಸಂವಿಧಾನಗಳು ಪೀಠಿಕೆಯನ್ನು ಹೊಂದಿವೆ.ಪೀಠಿಕೆ ಇಲ್ಲವೆ ಪ್ರಸ್ತಾವನೆ ಎನ್ನುವುದು ಸಂವಿಧಾನದ ಮುಖ್ಯಭಾಗವಾಗಿದ್ದು ಸಂವಿಧಾನವನ್ನು ಯಾವ ಉದ್ದೇಶಗಳ ಸಾಧನೆಗಾಗಿ ರಚಿಸಲಾಗಿದೆ ಎನ್ನುವುದನ್ನು ವಿವರಿಸುತ್ತದೆ.ಪೀಠಿಕೆಯು ಸಂವಿಧಾನದ ಹೃದಯ ಮತ್ತು‌ ಕೀಲಿಕೈ ಇದ್ದಂತೆ.ಭಾರತದ ಸಂವಿಧಾನಕ್ಕೆ ಪೀಠಿಕೆಯನ್ನು ನೀಡಿದವರು ಪಂಡಿತ ಜವಾಹರಲಾಲ್ ನೆಹರೂ ಅವರು.ನೆಹರೂ ಅವರು ಡಿಸೆಂಬರ್ 13,1946 ರಂದು ಮಂಡಿಸಿದ ‘ ಧ್ಯೇಯಗಳ ಗೊತ್ತುವಳಿ'(Objectives Resolution)ಯಲ್ಲಿ ಪೀಠಿಕೆಯನ್ನು ನೀಡಿದ್ದು ಸಂವಿಧನಾ ರಚನಾ ಸಭೆಯು ಧ್ಯೇಯಗಳ ಗೊತ್ತುವಳಿಯನ್ನು 1947 ರ ಜನೆವರಿ 22 ರಂದು ಅಂಗೀಕರಿಸಿತು.ಸಂವಿಧಾನದ ಪೀಠಿಕೆಯು ಹೀಗಿದೆ ;

“ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ,ಸಮಾಜವಾದಿ,ಜಾತ್ಯಾತೀತ,ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ
ರೂಪಿಸುವುದಕ್ಕಾಗಿ;

ಭಾರತದ ಎಲ್ಲಾ ಪ್ರಜೆಗಳಿಗೆ

ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು;
ವಿಚಾರ, ಅಭಿವ್ಯಕ್ತಿ,ನಂಬಿಕೆ,ಧರ್ಮಶ್ರದ್ಧೆ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ;
ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯು ಸರ್ವರಿಗೂ ದೊರೆಯುವಂತೆ ಮಾಡುವುದಕ್ಕಾಗಿ;
ವ್ಯಕ್ತಿಗೌರವ,ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಿ,ಭ್ರಾತೃತ್ವವನ್ನು ಎಲ್ಲರಲ್ಲೂ ವೃದ್ಧಿಸುವುದಕ್ಕಾಗಿ ದೃಢ ಸಂಕಲ್ಪ ಮಾಡಿ,ನಮ್ಮ ಸಂವಿಧಾನ ರಚನಾಸಭೆಯಲ್ಲಿ 1949 ನೆಯ ಇಸವಿಯ ನವೆಂಬರ್ ತಿಂಗಳ 26ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು,ಅಂಗೀಕರಿಸಿ,ಶಾಸನವಾಗಿ ವಿಧಿಸಿಕೊಂಡಿದ್ದೇವೆ”

