ಮೂರನೇ ಕಣ್ಣು : ರಾಜ್ಯದ ‘ ಪ್ರಭುತ್ವ’ ಎತ್ತಿಹಿಡಿದ ಸುಪ್ರೀಂಕೋರ್ಟಿನ ಮಹತ್ವದ ತೀರ್ಪು : ಮುಕ್ಕಣ್ಣ ಕರಿಗಾರ

ದೇಶದ ಸರ್ವೋನ್ನತ ನ್ಯಾಯಾಲಯ 2023 ರ ಮೇ 11 ರಂದು ಭಾರತದ ಸಂವಿಧಾನವನ್ನು ಎತ್ತಿಹಿಡಿಯುವ,ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುವ ಎರಡು ಮಹತ್ವದ ತೀರ್ಪುಗಳನ್ನು ನೀಡಿದೆ.ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಸರಕಾರವನ್ನು ಪತನಗೊಳಿಸುವಲ್ಲಿ ಅಂದಿನ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅತಿರೇಕದಿಂದ ವರ್ತಿಸಿ,ಸಂವಿಧಾನವು ರಾಜ್ಯಪಾಲರ ಹುದ್ದೆಗೆ ನಿಗದಿಪಡಿಸಿದ ಮಿತಿಗಳ ‘ ಸೀಮೋಲ್ಲಂಘನ’ ಮಾಡಿದ್ದು ಸಂವಿಧಾನ ವಿರೋಧಿ ಕೃತ್ಯ ಎನ್ನುವುದು ಒಂದು ತೀರ್ಪಾದರೆ ದೆಹಲಿ ಸರಕಾರಕ್ಕೆ ಅಲ್ಲಿನ ಅಧಿಕಾರಿಗಳ ಮೇಲೆ ಪೂರ್ಣ ನಿಯಂತ್ರಣಾಧಿಕಾರವಿದೆ ಎಂಬುದು ಮತ್ತೊಂದು ತೀರ್ಪು.ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಡಿ .ವೈ. ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಂಡ ಸಂವಿಧಾನ ಪೀಠವು ಈ ಎರಡು ತೀರ್ಪುಗಳನ್ನು ಸರ್ವಾನುಮತದಿಂದ ನೀಡಿದೆ.ಮಹಾರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟಿನ ತೀರ್ಪನ್ನು ನಾನು ಈಗಾಗಲೆ ಬರೆದ ಲೇಖನದಲ್ಲಿ ವಿಶ್ಲೇಷಿಸಿದ್ದು ಈ ಲೇಖನದಲ್ಲಿ ದೆಹಲಿ ರಾಜ್ಯಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟಿನ ತೀರ್ಪನ್ನು ವಿಶ್ಲೇಷಿಸುವೆ.

ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎ ಎ ಪಿ ಸರಕಾರವು ಯಶಸ್ವಿಯಾಗಿ ಎರಡನೆಯ ಅವಧಿಯಲ್ಲೂ ಕಾರ್ಯನಿರ್ವಹಿಸುತ್ತಿದೆ.ದೆಹಲಿಯು ದೇಶದ ರಾಜಧಾನಿ ಎನ್ನುವ ಕಾರಣದಿಂದ ತನಗೂ ಒಂದಿಷ್ಟು ಅಧಿಕಾರ ಇರಲಿ ಎನ್ನುವಂತೆ ಕೇಂದ್ರಸರ್ಕಾರವು ರೂಪಿಸಿದ National Capital Territory of Delhi ( NCTD)ಕಾನೂನಿನ ಅಸ್ತ್ರದಡಿ ಕೇಂದ್ರಸರ್ಕಾರವು ಲೆಫ್ಟಿನೆಂಟ್ ಜನರಲ್ ಅವರ ಮೂಲಕ ಆಡಳಿತದ ಮೇಲೆ ನಿಯಂತ್ರಣ ಸಾಧಿಸ ಹೊರಟಿತ್ತು.