ಮೂರನೇ ಕಣ್ಣು : ಮತದಾನ ಹಕ್ಕುಮಾತ್ರವಲ್ಲ,ಜನಪ್ರತಿನಿಧಿಗಳನ್ನು ನಿಯಂತ್ರಿಸುವ ಅಂಕುಶ,ಅಸ್ತ್ರ,ತಪ್ಪದೆ ಮತಚಲಾಯಿಸಿ : ಮುಕ್ಕಣ್ಣ ಕರಿಗಾರ

ಮೇ 10 ರಂದು ರಾಜ್ಯದಲ್ಲಿ ವಿಧಾನಸಭೆಗೆ ಮತದಾನ ನಡೆಯಲಿದೆ.ರಾಜ್ಯದ ಮತದಾರರೆಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತಚಲಾಯಿಸಬೇಕಿದೆ.ಮತದಾನದ ಮೂಲಕವೇ ಪ್ರಜೆಗಳು ತಮ್ಮ ಅಭಿಮತವನ್ನು ವ್ಯಕ್ತಪಡಿಸಬೇಕಿರುವುದರಿಂದ ಮತಚಲಾವಣೆಗೆ ಅರ್ಹತೆಯುಳ್ಳವರೆಲ್ಲರೂ ಮತಚಲಾವಣೆ ಮಾಡಲೇಬೇಕು.ಇತ್ತೀಚಿನ ವರ್ಷಗಳಲ್ಲಿ ನಗರವಾಸಿಗಳು ಮತದಾನದಲ್ಲಿ ನಿರಾಸಕ್ತಿ ತೋರಿಸುತ್ತಿರುವುದು ಉತ್ತಮಬೆಳವಣಿಗೆಯಲ್ಲ.ವಿದ್ಯಾವಂತರು,ಸುಶಿಕ್ಷಿತರು,ಉದ್ಯೋಗಿಗಳು ಎನ್ನಿಸಿಕೊಂಡವರೇ ಮತದಾನ ಮಾಡದೆ ಇದ್ದರೆ ಹೇಗೆ?

ಮತದಾನ ಮಾಡದಿದ್ದರೆ ಆಕಾಶವೇನು ಹರಿದುಬೀಳದು ಎಂದು ಕೆಲವರು ಸಿನಿಕತನದ ಮಾತುಗಳನ್ನಾಡುತ್ತಾರೆ,ನಾನೊಬ್ಬ ಮತದಾನ ಮಾಡದಿದ್ದರೆ ರಾಜ್ಯ,ದೇಶದ ಹಣೆಬರಹವೇನೂ ಬದಲಾಗದು ಎಂದು ಮತ್ತೆ ಕೆಲವರು ವಾದಿಸಿದ್ದಾರೆ.ಇಂತಹ ಮಾತುಗಳು ಅಪ್ರಬುದ್ಧತೆಯನ್ನು ಸೂಚಿಸುತ್ತವೆಯೇ ಹೊರತು ಪ್ರಜಾಪ್ರಭುತ್ವ ಭಾರತವನ್ನು ಬೆಳೆಸುವ ಬದ್ಧತೆಯನ್ನಲ್ಲ.ಯಾರೋ ಒಬ್ಬರು ಮತದಾನ ಮಾಡದಿದ್ದರೆ ಆಕಾಶ ಹರಿದುಬೀಳುವುದಿಲ್ಲ ನಿಜ,ಆದರೆ ಸಮೃದ್ಧ ರಾಜ್ಯವನ್ನು ಕಟ್ಟುವ ತಮ್ಮ ಹಕ್ಕು- ಅವಕಾಶವನ್ನು ಅವರೇ ಕಳೆದುಕೊಳ್ಳುತ್ತಾರೆ.ಯಾರೋ ಒಬ್ಬರು ಮತದಾನ ಮಾಡದೆ ಇದ್ದರೆ ರಾಜ್ಯ,ದೇಶದ ಹಣಬರಹವೇನೂ ಬದಲಾಗದು ನಿಜ,ಆದರೆ ರಾಜ್ಯ,ರಾಷ್ಟ್ರಕಟ್ಟುವ ಹೊಣೆಗಾರಿಕೆಯಿಂದ ನುಣುಚಿಕೊಂಡ ಉತ್ತರಕುಮಾರರು ಅವರಾಗುತ್ತಾರೆ.ಮತಚಲಾವಣೆ ಮಾಡಿದರೆ ಅಭಿವೃದ್ಧಿಯ ಗತಿಯನ್ನು ನಿರ್ಧರಿಸುವ ಹಕ್ಕು ,ಅವಕಾಶ ನಿಮಗೆ ದೊರೆಯುತ್ತದೆ.ಮತದಾನ ಮಾಡುವುದರಿಂದ ನೀವು ನಿಮ್ಮ ಜನಪ್ರತಿನಿಧಿಯನ್ನು ಪ್ರಶ್ನಿಸಬಹುದು.ನಿಮ್ಮ ಶಾಸಕ ಸರ್ವಾಧಿಕಾರಿಯಂತೆ ವರ್ತಿಸಿದರೆ,ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸದೆ ಇದ್ದರೆ ಆತನನ್ನು ತಡೆದು ನಿಲ್ಲಿಸಿ ‘ ನಾನು ನಿಮಗೆ ಮತಹಾಕಿದ್ದೇನೆ,ಈ ಕೆಲಸ ಮಾಡಿ’ ಎಂದು ಗಟ್ಟಿಯಾಗಿ ಹೇಳುವ ಶಕ್ತಿ ನಿಮಗೆ ಬರುತ್ತದೆ.ಮತಚಲಾವಣೆ ಮಾಡದವರು ಶಾಸಕರನ್ನು,ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಅವಕಾಶ ಕಳೆದುಕೊಳ್ಳುತ್ತಾರೆ.

