ಮೂರನೇ ಕಣ್ಣು : ನೂತನ ಶಾಸಕರಿಗೆ ತರಬೇತಿ,ಸ್ವಾಗತಾರ್ಹ ನಿರ್ಧಾರ : ಮುಕ್ಕಣ್ಣ ಕರಿಗಾರ

ಇದೇ ಮೊದಲಬಾರಿಗೆ ವಿಧಾನಸೌಧ ಪ್ರವೇಶಿಸಿದ 70 ಜನ ನೂತನ ಶಾಸಕರುಗಳಿಗೆ ಮೂರುದಿನಗಳ ತರಬೇತಿ ನೀಡಲಾಗುವುದು ಎಂದು ಹೇಳಿದ್ದಾರೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು.ನೂತನ ಶಾಸಕರಿಗೆ ಅವರ ಜವಾಬ್ದಾರಿ- ಹೊಣೆಗಾರಿಕೆಗಳನ್ನು ತಿಳಿಸಿಕೊಡುವ ಈ ತರಬೇತಿಯ ಆಯೋಜನೆಯ ಉತ್ತಮ ನಿರ್ಧಾರ.ಮೊದಲ ಬಾರಿಗೆ ಶಾಸನ ಸಭೆಯನ್ನು ಪ್ರವೇಶಿಸಿದ ಶಾಸಕರಿಗೆ ಶಾಸಕಾಂಗದ ಮಹತ್ವ,ಶಾಸಕರಾಗಿ ಅವರ ಜವಾಬ್ದಾರಿ,ಕ್ಷೇತ್ರದ ಕೆಲಸ ಕಾರ್ಯಗಳನ್ನು ಸರಕಾರದಿಂದ ಮಾಡಿಸಿಕೊಳ್ಳುವುದು ಇವೇ ಮೊದಲಾದ ವಿಷಯಗಳಲ್ಲಿ ತರಬೇತಿ ಬೇಕಿದೆ.

ನೂತನ ಶಾಸಕರುಗಳಿಗೆ ಮೊದಲು ಭಾರತದ ಸಂವಿಧಾನ ಮತ್ತು ಸರ್ಕಾರಿ ಆಡಳಿತ ಪದ್ಧತಿಯ ಬಗ್ಗೆ ತರಬೇತಿ ನೀಡಬೇಕು.ಸಂವಿಧಾನದಡಿ ಶಾಸಕರ ಹಕ್ಕು- ಕರ್ತವ್ಯಗಳು,ವಿಶೇಷಸೌಲಭ್ಯ( previlage) ಗಳ ಬಗ್ಗೆ ಮಾಹಿತಿ ನೀಡಬೇಕು.ಸಂವಿಧಾನದ ಪೀಠಿಕೆ,ರಾಜ್ಯನೀತಿ ನಿರ್ದೇಶಕ ತತ್ತ್ವಗಳು,ಮೂಲಭೂತ ಹಕ್ಕುಗಳು,ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಮನ್ವಯ,ಪ್ರಜಾಪ್ರಭುತ್ವವನ್ನು ಬಲಪಡಿಸಲು ಸ್ವತಂತ್ರ ನ್ಯಾಯಾಂಗದ ಅಗತ್ಯತೆ ಇವೇ ಮೊದಲಾದ ಸಾಂವಿಧಾನಿಕ ವಿಷಯಗಳ ಬಗ್ಗೆ ತರಬೇತಿ ನೀಡಿ ನೂತನಶಾಸಕರುಗಳನ್ನು ಸಂವಿಧಾನಬದ್ಧರನ್ನಾಗಿರುವಂತೆ ಪ್ರೇರೇಪಿಸಬೇಕು.ಕರ್ನಾಟಕ ಸರಕಾರದ ವಿಧಾನ ಮಂಡಲ ,ಅದರ ಕಾರ್ಯವಿಧಾನ,ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಇತರ ಮಂತ್ರಿಗಳೊಂದಿಗೆ ಸಂಪರ್ಕ- ಸಂವಹನದ ಅಗತ್ಯ ಮತ್ತು ಪರಿಣಾಮಕಾರಿ ಸಂಹನದ ಬಗ್ಗೆ ತಿಳಿವಳಿಕೆ ನೀಡಬೇಕು.ಮುಖ್ಯಕಾರ್ಯದರ್ಶಿ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳ ಮುಖ್ಯಸ್ಥರುಗಳು,ಅವರುಗಳಿಂದ ಕ್ಷೇತ್ರದ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವ ಬಗ್ಗೆ,ಸಚಿವಾಲಯದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಬೇಕು.ಸದನದ ವಿವಿಧ ಸ್ಥಾಯಿ ಸಮಿತಿಗಳು ಅವುಗಳ ಅಧ್ಯಕ್ಷರು ಅಥವಾ ಸದಸ್ಯರಾಗಿ ಆಯ್ಕೆಯಾದರೆ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಬೇಕು.ರಾಜ್ಯದ ಬಜೆಟ್ ತಯಾರಿಕೆಯ ಪ್ರಕ್ರಿಯೆ,ಬಜೆಟ್ ನಲ್ಲಿ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮ,ಯೋಜನೆಗಳನ್ನು ಸೇರಿಸುವ ವಿಧಾನದ ಬಗ್ಗೆ ತಿಳಿವಳಿಕೆ ನೀಡಬೇಕು.

