ಮೂರನೇ ಕಣ್ಣು : ರಾಜ್ಯಪಾಲರ ‘ಅನಧಿಕೃತ ಆಟ’ ದ ವಿರುದ್ಧ ಸುಪ್ರೀಂಕೋರ್ಟಿನ ಮಹತ್ವದ ತೀರ್ಪು : ಮುಕ್ಕಣ್ಣ ಕರಿಗಾರ

ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಸಂವಿಧಾನಪೀಠವು ಮಹಾರಾಷ್ಟ್ರ ರಾಜ್ಯದ ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿ ರಾಜ್ಯಪಾಲರ ನಡೆಯನ್ನು ಸಂವಿಧಾನ ಬಾಹಿರ,ಕಾನೂನಿನಲ್ಲಿ ಅವಕಾಶವಿಲ್ಲದ ನಡೆ ಎಂದು ಘೋಷಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಒಕ್ಕೂಟ ವ್ಯವಸ್ಥೆಯಡಿ ರಾಜ್ಯಪಾಲರ ಪಾತ್ರ ಏನಾಗಿರಬೇಕು ಎನ್ನುವುದನ್ನು ಸ್ಪಷ್ಟ ಪಡಿಸಿದೆ. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಕುರಿತಾಗಿ ಸುಪ್ರೀಂಕೋರ್ಟ್ ಮೇ11ರಂದು ನೀಡಿದ ತೀರ್ಪು ಸುಪ್ರೀಂಕೋರ್ಟಿನ ಇತ್ತೀಚಿನ ಮಹತ್ವದ ತೀರ್ಪುಗಳಲ್ಲಿ ಒಂದಾಗಿದೆ.ಮುಖ್ಯನ್ಯಾಯಾಧೀಶರಾದ ಡಿ ವೈ ಚಂದ್ರಚೂಡ್ ಅವರ ಅಧ್ಯಕ್ಷತೆಯಲ್ಲಿ ನ್ಯಾಯಾಧೀಶರುಗಳಾದ ಎಂ.ಆರ್.ಶಹಾ,ಕೃಷ್ಣ ಮುರಾರಿ,ಹಿಮಾ ಕೋಹ್ಲಿ ಮತ್ತು ಪಿ.ಎಸ್.ನರಸಿಂಹ ಅವರನ್ನು ಒಳಗೊಂಡ ಐವರು ಸದಸ್ಯರುಗಳನ್ನುಳ್ಳ ಸುಪ್ರೀಂಕೋರ್ಟಿನ ಸಂವಿಧಾನಪೀಠವು ಸರ್ವಾನುಮತದಿಂದ ಈ ತೀರ್ಪು ನೀಡಿದೆ ಎನ್ನುವುದು ಗಮನಾರ್ಹವಾದುದು.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಮುಖ್ಯಸ್ಥರಾಗಿದ್ದರೂ ರಾಜ್ಯಪಾಲರು ರಾಜಕೀಯ ನಿರ್ಲಿಪ್ತ ನಿಲುವನ್ನು ತಳೆಯಬೇಕು.ರಾಜ್ಯದ ಮುಖ್ಯಸ್ಥರು ಎಂದು ಅವರು ಜನಮತದ ಆಧಾರದಲ್ಲಿ ರಚನೆಗೊಂಡ ಚುನಾಯಿತ ಸರ್ಕಾರದ ದೈನಂದಿನ ವ್ಯವಹಾರಗಳಲ್ಲಿ ಮೂಗು ತೂರಿಸುವುದಾಗಲಿ,ಯಾರದೋ ಮರ್ಜಿಕಾಯಲು ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವುದಾಗಲಿ ಸಲ್ಲದು.ಆದರೆ ಮಹಾರಾಷ್ಟ್ರದ ಹಿಂದಿನ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸಂವಿಧಾನವನ್ನು ಬದಿಗೊತ್ತಿ ತಮಗೆ ಇಲ್ಲದ ಅಧಿಕಾರವನ್ನು ಚಲಾಯಿಸಿ ಉದ್ಧವ್ ಠಾಕ್ರೆಯವರ ನೇತೃತ್ವದ ಶಿವಸೇನೆ ಮತ್ತು ಎನ್ ಸಿ ಪಿ ಮಿತ್ರಕೂಟದ ಮಹಾವಿಕಾಸ ಆಘಾಡಿ ಸರಕಾರವು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದ್ದರು.