ಮೂರನೇ ಕಣ್ಣು : ರುದ್ರಾಂಶ ಸಂಭೂತನೂ ವೀರಭದ್ರನ ಶಿಷ್ಯನೂ ಆದ ಹನುಮ‌ಂತ ರಾಮದೂತನೇ ಹೊರತು ,ರಾಮ ಭಕ್ತನಲ್ಲ ! : ಮುಕ್ಕಣ್ಣ ಕರಿಗಾರ

ನಮ್ಮ ದೇಶದಲ್ಲಿ ತಮ್ಮ ದೇವರ ಮಹಿಮೆಯನ್ನು ಮೆರೆಯಲು ಇತರ ದೇವರುಗಳನ್ನು ಆ ದೇವರಿಗಿಂತ ಕಡಿಮೆ ಎಂದೋ,ಆ ದೇವರ ಸೇವಕನೆಂದೋ ಇಲ್ಲವೆ ಆ ದೇವರಿಂದ ಸೋಲಿಸಲ್ಪಟ್ಟವರೆಂದೋ ಬಿಂಬಿಸುವ ಕೆಟ್ಟಪದ್ಧತಿ ಒಂದು ಅನುಚಾನವಾಗಿ ನಡೆದುಕೊಂಡು ಬಂದಿದೆ.ವೇದ ಮತ್ತು ಉಪನಿಷತ್ತು ಕಾಲದಲ್ಲಿ ಇಲ್ಲದ ಈ ದೈವಗಳ ವೈಭವೀಕರಣ ಮತ್ತು ಹುಸಿಮೆರವಣಿಗೆ ಪ್ರಾರಂಭವಾದದ್ದು ಪುರಾಣಗಳ ಕಾಲದಲ್ಲಿ.ವೇದವ್ಯಾಸರೇ ಬರೆದಿದ್ದಾರೆ ಎನ್ನಲಾಗುವ ಹದಿನೆಂಟು ಪುರಾಣಗಳಲ್ಲಿ ಒಂದೊಂದು ಪುರಾಣಕ್ಕೆ ಒಬ್ಬ ದೇವತೆ ನಾಯಕನಾದರೆ ಉಳಿದ ದೇವತೆಗಳು ಆತನಿಗಿಂತ ಗೌಣ ದೇವತೆಗಳು ಇಲ್ಲವೆ ಆತನನ್ನು ಪೂಜಿಸುವ ದೇವತೆಗಳು.ಋಗ್ವೇದದ ಕಾಲದಲ್ಲಿ ನಗಣ್ಯನಾಗಿದ್ದ ವಿಷ್ಣು ಗುಪ್ತರ ಕಾಲದಲ್ಲಿ ಪ್ರಧಾನ ದೇವತೆಯಾಗಿ,ಪರಮಾತ್ಮನಾಗಿ,ಅನಂತಮಹಿಮೆಯ ಗುಣಗಳ ದೇವರಾಗಿ ಪ್ರಕಟಗೊಳ್ಳುತ್ತಾನೆ.ಗುಪ್ತದೊರೆಗಳ ಕಾಲಕ್ಕಾಗಲೇ ವೈಷ್ಣವ ಬ್ರಾಹ್ಮರು ಆಳರಸರುಗಳ ಮೇಲೆ ತಮ್ಮ ‘ ಪ್ರಭುತ್ವ’ ವನ್ನು ಸ್ಥಾಪಿಸಿದ್ದರು.ಗುಪ್ತದೊರೆಗಳಲ್ಲಿ ಬಹಳಷ್ಟು ದೊರೆಗಳು ವೈಷ್ಣವ ಮತಾನುಯಾಯಿಗಳಾಗಿದ್ದರು.ವಿಷ್ಣು ಅವತಾರಪುರುಷನಾಗಿದ್ದು,ಮಹಿಮಾತಿಶಯಗಳ ದೇವರಾದದ್ದು ಗುಪ್ತರಕಾಲದಲ್ಲಿ.ಅದುವರೆಗೂ ವಿಷ್ಣುವಿಗೆ‌ ಪ್ರಾಧಾನ್ಯ ಇರಲಿಲ್ಲ.ಋಗ್ವೇದದಲ್ಲಿ ವಿಷ್ಣುವನ್ನು ಕುರಿತು ಕೇವಲ ಮೂರೇಮೂರು ಋಕ್ಕುಗಳಿವೆ! ವೇದಕಾಲದಲ್ಲಿನ ಪ್ರಮುಖ ದೇವರಾಗಿದ್ದ ರುದ್ರನ ಮಹಿಮಾತಿಶಯಗಳನ್ನು ವೈಷ್ಣವರು ವಿಷ್ಣುವಿನಲ್ಲಿ ಆರೋಪಿಸಿದರು.