ಮೂರನೇ ಕಣ್ಣು : ಸಹವರ್ತಿ ಎನ್ನುವುದು ಸರಿಯಾದ ಪದವೆ? : ಮುಕ್ಕಣ್ಣ ಕರಿಗಾರ

ಇತ್ತೀಚಿನ ದಿನಗಳಲ್ಲಿ ಕನ್ನಡದ ದಿನಪತ್ರಿಕೆಗಳು ಶಬ್ದಕೋಶಕ್ಕೆ ನೂರಾರು ಹೊಸ ಹೊಸ ಶಬ್ದಗಳನ್ನು ಕೊಡುಗೆಯಾಗಿ ನೀಡುತ್ತಿವೆ.ವೇಗವಾಗಿ ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ನಮ್ಮ ಭಾಷೆಯೂ ಇಂದೀಕರಣಗೊಳ್ಳುತ್ತ,ಹೊಸಹೊಸ ಪದಗಳನ್ನು ತನ್ನ ಒಡಲಿಗೆ ಸೇರಿಸಿಕೊಳ್ಳುತ್ತ ಬೆಳೆಯಬೇಕು.ಭಾಷೆಯು ನವನವೋನ್ಮೇಷಶಾಲಿಯಾದ್ದರಿಂದ ಹೊಸ ಶಬ್ದಗಳನ್ನು ಟಂಕಿಸಲು ವಿಪುಲ ಅವಕಾಶ ಉಂಟು. ಆದರೆ ಇಂಗ್ಲಿಷ್ ಭಾಷೆಯೂ ಸೇರಿದಂತೆ ಇತರ ಭಾಷೆಗಳ ಸಂಪರ್ಕದಿಂದ ಸೃಷ್ಟಿಸುವ ಪದಗಳು ಕನ್ನಡದ ಜಾಯಮಾನಕ್ಕೆ ಒಗ್ಗಿಕೊಳ್ಳುವಂತೆ ಇರಬೇಕು,ಅರ್ಥಸ್ಫುರಣೆಗೆ ಬಾಧಕಬಾರದಂತಿರಬೇಕು.

‘ಪ್ರಜಾವಾಣಿ’ ದಿನಪತ್ರಿಕೆಯ ಮೇ 25 ರ ಸಂಚಿಕೆಯಲ್ಲಿ ಒಂದು ಹೊಸಪದವನ್ನು ಸೃಷ್ಟಿಸಲಾಗಿದೆ ಇಂಗ್ಲಿಷಿನ ಶಬ್ದಕ್ಕೆ ಸಂವಾದಿಯಾಗಿ.ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಆಸ್ಟ್ರೇಲಿಯಾ ಭೇಟಿಯನ್ನು ಕುರಿತ ಪ್ರಜಾವಾಣಿಯ ಪುಟ 11 ರ ‘ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಕಾನ್ಸುಲೇಟ್’ ಎನ್ನುವ ಶೀರ್ಷಿಕೆಯಡಿಯ ವರದಿಯ ‘ ದೇಗುಲಗಳ ಮೇಲಿನ ದಾಳಿಗೆ ಕಳವಳ’ ಎನ್ನುವ ಬಾಕ್ಸ್ ಕಾಲಮ್ಮಿನಲ್ಲಿ ಪ್ರಜಾವಾಣಿಯು ‘ ಸಹವರ್ತಿ’ ಎನ್ನುವ ಪದವನ್ನು ಟಂಕಿಸಿದೆ.ಬಾಕ್ಸ್ ಕಾಲಮ್ಮಿನ ಎರಡನೇ ಪ್ಯಾರಾದಲ್ಲಿ ಆ ಪದವು ಬರುತ್ತಿದ್ದು ಆ ಪ್ಯಾರಾ ಹೀಗಿದೆ:–” ಆಸ್ಟ್ರೇಲಿಯಾಕ್ಕೆ ಎರಡು ದಿನಗಳ ಪ್ರವಾಸಕೈಗೊಂಡಿರುವ ಮೋದಿ ಅವರು ತಮ್ಮ “ಸಹವರ್ತಿ” ಅಲ್ಬೆನೀಸ್ ಜತೆಗಿನ ಸಭೆಯಲ್ಲಿ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಿದರು.”ನರೇಂದ್ರಮೋದಿಯವರು ಭಾರತದ ಪ್ರಧಾನಮಂತ್ರಿಯವರಾದರೆ ಆ್ಯಂಟನಿ ಅಲ್ಬೇನೀಸ್ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿ.ನರೇಂದ್ರಮೋದಿಯವರು ತಮ್ಮ ಆಸ್ಟ್ರೇಲಿಯಾ ಪ್ರವಾಸದವೇಳೆ ಅಲ್ಲಿನ ಪ್ರಧಾನಿ ಆ್ಯಂಟನಿ ಅಲ್ಬೆನೀಸ್ ಅವರೊಂದಿಗೆ ಸಿಡ್ನಿಯಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಿ,ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ.ಈ ವಿಷಯವನ್ಮು ಹೇಳುವಾಗ ಪ್ರಜಾವಾಣಿಯು ” ಸಹವರ್ತಿ” ಎನ್ನುವ ಪದವನ್ನು ಬಳಸಿದೆ,ಬಹುಶಃ ಇಂಗ್ಲಿಷಿನ Counter part ಪದದ ಕನ್ನಡಾನುವಾದ ಅದಾಗಿರಬೇಕು.ಹೇಗಿದ್ದರೂ counter part ವಿದೇಶಿ ಸಂಬಂಧಗಳಲ್ಲಿ ‘ ಸಹವರ್ತಿ’ ಆಗಲಾರದು. ಭಾರತದ ಪ್ರಧಾನಿಗೆ ಆಸ್ಟ್ರೇಲಿಯಾದ ಪ್ರಧಾನಿ counter part ಆಗಬಹುದು,ಆದರೆ ಸಹವರ್ತಿ ಆಗಲಾರರು.