ಮಹಾರಾಷ್ಟ್ರದಲ್ಲಿ 2019 ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಶಿವಸೇನೆಗಳೆರಡು ಜೊತೆಗೂಡಿ ಚುನಾವಣೆಯನ್ನು ಎದುರಿಸಿದ್ದವು.ನಿರೀಕ್ಷಿತ ಸಂಖ್ಯೆಯಲ್ಲಿ ತನ್ನ ಅಭ್ಯರ್ಥಿಗಳು ಚುನಾಯಿತರಾಗದೆ ಇದ್ದ ಕಾರಣದಿಂದ ಬಿಜೆಪಿಯು ರಾಜ್ಯದಲ್ಲಿ ಸರಕಾರವನ್ನು ರಚಿಸಲು ಮುಂದೆ ಬರಲಿಲ್ಲ.ಮಹಾರಾಷ್ಟ್ರದ ರಾಜಕೀಯ ಧುರೀಣ ಶರದಪವಾರ್ ನೇತೃತ್ವದ ಎನ್ ಸಿ ಪಿ ಯೊಂದಿಗೆ ಸೇರಿ ಉದ್ಧವ್ ಠಾಕ್ರೆ ಅವರು ಬಿಜೆಪಿ,ಎನ್ ಸಿ ಪಿಗಳನ್ನೊಳಗೊಂಡ ‘ಮಹಾವಿಕಾಸ ಆಘಾಡಿ’ ಸರಕಾರ ರಚಿಸಿದ್ದರು.ಉದ್ಧವ್ ಠಾಕ್ರೆ ನೇತೃತ್ವದ ಎಂ ವಿ ಎ ಸರಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಏಕನಾಥ ಶಿಂಧೆಯವರು ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೆ ಬಿಜೆಪಿಯೊಂದಿಗೆ ಗುಟ್ಟಾಗಿ ಮೈತ್ರಿ ಸಾಧಿಸಿ ಉದ್ಧವ್ ಠಾಕ್ರೆ ವಿರುದ್ಧ ತಿರುಗಿ ಬಿದ್ದರು.ಏಕನಾಥ ಶಿಂಧೆಯವರು ಇತರ 15 ಜನ ಶಾಸಕರುಗಳೊಂದಿಗೆ ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದರು.ಶಿವಸೇನೆಯ 36 ಜನ ಶಾಸಕರುಗಳು ತಮಗೆ ನೀಡಿದ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ದೂರಿ ರಾಜ್ಯಪಾಲರಿಗೆ ದೂರು ನೀಡಿದರು. ಬಿಜೆಪಿಯ ನಾಯಕ ದೇವೇಂದ್ರ ಫಡ್ನಾವೀಸ್ ಮತ್ತು ಇತರ ಏಳು ಜನ ಸ್ವತಂತ್ರ ಶಾಸಕರುಗಳು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಸದನದಲ್ಲಿ ಬಹುಮತ ಸಾಬೀತು ಪಡಿಸಲು ನಿರ್ದೇಶಿಸಲು ಕೋರಿ ಪತ್ರ ಬರೆದರು.ಈ ಪತ್ರಗಳ ಆಧಾರದ ಮೇಲೆ ರಾಜ್ಯಪಾಲರಾಗಿದ್ದ ಭಗತ್ ಸಿಂಗ್ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಸದನದ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಭಾವಿಸಿ,ಸದನದಲ್ಲಿ ಬಹುಮತಸಾಬೀತು ಪಡಿಸಲು ಸೂಚಿಸಿದರು.

