ಮೂರನೇ ಕಣ್ಣು : ಮತ’ ದಾನ’ ವಲ್ಲ,ವಿವೇಚನೆಯಿಂದ ಚಲಾಯಿಸಿ ! : ಮುಕ್ಕಣ್ಣ ಕರಿಗಾರ

ಬರುವ ಮೇ 10 ರ ಬುಧವಾರದಂದು ರಾಜ್ಯದ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ.ದಾನ- ಧರ್ಮಗಳ ಸಂಸ್ಕೃತಿಯ ಭಾರತದಲ್ಲಿ ಮತನೀಡುವುದೂ ‘ ದಾನ’ ವೆ! ಇಂಗ್ಲಿಷಿನ Vote ಶಬ್ದವನ್ನು ಕನ್ನಡದಲ್ಲಿ ‘ ಮತದಾನ’ ಎಂದು ಅನುವಾದಿಸಿದ್ದಾರೆ ಹಳೆಯ ಜನರು.Vote ಎಂದರೆ ‘ಮತಚಲಾವಣೆ’ ಇಲ್ಲವೆ ‘ ಮತನೀಡುವುದು’ ಎನ್ನುವುದೇ ಸರಿ,ಮತದಾನ ಸೂಕ್ತವಲ್ಲ.ಹೇಳಿಕೇಳಿ ನಮ್ಮದು ದಾನ- ಧರ್ಮಗಳ ದೇಶ,ಔದಾರ್ಯಕ್ಕೆ ಇಲ್ಲಿ ಎಲ್ಲಿಲ್ಲದ ಮಹತ್ವ.ಅದಕ್ಕೆಂದೇ ಉದಾರಿಗಳಾದ ಕನ್ನಡಿಗರು ಮತನೀಡುವುದನ್ನು ‘ ದಾನ’ ಎಂದೇ ಪರಿಗಣಿಸಿದ್ದಾರೆ.

ದಾನದ ಬಗ್ಗೆಯೂ ಕೂಡ ನಮ್ಮ ಹಿರಿಯರು ಎಚ್ಚರಿಕೆವಹಿಸಿದ್ದಾರೆ ಎನ್ನುವುದನ್ನು ಮರೆಯಬಾರದು.ದಾನದ ಮಹತ್ವದ ಬಗ್ಗೆ ನಮ್ಮ ಪುರಾಣಗಳು ಸಾಕಷ್ಟು ವಿವರಗಳನ್ನು ನೀಡುತ್ತವೆ.’ ದಾನಸಂಸ್ಕೃತಿ’ ಯನ್ನು ಕಟ್ಟಿದ ಕಾಲ ಒಂದಿತ್ತು ಹಿಂದೆ.ದಾನವು ಕೆಲವರ ಜೀವನೋಪಾಯಕ್ಕೆ ಅನಿವಾರ್ಯವಾಗಿತ್ತು,ಆಸರೆಯಾಗಿತ್ತು.ವೇದ ಮತ್ತು ಉಪನಿಷತ್ತುಗಳ ಕಾಲದ ಋಷಿಗಳು ಸ್ವಯಂ ತಪೋಸಾಮರ್ಥ್ಯದಿಂದ ತಮಗೆ ಬೇಕಾದುದನ್ನು ಪಡೆಯುತ್ತಿದ್ದರು.ಪುರಾಣಗಳಲ್ಲಿ ಬರುವ ಕಾಮಧೇನು ಮತ್ತು ಕಲ್ಪವೃಕ್ಷಗಳು ಋಷಿಗಳ ಯೋಗಸಾಮರ್ಥ್ಯದ ಸಾಂಕೇತಿಕರೂಪಗಳು.ಹಿಮಾಲಯದ ಎತ್ತರದ ಸ್ಥಾನಗಳಾದ ಸುಮೇರು,ಸಿದ್ಧಾಶ್ರಮ ಮತ್ತು ಜ್ಞಾನಗಂಜಾಶ್ರಮದ ಋಷಿಗಳು ಮನುಷ್ಯರ ನೆರವಿಲ್ಲದೆ ಇಂದಿಗೂ ತಮ್ಮ ತಪೋಬಲದಿಂದಲೇ ತಮಗೆ ಬೇಕಾದುದನ್ನು ಪಡೆಯುತ್ತಿದ್ದಾರೆ.ಇದು ಕಾಲ್ಪನಿಕ ಸಂಗತಿಯಲ್ಲ,ಆಧ್ಯಾತ್ಮಿಕ ಪಥದಲ್ಲಿ ಎತ್ತರದ ಸಾಧನೆಮಾಡಿದವರ ಅನುಭವಕ್ಕೆ ಬರುವ ನಿತ್ಯಸತ್ಯ.