ಮಾಧ್ವರಂತೂ ರುದ್ರನನ್ನು ವಿಷ್ಣುವಿನ ಕೆಳಸ್ತರದ ದೈವ ಎಂಬಂತೆ ಹಸಿಹಸಿ ಸುಳ್ಳನ್ನು ಬಿತ್ತರಿಸಿದರು.ಮಾತುಮಾತಿಗೂ ವೇದ ಪ್ರಮಾಣ ಎನ್ನುವ ಜನರು ವೇದದಲ್ಲಿ ಇಲ್ಲದ ಅಸತ್ಯವನ್ನು ಸಾರುವುದೇಕೆ? ವೇದವನ್ನು ತಿರುಚುವುದೇಕೆ? ಭಾರತದ ಮೂಲಧರ್ಮ ಶೈವ ಧರ್ಮ,ಭಾರತದ ಮೂಲ ಸಂಸ್ಕೃತಿ ಶೈವ ಸಂಸ್ಕೃತಿ ಭಾರತೀಯ ಸಂಸ್ಕೃತಿಯ ಪರಮಾತ್ಮ,ಪರಬ್ರಹ್ಮ ಎಂದರೆ ಶಿವನೊಬ್ಬನೇ! ವೇದದ ರುದ್ರಾಧ್ಯಾಯವೇ ಅದನ್ನು ಸ್ಪಷ್ಟಪಡಿಸಿದೆ.’ ನಮಃಶಿವಾಯ’ ಎನ್ನುವ ಶಿವ ಪಂಚಾಕ್ಷರಿ ಮಂತ್ರವು ರುದ್ರಾಧ್ಯಾಯದಲ್ಲಿಯೇ ಬರುತ್ತಿದೆ.ಋಷಿಗಳು ರುದ್ರನನ್ನು ಭಯ- ಆತಂಕಗಳಿಂದ ಪ್ರಾರ್ಥಿಸಿ ನಮ್ಮ’ ಮೇಲೆ ಕೋಪಗೊಳ್ಳಬೇಡ,ಶಾಂತನಾಗು,ನಿನಗೆ ನಿನ್ನ ಬಿಲ್ಲಿಗೆ,ನಿನ್ನ ಬಾಣಕ್ಕೆ ನಮಸ್ಕಾರ.ನಮ್ಮನ್ನು ನಮ್ಮ ಮುಕ್ಕಳನ್ನು ಕಾಪಾಡು’ ಎಂದು ಪರಿಪರಿಯಾಗಿ ಪ್ರಾರ್ಥಿಸುತ್ತಾರೆ !ವೇದದಲ್ಲಿಯೇ ಇದೆ ‘ ಓಂ ನಮೋ ಭಗವತೇ ರುದ್ರಾಯ’ ಎನ್ನುವ ರುದ್ರ ಮಂತ್ರ. ವಿಷ್ಣುವನ್ನು ಕುರಿತು ಮೂರು ಋಕ್ಕುಗಳನ್ನು ಹೊರತುಪಡಿಸಿ ವೇದದಲ್ಲಿ ವಿಷ್ಣು ಮಂತ್ರಗಳಿಲ್ಲ.ವೈಷ್ಣವರು ಇಂದು ಹೇಳುತ್ತಿರುವ ‘ ಓಂ ನಮೋ ಭಗವತೇ ವಾಸುದೇವಾಯ’ , ‘ ಓಂನಮೋ ಭಗವತೇ ದಾಮೋದರಾಯ’ ‘ ಓಂ ನಮೋ ನಾರಾಯಣಾಯ’ ಮೊದಲಾದ ಮಂತ್ರಗಳು ಗುಪ್ತರ ಕಾಲದಲ್ಲಿ ರಚನೆಗೊಂಡ ವಿಷ್ಣುಪರವಾದ ಪುರಾಣಗಳಲ್ಲಿ ಕಂಡು ಬರುತ್ತವೆಯೇ ಹೊರತು ಅದಕ್ಕೂ ಮೊದಲು ಈ ಮಂತ್ರಗಳಿರಲಿಲ್ಲ.ವೇದದಲ್ಲಿ ರುದ್ರನೊಂದಿಗೆ ಅಗ್ನಿ,ಇಂದ್ರ,ಸೂರ್ಯ,ಸೋಮ,ಮರುತ್ತುಗಳು ಮೊದಲಾದ ಮುವ್ವತ್ತುಮೂರು ದೇವತೆಗಳಿಗೆ ಪ್ರಾಧಾನ್ಯತೆ ಇದೆ.

