ಮೂರನೇ ಕಣ್ಣು : ಏಕರೂಪ ನಾಗರಿಕ ಸಂಹಿತೆ’ ಜಾರಿಯ ಪ್ರಸ್ತಾಪವು ಅರಳಬೇಕಿದ್ದ ಕಮಲವು ಮುದುಡಲು ಕಾರಣವಾಗಬಹುದೆ ? : ಮುಕ್ಕಣ್ಣ ಕರಿಗಾರ

ಭಾರತೀಯ ಜನತಾಪಕ್ಷವು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗಿಂತ ಮುಂಚಿತವಾಗಿಯೇ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.13 ಪ್ರಮುಖ ಭರವಸೆಗಳ ಜೊತೆಗೆ ಇತರ 103 ಚುನಾವಣಾ ಭರವಸೆಗಳನ್ನು ಬಿಜೆಪಿಯು ರಾಜ್ಯದ ಮತದಾರರಿಗೆ ನೀಡಿದೆ.ಪಕ್ಷವು ಜನಾಭಿಪ್ರಾಯ ಸಂಗ್ರಹಿಸಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದೂ’ ಜನರಿಂದ ಜನರಿಗಾಗಿ ಸಿದ್ಧಪಡಿಸಿದ ಪ್ರಜಾಪ್ರಣಾಳಿಕೆ ಎಂದು ಮುಖ್ಯಮಂತ್ರಿಯವರು ಹಾಗೂ ಚುನಾವಣಾ ಪ್ರಣಾಳಿಕೆ ಸಮಿತಿಯ ಸದಸ್ಯರು ಹೇಳಿಕೊಳ್ಳಬಹುದಾದರೂ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದುತ್ವದ ಪ್ರತಿಪಾದನೆಯೇ ಪ್ರಮುಖ ಅಂಶವಾಗಿರುವುದು ಕಂಡು ಬರುತ್ತಿದೆ.ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿರುವ ಏಕರೂಪನಾಗರಿಕ ಸಂಹಿತೆಯಂತಹ ಮೂರು ವಿಷಯಗಳು ಬಿಜೆಪಿಯು ಬೆಲೆ ತೆರುವಂತೆ ಮಾಡಲಿವೆ.

ಏಕರೂಪ ನಾಗರಿಕತೆಯನ್ನು ಜಾರಿಗೊಳಿಸುವುದು,ರಾಷ್ಟ್ರೀಯಪೌರತ್ವ ನೊಂದಣಿ( NRC)ಪ್ರಕ್ರಿಯೆಯನ್ನು ಚುರುಕುಗೊಳಿಸಿ ಅಕ್ರಮವಲಸಿಗರನ್ನು ಗಡಿಪಾರು ಮಾಡುವುದು ಹಾಗೂ ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆ ತಡೆಗೆ ವಿಶೇಷಪಡೆ ರಚಿಸುವುದು– ಈ ಮೂರು ವಿಷಯಗಳು ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಸ್ತ್ರಗಳಾಗಿರುವುದರಿಂದ ಇವುಗಳಿಂದಾಗಿ ಬಿಜೆಪಿಯು ಕೈ ಸುಟ್ಟುಕೊಳ್ಳಬಹುದು.ಕರ್ನಾಟಕವು ಉತ್ತರಪ್ರದೇಶವಲ್ಲ ಅಥವಾ ದೇಶದ ಈಶಾನ್ಯ ರಾಜ್ಯಗಳಂತೆ ದೇಶದ ಗಡಿ ರಾಜ್ಯವೂ ಅಲ್ಲ ಭಯೋತ್ಪಾದಕರು ನುಸುಳಬಹುದು ಎಂದು ಹೇಳಲು.ಈ ಮೂರು ವಿಷಯಗಳು ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಗೆ ಸಂಬಂಧಿಸಿದ ,ಕೇಂದ್ರಸರ್ಕಾರದ ಆದ್ಯತೆಯ ವಿಷಯಗಳು.ರಾಜ್ಯ ಬಿಜೆಪಿಯು ಈ ವಿಷಯಗಳಲ್ಲಿ ಸಾಧಿಸುವಂತಹದ್ದು ಏನೂ ಇಲ್ಲ.