ಸಂವಿಧಾನದ ಮೂಲ ಪೀಠಿಕೆಯು ಸಾರ್ವಭೌಮ,ಪ್ರಜಾಸತ್ತಾತ್ಮಕ,ಗಣರಾಜ್ಯ ಎಂಬ ಪದಗಳನ್ನು ಮಾತ್ರ ಒಳಗೊಂಡಿತ್ತು.ಸಂವಿಧಾನಕ್ಕೆ 1976 ರಲ್ಲಿ ತಂದ 42 ನೆಯ ತಿದ್ದುಪಡಿಯ ಮೂಲಕ ‘ಸಮಾಜವಾದಿ’ ಮತ್ತು ‘ಜಾತ್ಯಾತೀತ ‘ಎನ್ನುವ ಪದಗಳನ್ನು ಸೇರಿಸಲಾಯಿತು.ಇದೇ ತಿದ್ದುಪಡಿಯು ಸಂವಿಧಾನದ ಮೂಲ ಪೀಠಿಕೆಯ ದೇಶದ ಏಕತೆ ಎನ್ನುವ ಪದಕ್ಕೆ ‘ದೇಶದ ಏಕತೆ ಮತ್ತು ಸಮಗ್ರತೆ ‘ಎನ್ನುವ ಪದಗಳನ್ನು ಸೇರಿಸಿತು.

ನಮ್ಮ ಸಂವಿಧಾನದ ಪೀಠಿಕೆಯು ಎರಡು ಉದ್ದೇಶಗಳನ್ನು ಈಡೇರಿಸುತ್ತದೆ.ಅವು
(೧) ಪೀಠಿಕೆಯು ಸಂವಿಧಾನವು ಯಾವ ಮೂಲದಿಂದ ತನ್ನ ಅಧಿಕಾರವನ್ನು ಪಡೆಯುತ್ತದೆ ಎನ್ನುವುದನ್ನು ವಿವರಿಸುತ್ತದೆ
(೨) ಪೀಠಿಕೆಯು ಸಂವಿಧಾನವು ಯಾವ ಧ್ಯೇಯೋದ್ದೇಶಗಳನ್ನು ಸಂಸ್ಥಾಪಿಸಿ ,ಸಾಧಿಸಹೊರಟಿದೆ ಎನ್ನುವುದನ್ನು ವಿವರಿಸುತ್ತದೆ.

ಸಂವಿಧಾನದ ಪೀಠಿಕೆಯ ಅರ್ಥವಿವರಣೆ.

ಸಂವಿಧಾನದ ಪೀಠಿಕೆಯು ಹೊಂದಿರುವ ಪದಗಳು ನಮ್ಮ ಸಂವಿಧಾನದ ಧ್ಯೆಯೋದ್ದೇಶಗಳನ್ನು ವಿವರಿಸುತ್ತಿದ್ದು ಆ ಪದಗಳ ಅರ್ಥವಿವರಣೆಯನ್ನು ಗಮನಿಸೋಣ

(೧) ಪ್ರಜೆಗಳೇ ಸಂವಿಧಾನದ ಅಧಿಕಾರ ಮೂಲ

ಭಾರತದ ಸಂವಿಧಾನದ ಪೀಠಿಕೆಯು ‘ ಭಾರತದ ಪ್ರಜೆಗಳಾದ ನಾವು’ ಎನ್ನುವ ಪದಪುಂಜಗಳಿಂದ ಪ್ರಾರಂಭವಾಗುತ್ತಿದ್ದು ಭಾರತದ ಪ್ರಜೆಗಳೇ ಸಂವಿಧಾನದ ಅಧಿಕಾರದ ಮೂಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.ಭಾರತದ ಸಂವಿಧಾನವು ತನ್ನ ರಾಜಕೀಯ ಅಧಿಕಾರವನ್ನು ದೇಶದ ಪ್ರಜಾಸಮಸ್ತರ ಮೂಲಕವಾಗಿ ಪಡೆದಿದೆ.ಭಾರತದ ಸಂವಿಧಾನ ರಚನಾ ಸಭೆಯಲ್ಲಿ ದೇಶದ ಎಲ್ಲ,ಜಾತಿ- ಜನಾಂಗಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳಿದ್ದರು.

