ಮೂರನೇ ಕಣ್ಣು : ಹಿಂದೂರಾಷ್ಟ್ರವೂ ಬೇಕಿಲ್ಲ,ರಾಮರಾಜ್ಯವೂ ಬೇಡ; ಸಂವಿಧಾನದ ಆಶಯದಂತೆ ‘ ಧರ್ಮನಿರಪೇಕ್ಷ ರಾಷ್ಟ್ರ’ ವಾಗಿಯೇ ಮುಂದುವರೆಯಲಿ ದೇಶ : ಮುಕ್ಕಣ್ಣ ಕರಿಗಾರ

            ಭಾರತದ ಸಂವಿಧಾನವು ಜಾರಿಗೆ ಬಂದು ಎಪ್ಪತ್ತು ವರ್ಷಗಳ ಮೇಲ್ಪಟ್ಟ ಅವಧಿಯಾಗಿದ್ದು ವಿಶ್ವದಾದ್ಯಂತ ಭಾರತದ ಸಂವಿಧಾನದ ಬಗ್ಗೆ‌ ಪ್ರಶಂಸೆ ವ್ಯಕ್ತವಾಗುತ್ತಿರುವ ನಡುವೆಯೇ ಕೆಲವರು ಸಂವಿಧಾನದ ಬಗ್ಗೆ ತಕರಾರುಗಳನ್ನು ತೆಗೆಯುತ್ತಿರುತ್ತಾರೆ.’ ನಾವು ಸಂವಿಧಾನವನ್ನು ಬದಲಿಸಲೆಂದೇ ಇದ್ದೇವೆ ಮತ್ತು ಅಧಿಕಾರಕ್ಕೆ ಬಂದಿದ್ದೇವೆ’ ಎಂದು ಬಿಜೆಪಿಯ ಕೆಲವು ರಾಜಕಾರಣಿಗಳು( ಅನಂತಕುಮಾರ,ಪ್ರತಾಪಸಿಂಹ ಮೊದಲಾದವರು) ಹೇಳುತ್ತಿದ್ದರೆ ಕೆಲವು ಮಠ ಪೀಠಾಧೀಶರುಗಳು ಸಂವಿಧಾನದ ಬಗ್ಗೆ ಆಗಾಗ ತಕರಾರು ತೆಗೆಯುತ್ತ ಭಾರತವು ಸನಾತನ ದೇಶ,ಹಿಂದೂ ಧರ್ಮ ಸನಾತನ ಧರ್ಮ ಎಂದು ಹೇಳುತ್ತಿರುತ್ತಾರೆ.ಇಂದಿಗೂ ಮನುಸ್ಮೃತಿಯ ಶ್ಲೋಕಗಳನ್ನು ಉಗ್ಗಡಿಸುತ್ತ ಮನುಷ್ಯತ್ವ ವಿರೋಧಿ ‘ ಮನುಧರ್ಮ’ ವನ್ನು ಪ್ರಸಾರ ಮಾಡುತ್ತಿರುವವರಿಗೆ ಹಿಂದೂ ಧರ್ಮವು ಭಾರತದ ರಾಷ್ಟ್ರೀಯ ಧರ್ಮವಾಗಬೇಕು ಎನ್ನುವ ಒಳಕುದಿತವಿದೆ.ಅಂಬೇಡ್ಕರ್ ಅವರು ದಲಿತರಾಗಿದ್ದರು ಎನ್ನುವ ಒಂದೇ ಕಾರಣದಿಂದ ಅವರು ಬರೆದ ಸಂವಿಧಾನವು ಅದೆಷ್ಟೇ ಶ್ರೇಷ್ಠವಾಗಿದ್ದರೂ ಅದನ್ನು ಬದಲಿಸಬೇಕು ಎನ್ನುವ ನಿಲುವು ಸಂಕುಚಿತ ಮನಸ್ಕ ಸಂಪ್ರದಾಯವಾದಿಗಳದ್ದು.ಸಮಾನತೆಯನ್ನು ಜೀವನಮೌಲ್ಯವಾಗಿ ಸ್ವೀಕರಿಸದವರು ಸಮಾನತೆಯೇ ಹೃದಯದಂತಿರುವ ಭಾರತದ ಸಂವಿಧಾನವನ್ನು ಹೇಗೆ ಒಪ್ಪುತ್ತಾರೆ?