ಏಕರೂಪ ನಾಗರಿಕ ಸಂಹಿತೆಯ ಜಾರಿಯಲ್ಲಿ ರಾಜ್ಯದ ಪಾತ್ರವೇನು? ರಾಜ್ಯ ಬಿಜೆಪಿ ನಾಯಕರುಗಳು ಈ ಬಗ್ಗೆ ಚರ್ಚಿಸಿದ್ದಾರೆಯೆ? ನಮ್ಮ ಸಂವಿಧಾನದ ‘ ರಾಜ್ಯನಿರ್ದೇಶಕ ತತ್ತ್ವಗಳ’ಡಿ ಬರುವ ಸಂವಿಧಾನದ 44 ನೆಯ ಅನುಚ್ಛೇದವು ‘ ಏಕರೂಪ ನಾಗರಿಕ ಸಂಹಿತೆ’ ( Uniform Civil Code) ನ ಅಗತ್ಯವನ್ನು ಎತ್ತಿ ಹೇಳುತ್ತಿದೆಯಾದರೂ ಅದು ಕೇಂದ್ರದ ಅಧಿಕಾರ ವ್ಯಾಪ್ತಿಯ ವಿಷಯ.ಸಂಸತ್ತು ಆ ಬಗ್ಗೆ ಶಾಸನಗಳನ್ನು ರೂಪಿಸಿ,ಕಾನೂನನ್ನು ಜಾರಿಗೊಳಿಸಬೇಕು.ರಾಜ್ಯದ ಅಭಿವೃದ್ಧಿಗೆ ಏಕರೂಪನಾಗರಿಕ ಸಂಹಿತೆ,ಅಕ್ರಮವಲಸೆ ತಡೆಯುವುದು ಮತ್ತು ಧಾರ್ಮಿಕ ಮೂಲಭೂತವಾದ ನಿಯಂತ್ರಣ ಕ್ರಮಗಳು ಹೇಗೆ ಪೂರಕಕ್ರಮಗಳಾಗಬಲ್ಲವೊ!

ಒಂದಂತೂ ಸ್ಪಷ್ಟ ಬಿಜೆಪಿಯ ವರಿಷ್ಠರು 2024 ರಲ್ಲಿ ನಡೆಯುವ ಲೋಕಸುಭಾ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಈ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದಾರೆ ಮತ್ತು ರಾಜ್ಯ ಬಿಜೆಪಿ ಘಟಕ ಹಾಗೂ ಚುನಾವಣಾ ಪ್ರಣಾಳಿಕೆ ಸಮಿತಿಯು ಹೆಸರಿಗಷ್ಟೆ ಪ್ರಣಾಳಿಕೆ ಸಮಿತಿಯಾಗಿ ಯಾರೋ ಸಿದ್ಧಪಡಿಸಿದ ಚುನಾವಣಾ ಪ್ರಣಾಳಿಕೆಗೆ ಸಹಿ ಹಾಕುವ ಕೆಲಸವನ್ನಷ್ಟೇ ಮಾಡಿದ್ದಾರೆ .ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ,ಅಭಿವೃದ್ಧಿ ಕಾಣಬೇಕಾದ ಹತ್ತಾರು ಕ್ಷೇತ್ರಗಳಿವೆ,ಒಳಗೊಳ್ಳಬಹುದಾದ ಜನಸಮುದಾಯಗಳಿವೆ.ಅವನ್ನೆಲ್ಲ ಬಿಟ್ಟು ರಾಜ್ಯಕ್ಕೆ ಅಷ್ಟೇನೂ ಮಹತ್ವದ್ದಲ್ಲದ ಏಕರೂಪ ನಾಗರಿಕ ಸಂಹಿತೆಯಂತಹ ಅಂಶಗಳನ್ನು ಪ್ರಸ್ತಾಪಿಸುವ ಅಗತ್ಯವಿತ್ತೆ?

ಬಿಜೆಪಿಯು ಏಕರೂಪನಾಗರಿಕ ಸಂಹಿತೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವುದರಿಂದ ಗಳಿಸಿಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು.ಆ ಪಕ್ಷದ ಬಗ್ಗೆ ರಾಜ್ಯದ ತಳಸಮುದಾಯಗಳು,ಶೂದ್ರರು ಮತ್ತು ಹಿಂದುಳಿದವರಿಗೆ ಇದ್ದ ಅನುಮಾನ ಈಗ ನಿಜವಾಗಿದೆ.ಕೇವಲ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಕೈಗೊಳ್ಳುವ ಇಂತಹ ಉದ್ದೇಶಿತ ಕ್ರಮಗಳು ನಿರೀಕ್ಷಿತ ಫಲಿತಾಂಶ ನೀಡಲಾರವು.ಮುಸ್ಲಿಂ ಸಮುದಾಯ ಜೊತೆಗೆ ದಲಿತರು,ಹಿಂದುಳಿದವರು,ಕ್ರಿಶ್ಚಿಯನ್ನರು ಬಿಜೆಪಿಯಿಂದ ದೂರ ಸರಿಯುತ್ತಾರೆ.ರಾಜ್ಯದ ಶಾಂತಿ ಸಾಮರಸ್ಯಗಳನ್ನು ಹಾಳು ಮಾಡುವ ಇಂತಹ ಪ್ರಯತ್ನಗಳನ್ನು ಕರ್ನಾಟಕದ ಮತದಾರರು ತಿರಸ್ಕರಿಸುತ್ತಾರೆ.

