ಮೂರನೇ ಕಣ್ಣು : ಶರಣಬಸ್ಸಪ್ಪ ದರ್ಶನಾಪುರ ಅವರಿಗೆ ಸಚಿವಸ್ಥಾನ ನೀಡಬೇಕು : ಮುಕ್ಕಣ್ಣ ಕರಿಗಾರ

ಲೇಖನ : ಮುಕ್ಕಣ್ಣ ಕರಿಗಾರ

ನಾಳೆಯ ಹೊತ್ತಿಗೆ ಹೊಸ ಸರ್ಕಾರದ ಹೊಸಮಂತ್ರಿಗಳ ಪಟ್ಟಿ ಹೊರಬಿದ್ದು ನೂತನ ಸಚಿವರುಗಳು ಪ್ರಮಾಣವಚನ ಸ್ವೀಕರಿಸಬಹುದು.ರಾಜ್ಯದ ಮುಖ್ಯಮಂತ್ರಿ,ಉಪಮುಖ್ಯಮಂತ್ರಿಗಳು ಅವರದೇ ಆದ ಅನುಯಾಯಿಗಳ ಪಡೆಯನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡು ತಮ್ಮ ಬಲವರ್ಧನೆ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿದ್ದರೆ ಕಾಂಗ್ರೆಸ್ ಹೈಕಮಾಂಡ್ ಕೂಡ ಸಚಿವಸಂಪುಟದ ರಚನೆಯಲ್ಲಿ ತನ್ನದೆ ಆದ ಲೆಕ್ಕಾಚಾರಗಳನ್ನು ಇಟ್ಟುಕೊಂಡಿದೆ.ಪ್ರದೇಶವಾರು,ಜಾತಿವಾರು ಸಚಿವಸ್ಥಾನಗಳನ್ನಿತ್ತು ಸಮತೋಲನ ಕಾಯ್ದುಕೊಳ್ಳುವ ಆಲೋಚನೆಯಲ್ಲಿದೆ ಕಾಂಗ್ರೆಸ್ ಹೈಕಮಾಂಡ್.

ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಯಾದಗಿರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಹಿರಿಯ ಶಾಸಕ ಶರಣಬಸ್ಸಪ್ಪ ದರ್ಶನಾಪುರ ಅವರಿಗೆ ಸಚಿವಸ್ಥಾನ ನೀಡಬೇಕು ಮತ್ತು ಅವರನ್ನು ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಶಾಸಕರುಗಳು ಸಚಿವರಾಗದೆ ಇದ್ದುದರಿಂದ ಹೊರಗಣ ಜಿಲ್ಲೆಯವರೇ ಜಿಲ್ಲಾ ಉಸ್ತುವಾರಿ ಸಚಿವರುಗಳಾಗಿದ್ದುದರಿಂದ ಯಾದಗಿರಿ ಜಿಲ್ಲೆಯು ಅಭಿವೃದ್ಧಿ ವಿಷಯಗಳಲ್ಲಿ ನಿರೀಕ್ಷಿತ ಪ್ರಮಾಣದ ಯಶಸ್ಸು ಕಾಣಲಿಲ್ಲ.ಆಡಳಿತದಲ್ಲಿಯೂ ಹೇಳಿಕೊಳ್ಳುವಂತಹ ಬಿಗಿಯಾಗಲಿ,ಸುಧಾರಣೆಯಾಗಲಿ ಕಂಡು ಬರಲಿಲ್ಲ.ಬಿಜೆಪಿಯ ಇಬ್ಬರು ಶಾಸಕರುಗಳು ಇದ್ದರಾದರೂ ಅವರು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವುದರಲ್ಲಿಯೇ ಹೆಚ್ಚಿನ ಆಸಕ್ತಿ ವಹಿಸಿದ್ದರು.ಒಬ್ಬ ಶಾಸಕರಂತೂ ಗ್ರಾಮ ಪಂಚಾಯತಿಯ ಮಟ್ಟಕ್ಕೆ ಇಳಿದು ನರೆಗಾ ಯೋಜನೆ,ಹದಿನೈದನೇ ಹಣಕಾಸು ಯೋಜನೆಗಳಲ್ಲಿ ಕಾಮಗಾರಿಗಳಲ್ಲಿ ಕೈ ಹಾಕುವಷ್ಟು ‘ಮುಂದುವರೆ’ದಿದ್ದರು.

ಯಾದಗಿರಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶಹಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶರಣಬಸ್ಸಪ್ಪ ದರ್ಶನಾಪುರ ಅವರು ಹಿರಿಯ ಶಾಸಕರು,ಅನುಭವಿ ಶಾಸಕರು ಕೂಡ.ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವೂ ಅವರಿಗಿದೆ.ಸರಕಾರಿ ಯೋಜನೆಗಳ ಬಗ್ಗೆ ಉತ್ತಮ ತಿಳಿವಳಿಕೆ ಉಳ್ಳ ದರ್ಶನಾಪುರ ಅವರು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ವಿಧಾನಸೌಧ ಮತ್ತು ಸಚಿವಾಲಯಗಳಲ್ಲಿ ಟೇಬಲ್ ಟೇಬಲ್ ತಿರುಗಿ ಕೆಲಸ ಮಾಡಿಸುವ ಕಲ್ಯಾಣ ಕರ್ನಾಟಕದ ಮೂವರು ಶಾಸಕರುಗಳಲ್ಲಿ ಒಬ್ಬರು.ಕ್ಷೇತ್ರದ ಕೆಲಸ ಕಾರ್ಯಗಳಿಗಾಗಿ ವಿಧಾನಸೌಧದ ಸಂಬಂಧಿಸಿದ ಮಂತ್ರಿಗಳು ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳ ಟೇಬಲ್ ಗಳ ವರೆಗೆ ಹೋಗಿ ಕೆಲಸ ಮಾಡಿಸುವ ಕಲ್ಯಾಣ ಕರ್ನಾಟಕದ ಇನ್ನಿಬ್ಬರು ಶಾಸಕರುಗಳೆಂದರೆ ಬಸವರಾಜ ರಾಯರೆಡ್ಡಿ ಮತ್ತು ಅಮರೇಗೌಡ ಬಯ್ಯಾಪುರ ಅವರು.ಕ್ಷೇತ್ರದ ಪರ ಪ್ರಾಮಾಣಿಕ ಕಾಳಜಿಯನ್ನುಳ್ಳ ಶರಣಬಸ್ಸಪ್ಪ ದರ್ಶನಾಪುರ ಅವರಿಗೆ ಸಚಿವಸ್ಥಾನ ನೀಡಿದರೆ ಶಹಾಪುರ ತಾಲೂಕು ಮಾತ್ರವಲ್ಲ ಯಾದಗಿರಿ ಜಿಲ್ಲೆಯು ಗಣನೀಯ ಪ್ರಗತಿ ಸಾಧಿಸುತ್ತದೆ.

ಯಾದಗಿರಿ ಜಿಲ್ಲೆಯಲ್ಲಿ ಬಡತನ ಇದೆ,ನಿರುದ್ಯೋಗ ಇದೆ,ವಲಸೆಯ ಸಮಸ್ಯೆಯೂ ಇದೆ.ಮೂಲಭೂತ ಸೌಕರ್ಯಗಳ ಕೊರತೆ ದೊಡ್ಡಪ್ರಮಾಣದಲ್ಲಿದೆ.ಶರಣಬಸ್ಸಪ್ಪ ದರ್ಶನಾಪುರ ಅವರನ್ನು ಸಚಿವರನ್ನಾಗಿ ಮಾಡಿದರೆ ಈ ಸಮಸ್ಯೆಗಳು ಸಂಪೂರ್ಣವಾಗಿ ಪರಿಹಾರವಾಗದಿದ್ದರೂ ಗಮನಾರ್ಹವಾದ ಪ್ರಗತಿಯಂತೂ ಸಾಧ್ಯವಾಗುತ್ತದೆ.ಶರಣಬಸ್ಸಪ್ಪ ದರ್ಶನಾಪುರ ಅವರಿಗೆ ಜಿಲ್ಲೆಯ ಅಭಿವೃದ್ಧಿಯ ಸ್ಪಷ್ಟಪರಿಕಲ್ಪನೆ ಇದೆ,ದೂರದೃಷ್ಟಿ ಇದೆ,ಕೈಗಾರಿಕೆಗಳ ಸ್ಥಾಪನೆಯಿಂದ ಯಾದಗಿರಿ ಜಿಲ್ಲೆಯ ನಿರುದ್ಯೋಗ ಸಮಸ್ಯೆ ಮತ್ತು ಬಡತನ ನಿವಾರಣೆಯನ್ನು ಮಾಡಬಹುದಿದ್ದು ದರ್ಶನಾಪುರ ಅವರಿಗೆ ಕೈಗಾರಿಕೆಗಳ ಬಗ್ಗೆ ಮತ್ತು ಯಾದಗಿರಿ ಜಿಲ್ಲೆಗೆ ಅಗತ್ಯವಿರುವ ಕೈಗಾರಿಕೆಗಳ ಬಗ್ಗೆ ಸ್ಪಷ್ಟ ಮಾಹಿತಿ ಇದೆ.ಗ್ರಾಮೀಣ ಬಡತನ ನಿರ್ವಹಣೆಯಲ್ಲಿ ನರೇಗಾ ಯೋಜನೆಯು ವಹಿಸಬಹುದಾದ ಪಾತ್ರದ ಬಗ್ಗೆ ಅವರಷ್ಟು ತಿಳಿವಳಿಕೆ ಹೊಂದಿದ ಇನ್ನೊಬ್ಬ ಶಾಸಕರು ಇಲ್ಲ ಎಂದರೆ ಅತಿಶಯೋಕ್ತಿ ಅಲ್ಲ.ಅಧಿಕಾರಿಗಳು ನರೆಗಾ ಯೋಜನೆಯ ಮಾರ್ಗಸೂಚಿಗಳನ್ನು ತಿರುವಿ ಹಾಕುವುದರಲ್ಲೇ ಸಮಯ ತಳ್ಳುತ್ತಿದ್ದರೆ ಶರಣಬಸ್ಸಪ್ಪ ದರ್ಶನಾಪುರ ಅವರು ನರೆಗಾ ಯೋಜನೆಯಡಿ ಯಾವ ಗ್ರಾಮಕ್ಕೆ ಯಾವ ಯೋಜನೆ ಸೂಕ್ತ,ಯಾವ ಗ್ರಾಮ ಪಂಚಾಯತಿಗೆ ಯಾವ ಕಾಮಗಾರಿ ಸೂಕ್ತ ಎಂದು ನಿರ್ಣಯಿಸುವಷ್ಟು ನರೆಗಾ ಯೋಜನೆಯ ಪರಿಣತಿ ಪಡೆದಿದ್ದಾರೆ.ವಸತಿ ಯೋಜನೆಯ ಸಮಸ್ಯೆಗಳು ಮತ್ತು ಅರ್ಹಫಲಾನುಭವಿಗಳಿಗೆ ವಸತಿ ಕಲ್ಪಿಸಿಕೊಡಬೇಕು ಎನ್ನುವ ಅವರ ಬದ್ಧತೆಯು ಮೆಚ್ಚುವಂತಹದ್ದು.

