ಮೂರನೇ ಕಣ್ಣು : ಸಂವಿಧಾನದ ‘ ದೇವರು’ ಎಂದರೆ ಸರ್ವಶಕ್ತನಾದ ಪರಮಾತ್ಮನೇ ಹೊರತು ಊರೂರ ದೈವಗಳಲ್ಲ : ಮುಕ್ಕಣ್ಣ ಕರಿಗಾರ

ರಾಜ್ಯದ ವಿಧಾನಸಭೆಯಲ್ಲಿ ಶಾಸಕರಾಗಿ ಚುನಾಯಿತರಾದವರು ಪಾಲಿಸಲೇಬೇಕಾದ ಪ್ರತಿಜ್ಞಾವಿಧಿ ಸ್ವೀಕಾರಕ್ಕಾಗಿ ಕರೆದಿರುವ ಅಧಿವೇಶನದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ‘ಭಗವಂತ ಗಂಗಾಧರ ( ನೊಣವಿನಕೆರೆ) ಅಜ್ಜಯ್ಯ’ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಂಗತಿ ಚರ್ಚೆಗೆ ಗುರಿಯಾಗಿದೆ.ಮುಖ್ಯಮಂತ್ರಿ ಸಿದ್ರಾಮಯ್ಯನವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ತಮ್ಮ ಇಷ್ಟದ ಅಜ್ಜಯ್ಯನವರನ್ನು ಭಗವಂತನಪಟ್ಟಕ್ಕೇರಿಸಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಹಂಗಾಮಿ ಸ್ಪೀಕರ್ ಆರ್.ವಿ.ದೇಶಪಾಂಡೆಯವರು ‘ ಸಂವಿಧಾನ ಮತ್ತು ದೇವರ ಹೆಸರಿನಲ್ಲಿ ಮಾತ್ರ ಪ್ರಮಾಣವಚನ ಸ್ವೀಕರಿಸಬಹುದು.ಇತರ ಯಾವುದೇ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಕಾನೂನು ಬದ್ಧ ಆಗುವುದಿಲ್ಲ’ ಎಂದು ಸೂಚನೆ ನೀಡಿದರೂ ಡಿ.ಕೆ.ಶಿವಕುಮಾರ ಅವರು ಸೇರಿದಂತೆ ಕೆಲವು ಶಾಸಕರು ತಮ್ಮ ಇಷ್ಟದ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಶಾಸಕರಾದವರು ತಮ್ಮ ಕೆಲಸ – ಕಾರ್ಯಗಳನ್ನು ಪ್ರಾರಂಭಿಸುವ ಮುನ್ನ ವಿಧಾನಸಭೆ ಅಥವಾ ವಿಧಾನಪರಿಷತ್ತಿನಲ್ಲಿ‌ ಪ್ರಮಾಣವಚನ ಸ್ವೀಕರಿಸುವುದನ್ನು ಸಂವಿಧಾನವು ಕಡ್ಡಾಯಪಡಿಸಿದೆ.ಸಂವಿಧಾನದ 188 ನೆಯ ಅನುಚ್ಛೇದವು ವಿಧಾನಸಭೆಯ ಅಥವಾ ವಿಧಾನ ಪರಿಷತ್ತಿನ ಸದಸ್ಯನು ತನ್ನ ಆಸನದಲ್ಲಿ ಆಸೀನನಾಗುವ ಮೊದಲು ಸಂವಿಧಾನದ ಮೂರನೇ ಶೆಡ್ಯೂಲ್ ನಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಪ್ರಮಾಣವಚನ ಸ್ವೀಕರಿಸತಕ್ಕದ್ದು’ ಎಂದು ವಿಧಿಸಿದೆ.ಸಂವಿಧಾನದ ಮೂರನೇ ಶೆಡ್ಯೂಲ್ ನ VI.B ಉಪವಿಧಿಯು ರಾಜ್ಯದ ವಿಧಾನಸಭೆಯ ಸದಸ್ಯನು ಸ್ವೀಕರಿಸಬೇಕಾದ ಪ್ರಮಾಣವಚನದ ಸಿದ್ಧಮಾದರಿಯನ್ನು ನೀಡಿದ್ದು ಯಾರೇ ಶಾಸಕರು ಆಗಿರಲಿ ಈ ಸಿದ್ಧಮಾದರಿಯಂತೆಯೇ ಪ್ರಮಾಣವಚನ ಸ್ವೀಕರಿಸಬೇಕು.