ಮತದಾನವನ್ನು ಉತ್ತೇಜಿಸಲು ಇಂದು ಬೆಳಿಗ್ಗೆ ನಾನು ಬರೆದು ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿದ್ದ ‘ ಮತದಾನ ಹಕ್ಕು ಮಾತ್ರವಲ್ಲ,ಜನಪ್ರತಿನಿಧಿಗಳನ್ನು ನಿಯಂತ್ರಿಸುವ ಅಂಕುಶ,ಅಸ್ತ್ರ, ತಪ್ಪದೆ ಮತ ಚಲಾಯಿಸಿ’ ಲೇಖನವನ್ನು ಓದಿ ಬಹಳಷ್ಟು ಜನ ನನ್ನ ‘ವಾಟ್ಸಾಪ್ ಓದುಗ ಮಿತ್ರರುಗಳು’ ತಮ್ಮ ಸಂದೇಹಗಳನ್ನು ವ್ಯಕ್ತಪಡಿಸಿ ನನಗೆ ಸಂದೇಶ ಕಳಿಸಿದ್ದಾರೆ.ಆ ಸಂದೇಶಗಳ ಒಟ್ಟು ಅಭಿಪ್ರಾಯವನ್ನು ಹೀಗೆ ಕ್ರೋಢೀಕರಿಸಬಹುದು
೧. ನಮ್ಮ ಮತಕ್ಷೇತ್ರದಲ್ಲಿ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪಕ್ಷ ಒಂದು ಟಿಕೆಟ್ ನೀಡಿದೆ.ಆ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯೂ ಇದೆ.ಈಗ ಜವಾಬ್ದಾರಿಯುತ ಮತದಾರರಾಗಿ ನಾವು ಏನು ಮಾಡಬೇಕು?
೨.ನಾನು ಒಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತ( ಆ ಪಕ್ಷದ ಹೆಸರನ್ನು ಬಹಿರಂಗಪಡಿಸಿಲ್ಲ).ಆದರೆ ನಮ್ಮ ಪಕ್ಷವು ಉತ್ತಮ ಅಭ್ಯರ್ಥಿಗಳಿದ್ದರೂ ಮತದಾರರೊಂದಿಗೆ ಸಂಪರ್ಕ ಇಟ್ಟುಕೊಳ್ಳದ ಧಿಮಾಕಿನ ವ್ಯಕ್ತಿಗೆ ಟಿಕೇಟ್ ನೀಡಿದೆ.ನಮ್ಮ ಪಕ್ಷದ ಅಭ್ಯರ್ಥಿಗಿಂತ ಎದುರಾಳಿ ಅಭ್ಯರ್ಥಿ ಸಂಭಾವಿತರು.ಆದರೆ ನಾವು ಪಕ್ಷನಿಷ್ಠೆಯನ್ನು ಬಿಡಲಾಗದು.ನಾವೇನು ಮಾಡಬೇಕು ಹೇಳಿ.
೩. ನಮ್ಮ ಕ್ಷೇತ್ರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ.ನಮ್ಮಕ್ಷೇತ್ರದ ಯಾರೊಬ್ಬರಿಗೂ ಟಿಕೆಟ್ ನೀಡಿಲ್ಲ.ನಮಗೆ ಇಷ್ಟವಿಲ್ಲದವರಿಗೆ ನಾವೇಕೆ ಮತನೀಡಬೇಕು?
