ಮೂರನೇ ಕಣ್ಣು : ಚುನಾವಣೆ; ನಮ್ಮಲ್ಲಿ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ : ಮುಕ್ಕಣ್ಣ ಕರಿಗಾರ

ರಾಜ್ಯದ ವಿಧಾನಸಭಾ ಚುನಾವಣೆಯ ಕಾರಣದಿಂದ ಜನರಲ್ಲಿ ಜಾಗೃತಿಯನ್ನುಂಟು ಮಾಡಬೇಕುಎನ್ನುವ ಉದ್ದೇಶದಿಂದ ನಿತ್ಯವೂ ನಾನು ಬರೆಯುತ್ತಿರುವ ಲೇಖನಗಳನ್ನು ಓದಿ, ಮೆಚ್ಚಿ,ಸಹಮತವ್ಯಕ್ತಪಡಿಸುತ್ತಿರುವ ‘ಪ್ರಜಾವಾಣಿ’ ದಿನಪತ್ರಿಕೆಯ ಯಾದಗಿರಿ ಜಿಲ್ಲಾ ವರದಿಗಾರ ಪ್ರವೀಣಕುಮಾರ ಬಿ.ಜಿ.ಅವರು ‘ ಚುನಾವಣೆಗಳು‌ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೇಗೆ ನಡೆಯುತ್ತವೆ ಸರ್? ಎಂದು ಕೇಳಿದ್ದಲ್ಲದೆ ‘ನಮ್ಮಲ್ಲಿ ಚುನಾವಣೆ ಬಂದಾಗ ಜನರ ಕೈಕಾಲು ಹಿಡಿಯುವವರು ಆಮೇಲೆ ಜನರತ್ತ ತಿರುಗಿ ನೋಡುವುದೇ ಇಲ್ಲ.ಮೊನ್ನೆ ಹುಡುಗರು ಹುಚ್ಚೆದ್ದು ಕುಣಿಯುವುದನ್ನು ನೋಡಿದೆ’ ಎಂದು ಅವರು ಕಂಡುಂಡ ಸತ್ಯವನ್ನು ವ್ಯಕ್ತಪಡಿಸಿದ್ದಾರೆ. ಪ್ರವೀಣಕುಮಾರ ಅವರು ನನ್ನ ಉತ್ತಮ ಓದುಗ ಸ್ನೇಹಿತರಲ್ಲೊಬ್ಬರು.ಅವರು ಆಗಾಗ ಪ್ರಶ್ನೆಗಳನ್ನು ಕೇಳುತ್ತ ನನ್ನಿಂದ ಉತ್ತರ ನಿರೀಕ್ಷಿಸುತ್ತಿದ್ದ ಬಗೆ ಮತ್ತು ಅವರಿಗೆ ನೀಡಿದ ಉತ್ತರಗಳೇ ಒಂದು ಪುಸ್ತಕವಾಗಿ ಹೊರಹೊಮ್ಮಿದುದನ್ನು ನಾನು ‘ಮೂರನೇ ಕಣ್ಣಿನಿಂದ ಕಂಡ ಜಗತ್ತು’ ಎನ್ನುವ ವೈಚಾರಿಕ ಲೇಖನಗಳ ಸಂಕಲನದ ನನ್ನ ಮುನ್ನುಡಿಯ ಮಾತುಗಳಲ್ಲಿ ಬರೆದಿದ್ದೇನೆ.ನಾನು ಯಾದಗಿರಿಯಿಂದ ಹೊರಬಂದು ಎರಡು ವರ್ಷಗಳಾದರೂ ಆಗಾಗ ಪ್ರಶ್ನಿಸುತ್ತ ಯಾದಗಿರಿಯ ನನ್ನ ನೆನಪುಗಳನ್ನು ಹಸಿರಾಗಿಡುತ್ತಿದ್ದಾರೆ ಸ್ನೇಹಿತ ಪ್ರವೀಣಕುಮಾರ ಅವರು.ಅವರ ಪ್ರಶ್ನೆಯು ದೀರ್ಘ ಉತ್ತರವನ್ನು ನಿರೀಕ್ಷಿಸುವಂತಹದ್ದು.ಚುನಾವಣೆಯ ಸಂದರ್ಭದಲ್ಲಿ ದಿನಕ್ಕೆ ಒಂದೆರಡು ಲೇಖನಗಳನ್ನು ಬರೆಯುತ್ತಿರುವ ನನಗೆ ಅಷ್ಟು ದೀರ್ಘ ಲೇಖನ ಬರೆಯುವ ಸಮಯ ಇಲ್ಲ.ಅಲ್ಲದೆ ನಾನು ಬರೆದ ಲೇಖನಗಳೆಲ್ಲವನ್ನು ಪ್ರೀತಿಯಿಂದ ಅವರ ಸಂಪಾದಕತ್ವದ ‘ ಸಾಗರ ಸಾಮ್ರಾಟ’ ದಿನಪತ್ರಿಕೆಯಲ್ಲಿ ಪ್ರಕಟಿಸುತ್ತಿರುವ ಕಾರವಾರದ ಸ್ನೇಹಿತ ನಾಗೇಂದ್ರ ಖಾರ್ವಿ ಅವರಿಗೆ ಚುನಾವಣೆಯ ಕಾಲದಲ್ಲಿ ಬಗೆಬಗೆಯ ಸುದ್ದಿ,ಜಾಹಿರಾತುಗಳನ್ನು ಪ್ರಕಟಿಸಲೇ ಪತ್ರಿಕೆಯ ಪುಟಗಳು ಸಾಲದಾಗಿರುವಾಗ ನನ್ನ ದೀರ್ಘಲೇಖನ ಪ್ರಕಟಿಸುವುದು ಕಷ್ಟವೆಂದರಿತು ಸಂಕ್ಷಿಪ್ತವಾಗಿ ಆದರೆ ಭಾರತ ಮತ್ತು ಪಾಶ್ಚಿಮಾತ್ಯರಾಷ್ಟ್ರಗಳ ಚುನಾವಣೆಗಳ ವ್ಯತ್ಯಾಸವನ್ನು ಸ್ಪಷ್ಟವಾಗಿ ವಿವರಿಸುವೆ.

ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಗೆಲ್ಲಲೇಬೇಕೆಂದು ಪಟ್ಟುಹಿಡಿದಿರುವ ಆ ಪಕ್ಷಗಳ ಅಭ್ಯರ್ಥಿಗಳು ನಾನಾ ರೀತಿಯ ವರಸೆಗಳನ್ನು ತೋರಿಸುತ್ತಿದ್ದಾರೆ.ಪ್ರಚಾರದಲ್ಲಿ ಅವರಿಗಿಂತ ಇವರೇನು ಕಡಿಮೆ ಎನ್ನುವಂತೆ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.ಯುವಕರ ಪಡೆಗೆ ಗುಂಡು ತುಂಡಿನ ರುಚಿ ತೋರಿಸಿ ಕುಣಿದು ಕುಪ್ಪಳಿಸುವಂತೆ ಮಾಡಿದ್ದಾರೆ.ಕೆಲವರಂತೂ ಹೊರರಾಜ್ಯಗಳಿಂದ ಹದಿಹರೆಯದ ತರುಣಿಯರನ್ನು ಚುನಾವಣಾ ಪ್ರಚಾರಕ್ಕೆ ಕರೆಯಿಸಿ ಬಿಸಿರಕ್ತದ ತರುಣರನ್ನು ಕೆರಳಿಸಿ,ತಮ್ಮತ್ತ ವಾಲುವಂತೆ ಮಾಡಿದ್ದಾರೆ.ಇದುವರೆಗೂ ಜನರತ್ತ ಬರದವರು ಈಗ ಓಣಿ – ವಠಾರ,ಮನೆ- ಮಠಗಳನ್ನು ಸುತ್ತಿ ಕಂಡವರ ಕೈಕಾಲುಗಳನ್ನು ಹಿಡಿಯುವುದನ್ನು ಮಾಡುತ್ತಿದ್ದಾರೆ.ಹತ್ತುಹದಿನೈದು ದಿನಗಳ ಕಾಲ ನಡೆಯುವ ಚುನಾವಣೆ ಎನ್ನುವ ಪ್ರಹಸನದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳೆಲ್ಲ ನಟಸಾರ್ವಭೌಮರುಗಳೆ!