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಅಗತ್ಯದ ಬಗ್ಗೆ ಸುಪ್ರೀಂಕೋರ್ಟ್ ಪಿ ವಿ ನರಸಿಂಹರಾವ್ ಅವರು ಪ್ರಧಾನಿ ಆಗಿದ್ದಾಗ ಪ್ರಕರಣ ಒಂದರಲ್ಲಿ ಹೇಳಿತ್ತಾದರೂ ಈ ನಿರ್ದೇಶನವು ಕೇಂದ್ರಸರಕಾರವು ಕಡ್ಡಾಯವಾಗಿ ಪಾಲಿಸಬೇಕಾದ ನಿರ್ದೇಶನವಲ್ಲ ಎಂದೂ ಸ್ಪಷ್ಟಪಡಿಸಿತ್ತು.ಆ ನಂತರದ ಬಹಳಷ್ಟು ರಿಟ್ ಗಳು,ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿಗಳಲ್ಲಿ ಸುಪ್ರೀಂಕೋರ್ಟ್ ಭಾರತದಂತಹ ವಿವಿಧತೆಯಲ್ಲಿ ಏಕತೆಯುಳ್ಳ ರಾಷ್ಟ್ರದಲ್ಲಿ ‘ಏಕರೂಪನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಕಷ್ಟಸಾಧ್ಯ’ ಎನ್ನುವಭಿಪ್ರಾಯದ ತೀರ್ಪುಗಳನ್ನು ನೀಡಿದೆ.ಅಷ್ಟಕ್ಕೂ ಏಕರೂಪನಾಗರಿಕ ಸಂಹಿತೆಯ ಅಗತ್ಯವನ್ನು ಒತ್ತಿಹೇಳುವ ಅನುಚ್ಛೇದ 44 ಭಾರತದ ಸಂವಿಧಾನದ ರಾಜ್ಯನೀತಿ ನಿರ್ದೇಶಕ ತತ್ತ್ವಗಳಡಿಯಲ್ಲಿದೆ. ದೇಶದ ಸಮಗ್ರತೆಗೆ,ಪ್ರಜೆಗಳ ಮೂಲಭೂತಹಕ್ಕುಗಳಿಗೆ ಧಕ್ಕೆಯನ್ನುಂಟು ಮಾಡುವ ಕಾನೂನುಗಳನ್ನು ರದ್ದುಪಡಿಸುವ ಅಧಿಕಾರ ಸುಪ್ರೀಂಕೋರ್ಟ್ ಗೆ ಇದೆ.ರಾಜ್ಯನಿರ್ದೇಶಕ ತತ್ತ್ವಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದಿಲ್ಲ ಆದರೆ ಮೂಲಭೂತಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕಾದುದು ಕೇಂದ್ರಸರ್ಕಾರ ಮತ್ತು ರಾಜ್ಯಸರ್ಕಾರಗಳ ಜವಾಬ್ದಾರಿ.

ಏಕರೂಪನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಪ್ರಸ್ತಾಪ ಮಾಡಿ ಬಿಜೆಪಿಯು ರಾಜ್ಯದ ಶಾಂತಿ,ಸಾಮರಸ್ಯವನ್ನು ಕದಡಲು ಹೊರಟಿದೆ.ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ ಎನ್ನುವುದನ್ನು ರಾಜ್ಯ ಬಿಜೆಪಿ ನಾಯಕರುಗಳು ಅರ್ಥ ಮಾಡಿಕೊಳ್ಳಬೇಕು. ಜನಮಾನಸದ ನಾಡಿಮಿಡಿತವನ್ನು ಬಲ್ಲ ಬಿ.ಎಸ್ .ಯಡಿಯೂರಪ್ಪನವರಂತಹ ಸಮರ್ಥ ಜನನಾಯಕರನ್ನು ಹೊರಗಿಟ್ಟು ಚುನಾವಣಾ ಪ್ರಣಾಳಿಕೆ ರಚಿಸಿದ್ದರಿಂದ ರಾಜ್ಯ ಬಿಜೆಪಿಯು ಅದರ ಕಹಿಫಲವನ್ನು ಅನುಭವಿಸಲಿದೆ.

About The Author