ಮೂರನೇ ಕಣ್ಣು : ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ’ ಪಡೆವ ಮಂದಿ ತರಲಿರುವ ದುರಂತ : ಮುಕ್ಕಣ್ಣ ಕರಿಗಾರ

      ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನೇನು ಒಂಬತ್ತೇ ದಿನಗಳು ಬಾಕಿ ಇವೆ.ಎಲ್ಲ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ.ರಾಜಕಾರಣಿಗಳ ಈ ಪ್ರಚಾರದಲ್ಲಿ ಸಾರ್ವಜನಿಕರು ಒಂದು ಅಂಶ ಗಮನಿಸಿರಬಹುದು,ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲ ಪಕ್ಷಗಳ ಹಾಲಿ ಶಾಸಕರುಗಳು ತಮ್ಮ ಭಾಷಣದಲ್ಲಿ,ಸಾಧನೆಯ ಪುಸ್ತಕಗಳಲ್ಲಿ,ಪ್ರಚಾರದ ವಾಹನಗಳ ಕ್ಯಾಸೆಟ್ಟುಗಳಲ್ಲಿ ತಾವು ಪ್ರತಿನಿಧಿಸುತ್ತಿರುವ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ಸಾವಿರ ಸಾವಿರ ಕೋಟಿಗಳ ಅನುದಾನ ತಂದೆ ಎಂದು ಹೇಳಿಕೊಳ್ಳುತ್ತಾರೆ.ಎಲ್ಲರೂ ಸಾವಿರಾರು ಕೋಟಿಗಳ ವೀರರೆ! ಕೆಲವರು ಒಂದು ಸಾವಿರ ಕೋಟಿ ತಂದೆ ಎಂದು ಹೇಳಿಕೊಂಡರೆ,ಕೆಲವರು ಎರಡು ಸಾವಿರ ಕೋಟಿ ಎಂದೂ ಮತ್ತೆ ಕೆಲವರು ಐದುಸಾವಿರ ಕೋಟಿ ತಂದಿರುವುದಾಗಿ ಹೇಳಿಕೊಂಡರೆ ಬೆಂಗಳೂರು ಸುತ್ತಮುತ್ತಲಿನ ಶಾಸಕರು ಎಂಟು ಹತ್ತು ಸಾವಿರ ಕೋಟಿಗಳ ಅನುದಾನ ತಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ.ಸರಿ,ಒಪ್ಪೋಣ,ಈ ಸಾವಿರಾರು ಕೋಟಿಗಳ ಅನುದಾನ ಎಲ್ಲಿಂದ ತಂದರು? ವಿಶ್ವಬ್ಯಾಂಕ್ ಇಲ್ಲವೆ ಅಂತಾರಾಷ್ಟ್ರೀಯ ಹಣಕಾಸು ನಿಧಿಗಳಂತಹ ಹಣಕಾಸು ಸಂಸ್ಥೆಗಳು ಇವರುಗಳು ಪ್ರತಿನಿಧಿಸುತ್ತಿರುವ ವಿಧಾನಸಭಾಕ್ಷೇತ್ರಗಳ ಅಭಿವೃದ್ಧಿಗೆ ಈ ಶಾಸಕರುಗಳಿಗೆ ದೇಣಿಗೆಯನ್ನೆನಾದರೂ ನೀಡಿವೆಯೆ  ಅಥವಾ ಈ ಶಾಸಕರುಗಳು ತಮ್ಮ ಮನೆಯಿಂದಲೇನಾದರೂ ಇಷ್ಟು ಸಾವಿರ ಕೋಟಿಗಳನ್ನು ತಂದು ಔದಾರ್ಯ ಮೆರೆದಿದ್ದಾರೆಯೆ? ಸ್ವಾಮಿ ,ನೀವು ಹೇಳುತ್ತಿರುವ ಸಾವಿರ ಸಾವಿರ ಕೋಟಿಗಳ  ಅಭಿವೃದ್ಧಿಯ ಅನುದಾನ ಸಾರ್ವಜನಿಕರ ತೆರಿಗೆಯ ಹಣ! ಅದರಲ್ಲಿ ನಿಮ್ಮ ಔದಾರ್ಯವೇನೂ ಇಲ್ಲ‌.