ಈಗ ಇದನ್ನು ಪ್ರಸ್ತಾಪಿಸುವ ಕಾರಣ ವಿಷ್ಣುಭಕ್ತರ ಹಸಿಹುಸಿ ಸುಳ್ಳಿಗೆ ಮೂಲಭಾರತೀಯರೂ ಶೂದ್ರ- ದಸ್ಯುಗಳು ಆಗಿದ್ದ ಭಾರತೀಯ ದೇವರುಗಳನ್ನು ವಿಷ್ಣುಭಕ್ತರೆಂದು ಬಿಂಬಿಸುವ ವೈಷ್ಣವರ ಕಾಪಟ್ಯವನ್ನು ಖಂಡಿಸಲು.ಮೇ 18 ರ ( ಸಂಪುಟ 59,ಸಂಚಿಕೆ 20) ” ಸುಧಾ” ವಾರಪತ್ರಿಕೆಯ ‘ವಿಚಾರ ಲಹರಿ’ ಅಂಕಣದಡಿ ಪ್ರಕಟಗೊಂಡ ” ಹನುಮ : ಭಕ್ತಿ– ಶಕ್ತಿ’ ಎನ್ನುವ ಎನ್ನುವ ಲೇಖನ ಓದಿದ ಬಳಿಕ ಈ ಲೇಖನ ಬರೆಯಬೇಕೆನ್ನಿಸಿತು.ಸುಧಾ ಪತ್ರಿಕೆಯಲ್ಲಿ ಈ ಲೇಖನ ಬರೆದವರು ಚಂಪಕಮಾಲಾ ( ಅದು ಲೇಖಕರ ಹೆಸರೋ ಕಾವ್ಯನಾಮವೋ ಅಥವಾ ಪತ್ರಿಕಾ ಬಳಗದ ಬರಹಗಾರರ ಕಾವ್ಯನಾಮವೋ ನಾನರಿಯೆ) ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರ ಹುದ್ದೆಯಲ್ಲಿದ್ದು ನಿವೃತ್ತರಾದ ಪದ್ಮರಾಜ ದಂಡಾವತಿಯವರು ಇತ್ತೀಚೆಗೆ ದೇವದತ್ತ ಪಟ್ನಾಯಕ ಅವರ ‘ ಸೀತಾ ‘ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.( ಆ ಪುಸ್ತಕವನ್ನು ನಾನು ಓದಿದ್ದು ದಂಡಾವತಿಯವರ ಅನುವಾದ ಸಾಮರ್ಥ್ಯ ಎದ್ದು ಕಾಣಿಸುತ್ತದೆ) ಆ ಪುಸ್ತಕದ ‘ ಹನುಮಂತ ರಾಮಾಯಣ’ ಎನ್ನುವ ಪ್ರಸಂಗವನ್ನು ವಿವರಿಸುತ್ತ ಚಂಪಕಮಾಲಾ ಅವರು ಹನುಮಂತನನ್ನು ರಾಮಭಕ್ತ ಎಂಬಂತೆ ಚಿತ್ರಿಸಿದ್ದಾರೆ….’ ಹನುಮನಿಗೆ ಭಕ್ತಿ,ಶಕ್ತಿಗಳೆರಡೂ’ ರಾಮಮಂತ್ರ’ ವೇ.