ಮೂರನೇ ಕಣ್ಣು : ಸರ್ಕಾರಿ ವ್ಯಾಜ್ಯ ನಿರ್ವಹಣೆಗೆ ಕಾಯ್ದೆ’– ಒಂದು ಉತ್ತಮ ನಿರ್ಧಾರ : ಮುಕ್ಕಣ್ಣ ಕರಿಗಾರ

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾರದ ಎಚ್ ಕೆ ಪಾಟೀಲ ಅವರು ಸರ್ಕಾರದ ವ್ಯಾಜ್ಯಗಳ ನಿರ್ವಹಣೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ‘ ಸರ್ಕಾರಿ ವ್ಯಾಜ್ಯ ನಿರ್ವಹಣಾ ಕಾಯ್ದೆ’ ರೂಪಿಸಲು ಮಸೂದೆ ಮಂಡಿಸುವ ತಮ್ಮ ಮನದ ಇಂಗಿತವನ್ನು ಅವರನ್ನು ಭೇಟಿ ಮಾಡಿದ ಮಾಧ್ಯಮಪ್ರತಿನಿಧಿಗಳೆದುರು ಪ್ರಸ್ತಾಪಿಸಿದ್ದಾರೆ.ಸಚಿವರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ನ್ಯಾಯಾಲಯಗಳಲ್ಲಿ 1.85 ಲಕ್ಷ ಪ್ರಕರಣಗಳಲ್ಲಿ ಸರಕಾರಕ್ಕೆ ಸೋಲಾಗಿದೆ ಎನ್ನುವ ವಿಷಯವನ್ನು ಮಾಧ್ಯಮ ಪ್ರತಿನಿಧಿಗಳೆದುರು ಪ್ರಸ್ತಾಪಿಸಿದ್ದಾರೆ.ನಿಜಕ್ಕೂ ಇದು ಆತಂಕಕಾರಿಯಾದ,ಗಂಭೀರ ವಿಷಯ. ಕೇವಲ ಎರಡು ವರ್ಷಗಳ ಅವಧಿಯಲ್ಲಿ ಇಷ್ಟುದೊಡ್ಡ ಸಂಖ್ಯೆಯಲ್ಲಿ ವಿವಿಧ ಕೋರ್ಟ್ ಗಳಲ್ಲಿ ಸರಕಾರಿ ವ್ಯಾಜ್ಯಗಳಲ್ಲಿ ಸೋಲಾಗಿರುವುದು ಬಹುದೊಡ್ಡ ಹಿನ್ನೆಡೆಯಲ್ಲದೆ ಸರಕಾರಕ್ಕೆ ಹತ್ತು ಹಲವು ಕೋಟಿ ರೂಪಾಯಿಗಳಷ್ಟು ನಷ್ಟವಾಗಿರುತ್ತದೆ.

ಸಚಿವರು ‘ ಸರ್ಕಾರಿ ವ್ಯಾಜ್ಯ ನಿರ್ವಹಣೆ’ಯಲ್ಲಿ ಸುಧಾರಣೆ ತರಲು ಮುಂದಾಗಿರುವುದು ಉತ್ತಮ ಮತ್ತು ಅಭಿನಂದನೀಯ ಕಾರ್ಯ.ಇದೇ ವೇಳೆಗೆ ಎರಡು ವರ್ಷಗಳ ಅವಧಿಯಲ್ಲಿ 1.85 ಲಕ್ಷ ಸರಕಾರಿ ವ್ಯಾಜ್ಯಗಳು ಸೋಲಲು ಕಾರಣವೇನು ಎನ್ನುವುದನ್ನು ಕಂಡು ಹಿಡಿಯಲು ತಜ್ಞರ ಒಂದು ಸಮಿತಿಯನ್ನು ನೇಮಿಸಿ,ನ್ಯಾಯಾಲಯಗಳಲ್ಲಿ ಪ್ರಕರಣಗಳು ಸೋಲಲು ಕಾರಣರಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ,ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಲ್ಲದೆ ವ್ಯಾಜ್ಯಕ್ಕಾಗಿ ಸರಕಾರವು ಮಾಡಿದ ವೆಚ್ಚವನ್ನು ಸಂಬಂಧಿತ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು.ಅಂದಾಗ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ.ಸರಕಾರಿ ವ್ಯಾಜ್ಯ ನಿರ್ವಹಣೆಯಲ್ಲಿ ಜನಪ್ರತಿನಿಧಿಗಳ ಪಾತ್ರ ಇರುವುದಿಲ್ಲ; ಇದು ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಕಾರ್ಯ.ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರಕರಣಗಳಲ್ಲಿ ಸೋಲು ಉಂಟಾಗಲು ಸರಕಾರಿ ಅಧಿಕಾರಿಗಳ ಜಡತ್ವವೇ ಕಾರಣ.