     ಮತದಾರರು ಸಹನೆಯಿಂದ ಕೇಳಿಸಿಕೊಳ್ಳುತ್ತಿದ್ದಾರೆಂದು ಈ ಶಾಸಕರುಗಳೆಲ್ಲ ಸಾವಿರಾರು ಕೋಟಿಗಳ ಅನುದಾನ ತಂದ ತಮ್ಮ ದೊಡ್ಡಸ್ತಿಕೆಯ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದಾರೆ.ಜನರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮನ್ನು ಆರಿಸಿದ್ದಾದರೂ ಏಕೆ? ಜನರ ಸೇವೆ ಮಾಡಲೆಂದು,ಕ್ಷೇತ್ರದ ಅಭಿವೃದ್ಧಿ ಸಾಧಿಸಲೆಂದೇ ಅಲ್ಲವೆ ? ನೀವು ಜನರ ಸೇವೆಗೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲೇಬೇಕಾದವರು ಅಲ್ಲವೆ? ಹಣಕಾಸು ಸಚಿವರಾಗಲಿ,ಮುಖ್ಯಮಂತ್ರಿಗಳಾಗಲಿ ಅನುದಾನ ಮಂಜೂರು ಮಾಡುತ್ತಾರಲ್ಲ,ಅದು ಕೂಡ ಸಾರ್ವಜನಿಕರ ಹಣವೆ ಅಲ್ಲವೆ? ಸಾರ್ವಜನಿಕರ ತೆರಿಗೆಯ ಹಣದಲ್ಲಿ ವಿವೇಚನಾರಹಿತರಾಗಿ ವರ್ತಿಸುವ ರಾಜಕಾರಣಿಗಳು ಸರಕಾರದ ಬೊಕ್ಕಸಕ್ಕೆ ಅಗತ್ಯಕ್ಕಿಂತ ಅನಗತ್ಯ ಖರ್ಚುಗಳ ಹೊರೆಯನ್ನೇ ಹೆಚ್ಚು ಹೊರಿಸುತ್ತಿದ್ದಾರೆ.ಮತದಾರರ ಮನಸ್ಸುಗಳನ್ನು ಸೆಳೆದುಕೊಳ್ಳಲು ನಿಯಮಬಾಹಿರವಾಗಿ ಕಾಮಗಾರಿಗಳನ್ನು ಮಾಡಿಸುತ್ತಾರೆ,ನಿಯಮ- ಕಾನೂನುಗಳಲ್ಲಿ ಅವಕಾಶವಿಲ್ಲದ ಕಾಮಗಾರಿಗಳನ್ನು ಮಾಡಿಸಿ,ನಿಯಮಗಳನ್ನು ಉಲ್ಲಂಘಿಸಿ ತಾವು ‘ ಪ್ರಶ್ನಾತೀತರು’ ಎಂಬಂತೆ ವರ್ತಿಸುತ್ತಾರೆ.ಪ್ರತಿವರ್ಷ ಮಹಾಲೇಖಪಾಲರ ಕಛೇರಿಯು ಸಲ್ಲಿಸುವ ಆಡಿಟ್ ವರದಿಗಳನ್ನು ಓದಬೇಕು, ಅಲ್ಲಿ ನಿಯಮಗಳನ್ನು ಉಲ್ಲಂಘಿಸಿ,ನಿಯಮಗಳಲ್ಲಿ ಅವಕಾಶವೇ ಇಲ್ಲದ ಕಾಮಗಾರಿಗಳಿಗಾಗಿ ಸಾವಿರಾರು ಕೋಟಿಗಳ ಖರ್ಚುಭರಿಸಿದ್ದಕ್ಕೆ ವಸೂಲಾತಿಗೆ ಸೂಚಿಸಿದ್ದು,ಆಕ್ಷೇಪಣೆಯಲ್ಲಿ ಇರಿಸಿದ್ದು ಕಂಡು ಬರುತ್ತದೆ.ಎ.ಜಿ ಕಛೇರಿಯ ಅಧಿಕಾರಿಗಳು ಸರಕಾರಕ್ಕೆ ವರದಿ ಸಲ್ಲಿಸುವುದಷ್ಟೇ ಅವರ ಕೆಲಸ.ವಿಧಾನಸಭೆಯ ಅಧಿವೇಶನಗಳಲ್ಲಿ ಮಹಾಲೇಖಪಾಲರ ಕಛೇರಿಯ ಆರ್ಥಿಕ ದುರ್ನಡತೆ,ಗಂಭೀರ ಆರ್ಥಿಕ ಲೋಪ ಎನ್ನಬಹುದಾದ ಅಂಶಗಳ ