ಮೂರನೇ ಕಣ್ಣು : ಚುನಾವಣೆಯನ್ನು ಆಟದಸ್ಫೂರ್ತಿಯಲ್ಲಿ ತೆಗೆದುಕೊಳ್ಳಬೇಕು,ಯುದ್ಧೋನ್ಮಾದದಲ್ಲಿ ಅಲ್ಲ : ಮುಕ್ಕಣ್ಣ‌ ಕರಿಗಾರ

ರಾಜ್ಯದ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ ಎರಡೇ ದಿನಗಳು ಬಾಕಿ ಇದ್ದು ಸ್ಪರ್ಧೆಯಲ್ಲಿರುವ ರಾಜಕೀಯ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳು ಗೆಲ್ಲುವ ತಂತ್ರರೂಪಿಸುತ್ತಿದ್ದಾರೆ.ಆಶ್ಚರ್ಯದ ಮಾತೆಂದರೆ ರಾಜಕಾರಣಿಗಳು ಗೆಲ್ಲುವ ತಂತ್ರಗಾರಿಕೆಯನ್ನು ‘ ರಣತಂತ್ರ’ ಎಂದೇ ಕರೆಯುತ್ತಿದ್ದಾರೆ.ಇದು ಪ್ರಜಾಪ್ರಭುತ್ವ ಯುಗ,ಯುದ್ಧಗಳ ಕಾಲವಲ್ಲ,ರಣತಂತ್ರವನ್ನು ರೂಪಿಸುವುದಾದರೂ ಹೇಗೆ? ರಣತಂತ್ರವೆಂದರೆ ಯುದ್ಧದಲ್ಲಿ ಗೆಲ್ಲಲು ಹಿಂದೆ ರಾಜ ಮಹಾರಾಜರುಗಳು,ಅವರ ಸೇನಾಧಿಪತಿಗಳು ರೂಪಿಸುತ್ತಿದ್ದ ತಂತ್ರ.

ಚುನಾವಣೆಗಳನ್ನು ಯುದ್ಧ ಎಂದು ಭಾವಿಸಬಾರದು,ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಜೆಗಳು ಪಾಲ್ಗೊಳ್ಳುವಿಕೆಯ ಆರೋಗ್ಯಕರ ಪ್ರಕ್ರಿಯೆ ಅದು.ಚುನಾವಣೆಗಳನ್ನು‌ ಕ್ರೀಡಾಸ್ಫೂರ್ತಿಯಲ್ಲಿ ತೆಗೆದುಕೊಳ್ಳಬೇಕು.ಆಟದಲ್ಲಿ ಗೆಲುವು- ಸೋಲು ಸಹಜ.ಆಟದಲ್ಲಿ ಎಲ್ಲರೂ ಗೆಲ್ಲುವುದಿಲ್ಲ.ಗೆದ್ದವರೇ ಸದಾ ಗೆಲ್ಲುತ್ತಾರೆ‌ ಎಂದೂ ಹೇಳುವಂತಿಲ್ಲ.ಇಂದು ಸೋತವನು ನಾಳೆ ಗೆಲ್ಲಬಹುದು.ಗೆಲ್ಲುವ ಭರವಸೆಯಿಂದ ಆಡಬೇಕಷ್ಟೆ.ಚುನಾವಣೆಯನ್ನು ಮತದಾರರು,ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಎಲ್ಲರೂ ಆಟವೆಂದೇ ಭಾವಿಸಿ,ಕ್ರೀಡಾಮನೋಭಾವನೆಯಿಂದ ಸ್ವೀಕರಿಸಬೇಕು,ಪಾಲ್ಗೊಳ್ಳಬೇಕು.ಯುದ್ಧದಂತೆ ಪರಿಗಣಿಸಿದರೆ ಅನಾಹುತಗಳಾಗುತ್ತವೆ.