ಇದು ರಾಜ್ಯಪಾಲರಾಗಿದ್ದ ಭಗತ್ ಸಿಂಗ್ ಕೋಶ್ಯಾರಿಯವರು ಎಸಗಿದ ಸಾಂವಿಧಾನಿಕ ಪ್ರಮಾದ.ಮಹಾರಾಷ್ಟ್ರದ ರಾಜ್ಯದ ರಾಜಕೀಯ ಪಕ್ಷಗಳ ಆಂತರಿಕ ಕಚ್ಚಾಟದಲ್ಲಿ ಅವರು ಅನಗತ್ಯವಾಗಿ ಹಸ್ತಕ್ಷೇಪ ಮಾಡಿದರು.ರಾಜಕೀಯ ಪಕ್ಷಗಳು ತಮ್ಮ ಪಾಡಿಗೆ ತಾವು ಕಚ್ಚಾಡಿಕೊಳ್ಳಲಿ,ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದರೆ ಮಾತ್ರ ರಂಗಪ್ರವೇಶಿಸುವೆ ಎಂದು ನಿರ್ಧರಿಸುವ ಬದಲು ಅವರು ತಾವಾಗಿಯೇ ಸ್ವಯಂಸ್ಫೂರ್ತಿಯಿಂದ ರಾಜಕೀಯ ರಂಗಪ್ರವೇಶಿಸಿ,ಶಾಸಕರುಗಳಿಗೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಂಡ ನೆಪವನ್ನು ಆಧಾರವಾಗಿಟ್ಟುಕೊಂಡು ಉದ್ಧವ್ ಠಾಕ್ರೆಯವರಿಗೆ ಸದನದಲ್ಲಿ ಬಹುಮತ ಸಾಬೀತು ಪಡಿಸಲು ಸೂಚಿಸಿದರು.ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ರಾಜ್ಯಪಾಲರ ಈ ನಡೆ ತಕ್ಕುದಲ್ಲ ಎಂದು ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ.’ ರಾಜ್ಯಪಾಲರಾದವರು ಸಾಂವಿಧಾನಿಕ ಹುದ್ದೆಯಲ್ಲಿರುವ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಅನಗತ್ಯ ಆಸಕ್ತಿ ವಹಿಸಿ,ಮಧ್ಯೆ ಪ್ರವೇಶಿಸುವುದು ಸೂಕ್ತವಲ್ಲ.ದೇವೇಂದ್ರ ಫಡ್ನಾವೀಸ್ ಮತ್ತು ಇತರ ಏಳು ಜನ ಸ್ವತಂತ್ರ ಶಾಸಕರುಗಳ ಪತ್ರಗಳನ್ನು ಪರಿಗಣಿಸಿ ಮುಖ್ಯಮಂತ್ರಿಯವರಿಗೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸಿದ ರಾಜ್ಯಪಾಲರ ಕ್ರಮ ಸಂವಿಧಾನ ವಿರೋಧಿಯಾದುದು ಮತ್ತು ಕೇಂದ್ರ ಸರಕಾರವು ಈ ಕುರಿತಂತೆ ರೂಪಿಸಿದ ಕಾನೂನು ನಿಯಮಗಳಿಗೂ ವಿರುದ್ಧವಾದುದು’ ಎಂದಿರುವ ಸಂವಿಧಾನ ಪೀಠವು ‘ ರಾಜ್ಯದ ಶಿವಸೇನೆಯ ಶಾಸಕರುಗಳಿಗೆ ನೀಡಿದ್ದ ಭದ್ರತೆಯನ್ನು ವಾಪಾಸು ಪಡೆದ ಬಗ್ಗೆ ಶಾಸಕರುಗಳು ನೀಡಿದ್ದ ದೂರನ್ನು ಪರಿಶೀಲಿಸಿ,ದೂರು ನಿಜವಾಗಿದ್ದರೆ,ಶಾಸಕರುಗಳ ರಕ್ಷಣೆಯ ದೃಷ್ಟಿಯಿಂದ ಭದ್ರತೆ ನೀಡುವುದು ಅಗತ್ಯವೆನ್ನಿಸಿದರೆ ಅವರುಗಳಿಗೆ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಬಹುದಿತ್ತು’ ಎಂದು ಅಭಿಪ್ರಾಯಿಸುವ ಮೂಲಕ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಯವರ ನಡೆ ಅತಿಕೇಕದ ನಡೆಯಾಗಿತ್ತಲ್ಲದೆ ಸಂವಿಧಾನ ಮತ್ತು ನಿಯಮಗಳ ಉಲ್ಲಂಘನೆ ಎಂದು ತೀರ್ಪು ನೀಡಿದೆ.