ಮತಪ್ರಕ್ರಿಯೆಯ ಬಗ್ಗೆ ಆಸಕ್ತಿಹೊಂದಿ ತಮ್ಮ ಸಂದೇಹಗಳನ್ನು ವ್ಯಕ್ತಪಡಿಸಿದ ಸ್ನೇಹಿತರುಗಳಿಗೆ ಧನ್ಯವಾದಗಳನ್ನು ಹೇಳಿ,ಮುಂದುವರೆಯುವೆ.ಇವರೆಲ್ಲರೂ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾನ ಪ್ರಬಲ ಸಾಧನ ಎಂದು ನಂಬಿರುವವರು,ಕಡ್ಡಾಯವಾಗಿ ಮತದಾನ ಮಾಡಲೇಬೇಕು ಎನ್ನುವ ನನ್ನ ಕಳಕಳಿಗೆ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿದವರು.ಇಂತಹ ಸಂದೇಹ ರಾಜ್ಯದ ಇತರ ಮತದಾರರನ್ನೂ ಕಾಡುತ್ತಿರಬಹುದು.ಚುನಾವಣೆಯಲ್ಲಿ ಮತಚಲಾಯಿಸುವುದು ಭಾರತೀಯ ಪೌರರ ಹಕ್ಕು; ಆದರೆ ರಾಜಕೀಯ ಪಕ್ಷಗಳು ಚುನಾವಣೆಗೆ ನಿಲ್ಲಿಸಿದ ಅಭ್ಯರ್ಥಿಗಳಿಗೇ ಓಟು ಹಾಕಬೇಕು ಎನ್ನುವ ಅನಿವಾರ್ಯತೆ ಇಲ್ಲ.ಹಿಂದೆ ಒಂದುಕಾಲವಿತ್ತು ರಾಜಕೀಯ ಪಕ್ಷಗಳು ಯಾರನ್ನೇ ನಿಲ್ಲಿಸಿದರೂ ಓಟು ಹಾಕಬೇಕಿತ್ತು ಅನಿವಾರ್ಯವಾಗಿ.ಈಗ ಅಂತಹ ಅನಿವಾರ್ಯತೆ ಇಲ್ಲ.ಸುಪ್ರೀಂಕೋರ್ಟಿನ ತೀರ್ಪಿನಿಂದಾಗಿ ಭಾರತದ ಚುನಾವಣಾ ಆಯೋಗವು ‘ ನೋಟಾ’ ಮತದಾನದ ವ್ಯವಸ್ಥೆಯನ್ನೂ ಮಾಡಿದೆ.ಚುನಾವಣೆಗೆ ಸ್ಪರ್ಧಿಸುವ ಯಾವ ಅಭ್ಯರ್ಥಿಯೂ ಸರಿ ಇಲ್ಲ ಎನ್ನಿಸಿದರೆ ಅವರೆಲ್ಲರೂ ತಿರಸ್ಕರಿಸಿ ‘ ಇವರಾರೂ ಅಲ್ಲ’ ಎನ್ನುವ ಬಟನ್ ಒತ್ತಬಹುದು.
ಮತದಾರರಿಗೆ ಮತಚಲಾಯಿಸುವ ಹಕ್ಕು ಇದೆ.ಆದರೆ ರಾಜಕೀಯ ಪಕ್ಷಗಳಿಗೆ ಇಂತಹದೆ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಮಾಡಿ ಎಂದು ಒತ್ತಾಯಿಸುವ ಹಕ್ಕು ಮತದಾರರಿಗೆ ಇಲ್ಲ.ರಾಜಕೀಯ ಪಕ್ಷಗಳು ತಮಗೆ ಇಷ್ಟವಾದ,ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸುತ್ತವೆ.ಅಭ್ಯರ್ಥಿಯ ಬಗ್ಗೆ ಕ್ಷೇತ್ರದ ಮತದಾರರಲ್ಲಿ ಸದಭಿಪ್ರಾಯ ಇಲ್ಲದೆ ಇರಬಹುದು ಅಥವಾ ಅಭ್ಯರ್ಥಿಯು ಸಚ್ಚರಿತನಲ್ಲದೆ ಇರಬಹುದು.ಆದರೆ ರಾಜಕೀಯ ಪಕ್ಷ ಆತನಿಗೆ ಟಿಕೇಟ್ ನೀಡಿರುತ್ತದೆ.ಪಕ್ಷದ ಪ್ರೀತಿ,ನಿಷ್ಠೆಗಳಿಂದ ಆಯಾ ಪಕ್ಷದ ಅಭಿಮಾನಿ ಮತದಾರರು ತಮಗೆ ಇಷ್ಟವಿಲ್ಲದೆ ವ್ಯಕ್ತಿಗೇ ಮತಹಾಕುವುದು ಅನಿವಾರ್ಯವಿತ್ತು.ಗಂಭೀರಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವವರು ಸಹ ಚುನಾವಣೆಗೆ ಸ್ಪರ್ಧಿಸಿ,ಗೆಲ್ಲುತ್ತಿದ್ದರು.ಕೋರ್ಟ್ಗಳಿಂದ ಸೆರೆಮನೆಶಿಕ್ಷೆಗೆ ಗುರಿಯಾದವರೂ ಮುಖ್ಯಮಂತ್ರಿಯಾಗ ಹೊರಟಿದ್ದ ಪ್ರಕರಣಗಳಲ್ಲಿ ಹೈಕೋರ್ಟ್ ಗಳು ಮತ್ತು ಸುಪ್ರೀಂಕೋರ್ಟ್ ವಿಷಯದ ಗಂಭೀರತೆಯನ್ನು ಮನಗಂಡವು.