ಪುರಾಣಗಳ ಕಾಲಕ್ಕೆ ಬರುವ ಹೊತ್ತಿಗಾಗಲೇ ಋಷಿಗಳ ಸತ್ತ್ವಸಾಮರ್ಥ್ಯ ಕುಂದಿತ್ತು,ದಟ್ಟವಾದ ಕಾಡುಗಳಿಂದ ಹೊರಬಂದು ಪುರ,ನಗರಗಳಿಗೆ ಸಮೀಪದ ಕಾಡಂಚಿನಲ್ಲಿ ವಾಸಿಸತೊಡಗಿದರು.ಅವರ ಜೀವನ ನಿರ್ವಹಣೆಗೆ ಪುರದಜನರು ನೆರವಾಗತೊಡಗಿದರು.ಜನರಿಂದ ಪಡೆದ ಪ್ರತಿಫಲಕ್ಕೆ ತಾವು ಏನನ್ನಾದರೂ ಮಾಡಬೇಕೆನ್ನಿಸಿ ಋಷಿಗಳು ಪುರಗಳಿಗೆ ಏನನ್ನಾದರೂ ಕೊಡುಗೆ ನೀಡುತ್ತಿದ್ದರು,ಪುರದ ಹಿತ ಕಾಯುತ್ತಿದ್ದರು.ಹೀಗೆ ಪುರದಹಿತಕಾಯುತ್ತಿದ್ದ ಪುರಾಣಗಳ ಕಾಲದ ಋಷಿಗಳೇ ‘ ಪುರೋಹಿತ’ ರಾದರು.ಪುರೋಹಿತ ಶಬ್ದಕ್ಕೆ ಈಗಿನವರು ಏನುಬೇಕಾದರೂ ಅರ್ಥನೀಡಲಿ ಆದರೆ ‘ಪುರೋಹಿತ’ ಶಬ್ದ ಹುಟ್ಟಿದ್ದು ಮಾತ್ರ ತಮ್ಮ ಜೀವನಾವಶ್ಯಕತೆಗಳಿಗಾಗಿ ಜನಪದಗಳೆಂಬ ಪುರಗಳನ್ನು ಆಶ್ರಯಿಸಿದ್ದ ಋಷಿಗಳಿಂದ.ಋಷಿಗಳ ಸಾತ್ತ್ವಿಕ ಬಲ,ತಪೋ ಸಾಮರ್ಥ್ಯವನ್ನು ಅರಿತಿದ್ದ ಅರಸರುಗಳು ಋಷಿಗಳ ಜೀವನ ನಿರ್ವಹಣೆ ಬೇಕಾದ ದವಸ- ಧಾನ್ಯ,ಧನ- ಕನಕಾದಿಗಳನ್ನು ನೀಡತೊಡಗಿದರು,ಕೆಲವು ಗ್ರಾಮಗಳನ್ನು ಉಂಬಳಿ ನೀಡತೊಡಗಿದರು.ಉಂಬಳಿ ನೀಡಿದ ಗ್ರಾಮಗಳ ಕಂದಾಯ ಇಲ್ಲವೆ ತೆರಿಗೆಯು ಋಷಿಗಳ ಆಶ್ರಮಕ್ಕೆ ಸಲ್ಲುತ್ತಿತ್ತು.ಹಾಗೆಯೇ ನದಿಬಯಲಿನ ಪ್ರದೇಶ,ಹಣ್ಣುಗಳಿದ್ದ ವನ,ಉದ್ಯಾನ ಮೊದಲಾವುಗಳನ್ನು ಅರಸರು ಋಷಿಗಳಿಗೆ ನೀಡುತ್ತಿದ್ದರು.ಅರಸರ ಕೊಡುಗೆಗಳೇ ‘ ದಾನ’ ವಾಗಿ ಅದೊಂದು ಧರ್ಮವಾಯಿತು,ಶಾಸ್ತ್ರವಾಯಿತು,ಸಂಪ್ರದಾಯವೂ ಆಯಿತು.ಋಷಿಗಳು ನೇರವಾಗಿ ರಾಜಾಸ್ಥಾನಗಳಿಗೆ ಬಂದು ತಮಗೆ ಬೇಕುಬೇಕಾದುದನ್ನು ಪಡೆಯುತ್ತಿದ್ದರು.ಪುರಾಣಗಳ ಕಾಲದಿಂದ ಬಂದ ದಾನವು ನಮ್ಮ ದೇಶದ ‘ ಪುರಾತನ ಇತಿಹಾಸ’ ವುಳ್ಳ ಸದಾಚಾರವೆ! ಆದರೆ ಸದಾಚಾರವು ದುರಾಚಾರಕ್ಕೆ ಆಸ್ಪದ ನೀಡಬಾರದಲ್ಲ.ಅದಕ್ಕೆಂದೇ ನಮ್ಮ ಪೂರ್ವಿಕರು ದಾನ ಮಾಡುವುದನ್ನು ಒತ್ತಾಯಿಸುತ್ತಲೂ ಅನರ್ಹರಿಗೆ,ಅಯೋಗ್ಯರಿಗೆ ದಾನ ಮಾಡಬೇಡಿ ಎಂದು ‘ ಅಪಾತ್ರದಾನ’ ಕೂಡದು ಎಂದರು.