ಜನರ ಮನಸ್ಸಿನಲ್ಲಿ ಹನುಮ ಅಚ್ಚೊತ್ತಿರುವುದು ರಾಮಭಕ್ತನ ರೂಪದಲ್ಲೇ’ಎನ್ನುವ ಲೇಖಕರು ಹನುಮನನ್ನು ರಾಮಸೇವಕನನ್ನಾಗಿಯೇ ನೋಡಬಯಸುತ್ತಾರೆಯೇ ಹೊರತು ಹನುಮ ಮಹಾವೀರ,ರುದ್ರಾಂಶ ಸಂಭೂತ,ವಾಯುಪುತ್ರ,ಸೂರ್ಯಶಿಷ್ಯ ಎಂದು ನೋಡಬಯಸುವುದಿಲ್ಲ.ಅವರದೇ ಒಂದು ಪ್ಯಾರಾ ನೋಡಿ;

” ವರ್ತಮಾನದ ಹನುಮಂತನ ಜನಪ್ರಿಯ ಚಿತ್ರ ಯಾವುದು?ಭಕ್ತಿಯ ಉತ್ತುಂಗದಲ್ಲಿ ಮುಳುಗಿದ ಅಥವಾ ರಾಮಧ್ಯಾನಮಗ್ನನಾದ ಹನುಮನ ಚಿತ್ರವೀಗ ಚಲಾವಣೆಯಲ್ಲಿಲ್ಲ.ಈಗ ಜನಪ್ರಿಯವಾಗಿರುವುದು ರೇಖೆಗಳಲ್ಲಿ ಮೂಡಿರುವ ಕೋಪೋದ್ರಿಕ್ತ ಹನುಮ.ವಿಚಾರಕ್ಕಿಂತಲೂ ಸಂಕೇತಕ್ಕೆ ಜೋತು ಬಿದ್ದಾಗ ಮಾನವೀಯ ಭಕ್ತಿ ಹಿನ್ನೆಲೆಗೆ ಸರಿದು,ವಿಧ್ವಂಸಕ ರೌದ್ರಾವತಾರ ವಿಜೃಂಭಿಸುತ್ತದೆ’. ‘ವಿದ್ವಂಸಕ ರೌದ್ರಾವತಾರ ವಿಜೃಂಭಿಸುತ್ತದೆ’ ಎನ್ನುವ ಮಾತುಗಳಲ್ಲಿಯೇ ಲೇಖಕರ ಒಳತೋಟಿ ಅರ್ಥಮಾಡಿಕೊಳ್ಳಬಹುದು.

ಹನುಮಂತನ ಮಹಿಮಾ ವಿಶೇಷ ಇರುವುದು ಆತ ರುದ್ರಾಂಶ ಸಂಭೂತ ಎನ್ನುವದರಲ್ಲಿ.ರಾಮಾಯಣದ ಯಾವುದೇ ಪಾತ್ರ- ಪ್ರಸಂಗಗಳಿಗೆ ಮೂಲ ಆಧಾರ ವಾಲ್ಮೀಕಿಯವರ ‘ ರಾಮಾಯಣ’. ವಾಲ್ಮೀಕಿ ರಾಮಾಯಣದ ಮಹೋನ್ನತ ಪಾತ್ರ ಹನುಮಂತ.ಹನುಮಂತ ಇಲ್ಲದೆ ಇದ್ದರೆ ರಾಮಾಯಣ ಅಪೂರ್ಣವಾಗುತ್ತಿತ್ತು,ಅರ್ಥರಹಿತವಾಗುತ್ತಿತ್ತು ಎನ್ನುವಂತಹ ಮಹಿಮೆ ಆಂಜನೇಯದು.ಋಷಿ ವಾಲ್ಮೀಕಿಗಳೇ ರಾಮನನ್ನು ದೇವರು,ಪರಮಾತ್ಮ ಎಂದು ಬಗೆದಿರಲಿಲ್ಲ,ರಾಮ ಒಬ್ಬ ಆದರ್ಶರಾಜ,ಉತ್ತಮ ವ್ಯಕ್ತಿ,ಹದಿನಾರು ಗುಣಗಳಿಂದ ಕೂಡಿದ ಪರಿಪೂರ್ಣ ಮನುಷ್ಯ’ ಎಂಬಂತೆ ಆತನ ವ್ಯಕ್ತಿತ್ವ ಇತರರಿಗೆ ಅನುಕರಣೀಯ ಆದರ್ಶ ಎಂಬಂತೆ ಚಿತ್ರಿಸಿದ್ದಾರೆ.