ಇಂದಿನ ದಿನಪತ್ರಿಕೆಗಳಲ್ಲಿ ವರದಿಯಾಗಿರುವಂತೆ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರುಗಳ ಮೇಲೆ ಹಲ್ಲೆ,ಪ್ರತಿಹಲ್ಲೆಗಳಾಗಿವೆ,ಎರಡು ಪಕ್ಷಗಳ ಕಾರ್ಯಕರ್ತರುಗಳು ಪರಸ್ಪರ ಸಂಘರ್ಷಕ್ಕಿಳಿದಿದ್ದಾರೆ,ಹೊಡೆದಾಡಿದ್ದಾರೆ.ಮತದಾನಕ್ಕೆ ಮುಂಚಿನ ದಿನಗಳಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂಬಂತೆ ಆಗಿದೆ.ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು,ಪಕ್ಷಗಳ ಕಾರ್ಯಕರ್ತರುಗಳು ಚುನಾವಣೆಯನ್ನು ಯುದ್ಧ ಎಂಬಂತೆ ಭಾವಿಸಿರುವುದರಿಂದ ವಿರೋಧಿಗಳ ಮೇಲೆ ಹಲ್ಲೆ ಮಾಡಿಯಾದರೂ ಸರಿ ಅವರನ್ನು ಬಗ್ಗು ಬಡಿದು ಗೆಲ್ಲಬೇಕು ಎನ್ನುವ ಸೇಡಿನ ಮನೋಭಾವನೆಯು ಇಂತಹ ಕೃತ್ಯಗಳ ಕಾರಣ.ಚುನಾವಣೆ ಮತ್ತು ಅದರ ಮಹತ್ವದ ಬಗ್ಗೆ ಜನರಲ್ಲಿ ಸರಿಯಾದ ತಿಳಿವಳಿಕೆ ಇಲ್ಲದುದೆ ಇಂತಹ ಹಲ್ಲೆಗಳು,ಗಲಭೆಗಳ ಕಾರಣ.

ಗ್ರಾಮೀಣ ಪ್ರದೇಶದಲ್ಲಿ ಚುನಾವಣೆಗಳು ದ್ವೇಷ ಮತ್ತು ಸೇಡಿನ ವಾತಾವರಣವನ್ನುಂಟುಮಾಡಿ ಅಕ್ಕಪಕ್ಕದ ಮನೆಯವರೇ ವೈರಿಗಳಾಗುವಂತಹ ಪರಿಸ್ಥಿತಿ ಉಂಟಾಗುತ್ತದೆ.ಆ ಪಕ್ಷ,ಈ ಪಕ್ಷ ಎಂದು ಜನರು ಬೇರ್ಪಡುತ್ತಾರೆ,ಮನಸ್ಸುಗಳು ಒಡೆಯುತ್ತವೆ.ರಾಜಕಾರಣಿಗಳಿಗೆ ತಾವು ಗೆಲ್ಲುವುದೇ ಮುಖ್ಯವಾಗಿರುತ್ತದೆಯೇ ಹೊರತು ಹಳ್ಳಿಗಳ ಜನರು ಪರಸ್ಪರ ವೈರಿಗಳಾಗುವಂತಹ ಸಾಮಾಜಿಕ ವೈಷಮ್ಯವನ್ನುಂಟು ಮಾಡಿದ ಬಗ್ಗೆ ದುಃಖವಾಗಲಿ,ವಿಷಾದವಾಗಲಿ ಅವರಲ್ಲಿ ಉಂಟಾಗುವುದಿಲ್ಲ.ಸುಳ್ಳು ಕೇಸುಗಳನ್ನು ದಾಖಲಿಸುವುದು,ಬೈದಾಡುವುದು,ಹೊಡೆದಾಡುವುದು ಹಳ್ಳಿಗಳಲ್ಲಿ ಸಾಮಾನ್ಯ.ಚುನಾವಣೆಗಳ ಬಗೆಗೆ ಸರಿಯಾದ ತಿಳಿವಳಿಕೆ‌ ಇದ್ದರೆ ಇಂತಹ ಅಹಿತಕರಪ್ರಸಂಗಗಳು ಉಂಟಾಗುವುದಿಲ್ಲ.ಮತಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗವು ಸ್ವೀಪ್ ಕಾರ್ಯಕ್ರಮಗಳನ್ನು ನಡೆಸುತ್ತಿದೆ,ಅದರಲ್ಲಿ ಗ್ರಾಮಗಳಲ್ಲಿ ಚುನಾವಣೆಯ ನೆಪದಲ್ಲಿ ಸಾಮರಸ್ಯ ಹಾಳುಮಾಡಿಕೊಳ್ಳದಂತೆ ಸಲಹೆ ನೀಡಬೇಕು.