(೨) ಸಾರ್ವಭೌಮ ರಾಷ್ಟ್ರ– ‘ಸಾರ್ವಭೌಮತ್ವ’ ಎಂದರೆ ರಾಜ್ಯದ ಅನಿರ್ಬಂಧಿತ ಸ್ವಾತಂತ್ರ್ಯಾಧಿಕಾರ.ದೇಶವು ಯಾವುದೇ ವಿಷಯದಲ್ಲಿ ಶಾಸನ ಮಾಡಿ ಅದನ್ನು ಅನುಷ್ಠಾನಗೊಳಿಸುವ ಸಾಂವಿಧಾನಿಕ ಅಧಿಕಾರವೇ ಸಾರ್ವಭೌಮತ್ವ.ಭಾರತವು ಯಾವ ದೇಶದ ಆಧೀನ ರಾಷ್ಟ್ರವಾಗಿರದೆ ಅದು ಒಂದು ಸರ್ವತಂತ್ರ ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಗಿದೆ.

(೩) ಸಮಾಜವಾದಿ — ಸಂವಿಧಾನಕ್ಕೆ 1976 ರಲ್ಲಿ ತರಲಾದ 42 ನೆಯ ತಿದ್ದುಪಡಿಯ ಮೂಲಕ ‘ ಸಮಾಜವಾದಿ'( socialistic) ಎನ್ನುವ ಪದವನ್ನು ಸೇರಿಸಲಾಗಿದೆ.ಭಾರತದಲ್ಲಿ ಬಡವರು- ಶ್ರೀಮಂತರು ಎನ್ನುವ ಭೇದಭಾವವಿಲ್ಲದೆ ಎಲ್ಲರಿಗೂ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಖಚಿತಪಡಿಸಿ ದೇಶದ ಪ್ರಜಾಸಮಸ್ತರ ಕಲ್ಯಾಣವನ್ನು ಸಾಧಿಸುವ ಇಚ್ಛೆಯನ್ನು ಹೊಂದಿದ ಸಮಾಜವಾದಿ ರಾಷ್ಟ್ರ ಭಾರತ ಎಂಬುದು ‘ ಸಮಾಜವಾದಿ’ ಶಬ್ದದ ಅರ್ಥ.

(೪) ಜಾತ್ಯಾತೀತ—ಭಾರತವು ಧಾರ್ಮಿಕ ವಿಷಯದಲ್ಲಿ ತಟಸ್ಥನಿಲುವು ತಳೆದಿದೆ ಎನ್ನುವುದೇ ಜಾತ್ಯಾತೀತ ( secular) ಪದದ ಅರ್ಥ.ಸಂವಿಧಾನವು ಯಾವುದೇ ಧರ್ಮವನ್ನು ರಾಷ್ಟ್ರೀಯ ಧರ್ಮ ಎಂದು ಸ್ವೀಕರಿಸದೆ ಭಾರತದಲ್ಲಿ ಇರುವ ಎಲ್ಲ ಧರ್ಮೀಯರನ್ನು ಸಮಭಾವದಿಂದ ಕಾಣುತ್ತದೆ.ಭಾರತದಲ್ಲಿ ಹಿಂದುಗಳು ಬಹುಸಂಖ್ಯಾತರಾಗಿದ್ದರೂ ಹಿಂದೂ ಧರ್ಮವು ಭಾರತದ ರಾಷ್ಟ್ರೀಯ ಧರ್ಮವಲ್ಲ.ಹಿಂದೂಗಳಂತೆಯೇ ಮುಸ್ಲಿಮರು,ಕ್ರಿಶ್ಚಿಯನ್ನರು,ಜೈನರು,ಬೌದ್ಧರು,ಸಿಖ್ಖರು,ಪಾರ್ಸಿಗಳು ಅವರವರ ಧರ್ಮದ ಸಂಪ್ರದಾಯ,ನಂಬಿಕೆ,ಆಚರಣೆಗಳನ್ನು ಪಾಲಿಸುವ ಧಾರ್ಮಿಕ ಸ್ವಾತಂತ್ರ್ಯವನ್ನು ಹೊಂದಿರುವುದೇ ಜಾತ್ಯಾತೀತ ಅಥವಾ ಧರ್ಮನಿರಪೇಕ್ಷ ತತ್ತ್ವದ ಅರ್ಥ,ಮಹತ್ವ.
(೫) ಪ್ರಜಾಸತ್ತಾತ್ಮಕ — ಭಾರತವು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದೆ.ಇಲ್ಲಿಯ ಪ್ರಜೆಗಳು ತಮ್ಮ ಪ್ರತಿನಿಧಿಗಳ ಮೂಲಕ ರಾಷ್ಟ್ರದ ಆಳ್ವಿಕೆಯನ್ನು ನಿಯಮಿಸಿಕೊಂಡಿದ್ದಾರೆ.ವಯಸ್ಕ ಮತದಾನದ ಪದ್ಧತಿಯ ಮೂಲಕ ದೇಶದ ಸಂಸತ್ತಿಗೆ ಮತ್ತು ರಾಜ್ಯಗಳ ಶಾಸನಸಭೆಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿ,ತಾವು ಆಯ್ಕೆ ಮಾಡಿದ ಪ್ರತಿನಿಧಿಗಳ ಮೂಲಕ ಪ್ರಜೆಗಳು ಶಾಸನಗಳನ್ನು ರೂಪಿಸಿಕೊಂಡು,ಅಭಿವೃದ್ಧಿ ಹೊಂದುತ್ತಿದ್ದಾರೆ.