ಇದೇ ತೀರ್ಪಿನಲ್ಲಿ ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ಮುಖ್ಯಮಂತ್ರಿಯಾಗಿ ತಾವು ಮುಂದುವರೆಯಲು ನಿರ್ದೇಶಿಸಬೇಕು ಎಂದು ಕೋರಿ ಸುಪ್ರೀಂಕೋರ್ಟಿನ ಮೊರೆಹೋಗಿದ್ದ ಉದ್ಧವ್ ಠಾಕ್ರೆ ಅವರಿಗೆ ಒಂದು ಸಾಂವಿಧಾನಿಕ ಪಾಠವನ್ನು ಕಲಿಸಿದೆ — ‘ ಸದನದಲ್ಲಿ ಬಹುಮತಸಾಬೀತು ಪಡಿಸುವ ಮುನ್ನವೇ ರಾಜೀನಾಮೆ ನೀಡಿದ್ದರಿಂದ ನಿಮ್ಮ ನೇತೃತ್ವದ ಸರ್ಕಾರವನ್ನು ಪುನರ್ ಸ್ಥಾಪಿಸಲು ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು.ಉದ್ಧವ್ ಠಾಕ್ರೆಯವರು ಸದನದಲ್ಲಿ ಬಹುಮತಸಾಬೀತು ಪಡಿಸುವುದು ಸಾಧ್ಯವಾಗುವುದಿಲ್ಲ ಎಂದರಿತು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದರು.ಒಂದು ವೇಳೆ ಅವರು ಸದನವನ್ನು ಕರೆದು ತಮ್ಮ ನಾಯಕತ್ವದಲ್ಲಿನ ವಿಶ್ವಾಸದ ಪ್ರಶ್ನೆಯನ್ನು ಸದನದ ಮುಂದೆ ಮಂಡಿಸಿ,ಸದನದ ವಿಶ್ವಾಸ ಕಳೆದುಕೊಂಡು ರಾಜೀನಾಮೆ ನೀಡಿದ್ದರೆ ಸುಪ್ರೀಂಕೋರ್ಟ್ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ಪುನರ್ ಸ್ಥಾಪನೆಗೆ ಮಹಾರಾಷ್ಟ್ರ ರಾಜ್ಯಪಾಲರಿಗೆ ನಿರ್ದೇಶನ ನೀಡುತ್ತಿತ್ತು.ಯಾಕೆಂದರೆ ಈ ಪ್ರಕರಣದಲ್ಲಿ ಮಹಾರಾಷ್ಟ್ರ ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸಿದ್ದರು.ಉದ್ಧವ್ ಠಾಕ್ರೆಯವರಿಗೆ ಸಂವಿಧಾನ,ಸದನದ ನಿಯಮಗಳು,ಕೋರ್ಟ್ಗಳ ತೀರ್ಪುಗಳ ಬಗ್ಗೆ ಸರಿಯಾದ ತಿಳಿವಳಿಕೆ ಇದ್ದಿಲ್ಲವಾದ್ದರಿಂದ ಸದನದಲ್ಲಿ ಬಹುಮತ ಸಾಬೀತುಪಡಿಸದಿದ್ದರೆ ತಮ್ಮ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಎಂದು ಭಾವಿಸಿ ರಾಜೀನಾಮೆ ನೀಡಿದರು,ಯುದ್ಧಾರಂಭದಲ್ಲೇ ಸೋಲೊಪ್ಪಿಕೊಂಡರು.ಅವರ ಅವಸರ ಬುದ್ಧಿಯೇ ಅವರಿಂದ ಮುಖ್ಯಮಂತ್ರಿ ಸ್ಥಾನವು ಕೈತಪ್ಪಿ ಏಕನಾಥ ಶಿಂಧೆಯವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನಿರಾಂತಕದಿಂದ ಮುಂದುವರೆಯಲು ಕಾರಣವಾಯಿತು.