ಧೀರ್ಘಕಾಲದ ಶಾಸಕತ್ವದ ಅನುಭವ ಮತ್ತು ಸಚಿವರಾಗಿಯೂ ಕಾರ್ಯನಿರ್ವಹಿಸಿದ ಅನುಭವದಿಂದ ಅವರು ಸರಕಾರದ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ಬಲ್ಲವರಾಗಿದ್ದಾರೆ.ಸರಕಾರಿ ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿದೆ.ಉತ್ತಮ ಅಧಿಕಾರಿಗಳನ್ನು ಪ್ರೋತ್ಸಾಹಿಸುವ ಶರಣಬಸ್ಸಪ್ಪ ದರ್ಶನಾಪುರ ಅವರು ದಪ್ಪಚರ್ಮದ ಅಧಿಕಾರಿಗಳ ಮೈಛಳಿ ಬಿಡಿಸಲು ಹಿಂದೆ ಮುಂದೆ ನೋಡುವುದಿಲ್ಲ.ಹಾಗಂತ ಅವರು ಅಧಿಕಾರಿಗಳ ಮೇಲೆ ಸವಾರಿ ಮಾಡುವುದಿಲ್ಲ.’ನಿಯಮಗಳ ವ್ಯಾಪ್ತಿಯಲ್ಲಿಯೇ ಕೆಲಸ ಮಾಡಿ,ಸಾರ್ವಜನಿಕರಿಗೆ ಸಹಾಯವಾಗುವಂತಿದ್ದರೆ ನಿಯಮಗಳನ್ನು ಬಾಗಿಸಿ ಆದರೆ ಮುರಿಯಬೇಡಿ’ ಎಂದು ಅವರೇ ಹೇಳುತ್ತಾರೆ.ಸರಕಾರಿ ಅಧಿಕಾರಿಗಳು ‘ ಸರ್,ಇದಕ್ಕೆ ನಿಯಮಗಳಲ್ಲಿ ಅವಕಾಶ ಇಲ್ಲ’ ಎಂದರೆ ‘ಸರಿ ಬಿಡಿ’ ಎನ್ನುತ್ತಾರಾಗಲಿ ಸರಕಾರಿ ಅಧಿಕಾರಿಗಳ ಮೇಲೆ ಗತ್ತು ಗೈರತ್ತುಗಳನ್ನು ಪ್ರದರ್ಶಿಸುವುದಿಲ್ಲ,’ನಾನು ಹೇಳಿದ ಮೇಲೆ ಮುಗಿಯಿತು,ಆಗಲೇಬೇಕು’ ಎಂದು ಹಠ ಸಾಧಿಸುವುದಿಲ್ಲ.ದುರುದ್ದೇಶದಿಂದ ಸರಕಾರಿ ಅಧಿಕಾರಿಗಳ ಬಗ್ಗೆ ಚಾಡಿ ಹೇಳುವ ಜನರಿಗೆ ಬುದ್ಧಿವಾದ ಹೇಳುತ್ತಾರೆ,ಸರಕಾರಿ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳುವುದನ್ನು ಕಲಿಯಿರಿ ಎಂದೂ ಹೇಳಲು ಮರೆಯುವುದಿಲ್ಲ.

ಯಾದಗಿರಿ ಜಿಲ್ಲೆಯ ಚಿತ್ರಣ ಬದಲಾಗಬೇಕು ಮತ್ತು ಯಾದಗಿರಿಯು ರಾಜ್ಯದ ಎಲ್ಲ ಮುಂದುವರೆದ ಜಿಲ್ಲೆಗಳೊಂದಿಗೆ ಸ್ಪರ್ಧಿಸಬೇಕು ಎಂದರೆ ಶರಣಬಸ್ಸಪ್ಪ ದರ್ಶನಾಪುರ ಅವರನ್ನು ಸಚಿವರನ್ನಾಗಿ ಮಾಡಬೇಕು ಮತ್ತು ಅವರಿಗೆ ಯಾದಗಿರಿ ಜಿಲ್ಲೆಯ ಉಸ್ತುವಾರಿ ನೀಡಬೇಕು.ಕಲ್ಯಾಣ ಕರ್ನಾಟಕದಲ್ಲಿ ಬಹಳಷ್ಟು ಜನ ಕಾಂಗ್ರೆಸ್ ಶಾಸಕರುಗಳು ಗೆದ್ದಿರಬಹುದು ಆದರೆ ಶರಣಬಸ್ಸಪ್ಪ ದರ್ಶನಾಪುರ ಅವರಂತೆ ಜನಪರ ಬದ್ಧತೆ ಮತ್ತು ಕ್ಷೇತ್ರದ ಅಭಿವೃದ್ಧಿಯಲ್ಲಿ ದೃಢವಾದ ಸಂಕಲ್ಪಚಿತ್ತ ಉಳ್ಳವರ ಸಂಖ್ಯೆ ಕಡಿಮೆ. ಜನರೊಂದಿಗೆ ಉತ್ತಮ ಬಾಂಧವ್ಯವೂ ಅವರಿಗಿದೆ.ಎಲ್ಲ ದೃಷ್ಟಿಯಿಂದಲೂ ಮಂತ್ರಿಯಾಗುವ ಅರ್ಹತೆ ಪಡೆದಿದ್ದಾರೆ ಶರಣಬಸ್ಸಪ್ಪ ದರ್ಶನಾಪುರ ಅವರು.

About The Author