(೬)ಗಣರಾಜ್ಯ –ಭಾರತವು ಪ್ರಜೆಗಳ ಪರಮಾಧಿಕಾರವನ್ನು ಹೊಂದಿದ ಗಣರಾಜ್ಯವಾಗಿದ್ದು ರಾಜ್ಯಗಳ ಒಕ್ಕೂಟವಾಗಿದೆ.ಭಾರತದ ಗಣತಂತ್ರ ವ್ಯವಸ್ಥೆಯ ಮುಖ್ಯಸ್ಥರಾಗಿ ರಾಷ್ಟ್ರತಿಯವರು ಮತ್ತು ಅವರ ಪ್ರತಿನಿಧಿಗಳಾಗಿ ರಾಜ್ಯಗಳಲ್ಲಿ ರಾಜ್ಯಪಾಲರುಗಳು ಇದ್ದರೂ ರಾಷ್ಟ್ರಪತಿ ಮತ್ತು ರಾಜ್ಯಪಾಲರು ಪ್ರಜಾಪ್ರತಿನಿಧಿಗಳಿಂದ ನಡೆಸಲ್ಪಡುವ ಸರಕಾರಗಳ ಸಲಹೆಯಂತೆ ಕಾರ್ಯನಿರ್ವಹಿಸಬೇಕು.ರಾಷ್ಟ್ರಪತಿಯವರು ರಾಷ್ಟ್ರದ ಮುಖ್ಯಸ್ಥರಾದರೂ ಆ ಹುದ್ದೆಯು ಅನುವಂಶಿಕ ಹುದ್ದೆಯಾಗಿರದೆ ಪ್ರಜಾಪ್ರತಿನಿಧಿಗಳ ಮೂಲಕ ರಾಷ್ಟ್ರಪತಿಯವರು ಪರೋಕ್ಷವಾಗಿ ಚುನಾಯಿಸಲ್ಪಡುತ್ತಾರೆ.ಭಾರತದಲ್ಲಿ ಸಾರ್ವಜನಿಕ ಹುದ್ದೆಗಳನ್ನು ಪಡೆಯುವ ಹಕ್ಕು ಎಲ್ಲ ಜಾತಿ,ವರ್ಗಗಳ ಜನತೆಗೆ ಇರುವುದು ಗಣರಾಜ್ಯದ ಪ್ರಮುಖ ಲಕ್ಷಣ. ನಮ್ಮ ಸಂವಿಧಾನದ ಪೀಠಿಕೆಯು ಕೆಲವು ಆದರ್ಶಗಳನ್ನು ಸಾಧಿಸುವ ಘನವಾದ ಉದ್ದೇಶವನ್ನು ಹೊಂದಿದೆ.ಆ ಮಹೋನ್ನತ ಆದರ್ಶಗಳು;
(೭) ಸಾಮಾಜಿಕ ನ್ಯಾಯ— ಸಾಮಾಜಿಕ ನ್ಯಾಯ ಎಂದರೆ ಜಾತಿ,ಲಿಂಗ,ವಯಸ್ಸು,ಮತ- ಧರ್ಮಗಳ ಭೇದವನ್ನೆಣಿಸದೆ ದೇಶದ ಪ್ರಜಾಸಮಸ್ತರೆಲ್ಲರೂ ಕಾನೂನಿನ ಮುಂದೆ ಸಮಾನರು ಮತ್ತು ಯಾವುದೇ ಪಕ್ಷಪಾತವಿಲ್ಲದೆ ,ಅಸಮಾನತೆಯು ಇಲ್ಲದೆ ಸಮಾನ ಹಕ್ಕು- ಅವಕಾಶಗಳನ್ನು ಹೊಂದಿರುವ ಸಮತೆಯ ನ್ಯಾಯ.
‘ ಆರ್ಥಿಕ ನ್ಯಾಯ’ ಎಂದರೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ತೊಲಗಿಸಿ ರಾಷ್ಟ್ರದ ಸಂಪತ್ತನ್ನು ಸಮಾನವಾಗಿ ಅನುಭೋಗಿಸುವಂತಹ ಅವಕಾಶಗಳನ್ನು ಕಲ್ಪಿಸುವುದು.