ಭಾರತೀಯ ಸೇವೆಗೆ ಸೇರಿರುವ ಅಧಿಕಾರಿಗಳು ದೆಹಲಿ ರಾಜ್ಯದ ಮುಖ್ಯಮಂತ್ರಿಯ ಆಡಳಿತವ್ಯಾಪ್ತಿಗೆ ಬರುವುದಿಲ್ಲ,ಅವರು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತಿದ್ದಾರೆ ಎಂದು ವಾದಿಸುತ್ತ ಕೇಂದ್ರದ ಬಿಜೆಪಿ ಸರಕಾರವು ಲೆಫ್ಟಿನೆಂಟ್ ಗವರ್ನರ್ ಅವರ ಮೂಲಕ ಅರವಿಂದ ಕೇಜ್ರಿವಾಲ್ ಅವರ ದೆಹಲಿ ರಾಜ್ಯದ ಅಭಿವೃದ್ಧಿಯ ನಾಗಾಲೋಟಕ್ಕೆ ತಡೆಯೊಡ್ಡಲು ಪ್ರಯತ್ನಿಸುತ್ತಿತ್ತು.ಐಎಎಸ್ ಅಧಿಕಾರಿಗಳು ಸ್ವಲ್ಪ ಅವಕಾಶ ಸಿಕ್ಕರೆ ಸಾಕು,ನಿರಂಕುಶರಾಗಿ ವರ್ತಿಸುತ್ತಾರೆ ಎನ್ನುವುದಕ್ಕೆ ದೆಹಲಿ ರಾಜ್ಯವು ಉತ್ತಮ ನಿದರ್ಶನ.ಅಲ್ಲಿನ ಬಹುತೇಕ ಐಎಎಸ್ ಅಧಿಕಾರಿಗಳು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕಡೆಗಣಿಸಿ ಮುಖ್ಯಕಾರ್ಯದರ್ಶಿ ಮತ್ತು ಲೆಫ್ಟಿನೆಂಟ್ ಗೌವರ್ನರ್ ಅವರಿಗೆ ಮಾತ್ರ ಉತ್ತರದಾಯಿಗಳು ಎಂಬಂತೆ ವರ್ತಿಸುತ್ತಿದ್ದರು.ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ದೆಹಲಿಯ ಜನಜೀವನವನ್ನು ಸುಧಾರಿಸುವ,ದೆಹಲಿಯ ಮೂಲಭೂತಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ,ದೆಹಲಿಯನ್ನು ಜಾಗತಿಕ ಗಮನಸೆಳೆಯುವ ರಾಜ್ಯವನ್ನಾಗಿ ರೂಪಿಸುವ ಯೋಜನೆ,ಕಾರ್ಯಕ್ರಮಗಳಿಗೆ ತೊಡರುಗಾಲು ಒಡ್ಡುತ್ತಿದ್ದರು. ಅರವಿಂದ ಕೇಜ್ರಿವಾಲ್ ಅವರಿಗೆ ಏನೂ ಮಾಡಲಾಗದ ಅಸಾಯಕಸ್ಥಿತಿ.ಒಂದೆಡೆ ದೆಹಲಿ ಮತದಾರರಿಗೆ ಉತ್ತರಿಸಬೇಕಾದ ಅನಿವಾರ್ಯತೆ ಮತ್ತೊಂದುಕಡೆ ಲೆಫ್ಟಿನೆಂಟ್ ಗೌವರ್ನರ್ ಅವರ ಸೂಚನೆಯಂತೆ ಕಾರ್ಯನಿರ್ವಹಿಸಿ ತಮ್ಮ ಅಂಕೆಮೀರಿದ ಐಎಎಸ್ ಅಧಿಕಾರಿಗಳ ಕಿರಿಕಿರಿಯಿಂದ ಅವರು ಬೇಸತ್ತಿದ್ದರು.ಕೊನೆಗೂ ಅವರಿಗೆ ನೆಮ್ಮದಿ ತರುವಂತಹ ತೀರ್ಪು ನೀಡಿದೆ ಸುಪ್ರೀಂಕೋರ್ಟಿನ ಸಂವಿಧಾನ ಪೀಠ.

ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಅಧ್ಯಕ್ಷತೆಯಲ್ಲಿನ ಐವರು ನ್ಯಾಯಾಧೀಶರುಗಳ ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ‘ ದೇಶದ ಇತರ ರಾಜ್ಯಗಳಂತೆ ರಾಜ್ಯವಾಗಿರುವ ದೆಹಲಿ ರಾಜ್ಯದ ಮುಖ್ಯಮಂತ್ರಿಯವರಿಗೆ ರಾಜ್ಯದ ಸೇವೆಯಲ್ಲಿರುವ ಎಲ್ಲ ಅಧಿಕಾರಿಗಳ ಮೇಲೆ ನಿಯಂತ್ರಣಾಧಿಕಾರವಿದೆ.ಐಎಎಸ್ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳ ಸೇವೆಯು ರಾಜ್ಯಸರ್ಕಾರದ ವ್ಯಾಪ್ತಿಗೆ ಒಳಪಡುತ್ತದೆ’ ಎನ್ನುವ ಸಂವಿಧಾನದ ಪೀಠದ ತೀರ್ಪಿನಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ಭಾರತೀಯ ಸೇವೆಗೆ ಸೇರಿದ ಐಎಎಸ್ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ರಾಜ್ಯಸರ್ಕಾರದ ನಿಯಂತ್ರಣಾಧಿಕಾರಕ್ಕೆ ಒಳಪಡುತ್ತಿದ್ದು ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘಿಸುವಂತಿಲ್ಲ.ಅಧಿಕಾರಿಗಳು ಅವರು ಸೇವೆ ಇಲ್ಲವೆ ನಿಯೋಜನೆಯಲ್ಲಿರುವ ಇಲಾಖೆಯ ಮಂತ್ರಿಗಳಿಗೆ ಉತ್ತರದಾಯಿಗಳಾಗಿರಬೇಕು.ಇಲಾಖೆಯ ಸಚಿವರ ಮಾತುಗಳನ್ನು ಕೇಳುವುದಿಲ್ಲ,ಕಡತಗಳಲ್ಲಿ ಅವರ ನಿರ್ದೇಶನಗಳನ್ನು ಪಡೆಯುವುದಿಲ್ಲ ಎನ್ನುವ ವರ್ತನೆಗೆ ಅವಕಾಶವಿಲ್ಲ’ ಎಂದಿರುವ ಸುಪ್ರೀಂಕೋರ್ಟ್ ರಾಜ್ಯದ ಮತದಾರರಿಂದ ಚುನಾಯಿಸಲ್ಪಟ್ಟ ಸರ್ಕಾರವೇ ಸಾರ್ವಭೌಮವಾದುದು ಎಂದು ಹೇಳಿದೆಯಲ್ಲದೆ ಭೂಮಿ,ಪೋಲಿಸ್ ಮತ್ತು ಕಾನೂನು ಸುವ್ಯವಸ್ಥೆಗಳು ಮಾತ್ರ ಕೇಂದ್ರಸರ್ಕಾರದ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದು ಸೇವೆಗಳು ಸೇರಿದಂತೆ ದೆಹಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಪಟ್ಟ ಸಂಪೂರ್ಣ ಅಧಿಕಾರವು ದೆಹಲಿ ರಾಜ್ಯಕ್ಕೆ ಇದೆ ಎಂದು ಸ್ಪಷ್ಟಪಡಿಸಿದೆ.ಸುಪ್ರೀಂಕೋರ್ಟಿನ ಈ ಮಹತ್ವದ ತೀರ್ಪಿನಿಂದ ನಿರಂಕುಶಪ್ರಭುಗಳಂತೆ ವರ್ತಿಸುತ್ತಿದ್ದ ದೆಹಲಿ ರಾಜ್ಯ ಸೇವೆಯಲ್ಲಿದ್ದ ಐಎಎಸ್ ಅಧಿಕಾರಿಗಳು ಬಾಲ ಮುದುರಿಕೊಂಡು ಕುಳಿತುಕೊಳ್ಳುವಂತೆ ಆಗಿದೆ.