ನಂತರದವರು ಬರೆದು ಸೇರಿಸಿದ ಪ್ರಕ್ಷಿಪ್ತಗಳಲ್ಲಿ ರಾಮ ದೇವರಾಗಿದ್ದಾನೆ,ವಿಷ್ಣುವಿನ ಅವತಾರವಾಗಿದ್ದಾನೆ.ವಾಲ್ಮೀಕಿಯವರು ರಾಮನ ಸಮಕಾಲೀನ ವಯೋವೃದ್ಧ,ಜ್ಞಾನವೃದ್ಧ ತಪಸ್ವಿಗಳು,ಋಷಿಗಳು.ಅವರು ಅಯೋಧ್ಯೆಯನ್ನು,ರಾಮನನ್ನು ಪ್ರತ್ಯಕ್ಷ ಕಂಡಿದ್ದಾರೆ.ವಾಲ್ಮೀಕಿಯವರು ತಮ್ಮ ರಾಮಾಯಣದಲ್ಲಿ ರಾಮನ ಉದಾತ್ತ ಗುಣಗಳು,ಪೌರುಷ ಮೊದಲಾದ ಗುಣವಿಶೇಷಗಳಿಗೆ‌ಒತ್ತುನೀಡಿದ್ದಾರೆಯೇ ಹೊರತು ಆತನನ್ನು ದೇವರು ಎಂಬಂತೆ ಚಿತ್ರಿಸಿಲ್ಲ,ಆತನ ಪೂಜಾವಿಧಿ,ಮಂತ್ರಗಳನ್ನು ಬರೆದಿಲ್ಲ.ರಾಮನಿಗಿಂತಲೂ ಹನುಮಂತನ ಪಾತ್ರ ಅತಿಶಯ ಮಹಿಮೆಯಿಂದ ಕಂಗೊಳಿಸುತ್ತದೆ ಎನ್ನುವುದನ್ನು ಆಂಜನೇಯನ ಸಾಗರೋಲ್ಲಂಘನ,ಲಂಕಾದಹನ,ಇಂದ್ರಜಿತ್ತುವಿನ ಯಜ್ಞಭಂಗ ಮತ್ತು ಸತ್ತ ಲಕ್ಷ್ಮಣನಿಗಾಗಿ ಸಂಜೀವಿನಿ‌ ಪರ್ವತವನ್ನೇ ಹೊತ್ತು ತರುವ ಲೋಕಜನರಿಗೆ ಅಸಾಧ್ಯವಾದ ಆದರೆ ಹನುಮನಿಗೆ ಮಾತ್ರ ಸಾಧ್ಯವಾದ ಕಾರ್ಯಗಳಲ್ಲಿ ಕಾಣಬಹುದು.ಸೂರ್ಯನನ್ನು‌ ಪ್ರಸನ್ನಗೊಳಿಸಿ ಆದಿತ್ಯನಿಂದ ವಿದ್ಯೆಯನ್ನು ಕಲಿತನಲ್ಲದೆ ಹನುಮಂತ ಸೂರ್ಯನ ಶಕ್ತಿಯ ಸಹಸ್ರದಲ್ಲೊಂದು ಅಂಶವನ್ನೂ ಪಡೆಯುತ್ತಾನೆ.ಹನುಮಂತನ ಈ ಶಕ್ತಿ ಸಾಮರ್ಥ್ಯ ಮಹಿಮೆಗಳನ್ನೆಲ್ಲ ಮರೆಮಾಚಿ ಅವನನ್ನು ರಾಮನ ಪಾದಗಳನ್ನು ಒತ್ತುವ ಸೇವಕನ ಕಲ್ಪನೆಯಲ್ಲೇ ಕಂಡು ಸುಖಿಸುತ್ತಾರೆ ವೈಷ್ಣವರು.