ಸರಕಾರಿ ಅಧಿಕಾರಿಗಳು ನ್ಯಾಯಾಲಯಗಳ ಪ್ರಕರಣಗಳಲ್ಲಿ ಬಹಳ ನಿರ್ಲಕ್ಷ್ಯ ಭಾವನೆ ತಳೆಯುತ್ತಿದ್ದಾರೆ.ಹಿರಿಯ ಐಎಎಸ್ ಅಧಿಕಾರಿಗಳಿಂದ ಹಿಡಿದು ಗ್ರಾಮ ಪಂಚಾಯತಿಗಳ ಪಿಡಿಒಗಳವರೆಗೆ ನ್ಯಾಯಾಲಯಗಳ ಪ್ರಕರಣಗಳ ಬಗ್ಗೆ ಅಧಿಕಾರಿಗಳಲ್ಲಿ ಉದಾಸೀನ ಭಾವನೆ ಕಂಡು ಬರುತ್ತಿದೆ.ನ್ಯಾಯಾಲಯಗಳಿಂದ ವಾರೆಂಟ್ ಬರುವವರೆಗೆ ಸರಕಾರಿ ಅಧಿಕಾರಿಗಳು ಕೋರ್ಟ್ ಗಳಿಗೆ ಹಾಜರಾಗುವುದಿಲ್ಲ.ಸರಕಾರಿ ಅಧಿಕಾರಿಗಳ ಅಸಡ್ಡೆ ಮತ್ತು ಉದಾಸೀನ ಮನೋಭಾವನೆಯಿಂದಾಗಿಯೇ ನ್ಯಾಯಾಲಯಗಳು ಸರಕಾರದ ವಿರುದ್ಧ ತೀರ್ಪು ನೀಡುತ್ತಿವೆ.ಸರಕಾರದ ವಿರುದ್ಧ ಬರುವ ನ್ಯಾಯಾಲಯಗಳ ತೀರ್ಪುಗಳಿಂದ ಸರಕಾರಕ್ಕೆ ಮುಜುಗರವಾಗುವುದು ಮಾತ್ರವಲ್ಲದೆ ದಂಡಕಟ್ಟುವುದು,ಬಡ್ಡಿ ಸೇರಿಸಿ ಹಣಪಾವತಿಸುವುದು,ಸಾರ್ವಜನಿಕ ಆಸ್ತಿಗಳನ್ನು ಕಳೆದುಕೊಳ್ಳುವಂತಹ ಪ್ರಸಂಗಗಳು ಎದುರಾಗುತ್ತಿವೆ.ಇದರಿಂದ ಸಾರ್ವಜನಿಕ ಸಂಪತ್ತು ವ್ಯರ್ಥಪೋಲಾಗುವುದು ಮಾತ್ರವಲ್ಲದೆ ಯಾರದೋ ತಪ್ಪಿಗೆ ಸಾರ್ವಜನಿಕ ಸಂಪತ್ತನ್ನು ವಿನಿಯೋಗಿಸುವಂತಹ ಸಂಪನ್ಮೂಲದ ದುರ್ವಿನಿಯೋಗವೂ ಆಗುತ್ತದೆ.ಸರ್ಕಾರಿ ವ್ಯಾಜ್ಯ ಪ್ರಕರಣಗಳ ನಿರ್ವಹಣೆಯ ಸುಧಾರಣೆಯ ಬಗ್ಗೆ ಆಸಕ್ತಿವಹಿಸಿರುವ ಸಚಿವರು ಕಟ್ಟು ನಿಟ್ಟಿನ ಶಿಸ್ತುಕ್ರಮ,ಕಾನೂನು ಕ್ರಮಗಳನ್ನು ಮಸೂದೆಯಲ್ಲಿ ಪ್ರಸ್ತಾಪಿಸಿದರೆ ಮಾತ್ರ ಸುಧಾರಣೆ ಸಾಧ್ಯ.

ನ್ಯಾಯಾಲಯಗಳಲ್ಲಿ ಸರಕಾರಿ ವ್ಯಾಜ್ಯಗಳು ಸೋಲಲು ಮೂರು ಪ್ರಮುಖ ಕಾರಣಗಳನ್ನು ಗುರುತಿಸಬಹುದು.ಅಧಿಕಾರಿಗಳ ಅಸಡ್ಡೆ ಮನೋಭಾವವು ಮೊದಲ ಕಾರಣವಾದರೆ ಸುಪ್ರೀಂಕೋರ್ಟ್,ಹೈಕೋರ್ಟ ಮತ್ತು ಕೆಳಹಂತದ ಕೋರ್ಟುಗಳಲ್ಲಿ ಸರಕಾರವನ್ನು ಪ್ರತಿನಿಧಿಸಲು ಸಮರ್ಥರಲ್ಲದ ವಕೀಲರುಗಳನ್ನು ನೇಮಿಸುತ್ತಿರುವುದು ಮತ್ತು ಮೂರನೆಯದು ನ್ಯಾಯಾಲಯಗಳ ಪ್ರಕರಣಗಳಿಗೆ ಸರಕಾರದಿಂದ ಶೀಘ್ರ ಅನುಮತಿ ನೀಡದೆ ಇರುವುದು.ಈ ಮೂರು ಸಮಸ್ಯೆಗಳಿಗೆ‌ ಪರಿಹಾರ ಕಂಡುಕೊಂಡರೆ ಕೋರ್ಟ್ಗಳಲ್ಲಿ ಸರಕಾರಿ ಪ್ರಕರಣಗಳಲ್ಲಿ ಹಿನ್ನಡೆಯಾಗುವುದಿಲ್ಲ.ಸರಕಾರಿ ವ್ಯಾಜ್ಯಗಳಲ್ಲಿ ಕೋರ್ಟ್ಗಳಲ್ಲಿ ಹೇಗೆ ಸೋಲನ್ನನುಭವಿಸುತ್ತವೆ ಎನ್ನುವದನ್ನು ಪರಿಶೀಲಿಸೋಣ.