ಸುಪ್ರೀಂಕೋರ್ಟ್ ತಮ್ಮ ಕೈಗಳನ್ನು ಬಲಪಡಿಸಿ ತೀರ್ಪು ನೀಡಿದ ಮರುಕ್ಷಣವೇ ಅರವಿಂದ ಕೇಜ್ರಿವಾಲ್ ಅವರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುತ್ತಿರುವ ಅಧಿಕಾರಿಗಳಿಗೆ ಶಿಸ್ತುಕ್ರಮ ತೆಗೆದುಕೊಳ್ಳುವ ಖಡಕ್ ಸೂಚನೆಗಳನ್ನು ನೀಡಿದ್ದಲ್ಲದೆ ಆಡಳಿತ ಸೇವೆಗಳ ಇಲಾಖೆಯ ಕಾರ್ಯದರ್ಶಿ ಅಶೀಶ್ ಮೋರೆ ಅವರನ್ನು ವರ್ಗಾಯಿಸಿ,ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರಸರ್ಕಾರದಂತೆ ರಾಜ್ಯಸರ್ಕಾರಗಳು ಅವುಗಳ ಭೌಗೋಳಿಕ ಕ್ಷೇತ್ರದಲ್ಲಿ ಸಾರ್ವಭೌಮ ಅಧಿಕಾರವನ್ನೇ ಪಡೆದಿವೆ.ನಮ್ಮ ಸಂವಿಧಾನವು ಭಾರತವನ್ನು ‘ ರಾಜ್ಯಗಳ ಒಕ್ಕೂಟ’ ಎನ್ನುತ್ತದೆಯೇ ಹೊರತು ಕೇಂದ್ರ ಸರಕಾರದ ಪಾರಮ್ಯವನ್ನು ಮಾತ್ರ ಪ್ರತಿಪಾದಿಸಿಲ್ಲ.ಒಕ್ಕೂಟ ವ್ಯವಸ್ಥೆಯ ಆಡಳಿತ ಪದ್ಧತಿಯಲ್ಲಿ ಕೆಲವು ವಿಷಯಗಳು ಕೇಂದ್ರ ಸರಕಾರಕ್ಕೆ ಸಂಬಂಧಿಸಿದರೆ ಇನ್ನು ಕೆಲವು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿವೆ.ಸಮವರ್ತಿ ಪಟ್ಟಿಯ ಲಿಸ್ಟಿನಲ್ಲಿರುವ ವಿಷಯಗಳಲ್ಲಿ ಕೇಂದ್ರ ,ರಾಜ್ಯಗಳೆರಡೂ ಕಾನೂನುಗಳನ್ನು ರೂಪಿಸಬಹುದಾಗಿದೆ.ಕೇಂದ್ರ ಸರಕಾರದಲ್ಲಿರುವಂತೆ ರಾಜ್ಯಗಳಲ್ಲಿಯೂ ಅಧಿಕಾರಿಗಳು ಅಲ್ಲಿಯ ಚುನಾಯಿತ ಸರ್ಕಾರಕ್ಕೆ ಜವಾಬ್ದಾರರಾಗಿರಬೇಕು.ಸರಕಾರದ ಇಲಾಖೆಯ ಮಂತ್ರಿಗಳ ನಿರ್ದೇಶನಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಅಂತಿಮ ನಿಯಂತ್ರಣಾಧಿಕಾರವು ರಾಜ್ಯದ ಮುಖ್ಯಮಂತ್ರಿಯವರ ಬಳಿ ಇರುತ್ತದೆ.ಐಎಎಸ್ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳಿಗೂ ಅನ್ವಯಿಸುವ ಆಡಳಿತ ಸೂತ್ರ,ನಿಯಮ ಇದು.ಮುಖ್ಯಮಂತ್ರಿ,ಇಲಾಖೆಯ ಮಂತ್ರಿಗಳು ಮತ್ತು ಇಲಾಖೆಯ ಅಧಿಕಾರಿಗಳು ಸೇರಿ ಕರ್ತವ್ಯ ನಿರ್ವಹಿಸುವುದೇ ‘ ಸಾಮೂಹಿಕ ಹೊಣೆಗಾರಿಕೆ’ (Collective Responsibility ) ಯ ಆಡಳಿತ ತತ್ತ್ವ.