ಹನುಮಂತನು ಇಂದು ದೇವರಾಗಿ ಪೂಜೆಗೊಳ್ಳುತ್ತಿದ್ದರೆ ಅದಕ್ಕೆ ಮುಖ್ಯ ಕಾರಣಗಳು ಎರಡು; ಒಂದು ಆತ ರುದ್ರಾಂಶ ಸಂಭೂತನಾದುದು ಎರಡನೆಯದು ಶ್ರೀ ವೀರಭದ್ರನಿಂದ ಶಿವ ಪಂಚಾಕ್ಷರಿ ಮಂತ್ರದ ಉಪಪದೇಶ ಪಡೆದು ಯೋಗಸಾಧನೆ ಮಾಡಿದ್ದು.ಜನಪದ ರಾಮಾಯಣಗಳಲ್ಲಿ ಹನುಮಂತನನ್ನು ವೀರಭದ್ರನ ಶಿಷ್ಯನೆಂದೇ ಹೇಳಲಾಗಿದೆ.ರಾಮನು ರಾವಣನನ್ನು ಕೊಂದು ಲಂಕೆಯಲ್ಲಿ ಪಟ್ಟಾಭಿಷಿಕ್ತನಾದ ಸಂದರ್ಭ.ಸೀತೆಯನ್ನು ಮರಳಿ ಪಡೆಯುವಲ್ಲಿ ತನಗೆ ಸಹಾಯ ಮಾಡಿದ ಕಪಿವೀರರುಗಳನ್ನೆಲ್ಲ ಕರೆದು ‘ ಏನು ಬೇಕು,ಬೇಡಿರಿ’ ಎಂದು ಅವರು ಬೇಡಿದ ಮುತ್ತು ರತ್ನ,ಧನ- ಕನಕಗಳನ್ನಿತ್ತು ಸತ್ಕರಿಸುತ್ತಾನೆ.ಹನುಮನ ಸರದಿ ಬಂದಾಗ ಆತ ವಿನಯದಿಂದ ‘ ಪ್ರಭು ,ಈ ಲೌಕಿಕ ಮುತ್ತು-ರತ್ನ,ವಜ್ರ ಒಡವೆಗಳಿಂದ ನನಗೆ ಆಗಬೇಕಾದುದು ಏನು? ನನಗೆ ಮೋಕ್ಷವನ್ನು ಕರುಣಿಸು’ ಎಂದು ಪ್ರಾರ್ಥಿಸುತ್ತಾನೆ.ಆಗ ರಾಮ’ ಪ್ರಿಯ ಹನುಮ,ನಿನ್ನ ಬೇಡಿಕೆಯನ್ನು ಈಡೇರಿಸಲು ನಾನು ಸಮರ್ಥನಲ್ಲ.ಶಿವನೊಬ್ಬನೇ ಮೋಕ್ಷಕ್ಕೆ ಅಧಿಪತಿ.ಉಳಿದ ದೇವರುಗಳಾರೂ ಮೋಕ್ಷವನ್ನು ಕರುಣಿಸಲಾರರು.ಆದ್ದರಿಂದ ನೀನು ಸ್ವಯಂಭೂವೂ ಅವಿನಾಶಿಯೂ ಆದ ಆ ಪರಶಿವನನ್ನೇ ಮೊರೆಹೋಗು’ ಎನ್ನುತ್ತಾನೆ.’ ಪರಶಿವನ ಅನುಗ್ರಹದ ಮಾರ್ಗವನ್ನು ತೋರಿಸುವವರು ಯಾರು?’ ಎಂದು ಆಂಜನೇಯನು ರಾಮನನ್ನು ಪುನಃ ಪ್ರಶ್ನಿಸಲು ರಾಮನೇ ‘ ವೀರಭದ್ರನನ್ನು ಆಶ್ರಯಿಸು,ಆತನೇ ನಿನ್ನ ಗುರುವಾಗಿ ಮೋಕ್ಷಮಾರ್ಗವನ್ನು ತೋರಿಸುತ್ತಾನೆ’ ಎಂದು ಸಲಹೆ ನೀಡುತ್ತಾನೆ.ವೀರಭದ್ರನ ಪಾದಗಳಡಿ ಆಂಜನೇಯನು ಭಕ್ತಿಯಿಂದ ನಮಸ್ಕರಿಸಿ ಕುಳಿತಿರುವ ಹಳೆಯ ಕಾಲದ ಫೋಟೋಗಳಿವೆ,ಕೆಲವು ಶಿವ ದೇವಾಲಯಗಳಲ್ಲಿ ಈ ಚಿತ್ರವನ್ನು ಕೆತ್ತಿದ್ದಾರೆ ಕೂಡ.