ಸಂವಿಧಾನದ ಪರಮಶ್ರೇಷ್ಠ ಮೌಲ್ಯಗಳನ್ನು ಒಪ್ಪದ ಸನಾತನವಾದಿ ಹಿಂದು ಮಠಪೀಠಾಧೀಶರುಗಳು ಆಗಾಗ್ಗೆ ಸಂವಿಧಾನದ ಕುರಿತಾದ ತಮ್ಮ ತಕರಾರುಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ ಸಾರ್ವಜನಿಕವಾಗಿ.ಈಗ ಮಧ್ಯಪ್ರದೇಶದ ಶಂಕರಪರಂಪರೆಯ ಸ್ವಾಮೀಜಿ ಒಬ್ಬರು ತಕರಾರು ತೆಗೆದಿದ್ದಾರೆ.ಮಧ್ಯಪ್ರದೇಶದ ಇಂಧೋರಿನ ಜ್ಯೋತಿಷ್ಯಪೀಠದ ಪೀಠಾಧಿಪತಿ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮಿ ಎನ್ನುವವರು ಸಂವಿಧಾನದ ‘ ಧರ್ಮನಿರಪೇಕ್ಷರಾಷ್ಟ್ರ’ ದ ಬಗ್ಗೆ ತಮ್ಮ ತಕರಾರು ಎತ್ತಿದ್ದಾರೆ.ಅವಿಮುಕ್ತೇಶ್ವರಾನಂದರು ಸ್ವಲ್ಪ ಬುದ್ಧಿವಂತಿಕೆಯಿಂದ ತಮ್ಮ ವಾದ ಮಂಡಿಸಿದ್ದಾರೆ,ಸಂವಿಧಾನದ ಬಗ್ಗೆ ನೇರ ಆಕ್ಷೇಪ ತೆಗೆಯದೆ ‘ ಸಂವಿಧಾನದ ಧರ್ಮನಿರಪೇಕ್ಷ ಪದವು ಕೆಲವರ ಮುಜುಗರಕ್ಕೆ ಕಾರಣವಾಗುತ್ತದೆಯಾದ್ದರಿಂದ ಧರ್ಮನಿರಪೇಕ್ಷ ಪದವು ಸೂಕ್ತವಲ್ಲ ; ಹಿಂದೂರಾಷ್ಟ್ರ ಎಂದರೆ ಕೇವಲ ಹಿಂದುಗಳ ದೇಶವೆನ್ನುವ ಭಾವನೆ ಬರುವುದರಿಂದ ಹಿಂದೂರಾಷ್ಟ್ರ ಎನ್ನುವುದೂ ಬೇಡ ಎನ್ನುವ ಅವಿಮುಕ್ತೇಶ್ವರಾನಂದರು ಭಾರತವನ್ನು ‘ ರಾಮರಾಜ್ಯ’ ಎನ್ನಬೇಕು ಎಂದು ಪ್ರತಿಪಾದಿಸಿದ್ದಾರೆ.(ಮಧ್ಯಪ್ರದೇಶದ ಟಿ.ವಿ 9 ವಾಹಿನಿಯು ಸೆರೆಹಿಡಿದ ವಿಡಿಯೋದಲ್ಲಿ ಅವಿಮುಕ್ತೇಶ್ವರಾನಂದರು ಸುಮಾರು ಐದು ನಿಮಿಷಗಳವರೆಗೆ ಮಾತನಾಡಿದ ಹಿಂದಿ ಭಾಷಣ ಕೇಳಿದ್ದೇನೆ ನಾನು).ರಾಮರಾಜ್ಯದ ಕನಸಿನಲ್ಲಿಯೇ ತೇಲಾಡುತ್ತಿರುವ ಅವಾಸ್ತವವಾದಿಗಳಸಂಖ್ಯರ ಪೈಕಿ ಈ ಶಂಕರಾನಂದಸ್ವಾಮಿಯವರು ಒಬ್ಬರು.ಅವರು ತಮ್ಮ ಮಾತುಗಳಲ್ಲಿಯೇ ‘ ರಾಮನ ರಾಜ್ಯದಲ್ಲಿ ಒಂದು ನಾಯಿಗೂ ನ್ಯಾಯ ಸಿಗುತ್ತಿತ್ತು,ಎಲ್ಲರೂ ಸುಖದಿಂದ ಬದುಕಿದ್ದರು.ಅಂತಹ ರಾಮರಾಜ್ಯ ಬೇಕು’ ನಮಗಿಂದು ಎಂದು ಹೇಳಿದ್ದಾರೆ.