‌ ‘ಅಪಾತ್ರದಾನ’ ಎಂದರೆ ಅರ್ಹರಲ್ಲದವರಿಗೆ,ಅಯೋಗ್ಯರಿಗೆ ದಾನ ಮಾಡುವುದು.ದಾನ ಮಾಡುವುದು ಹೇಗೆ ಔದಾರ್ಯವೋ ಹಾಗೆ ದಾನಪಡೆದವನೂ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವ ಆಶಯವಿದೆ.ಬೀದಿಯಲ್ಲಿ ಭಿಕ್ಷೆಬೇಡುವವರು ಭಿಕ್ಷೆಯ ಹಣದಲ್ಲಿ ಕುಡಿಯುತ್ತಾರಲ್ಲ,ಇದು ಅಪಾತ್ರದಾನ.ಭಿಕ್ಷುಕರನ್ನು ನೋಡಿ ಕರುಳು ಚುರ್ ಎಂದು ಕೈಯ್ಯಲಾದಷ್ಟು ಕೊಟ್ಟುಕಳಿಸುವ ದಾನಗುಣವು ಭಿಕ್ಷುಕರ ಕುಡಿತದ ಚಟಕ್ಕೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ.ಈಗ ಚುನಾವಣೆಯ ಕಾಲದಲ್ಲಿ ನಿಮ್ಮ ಶಾಸಕರಾಗಬಯಸುವವರು ನಿಮ್ಮ ಮನೆಗಳಿಗೆ ಬರುತ್ತಿದ್ದಾರೆ– ‘ ಭವತಿ ಭಿಕ್ಷಾಂದೇಹಿ’ ಎನ್ನುತ್ತಿದ್ದಾರೆ.ಇವರ ಭಿಕ್ಷೆಯ ಭಾಷೆ ಬೇರೆ ಅಷ್ಟೆ.ನಿಮ್ಮ ಮಗನಾಗಿ ಸೇವೆ ಮಾಡುತ್ತೇನೆ,ನಿಮ್ಮ ಮನೆಬಾಗಿಲು ಕಾಯುತ್ತೇನೆ,ನಿಮ್ಮ ಮನೆಯ ಸಗಣಿ ಬಳಿಯುತ್ತೇನೆ ಎಂದೆಲ್ಲ ಬಣ್ಣದ ಮಾತುಗಳನ್ನು ಆಡುತ್ತಾರೆ.ಗೆದ್ದು ಬಂದ ಬಳಿಕ ನೀವು ಮುಂದೆ ಇದ್ದರೂ ನಿಮ್ಮನ್ನು ಮಾತನಾಡಿಸುವುದಿಲ್ಲ,ಐದು ವರ್ಷಗಳ ತನಕ ನಿಮ್ಮ ಊರಿಗೂ ಕಾಲಿಡದ ಪುಣ್ಯಾತ್ಮರುಗಳು ಇದ್ದಾರೆ.ತಮ್ಮ ಮನೆಗಳಿಗೆ ಎಂತೆಂತಹದೋ ಕೀಲಿಗಳನ್ನು ಮಾಡಿಸುವ ಜನರು ನಿಮ್ಮ ಮನೆಬಾಗಿಲು ಕಾಯುತ್ತಾರೆಯೆ! ನಿಮ್ಮನ್ನು ಮರುಳು ಮಾಡಲು ಅಂತಹ ಬಣ್ಣದ ಮಾತುಗಳನ್ನಾಡುತ್ತಾರೆ.ಆದ್ದರಿಂದ ಮತದಾರರು ಬುದ್ಧಿವಂತರಾಗಬೇಕು,ಎಚ್ಚರಿಕೆಯಿಂದ ಮತಚಲಾಯಿಸಬೇಕು.