ಚುನಾವಣೆಯ ಮತಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ನಮ್ಮಲ್ಲಿ ಹದಿನೆಂಟು ವರ್ಷ ವಯಸ್ಸಿನ ಯುವಕ ಯುವತಿಯರಿಗೆ ಮತದಾನದ ಹಕ್ಕು ನೀಡಲಾಗಿದೆ.ಬಿಸಿರಕ್ತದ ತರುಣರು ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಬುದ್ಧತೆಯಿಂದ ವರ್ತಿಸುವರೆ ಎನ್ನುವುದು ಚರ್ಚಾ ವಿಷಯ.ಆದರೆ ಮತದಾನದ ಹಕ್ಕು ಮತ್ತು ಅವಕಾಶವನ್ನು ಪಡೆದಿದೆ ನಮ್ಮ ದೇಶದ ಬೃಹತ್ ಸಂಖ್ಯೆಯ ಯುವಜನತೆ. ರಾಜಕೀಯ ಪಕ್ಷಗಳು ಈ ಯುವಪಡೆಯನ್ನೇ ದುರ್ಬಳಕೆ ಮಾಡಿಕೊಂಡು ಚುನಾವಣೆಯ ಲಾಭಪಡೆಯುತ್ತಿವೆ,ರಾಜಕಾರಣಿಗಳಿಗೆ ಯುವಕರನ್ನು ಹೇಗೆ ‘ ಕಟ್ಟಿಹಾಕಬಹುದು’ ಎಂಬುದು ಚೆನ್ನಾಗಿ ಗೊತ್ತು.ಗುಂಡು ತುಂಡುಗಳ ಆಸೆ ತೋರಿಸಿ ಅವರ ಬದುಕನ್ನು ಹಾಳು ಮಾಡುತ್ತಿರುವುದಲ್ಲದೆ ಹೊರರಾಜ್ಯಗಳಿಂದ ಹದಿಹರೆಯದ ತರುಣಿಯರನ್ನು ಕರೆತಂದು ಚುನಾವಣಾ ಪ್ರಚಾರಕ್ಕೆ ನೇಮಿಸುವ ಮೂಲಕ ಯುವಕರು ಹಾಳಾಗಲು ಕಾರಣರಾಗುತ್ತಿದ್ದಾರೆ.ಯಾರು ಹಾಳಾದರೇನು ನಾನು ಆರಿಸಿಬಂದರಷ್ಟೇ ಸಾಕು ಎನ್ನುವ ನಿಲುವು ಅಭ್ಯರ್ಥಿಗಳದ್ದು.

ಅಮೇರಿಕಾ,ಇಂಗ್ಲಂಡ್,ಫ್ರಾನ್ಸ್ ಮೊದಲಾದ ಪಾಶ್ಚಿಮಾತ್ಯ ರಾಷ್ಟ್ರಗಳಿಗೂ ನಮ್ಮ ಚುನಾವಣೆಗೂ ಬಹಳಷ್ಟು ವ್ಯತ್ಯಾಸವಿದೆ.ಬಹಳಷ್ಟು ರಾಷ್ಟ್ರಗಳಲ್ಲಿ ದ್ವಿಪಕ್ಷ ಪದ್ಧತಿಯ ಚುನಾವಣೆ ಇದೆ,ನಮ್ಮಲ್ಲಿ ಬಹುಪಕ್ಷಗಳುಳ್ಳ ಚುನಾವಣಾ ಪದ್ಧತಿ ಇದೆ.ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮತದಾರರ ಸಾಕ್ಷರತೆ ಪ್ರಮಾಣ ನೂರಕ್ಕೆ ನೂರರಷ್ಟು ಇಲ್ಲವೆ ನೂರಕ್ಕೆ ತೊಂಬತ್ತೆಂಟರಷ್ಟಾದರೂ ಇದೆ.ನಮ್ಮಲ್ಲಿ ಸಾಕ್ಷರತೆಯ ಪ್ರಮಾಣ ಸರಕಾರದ ಅಂಕಿಸಂಖ್ಯೆಗಳಂತೆ 75% ದಾಟಿಯಾದರೂ ಇವರಲ್ಲಿ ಕೇವಲ ಸಹಿ ಮಾಡಲು ಬರುವಷ್ಟೇ ಸಾಕ್ಷರರಿರುವವರ ಸಂಖ್ಯೆ ದೊಡ್ಡದಿದೆ.ಪಾಶ್ಚಿಮಾತ್ಯ ರಾಷ್ಟ್ರಗಳ ಮತದಾರರು ರಾಜಕಾರಣಿಗಳನ್ನು ತಮ್ಮ ಸೇವಕರು ಇಲ್ಲವೆ ತಮ್ಮ ಪ್ರತಿನಿಧಿಗಳು ಎಂದು ಕಾಣುತ್ತಾರೆ ಆದರೆ ನಮ್ಮ ಮತದಾರರು ಜನಪ್ರತಿನಿಧಿಗಳಲ್ಲಿ ಅವರನ್ನು ಆಳುವ ‘ ಸಾಹೇಬರುಗಳ’ ನ್ನು ( ನಮ್ಮ ಜನರು ಎಂ ಎಲ್ ಎ, ಎಂಪಿಗಳಿಗೆ ಎಂ ಎಲ್ ಎ ಸಾಬ್,ಎಂಪಿ ಸಾಬ್ ಎಂದು ಗೌರವಿಸುತ್ತಾರೆ.ಎಂ ಎಲ್ ಎ,ಎಂ ಪಿ ಗಳಷ್ಟೇ ಏಕೆ ಗ್ರಾಮ ಪಂಚಾಯತಿಯ ಸದಸ್ಯ ಕೂಡ ‘ ಮೆಂಬರ್ ಸಾಬ್’ ನಮ್ಮ ಜನರಿಗೆ) ಕಾಣುತ್ತಾರೆ.ಪಾಶ್ಚಿಮಾತ್ಯ ಮತದಾರರು ಅಭ್ಯರ್ಥಿಗಳ ದಾಸರಾಗುವುದಿಲ್ಲ,ನಮ್ಮಲ್ಲಿ ಮತದಾರರು,ರಾಜಕೀಯ ಪಕ್ಷಗಳ ಕಾರ್ಯಕರ್ತರುಗಳು ಪಕ್ಷದ ನೇತಾರರುಗಳು ಮತ್ತು ಅಭ್ಯರ್ಥಿಗಳಲ್ಲಿ ಶರಣಾಗತಿಯನ್ನು‌ ವ್ಯಕ್ತಪಡಿಸುತ್ತಾರೆ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಾಲಿ ಜನಪ್ರತಿನಿಧಿ ಏನಾದರೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೆ ಅದು ಅವರ ಕರ್ತವ್ಯ ಮತ್ತು ಬದ್ಧತೆ ಎಂದು ಭಾವಿಸುತ್ತಾರೆ.ನಮ್ಮಲ್ಲಿ ಶಾಸಕರಾದವರು ಸಾರ್ವಜನಿಕರ ತೆರಿಗೆಯ ಹಣದಲ್ಲಿಯೇ ಅಭಿವೃದ್ಧಿಕಾರ್ಯಗಳನ್ನು ಮಾಡಿದರೂ ಜನತೆ’ ಅಭೂತಪೂರ್ವ ಸಾಧನೆ ಮಾಡಿದ ಸಾಹಸಿ’ ಎಂಬಂತೆ ಕೊಂಡಾಡುತ್ತಾರೆ.ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಧಾರ್ಮಿಕ ಮುಖಂಡರುಗಳು ಚುನಾವಣಾ ಸಂದರ್ಭದಲ್ಲಿ ನಿರ್ಲಿಪ್ತರಾಗಿರುತ್ತಾರೆ; ನಮ್ಮಲ್ಲಿ ಕೆಲವು ಮಠಾಧೀಶರುಗಳು ತಾವು ಕಾವಿ ಧರಿಸಿದ್ದೇವೆ,ಧಾರ್ಮಿಕ ಸ್ಥಾನ ಒಂದರ ಗದ್ದುಗೆಯಲ್ಲಿ ಕುಳಿತಿದ್ದೇವೆ ಎನ್ನುವುದನ್ನೂ ಮರೆತು ನಿರ್ಲಜ್ಜರಾಗಿ ಅಭ್ಯರ್ಥಿಗಳ ಚುನಾವಣಾ ವಾಹನಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಾರೆ.ಮತ್ತೆ ಕೆಲವು ಮಠಾಧೀಶರು ತಾವು ಪಡೆದ ಅನುದಾನದ ಹಂಗಿಗೊಳಗಾಗಿ ತಮ್ಮ ಸಮುದಾಯದ ಮತದಾರರುಗಳನ್ನು ಈ ಪಕ್ಷಕ್ಕೆ ಓಟುಹಾಕಿ ಎಂದು ಒತ್ತಾಯಿಸುತ್ತಿದ್ದಾರೆ.ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತರುಣಮತದಾರರಿಗೆ ಬುದ್ಧಿ ಹೇಳಲು ಕಮ್ಯೂನ್ ಗಳು,ನೇಬರ್ ಹುಡ್ ಗಳಿವೆ; ನಮ್ಮ ತರುಣ ಮತದಾರರಿಗೆ ಅಂತಹ ಮಾರ್ಗದರ್ಶಕ ಸಂಸ್ಥೆಗಳಿಲ್ಲ.ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಭ್ಯರ್ಥಿಗಳು ತಾವು ಮಾಡಲಿರುವ ಸಾಧನೆಯನ್ನು ಜನರ ಮುಂದಿಟ್ಟು ಮತಪಡೆಯುತ್ತಾರೆ; ನಮ್ಮಲ್ಲಿ ನೋಟುಗಳನ್ನು ಕೊಟ್ಟು ಓಟುಗಳನ್ನು ಖರೀದಿಸುತ್ತಾರೆ.ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಾರ್ಡ್,ಏರಿಯಾ,ಕಂಟ್ರಿಸೈಡ್ ಗಳ ಒಟ್ಟು ಅಭಿವೃದ್ಧಿ ಮುಖ್ಯವೆನ್ನಿಸಿದರೆ ನಮ್ಮಲ್ಲಿ ಮತದಾರರ ಜಾತಿ ಮತ,ಧರ್ಮ ಮತ್ತು ವೈಯಕ್ತಿಕ ಆಸಕ್ತಿಗಳು ಮುಖ್ಯವೆನ್ನಿಸುತ್ತಿವೆ.

‌‌ ‌‌ ಹೀಗೆಯೇ ಪಟ್ಟಿ ಮಾಡುತ್ತ ಹೋಗಬಹುದು.ಆದರೆ ಈಗ ‘ಮಜ್ಜಿಗೆ ರಾಮಾಯಣ’ ಬರೆಯುವ ಅನಿವಾರ್ಯತೆಯಿಂದ ನಮ್ಮ ಮತ್ತು‌ಪಾಶ್ಚಿಮಾತ್ಯರ ಚುನಾವಣೆಗಳ ನಡುವಿನ ಮಹತ್ವದ ವ್ಯತ್ಯಾಸಗಳನ್ನು ವಿವರಿಸಿದ್ದೇನೆ.ಒಂದೇ ಮಾತಿನಲ್ಲಿ ಹೇಳುವುದಾದರೆ ಪಾಶ್ಚಿಮಾತ್ಯರಲ್ಲಿ ನಡೆಯುವ ಚುನಾವಣೆಗಳು ಪ್ರಜಾಹಿತಕ್ಕೆ ಬದ್ಧರಿರುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯುತ ಮತದಾರರುಗಳಿಂದ ನಡೆಯುವ ಚುನಾವಣೆಗಳಾದರೆ ನಮ್ಮ ಚುನಾವಣೆಗಳು ಮುಖನೋಡಿ ಮಣೆಹಾಕುವ,ನೋಟುಗಳ ಕಟ್ಟುಗಳಿಂದ ಪ್ರಭಾವಿತರಾಗುವ,ತಮ್ಮನ್ನು ಆಳುವ ವರ್ಗವನ್ನು ಸೃಷ್ಟಿಸುವ ಚುನಾವಣೆಗಳಾಗಿವೆ.ಆಳಬೇಕಾದವರೇ ಆಳಿಸಿಕೊಳ್ಳುವ ಸ್ಥಿತಿಗೆ ಬಂದಿರುವುದು ಭಾರತದ ಚುನಾವಣೆಗಳ ವಿಶೇಷವೆಂದರೂ ನಡೆದೀತು.

About The Author