ನೂತನ ಶಾಸಕರುಗಳಿಗೆ ಶಾಸಸ ಸಭೆಯ ಮಹತ್ವ,ಶಾಸನಗಳ ರಚನೆ,ಅಧಿವೇಶನ ಸಂದರ್ಭದಲ್ಲಿ ವಿಧಾನ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರುವ ಅಗತ್ಯದ ಬಗ್ಗೆ ತರಬೇತಿಯಲ್ಲಿ ಒತ್ತು ನೀಡಬೇಕು.ಅಧಿವೇಶನದ ನಡೆದಾಗ ಸದನದಲ್ಲಿ ಶಾಸಕರ ವರ್ತನೆ,ಪ್ರಶ್ನೆಗಳನ್ನು ಕೇಳುವುದು,ಪ್ರಶ್ನೆಗಳ ಮಹತ್ವ,ಪ್ರಶ್ನೆಗಳ ಸ್ವರೂಪ ಇವೇ ಮೊದಲಾದ ವಿಷಯಗಳ ಬಗ್ಗೆ ತರಬೇತಿ ನೀಡುವುದರ ಜೊತೆಗೆ ಸದಸನದಲ್ಲಿ ಪರಿಣಾಮಕಾರಿಯಾಗಿ ಮಾತನಾಡುವುದು,ಉತ್ತಮ ಸಂಸದೀಯ ಪಟುಗಳಾಗಿ ರೂಪುಗೊಳ್ಳುವುದು ಹೇಗೆ ಎನ್ನುವ ಬಗ್ಗೆಯೂ ನೂತನ ಶಾಸಕರುಗಳಿಗೆ ತರಬೇತಿ ನೀಡಬೇಕು.