‘ರಾಜಕೀಯ ನ್ಯಾಯ’ ಎಂದರೆ ರಾಜಕಾರಣದಲ್ಲಿ ಎಲ್ಲ ಜಾತಿ,ವರ್ಗಗಳಿಗೂ ಮುಕ್ತ ಅವಕಾಶ.ಮತದಾನದ ಹಕ್ಕು ದೇಶದ ಎಲ್ಲ ಪ್ರಜೆಗಳಿಗೂ ಇದೆ ಮತ್ತು ಎಲ್ಲ ಜಾತಿ ವರ್ಗಗಳ ಜನರು ರಾಜಕಾರಣ ಪ್ರವೇಶಿಸುವ ಹಕ್ಕು ಪಡೆದಿದ್ದಾರೆ.
(೮) ಸ್ವಾತಂತ್ರ್ಯ — ಸಮಾಜದ ಎಲ್ಲ ಸ್ತರಗಳ ಜನತೆಯು ಯಾವುದೇ ತಾರತಮ್ಯ,ಪಕ್ಷಪಾತಕ್ಕೊಳಗಾಗದೆ ಮುಕ್ತವಾಗಿ ಸಂಚರಿಸುವ,ಮುಕ್ತವಾಗಿ ವ್ಯವಹರಿಸುವ,ಮನಸ್ಸು ಬಂದಂತೆ ಬದುಕುವ ಹಕ್ಕನ್ನು ಪಡೆದಿರುವುದೇ ಸ್ವಾತಂತ್ರ್ಯ.ಭಾರತದ ಪ್ರಜೆಗಳು ಯಾರು ಯಾರಿಗೂ ಗುಲಾಮರಲ್ಲ,ಒಡೆಯ- ಸೇವಕ ಎನ್ನುವ ತರತಮ ಭಾವನೆಗೆ ಅವಕಾಶವಿಲ್ಲ.ಮಹಿಳೆ- ಪುರುಷ ಎನ್ನುವ ಭೇದಭಾವ ಇಲ್ಲ.ಎಲ್ಲರಿಗೂ ಉನ್ನತಿ ಹೊಂದುವ,ಉದ್ಧಾರವಾಗುವ ಸಮಾನ ಹಕ್ಕು ಅವಕಾಶಗಳಿವೆ.
(೯) ಸಮಾನತೆ— ಭಾರತದ ಸಂವಿಧಾನದ ಪೀಠಿಕೆಯು ದೇಶದ ಪ್ರಜೆಗಳೆಲ್ಲರೂ ಸಮಾನರು,ಅವರಲ್ಲಿ ರಾಜ್ಯವು ಯಾವುದೇ ಭೇದಭಾವಮಾಡತಕ್ಕದ್ದಲ್ಲ ಎನ್ನುತ್ತದೆ.ಹಕ್ಕು ಅವಕಾಶಗಳನ್ನು ಅನುಭವಿಸಲು ಜಾತಿ,ಮತ- ಧರ್ಮಗಳು ಅಡ್ಡಿಯಾಗವು.ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ.ಮೇಲು- ಕೀಳು,ಬಡವ- ಶ್ರೀಮಂತ ಎನ್ನುವ ಭೇದ ಭಾವವಿಲ್ಲದೆ ರಾಜಕೀಯ ಮತ್ತು ಸಾರ್ವಜನಿಕ ಹುದ್ದೆಗಳನ್ನು ಎಲ್ಲರೂ ಅನುಭವಿಸಬಹುದಾಗಿದೆ.