ಆ ಪ್ರಮಾಣವಚನವು —– ಎಂಬ ಹೆಸರಿನವನಾದ ನಾನು ದೇವರ ಹೆಸರಿನಲ್ಲಿ/ ಸತ್ಯದ ಹೆಸರಿನಲ್ಲಿ ಸಂವಿಧಾನದ ವಿಷಯದಲ್ಲಿ ನಿಜನಿಷ್ಠೆಯನ್ನು ಹೊಂದಿರುವುದಾಗಿ…’ ಎಂದು ಮುಂತಾಗಿ ಸಾಗುತ್ತದೆ.ಇಲ್ಲಿ ದೇವರು ಇಲ್ಲವೆ ಸತ್ಯದ ಹೆಸರಿನಲ್ಲಿ ಮಾತ್ರ ಪ್ರಮಾಣವಚನ ಸ್ವೀಕರಿಸಬೇಕು ಎಂಬುದು ಗಮನಿಸಬೇಕಾದ ಸಂಗತಿ.ಸಂವಿಧಾನದ ಮೂರನೇ ಶೆಡ್ಯೂಲ್ ಕೇಂದ್ರದ ಮಂತ್ರಿಗಳು,ಲೋಕಸಭಾ ಸದಸ್ಯರುಗಳು,ಸುಪ್ರೀಂಕೋರ್ಟಿನ ನ್ಯಾಯಾಧೀಶರುಗಳು,ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ,ರಾಜ್ಯದ ಮಂತ್ರಿಗಳು,ಸ್ಟೇಟ್ ದರ್ಜೆಯ ಮಂತ್ರಿಗಳು,ಶಾಸಕರುಗಳು ಮತ್ತು ಹೈಕೋರ್ಟಿನ ಮುಖ್ಯನ್ಯಾಯಾಧೀಶರುಗಳು ಹಾಗೂ ಇತರ ನ್ಯಾಯಾಧೀಶರುಗಳು ಸ್ವೀಕರಿಸಬೇಕಾದ ಪ್ರಮಾಣವಚನದ ‘ಸಿದ್ಧಮಾದರಿ’ ಗಳನ್ನು ಹೊಂದಿದೆ.ಈ ಎಲ್ಲ ಹುದ್ದೆ,ಪದವಿಗಳಿಗೆ ನೇಮಕಗೊಂಡವರು,ಆಯ್ಕೆಯಾವರ ಪ್ರಮಾಣವಚನದ ಸಿದ್ಧಮಾದರಿಯಲ್ಲಿ ‘ ದೇವರ ಹೆಸರಿನಲ್ಲಿ ಇಲ್ಲವೆ ಸತ್ಯದ ಹೆಸರಿನಲ್ಲಿ ‘ ಪ್ರಮಾಣವಚನ ಸ್ವೀಕರಿಸಬೇಕು ಎನ್ನುತ್ತದೆ ಸಂವಿಧಾನ.

ಸಂವಿಧಾನದಲ್ಲಿ ಬರುವ ‘ ದೇವರ ಹೆಸರಿನಲ್ಲಿ’ ಎನ್ನುವ ಪದಗಳು ಸರ್ವಶಕ್ತನಾದ ಭಗವಂತನನ್ನು ಸಂಬೋಧಿಸುವ ಪದಗಳೇ ಹೊರತು ಊರೂರ ದೈವಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಅವಕಾಶವಿಲ್ಲ.ಜಾತ್ಯಾತೀತ ತತ್ತ್ವವನ್ನು ಪ್ರತಿಪಾದಿಸುವ ನಮ್ಮ ಸಂವಿಧಾನವು ಭಾರತೀಯರೆಲ್ಲರೂ ನಂಬಬಹುದಾದ ಅವರವರ ಮತವ್ಯಾಪ್ತಿಯ ವ್ಯಾಖ್ಯಾನದ ಸರ್ವಶಕ್ತನಾದ ಪರಮಾತ್ಮನನ್ನು ‘ ದೇವರು’ ಎಂದು ಪರಿಭಾವಿಸಿದೆ.ಡಿ.ಕೆ.ಶಿವಕುಮಾರ ಅವರು ‘ ಭಗವಂತ ಗಂಗಾಧರ( ನೊಣವಿನಕೆರೆ) ಅಜ್ಜಯ್ಯ’ ನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ತಪ್ಪು ಮತ್ತು ಸಂವಿಧಾನದ ಉಲ್ಲಂಘನೆ.ಡಿ.ಕೆ.ಶಿವಕುಮಾರ ಅವರಿಗೆ ವೈಯಕ್ತಿಕ ಜೀವನದಲ್ಲಿ ಅವರ ಇಷ್ಟದ ದೇವರನ್ನು ಪೂಜಿಸುವ,ಆರಾಧಿಸುವ ಹಕ್ಕು ಸ್ವಾತಂತ್ರ್ಯವಿದೆ.ಆದರೆ ಶಾಸಕರಾಗಿ ,ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಅವರು ಸಂವಿಧಾನವು ವಿಧಿಸಿದ ವಿಧಿ- ನಿಯಮಗಳಂತೆಯೇ ನಡೆದುಕೊಳ್ಳಬೇಕು.ಸಂವಿಧಾನಾತೀತ ನಡೆಯು ಸಲ್ಲದು.ನೊಣವಿನಕೆರೆ ಗಂಗಾಧರ ಅಜ್ಜಯ್ಯ ಶರಣರು,ಸಿದ್ಧಿಪುರುಷರು ಇರಬಹುದು ಆದರೆ ಅವರು ಪರಮಾತ್ಮರಲ್ಲ; ಗಂಗಾಧರ ಅಜ್ಜಯ್ಯ ಡಿ.