ಸಂನ್ಯಾಸಿಗಳಾದವರು ಕಲ್ಲುಹೃದಯಿಗಳಾಗಿರುತ್ತಾರೆ( ಹಾಗೆ ನಟನೆ ಮಾಡುತ್ತಾರಷ್ಟೆ) ಎಂದೇ ಅವರನ್ನು ವೈರಾಗ್ಯಮೂರ್ತಿ( ವೈರಾಗ್ಯದ ಅರ್ಥವೇ ಗೊತ್ತಿರದವರೇ ಮಠ ಪೀಠಗಳ ಸ್ವಾಮಿಗಳಾಗಿದ್ದಾರೆ) ಗಳು ಎಂದು ನಂಬಿದ್ದಾರೆ ಭಾರತೀಯರು.ಅಂತಹ ಕಲ್ಲು ಹೃದಯಿಗಳಲ್ಲೊಬ್ಬರು ಈ ಅವಿಮುಕ್ತೇಶ್ವರಾನಂದರು.ರಾಮರಾಜ್ಯದಲ್ಲಿ ಒಂದು ನಾಯಿಗೂ ಬೆಲೆ ಸಿಗುತ್ತಿತ್ತು ಎನ್ನುವ ಅವಿಮುಕ್ತೇಶ್ವರಾನಂದರಿಗೆ ಆ ಮಹಿಮಾಪುರುಷ ರಾಮನು ಯಕಃಶ್ಚಿತ ಮನುಷ್ಯನೊಬ್ಬನ(ಅಗಸರವನು) ಮಾತುಗಳಿಗೆ ಬೆಲೆಗೊಟ್ಟು ತುಂಬುಗರ್ಭಿಣಿಯಾಗಿದ್ದ ಸೀತೆಯನ್ನು ಕಾಡಿಗೆ ಅಟ್ಟುತ್ತಾನೆ ಎನ್ನುವುದು ಮರೆತೇಹೋಗಿದೆ! ಧರ್ಮ ದೇವರು ಎಂದಿದ್ದರೂ ಬ್ರಾಹ್ಮಣರ ಸ್ವತ್ತು ಎಂದು ಧರ್ಮದಗುತ್ತಿಗೆ ಪಡೆದವರಂತೆ ವರ್ತಿಸಿದ್ದ ಅಂದಿನ ಬ್ರಾಹ್ಮಣರ ಮಾತುಗಳನ್ನು ಕೇಳಿ ತಪಸ್ಸಿಗೆ ಕುಳಿತಿದ್ದ ಶಂಬೂಕ ಎನ್ನುವ ಶೂದ್ರನನ್ನು ಕೊಲ್ಲುತ್ತಾನೆ ರಾಮ.ಶೂದ್ರರಿಗೆ ತಪಸ್ಸು ಮಾಡಿ ಆತ್ಮಕಲ್ಯಾಣ ಮಾಡಿಕೊಳ್ಳುವಷ್ಟೂ ಸ್ವಾತಂತ್ರ್ಯ ನೀಡದ ಕಠಿಣಮನಸ್ಕರುಗಳು’ ಧರ್ಮನಿರಪೇಕ್ಷ’ ಪದದಿಂದ ಧೃತಿಗೆಟ್ಟಿದ್ದರೆ ಅದು ಸಹಜ.ರಾಮನ ರಾಜ್ಯದಲ್ಲಿ ನಾಯಿಗೂ ನ್ಯಾಯ ಸಿಗತ್ತಿತ್ತು ಎನ್ನುವ ಅವಿಮುಕ್ತೇಶ್ವರಾನಂದರು ರಾಮನು ಕ್ಷತ್ರಿಯಸಹಜ ಶೌರ್ಯದಿಂದ ವಾಲಿಯನ್ನು ಸಂಹರಿಸದೆ ಮರದಮರೆಯಲ್ಲಿ ಅಡಗಿ ವಾಲಿಯನ್ನು ಕೊಂದಿದ್ದರಲ್ಲಿ ಯಾವ ನೀತಿಯನ್ನು ,ಯಾವ ನ್ಯಾಯವನ್ನು ಕಂಡಿದ್ದಾರೋ?ಅಶೋಕವನದಲ್ಲಿದ್ದರೂ ತನ್ನ ಪಾವಿತ್ರ್ಯವನ್ನು ಕಾಪಾಡಿಕೊಂಡಿದ್ದ ಸೀತೆ ಪವಿತ್ರಳು ಎಂದು ಗೊತ್ತಿದ್ದರೂ ಅವಳ ಶೀಲಪರೀಕ್ಷೆಗಾಗಿ ‘ ಅಗ್ನಿಪರೀಕ್ಷೆ’ ಯ ಅಗ್ನಿದಿವ್ಯಕ್ಕೆ ಒಡ್ಡುವ ಹೃದಯವಿಹೀನ ಘಟನೆಯಲ್ಲಿ ಯಾವ ಧರ್ಮವನ್ನು ಕಂಡಿದ್ದಾರೋ ಅವಿಮುಕ್ತೇಶ್ವರಾನಂದರು? ಇಂತಹ ಸಾಕಷ್ಟು ವಿಪರೀತವೆನ್ನಬಹುದಾದ,ಅಕ್ಷಮ್ಯವೆನ್ನಬಹುದಾದ,ಮನುಷ್ಯತ್ವ ವಿರೋಧಿ ಪ್ರಸಂಗಗಳಿವೆ ರಾಮನು ನಾಯಕನಾಗಿರುವ ರಾಮಾಯಣದಲ್ಲಿ.ಅಂತಹ ಪ್ರಸಂಗಗಳನ್ನು ಉಪೇಕ್ಷಿಸಿ ರಾಮರಾಜ್ಯವನ್ನು ಅಪೇಕ್ಷಿಸುವ ‘ ಧರ್ಮಾತ್ಮ’ ರುಗಳ ಉದ್ದೇಶ ಶೂದ್ರರು,ದಲಿತರು ಉದ್ಧಾರವಾಗಲೇಬಾರದು ಎನ್ನುವುದು.