(೧೦) ಭ್ರಾತೃತ್ವ— ದೇಶದ ಪ್ರಜೆಗಳೆಲ್ಲರೂ ಪರಸ್ಪರ ಸಹೋದರ ಭಾವದಿಂದ ವರ್ತಿಸುವುದೇ ಭ್ರಾತೃತ್ವವಾಗಿದ್ದು ದೇಶವಾಸಿಗಳೆಲ್ಲರೂ ಹಿಂದೂ ಮುಸ್ಲಿಂ,ಹಿಂದೂ ಕ್ರಿಶ್ಚಿಯನ್ ಎಂದು ಕಚ್ಚಾಡದೆ ಪರಸ್ಪರರು ಸಹೋದರರಂತೆ ವರ್ತಿಸಿ ರಾಷ್ಟ್ರದ ಏಕತೆಯನ್ನು,ಅಖಂಡತೆಯನ್ನು ಎತ್ತಿಹಿಡಿಯಬೇಕಿದೆ.ಅವಕಾಶಗಳನ್ನು ಸಹೋದರತ್ವ,ಬಂಧುತ್ವಭಾವದಿಂದ ಪರಸ್ಪರರು ಹಂಚಿ ಉಣ್ಣಬೇಕಿದೆ.

(೧೧) ಸಂವಿಧಾನವು ಅಂಗೀಕಾರಗೊಂಡ ಮತ್ತು ಅದು ಜಾರಿಗೆ ಬಂದ ದಿನ — ಸಂವಿಧಾನದ ಪೀಠಿಕೆಯ ಕೊನೆಯ ಭಾಗದಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನಾಂಕವನ್ನು ಉಲ್ಲೇಖಿಸಲಾಗಿದೆ.ನವೆಂಬರ್ 26,1949 ರಂದು ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿ,ಶಾಸನಬದ್ಧಗೊಳಿಸಿ ರಾಷ್ಟ್ರದ ಜನತೆಯ ಹೆಸರಿನಲ್ಲಿ ರಾಷ್ಟ್ರಕ್ಕೆ ಅರ್ಪಿಸಲಾಯಿತೆಂದು ಪೀಠಿಕೆಯು ಸಾರುತ್ತಿದೆ.ಸಂವಿಧಾನವು ಜನೆವರಿ 26,1950 ರಂದು ಜಾರಿಗೆ ಬಂದಿತು.

