ಮೂರನೇ ಕಣ್ಣು : ಚಂದ್ರಕಾಂತ ವಡ್ಡು ಅವರಿಗೆ ಮಾಧ್ಯಮ ಅಕಾಡೆಮಿ ಇಲ್ಲವೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನ ನೀಡಬೇಕು : ಮುಕ್ಕಣ್ಣ ಕರಿಗಾರ

ಸಿದ್ರಾಮಯ್ಯನವರ ನೇತೃತ್ವದ ಹೊಸ ಸರಕಾರ ರಚನೆಯಾದ ಮರುದಿನದಿಂದಲೇ ವಿವಿಧ ಅಕಾಡೆಮಿ,ಸ್ವಾಯತ್ತ ಸಾಹಿತ್ಯ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕಾಗಿ ಸಾಹಿತಿಗಳು ,ಸಾಹಿತ್ಯಾಸಕ್ತರುಗಳು,ಸಾಹಿತಿಗಳಲ್ಲದ ಕಾಂಗ್ರೆಸ್ ಪರ ಬುದ್ಧಿಜೀವಿಗಳು ಪ್ರಯತ್ನಿಸುತ್ತಿದ್ದಾರೆ.ಕೆಲವರು ಜಾತಿಕಾರಣ ನೀಡಿ ತಮಗೇ ಈ ಅಕಾಡೆಮಿಯ ಸ್ಥಾನ ಸಿಗಲೇಬೇಕು ಎಂದು ವಾದಿಸುತ್ತಿದ್ದಾರಂತೆ.ತತ್ತ್ವ ಸಿದ್ಧಾಂತ,ಬದ್ಧತೆಗಳಿಲ್ಲದ ಸಾಹಿತಿಗಳನ್ನು ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು,ಸದಸ್ಯರುಗಳನ್ನಾಗಿ ನೇಮಿಸುವ ಬದಲು ಎಲ್ಲ ರೀತಿಯಿಂದಲೂ ಅರ್ಹರಾದವರನ್ನು ನೇಮಿಸಿದರೆ ಸರ್ಕಾರಕ್ಕೆ ಹೆಸರು ಬರುತ್ತದೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಇಲ್ಲವೆ ಮಾಧ್ಯಮ ಅಕಾಡೆಮಿಯ ಅಧ್ಯಕ್ಷಸ್ಥಾನಕ್ಕೆ ಹಿರಿಯ ಪತ್ರಕರ್ತ,ಸಾಹಿತಿ ಚಂದ್ರಕಾಂತ ವಡ್ಡು ಅವರನ್ನು ಪರಿಗಣಿಸುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ.