ಭಾರತದ ಸರ್ವೋಚ್ಛನ್ಯಾಯಾಲಯವು PUCL v/s Union of India ಪ್ರಕರಣದಲ್ಲಿ 2013 ರಲ್ಲಿ NOTA vote ಅನ್ನು ಅಳವಡಿಸಿಕೊಳ್ಳುವ ನಿರ್ದೇಶನವನ್ನು ಭಾರತದ ಚುನಾವಣಾ ಆಯೋಗಕ್ಕೆ ನೀಡಿತು.People’s Union for Civil Liberties (PUCL) ಎನ್ನುವ ಸಂಸ್ಥೆಯು ಸುಪ್ರೀಂಕೋರ್ಟಿನಲ್ಲಿ ಒಂದು ರಿಟ್ ಅರ್ಜಿ ಸಲ್ಲಿಸಿ,ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಗಂಭೀರಸ್ವರೂಪದ ಅಪರಾಧ ಹಿನ್ನೆಯುಳ್ಳವರಾಗಿದ್ದ ಅಭ್ಯರ್ಥಿಗಳ ಬಗ್ಗೆ ದೇಶದ ಸರ್ವೋನ್ನತ ನ್ಯಾಯಾಲಯದ ಗಮನ ಸೆಳೆದಿತ್ತು.ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮತದಾರರಿಗೆ ಬ್ಯಾಲೆಟ್ ಪೇಪರ್ ನಲ್ಲಿ ಮತ್ತು ಇವಿಎಂ ಮಶಿನ್ನುಗಳನ್ನು NOTA ಎನ್ನುವ ಪ್ರತ್ಯೇಕ ಬಟನ್ ಒದಗಿಸುವ ಸೂಚನೆ ನೀಡಿತು.ಪ್ರಜೆಗಳಿಗೆ ಮತಹಾಕುವಂತೆ ಒತ್ತಾಯಪಡಿಸಬಹುದು; ಆದರೆ ಅಯೋಗ್ಯವ್ಯಕ್ತಿಗಳಿಗೆ ಮತಹಾಕಿ ಎಂದು ಒತ್ತಾಯಿಸಲಾಗದು.ಮತದಾರರಿಗೆ ಇಷ್ಟವಾಗದ ವ್ಯಕ್ತಿಗಳನ್ನು ತಮಗೆ ಇಷ್ಟವಾದ ಅಭ್ಯರ್ಥಿ ಎಂದು ರಾಜಕೀಯ ಪಕ್ಷಗಳು ಮತದಾರರನ್ನು ಕಡೆಗಣಿಸುವ ಸಂದರ್ಭಗಳನ್ನು ಕೊನೆಗಾಣಿಸಲೆಂದು ಸುಪ್ರೀಂಕೋರ್ಟ್ ನೋಟಾ ಮತದ ಬಗ್ಗೆ ನಿರ್ದೇಶನ ನೀಡಿದೆ.NOTA ಅಂದರೆ’ None of the above’ ಎಂದರ್ಥ.ಚುನಾವಣೆಗೆ ಸ್ಪರ್ಧಿಸಿದ ಯಾವ ಅಭ್ಯರ್ಥಿಯನ್ನು ನಾನು ಬೆಂಬಲಿಸುತ್ತಿಲ್ಲ ಎಂದು ಪ್ರಬುದ್ಧಮತದಾರರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ತಿರಸ್ಕರಿಸುವ ಆಯ್ಕೆಯ ಸ್ವಾತಂತ್ರ್ಯವೇ ನೋಟಾ ಓಟು.ಸಚ್ಚಾರಿತ್ರ್ಯ ಮತ್ತು ಉನ್ನತ ನೈತಿಕಗುಣಮಟ್ಟವನ್ನು ಹೊಂದಿದ ಅಭ್ಯರ್ಥಿಗಳು ಮಾತ್ರ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವುದು ಸುಪ್ರೀಂಕೋರ್ಟ್ ತೀರ್ಪಿನ ಆಶಯ.
ನೋಟಾ ಓಟಿನ ಅಧಿಕೃತ ಬಳಕೆಯಾದದ್ದು 2013 ರಲ್ಲಿ ನಡೆದ ಚತ್ತೀಸಗಡ್,ಮಿಜೋರಾಂ,ರಾಜಸ್ತಾನ ಮತ್ತು ಮಧ್ಯಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ.2014 ರಲ್ಲಿ ರಾಜ್ಯಸಭೆಗೆ ನಡೆದ ಚುನಾವಣೆಗೂ ಭಾರತದ ಚುನಾವಣಾ ಆಯೋಗವು ‘ ನೋಟಾ ಮತ’ ವನ್ನು ಒದಗಿಸಿತ್ತಾದರೂ ಸುಪ್ರೀಂಕೋರ್ಟ್ ಅದನ್ನು ಅಸಿಂಧುಗೊಳಿಸಿತು.ಲೋಕಸಭೆ ಮತ್ತು ವಿಧಾನಸಭೆಗಳಂತಹ ನೇರವಾಗಿ ಮತದಾರರಿಂದ ಚುನಾಯಿಸಲ್ಪಡುವ ಚುನಾವಣೆಗಳಲ್ಲಿ ‘ ನೋಟಾ’ ಒದಗಿಸಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು.ಲೋಕಸಭೆಗೆ 2014 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ‘ ನೋಟಾ ಓಟಿ’ ಗೆ ಅವಕಾಶ ನೀಡಲಾಯಿತು.ಇತ್ತೀಚಿನ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ‘ ನೋಟಾ ಓಟಿನ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು ನೋಟಾವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಮತದಾರರ ಸಂಖ್ಯೆಯೂ ಹೆಚ್ಚುತ್ತಿದೆ.
ನೋಟಾ ಓಟಿನ ಮಹತ್ವವನ್ನು ಒತ್ತಿಹೇಳುವ ಪ್ರಸಂಗವನ್ನು ಇಲ್ಲಿ ಹೇಳಲೇಬೇಕು.ಮಧ್ಯಪ್ರದೇಶ ರಾಜ್ಯದಲ್ಲಿ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೆಯಲ್ಲಿದ್ದ ಪ್ರಮುಖ ರಾಜಕೀಯ ಪಕ್ಷಗಳಾಗಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮತಗಳ ಅಂತರ 0.1% ಆಗಿದ್ದರೆ ಚಲಾಯಿಸಲ್ಪಟ್ಟ ನೋಟಾ ಓಟುಗಳ ಪ್ರಮಾಣ 1.4% ರಷ್ಟು!ಸ್ವಾರಸ್ಯದ ಸಂಗತಿ ಎಂದರೆ ದಕ್ಷಿಣಗ್ವಾಲಿಯರ್ ವಿಧಾನಸಭಾಕ್ಷೇತ್ರದ ಅಭ್ಯರ್ಥಿ ಮತ್ತು ಅಂದಿನ ಹಾಲಿಶಾಸಕ ನಾರಾಯಣ ಸಿಂಗ್ ಕುಶ್ವಾ ಅವರು 121 ಮತಗಳಿಂದ ಸೋತರು.ಆದರೆ ಅಲ್ಲಿ ಚಲಾಯಿಸಲ್ಪಟ್ಟ ನೋಟಾ ಓಟುಗಳ ಸಂಖ್ಯೆ 1550.ಕುಶ್ವಾ ಅವರು ಈ ಮತದಾರರ ಮನಸ್ಸುಗಳನ್ನು ಗೆದ್ದಿದ್ದರೆ ಚುನಾವಣೆಯಲ್ಲಿ ಗೆಲ್ಲಬಹುದಿತ್ತು.
