ಮೂರನೇ ಕಣ್ಣು : ಶಾಲೆ ಕಾಲೇಜುಗಳಲ್ಲಿ ‘ ಸಂವಿಧಾನದ ಪೀಠಿಕೆ’ ಯ ಓದು ಮಹತ್ವದ ನಿರ್ಧಾರ : ಮುಕ್ಕಣ್ಣ ಕರಿಗಾರ

ಮುಖ್ಯಮಂತ್ರಿ ಸಿದ್ರಾಮಯ್ಯನವರ ಅಧ್ಯಕ್ಷತೆಯಲ್ಲಿ ಜೂನ್ 15 ರಂದು ನಡೆದ ಸಚಿವ ಸಂಪುಟಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.ಸರಕಾರಿ ಶಾಲೆ ಕಾಲೇಜುಗಳಲ್ಲದೆ ಖಾಸಗಿ ಮತ್ತು ಅನುದಾನಿತ ಶಾಲೆ ಕಾಲೇಜುಗಳಲ್ಲಿ ಬೆಳಗಿನ ಪ್ರಾರ್ಥನೆಯ ವೇಳೆಯಲ್ಲಿ ಸಂವಿಧಾನದ ಪೀಠಿಕೆಯ ಓದನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ಸಚಿವಸಂಪುಟವು ಕೈಗೊಂಡಿದೆ.ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪ ಅವರು ಬಣ್ಣಿಸಿದಂತೆ ‘ ಇದೊಂದು ಐತಿಹಾಸಿಕ ನಿರ್ಧಾರ’ ವೂ ಅಹುದು.ಯುವ ಪೀಳಿಗೆಯನ್ನು ಭವ್ಯ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸಲು ಸಂವಿಧಾನದ ಪೀಠಿಕೆಯ ಓದು ಸಹಕಾರಿಯಾಗುತ್ತದೆ.ಪ್ರತಿದಿನ ಸಂವಿಧಾನದ ಪೀಠಿಕೆಯನ್ನು ಓದುವುದರಿಂದ ವಿದ್ಯಾರ್ಥಿಗಳಲ್ಲಿ ಸಂವಿಧಾನ ಪ್ರಜ್ಞೆಯು ಜಾಗೃತಗೊಂಡು ಅವರು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯುತ್ತಾರೆ.ಶಾಲೆ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯ ಓದನ್ನು ಕಡ್ಡಾಯಗೊಳಿಸುವುದು ರಾಜ್ಯದ ಸಮಾಜ ಕಲ್ಯಾಣ ಸಚಿವರಾಗಿರುವ ಡಾ.ಎಚ್ .ಸಿ.ಮಹಾದೇವಪ್ಪ ಅವರ ಕನಸಾಗಿತ್ತು.ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಾರಂ ಭದ ದಿನಗಳಲ್ಲಿ ಜರುಗಿಸಿದ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿಯೇ ಈ ಇಂಗಿತವನ್ನು ವ್ಯಕ್ತಪಡಿಸಿದ್ದರು.ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿಷಯವಿದಾಗಿದ್ದರಿಂದ ಅದನ್ನು ಕ್ಯಾಬಿನೆಟ್ ನಲ್ಲಿ ಮಂಡಿಸಿ,ಅನುಮೋದನೆ ಪಡೆಯಲಾಗಿದೆ.

ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ನಾಡಗೀತೆ ಮತ್ತು ರಾಷ್ಟ್ರಗೀತೆಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಬೆಳಗಿನ ಪ್ರಾರ್ಥನೆಯ ವೇಳೆಯಲ್ಲಿ.ಆ ಸಂದರ್ಭದಲ್ಲಿ ಪತ್ರಿಕಾ ವರದಿಗಳ ಮಹತ್ವದ ಸುದ್ದಿಗಳ ತಲೆಬರಹವನ್ನು ಓದಲಾಗುತ್ತಿದೆಯಲ್ಲದೆ ದಿನದ ಪಂಚಾಗ ಪಠಣೆ ಕೂಡ ಮಾಡಲಾಗುತ್ತಿದೆ.ಹಿಂದೂ ದಿನ,ತಿಥಿ,ವಾರ,ನಕ್ಷತ್ರ,ಕರಣಗಳ ಮಾಹಿತಿ ಇರಲೆಂದು ಪಂಚಾಂಗ ಪಠಣೆಗೆ ಅವಕಾಶ ನೀಡಿರಬಹುದು.ಆದರೆ ಪಂಚಾಂಗ ಪಠಣೆಗಿಂತ ಸಂವಿಧಾನದ ಪೀಠಿಕೆಯ ಓದು ಹೆಚ್ಚು ಅರ್ಥಪೂರ್ಣವಾದುದು.ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು,ವೈಜ್ಞಾನಿಕ ಪ್ರಜ್ಞೆಯನ್ನು ಪಸರಿಸಬೇಕು ಅವರಲ್ಲಿ.ಪಂಚಾಂಗವು ಜ್ಯೋತಿಷಶಾಸ್ತ್ರದ ಭಾಗವಾಗಿದ್ದು ಅದಕ್ಕೆ ವೈಜ್ಞಾನಿಕ ಮನ್ನಣೆ ಇಲ್ಲ,ವೈಚಾರಿಕ ಸಮರ್ಥನೆ ಇಲ್ಲ.ಜೊತೆಗೆ ಹಿಂದೂಗಳ ನಂಬಿಕೆಯಾದ ಪಂಚಾಂಗಪಠಣೆಯನ್ನು ಜಾತ್ಯತೀತ ರಾಷ್ಟ್ರದ ಮೌಲ್ಯಗಳನ್ನು ಬಿತ್ತಿ ಬೆಳೆಯಬೇಕಾದ ನಂದನವನದಂತಹ ಶಾಲೆ- ಕಾಲೇಜುಗಳಲ್ಲಿ ಪಠಿಸುವುದು ಸಮರ್ಥನೀಯವಲ್ಲ.ಸರಕಾರಿ ಶಾಲೆಗಳು ಸೇರಿದಂತೆ ಖಾಸಗಿ,ಅನುದಾನಿತ ಶಾಲಾ ಕಾಲೇಜುಗಳಲ್ಲಿ ಹಿಂದೂ ಧರ್ಮಕ್ಕೆ ಸೇರಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರುಗಳಂತೆ ಮುಸ್ಲಿಂ,ಬೌದ್ಧ,ಜೈನ,ಕ್ರೈಸ್ತ,ಸಿಖ್ಖ ಧರ್ಮಗಳ ವಿದ್ಯಾರ್ಥಿಗಳೂ ಓದುತ್ತಿದ್ದಾರೆ.ಹಿಂದೂ ಪಂಚಾಂಗ ಪಠಣೆಯು ಅವರಲ್ಲಿ ಬೇಸರವನ್ನುಂಟು ಮಾಡುತ್ತದೆ.ಆದರೆ ಭಾರತದಲ್ಲಿ ವಾಸಿಸುವ ಎಲ್ಲ ನಾಗರಿಕರಿಗೂ ಸಂವಿಧಾನವು ಅನ್ವಯವಾಗುತ್ತಿದ್ದು ಸಂವಿಧಾನದ ಹೃದಯದಂತಿರುವ ಪೀಠಿಕೆಯ ಓದು ವಿದ್ಯಾರ್ಥಿ ಸಮುದಾಯದಲ್ಲಿ ಭಾರತೀಯತೆ ಮತ್ತು ರಾಷ್ಟ್ರೀಯತೆಯನ್ನು ಎಚ್ಚರಿಸಲು ಸಹಕಾರಿಯಾಗಿದೆ.

ಸಂವಿಧಾನದ ಪೀಠಿಕೆಯ ಓದಿನಿಂದ ವಿದ್ಯಾರ್ಥಿಗಳಲ್ಲಿ ಭಾರತದ ಸಂವಿಧಾನದ ಆಶಯಗಳ ಅರಿವು ಉಂಟಾಗುತ್ತದೆ.ಭಾರತದ ಸಮಸ್ತ ಅಧಿಕಾರವು ಪ್ರಜೆಗಳಲ್ಲಿಯೇ ಇದೆ ಎಂದು ತಿಳಿದುಕೊಳ್ಳುವ ವಿದ್ಯಾರ್ಥಿಗಳು ತಾವು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎನ್ನುವ ಸಕಾರಾತ್ಮಕ ನಿಲುವು ತಳೆಯಲು ಸ್ಫೂರ್ತಿಯಾಗುತ್ತದೆ.ಪೀಠಿಕೆಯ ಜಾತ್ಯಾತೀತ,ಸಮಾಜವಾದಿ ತತ್ತ್ವಗಳ ತಿಳಿವು ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪ್ರೇರಣೆಯಾಗುತ್ತದೆ.ಸಂವಿಧಾನದ ಪೀಠಿಕೆಯ ಸಮಾನತೆ,ಭ್ರಾತೃತ್ವ ಭಾವನೆಗಳು ವಿದ್ಯಾರ್ಥಿಗಳು ವಿಶಾಲಹೃದಯಿಗಳಾಗಲು ಪ್ರೇರಣೆ ನೀಡುತ್ತವೆ.ಸಾಮಾಜಿಕ ನ್ಯಾಯ,ಆರ್ಥಿಕ ನ್ಯಾಯ,ರಾಜಕೀಯ ನ್ಯಾಯಗಳು ದೇಶದ ಪ್ರಜೆಗಳೆಲ್ಲರೂ ದೇಶದ ಸಂವಿಧಾನ ಮತ್ತು ಕಾನೂನಿನ ಮುಂದೆ ಸಮಾನರು ಎನ್ನುವ ಸಮತೆಯ ಅರಿವನ್ನು ಉಂಟು ಮಾಡುವುದರಿಂದ ದಲಿತ ಮತ್ತು ತಳಸಮುದಾಯದ ವಿದ್ಯಾರ್ಥಿಗಳಲ್ಲಿರುವ ಕೀಳರಿಮೆಯು ಮರೆಯಾಗಿ ‘ ಎಲ್ಲರಂತೆ ನಾವೂ ಸಮಾನ ಹಕ್ಕು- ಅವಕಾಶಗಳನ್ನು ಹೊಂದಿದ ಭಾರತೀಯರೆ’ ಎನ್ನುವ ಭಾವಪರಿಸ್ಫುಟಗೊಂಡು ಅವರು ಸಂಕೋಲೆಗಳಿಂದ ಹೊರಬರಲು ಪ್ರೇರಣೆಯಾಗುತ್ತದೆ.ಪೀಠಿಕೆಯಲ್ಲಿನ ದೇಶದ ಏಕತೆ ಮತ್ತು ಸಮಗ್ರತೆಯಂತಹ ಪದಗಳು ವಿದ್ಯಾರ್ಥಿಸಮುದಾಯದಲ್ಲಿ ರಾಷ್ಟ್ರಾಭಿಮಾನವನ್ನು ಬಡಿದೆಬ್ಬಿಸುತ್ತದೆ.

