ಮೂರನೇ ಕಣ್ಣು : ಪ್ರಧಾನಿ ನರೇಂದ್ರಮೋದಿಯವರ ಮಾತೃಭಾಷಾಪ್ರೇಮ ಆದರ್ಶವಾಗಬಾರದೇಕೆ ನಮ್ಮ ರಾಜಕಾರಣಿಗಳಿಗೆ ? : ಮುಕ್ಕಣ್ಣ ಕರಿಗಾರ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊನ್ನೆ ವಿಧಾನಸಭಾ ಚುನಾವಣೆಗಳ ಪ್ರಚಾರಕ್ಕೆಂದು ಕಲ್ಬುರ್ಗಿಗೆ ಬಂದ ಸಂದರ್ಭ.ಕಲ್ಬುರ್ಗಿಯ ಐತಿಹಾಸಿಕ ಐವಾನ್ ಶಾಹಿ ಅತಿಥಿಗೃಹದಲ್ಲಿ ವಾಸ್ತವ್ಯ ಮಾಡಿದ್ದರು. ಪ್ರತಿದಿನ ಬೆಳಿಗ್ಗೆ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಇಟ್ಟುಕೊಂಡಿರುವ ಪ್ರಧಾನಿಯವರು ಮರುದಿನ ಬೆಳಿಗ್ಗೆ ಎದ್ದು ‘ ಗುಜರಾತಿ ಪತ್ರಿಕೆಗಳು ಸಿಗುತ್ತವೆಯೆ?’ ಎಂದು ಅಧಿಕಾರಿಗಳನ್ನು ವಿಚಾರಿಸಿದರಂತೆ.ಇಂಗ್ಲಿಷ್ ಮತ್ತು ಹಿಂದೀ ದಿನಪತ್ರಿಕೆಗಳನ್ನು ತಂದಿಟ್ಟಿದ್ದ ಅಧಿಕಾರಿಗಳು ಮೋದಿಯವರ ಗುಜರಾತಿ ಪತ್ರಿಕೆಗಳ ಬೇಡಿಕೆಯನ್ನು ಕಂಡು ತಬ್ಬಿಬ್ಬಾದರಂತೆ.ದೇಶದ ಪ್ರಧಾನಿಯವರು ಕೇಳುತ್ತಾರೆಂದ ಬಳಿಕ ಸುಮ್ಮನಿರಲಾಗುತ್ತದೆಯೆ? ಕಲ್ಬುರ್ಗಿಯಲ್ಲಿ ಪತ್ರಿಕೆಗಳನ್ನು ಮಾರುವವರೆಲ್ಲರ ಬಳಿ ಹೋಗಿ ವಿಚಾರಿಸಿದರಂತೆ.ಕಲ್ಬುರ್ಗಿಯಲ್ಲಿ ಗುಜರಾತಿ ಪತ್ರಿಕೆಗಳು ಮಾರಾಟವಾಗುವುದಿಲ್ಲ.ವಿಷಯವನ್ನು ಪ್ರಧಾನಮಂತ್ರಿಯವರ ಗಮನಕ್ಕೆ ತಂದ ಅಧಿಕಾರಿಗಳು ಆನ್ ಲೈನ್ ನಲ್ಲಿ ಗುಜರಾತಿ ಪೇಪರ್ ಗಳನ್ನು ಓದುವ ವ್ಯವಸ್ಥೆ ಮಾಡಿದರಂತೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಾವು ಹೋದಲೆಲ್ಲ ಗುಜರಾತಿ ಪತ್ರಿಕೆಗಳನ್ನು ತೆಗೆದುಕೊಂಡುಹೋಗುತ್ತಾರೆ ಇಲ್ಲವೆ ತರಿಸಿ ಓದುತ್ತಾರೆ.ದೇಶದ ಪ್ರಧಾನಮಂತ್ರಿಯಾಗಿಯೂ ಅವರು ತಮ್ಮ ಗುಜರಾತಿಪ್ರೇಮವನ್ನು ಮರೆತಿಲ್ಲ, ಗುಜರಾತಿಗನೆಂಬ ಹೆಮ್ಮೆ ನನ್ನದು ಎನ್ನುತ್ತಾರೆ ಪ್ರಧಾನಿ ಮೋದಿಯವರು.