ಸಂವಿಧಾನದ ಪೀಠಿಕೆಯ ಮಹತ್ವ

ಭಾರತದ ಸಂವಿಧಾನದ ಪೀಠಿಕೆಯು ಭಾರತದ ಸಮಸ್ತ ಅಧಿಕಾರವು ದೇಶದ ಪ್ರಜಾಸಮಸ್ತರಲ್ಲಿಯೇ ಇದೆ ಎಂದು ಸಾರುತ್ತ ಪ್ರಜೆಗಳೇ ಪ್ರಭುತ್ವದ ಮೂಲ ಎಂದು ಪ್ರತಿಪಾದಿಸಿದೆ.ರಾಜಕೀಯ ನೀತಿ- ನಿಲುವುಗಳು,ಧೋರಣೆಗಳು,ಪ್ರಜೆಗಳ ಹಕ್ಕು- ಅವಕಾಶಗಳ ಬಗ್ಗೆ ಪ್ರಸ್ತಾಪಿಸುವ ಸಂವಿಧಾನದ ಪೀಠಿಕೆಯು ನಮ್ಮ ಸಂವಿಧಾನದ ಧ್ಯೇಯೋದ್ದೇಶಗಳನ್ನು ಅರ್ಥಮಾಡಿಕೊಳ್ಳುವ ಬಹುಮುಖ್ಯಭಾಗವಾಗಿದೆ.ಸಂವಿಧಾನದ ತತ್ತ್ವ- ಸತ್ತ್ವಗಳ ಸಾರವೇ ಪೀಠಿಕೆಯಾಗಿದೆ.ಸಂವಿಧಾನ ಸಭೆಯ ಸದಸ್ಯರಾದ ಪಂಡಿತ ಭಾರ್ಗವ ಅವರು ” ಪೀಠಿಕೆಯು ಸಂವಿಧಾನದ ಅತ್ಯಂತ ಪ್ರಮುಖ ಭಾಗವಾಗಿದೆ.ಅದು ಸಂವಿಧಾನದ ಆಭರಣವಾಗಿದೆ.ಅದು ಪರಿಪೂರ್ಣವೆನಿಸಿದೆ.ಅಷ್ಟೇ ಅಲ್ಲ ಸಂವಿಧಾನದ ಪೀಠಿಕೆಯು ಸಂವಿಧಾನದ ಕೈಗನ್ನಡಿ,ರಾಜಕೀಯ ಜಾತಕ,ಸಂವಿಧಾನದ ಆತ್ಮವಾಗಿದೆ” ಎಂದು ಸಂವಿಧಾನದ ಪೀಠಿಕೆಯ ಮಹತ್ವವನ್ನು ಎತ್ತಿ ಹೇಳಿದ್ದಾರೆ.

ರಾಜನೀತಿಜ್ಞರಾಗಿದ್ದ ಕೆ.ಎಂ ಮುನ್ಶಿ ಅವರು ” ಪೀಠಿಕೆಯು ಪ್ರಜಾಸತ್ತಾತ್ಮಕ ಗಣರಾಜ್ಯದ ಭವಿಷ್ಯವನ್ನು ತಿಳಿಸುತ್ತದೆ.ಜೊತೆಗೆ ರಾಜಕೀಯ ಜಾತಕವಾಗಿದೆ” ಎಂದು ಸಂವಿಧಾನದ ಪೀಠಿಕೆಯನ್ನು ವ್ಯಾಖ್ಯಾನಿಸಿದ್ದಾರೆ.
ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರ ಅಭಿಪ್ರಾಯದಂತೆ ಸಂವಿಧಾನದ ಪೀಠಿಕೆಯು ” ಪೀಠಿಕೆಯು ಶಾಸನಕ್ಕೆ ಒಂದು ರೀತಿಯ ಮುನ್ನುಡಿಯಂತಿದ್ದು,ಅನೇಕ ಸಂದರ್ಭಗಳಲ್ಲಿ ಕಾರ್ಯನೀತಿ ಹಾಗೂ ಶಾಸನಿಕ ಉದ್ದೇಶಗಳನ್ನು ತಿಳಿಸಲು ನೆರವಾಗುತ್ತದೆ”