ಒಟ್ಟಿನಲ್ಲಿ ನಾಡಿನ ಯುವಜನತೆಯನ್ನು ದೇಶದ ಪ್ರಬುದ್ಧ ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಉತ್ತಮಹೆಜ್ಜೆಯನ್ನಿಟ್ಟಿದ್ದಾರೆ ಮುಖ್ಯಮಂತ್ರಿ ಸಿದ್ರಾಮಯ್ಯನವರು ಶಾಲೆ- ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯ ಓದನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ಸಚಿವ ಸಂಪುಟದ ಸಭೆಯಲ್ಲಿ ಅಂಗೀಕರಿಸುವ ಮೂಲಕ.ರಾಜ್ಯದ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯ ಓದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ದಲಿತರು,ಹಿಂದುಳಿದವರು ಮತ್ತು ತಳಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಲ್ಲಿ ಹೊಸಬೆಳಕು ಮೂಡಿ ಅವರು ಸಂವಿಧಾನ ಪಥದಿ ಸ್ವತಂತ್ರ ಮತ್ತು ಸ್ವಾಭಿಮಾನಿ ಜೀವನವನ್ನು ರೂಢಿಸಿಕೊಳ್ಳಲು ಸ್ಫೂರ್ತಿ,ಪ್ರೇರಣೆಗಳೊದಗುತ್ತವೆ.

ಪ್ರಜಾಪ್ರತಿನಿಧಿಗಳಲ್ಲಿ ಸಾಂವಿಧಾನಿಕ ಪ್ರಜ್ಞೆಯನ್ನು ಮೂಡಿಸುತ್ತಿರುವ ‘ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆ’ಯು ವಿದ್ಯಾರ್ಥಿಗಳು,ಜನಸಾಮಾನ್ಯರು ಮತ್ತು ಪ್ರಜಾಪ್ರತಿನಿಧಿಗಳಿಗೆ ಸ್ಫೂರ್ತಿಯಾಗಬಹುದು ಎನ್ನುವ ಉದ್ದೇಶದಿಂದ ‘ ಸಂವಿಧಾನದ ಪೀಠಿಕೆ’ ಎನ್ನುವ ಈ ಕಿರುಪುಸ್ತಕವನ್ನು ಹೊರತರುತ್ತಿದೆ. ಮುಖ್ಯಮಂತ್ರಿ ಸಿದ್ರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ನಿರ್ಣಯಿಸಿದ ಮರುದಿನವೇ ಅಂದರೆ ಜೂನ್ ೧೬ ರಂದೇ ಈ ಪುಸ್ತಕವನ್ನು ಪ್ರಕಟಣೆಗೆ ಸಿದ್ಧಪಡಿಸಲಾಗಿದೆ.ಸಂವಿಧಾನದ ಪೀಠಿಕೆಯನ್ನು ಒಳಗೊಂಡಂತೆ ಅದರ ಅರ್ಥ,ಮಹತ್ವವನ್ನು ಸಂಕ್ಷಿಪ್ತವಾಗಿ,ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಸರಳವಾಗಿ ವಿವರಿಸಲಾಗಿದೆ ಈ ಕಿರುಪುಸ್ತಕದಲ್ಲಿ.ಸಂವಿಧಾನದ ಅಧ್ಯಯನಕ್ಕೆ ಈ ಕಿರುಪುಸ್ತಕವು ಪ್ರೇರಣೆಯನ್ನು ಒದಗಿಸಲಿ ಎನ್ನುವ ಆಶಯ ಸಂಸ್ಥೆಯದು.

ಮುಕ್ಕಣ್ಣ ಕರಿಗಾರ
‌ ಅಧ್ಯಕ್ಷರು
ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆ ಗಬ್ಬೂರು

 

About The Author