‌‌ 1. ಸರಕಾರಿ ಅಧಿಕಾರಿಗಳ ಅಸಡ್ಡೆ

ಸರಕಾರದ ವ್ಯಾಜ್ಯ ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ನಿರ್ವಹಿಸಬೇಕಾದವರು ಸರಕಾರಿ ಅಧಿಕಾರಿಗಳು.ಸರಕಾರಿ ಅಧಿಕಾರಿಗಳು ನ್ಯಾಯಾಲಯದ ಪ್ರಕರಣಗಳಲ್ಲಿ ಸರಕಾರಿ ವಕೀಲರನ್ನು ಇಲ್ಲವೆ ಸ್ಥಳೀಯ ಸಂಸ್ಥೆಗಳಾಗಿದ್ದರೆ ಆ ಸಂಸ್ಥೆಯ ಪರವಾಗಿ ಕೋರ್ಟಿನಲ್ಲಿ ಪ್ರತಿನಿಧಿಸಲು ವಕೀಲರನ್ನು ನೇಮಿಸಿ ಆ ವಕೀಲರುಗಳಿಗೆ ಅಗತ್ಯ ಮಾಹಿತಿ ನೀಡಿದರೆ ಸಾಕು,ಸಾಕಷ್ಟು ಸರಕಾರಿ ಪ್ರಕರಣಗಳು ನ್ಯಾಯಾಲಯಗಳಲ್ಲಿ ಗೆಲ್ಲುತ್ತವೆ.ಆದರೆ ನ್ಯಾಯಾಲಯಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಕಾರಿ ಅಧಿಕಾರಿಗಳ ಉದಾಸೀನ ಮನೋಭಾವನೆ ‘ ಉದ್ಧಟತನ’ ಎನ್ನುವಷ್ಟಿದೆ.ಸರಕಾರಿ ಅಧಿಕಾರಿಗಳು ನ್ಯಾಯಾಲಯಗಳ ಪ್ರಕರಣಗಳನ್ನು ಸರಿಯಾಗಿ ನಿರ್ವಹಿಸುವುದೇ ಇಲ್ಲ.ಮೇಲಾಧಿಕಾರಿಗಳಾದವರು ತಮ್ಮ ಆಧೀನದ ಅಧಿಕಾರಿಗಳ ಟೇಬಲ್ಲುಗಳಿಗೆ ಪ್ರಕರಣಗಳನ್ನು ವರ್ಗಾಯಿಸಿ ಕೈತೊಳೆದುಕೊಳ್ಳುತ್ತಾರೆ.ಸರಕಾರದ ಹಣಕಾಸು ಪ್ರತ್ಯಾಯೋಜನೆಯಲ್ಲಿ ತಮತಮಗೆ ಅಧಿಕಾರ ಬೇಕೆಂದು ವಾದಿಸುವ ಹಿರಿಯ ಅಧಿಕಾರಿಗಳು ಸಹ ನ್ಯಾಯಾಲಯಗಳ ಪ್ರಕರಣಗಳ ನಿರ್ವಹಣಾ ಅಧಿಕಾರ ನಮಗೆ ಬೇಕು ಎಂದು ಕೇಳುವುದಿಲ್ಲ !ಹಣ,ಅಧಿಕಾರ ಇರುವ ಕಡತಗಳಲ್ಲಿ ಇರುವ ಆಸಕ್ತಿ ಸರಕಾರಿ ಅಧಿಕಾರಿಗಳಿಗೆ ನ್ಯಾಯಾಲಯದ ಪ್ರಕರಣಗಳಲ್ಲಿ,ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ,ಪರಿಹರಿಸುವುದರಲ್ಲಿ ಇರುವುದಿಲ್ಲ ಎನ್ನುವುದು ಎಲ್ಲರೂ ಬಲ್ಲ ಸಂಗತಿ.ನ್ಯಾಯಾಲಯಗಳಿಂದ ಸಮನ್ಸ್,ವಾರೆಂಟ್ ಬಂದಾಗಲೇ ಅಧಿಕಾರಿಗಳು ಕಣ್ಣು ತೆರೆಯುತ್ತಾರೆ!ಹೈಕೋರ್ಟ್ ‘ನ್ಯಾಯಾಂಗ ನಿಂದನೆ‌ಪ್ರಕರಣ’ ( Contempt of Court) ಪ್ರಕರಣ ದಾಖಲಿಸಿಕೊಂಡು ತುರ್ತುನೋಟೀಸ್ ( Emrgent Notice) ನೀಡಿದಾಗಲೇ ಪರಿಸ್ಥಿತಿಯ ವಿಕೋಪದ ಅರಿವಾಗಿ ಅಧಿಕಾರಿಗಳು ವಕೀಲರನ್ನು ಸಂಪರ್ಕಿಸುತ್ತಾರೆ,ಕೋರ್ಟ್ ಗಳಿಗೆ ಹಾಜರಾಗುತ್ತಾರೆ.