ಚಂದ್ರಕಾಂತ ವಡ್ಡು ಅವರದ್ದು ಸಾಹಿತ್ಯ ಮತ್ತು ಪತ್ರಿಕಾ ರಂಗದಲ್ಲಿ ಎದ್ದುಕಾಣುವ ಹೆಸರು,ವಿಶಿಷ್ಟ ವ್ಯಕ್ತಿತ್ವ.ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಡ್ಡು ಗ್ರಾಮದವರಾದ ಚಂದ್ರಕಾಂತ ವಡ್ಡು ಅವರು ಮೊದಲಿನಿಂದಲೂ ಪ್ರಗತಿಪರ ವಿಚಾರಗಳನ್ನು ಮೈಗೂಡಿಸಿಕೊಂಡು ‘ ಪ್ರಗತಿಪರರಾಗಿ’ಯೇ ಬೆಳೆದವರು.ಬಳ್ಳಾರಿ ಜಿಲ್ಲೆಯ ಜನಪರ ಹೋರಾಟ,ಸ್ವಸ್ಥಸಮಾಜ ನಿರ್ಮಾಣದ ಪ್ರಯತ್ನದ ಕಾರ್ಯಕ್ರಮ,ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತು ಬೆಂಬಲಿಸುತ್ತ ಬಂದವರು.ಜಿಂದಾಲ್ ಕಂಪನಿಯ ಜನವಿರೋಧಿ ನೀತಿ ನಿಲುವುಗಳನ್ನು ವಿರೋಧಿಸಿ ಜಿಂದಾಲ್ ಎಬ್ಬಿಸುವ ‘ ಧೂಳಿನ’ ಬಗ್ಗೆ ಜನಜಾಗೃತಿ ಮೂಡಿಸಿದವರು.ನಾನು ಈ ಹಿಂದೆ ಬಳ್ಳಾರಿಯಲ್ಲಿದ್ದಾಗ The Hindu ಇಂಗ್ಲಿಷ್ ಪತ್ರಿಕೆಯ ವಿಶ್ರಾಂತ ಹಿರಿಯ ವರದಿಗಾರರಾಗಿದ್ದ ದಿವಂಗತ ಶಾಮಸುಂದರ್ ಅವರು ‘ ಚಿಂತಕರ ಚಾವಡಿ’ ಎನ್ನುವ ವಾಟ್ಸಾಪ್ ಗ್ರೂಪ್ ಒಂದನ್ನು ರಚಿಸಿದ್ದರು.ಆ ಗುಂಪಿನ ಸದಸ್ಯರಲ್ಲೊಬ್ಬನಾಗಿದ್ದ ನಾನು ಆ ಗುಂಪಿನಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಚಂದ್ರಕಾಂತ ವಡ್ಡು ಅವರು ಸಂಡೂರು ತಾಲೂಕಿನ ಜನಜೀವನದ ಮೇಲೆ ಜಿಂದಾಲ್ ಕಂಪನಿಯು ಉಂಟು ಮಾಡಿದ್ದ,ಮಾಡುತ್ತಿರುವ ಕೆಡುಕುಗಳ ಬಗ್ಗೆ ಅವರದೇ ವಿಶಿಷ್ಟಶೈಲಿಯಲ್ಲಿ ಬರೆಯುತ್ತಿದ್ದ ಜನಪರಕಾಳಜಿಯ ಲೇಖನಗಳನ್ನು ನಾನು ಓದಿದ್ದೇನೆ.ಜನಪರವಾದ ಕಾಳಜಿ,ನೆಲದ ಮೇಲಿನ ಪ್ರಾಮಾಣಿಕ ಪ್ರೀತಿ,ಪ್ರಕೃತಿ ಸಂಪತ್ತಿನ ಅಕರಾಳ ವಿಕರಾಳ ಲೂಟಿಯ ಬಗ್ಗೆ ಅವರು ಬರೆಯುತ್ತಿದ್ದ ಲೇಖನಗಳು ಚಂದ್ರಕಾಂತ ವಡ್ಡು ಅವರನ್ನು ‘ ಸಮಾಜಮುಖಿ’ ಬರಹಗಾರರನ್ನಾಗಿ ಗುರುತಿಸುವಂತಿದ್ದವು.ಸಾಮಾಜಿಕ ಬದ್ಧತೆಯಿಂದ ಬರೆಯುತ್ತಿರುವ,ಬದುಕುತ್ತಿರುವ ಕನ್ನಡದ ಅಪರೂಪದ ಸಾಹಿತಿಗಳಲ್ಲೊಬ್ಬರು ಚಂದ್ರಕಾಂತ ವಡ್ಡು .

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತ ಸಮುದಾಯವು ಭಯ- ಆತಂಕದ ದಿನಗಳಲ್ಲಿ ಬದುಕುತ್ತಿದ್ದ ದಿನಗಳಲ್ಲಿ ಚಂದ್ರಕಾಂತ ವಡ್ಡು ಅವರು ‘ ಸೌಹಾರ್ದ ಕರ್ನಾಟಕ’ ಕಟ್ಟುವ ಪ್ರಯತ್ನ ಮಾಡಿದ್ದು ವಿಶೇಷ ಉಲ್ಲೇಖನಾರ್ಹ.ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಬಹುತೇಕ ಕವಿ ಸಾಹಿತಿಗಳು ತುಟಿಗಳಿಗೆ ದಾರಹೊಲಿದುಕೊಂಡವರಂತೆ ಕುಳಿತಿದ್ದ ದಿನಗಳಲ್ಲಿಯೇ ಚಂದ್ರಕಾಂತ ವಡ್ಡು ಅವರು ‘ ಸಮಾಜಮುಖಿ’ ಎನ್ನುವ ಅವರ ಸಂಪಾದಕತ್ವದ ಮಾಸಪತ್ರಿಕೆಯ ಮೂಲಕ ಸಮಾನಮನಸ್ಕ ಬರಗಾರರು,ಚಿಂತಕರು,ಸಮಾಜಪರ ಕಾಳಜಿಯ ಮನಸ್ಸುಗಳುಳ್ಳವರುಗಳನ್ನು ಸೇರಿಸಿಕೊಂಡು ರಾಜ್ಯದ ವಿವಿಧೆಡೆ ‘ ಸೌಹಾರ್ದ ಕರ್ನಾಟಕ’ ಕಟ್ಟುವ ಕಾರ್ಯಕ್ರಮಗಳನ್ನು ಆಯೋಜಿಸಿ,ಯಶಸ್ವಿಯಾದರು.ಪ್ರಭುತ್ವವು ಮನುಷ್ಯ ಮನುಷ್ಯರಲ್ಲಿ ಗೋಡೆಗಳನ್ನು ಕಟ್ಟುತ್ತಿರುವ ವಿಷಮ ಸಂದರ್ಭದಲ್ಲಿ ಚಂದ್ರಕಾಂತ ವಡ್ಡು ಅವರು ಮನಸ್ಸುಗಳನ್ನು ಬೆಸೆಯುವ,ಮನುಷ್ಯತ್ವವನ್ನು ಎತ್ತಿಹಿಡಿಯುವ ಬಹುದೊಡ್ಡ ಕಾರ್ಯವನ್ನು ವೈಯಕ್ತಿಕ ನೆಲೆಯಲ್ಲಿ ಕೈಗೊಂಡಿದ್ದರು.ಸೌಹಾರ್ದ ಕರ್ನಾಟಕ ಕಟ್ಟುವ ಅವರ ಪ್ರಾಮಾಣಿಕ ಪ್ರಯತ್ನ ರಾಜ್ಯದ ಬುದ್ಧಿಜೀವಿಗಳು,ಚಿಂತಕರ ಗಮನಸೆಳೆಯಿತು.ಸೌಹಾರ್ದ ಕರ್ನಾಟಕ ನಿರ್ಮಾಣದ ಅಗತ್ಯ ಕುರಿತ ಎರಡು ಸಂಪುಟಗಳ ಪುಸ್ತಕಗಳನ್ನೂ ಹೊರತಂದಿದ್ದಾರೆ ವಡ್ಡು ಅವರು.