ಬಹುಪಕ್ಷ ಪದ್ಧತಿಯ ಭಾರತದ ಪ್ರಜಾಪ್ರಭುತ್ವ ಪದ್ಧತಿಗನುಗುಣವಾಗಿ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್,ಬಿಜೆಪಿ ಮತ್ತು ಜೆಡಿಎಸ್ ಎನ್ನುವ ಮೂರು ಪಕ್ಷಗಳಲ್ಲದೆ ಇತರ ಕೆಲವು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿವೆ.ಅಲ್ಲಲ್ಲಿ ಸ್ವತಂತ್ರ ಅಭ್ಯರ್ಥಿಗಳೂ ಸ್ಪರ್ಧಿಸಿದ್ದುಂಟು.ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಬಗೆಯ ಕಸರತ್ತುಗಳನ್ನು ಮಾಡುತ್ತಿವೆ.ಹೊಟ್ಟೆಪಾಡಿಗಾಗಿ ದುಡಿಯಲು ಬೆಂಗಳೂರು,ಮುಂಬೈಗಳಂತಹ ಮಹಾನಗರಗಳಿಗೆ ವಲಸೆ ಹೋದವರನ್ನು ವಾಹನಗಳ ವ್ಯವಸ್ಥೆಮಾಡಿ ಕರೆಸುತ್ತಿದ್ದಾರೆ.ಹಣ,ಉಡುಗೊರೆಗಳ ಆಮಿಷ ತೋರಿಸುತ್ತಿದ್ದಾರೆ.ಮತದಾರರು ರಾಜಕೀಯ ಪಕ್ಷಗಳ ಆಮಿಷ,ಕೊಡುಗೆ- ಉಡುಗೊರೆಗಳಿಗೆ ಮರುಳಾಗದೆ ಸ್ವಂತ ಬುದ್ಧಿಯಿಂದ ಆಲೋಚಿಸಿ,ಉತ್ತಮ ಅಭ್ಯರ್ಥಿಗೆ ಮತನೀಡಬೇಕು.ಯಾರು ತಮ್ಮ ಹಾಗೂ ಕ್ಷೇತ್ರದ ಹಿತ ಕಾಪಾಡಬಹುದೋ ಅಂತಹ ಅಭ್ಯರ್ಥಿಗಳಿಗೆ ಮತನೀಡಬೇಕು.