ನ್ಯಾಯಾಲಯಗಳಲ್ಲಿ ಸರಕಾರದ ಪ್ರಕರಣಗಳು ಸೋಲುತ್ತಿರುವುದು,ಸರಕಾರದ ವಿರುದ್ಧ ನ್ಯಾಯಾಲಯಗಳಲ್ಲಿ ವ್ಯತಿರಿಕ್ತ ತೀರ್ಪುಗಳು ಬರುತ್ತಿರುವುದನ್ನು ಗಮನಿಸಿ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ,ಕಾನೂನು ಮತ್ತು ಸಂಸದೀಯ ಆಡಳಿತ ಇಲಾಖೆಗಳು ಸರಕಾರದ ಎಲ್ಲಾ ಇಲಾಖಾ ಮುಖ್ಯಸ್ಥರುಗಳಿಗೆ ಪತ್ರ ಬರೆದು,ನಿರ್ದೇಶನ ನೀಡಿದ ಫಲವಾಗಿ ಸರಕಾರದ ಪ್ರತಿ ಇಲಾಖೆ ಮತ್ತು ಪ್ರತಿ ಕಛೇರಿಯಲ್ಲಿ ಒಬ್ಬ ‘ ವ್ಯಾಜ್ಯ ನಿರ್ವಹಣಾಧಿಕಾರಿ’ ಯನ್ನು ಗುರುತಿಸಲಾಗಿದೆ. ಸರಕಾರದ ಸಚಿವಾಲಯದ ಮಟ್ಟದಲ್ಲಿ ಇಲಾಖೆಗಳ ಉಪಕಾರ್ಯದರ್ಶಿಗಳೋ ,ಜಂಟಿ ಕಾರ್ಯದರ್ಶಿಗಳೋ ವ್ಯಾಜ್ಯ ನಿರ್ವಾಹಣಾಧಿಕಾರಿಗಳಾಗಿ ನೇಮಕಗೊಳ್ಳುತ್ತಿರುವುದರಿಂದ ಸಚಿವಾಲಯದ ಹಂತದ ಕೇಸುಗಳು ಗೆಲ್ಲುತ್ತಿವೆ.ಆದರೆ ಜಿಲ್ಲಾ ,ತಾಲೂಕು ಮತ್ತು ಗ್ರಾಮ ಮಟ್ಟದ ಕೇಸುಗಳಲ್ಲಿ ಸರಕಾರಕ್ಕೆ ಸೋಲಾಗುತ್ತಿದೆ.ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ನ್ಯಾಯಾಲಯಗಳ ಪ್ರಕರಣಗಳನ್ನು ನಿಯತವಾಗಿ ಅಟೆಂಡ್ ಮಾಡಲಾಗುತ್ತಿದೆ.ಆದರೆ ಜಿಲ್ಲಾ ಪಂಚಾಯತಿ,ತಾಲೂಕಾ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳಲ್ಲಿ ನ್ಯಾಯಾಲಯದ ಪ್ರಕರಣಗಳನ್ನು ಉಪೇಕ್ಷಿಸಲಾಗುತ್ತಿದೆ.ನಗರಸಭೆಗಳಲ್ಲಿಯೂ ನ್ಯಾಯಾಲಯದ‌ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವನೆ ಇದೆ.ತಹಶೀಲ್ದಾರರ ಕಛೇರಿಗಳೂ ಇದಕ್ಕೆ ಹೊರತಾಗಿಲ್ಲ.ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆಧೀನದ ಜಿಲ್ಲಾ ಮತ್ತು ತಾಲೂಕಾ ಕಛೇರಿಗಳಲ್ಲಿ ನ್ಯಾಯಾಲಯಗಳ ಪ್ರಕರಣಗಳನ್ನು ಸರಿಯಾಗಿ ನಿರ್ವಹಿಸುವುದೇ ಇಲ್ಲ.ಜಿಲ್ಲಾ ಪಂಚಾಯತಿಗಳಲ್ಲಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಆಸಕ್ತಿ ತೆಗೆದುಕೊಂಡರಷ್ಟೇ ನ್ಯಾಯಾಲಯದ ಪ್ರಕರಣಗಳು ಗೆಲ್ಲುತ್ತವೆ.ಜಿಲ್ಲಾ ಪಂಚಾಯತಿಗಳಲ್ಲಿ ಉಪಕಾರ್ಯದರ್ಶಿಯು ನ್ಯಾಯಾಲಯಗಳ ವ್ಯಾಜ್ಯ ನಿರ್ವಹಣಾಧಿಕಾರಿಯಾಗಿದ್ದು ಇತ್ತೀಚೆಗೆ ಗ್ರಾಮ ಪಂಚಾಯತಿಗಳ ಕರವಸೂಲಿಗಾರರು, ಕಾರ್ಯದರ್ಶಿಗಳಾಗಿದ್ದವರು ಸಹ ಉಪಕಾರ್ಯದರ್ಶಿ ಹುದ್ದೆಗೆ ಬಡ್ತಿ ಪಡೆಯುತ್ತಿರುವುದರಿಂದ ಉಪಕಾರ್ಯದರ್ಶಿ ಹುದ್ದೆಗೆ ತಲುಪಿದ ಮಹಾ ಸಾಧನೆಯ ಪರಮಾನಂದದಲ್ಲಿಯೇ‌ ಮುಳಗಿ ತೇಲುತ್ತಿರುವ ಬಡ್ತಿಪಡೆದ ಉಪಕಾರ್ಯದರ್ಶಿಗಳು ಜಿಲ್ಲಾ ಪಂಚಾಯತಿಗಳ ವ್ಯಾಜ್ಯಪ್ರಕರಣಗಳು ಸೋಲಲು ಪ್ರಮುಖ ಕಾರಣ.ತಾಲೂಕಾ ಪಂಚಾಯತಿಗಳ ಕಥೆಯೂ ಅಷ್ಟೆ.ಪಿಡಿಒ ಹುದ್ದೆಯಿಂದ ಪದೋನ್ನತಿ ಪಡೆದವರೇ ತಾಲೂಕಾ ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಾಗುತ್ತಿರುವುದರಿಂದ ಕಾನೂನು ವಿಷಯದಲ್ಲಿ ಜ್ಞಾನದ ಕೊರತೆ ಮತ್ತು ಇ ಒ ಗಳ ಅಸಡ್ಡೆ ಮನೋಭಾವದಿಂದ ತಾಲೂಕಾ ಪಂಚಾಯತಿಗಳ ನ್ಯಾಯಾಲಯಗಳ ಪ್ರಕರಣಗಳು ಸೋಲುತ್ತಿವೆ.ಗ್ರಾಮ ಪಂಚಾಯತಿಗಳ ಸಿಬ್ಬಂದಿ ಸಮಸ್ಯೆಗಳು ಪರಿಹರಿಸದೆ ಇರುವ ಮತ್ತು ಸಾರ್ವಜನಿಕರ ಆಸ್ತಿ,ವಿವಾದ ಮೊದಲಾದವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸದೆ ಇರುವುದರಿಂದ ಪಿಡಿಒಗಳು ನ್ಯಾಯಾಲಯಗಳಿಗೆ ಎಡತಾಕುತ್ತಿದ್ದಾರೆ.ನ್ಯಾಯಾಲಯಗಳ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಕರಣಗಳೇ ಎಂಬುದು ಗಮನಾರ್ಹವಾದುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಂತರ ಶಿಕ್ಷಣ,ಆರೋಗ್ಯ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ನ್ಯಾಯಾಲಯಗಳಲ್ಲಿ ಅತಿಹೆಚ್ಚು‌ಪ್ರಕರಣಗಳುಳ್ಳ ಇಲಾಖೆಗಳು.

