ಮೂರನೇ ಕಣ್ಣು : ರಾಷ್ಟ್ರಪತಿಯವರೇ ಉದ್ಘಾಟಿಸಬೇಕಿತ್ತು ನೂತನ ಸಂಸತ್ ಭವನವನ್ನು : ಮುಕ್ಕಣ್ಣ ಕರಿಗಾರ

ಮೇ 28 ರಂದು ದೇಶದ ನೂತನ ಸಂಸತ್ ಭವನದ ಉದ್ಘಾಟನೆಯು ನಡೆಯಲಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ನೂತನ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ. ವಿರೋಧ ಪಕ್ಷಗಳು ಇದನ್ನು ಆಕ್ಷೇಪಿಸಿವೆ.ರಾಷ್ಟ್ರಪತಿಯವರು ಸಂಸತ್ ಭವನವನ್ನು ಉದ್ಘಾಟಿಸಬೇಕಿತ್ತು ಎನ್ನುವುದು ವಿರೋಧ ಪಕ್ಷಗಳ ವಾದ.

ರಾಷ್ಟ್ರಪತಿಗಳು ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕು ಎನ್ನುವ ವಿರೋಧ ಪಕ್ಷಗಳ ಆಗ್ರಹವು ಸರಿಯಾದುದು.ನೂತನ ಸಂಸತ್ ಭವನವು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸು ಆಗಿರಬಹುದು,ಅವರ ನೇತೃತ್ವದ ಸರ್ಕಾರವೇ ಕಟ್ಟಡ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ನೀಡಿರಬಹುದು. ಆದರೆ ಅದರ ಉದ್ಘಾಟನೆಯನ್ನು ಅವರೇ ಮಾಡಬೇಕು ಎಂಬುದು ಸರಿಯಲ್ಲ.ಭಾರತದ ಸಂಸತ್ತು ಲೋಕಸಭೆ ಮತ್ತು ರಾಜ್ಯಸಭೆಗಳೆಂಬ ದ್ವಿಸದನಗಳನ್ನು ಹೊಂದಿದ್ದು ಲೋಕಸಭೆಯಲ್ಲಿ ಜನರಿಂದ ನೇರವಾಗಿ ಚುನಾಯಿಸಲ್ಪಟ್ಟ ಸಂಸತ್ ಸದಸ್ಯರುಗಳಿದ್ದರೆ ರಾಜ್ಯಸಭೆಯಲ್ಲಿಜನ ಪ್ರತಿನಿಧಿಗಳಿಂದ ಆಯ್ಕೆಗೊಂಡವರು,ವಿವಿಧ ಕ್ಷೇತ್ರಗಳ ಪರಿಣತರು ಮತ್ತು ನಾಮ ನಿರ್ದೇಶನಗೊಂಡ ಸದಸ್ಯರುಗಳಿರುತ್ತಾರೆ. ಎಲ್ಲ ಪಕ್ಷಗಳ ಸದಸ್ಯರುಗಳು ಸಂಸತ್ತಿನಲ್ಲಿರುತ್ತಾರೆ.ಪ್ರಧಾನ ಮಂತ್ರಿಯು ಆಡಳಿತ ಪಕ್ಷದ ಸಭಾನಾಯಕರು ಆಗಿದ್ದರೆ ವಿರೋಧ ಪಕ್ಷದ ನಾಯಕರೂ ಇರುತ್ತಾರೆ ಲೋಕಸಭೆಯಲ್ಲಿ.ಆಳುವ ಮತ್ತು ಕೇಳುವ ಪಕ್ಷಗಳೆರಡನ್ನು ಒಳಗೊಂಡ ಸಂಸತ್ತಿನಲ್ಲಿ ಪ್ರಧಾನಮಂತ್ರಿಯವರು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗುತ್ತದೆ.ಪ್ರಧಾನಮಂತ್ರಿಯು ದೇಶದ ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಆಗಿದ್ದರೂ ಭಾರತದ ರಾಷ್ಟ್ರಪತಿಯವರು ಸಾಂವಿಧಾನಿಕ ಮುಖ್ಯಸ್ಥರು ಆಗಿದ್ದಾರೆ.ಸಂವಿಧಾನದ ಶ್ರೇಣೀಕೃತ ಆಡಳಿತ ವ್ಯವಸ್ಥೆಯಲ್ಲಿ ರಾಷ್ಟ್ರಪತಿಯವರು ಮೊದಲಿಗರಾದರೆ,ಉಪರಾಷ್ಟ್ರಪತಿಯವರು ಎರಡನೆಯ ಮಹತ್ವದ ಸ್ಥಾನ ಪಡೆದಿದ್ದು ರಾಷ್ಟ್ರಪತಿ,ಉಪರಾಷ್ಟ್ರಪತಿಯವರ ನಂತರದ ಸ್ಥಾನ ಪ್ರಧಾನಮಂತ್ರಿಯವರದ್ದು.ನಾಮಮಾತ್ರ ಮುಖ್ಯಸ್ಥರಾಗಿದ್ದರೂ ರಾಷ್ಟ್ರಪತಿಯವರಿಗೆ ಕೆಲವು ವಿಶೇಷಾಧಿಕಾರಗಳನ್ನು ನೀಡಿದೆ ಸಂವಿಧಾನ.