ರಾಜಕೀಯ ಪಕ್ಷಗಳಿಗೆ ಗೆಲ್ಲುವ‌ ಕುದುರೆಗಳೇಬೇಕು.ಅಭ್ಯರ್ಥಿ ಒಳ್ಳೆಯವನೋ ಕೆಟ್ಟವನೋ ಎಂದು ನೋಡದೆ ಹಣಬಲ ಇದ್ದವರಿಗೆ ಎಲ್ಲ ರಾಜಕೀಯ ಪಕ್ಷಗಳು ಮಣೆಹಾಕಿವೆ.ನೂರಕ್ಕೆ 25% ಕ್ಕಿಂತ ಹೆಚ್ಚುಜನ ಅಭ್ಯರ್ಥಿಗಳ ವಿರುದ್ಧ ವಿವಿಧ ನ್ಯಾಯಾಯಲಗಳಲ್ಲಿ ಕ್ರಿಮಿನಲ್ ಕೇಸುಗಳಿವೆ,ಕೆಲವರ ವಿರುದ್ಧ ಗಂಭೀರಸ್ವರೂಪದ ಕ್ರಿಮಿನಲ್ ಕೇಸುಗಳಿವೆ.ಸಾರ್ವಜನಿಕರಿಗೆ ಸರಕಾರ ನೀಡುತ್ತಿದ್ದ ಪಡಿತರ ಅಕ್ಕಿಯನ್ನು ಮಾರಿಯೇ ಕೋಟ್ಯಾಧೀಶರಾದ,ಉಸುಕು ಮಾಫಿಯಾದಿಂದ,ಕಲ್ಲುಕ್ವಾರಿ,ಗಣಿಗಾರಿಕೆ ಮಾಫಿಯಾದಿಂದ ಬಂದ ಅಭ್ಯರ್ಥಿಗಳಿದ್ದಾರೆ.ರಾಜ್ಯದ ನೆಲವನ್ನು ಬಗೆದು ಸಂಪನ್ಮೂಲಗಳನ್ನು ದೋಚಿದವರಿದ್ದಾರೆ.ಮತದಾರರು ಆರೋಗ್ಯವಂತ ಪ್ರಜಾಪ್ರಭುತ್ವವನ್ನು ಕಟ್ಟಲು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳು ಪೀಡೆ ಎನ್ನುವುದನ್ನು ಅರ್ಥಮಾಡಿಕೊಂಡು ಉತ್ತಮಜನಪ್ರತಿನಿಧಿಗಳಿಗೆ ಮತನೀಡಬೇಕು.ಇಲ್ಲದಿದ್ದರೆ ನಾಳೆ ಜೈಲಿನಲ್ಲಿರಬೇಕಾದವರು ನಿಮ್ಮನ್ನು ಆಳುವ ಪರಿಸ್ಥಿತಿ ಬರುತ್ತದೆ.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯ ನೆಲೆ- ಹಿನ್ನೆಲೆಗಳನ್ನರಿತು ಮತದಾರರು ಮತಚಲಾಯಿಸಬೇಕು.ಯಾರು ಸಜ್ಜನರೋ ,ಯಾರು ಜನರ ಹಿತಕಾಯಬಲ್ಲರೋ ಅಂಥವರಿಗೆ ಮತನೀಡಬೇಕು.ಯಾರು ದುರಂಹಕಾರಿಗಳೋ,ಯಾರು ಅಧಿಕಾರ ಮದೋನ್ಮತ್ತರೋ ಅಂತಹವರನ್ನು ತಿರಸ್ಕರಿಸಬೇಕು.ಚುನಾವಣೆಗೆ ಸ್ಪರ್ಧಿಸಿದವರು ನೀಡುವ ನಾನಾ ಬಗೆಯ ಭರವಸೆಗಳು,ಆಡುವ ಬಣ್ಣದ ಮಾತುಗಳಿಗೆ ಬಲಿಯಾಗದೆ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಸಚ್ಚರಿತ್ರರನ್ನು ಗೆಲ್ಲಿಸಬೇಕು.ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಆರಿಸಿಬಂದಿದ್ದ ಶಾಸಕ ಏನೇನು ಅಭಿವೃದ್ಧಿ ಕೆಲಸ ಮಾಡಿದ್ದಾನೆ,ವೈಯಕ್ತಿಕವಾಗಿ ಎಷ್ಟು ದುಡ್ಡು ಹೊಡೆದಿದ್ದಾನೆ,ಸ್ವಜನ ಮತ್ತು ಸ್ವಜಾತಿಯವರ ಉದ್ಧಾರಕ್ಕಾಗಿ ಏನೆಲ್ಲ ಮಾಡಿದ್ದಾನೆ,ಮತದಾರರಲ್ಲಿ ಜಾತಿ ವರ್ಗಗಳ ಹೆಸರಿನಲ್ಲಿ ಕಲಹ ಹಚ್ಚಿ,ಕೋರ್ಟ್ ಮೆಟ್ಟಿಲು ಹತ್ತಿಸಿದ್ದಾನೆ ಎನ್ನುವ ಸಂಗತಿಗಳನ್ನು ಆಲೋಚಿಸಬೇಕು.ಚುನಾವಣೆಯ ಸಂದರ್ಭದಲ್ಲಿ ಅತಿವಿನಯ ನಟಿಸಿ ಗೆದ್ದು ಬಂದಾದ ಬಳಿಕ ಬರಿ ತನ್ನ ಹಾಗೂ ತನ್ನ ಜನಾಂಗದ ಹಿತಕ್ಕೆ ಶ್ರಮಿಸುತ್ತಿರುವ ಶಾಸಕರುಗಳನ್ನು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕು.ಜನಪ್ರತಿನಿಧಿಗಳಾದವರು ಅವರು ಯಾವುದೇ ಜಾತಿ,ಧರ್ಮಗಳಿಗೆ ಸೇರಿರಲಿ ಅವರು ಪ್ರತಿನಿಧಿಸುತ್ತಿರುವ ವಿಧಾನಸಭಾ ಕ್ಷೇತ್ರದ ಎಲ್ಲ ಜಾತಿ,ಧರ್ಮಗಳ ಮತದಾರರು ಅವರಿಗೆ ಮತನೀಡಿರುತ್ತಾರೆ.ತನಗೆ ಮತನೀಡಿದ ಪ್ರಜಾವರ್ಗದವರೆಲ್ಲರ ಹಿತಕಾಯಬೇಕು ಎನ್ನುವ ಸಮಷ್ಟಿಕಲ್ಯಾಣಪ್ರಜ್ಞೆ ಶಾಸಕರಾದವರಲ್ಲಿ ಇರಬೇಕು.ಅದನ್ನು ಬಿಟ್ಟು ತನ್ನ ಜಾತಿ,ಜನಾಂಗದ ಅಭಿಮಾನಕ್ಕೆ ಕಟ್ಟು ಬಿದ್ದು ಕೆಲಸಮಾಡಿದರೆ ಅಂತಹ ಶಾಸಕರು ಪ್ರಜಾಪ್ರಭುತ್ವಕ್ಕೆ ಕಂಟಕ ಎಂದು ಮುಲಾಜಿಲ್ಲದೆ ಅವರನ್ನು ತಿರಸ್ಕರಿಸಬೇಕು.

ಹಿಂದೆ ರಾಜಪ್ರಭುತ್ವದ ಕಾಲದಲ್ಲಿ ರಾಜರು ತಮ್ಮ ಸೈನ್ಯದ ಬಲದಿಂದ ಶತ್ರುರಾಜರುಗಳನ್ನು ಸೋಲಿಸಿ ತಮ್ಮ ಪ್ರಜೆಗಳನ್ನು ರಕ್ಷಿಸುತ್ತಿದ್ದರು.ಹಾಗಾಗಿ ಪ್ರಜೆಗಳು ರಾಜರುಗಳಲ್ಲಿ ನಿಷ್ಠೆಯನ್ನಿಡುವುದು ಅನಿವಾರ್ಯವಾಗಿತ್ತು. ಪ್ರಜಾಪ್ರಭುತ್ವಯುಗದಲ್ಲಿ ಪ್ರಜೆಗಳೇ ಪ್ರಭುಗಳು; ಪ್ರಜಾಪ್ರತಿನಿಧಿಗಳೇ ಪ್ರಜೆಗಳ ವಿಶ್ವಾಸವನ್ನು ಗಳಿಸಿಕೊಳ್ಳುವಂತೆ,ಗಳಿಸಿಕೊಂಡ ವಿಶ್ವಾಸವನ್ನು ಉಳಿಸಿಕೊಳ್ಳುವಂತಹ ಅನಿವಾರ್ಯತೆ ಜನಪ್ರತಿನಿಧಿಗಳಿಗಿದೆ.ಭಾರತದ ಸಂವಿಧಾನವು ದೇಶದ ಸಮಸ್ತ ಅಧಿಕಾರವನ್ನು ದೇಶದ ಪ್ರಜಾಕೋಟಿಯಕೈಯಲ್ಲಿಯೇ ಇಟ್ಟಿದೆ.ಪ್ರಜೆಗಳು ತಮ್ಮ ಪರವಾಗಿ ಕೆಲಸ ಮಾಡುವ ಅಭ್ಯರ್ಥಿಗಳನ್ನು ಆಯ್ಕೆಮಾಡುವ ಮೂಲಕ ತಾವು ಪ್ರಭುಗಳೆಂದು ನಿರೂಪಿಸಲು ಉತ್ತಮ ಅವಕಾಶ ಚುನಾವಣೆ.ನಿಮ್ಮ ಮತವೇ ನೀವು ಪ್ರಜಾಪ್ರಭುತ್ವದ ಯುದ್ಧಗೆಲ್ಲುವ ಅಸ್ತ್ರ.ನಿಮ್ಮ ಅಸ್ತ್ರವು ಉತ್ತಮ ಅಭ್ಯರ್ಥಿಗೆ ಶ್ರೀರಕ್ಷೆಯಾಗಲಿ,ದುಷ್ಟ ಅಭ್ಯರ್ಥಿಗೆ ಬ್ರಹ್ಮಾಸ್ತ್ರವಾಗಿ ಕಾಡಿ ಅವರನ್ನು ಸರ್ವನಾಶಮಾಡಲಿ.ಇಂತಹ ಮಹತ್ತಾದ ಅಧಿಕಾರ ಚುನಾವಣೆಯ ಸಂದರ್ಭದಲ್ಲಿ ನಿಮಗೆ ದೊರಕಿದೆ.ಆದ್ದರಿಂದ ಮರೆಯದೆ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸಿ; ತಪ್ಪದೆ ಮತದಾನ ಮಾಡಿ ನಿಮಗೊಪ್ಪುವ ಸರಕಾರವನ್ನು ರಚಿಸಲು ಅವಕಾಶಕೊಡಿ.

About The Author