ಸರಕಾರಿ ಕಛೇರಿಗಳಲ್ಲಿ ನ್ಯಾಯಾಲಯಗಳ ಪ್ರಕರಣಗಳನ್ನು ಕಛೇರಿ ಮುಖ್ಯಸ್ಥರು ಇಲ್ಲವೆ ಹಿರಿಯ ಅಧಿಕಾರಿಗಳು ನಿರ್ವಹಿಸದೆ‌ ಕಿರಿಯ ಅಧಿಕಾರಿಗಳೋ ,ಗುಮಾಸ್ತರುಗಳೋ ನಿರ್ವಹಿಸುತ್ತಿರುವುದರಿಂದ ನ್ಯಾಯಾಲಯಗಳ ಪ್ರಕರಣಗಳಲ್ಲಿ ಸೋಲಾಗುತ್ತಿದೆ.ಕಛೇರಿಯ ಮುಖ್ಯಸ್ಥರು ಅಥವಾ ಹಿರಿಯ ಅಧಿಕಾರಿಗಳು ನ್ಯಾಯಾಲಯಗಳ ಪ್ರಕರಣಗಳಲ್ಲಿ ಆಸಕ್ತಿವಹಿಸಿ ನಿರ್ವಹಿಸಿದ್ದಾದರೆ ವ್ಯಾಜ್ಯಗಳನ್ನು ಗೆಲ್ಲಬಹುದು.ಸ್ಥಳೀಯ ಸರ್ಕಾರಗಳು ಆಗಿರುವ ಜಿಲ್ಲಾ ಪಂಚಾಯತಿ,ತಾಲೂಕಾ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳ ಪರವಾಗಿ ಸರಕಾರಿ ವಕೀಲರುಗಳು ವಾದ ಮಾಡುವುದಿಲ್ಲವಾಗಿ ಸ್ಥಳೀಯ ಸಂಸ್ಥೆಗಳು ತಮ್ಮ ಪರವಾಗಿ ಖಾಸಗಿ ವಕೀಲರುಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ.ಹೀಗೆ ವಕೀಲರುಗಳನ್ನು ನೇಮಿಸಿಕೊಳ್ಳುವಾಗ ವಕೀಲರ ಸೇವಾ ಅನುಭವ,ವ್ಯಾಜ್ಯಗಳಲ್ಲಿ ಅವರು ಗೆಲ್ಲುತ್ತಿರುವ ಕೇಸುಗಳ ಪ್ರಮಾಣ ಮತ್ತು ನ್ಯಾಯಾಲಯಗಳಲ್ಲಿ ಅವರು ಮಂಡಿಸುತ್ತಿರುವ ವಾದವೈಖರಿ ಇವೇ ಮೊದಲಾದ ಅಂಶಗಳನ್ನು ಗಮನಿಸಿ ಸ್ಥಳೀಯ ಸಂಸ್ಥೆಗಳು ತಮ್ಮ ಪರವಾಗಿ ವಕೀಲರುಗಳನ್ನು ನೇಮಿಸಿಕೊಳ್ಳಬೇಕು.ಇದು ಆಗುತ್ತಿಲ್ಲ.ಬದಲಾಗಿ ಯಾರು ಯಾರಿಗೋ ವ್ಯಾಜ್ಯಗಳನ್ನು ವಹಿಸಲಾಗುತ್ತಿದೆ.ಜೊತೆಗೆ ಆಧೀನದ ನ್ಯಾಯಾಲಯಗಳು ಸೇರಿದಂತೆ ಹೈಕೋರ್ಟ್ ಗಳಲ್ಲಿ ಸ್ಥಳೀಯ ಸರ್ಕಾರಗಳಾದ ಜಿಲ್ಲಾ ಪಂಚಾಯತಿ,ತಾಲೂಕಾ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳ ಪರವಾಗಿ ನೇಮಿಸಿಕೊಂಡ ವಕೀಲರುಗಳಿಗೆ ಸಕಾಲದಲ್ಲಿ ಸರಿಯಾದ ಮಾಹಿತಿ ನೀಡದೆ ಇರುವುದು,ವಕೀಲರುಗಳಿಗೆ ಪಾವತಿಸಬೇಕಾದ ಶುಲ್ಕ ಪಾವತಿಸದೆ ಇರುವುದು ಮತ್ತು ಶುಲ್ಕ ಪಾವತಿಗಾಗಿ ವಕೀಲರುಗಳನ್ನು ಸತಾಯಿಸುತ್ತಿರುವುದು ಸ್ಥಳೀಯ ಸರ್ಕಾರಗಳ ವ್ಯಾಜ್ಯಗಳು ನ್ಯಾಯಾಲಯಗಳಲ್ಲಿ ಸೋಲುತ್ತಿರುವ ಕಾರಣಗಳು.