ಮಹಾರಾಷ್ಟ್ರದ ಹಿಂದಿನ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ತಪ್ಪುನಡೆಯ ವಿರುದ್ಧದ ಸುಪ್ರೀಂಕೋರ್ಟಿನ ಈ ತೀರ್ಪು ದೇಶದ ಇತರ ರಾಜ್ಯಗಳ ರಾಜ್ಯಪಾಲರುಗಳಿಗೆ ಅದರಲ್ಲೂ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳ ರಾಜ್ಯಪಾಲರುಗಳಿಗೆ ಎಚ್ಚರಿಕೆಯ ಕರೆಘಂಟೆ ಆಗಬೇಕು.ರಾಜ್ಯಪಾಲರ ಹುದ್ದೆ ಸಾಂವಿಧಾನಿಕ ಹುದ್ದೆಯಾಗಿದ್ದು ಆ ಹುದ್ದೆಯ ಘನತೆ- ಗೌರವಗಳನ್ನು ಎತ್ತಿ ಹಿಡಿಯುವುದೇ ತಮ್ಮ ಆದ್ಯತೆ ಎಂಬುದನ್ನು ಅಂತಹ ರಾಜ್ಯಪಾಲರುಗಳು ಅರ್ಥಮಾಡಿಕೊಳ್ಳಬೇಕು.ಬ್ರಿಟಿಷ್ ಮಾದರಿಯ ರಾಜ್ಯಪಾಲ ಹುದ್ದೆಯನ್ನು ನಾವು ಉಳಿಸಿಕೊಂಡಿದ್ದೇವೆ ಎಂದಾಗಲಿ ಸಂವಿಧಾನದಲ್ಲಿ ರಾಜ್ಯಪಾಲರಿಗೆ ವಿಶೇಷ ಅಧಿಕಾರ ನೀಡಿದೆ ಎಂದಾಗಲಿ ತಪ್ಪಾಗಿ ಅರ್ಥೈಸಿಕೊಂಡು ಬ್ರಿಟಿಷರ ಪ್ರತಿನಿಧಿ ಎಂಬಂತೆ ವರ್ತಿಸುತ್ತ ರಾಜ್ಯದ ಚುನಾಯಿತ ಸರ್ಕಾರ ಒಂದರ ಜೊತೆ ಸಂಘರ್ಷಕ್ಕೆ ಇಳಿಯಬಾರದು,ಚುನಾಯಿತ ಸರ್ಕಾರದ ಸರಿ ತಪ್ಪುಗಳನ್ನು ಒರೆಗೆ ಹಚ್ಚುವ ಕೆಲಸ ಮಾಡಬಾರದು.

ಸುಪ್ರೀಂಕೋರ್ಟಿನ ಮಹತ್ವದ ಈ ತೀರ್ಪು ಜನಪ್ರತಿನಿಧಿಗಳಿಗೆ ಅವರ ಸಾಂವಿಧಾನಿಕ ಜವಾಬ್ದಾರಿಯ ಬಗೆಗೂ ಹಿತೋಪದೇಶ ನೀಡಿದೆ.ಮುಖ್ಯಮಂತ್ರಿಯಾದವರು ಸದನದ ವಿಶ್ವಾಸಮತಕೋರಬೇಕು; ವೈಯಕ್ತಿಕ ಪ್ರತಿಷ್ಠೆ,ಮಾನಾಪಮಾನಗಳ ಪ್ರಶ್ನೆಗಳಿಗಿಂತ ಸಾಂವಿಧಾನಿಕ ವಿಧಿ ವಿಧಾನಗಳನ್ನು ಪೂರೈಸಿ ರಾಜೀನಾಮೆ ನೀಡಬೇಕು.ಅಂದಾಗ ಮಾತ್ರ ಸಾಂವಿಧಾನಿಕ ಕೋರ್ಟಿನ ಬೆಂಬಲ ಪಡೆಯಲು ಸಾಧ್ಯವಾಗುತ್ತದೆ.

ಇದೇ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಶಾಸಕರುಗಳ ಅರ್ಹತೆ ಮತ್ತು ಅನರ್ಹತೆಯನ್ನು ನಿರ್ಧರಿಸುವ ಪರಮಾಧಿಕಾರ ವಿಧಾನಸಭೆಯ ಸ್ಪೀಕರ್ ಅವರಿಗೆ ಮಾತ್ರ ಇದೆ ಎಂದು ತೀರ್ಪುನೀಡಿದೆ.ಮಹಾರಾಷ್ಟ್ರ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗೆಗಿನ ಸುಪ್ರೀಂಕೋರ್ಟಿನ ಈ ತೀರ್ಪು ಹನ್ನೊಂದು ತಿಂಗಳುಗಳಷ್ಟು ವಿಳಂಬವಾಗಿ ಪ್ರಕಟಗೊಂಡ ತೀರ್ಪು ಆದರೂ ಭಾರತದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದ,ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಿದ ಮಹತ್ವದ ತೀರ್ಪು ಎಂಬುದನ್ನು ಮರೆಯಲಾಗದು.

About The Author