ಮನುವಿನಿಂದ ಮಧ್ವರವರೆಗೆ ನಡೆದುಬಂದ ಬ್ರಾಹ್ಮಣರ ಪರಂಪರೆಲ್ಲಿಯೇ ಹುಟ್ಟಿದ ಅವಿಮುಕ್ತೇಶ್ವರಾನಂದರೂ ತಾವು ಕುಳಿತಿದ್ದು ಸ್ವಲ್ಪ ಪ್ರಗತಿಶೀಲರಾಗಿದ್ದ ಶಂಕರಾಚಾರ್ಯರ ಹೆಸರಿನಲ್ಲಿ ಹುಟ್ಟಿದ್ದ ಮಠ ಒಂದರ ಪೀಠಾಧಿಪತಿ ಗದ್ದುಗೆಯಲ್ಲಿ ಎನ್ನುವುದನ್ನೂ ಮರೆತಿದ್ದಾರೆ.ಮನು ಶೂದ್ರರಿಗೆ ಸಂಸ್ಕೃತ ಶಿಕ್ಷಣ ಸಲ್ಲದು ಎಂದನಲ್ಲದೆ ‘ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದು ಸ್ತ್ರೀಯರು ಸ್ವಾತಂತ್ರಕ್ಕೆ ಅರ್ಹರೇ ಅಲ್ಲ ಎಂದು ಸಾರಿದ್ದ.ಮಧ್ವಾಚಾರ್ಯರು ಶೂದ್ರರನ್ನು ‘ ನಿತ್ಯನಾರಕಿಗಳು’ ಎಂದು ಕರೆದು ಮನುಷ್ಯ ಮನುಷ್ಯರಲ್ಲಿ ಭೇದವೆಣಿಸುವ ದ್ವೈತ ಸಿದ್ಧಾಂತವನ್ನು ಮಂಡಿಸಿದವರು.ಬ್ರಾಹ್ಮಣ ಸಮುದಾಯದ ಮಠ ಪೀಠಗಳ ಸ್ವಾಮಿಗಳಿಗೆ ಶೂದ್ರರು,ದಲಿತರು ಮನುಷ್ಯರೇ ಅಲ್ಲ,ಹೆಚ್ಚೆಂದರೆ ಮನುಷ್ಯಮೃಗಗಳಾಗಿ ಕಾಣುತ್ತಾರೆ.

ಅಂಬೇಡ್ಕರ ಅವರ ಪ್ರೌಢವಿಚಾರಧಾರೆಗಳನ್ನೊಳಗೊಂಡ ನಮ್ಮ ಸಂವಿಧಾನವು 1950 ರ ಜನೆವರಿ 26 ರಂದು ಜಾರಿಗೆ ಬಂದು ಸುದೀರ್ಘ ಏಳು ದಶಕಗಳು ಕಳೆದಿದ್ದರೂ ಭಾರತದ ಸಾರ್ವಭೌಮತ್ವ,ಅಖಂಡತೆ ಮತ್ತು ಏಕತೆಯನ್ನು ಎತ್ತಿ ಹಿಡಿಯುವಲ್ಲಿ ಸಂವಿಧಾನವು ಯಶಸ್ವಿಯಾಗಿದೆ ಎನ್ನುವುದನ್ನು ಅರಗಿಸಿಕೊಳ್ಳಲಾಗದ ಮನಸ್ಸುಗಳುಳ್ಳವರು ಸಂವಿಧಾನದ ಕುರಿತಾಗಿ ಏನು ಏನನ್ನೋ ಗಳಹುತ್ತಾರೆ.ಪಕ್ಕದ ಪಾಕಿಸ್ತಾನ ಮತ್ತು ನೇಪಾಳದಂತಹ ನೆರೆಹೊರೆಯ ರಾಷ್ಟ್ರಗಳು ಸೇರಿದಂತೆ ಪ್ರಪಂಚದ ಹಲವು ರಾಷ್ಟ್ರಗಳ ಸಂವಿಧಾನಗಳು ಜಾರಿಗೆ ಬಂದ ಹತ್ತಿಪ್ಪತ್ತು ವರ್ಷಗಳಲ್ಲಿಯೇ ಬದಲಾವಣೆಗೊಂಡು ಅವುಗಳ ಸ್ಥಾನದಲ್ಲಿ ಹೊಸಸಂವಿಧಾನಗಳು ಬಂದುಕುಳಿತಿವೆ.ಭಾರತವು ಪ್ರಪಂಚದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ, ಭೂ ವಿಸ್ತಾರದಲ್ಲಿ ಪ್ರಪಂಚದಲ್ಲಿ ಏಳನೇ ಸ್ಥಾನಪಡೆದಿರುವ,ನೂರಾರು ಧರ್ಮಗಳು,ಸಾವಿರಾರು ಜಾತಿಗಳಿರುವ ದೇಶವಾಗಿದ್ದು ನಾವು ಗಳಿಸಿಕೊಂಡ ಸ್ವಾತಂತ್ರ್ಯವು ಸ್ಥಿರವಾಗಿರಲು,ರಾಷ್ಟ್ರವು ಸುಭದ್ರವಾಗಿರಲು ನಮ್ಮ ಪ್ರಬುದ್ಧಸಂವಿಧಾನವೇ ಕಾರಣ ಎನ್ನುವ ಸ್ಫಟಿಕಸ್ಪಷ್ಟ ಸತ್ಯವನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಮತಿಭ್ರಷ್ಟರುಗಳಿಗೆ.

ದೇಶದ ಪ್ರಜೆಗಳೆಲ್ಲರೂ ರಾಜ್ಯ( state ಅಂದರೆ ರಾಷ್ಟ್ರ ಎಂದೇ ಅರ್ಥ,ಪ್ರತ್ಯೇಕ ರಾಜ್ಯವಲ್ಲ) ಮತ್ತು ಅದರ ಸಂಸ್ಥೆಗಳಲ್ಲಿ ಸ್ಥಾನ ಮಾನ ಪಡೆಯುವುದಕ್ಕೆ,ರಾಷ್ಟ್ರದಾದ್ಯಂತ ಎಲ್ಲಿಯಾದರೂ ನೆಮ್ಮದಿಯಿಂದ ಜೀವನ ನಡೆಸಲು,ನಿರ್ಲಕ್ಷ್ಯ ಅಥವಾ ಪಕ್ಷಪಾತಕ್ಕೆ ಹೊರತಾದ ಜೀವನ ನಡೆಸಲು ಅನುಕೂಲವಾಗುವಂತೆ ನಮ್ಮ ಸಂವಿಧಾನವು ‘ ಸಮಾನತೆಯ ಹಕ್ಕು’ ಅನ್ನು ಮೂಲಭೂತ ಹಕ್ಕುಗಳಲ್ಲಿ ಒಂದನ್ನಾಗಿಸಿದೆ.ದೇಶದ ಪ್ರಜೆಗಳೆಲ್ಲರೂ ಕಾನೂನಿನ ಮುಂದೆ ಸಮ ಎನ್ನುವ ಸಮಾನತೆಯ ಹಕ್ಕಿನಷ್ಟೇ ಮಹತ್ವದ್ದು ಹಲವು ಧರ್ಮಗಳು ಮತ್ತು ಬಹುಸಂಸ್ಕೃತಿಗಳನ್ನು ಹೊಂದಿರುವ ದೇಶದಲ್ಲಿ ‘ ಧರ್ಮನಿರಪೇಕ್ಷ ತತ್ತ್ವ’.ಇಂಗ್ಲಿಷಿನ Secular ಪದಕ್ಕೆ ಸಂವಾದಿಯಾದ ಭಾರತದ ಧರ್ಮನಿರಪೇಕ್ಷ’ ಇಲ್ಲವೆ ‘ ಜಾತ್ಯಾತೀತ’ ಎನ್ನುವ ಪದಗಳನ್ನು ಶ್ರೀಮತಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 1976 ರಲ್ಲಿ ತಂದ 42 ನೆಯ ತಿದ್ದುಪಡಿಯ ಮೂಲಕ ಸೇರಿಸಲಾಗಿದೆ.ಸಂವಿಧಾನದ ಪ್ರಸ್ತಾವನೆ ಇಲ್ಲವೆ ಪೀಠಿಕೆಗೆ ‘ ಸಮಾಜವಾದ’ ‘ ಧರ್ಮನಿರಪೇಕ್ಷ’ ಮತ್ತು ‘ ಸಮಗ್ರತೆ’ ಎನ್ನುವ ಪದಗಳು ಸೇರಿದ್ದು ಡಿಸೆಂಬರ್ 18,1976 ರಂದು ಮಾಡಿದ 42 ನೆಯ ತಿದ್ದುಪಡಿಯ ಮೂಲಕ. ಕಾಲಕಾಲಕ್ಕೆ ಭಾರತೀಯರ ಆಶೋತ್ತರಗಳ ಪ್ರತೀಕವಾಗಿ ತಿದ್ದುಪಡಿಗೊಳ್ಳುತ್ತ ಗಟ್ಟಿಗೊಳ್ಳುತ್ತಿರುವ ನಡೆದಿರುವ ಸಂವಿಧಾನದ ಪೀಠಿಕೆಯಲ್ಲಿ ‘ ಧರ್ಮನಿರಪೇಕ್ಷ’ ಇಲ್ಲವೆ ‘ ಜಾತ್ಯಾತೀತ’ ಪದ ಸೇರಿಸಿದ್ದು ಮಹತ್ವದ ಸಂಗತಿ.

ಭಾರತ ಎಂದರೆ ಕೇವಲ ಒಂದು ಭೌಗೋಳಿಕ ನೆಲೆಯಲ್ಲ,ಸಾವಿರಾರು ವರ್ಷಗಳಿಂದ ಪ್ರವಹಿಸುತ್ತಿರುವ ಬಂದಿರುವ ಉದಾತ್ತಮಾನವೀಯ ನೆಲೆಗಳಲ್ಲಿ ಅರಳಿದ ಅಮೃತಾತ್ಮಚೇತನರುಗಳನ್ನು ಪಡೆದ ಪುಣ್ಯಭೂಮಿ.ಇಲ್ಲಿ ಕ್ರೂರಿ ಅರಸುಗಳು ಆಳ್ವಿಕೆ ಮಾಡಿರುವಂತೆಯೇ ಲೋಕಕಲ್ಯಾಣಕ್ಕಾಗಿಯೇ ಬಾಳಿ ಬದುಕಿದ ಋಷಿಗಳು,ಸಿದ್ಧರುಗಳು,ಶರಣರು- ಸಂತರುಗಳು ಆಗಿ ಹೋಗಿದ್ದಾರೆ.ಮಹಾತ್ಮರು ಎನ್ನಬಹುದಾದ ಈ ಮನುಷ್ಯಚೇತನರುಗಳು ಎಲ್ಲ ಜಾತಿ,ಧರ್ಮಗಳ ನಡುವೆ ಹುಟ್ಟಿದ್ದಾರೆ,ಆದರೆ ತಾವು ಹುಟ್ಟಿದ ಜಾತಿ,ಧರ್ಮಗಳ ಹಂಗನ್ನು ಹರಿದೊಗೆದು ಮನುಷ್ಯರೆಲ್ಲರ ಒಳಿತಿಗಾಗಿ ಪ್ರಯತ್ನಿಸಿದ್ದಾರೆ.ಧರ್ಮನಿರಪೇಕ್ಷತೆ ಇಲ್ಲವೆ ಜಾತ್ಯಾತೀತತೆ ಎನ್ನುವುದು ಭಾರತದ ನೆಲದ ಸಹಜಗುಣ,ಮೂಲಸತ್ತ್ವ.18 ನೆಯ ಶತಮಾನದ ಹರಪ್ಪ ಮೊಹೆಂಜೋದಾರೋ ನಾಗರಿಕತೆಗಳ ಉತ್ಖನನದ ಕಾಲದ ‘ಸಿಂಧೂನದಿ’ ಯ ಕಾರಣದಿಂದ ಪ್ರಾರಂಭವಾಗುವ ಹಿಂದೂಧರ್ಮ,ಹಿಂದೂ ಸಂಸ್ಕೃತಿ ಎನ್ನುವ ಪದ,ಪರಿಕಲ್ಪನೆಗಳಿಗೆ ಸಾವಿರಾರು ವರ್ಷಗಳ ಪುರಾತನ ಇತಿಹಾಸವೇನೂ ಇಲ್ಲ ಭಾರತ ಹಿಂದೂರಾಷ್ಟ್ರ ಎಂದು ಬೀಗಲು.ವೇದಸಂಸ್ಕೃತಿಯು ಭಾರತದ ಪುರಾತನ ಸಂಸ್ಕೃತಿ ಎನ್ನುವವರು ವೇದಗಳ ಕಾಲ ಕ್ರಿ.ಶ.ಪೂರ್ವ 1500 ಎಂದು ಇತಿಹಾಸಕಾರರು ನಿರ್ದಿಷ್ಟ ಪಡಿಸಿದ ವೇದಗಳ ಕಾಲಗಣನೆಯನ್ನು ಗಮನಿಸಬೇಕು.ವೇದಪೂರ್ವದಲ್ಲಿ ಕ್ರಿ.ಶ.ಪೂರ್ವ 3000 ವರ್ಷಗಳ ಹಿಂದಿನಿಂದಲೂ ಅಸ್ತಿತ್ವದಲ್ಲಿತ್ತು ಹರಪ್ಪಸಂಸ್ಕೃತಿಯ ಜನರ ಮೂಲ ಸಂಸ್ಕೃತಿಯಾದ ಶೈವ ಸಂಸ್ಕೃತಿ.ಹರಪ್ಪ ನಾಗರಿಕತೆಯ ಜನರು ಶಿವ ಮತ್ತು ಮಾತೃದೇವತೆಗಳನ್ನು ಪೂಜಿಸುತ್ತಿದ್ದರು.ಕ್ರಿ.ಶ ಪೂರ್ವ 3000 ವರ್ಷಗಳಿಗಿಂತಲೂ ಹಿಂದಿನದಾದ ಸನಾತನ ಶೈವ ಧರ್ಮ ಮತ್ತು ಸಂಸ್ಕೃತಿಗಳ ಬದಲು 18 ನೆಯ ಶತಮಾನದ ಉತ್ತರಾರ್ಧದಲ್ಲಿ ಟಂಕಿಸಲಾದ ‘ ಹಿಂದೂ ಧರ್ಮ ‘ ಭಾರತದ ರಾಷ್ಟ್ರೀಯ ಧರ್ಮ ಎಂದು ಬೊಗಳುವುದು ಮೋಸವಲ್ಲವೆ? ಶೈವರು ಹಿಂದೂಗಳಲ್ಲ ಎನ್ನುವುದನ್ನು ಮರೆಯಬಾರದು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದಾದ್ಯಂತ ಪಸರಿಸಿರುವ ಶೈವಧರ್ಮದಲ್ಲಿ ಸಾವಿರಾರು ಉಪಪಂಥಗಳು, ಮತಗಳು ಇವೆಯಾದರೂ ಅವೆಲ್ಲವುಗಳ ಮೂಲವು ಶಿವನೇ.ರಾಮ- ಕೃಷ್ಣರಂತಹ ಪುರಾಣಗಳ ಇಲ್ಲವೆ ಮಹಾಕಾವ್ಯಗಳ ನಾಯಕರುಗಳನ್ನು ದೇವರನ್ನಾಗಿಸುವ ಹುನ್ನಾರದ ಹಿಂದೂ ಧರ್ಮವನ್ನು ಸ್ವಾಭಿಮಾನಿಯಾದ ಯಾವಶೈವನೂ ರಾಷ್ಟ್ರೀಯ ಧರ್ಮ ಎಂದು ಒಪ್ಪಲಾರ.ಶೈವರೇ ಹಿಂದೂ ಧರ್ಮವನ್ನು ಭಾರತದ ರಾಷ್ಟ್ರೀಯ ಧರ್ಮ ಎಂದು ಒಪ್ಪದೇ ಇರುವಾಗ ಈ ದೇಶದ ಇತಿಹಾಸ,ಸಂಸ್ಕೃತಿಗಳಿಗೆ ತಮ್ಮದೆ ಆದ ಕೊಡುಗೆ ನೀಡಿರುವ ಜೈನರು,ಬೌದ್ಧರು,ಮುಸ್ಲಿಮರು,ಸಿಖ್ಖರುಗಳು,ಕ್ರೈಸ್ತರುಗಳು ಹಿಂದೂ ಧರ್ಮವನ್ನು ಭಾರತದ ರಾಷ್ಟ್ರೀಯ ಧರ್ಮ ಎಂದು ಹೇಗೆ ತಾನೆ ಒಪ್ಪುತ್ತಾರೆ? ಹಿಂದೂ ರಾಷ್ಟ್ರವಾದಿಗಳಿಗೆ ಇಸ್ಲಾಂ ಮತ್ತು ಕ್ರೈಸ್ತಧರ್ಮಗಳು ‘ ಭಾರತದ ವಿರೋಧಿಧರ್ಮ’ ಗಳಾಗಿ ಕಾಣಿಸುತ್ತಿರಬಹುದು.ಆದರೆ ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿಯೇ ಹುಟ್ಟಿದ್ದ ಜೈನ ಮತ್ತು ಬೌದ್ಧ ಧರ್ಮಗಳು ಬ್ರಾಹ್ಮಣರ ಮನುಷ್ಯತ್ವ ವಿರೋಧಿ ನಿಲುವುಗಳಿಂದಾಗಿಯೇ ಜನ್ಮ ತಳೆದ ಹೊಸಧರ್ಮಗಳಾಗಿದ್ದವು ಎನ್ನುವುದನ್ನು ಹಿಂದೂ ರಾಷ್ಟ್ರವಾದಿಗಳು ಅರ್ಥಮಾಡಿಕೊಳ್ಳಬೇಕು.ಈ ದೇಶದಲ್ಲಿ ಹೊಸಮತಗಳ ಉದಯದ ಮೂಲಕಾರಣ ದೇಶದಲ್ಲಿ ಧರ್ಮ ಮತ್ತು ದೇವರುಗಳ ಗುತ್ತಿಗೆಪಡೆದಿದ್ದ ಬ್ರಾಹ್ಮಣರ ಅಮಾನುಷ ,ಅತಾರ್ಕಿಕ,ಅವಾಸ್ತವಿಕ ನಂಬಿಕೆ- ಸಂಪ್ರದಾಯಗಳೇ ಹೊರತು ಬೇರೇನೂ ಅಲ್ಲ.