ಚುನಾವಣೆಗಳು ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಹಜ ಪ್ರಕ್ರಿಯೆಗಳೆಂದೂ ಅತಿಯಾದ ಭಾವುಕತೆಯಿಂದ ವರ್ತಿಸಬಾರದೆಂದು ಜನರಲ್ಲಿ ಅರಿವು ಮೂಡಿಸಬೇಕು.ರಾಜಕಾರಣಿಗಳು ಸಹ ಚುನಾವಣೆಗಳ ಸೋಲು ಗೆಲುವುಗಳು ಗ್ರಾಮಜೀವನದ ಮೇಲೆ ಕೆಟ್ಟಪರಿಣಾಮ ಬೀರದಂತೆ ನೋಡಿಕೊಳ್ಳಿ ಎಂದು ಜನರಿಗೆ ಬುದ್ಧಿ ಹೇಳಬೇಕು.ರಾಜಕಾರಣಿಗಳಲ್ಲಿ ಇಂತಹ ಸದ್ಬುದ್ಧಿ ಉಳ್ಳವರು ತೀರಕಡಿಮೆ.ಗ್ರಾಮಗಳ ಹಿತಕಾಯುವ ಮುಖಂಡರುಗಳೂ ಇಲ್ಲ ಈಗ.ಹದಿಹರೆಯದ ತರುಣರಿಗೆ‌ ಮತದಾನದ ಹಕ್ಕು ದೊರೆತದ್ದರಿಂದ ‘ ಅಂಕೆಯಲ್ಲಿಲ್ಲದ ಕಪಿ ಲಂಕೆಯನು ಸುಟ್ಟಿತು’ ಎಂಬಂತೆ ಅವರು ಆಡಿದ್ದೇ ಆಟ,ಮಾಡಿದ್ದೇ ಮಾಟ ಎನ್ನುವಂತಾಗಿ ಹಳ್ಳಿಗಳು ಹಾಳಾಗುತ್ತಿವೆ.ಹಳೆಯ ಕಾಲದ ಜನರು ‘ ಚುನಾವಣೆ ಯಾಕಾದರೂ ಬಂತೊ’ ಎಂದು ಶಪಿಸುವುದನ್ನು ಕೇಳಬಹುದು.ಚುನಾವಣೆಯು ಗ್ರಾಮಜೀವನವನ್ನು‌ ಒಡೆಯುತ್ತದೆ ಎನ್ನುವ ಕಾರಣ ಮತ್ತು ಕಾಳಜಿಯಿಂದ ಹಿರಿಯರು ಹೀಗೆ‌ ಉದ್ಗರಿಸುತ್ತಾರಾದರೂ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಅನಿವಾರ್ಯ,ಅವುಗಳನ್ನು ಕ್ರೀಡಾಸ್ಫೂರ್ತಿಯಲ್ಲಿ ತೆಗೆದುಕೊಳ್ಳಬೇಕು,ರಾಜಕಾರಣಿಗಳಿಗಾಗಿ ಗ್ರಾಮಸ್ಥರು ಕಚ್ಚಾಡಬಾರದು ಎಂದು ತಿಳಿವಳಿಕೆ ಮೂಡಿಸಬೇಕಿದೆ.

ಕೆಲವು ಕಟು ಸತ್ಯಗಳನ್ನು ಕೂಡ ಮತದಾರರು ಅರ್ಥ ಮಾಡಿಕೊಳ್ಳಬೇಕು.ಯಾರು ಗೆದ್ದರೂ ತಮ್ಮ ಹಣೆಬರಹವೇನೂ ಬದಲಾಗುವುದಿಲ್ಲ,ಹೊಟ್ಟೆ ಬಟ್ಟೆಗಳಿಗಾಗಿ ದಿನದುಡಿಯುವ ಕಾಯಕ ತಪ್ಪದು,ಹೊಲದಲ್ಲಿ ಉಳುಮೆ ಮಾಡಲೇಬೇಕು,ಮಕ್ಕಳ ಮದುವೆಗಾಗಿ ಊರಸಿರಿವಂತರಲ್ಲಿ ಸಾಲ ಕೇಳಲೇಬೇಕು.ಪಾಡಂತೂ ಇದ್ದುದೆ.’ ಯಾವ ರಾಜ ಬಂದರೇನು,ರಾಗಿ ಬೀಸುವುದು ತಪ್ಪದು’ ಎನ್ನುವ ಗಾದೆ ಮಾತು ಮೈಸೂರು ಭಾಗದಲ್ಲಿದೆ,ಮೈಸೂರು,ಮಂಡ್ಯ,ಹಾಸನ,ಶಿವಮೊಗ್ಗ ಜಿಲ್ಲೆಗಳ ಮುಖ್ಯ ಆಹಾರ ರಾಗಿ ಆಗಿದ್ದು ರೈತರಿಗೆ ರಾಗಿ ಬೆಳೆಯೇ ಜೀವನಾಧಾರ.ಬಹುಶಃ ಹಿಂದಿನ ಕಾಲದಲ್ಲಿ ರಾಜ ಮಹಾರಾಜರುಗಳು ಸಿಂಹಾಸನಕ್ಕೆ ಕಚ್ಚಾಡಿ ಒಬ್ಬರು ಸೋತು ಮತ್ತೊಬ್ಬರು ಸಿಂಹಾಸನಕ್ಕೆ ಬರುತ್ತಿದ್ದ ಸಂದರ್ಭದಲ್ಲಿ‌ ಈ ಗಾದೆ ಹುಟ್ಟಿರಬಹುದಾದರೂ ಇಂದಿಗೂ ಈ ಗಾದೆ ಮಾತು ಪ್ರಸ್ತುತವಿದೆ.ಯಾವ ಶಾಸಕ ಬಂದರೇನು ಜನರ ಕಷ್ಟವೇನೂ ಪರಿಹಾರ ಆಗುವುದಿಲ್ಲ.ಚುನಾವಣೆಯಲ್ಲಿ ಗೆಲ್ಲಲು ಇಪ್ಪತ್ತು- ಮುವ್ವತ್ತು ಕೋಟಿಗಳನ್ನು ಖರ್ಚುಮಾಡುವ ಮಹಾನುಭಾವರುಗಳು ಅದೇ ಹಣವನ್ನು ಹಳ್ಳಿಗಳ ಬಡವರ ಉದ್ಧಾರಕ್ಕೆ ,ಬಡವರ ಜೀವನಮಟ್ಟವನ್ನು ಎತ್ತರಿಸುವುದಕ್ಕೆ ಬಳಸುವುದಿಲ್ಲ.ತಮ್ಮ ಸ್ವಂತ ಹಣದಿಂದ ಬಡಜನರ ಕಷ್ಟಗಳಿಗೆ ಸ್ಪಂದಿಸುವ ರಾಜಕಾರಣಿಗಳು ಇಲ್ಲ.ಮತ್ತೊಂದು ಕಟುಸತ್ಯ ಎಂದರೆ ಚುನಾವಣೆಯ ಕಾಲದಲ್ಲಿ ಜನರ ನಡುವೆ ಜಗಳ ಹಚ್ಚುವ ರಾಜಕಾರಣಿಗಳು ಚುನಾವಣೆನಂತರ ಒಂದಾಗುತ್ತಾರೆ,ಬೆಂಗಳೂರಿನಲ್ಲಿ ಪರಸ್ಪರರು ಸಂಧಿಸಿ,ಸ್ನೇಹ ಮೆರೆಯುತ್ತಾರೆ.ಅದು ಆಗಬೇಕು‌ ಕೂಡ.ರಾಜಕಾರಣದ ಹೆಸರಿನಲ್ಲಿ ಯಾರು ಯಾರೊಂದಿಗೂ ಆಜನ್ಮವಿರೋಧ ಕಟ್ಟಿಕೊಳ್ಳಬಾರದು.ರಾಜಕಾರಣವು ಬದುಕಿನ ಒಂದಂಗವಷ್ಟೆ.ಬದುಕು ರಾಜಕಾರಣಕ್ಕಿಂತ ದೊಡ್ಡದು.ಸಾಮಾಜಿಕ ಬಾಂಧವ್ಯದೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳಬೇಕು.ಚುನಾವಣೆ ಬಂದಾಗ ಮಾತ್ರ ಚುನಾವಣೆ,ಉಳಿದ ಸಮಯದಲ್ಲಿ ನಾವು ನೀವು ಒಂದು,ನಮಗೆ ನಾವಲ್ಲದೆ ಬೇರೊಬ್ಬರು ಆಸರೆಯಾಗರು ಎನ್ನುವ ತಿಳಿವಳಿಕೆಯಲ್ಲಿ ಗ್ರಾಮಸ್ಥರು ಮತ್ತು ನಗರವಾಸಿಗಳು ಮುನ್ನಡೆಯಬೇಕಿದೆ.

About The Author