ಮತವು ಅತ್ಯಂತ ಪವಿತ್ರವಾದ ವಸ್ತು,ಶಕ್ತಿಶಾಲಿಯಾದ ಅಸ್ತ್ರ.ಅದನ್ನು ಅವರಿವರ ಮಾತುಕೇಳಿ ಚಲಾಯಿಸಬೇಡಿ.ಇಲ್ಲವೆ ದಾನ ಎಂದು ಕಂಡವರ ಬಗ್ಗೆ ಔದಾರ್ಯ ತೋರಬೇಡಿ.ನಿಮ್ಮ ಒಂದು ಮತವೂ ರಾಜ್ಯದ ಹಿತಕಾಯಬಲ್ಲದು ಎಂಬುದನ್ನು ಲಕ್ಷ್ಯದಲ್ಲಿರಿಸಿಕೊಂಡು ಓಟು ಹಾಕಿ.ನೀವು ಮತಹಾಕುವ ವ್ಯಕ್ತಿ ನಿಮ್ಮ ಹಿತಕಾಯುವಂತೆ ಇರಬೇಕು,ನಿಮ್ಮ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರುಕೋಟಿಗಳನ್ನು ಲೂಟಿಹೊಡೆದು ಹಣಬಲದಿಂದಲೇ ನಿಮ್ಮನ್ನು ಖರೀದಿಸುತ್ತೇನೆ ಎನ್ನುವ ಉದ್ಧಟತನವುಳ್ಳ ದುಷ್ಟರಿಗೆ ಮತಹಾಕಬೇಡಿ.ನಿಮ್ಮೊಂದಿಗೆ ಸೌಜನ್ಯದಿಂದ ವರ್ತಿಸುವ,ನಿಮ್ಮ ಮತ್ತು ನಿಮ್ಮ‌ ಮತಕ್ಷೇತ್ರದ ಹಿತಕ್ಕೆ ಬದ್ಧರಿರುವ ವ್ಯಕ್ತಿಗಳಿಗೆ ಮತನೀಡಿ.ನೀವು ನೀಡುವ ಮತ ವಿಧಾನಸಭೆಯಲ್ಲಿ ನಿಮ್ಮ ಕ್ಷೇತ್ರದ ಶಕ್ತಿ ತೋರಿಸುವಂತೆ ಇರಲಿ,ನಿಮ್ಮ ಹೆಸರಿನಲ್ಲಿ ಶಕ್ತಿ ಪಡೆದು ಸರಕಾರಿ ಅಧಿಕಾರಿಗಳ ಮೇಲೆ ದರ್ಪ,ಪೋಗರು ತೋರಿ ಲೂಟಿ ಮಾಡುವವರಿಗೆ ಶಕ್ತಿ ನೀಡಬೇಡಿ.ನೀವು ನೀಡುವ ಮತ ನಿಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿ; ನಿಮ್ಮ ಮತ ಶಾಸಕರಾದವರ ಜಾತಿಹಿತ ,ಸ್ವಜನರ ಹಿತ ಪೊರೆಯುವುದಕ್ಕೆ ಕಾರಣವಾಗದಿರಲಿ.ನೀವು ನೀಡುವ ಮತ ನಿಮ್ಮ ಊರು,ಗ್ರಾಮಗಳಲ್ಲಿ ಏನಾದರೂ ಬದಲಾವಣೆ ತರುವಂತೆ ಇರಲಿ ಬದಲಿಗೆ ಮತಹಾಕಿದ ತಪ್ಪಿಗೆ ನೀವೇ ಶಾಸಕರಾದವರ ಬಳಿ ತಲೆತೂರಿಸುವಂತೆ ಆಗಬಾರದು.