ಆಂಜನೇಯನನ್ನು ಕುರಿತ ಧಾರ್ಮಿಕ ಸಾಹಿತ್ಯಕ್ಕಿಂತ ಹನುಮಂತನ ತಂತ್ರಶಾಸ್ತ್ರಗ್ರಂಥಗಳ ಸಂಖ್ಯೆ ಹೆಚ್ಚಿದೆ.ಗಣಪತಿಯಂತೆ ಭಾರತದಾದ್ಯಂತ ಎಲ್ಲ ಜನರಿಂದ ಪೂಜೆಗೊಳ್ಳುತ್ತಿರುವ ಆಂಜನೇಯನ ಬಗ್ಗೆ ವಿಪುಲವಾಗಿದೆ ಐತಿಹ್ಯ,ಸ್ಥಳಪುರಾಣ ಮತ್ತು ಪೂಜಾವಿಶೇಷಗಳ ಗ್ರಂಥರಾಶಿ.ಪಾಮರರಂತೆ ಪಂಡಿತರೂ ಆಂಜನೇಯನನ್ನು ಪೂಜಿಸಿದ್ದಾರೆ,ರಸಿಕರಂತೆ ಋಷಿಗಳು,ಮಂತ್ರರ್ಷಿಗಳೂ ಪೂಜಿಸಿದ್ದಾರೆ ಹನುಮನನ್ನು.ಆಂಜನೇಯನನ್ನು ಕುರಿತ ಪ್ರಾಚೀನ ಮಂತ್ರಗಳೆಲ್ಲವೂ ಹನುಮನನ್ನು ‘ ರುದ್ರಾತ್ಮಕ,ರುದ್ರಾಂಶ,ಶಿವಪುತ್ರ,ಅಂಜನಾತನಯ,ವಾಯುಪುತ್ರ’ ಎಂದೇ ಸಂಬೋಧಿಸಿವೆಯೇ ಹೊರತು ಆತನನ್ನು ‘ ರಾಮಭಕ್ತ’ ಎಂದು ಗುರುತಿಸಿಲ್ಲ.ಹಳೆಯ ಮಂತ್ರಗಳಲ್ಲಿ ಆಂಜನೇಯನನ್ನು ‘ ರಾಮದೂತ’ ಎಂದು ಸ್ಪಷ್ಟವಾಗಿ ಗುರುತಿಸಲಾಗಿದೆ.ಸುಗ್ರೀವನ ಸಚಿವನಾಗಿದ್ದ ಆಂಜನೇಯನು ರಾಮನ ದೂತನಾಗಿ ಲಂಕೆಗೆ ತೆರಳಿದ್ದನ್ನು ವಾಲ್ಮೀಕಿಯವರೇ ಚಿತ್ರಿಸಿದ್ದರಿಂದ ಅದನ್ನು ಒಪ್ಪಬಹುದು.’ ರಾಮಭಕ್ತ ಹನುಮಂತನ’ ಮಂತ್ರಗಳು ಇತ್ತೀಚಿನವರು ಬರೆದ ಸತ್ತ್ವಹೀನ,ಶಕ್ತಿಹೀನ ಸುಳ್ಳು ಮಂತ್ರಗಳು.

ರಾಮದೂತ ಹನುಮನನ್ನು‌ ಒಪ್ಪಬಹುದು,ರಾಮಭಕ್ತ ಹನುಮಂತನನ್ನು ಒಪ್ಪಲಾಗದು.ತನ್ನ ಜೀವಿತಕಾಲದಲ್ಲಿ ದೇವರಾಗದಿದ್ದ ರಾಮನಿಗೆ ರುದ್ರಾಂಶ ಸಂಭೂತನೂ ವೀರಭದ್ರನ ಶಿಷ್ಯನೂ ಆದ ಆಂಜನೇಯನನ್ನು ಭಕ್ತನನ್ನಾಗಿಸುವುದು ಕಪಟವಲ್ಲವೆ? ಬಸವಣ್ಣನವರು ಬಿಜ್ಜಳನ ಮಂತ್ರಿಯಾಗಿದ್ದುದು ಐತಿಹಾಸಿಕ ಸತ್ಯ.ಹಾಗೆಂದು ಬಸವಣ್ಣನವರನ್ನು ಬಿಜ್ಜಳನ ಭಕ್ತ ಎನ್ನಬಹುದೆ? ಬಸವಣ್ಣನವರು ಶಿವಭಕ್ತರು,ಇಷ್ಟಲಿಂಗೋಪಾಸಕರು ಎಂದೇ ಪ್ರಸಿದ್ಧರಾಗಿದ್ದಾರೆ.