ಚಂದ್ರಕಾಂತ ವಡ್ಡು ಅವರ ಸಂಪಾದಕತ್ವದ ‘ ಸಮಾಜಮುಖಿ’ ಮಾಸಪತ್ರಿಕೆಯು ಕನ್ನಡದ ವಿಶಿಷ್ಟ ಮಾಸಪತ್ರಿಕೆಯಾಗಿದೆ.ಯಾವುದೇ ಇಸಂಗಳ ಭಾರಕ್ಕೆ ಸಿಕ್ಕು ತತ್ತರಿಸಿದೆ ಆರೋಗ್ಯವಂತ ಸಮಾಜವನ್ನು ಕಟ್ಟಲು ಬೇಕಾದ ಸತ್ತ್ವಯುತ ಸಾಹಿತ್ಯವನ್ನು ಕನ್ನಡಿಗರಿಗೆ ನೀಡುತ್ತಿದ್ದಾರೆ ವಡ್ಡು ಅವರು ‘ ಸಮಾಜಮುಖಿ’ ಯ ಮೂಲಕ.ಪತ್ರಿಕಾ ರಂಗವು ಲಾಭವನ್ನೇ ಗುರಿಯಾಗಿಟ್ಟುಕೊಂಡು ಉದ್ಯಮವಾಗಿರುವ ಪ್ರಸ್ತುತ ದಿನಗಳಲ್ಲಿ ಚಂದ್ರಕಾಂತ ವಡ್ಡು ಅವರು ಉತ್ತಮ ಗುಣಮಟ್ಟದ ಪೇಪರ್ ನ ಬಳಕೆಯೊಂದಿಗೆ ಮಲ್ಟಿಕಲರ್ ನಲ್ಲಿ ಸತ್ತ್ವಯುತ ಸಾಹಿತ್ಯ- ಸಂಗತಿಗಳ ಪತ್ರಿಕೆಯನ್ನು ಹೊರತರುವ ಸಾಹಸ ಮಾಡುತ್ತಿದ್ದಾರೆ.’ಸಮಾಜಮುಖಿ’ ಮಾಸಿಕವು ನಿಜವಾಗಿಯೂ ಸಮಾಜಮುಖಿಯಾಗಿಯೇ ಇದೆ ಪ್ರಬುದ್ಧ ವಿಚಾರಗಳನ್ನು,ಸಕರಾತ್ಮಾಕ ಚಿಂತನೆಗಳನ್ನು ನಾಡಜನರಲ್ಲಿ ಪಸರಿಸುತ್ತ.ಮುಂಬರುವ ದಿನಗಳಲ್ಲಿ ‘ ಸಮಾಜಮುಖಿ’ ಯು ಒಂದು ಮಾಸಪತ್ರಿಕೆ ಮಾತ್ರವಾಗಿ ಉಳಿಯದೆ ಒಂದು ಆಂದೋಲನವಾಗಿಯೇ ಬೆಳೆಯಲಿದೆ.’ಸಮಾಜಮುಖಿಯ’ ಸ್ವಸ್ಥಸಮಾಜ ನಿರ್ಮಾಣ ಬದ್ಧತೆಯ ಅನನ್ಯ ಪರಿಶ್ರಮವನ್ನು ಮನಗಂಡು ನಾನು ಆಗಾಗ ಹೇಳುತ್ತಿರುತ್ತೇನೆ ‘ ಪತ್ರಿಕೆಗಳು ಉದ್ಯಮಿಗಳ ಹಿತಾಸಕ್ತಿಯನ್ನು ಪೊರೆಯುವ ಅಸ್ತ್ರಗಳಾಗಿರುವ ವಿಷಮದಿನಗಳಲ್ಲಿ ಚಂದ್ರಕಾಂತ ವಡ್ಡು ಅವರ ‘ ಸಮಾಜಮುಖಿ’ ಮಾಸಪತ್ರಿಕೆಯ ನಾಡಜನರನ್ನು ಎಚ್ಚರಿಸುತ್ತ ಪತ್ರಿಕಾಧರ್ಮವನ್ನು ಎತ್ತಿ ಹಿಡಿಯುವ ಕನ್ನಡದ ಪ್ರಾತಿನಿಧಿಕ ಮಾಸಪತ್ರಿಕೆಯಾಗಿದೆ’ ಎನ್ನುವ ಮಾತುಗಳನ್ನು.