ಕೆ.ಶಿವಕುಮಾರ ಅವರ ಇಷ್ಟಾರ್ಥಗಳನ್ನು ಈಡೇರಿಸುತ್ತಿರಬಹುದು,ಹಾಗಂತ ಡಿ.ಕೆ.ಶಿವಕುಮಾರ ಅವರು ಸಂವಿಧಾನದ ವಿಧಿ- ನಿಯಮಗಳನ್ನು ಮನಸ್ಸಿಗೆ ಬಂದಂತೆ ಅರ್ಥೈಸಲಾಗದು.ರಾಜ್ಯದ ಮುಖ್ಯಮಂತ್ರಿ,ಉಪಮುಖ್ಯಮಂತ್ರಿ,ಮಂತ್ರಿಗಳು,ಶಾಸಕರುಗಳು ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳತಕ್ಕದ್ದು.ಸಂವಿಧಾನಕ್ಕೆ ವಿರೋಧಿಯಾದ ನಡೆಯು ಪ್ರಶ್ನಾರ್ಹವಾದುದು.ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ತಮ್ಮ ಪಕ್ಷದ ಇತರ ಶಾಸಕರುಗಳಿಗೆ ಮಾದರಿಯಾಗಿರಬೇಕಾದ ರಾಜ್ಯದ ಉಪಮುಖ್ಯಮಂತ್ರಿಯಾಗಿ ಸಂವಿಧಾನದ ವಿಧಿ ನಿಯಮಗಳಂತೆ ನಡೆದುಕೊಳ್ಳಬೇಕಿರುವ ಡಿ.ಕೆ.ಶಿವಕುಮಾರ ಅವರೇ ಸಂವಿಧಾನವನ್ನು ‘ಹಗುರವಾಗಿ’ ಪರಿಗಣಿಸಿದರೆ ಸಂವಿಧಾನವನ್ನು ಎತ್ತಿ ಹಿಡಿಯಬೇಕಾದವರು ಯಾರು? ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರುಗಳು ನಾವು ಸಂವಿಧಾನವನ್ನು ರಕ್ಷಿಸುತ್ತೇವೆ ಎಂದೇ ಹೇಳುತ್ತ ಬಂದಿದ್ದರು.ಆದರೆ ಈಗ ಅದೇ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಮತ್ತು ರಾಜ್ಯದ ಉಪಮುಖ್ಯಮಂತ್ರಿ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ.ಮಾತೆತ್ತಿದರೆ ಸಂವಿಧಾನವನ್ನು ಗುತ್ತಿಗೆ ಹಿಡಿದವರಂತೆ ಮಾತನಾಡುತ್ತಿದ್ದ ರಾಜ್ಯ ಕಾಂಗ್ರೆಸ್ ನಾಯಕರುಗಳಿಗೆ ಡಿ.ಕೆ.ಶಿವಕುಮಾರ ಅವರು ಸಂವಿಧಾನವನ್ನು ಹಗುರವಾಗಿ ಪರಿಗಣಿಸಿದ್ದು,ಸಂವಿಧಾನಕ್ಕೆ ಅಪಚಾರವೆಸಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಕಾಣಿಸುತ್ತಿಲ್ಲವೆ? ಕಂಡರೂ ಸುಮ್ಮನಿರುವುದೇಕೆ ?ವೈಯಕ್ತಿಕವಾಗಿ ಯಾರನ್ನಾದರೂ ಪೂಜಿಸುವ,ಆರಾಧಿಸುವ ಸ್ವಾತಂತ್ರ್ಯ ಪಡೆದಿರುವ ಡಿ.ಕೆ.ಶಿವಕುಮಾರ ಅವರು ಶಾಸಕರಾಗಿ ಕನಕಪುರ ವಿಧಾನಸಭಾ ಕ್ಷೇತ್ರದ ಜನಸಮಸ್ತರಪರವಾಗಿ ಹಾಗೂ ರಾಜ್ಯದ ಉಪಮುಖ್ಯಮಂತ್ರಿಯಾಗಿ ರಾಜ್ಯದ ಆರುವರೆಕೋಟಿ ಜನತೆಯ ಪರವಾಗಿ ಇರಬೇಕು,ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎನ್ನುವ’ ಜಾತ್ಯಾತೀತ ಸಂವಿಧಾನ ಪ್ರಜ್ಞೆ’ ಯು ಇರದೆ ಇದ್ದರೆ ಅವರು ಸಂವಿಧಾನವನ್ನು ಎತ್ತಿ ಹಿಡಿಯುತ್ತಾರೆ ಎಂದು ನಿರೀಕ್ಷಿಸಬಹುದೆ?

About The Author