2.ಹೈಕೋರ್ಟ್ ಮತ್ತು ಆಧೀನದ ಕೋರ್ಟ್ ಗಳಲ್ಲಿ ಸಮರ್ಥ ಸರಕಾರಿ ವಕೀಲರುಗಳನ್ನು ನೇಮಿಸಬೇಕು

ಹೈಕೋರ್ಟ್ ಮತ್ತು ಆಧೀನದ ಕೋರ್ಟ್ಗಳಲ್ಲಿ ಸರಕಾರವನ್ನು ಪ್ರತಿನಿಧಿಸಲು ಅಷ್ಟು ಸಮರ್ಥರಲ್ಲದ ವಕೀಲರುಗಳನ್ನು ಸರಕಾರಿ ವಕೀಲರುಗಳನ್ನಾಗಿ ನೇಮಿಸುತ್ತಿರುವುದು ಕೂಡ ನ್ಯಾಯಾಲಯಗಳಲ್ಲಿ ಸರಕಾರಿ ವ್ಯಾಜ್ಯಗಳು ಸೋಲಲು ಕಾರಣ.ಹೈಕೋರ್ಟಿನಲ್ಲಿ ಅಡ್ವೋಕೇಟ್ ಜನರಲ್ ಅವರು ಸರಕಾರವನ್ನು ಪ್ರತಿನಿಧಿಸುತ್ತಿದ್ದು ಅವರ ಆಧೀನದಲ್ಲಿ ವಿವಿಧ ಪರಿಣತ ವಕೀಲರುಗಳಿರುತ್ತಾರೆ.ಬೆಂಗಳೂರಿನ ಹೈಕೋರ್ಟ್ ನಲ್ಲಿ ಸಮರ್ಥ ಸರಕಾರಿ ವಕೀಲರುಗಳು ಇರುತ್ತಾರೆ.ಆದರೆ ಧಾರವಾಡ,ಕಲ್ಬುರ್ಗಿಗಳಂತಹ ಹೈಕೋರ್ಟಿನ ಪೀಠಗಳಲ್ಲಿ ಸರಕಾರಿ ವಕೀಲರುಗಳನ್ನು ನೇಮಿಸುವಾಗ ಅನುಭವ ಮತ್ತು ವ್ಯಾಜ್ಯಗಳನ್ನು ಗೆಲ್ಲುವ ಸಮರ್ಥ ವಕೀಲರುಗಳನ್ನು ಸರಕಾರಿ ವಕೀಲರುಗಳನ್ನಾಗಿ ನೇಮಿಸುವ ಬದಲು ಆಡಳಿತಾರೂಢರಿಗೆ ಬೇಕಾದವರುಗಳನ್ನು ಸರಕಾರಿ ವಕೀಲರುಗಳನ್ನಾಗಿ ನೇಮಿಸುತ್ತಿರುವುದರಿಂದ ಸರಕಾರಿ ಪ್ರಕರಣಗಳು ಸೋಲುತ್ತಿವೆ.ಜಿಲ್ಲಾ ಮತ್ತು ತಾಲೂಕಾ ನ್ಯಾಯಾಲಯಗಳ ಸರಕಾರಿ ವಕೀಲರುಗಳು ಸರಕಾರಿ ಕೇಸುಗಳನ್ನು ಗೆಲ್ಲುವ ಪ್ರಮಾಣ ತೀರ ಕಡಿಮೆ.ಇಲ್ಲಿಯೂ ಕೂಡ ಆಡಳಿತ ನಡೆಸುವವರಿಗೆ ಬೇಕಾದವರುಗಳನ್ನೇ ಸರಿಕಾರಿ ವಕೀಲರುಗಳನ್ನಾಗಿ ನೇಮಿಸಿಕೊಳ್ಳಲಾಗುತ್ತಿದೆ.

‌ಸರಕಾರವು ಸುಪ್ರೀಂಕೋರ್ಟ್,ಹೈಕೋರ್ಟ್ ಮತ್ತು ಆಧೀನದ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳನ್ನು ಗೆಲ್ಲಲು ಸಮರ್ಥ ಅಧಿಕಾರಿಗಳನ್ನು ವ್ಯಾಜ್ಯ ನಿರ್ವಹಣಾ ಅಧಿಕಾರಿಗಳನ್ನು ನೇಮಿಸಬೇಕು,ಅನುಭವಿ ಮತ್ತು ಕಾನೂನು ತಜ್ಞರಾದ ವಕೀಲರುಗಳನ್ನು ಸರಕಾರಿ ವಕೀಲರುಗಳನ್ನಾಗಿ ನೇಮಿಸಬೇಕು ಮತ್ತು ವಕೀಲರುಗಳಿಗೆ ಆಕರ್ಷಕ ಶುಲ್ಕ ನಿಗದಿಪಡಿಸಿ ವಿಳಂಬವಿಲ್ಲದೆ ವಕೀಲರುಗಳು ಶುಲ್ಕ ಪಾವತಿಸುವ ಕ್ರಮಗಳನ್ನು ಕೈಗೊಳ್ಳಬೇಕು.ಇಂತಹ ಕ್ರಮಗಳಿಂದ ಸರಕಾರವು ನ್ಯಾಯಾಲಯಗಳ ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಗೆಲ್ಲಬಹುದು.