ಕನ್ನಡದ ಕಥೆಗಾರರನ್ನು ಪ್ರೋತ್ಸಾಹಿಸಲು ವಡ್ಡು ಅವರು ಕಥಾಸ್ಪರ್ಧೆಗಳನ್ನು ನಿಯತವಾಗಿ ಏರ್ಪಡಿಸುತ್ತ ಸರ್ಜನಶೀಲ ಕಥೆಗಾರರನ್ನು ಗುರುತಿಸಿ,ಬೆನ್ನು ತಟ್ಟುವ ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ.ಕನ್ನಡ ಸಾಹಿತ್ಯ- ಸಂಸ್ಕೃತಿಗಳಿಗೆ ‘ ಸಮಾಜಮುಖಿ’ ಯ ಮೂಲಕ ಅನನ್ಯ ಕೊಡುಗೆ ನೀಡುತ್ತಿರುವ ಚಂದ್ರಕಾಂತ ವಡ್ಡು ಅವರನ್ನು ಕನ್ನಡ ಸಾಹಿತ್ಯ ಅಕಾಡೆಮಿ ಇಲ್ಲವೆ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿದರೆ ಅವರು ನಿಶ್ಚಿತವಾಗಿಯೂ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ’ ಸರ್ವಜನಾಂಗದ ಶಾಂತಿಯ ತೋಟ’ವನ್ನು ನಿರ್ಮಿಸುವಲ್ಲಿ ಅವರದೇ ಆದ ಕೊಡುಗೆಯನ್ನು ನೀಡಬಲ್ಲರು.

‌ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಾವು ನಂಬಿದ ತತ್ತ್ವ ಆದರ್ಶಗಳಿಗಾಗಿ ಪ್ರಜಾಪರ ನಿಲುವಿನ ಸರ್ಕಾರ ಬರಬೇಕು ಎನ್ನುವ ನಿರೀಕ್ಷೆಯಲ್ಲಿ ” ಗೆಲ್ಲಲೇಬೇಕಾದವರು” ಎಂದು ಸಿದ್ರಾಮಯ್ಯ,ಎಚ್ .ಕೆ.ಪಾಟೀಲ್,ಪ್ರಿಯಾಂಕ ಖರ್ಗೆ ಮೊದಲಾದವರ ಹೆಸರುಗಳನ್ನು ಉಲ್ಲೇಖಿಸಿ ಪರೋಕ್ಷವಾಗಿ ಅವರ ಪರವಾಗಿ ಜನಾಭಿಪ್ರಾಯವನ್ನೂ ರೂಪಿಸಿದ್ದರು.ಚಂದ್ರಕಾಂತ ವಡ್ಡು ಅವರ ” ಗೆಲ್ಲಲೇಬೇಕಾದವರ” ಪಟ್ಟಿಯಲ್ಲಿನ ಬಹಳಷ್ಟು ಜನರು ಗೆದ್ದಿದ್ದಾರೆ; ಸಿದ್ರಾಮಯ್ಯನವರೂ ಮುಖ್ಯಮಂತ್ರಿ ಆಗಿದ್ದಾರೆ.ಚಂದ್ರಕಾಂತ ವಡ್ಡು ಅವರಿಗೆ ಸೂಕ್ತಸ್ಥಾನ ಮಾನ ನೀಡುವ ಮೂಲಕ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸೌಹಾರ್ದಕರ್ನಾಟಕವನ್ನು ಕರ್ನಾಟಕದ ಮೂಲೆಮೂಲೆಗೂ ಕೊಂಡೊಯ್ಯುತ್ತದೆ ಎನ್ನುವ ನಿರೀಕ್ಷೆ ನನ್ನದು.

About The Author