ಜಸ್ಟೀಸ್ ಮಹಾಜನ್ ಅವರು ” ಪೀಠಿಕೆಯು ಸಂವಿಧಾನವನ್ನು ಭವ್ಯಗೊಳಿಸುತ್ತದೆ” ಎಂದು ಅದರ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಪ್ರಜಾಪ್ರಭುತ್ವ ಸರ್ಕಾರಗಳ ಬಗೆಗಿನ ಆಧುನಿಕ ಚಿಂತಕರಾದ ಪ್ರೊ.ಅರ್ನೆಸ್ಟ್ ಬಾರ್ಕರ್ ಅವರು ‘ಸೋಶಿಯಲ್ ಅಂಡ್ ಪೋಲಿಟಿಕಲ್ ಥಿಯರಿ’ ಎನ್ನುವ ತಮ್ಮ ಪುಸ್ತಕದಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ” ಪುಸ್ತಕದ ಬಹುಭಾಗವು ಸಂಕ್ಷಿಪ್ತ ಮತ್ತು ಶಕ್ತಿಶಾಲಿ ರೀತಿಯ ವಾದವನ್ನೊಳಗೊಂಡಿದ್ದು,ಅದರಂತೆಯೇ ಅದೊಂದು ಪ್ರಧಾನಸ್ವರವಾಗಿ ಸೇವೆಮಾಡಬಹುದಾಗಿದೆ” ಎಂದು ಶ್ಲಾಘಿಸಿದ್ದಾರೆ.

ಸಂವಿಧಾನದ ಪೀಠಿಕೆ ಮತ್ತು ನ್ಯಾಯಾಲಯಗಳು

ಭಾರತದ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳು ದೇಶಕ್ಕೆ ಸಂಬಂಧಿಸಿದ ಮಹತ್ವದ ತೀರ್ಪುಗಳನ್ನು ನೀಡುವಾಗ ಸಂವಿಧಾನದ ಪೀಠಿಕೆಯತ್ತ ಕಣ್ಣು ಹಾಯಿಸುತ್ತವೆ ಎನ್ನುವುದು ಗಮನಾರ್ಹವಾದ ಸಂಗತಿ.ಪೀಠಿಕೆಯನ್ನು ನ್ಯಾಯಾಲಯಗಳ ತೀರ್ಪುಗಳ ಮೂಲಕ ಅನುಷ್ಠಾನಕ್ಕೆ ತರಲಾಗದೆ ಇದ್ದರೂ ಸಂವಿಧಾನದ ಆಶಯವು ಪೀಠಿಕೆಯಲ್ಲಿ ಸುವ್ಯಕ್ತವಾಗಿದೆ ಎನ್ನುವುದು ಸುಪ್ರೀಂಕೋರ್ಟ್ ಗಮನಿಸಿದೆ.1960 ರ ಬೆರುಬಾರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಪೀಠಿಕೆಯು ಸಂವಿಧಾನದ ಭಾಗವಲ್ಲ ಎಂದು ತೀರ್ಪು ನೀಡಿತ್ತು.ಅದೇ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿನ ದೋಷವನ್ನು‌ ಪರಿಗಣಿಸಿ ,ಕೇಶವಾನಂದ ಭಾರತಿ ಪ್ರಕರಣ (1973) ದಲ್ಲಿ ಪೀಠಿಕೆಯು ಸಂವಿಧಾನದ ಮೂಲಭಾಗ ಎಂದು ತೀರ್ಪು ನೀಡುವ ಮೂಲಕ ಸಂವಿಧಾನದ ಪೀಠಿಕೆಯ ಮಹತ್ವವನ್ನು ಪ್ರತಿಷ್ಠಾಪಿಸಿತು.ಅಂದಿನಿಂದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪ್ರಕರಣಗಳು ಸೇರಿದಂತೆ ಮಹತ್ವದ ಪ್ರಕರಣಗಳಲ್ಲಿ ಪೀಠಿಕೆಯನ್ನು ಸಂವಿಧಾನದ ಮೂಲಭಾಗ,ಮುಖ್ಯಭಾಗ ಮತ್ತು ಸಂವಿಧಾನದ ಹೃದಯ ಎನ್ನುವ ರೀತಿಯಲ್ಲಿ ಪರಿಗಣಿಸಿ,ಅರ್ಥೈಸುತ್ತಿದೆ.

About The Author