ಸಂವಿಧಾನದ 53 ನೆಯ ಅನುಚ್ಛೇದವು ‘ ಒಕ್ಕೂಟದ ಕಾರ್ಯಕಾರಿ ಅಧಿಕಾರವು ರಾಷ್ಟ್ರಪತಿಯವರಲ್ಲಿ ನಿಹಿತವಾಗಿರತಕ್ಕದ್ದು’ ಎನ್ನುತ್ತದೆ.ಅಂದರೆ ದೇಶದ ಕಾರ್ಯಕಾರಿ ಮುಖ್ಯಸ್ಥರಾಗಿದ್ದಾರೆ ರಾಷ್ಟ್ರಪತಿಯವರು.ಕೇಂದ್ರಸರ್ಕಾರದ ಎಲ್ಲ ಅಧಿಕಾರಗಳು,ವ್ಯವಹರಣೆಗಳು ರಾಷ್ಟ್ರಪತಿಯವರ ಹೆಸರಿನಲ್ಲಿ ಚಲಾಯಿಸಲ್ಪಡುತ್ತವೆ,ಇತರ ದೇಶ,ಸಂಸ್ಥೆ,ವಾಣಿಜ್ಯ ನಿಕಾಯಗಳೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಗಳು,ಒಪ್ಪಂದಗಳನ್ನು ರಾಷ್ಟ್ರಪತಿಯವರ ಹೆಸರಿನಲ್ಲಿ ಮಾಡಿಕೊಳ್ಳಲಾಗುತ್ತದೆ.ಭಾರತದ ಪ್ರಧಾನ ಮಂತ್ರಿ,ಇತರ ಮಂತ್ರಿಗಳು,ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು,ಇತರ ನ್ಯಾಯಾಧೀಶರುಗಳನ್ನು,ಭಾರತದ ಅಟಾರ್ನಿ ಜನರಲ್ ಆಫ್ ಇಂಡಿಯಾ,ರಾಜ್ಯಗಳ ರಾಜ್ಯಪಾಲರುಗಳು ಮತ್ತು ಚುನಾವಣಾ ಆಯೋಗದ ಮುಖ್ಯ ಆಯುಕ್ತರು,ಇತರ ಆಯುಕ್ತರುಗಳಂತಹ ಮಹತ್ವದ ಹುದ್ದೆಗಳಿಗೆ ನೇಮಕಮಾಡುವುದು ಮತ್ತು ಆ ಹುದ್ದೆಗಳಿಗೆ ನೇಮಕಗೊಂಡವರಿಗೆ ಪ್ರಮಾಣವಚನ ಬೋಧಿಸುವುದು ರಾಷ್ಟ್ರಪತಿಯವರ ವಿಶೇಷಾಧಿಕಾರ,ವಿಶೇಷತೆ.ಸಂಸತ್ತಿನ ಜಂಟಿ ಅಧಿವೇಶಗಳನ್ನು ಉದ್ದೇಶಿಸಿ ಮಾತನಾಡುವ ಸಾಂವಿಧಾನಿಕ ಅಧಿಕಾರವೂ ಅವರಿಗಿದೆ.ರಕ್ಷಣಾ ವ್ಯವಸ್ಥೆಯ ಪ್ರಥಮ ದಂಡನಾಯಕರೂ ರಾಷ್ಟ್ರಪತಿಯವರೆ.ರಾಷ್ಟ್ರದ ಪ್ರಥಮಪ್ರಜೆಯೂ ಆಗಿರುವ ರಾಷ್ಟ್ರಪತಿಯವರಿಂದಲೇ ಸಂಸತ್ ಭವನದ ಉದ್ಘಾಟನೆ ಆಗಿದ್ದರೆ ಅದಕ್ಕೆ ಅರ್ಥ ಬರುತ್ತಿತ್ತು,ವಿಶೇಷ ಕಳೆ ಇರುತ್ತಿತ್ತು.ಸಂವಿಧಾನದ 79 ನೆಯ ಅನುಚ್ಛೇದವು ಭಾರತದ ‘ಸಂಸತ್ತು ರಾಷ್ಟ್ರಪತಿಯವರನ್ನು ಹಾಗೂ ಲೋಕಸಭೆ ಹಾಗೂ ರಾಜ್ಯಸಭೆಗಳನ್ನು ಒಳಗೊಂಡಿರತಕ್ಕದ್ದು’ ಎನ್ನುತ್ತದೆ.ಈ ಅನುಚ್ಛೇದದಂತೆ ರಾಷ್ಟ್ರಪತಿಯವರು ಸಂಸತ್ತಿನ ಹಿರಿಯರು,ಗೌರವಾನ್ವಿತ ಗಣ್ಯರು.