ಚುನಾಯಿತ ಸರ್ಕಾರದ ಪಾರಮ್ಯವನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟಿನ ಸಂವಿಧಾನ ಪೀಠದ ಈ ತೀರ್ಪಿನಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಕೇಂದ್ರ ಸರಕಾರದ ಸಾಮಂತ ರಾಜ್ಯಗಳು ಇಲ್ಲವೆ ಆಧೀನ ರಾಜ್ಯಗಳಲ್ಲ; ಬದಲಿಗೆ ಅವುಗಳ ಭೌಗೋಳಿಕ ವ್ಯಾಪ್ತಿಯಲ್ಲಿ ಸಾರ್ವಭೌಮ ಅಧಿಕಾರ ಉಳ್ಳ ಸರಕಾರಗಳು ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆಯಲ್ಲದೆ ಐಎಎಸ್ ಅಧಿಕಾರಿಗಳು ಸೇರಿದಂತೆ ಎಲ್ಲ ಸೇವೆಯ ಅಧಿಕಾರಿಗಳು ಇಲಾಖೆಯ ಮಂತ್ರಿಗಳ ನಿರ್ದೇಶನದಡಿಯೇ ಕರ್ತವ್ಯ ನಿರ್ವಹಿಸಬೇಕು ಎನ್ನುವ ಸೀಮಾರೇಖೆಯನ್ನು ಕೂಡ ಕೊರೆಯಲಾಗಿದೆ.ಇದರಿಂದ ಐಎಎಸ್ ಅಧಿಕಾರಿಗಳ ಕೇಂದ್ರಸರ್ಕಾರದ ನಿಷ್ಠೆಯು ಗಣನೀಯವಾಗಿ ಕಡಿತಗೊಂಡು ರಾಜ್ಯದ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಅವರು ರಾಜ್ಯಸರ್ಕಾರದ ನಿರ್ದೇಶನಗಳನ್ನು ಪಾಲಿಸಲೇಬೇಕಿದೆ.ಐಎಎಸ್ ಅಧಿಕಾರಿಗಳು ಅವರಿಗೆ ಪ್ರತ್ಯಾಯೋಜಿಸಿದ ಆರ್ಥಿಕ ಮತ್ತು ಆಡಳಿತಾತ್ಮಕ ಅಧಿಕಾರಗಳನ್ನು ಚಲಾಯಿಸಲು ಸ್ವತಂತ್ರರು.ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿಸಲ್ಪಟ್ಟ ಮಂತ್ರಿಯದೇ ಅಂತಿಮವಾಕ್ಯ,ಅದನ್ನು ಐಎಎಸ್ ಅಧಿಕಾರಿಗಳು ಧಿಕ್ಕರಿಸುವಂತಿಲ್ಲ. ಸುಪ್ರೀಂಕೋರ್ಟಿನ ಈ ತೀರ್ಪು ಐಎಎಸ್ ಅಧಿಕಾರಿಗಳ ಲಂಗುಲಗಾಮಿಲ್ಲದ ಆಡಳಿತಶಾಹಿಯ ವರ್ತನೆಗೆ ಕಡಿವಾಣ ಹಾಕಿರುವುದರಿಂದ ಅವರು ಚುನಾಯಿತ ಸರ್ಕಾರಕ್ಕೆ ಗೌರವ ಕೊಡಲೇಬೇಕಾಗುತ್ತದೆ.ಕೇಂದ್ರ ಸರ್ಕಾರದ ನಿರ್ದೇಶನ ಕೋರಿ ಪತ್ರಬರೆದು ಪಾರಾಗುವುದಕ್ಕಾಗಲಿ ವಿಳಂಬಧೋರಣೆ ತಳೆಯುವುದಕ್ಕಾಗಲಿ ಐಎಎಸ್ ಅಧಿಕಾರಿಗಳಿಗೆ ಅವಕಾಶವಿಲ್ಲ ಇನ್ನು ಮುಂದೆ.ಇದು ದೆಹಲಿ ರಾಜ್ಯಕ್ಕೆ ಸಂಬಂಧಿಸಿದ ತೀರ್ಪು ಆದರೂ ಸುಪ್ರೀಂಕೋರ್ಟಿನ ತೀರ್ಪುಗಳು ಇಡೀ ದೇಶದಾದ್ಯಂತ ಅನ್ವಯವಾಗುವುದರಿಂದ ಹೊಸದಾಗಿ ಸರಕಾರ ರಚಿಸಲಿರುವ ನಮ್ಮ ರಾಜ್ಯದ ಜನಪ್ರತಿನಿಧಿಗಳು ಸಹ ಈ ತೀರ್ಪನ್ನು ಓದಬೇಕು.ನಮ್ಮ ರಾಜ್ಯದಲ್ಲಿಯೂ ನಿರಂಕುಶ ಪ್ರವೃತ್ತಿಯ ಸಾಕಷ್ಟು ಜನ ಐಎಎಸ್,ಐಪಿಎಸ್ ಅಧಿಕಾರಿಗಳಿದ್ದಾರೆ.ಅವರನ್ನು ಅಂಕೆಯಲ್ಲಿಟ್ಟುಕೊಂಡು ಆಡಳಿತದಲ್ಲಿ ಬಿಗಿಸಾಧಿಸಿ ರಾಜ್ಯವನ್ನು ಅಭಿವೃದ್ಧಿಪಡಿಸಬೇಕಿದೆ ಅಸ್ತಿತ್ವಕ್ಕೆ ಬರಲಿರುವ ಹೊಸ ಸರಕಾರ.

About The Author