ಒಂದು ದೇಶದ ಪ್ರಧಾನಿಯನ್ನು ಮತ್ತೊಂದು ದೇಶದ ಪ್ರಧಾನಿಯ ” ಸಹವರ್ತಿ” ಎನ್ನುವುದು ರಾಜತಾಂತ್ರಿಕ ಭಾಷೆಯಲ್ಲಿಯೂ ಸರಿಯಾದ ಪದವಲ್ಲ.” ಸಹವರ್ತಿ” ಎಂದರೆ ದೀರ್ಘಕಾಲ ಜೊತೆಗಿದ್ದು ಕೆಲಸಮಾಡುವವನು ಎಂದರ್ಥ.ಅಲ್ಬೆನೀಸ್ ಅವರು ನರೇಂದ್ರ ಮೋದಿಯವರ ಜೊತೆಗೆ ಒಂದೆರಡು ದಿನಗಳ ಕಾಲ ಜೊತೆಗಿರುವವರೇ ಹೊರತು ದೀರ್ಘಕಾಲ ಮೋದಿಯವರ ಜೊತೆ ಇರರು.ಅಲ್ಲದೆ ಸಹವರ್ತಿಯು ಆದಷ್ಟೂ ಜೊತೆಗಿರುವ ಸಲುಗೆಯ ಸಂಬಂಧ ಉಳ್ಳ ಆತ್ಮೀಯ ವ್ಯಕ್ತಿಯಾಗಿರುತ್ತಾನೆ.ನರೇಂದ್ರಮೋದಿಯವರು ಮತ್ತು ಆ್ಯಂಟನಿ ಅಲ್ಬೆನೀಸ್ ಅವರ ನಡುವೆ ಅಂತಹ ಸಲುಗೆಯ ಸಂಬಂಧ ಇರಲು ಅವಕಾಶವಿಲ್ಲ ರಾಜತಾಂತ್ರಿಕ ಸಂಬಂಧಗಳ ಹೊರತು.ಕೆಲವು ಘಂಟೆಗಳ ಕಾಲ ಜೊತೆಗಿದ್ದರೆ ಅದು ” ಸಹವರ್ತಿ” ಎನ್ನಿಸಿಕೊಳ್ಳದು.ಕನ್ನಡದಲ್ಲಿ ‘ ನಿಕಟವರ್ತಿ’ ಎನ್ನುವ ಸಂಬಂಧ ಸಾಮೀಪ್ಯ ಸೂಚಿಸುವ ಪದ ಒಂದಿದೆ.ನಿಕಟವರ್ತಿಯು ಆ ವ್ಯಕ್ತಿಯ ಹತ್ತಿರಹೋಗುವಷ್ಟು ಆತ್ಮೀಯ ಸಂಪರ್ಕಹೊಂದಿರುತ್ತಾನೆ.

ವಿದೇಶಿ ವ್ಯವಹಾರಗಳು ಮತ್ತು ಪ್ರಧಾನಮಂತ್ರಿಯವರಂತಹ ಅತಿಗಣ್ಯರ ವಿದೇಶಿ ಭೇಟಿಯನ್ನು ಕುರಿತು ಬಳಸುವ ಪದಗಳಲ್ಲಿ ರಾಜತಾಂತ್ರಿಕ ನೈಪುಣ್ಯತೆ ಇರಬೇಕು.’ಸಹವರ್ತಿ’ ಎನ್ನುವುದು ರಾಜತಾಂತ್ರಿಕ ಭಾಷೆಯು ಒಪ್ಪದ,ದೇಶದೇಶಗಳ ನಡುವಿನ ಔಪಚಾರಿಕ ಸಂಬಂಧಗಳಲ್ಲಿ ‘ ಸಲುಗೆ’ ಯನ್ನು ಅಭಿವ್ಯಕ್ತಿಸುವ ಅಸಂಗತಪದವಾಗುತ್ತದೆ.

About The Author