ಸಂಸತ್ತಿನ ಉಭಯ ಸದನಗಳೆರಡನ್ನು ಪ್ರತಿನಿಧಿಸುವ ರಾಷ್ಟ್ರಪತಿಯವರಿಂದಲೇ ನೂತನ್ ಸಂಸತ್ ಭವನದ ಉದ್ಘಾಟನೆ ಆಗಿದ್ದರೆ ಸಂಸತ್ ಭವನದ ಸಾಂವಿಧಾನಿಕ ಮೌಲ್ಯವೂ ಹೆಚ್ಚುತ್ತಿತ್ತು.ಲೋಕಸಭೆಯ ಚರ ಸ್ಥಿರ ಆಸ್ತಿಗಳೆಲ್ಲ ಅದರ ಸ್ಪೀಕರ್ ಅವರ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ನೂತನ ಸಂಸತ್ ಭವನದ ಉದ್ಘಾಟನೆಗೆ ಪ್ರಧಾನಮಂತ್ರಿಯವರನ್ನು ಆಹ್ವಾನಿಸಿದ್ದು ಕೇವಲ ತಾಂತ್ರಿಕ ಅಂಶಗಳನ್ನು ಪೂರೈಸಿದಂತೆ ಆಗಿದೆಯೇ ಹೊರತು ಶಿಷ್ಟಾಚಾರದ ಪಾಲನೆ ಆದಂತೆ ಆಗಿಲ್ಲ.ಶಿಷ್ಟಾಚಾರದಂತೆ ರಾಷ್ಟ್ರಪತಿಯವರೇ ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕಿತ್ತು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ವರ್ಚಸ್ಸಿನ ವ್ಯಕ್ತಿತ್ವ ಉಳ್ಳವರಾಗಿರಲಿ ದೇಶದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಉದ್ದೇಶಪೂರ್ವಕವಾಗಿಯೇ ಉದಾಸೀನಭಾವ ತಳೆಯುತ್ತಾರೆ. ನೂತನ ಸಂಸತ್ ಭವನವನ್ನು ಸ್ವತಃ ಅವರೇ ಉದ್ಘಾಟಿಸುತ್ತಿರುವುದು ಇದಕ್ಕೆ ಇತ್ತೀಚಿನ ಉತ್ತಮ ಉದಾಹರಣೆ.ನೂತನ್ ಸಂಸತ್ ಭವನದ ಶಿಲಾನ್ಯಾಸ ಸಮಾರಂಭವು 2020 ರ ಡಿಸೆಂಬರ್10 ರಂದು ನೆರವೇರಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಶಿಲಾನ್ಯಾಸ ನೆರವೇರಿಸಿದ್ದರು.ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಶಿಲಾನ್ಯಾಸ ಸಮಾರಂಭಕ್ಕೆ ಆಹ್ವಾನವನ್ನೂ ನೀಡಿರಲಿಲ್ಲ.ಮೇ 28 ರಂದು ನಡೆಯುವ ನೂತನ ಸಂಸತ್ ಭವನದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನೆರವೇರಿಸುವುದಿರಲಿ ಅವರಿಗೆ ಆಹ್ವಾನವನ್ನೇ ನೀಡಿಲ್ಲ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ‘ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಲಿತರ ಬಗೆಗಿನ ಉದಾಸೀನಭಾವ ತೋರುತ್ತದೆ’ ಎನ್ನುವ ಅರ್ಥಬರುವ ಮಾತುಗಳನ್ನಾಡಿದ್ದಾರಾದರೂ ಅದು ಅಷ್ಟು ಉಚಿತವಲ್ಲ.