ಅವರು ಪ್ರಧಾನಮಂತ್ರಿಯಾಗಿರುವ ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಭಾರಿ ಕಾರ್ಖಾನೆಗಳು,ಬಹುದೊಡ್ಡ ಉದ್ದಿಮೆಗಳು ಸೇರಿದಂತೆ ಗುಜರಾತ್ ರಾಜ್ಯವನ್ನು ಅಭಿವೃದ್ಧಿಪಡಿಸಬೇಕಿರುವ ಎಲ್ಲ ಉದ್ದಿಮೆ- ಕಾರ್ಖಾನೆಗಳನ್ನು ಗುಜರಾತಿಗೆ ಒಯ್ದಿದ್ದಾರೆ,ಒಯ್ಯುತ್ತಲೂ ಇದ್ದಾರೆ.ಪ್ರತಿವರ್ಷ ಮಂಡಿಸುವ ದೇಶದ ಬಜೆಟಿನಲ್ಲಿ ಗುಜರಾತಿಗೆ ಸಿಂಹಪಾಲು ಅನುದಾನ ಘೋಷಣೆಯಾಗಿರುತ್ತದೆ.ಗುಜರಾತಿನಲ್ಲಿ ಸಣ್ಣ ಸದ್ದು ಆದರೂ ಅದು ದೆಹಲಿಯ ಪ್ರಧಾನಮಂತ್ರಿಗಳ ಕಛೇರಿಗೆ ತಲುಪುತ್ತದೆ,ತಕ್ಷಣ ಪ್ರತಿಕ್ರಿಯಿಸುತ್ತಾರೆ ಮೋದಿಯವರು.ಆದರೆ ಇದೇ ಪ್ರೇಮ ಮತ್ತು ಬದ್ಧತೆಯನ್ನು ಅವರು ದೇಶದ ಪ್ರಧಾನಿಯಾಗಿ ಇತರ ರಾಜ್ಯಗಳತ್ತ ತೋರಿಸುತ್ತಿಲ್ಲ.ಇರಲಿ,ಈಗ ನಾನು ಹೇಳಹೊರಟಿರುವ ವಿಷಯ ಅದಲ್ಲ.

ಕರ್ನಾಟಕದ ರಾಜಕಾರಣಿಗಳಿಗೆ ನರೇಂದ್ರಮೋದಿಯವರ ಮಾತೃಭಾಷಾ ಪ್ರೇಮ ಮಾದರಿ ಆಗಬೇಕು.ನಮ್ಮ ನೆಲ ಜಲದ ಪ್ರಶ್ನೆ ಬಂದಾಗ ನಾವು ನಾಡಿನ ಹಿತವನ್ನು ಎತ್ತಿಹಿಡಿಯಬೇಕು ಎನ್ನುವ ನಾಡಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕು ನಮ್ಮ ರಾಜಕಾರಣಿಗಳು.ಇತ್ತೀಚೆಗೆ ಮಹಾರಾಷ್ಟ್ರಸರ್ಕಾರವು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ 850 ಕ್ಕೂ ಹೆಚ್ಚು ಹಳ್ಳಿಗಳಿಗೆ ಆರೋಗ್ಯವಿಮೆಯಂತಹ ಸಾಮಾಜಿಕ ಸುರಕ್ಷಾಕ್ರಮಗಳನ್ನು ವಿಸ್ತರಿಸಲು ಪ್ರಯತ್ನಿಸಿದಾಗ ರಾಜ್ಯದ ಹಿತಕಾಯಬೇಕಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮೌನಕ್ಕೆ ಶರಣಾದರು.ಅಲ್ಲೊಮ್ಮೆ ಇಲ್ಲೊಮ್ಮೆ ಮಾತನಾಡಿದ್ದನ್ನು ಬಿಟ್ಟರೆ ಮಹಾರಾಷ್ಟ್ರ ಸರಕಾರದ ಉದ್ಧಟತನವನ್ನು ನಿಗ್ರಹಿಸುವ ಯಾವ ಪರಿಣಾಮಕಾರಿ ಕೆಲಸವನ್ನೂ ಮಾಡಲಿಲ್ಲ.ಮಹಾರಾಷ್ಟ್ರದಲ್ಲಿ ಬಿಜೆಪಿಯದ್ದೇ ಸರಕಾರ ಇದೆ,ಕನಿಷ್ಟಪಕ್ಷ ಕೇಂದ್ರದ ವರಿಷ್ಠರ ಮೂಲಕವಾದರೂ ಮಹಾರಾಷ್ಟ್ರದ ಮುಖ್ಯಮಂತ್ರಿಯವರಿಗೆ ಸೂಚನೆ ಕೊಡಿಸಬೇಕಿತ್ತು.