ಮತದಾರರು ನಿಜವಾಗಿಯೂ ಪ್ರಭುಗಳಾಗಬೇಕಾದರೆ ರಾಜಕೀಯ ಪಕ್ಷಗಳ ಆಮಿಷಕ್ಕೆ ಬಲಿಯಾಗಬಾರದು,ಅಭ್ಯರ್ಥಿಗಳು ತೋರಿಸುವ ನೋಟುಗಳ ಆಸೆಗೆ ಮೋಸ ಹೋಗಬಾರದು.ಎಲ್ಲ ರಾಜಕೀಯ ಪಕ್ಷಗಳು ಒಂದು ಓಟಿಗೆ ಇಷ್ಟು ಎಂದು ನಿರ್ಧರಿಸಿ ಹಣ ನೀಡುತ್ತಿವೆ.ಅಭ್ಯರ್ಥಿಗಳಿಂದ ಅವರ ಬಾಲಗೋಂಚಿಗಳಿಂದ ನೀವು ಮತಕ್ಕಾಗಿ ಹಣಪಡೆಯುವುದು ನಿಮ್ಮ ಸ್ವಾಭಿಮಾನವನ್ನು ಒತ್ತಿ ಇಟ್ಟಂತೆ.ಇಂದು ನಿಮಗೆ ಓಟಿಗೆ ಐದುನೂರು,ಸಾವಿರ ರೂಪಾಯಿಗಳನ್ನು‌ ಕೊಡುವ ಮಹಾನುಭಾವರುಗಳು ನಾಳೆ ಗೆದ್ದುಬಂದೊಡನೆ ಹಾಡುಹಗಲೇ ಲೂಟಿಗೆ ಇಳಿಯುತ್ತಾರೆ.ಸಾರ್ವಜನಿಕರ ಆಸ್ತಿಯನ್ನೆಲ್ಲ ಕೊಳ್ಳೆಹೊಡೆಯುತ್ತಾರೆ.ಮರುಳು ಮಾಫಿಯಾ,ಕ್ವಾರಿ ಮಾಫಿಯಾ,ರಿಯಲ್ ಎಸ್ಟೇಟ್ ಮಾಫಿಯಾಗಳಂತಹ ಹತ್ತುಹಲವು ಮಾಫಿಯಾಗಳು ಹುಟ್ಟಿ ನಿಮ್ಮ ನೆಲ ಜನ ಕಾಡು,ಕಾನನಗಳನ್ನು ಹಾಳು ಮಾಡಿ ನಿಮ್ಮನ್ನು,ನಿಮ್ಮ ಸಂತತಿಯನ್ನು ದುಃಖದ ಕೂಪಕ್ಕೆ ತಳ್ಳುತ್ತವೆ.ಇಂತಹ ಅನಾಹುತಗಳು ಆಗಬಾರದು ಎಂದರೆ ನೀವೇ ನಿಮ್ಮ ಗ್ರಾಮ,ಪುರಗಳ ಹಿತಕಾಯುವ ‘ ಪುರೋಹಿತರುಗಳು’ ಆಗಬೇಕು.ಗ್ರಾಮದ ಅಭಿವೃದ್ಧಿ,ಪುರದ ಹಿತ ಮುಖ್ಯವಾಗಲಿ.ಮತಕ್ಕೆ ಮಾರಿಕೊಳ್ಳಬೇಡಿ,ಪುರದ ಹಿತಕಾಯಿರಿ,ಉತ್ತಮರನ್ನು ಗೆಲ್ಲಿಸಿ,ಕರ್ನಾಟಕದ ಸ್ವಾಭಿಮಾನ,ಸಂಪದಭಿವೃದ್ಧಿ ಮತ್ತು ರಾಜ್ಯದ ಸಮಸ್ತರ ಶಾಂತಿ,ಕಲ್ಯಾಣಗಳನ್ನು ಲಕ್ಷ್ಯದಲ್ಲಿರಿಸಿಕೊಂಡು ಮತನೀಡಿ.

About The Author