3. ಸರಕಾರದ ಹಂತದಲ್ಲಿ‌ ನ್ಯಾಯಾಲಯ ಪ್ರಕರಣಗಳಿಗೆ ಶೀಘ್ರ ಅನುಮತಿ ನೀಡಬೇಕು

‌ ಸರಕಾರದ ಇಲಾಖೆಗಳು ಮತ್ತು ಜಿಲ್ಲಾ ಮಟ್ಟದ ಕಛೇರಿಗಳ ಕೆಲವು ನ್ಯಾಯಾಲಯಗಳ ಪ್ರಕರಣಗಳಿಗೆ ಸರಕಾರದ ಅನುಮತಿ ಬೇಕಾಗುತ್ತದೆ.ಅಂತಹ ಸಂದರ್ಭದಲ್ಲಿ ಸರಕಾರದಿಂದ ಬೇಗನೆ ಅನುಮತಿ ನೀಡಿದರೆ‌ ಪ್ರಕರಣಗಳನ್ನು ಗೆಲ್ಲಬಹುದು.ಸರಕಾರಿ ಅಧಿಕಾರಿಗಳ ವಿರುದ್ಧದ ಪ್ರಕರಣಗಳಲ್ಲಿ ಅವರನ್ನು ಅಭಿಯೋಜನೆಗೆ ಒಳಪಡಿಸುವ ಪ್ರಕರಣಗಳಲ್ಲಿ ಅನುಮತಿಯನ್ನು ನೀಡುವಲ್ಲಿ ತೀರ ವಿಳಂಬವಾಗುತ್ತಿದೆ‌ ಇಲ್ಲವೆ ನಿರಾಕರಿಸಲಾಗುತ್ತಿದೆ.ಇಲ್ಲಿ ರಾಜಕೀಯ ಪ್ರಭಾವ ಕೆಲಸ ಮಾಡುತ್ತದೆ.ಸರಕಾರಿ ಅಧಿಕಾರಿ ಯಾರೇ ಆಗಿರಲಿ ಸಾರ್ವಜನಿಕ ಸಂಪತ್ತನ್ನು ಕೊಳ್ಳೆ ಹೊಡೆದಾಗ,ಅಕ್ರಮ ಆಸ್ತಿ ಸಂಪಾದನೆ ಮಾಡಿದಾಗ ಅಂತಹವರ ವಿರುದ್ಧ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಲು ಲೋಕಾಯುಕ್ತರು ಮತ್ತು ಪೋಲೀಸರುಗಳಿಗೆ ಬೇಗನೆ ಅಭಿಯೋಜನಾ ಮಂಜೂರಾತಿ ( Permission for Prosecution ) ನೀಡಬೇಕು.ರಾಜ್ಯದ ಗಡಿವಿವಾದ,ಜಲವಿವಾದಗಳಂತಹ ಸಂಕೀರ್ಣ ವಿಷಯಗಳಲ್ಲಿಯೂ ಸಹ ಶೀಘ್ರವಾಗಿ ತೀರ್ಮಾನ ಕೈಗೊಳ್ಳಬೇಕು.