ನೋಟಾ ಓಟುಗಳ ಮಹತ್ವದ ಬಗ್ಗೆ ಇನ್ನೊಂದು ನಿದರ್ಶನ ನೀಡಬಹುದಾದರೆ ಅದು ಡಿ ಎಂ ಕೆ ಪಕ್ಷದ ಎ.ರಾಜಾ ಅವರದ್ದು.2014 ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಡಿ ಎಂ ಕೆ ಪಕ್ಷದ ಅಭ್ಯರ್ಥಿಯಾಗಿದ್ದ ಎ. ರಾಜಾ ಅವರು 2 ಜಿ ಹಗರಣದಿಂದ ಹೆಸರುಕೆಡಿಸಿಕೊಂಡಿದ್ದ ಕಾರಣದಿಂದ ಎಐಎಡಿಎಂಕೆ ಅಭ್ಯರ್ಥಿಯ ವಿರುದ್ಧ ಸೋತರು.ಆ ಚುನಾವಣೆಯಲ್ಲಿ ಚಲಾಯಿಸಲ್ಪಟ್ಟ ನೋಟಾ ಓಟುಗಳ ಸಂಖ್ಯೆ ಅತ್ಯಧಿಕವಾಗಿತ್ತು.ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು 2018 ರಲ್ಲಿ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ನೋಟಾ ಓಟುಗಳು ಚಲಾವಣೆಯಾದರೆ ಆ ಚುನಾವಣೆಯನ್ನು ರದ್ದುಪಡಿಸಿ,ಪುನಃ ವಿಧಾನಸಭಾ ಚುನಾವಣೆ ನಡೆಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ರವಾನಿಸಿತ್ತು.ಸುಪ್ರೀಂಕೋರ್ಟ್ 2021 ರಲ್ಲಿ ಅಧಿಕ ನೋಟಾ ಓಟುಗಳು ಚಲಾವಣೆಯಾಗಿವೆ ಎನ್ನುವ ಕಾರಣದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳೆಲ್ಲ ಪರಾಜಿತರು ಎಂದು ಘೋಷಿಸಲು ಕಾನೂನಿನಲ್ಲಿ ಅವಕಾಶವಿದೆಯೆ ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿತ್ತು.ಇತ್ತೀಚಿನ ದಿನಗಳಲ್ಲಿ ನೋಟಾವು ಪಡೆದುಕೊಳ್ಳುತ್ತಿರುವ ಹೆಚ್ಚಿನ ಜನಮನ್ನಣೆಗೆ ಈ ಪ್ರಕರಣಗಳು ನಿದರ್ಶನ.
ಈ ಮೇಲಿನ ವಿವರಣೆಯನ್ನು ಗಮನಿಸಿದಾಗ ರಾಜಕೀಯ ಪಕ್ಷಗಳು ನಿಲ್ಲಿಸಿದ ಅಭ್ಯರ್ಥಿಗಳಿಗೇ ಮತಹಾಕುವುದು ಕಡ್ಡಾಯವಲ್ಲ ಬದಲಿಗೆ’ ಇವರಾರೂ ಅಲ್ಲ’ ಎನ್ನುವ ತಮ್ಮ ಆಯ್ಕೆಯನ್ನು ವ್ಯಕ್ತಪಡಿಸಲು ಮತದಾರರಿಗೆ ಅವಕಾಶವಿದೆ ಎನ್ನುವುದು ಮನದಟ್ಟಾಗಿದೆ ಎಂದು ಭಾವಿಸುವೆ.ಮತದಾನ ಮಾಡುವುದು ಕಡ್ಡಾಯ,ಇಂಥಹದೇ ಅಭ್ಯರ್ಥಿಗೆ ಮತನೀಡಬೇಕು ಇಲ್ಲವೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಯಾವುದಾದರೂ ಒಬ್ಬ ಅಭ್ಯರ್ಥಿಗೆ ಮತನೀಡಬೇಕು ಎಂಬುದು ಕಡ್ಡಾಯವಲ್ಲ.ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು ಸರಿ ಇಲ್ಲ ಎನ್ನಿಸಿದರೆ ಅವರೆಲ್ಲರ ವಿರುದ್ಧ ಮತಚಲಾಯಿಸುವ ವಿಶೇಷ ಹಕ್ಕು,ಅವಕಾಶ ಮತದಾರರಿಗೆ ಇದೆ.ಆ ಬಗ್ಗೆ ಹೆಚ್ಚಿನ ಮಟ್ಟದ ಜಾಗೃತಿ ಮೂಡಿಸುವ ಅಗತ್ಯವಿದೆ.ಮತದಾರರು ನೋಟಾ ಬಟನ್ ಗಳನ್ನು ಒತ್ತುವ ಮೂಲಕ ರಾಜಕೀಯ ಪಕ್ಷಗಳ ನಿರಂಕುಶ ವರ್ತನೆಗೆ ಕಡಿವಾಣ ಹಾಕಬಹುದಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ನೋಟಾ ಓಟುಗಳು ಚಲಾಯಿಸಲ್ಪಟ್ಟ ವಿಧಾನಸಭಾ ಕ್ಷೇತ್ರಗಳ ಬಗ್ಗೆ ರಾಜಕೀಯ ಪಕ್ಷಗಳು ಆಲೋಚಿಸಲೇಬೇಕಾದ ಅನಿವಾರ್ಯತೆ ಬಂದೊದಗಲಿದೆ.