ರಾಮ ಐತಿಹಾಸಿಕ ವ್ಯಕ್ತಿಯಾಗಿದ್ದ ಎನ್ನುವ ವಿಚಾರದಲ್ಲಿಯೇ ಗೊಂದಲವಿದೆ.ಹಿಂದೂ ಪರಂಪರೆಯು ರಾಮಾಯಣವನ್ನು ಮಹಾಕಾವ್ಯವೆಂದೂ ಮಹಾಭಾರತವನ್ನು’ ಇತಿಹಾಸ’ ಎನ್ನುತ್ತದೆ.ಹಿಂದೂಪರಂಪರಾನುಗತ ನಂಬಿಕೆಯೇ ರಾಮಾಯಣ ಇತಿಹಾಸ ಅಲ್ಲ ಎನ್ನುತ್ತಿರುವಾಗ ಹಿಂದೂ ರಾಷ್ಟ್ರವಾದಿಗಳು ರಾಮರಾಜ್ಯದ ಬಗ್ಗೆ ಸೊಗಸಾದ ಕಲ್ಪನೆಗಳನ್ನು ಕಟ್ಟುತ್ತಿರುವುದೇಕೆ? ಪುರಾಣಗಳು,ಮಹಾಕಾವ್ಯಗಳಿಗಿಂತ ಇತಿಹಾಸವು ಮಾನವಜನಾಂಗದ ಬೆಳವಣಿಗೆಯ ಗತಿನಿರ್ಧಾರಕ ಶಕ್ತಿಗಳಲ್ಲೊಂದು.ಪುರಾಣಗಳ,ತ್ರೇತಾಯುಗದ ರಾಮನಿಗಿಂತಲೂ ಇದೇ ಕಲಿಯುಗದಲ್ಲಿದ್ದ ಸಾಮ್ರಾಟ ಅಶೋಕನು ಪ್ರಪಂಚವು ಕಂಡ ಅತ್ಯುತ್ತಮದೊರೆಗಳಲ್ಲಿ ಒಬ್ಬನು.ಅಶೋಕನ ಸರ್ವಧರ್ಮಸಹಿಷ್ಣುಭಾವವೇ ಭಾರತದ ಅಂತಃಸತ್ತ್ವ.ಅಶೋಕನನ್ನು ರಾಷ್ಟ್ರೀಯ ಆದರ್ಶಪುರುಷನನ್ನಾಗಿ ಸ್ವೀಕರಿಸಬಹುದಲ್ಲ? ಅಶೋಕಬೇಡವೆಂದರೆ ರಾಮನೂ ಬೇಡ.

ಭಾರತವು ಇಂದು ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿದೆ.ವಿಶ್ವದ ಪ್ರಗತಿಪರ ರಾಷ್ಟ್ರಗಳೇ ಭಾರತದ ಸಂಸ್ಕೃತಿ,ಸತ್ತ್ವಗಳತ್ತ ಬೆರಗುಗಣ್ಣಿನಿಂದ ನೋಡುತ್ತಿವೆ.ಸಮಾನತೆ,ಭ್ರಾತೃತ್ವ ಮತ್ತು ವಿಶ್ವಬಂಧುತ್ವಗಳೆಂಬ ಅಮರತತ್ತ್ವಗಳಲ್ಲಿ ಅರಳಿದ ಭಾರತೀಯರ ಜೀವಚೈತನ್ಯವು ಇಂದು ಅವೇ ಅಮರತತ್ತ್ವಗಳನ್ನು ಸಂವಿಧಾನದ ರೂಪದಲ್ಲಿ ಕಂಡು,ಉಲ್ಲಸಿತಗೊಂಡಿವೆ.ಭಾರತವು ಹಿಂದೂಗಳ ರಾಷ್ಟ್ರವಲ್ಲ.ಭಾರತವು ಹಿಂದೂಗಳಂತೆ ಮುಸ್ಲಿಮರು,ಕ್ರೈಸ್ತರು,ಸಿಖ್ಖರು,ಬೌದ್ಧರು,ಜೈನರುಗಳಿಗೆಲ್ಲ ಸೇರಿದ ರಾಷ್ಟ್ರ.ಇಲ್ಲಿ ನೆಲೆಕಂಡುಕೊಂಡಿರುವ ಎಲ್ಲರಿಗೂ ಭಾರತಭೂಮಿಯ ಮೇಲೆ ಹಕ್ಕು ಇದೆ.ಎಲ್ಲ ಭಾರತೀಯರು ಅವರವರ ನಂಬಿಕೆ,ಪರಂಪರೆಗಳಂತೆ ಬದುಕುವ ಹಕ್ಕು ಮತ್ತು ಅವಕಾಶವನ್ನು ನೀಡಿರುವ ಸಂವಿಧಾನದ ಆಶಯದಂತೆ ಭಾರತವು ಯಾರೊಬ್ಬರ ಮತಧರ್ಮಕ್ಕೂ ಸೇರಿರದ ಎಲ್ಲ ಮತ- ಧರ್ಮ ,ನಂಬಿಕೆಗಳ ಸಂಗಮಚೈತನ್ಯವೇ ಭಾರತಸಂಸ್ಕೃತಿಯ ಆತ್ಮವಾಗಿದ್ದು ಅದರ ಪ್ರತೀಕವಾಗಿರುವ ‘ ಧರ್ಮನಿರಪೇಕ್ಷ’ ಭಾವವು ಭಾರತೀಯರ ಮೂಲಸತ್ತ್ವವಾಗಿದ್ದು ಅದನ್ನು ಎತ್ತಿಹಿಡಿಯಬೇಕಿದೆ.

‌‌ ‌ ‌‌‌

About The Author