ನನ್ನ ಉದಾಹರಣೆಯನ್ನೇ ಹೇಳುವುದಾದರೆ ನಾನು ಸ್ವಯಂ ನಿವೃತ್ತಿ ಪಡೆಯುವ ಪೂರ್ವದಲ್ಲಿ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಹಿರಿಯ ಶ್ರೇಣಿಯ ಉಪಕಾರ್ಯದರ್ಶಿ ಹುದ್ದೆಯಲ್ಲಿದ್ದೆ.ಹಾಗೆಂದು ನನ್ನನ್ನು ಗ್ರಾಮೀಣಾಭಿವೃದ್ಧಿ ಸಚಿವರ ಭಕ್ತ ಇಲ್ಲವೆ ಮುಖ್ಯಮಂತ್ರಿಗಳ ಭಕ್ತ ಎನ್ನಲಾಗುತ್ತದೆಯೆ? ನನ್ನ ವಿಶೇಷತೆ ಇರುವುದು ‘ ಮಹಾಶೈವ ಧರ್ಮ’ ಎನ್ನುವ ಹೊಸ ಧರ್ಮವನ್ನು ಸ್ಥಾಪಿಸಿ ‘ ಮಹಾಶೈವ ಧರ್ಮಪೀಠ’ ಎನ್ನುವ ಧರ್ಮಜಾಗೃತಿಯ ಕೇಂದ್ರವನ್ನು ಕಟ್ಟಿ ಅದರ ಮೂಲಕ ಲೋಕಕಲ್ಯಾಣವನ್ನು ಸಾಧಿಸುತ್ತಿರುವುದಲ್ಲಿ.ನಾನೇ ಆಗಾಗ ಹೇಳುತ್ತಿರುತ್ತೇನೆ–‘ ಕಾಲುಶತಮಾನದ ಸರಕಾರಿ ಸೇವೆಯ ನನ್ನ ವೃತ್ತಿಜೀವನ ನನ್ನ ಮಹಾಜೀವನವನ್ನು ರೂಪಿಸಲು ಪೂರಕವಾದ ಅನುಭವಪ್ರಸಂಗಗಳ ಜೀವನವೇ ಹೊರತು ನನ್ನ ಮಹಾಜೀವನದಲ್ಲಿ — ವೃತ್ತಿ ಜೀವನದಲ್ಲಿ ಎಂತಹ ಉನ್ನತ ಹುದ್ದೆಯಲ್ಲಿದ್ದು,ಏನನ್ನೇ ಸಾಧಿಸಿದ್ದರೂ–ಅದು ಮಹತ್ವದ್ದಲ್ಲ’. ನನ್ನಂತಹ ಆಧುನಿಕ ಕಾಲದ ಯೋಗಿಗಳೇ ವೃತ್ತಿಜೀವನಕ್ಕೆ ಮಹತ್ವಕೊಡುವುದಿಲ್ಲ ಎಂದ ಬಳಿಕ ತ್ರೇತಾಯುಗದ ರುದ್ರಾಂಶ ಸಂಭೂತನೂ ಶ್ರೀ ವೀರಭದ್ರನ ಪ್ರಿಯಶಿಷ್ಯನೂ ಆದ ಹನುಮಂತನನ್ನು ರಾಮನ ಭಕ್ತನಾಗಿ ಬಿಂಬಿಸುವುದು ಎಷ್ಟು ಸರಿ? ಆಂಜನೇಯನು ಮೂಲತಃ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಾವೀರನಾದುದರಿಂದ ಕೀಳುಕುಲದವನಾದ ಅವನನ್ನು ನಾವೇಕೆ ಪೂಜಿಸಬೇಕು ಎನ್ನುವ ಅಹಮಿಕೆಯ ಶಿಷ್ಟವರ್ಗದವರು,ಹನುಮನನ್ನು ಪೂಜಿಸಲೇಬೇಕಾದ ಅನಿವಾರ್ಯತೆಗಾಗಿ ಸೃಷ್ಟಿಸಿದ ಹುಸಿ ಕತೆಯೇ ಹನುಮಂತ ರಾಮಭಕ್ತ ಎನ್ನುವುದು.

About The Author