ಗುಜರಾತಿನ ಅಮೂಲ್ ಕಂಪನಿಯು ರಾಜ್ಯದ ನಂದಿನಿಗೆ ಹೊಡೆತ ಕೊಡಲು ಧಾವಿಸುತ್ತಿರುವ ಸಂದರ್ಭದಲ್ಲಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾತನಾಡಲೇ ಇಲ್ಲ .ಅವರ ಸರ್ಕಾರದ ಒಂದಿಬ್ಬರು ಸಚಿವರುಗಳು ಮಾತನಾಡಿದ್ದನ್ನು ಬಿಟ್ಟರೆ ಮುಖ್ಯಮಂತ್ರಿಯವರಿಂದ ಅಮೂಲ್ ಗೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ ಎನ್ನುವಂತಹ ಖಡಕ್ ಹೇಳಿಕೆ ಬರಲೇ ಇಲ್ಲ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅವರ ಸರ್ವೋನ್ನತ ನಾಯಕ ನರೇಂದ್ರ ಮೋದಿಯವರ ಆದರ್ಶವನ್ನು ರೂಢಿಸಿಕೊಳ್ಳಬೇಕು.ಮೋದಿಯವರು ದೇಶದ ಪ್ರಧಾನಿಯಾದರೂ ಗುಜರಾತ್ ಮತ್ತು ಇತರ ರಾಜ್ಯಗಳ ನಡುವೆ ಯಾವುದಾದರೂ ಸಮಸ್ಯೆ ಬಂದರೆ ಗುಜರಾತ್ ರಾಜ್ಯದ ಪರವಾಗಿಯೇ ನಿಲ್ಲುತ್ತಾರೆ,ಗುಜರಾತ್ ಮೊದಲು,ಭಾರತ ನಂತರ ಎನ್ನುವ ನಿಲುವು ಪ್ರಧಾನಿ ನರೇಂದ್ರ ಮೋದಿಯವರದ್ದು.ಆದರೆ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯಾರಿಗೂ ನಿಷ್ಠುರರಾಗದ ಅತಿಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಾರೆ.ರಾಜ್ಯದ ಪ್ರತಿಷ್ಠೆ,ಘನತೆ- ಗೌರವಗಳನ್ನು ಎತ್ತಿಹಿಡಿಯುವ,ರಾಜ್ಯದ ಹಿತಕಾಪಾಡುವ ಸಂದರ್ಭದಲ್ಲಿ ಮೌನಕ್ಕೆ ಶರಣಾಗುತ್ತಾರೆ ಇಲ್ಲವೆ ಅದು ತಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬಂತೆ ಉದಾಸೀನ ಭಾವ ತಳೆಯುತ್ತಾರೆ.ಬಸವರಾಜ ಬೊಮ್ಮಾಯಿ ಮತ್ತು ಅವರ ಸಚಿವಸಂಪುಟದ ಸಚಿವರುಗಳು ಕೇಂದ್ರದ ವರಿಷ್ಠರ ಕೆಂಗೆಣ್ಣಿಗೆ ಗುರಿಯಾಗಬಾರದು ಎನ್ನುವ ಭಯ ಮತ್ತು ಬುದ್ಧಿವಂತಿಕೆಯಿಂದ ಮಹಾರಾಷ್ಟ್ರದ ಉದ್ಧಟತನ ಮತ್ತು ಗುಜರಾತಿನ ಅಮುಲ್ ಕಂಪನಿಯ ದಾಹವನ್ನು ಕಂಡೂ ಕಾಣದಂತೆ ಜಾಣತನ ಪ್ರದರ್ಶಿಸಿದರು. ಇಂತಹವುಗಳನ್ನು ಕಂಡಾಗ ನಮ್ಮರಾಜ್ಯದ ಬಿಜೆಪಿ ರಾಜಕಾರಣಿಗಳು ಪ್ರಧಾನಿ ನರೇಂದ್ರ ಮೋದಿಯವರಿಂದ ಕಲಿಯುವುದು ಸಾಕಷ್ಟಿದೆ ಎನ್ನಿಸುತ್ತದೆ.

About The Author