ಸರಕಾರಿ ವ್ಯಾಜ್ಯಪ್ರಕರಣಗಳ ನಿರ್ವಹಣೆಗೆ ತೆಗೆದುಕೊಳ್ಳಬೇಕಾದ ಇತರ ಕ್ರಮಗಳು

೧ ಸರಕಾರದ ಹಂತದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಕೆ.ಡಿ.ಪಿ ಸಭೆಯಲ್ಲಿ‌ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ,ವಿಚಾರಣೆಗೆ ಬಾಕಿ ಇರುವ ಸರಕಾರಿ ವ್ಯಾಜ್ಯಗಳ ಪ್ರಗತಿ ಪರಿಶೀಲನೆಯಾಗಬೇಕು.
೨. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ರಾಜ್ಯದ ಅಡ್ವೋಕೇಟ್ ಜನರಲ್ ಅವರೊಂದಿಗೆ ಆಗಾಗ ಸಮಾಲೋಚಿಸಿ,ನ್ಯಾಯಾಲಯಗಳಲ್ಲಿ ಬಾಕಿ ಇರುವ ಸರಕಾರಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ಅಗತ್ಯ ನಿರ್ದೇಶನ ನೀಡಬೇಕು.
೩. ಜಿಲ್ಲಾ ಉಸ್ತುವಾರಿ ಸಚಿವರುಗಳ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಕೆ.ಡಿ.ಪಿ ಸಭೆಗಳಲ್ಲಿ ಜಿಲ್ಲಾ ಮತ್ತು ತಾಲೂಕಾ ಮಟ್ಟದ ನ್ಯಾಯಾಲಯಗಳ ಪ್ರಕರಣಗಳ ಪರಿಶೀಲನೆ ಮಾಡಬೇಕು.
೪. ಸರಕಾರದ ಮುಖ್ಯ ಕಾರ್ಯದರ್ಶಿಗಳು ,ಅಪರ ಮುಖ್ಯ ಕಾರ್ಯದರ್ಶಿಗಳು,ಪ್ರಧಾನ ಕಾರ್ಯದರ್ಶಿಗಳು,ಕಾರ್ಯದರ್ಶಿಗಳು ಅವರ ಇಲಾಖಾ ವ್ಯಾಪ್ತಿಯಲ್ಲಿನ ನ್ಯಾಯಾಲಯಗಳ ಪ್ರಕರಣಗಳ ಬಗ್ಗೆ ನಿಯತವಾಗಿ ಪರಿಶೀಲಿಸಬೇಕು.
೫. ಸರಕಾರದ ಎಲ್ಲ ಇಲಾಖೆಗಳಲ್ಲಿ ‘ ಕಾನೂನು ಕೋಶ’ ಗಳನ್ನು ಸ್ಥಾಪಿಸಿ ಅವುಗಳ ಮೂಲಕ ನ್ಯಾಯಾಲಯಗಳ ವ್ಯಾಜ್ಯಗಳ ಶೀಘ್ರವಿಲೇವಾರಿ ಮತ್ತು ಸರಕಾರಿ ವ್ಯಾಜ್ಯಗಳನ್ನು ಗೆಲ್ಲುವ ಕ್ರಮಗಳನ್ನು ಕೈಗೊಳ್ಳಬೇಕು.
೬. ಸರಕಾರಿ ಅಧಿಕಾರಿಗಳು,ನೌಕರರುಗಳು ಅವರ ವರ್ಗಾವಣೆ,ಬಡ್ತಿ,ಸಂಬಳ- ಸವಲತ್ತುಗಳಂತಹ ಕಾರಣಗಳಿಗಾಗಿ ಕರ್ನಾಟಕ ಆಡಳಿತ ಮಂಡಳಿ ಮತ್ತು ಹೈಕೋರ್ಟ್ ಗಳಿಗೆ‌ ತೆರಳುತ್ತಿದ್ದು ಇದನ್ನು ತಪ್ಪಿಸಲು ಪ್ರಾಮಾಣಿಕ,ಪಾರದರ್ಶಕ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು.
೭. ಸರಕಾರದ‌ ಪ್ರತಿಯೊಂದು ಇಲಾಖೆಯ ಮಟ್ಟದಲ್ಲಿ ಆ ಇಲಾಖೆಯಡಿಯಲ್ಲಿನ ಅಧಿಕಾರಿಗಳ ಮತ್ತು ನೌಕರರುಗಳ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತ್ಯೇಕ ಕೋಶಗಳನ್ನು ರಚಿಸಿ,ಆ ಕೋಶಗಳಲ್ಲಿ ಅಧಿಕಾರಿಗಳು ಮತ್ತು ನೌಕರರುಗಳ ಸಮಸ್ಯೆಗಳನ್ನು ಆಲಿಸಿ,ಪರಿಹರಿಸುವ ವ್ಯವಸ್ಥೆ ಆಗಬೇಕು.ಇದರಿಂದ ಸರಕಾರಿ ಅಧಿಕಾರಿಗಳು ಮತ್ತು ನೌಕರರುಗಳು ಕೆ ಎ ಟಿ,ಹೈಕೋರ್ಟ್ ಗಳಿಗೆ‌ ನ್ಯಾಯಕ್ಕಾಗಿ ಮೊರೆಹೋಗುವುದನ್ನು ತಪ್ಪಿಸಬಹುದು.
೮. ಸರಕಾರದ ವ್ಯಾಜ್ಯ ಪ್ರಕರಣಗಳಲ್ಲಿ ಅತಿಹೆಚ್ಚು ವ್ಯಾಜ್ಯಗಳನ್ನು ಗೆದ್ದ ಸರಕಾರಿ ವಕೀಲರುಗಳಿಗೆ ಮತ್ತು ವ್ಯಾಜ್ಯ ನಿರ್ವಹಣಾಧಿಕಾರಿಗಳಿಗೆ ಪ್ರಶಸ್ತಿ ಮತ್ತು ಪ್ರೋತ್ಸಾಹಧನ ನೀಡಿ,ಗೌರವಿಸಬೇಕು.
೦೯. ಸರಕಾರದ ವ್ಯಾಜ್ಯಗಳಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು.
೧೦. ಜಿಲ್ಲಾ ಮಟ್ಟದಲ್ಲಿ‌ ಜಿಲ್ಲಾಧಿಕಾರಿಗಳು,ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳನ್ನು ಅವರ ಆಧೀನದ ಕಛೇರಿಗಳಲ್ಲಿನ ನ್ಯಾಯಾಲಯಗಳ ಪ್ರಕರಣಗಳ ಬಗ್ಗೆ ಪರಿಶೀಲಿಸಿ,ನಿರ್ದೇಶನ ನೀಡಲು ಮತ್ತು ಹಣಕಾಸು ಮಂಜೂರಾತಿಯೇ ಮೊದಲಾದ ಅಗತ್ಯಕ್ರಮಗಳನ್ನು ಕೈಗೊಳ್ಳಲು ‘ ಸಕ್ಷಮ ಪ್ರಾಧಿಕಾರ’ ( Competant Authority ) ಎಂದು ನೇಮಿಸಿ,ಅಧಿಕಾರ ನೀಡಬೇಕು.

About The Author