ಶಾಸಕರಾಗಿ ಕರ್ತವ್ಯ ನಿರ್ವಹಿಸುವಾಗ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸುವುದು,ತಾಲೂಕಾ ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಕ್ಷೇತ್ರದ ಜನತೆಯ ಕೆಲಸ ಕಾರ್ಯಗಳನ್ನು ಮಾಡಿಸುವುದು,ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕರ ಮಹತ್ವ,ತಾಲೂಕಾ ಮಟ್ಟದ ಅಧಿಕಾರಿಗಳಿಂದ ಮತ್ತು ಗ್ರಾಮ ಪಂಚಾಯತಿ,ಪಿಡಿಒಗಳಿಂದ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಸುವುದು,ತಾಲೂಕಾ ಮಟ್ಟದ ಕೆಡಿಪಿ ಸಭೆ ಸೇರಿದಂತೆ ಇತರ ಸಭೆಗಳ ಅಧ್ಯಕ್ಷತೆ ವಹಿಸಿಕೊಂಡು ಸಭೆಗಳನ್ನು ನಿರ್ವಹಿಸುವುದು,ಶಾಸಕರ ಕಛೇರಿಯನ್ನು ಜನಮುಖಿಯನ್ನಾಗಿಸುವುದು ಇವೇ ಮೊದಲಾದ ವಿಷಯಗಳ ಬಗ್ಗೆ ನೂತನ ಶಾಸಕರುಗಳಿಗೆ ತರಬೇತಿ ನೀಡಬೇಕು.ನೂತನ ಶಾಸಕರುಗಳು ಎಲ್ಲದಕ್ಕೂ ಅವರ ಪಿ.ಎ ಗಳನ್ನೇ ಅವಲಂಬಿಸದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಕೌಶಲ್ಯವನ್ನು ಹೇಳಿಕೊಡಬೇಕು.ಹಾಗೆಯೇ ಶಾಸಕರಾದವರು ಜನಹಿತ ಕಾಯುವುದಕ್ಕಾಗಿಯೇ ಇರಬೇಕಾದವರು ಆಗಿರುವುದರಿಂದ ಸರಕಾರಿ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅಧಿಕಾರಿಗಳಿಂದ ಮಾಡಿಸಬೇಕು,ಸರಕಾರಿ ಅಧಿಕಾರಿಗಳ ಮೇಲೆ ಸವಾರಿ ಮಾಡುವುದು ವಿಶೇಷಹಕ್ಕು ಎಂಬಂತೆ ವರ್ತಿಸದೆ ,ಅವರದೆ ಇತಿ ಮಿತಿಗಳನ್ನು ಹೊಂದಿರುವ ಸರ್ಕಾರಿ ಅಧಿಕಾರಿಗಳಿಂದ ಹೇಗೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿಸಬೇಕು ಎನ್ನುವ ಬಗ್ಗೆ ವಿಶೇಷ ಮಾರ್ಗದರ್ಶನ ಮಾಡಬೇಕು.ಶಾಸಕರಾದವರು ತಮ್ಮ ಲೆಟರ್ ಹೆಡ್ ಗಳನ್ನು ಸರಕಾರಿ ಅಧಿಕಾರಿಗಳ ವರ್ಗಾವಣೆ ಮತ್ತು ಸರಕಾರಿ ಅಧಿಕಾರಿಗಳ ವಿರುದ್ಧದ ದೂರುಗಳಿಗೆ ಬಳಸದೆ ಕೇವಲ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮ,ಯೋಜನೆಗಳನ್ನು ತರುವುದಕ್ಕೆ ಮಾತ್ರ ಬಳಸುವ ಅಗತ್ಯವನ್ನು ಅವರಿಗೆ ಹೇಳಿಕೊಡಬೇಕಿದೆ.

ಎಲ್ಲ ಸ್ತರಗಳ ಜನಪ್ರತಿನಿಧಿಗಳಿಗೆ ತರಬೇತಿ ನೀಡಲು ನಾವು ‘ ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆ’ ಯನ್ನು ಸ್ಥಾಪಿಸಿದ್ದು ಸಂಸ್ಥೆಯಲ್ಲಿ ಪ್ರಜಾಪ್ರತಿನಿಧಿಗಳ ಸಾಮರ್ಥ್ಯಾಭಿವೃದ್ಧಿಗೆ ಬೇಕಾಗುವ ಪುಸ್ತಕ- ಪುಸ್ತಿಕೆಗಳಿವೆ.ನೂತನ ಶಾಸಕರುಗಳು ಸಂಸ್ಥೆಯ ಸದಸ್ಯರಾಗುವ ಮೂಲಕ ಇಲ್ಲವೆ ಸಂಸ್ಥೆಯು ಪ್ರಕಟಿಸಿದ ಪುಸ್ತಕಗಳನ್ನು ಕೊಂಡು ಓದುವ ಮೂಲಕ ತಮ್ಮ ಶಾಸಕ ಸ್ಥಾನಕ್ಕೆ ಬೇಕಾದ ಅಗತ್ಯ ಮಾಹಿತಿಯನ್ನು ಪಡೆಯಬಹುದು.

About The Author