ಆದರೆ ಪ್ರಧಾನಿ ನರೇಂದ್ರಮೋದಿಯವರ ಸ್ವಯಂ ಪ್ರತಿಷ್ಠೆಯಪ್ರದರ್ಶನಪ್ರಿಯ ನಡೆಗೆ ಒಂದು ಉತ್ತಮ ಉದಾಹರಣೆ.ನರೇಂದ್ರಮೋದಿಯವರಲ್ಲಿ ತಮ್ಮ ವ್ಯಕ್ತಿತ್ವವನ್ನೇ ವಿಜೃಂಭಿಸಿಕೊಳ್ಳುವ ದೌರ್ಬಲ್ಯವಿದೆ.ಎಲ್ಲವೂ ನಾನು,ನನ್ನಿಂದಲೇ ಎನ್ನುವ ಮನೋಭಾವ ಅವರದ್ದು.ಸೂರ್ಯನ ಸುತ್ತ ಭೂಮಿ ಮತ್ತಿತರ ಆಕಾಶ ಕಾಯಗಳು ಸುತ್ತುವಂತೆ ಅಧಿಕಾರಕೇಂದ್ರದಲ್ಲಿ ತಾವೊಬ್ಬರೇ ಇದ್ದು ಎಲ್ಲವೂ ತಮ್ಮ ಸುತ್ತಲೇ ಪ್ರದಕ್ಷಿಣೆ ಹಾಕುತ್ತಿರಬೇಕು ಎನ್ನುವಷ್ಟರ ಮಟ್ಟಿಗೆ ಅವರು ಸ್ವಯಂಪ್ರತಿಷ್ಠೆಯನ್ನು ಬೆಳೆಸಿಕೊಂಡಿದ್ದಾರೆ.ತಮ್ಮಿಂದಲೇ ಎಲ್ಲವೂ ಎನ್ನುವ ನರೇಂದ್ರಮೋದಿಯವರ ಪ್ರಜಾಸತ್ತಾತ್ಮಕವಲ್ಲದ ನಿಲುವಿನಿಂದಾಗಿಯೇ ಬಿಜೆಪಿಯು ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡಿತು.

‌ ರಾಷ್ಟ್ರಪತಿಯವರಿಂದ ನೂತನ ಸಂಸತ್ ಭವನದ ಉದ್ಘಾಟನೆ ಮಾಡಿಸದೆ ಇದ್ದರೂ ಅವರನ್ನು ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ಇಲ್ಲವೇ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಬೇಕಿತ್ತು.ರಾಷ್ಟ್ರಪತಿಯವರ ಸಮ್ಮುಖದಲ್ಲಿ ನೂತನ ಸಂಸತ್ ಭವನದ ಉದ್ಘಾಟನೆ ಆಗಿದ್ದರೆ ಸಂಸತ್ ಭವನವು ಸಾಂವಿಧಾನಿಕ ಮೌಲ್ಯಗಳಿಂದ ರಾರಾಜಿಸುತ್ತಿತ್ತು.ರಾಷ್ಟ್ರಪತಿಯವರನ್ನು ನೇಮಿಸುವಲ್ಲಿ ತಮ್ಮದೆ ನಿರ್ಣಾಯಕ ಪಾತ್ರವಾಗಿರುವಾಗ ಅವರನ್ನೇಕೆ ಸಮಾರಂಭಕ್ಕೆ ಆಹ್ವಾನಿಸಬೇಕು ಎನ್ನುವ ಮನೋಭಾವವು ಪ್ರಧಾನ ಮಂತ್ರಿಯವರಲ್ಲಿ ಇದ್ದುದಾದರೆ ಅದು ಪ್ರಜಾಪ್ರಭುತ್ವದ ಆಶಯಗಳ ವಿರುದ್ಧದ ನಡೆ,ಸಂವಿಧಾನವು ಒಪ್ಪದ ಸ್ವಯಂಶ್ಲಾಘನೆಯಷ್ಟೆ.

About The Author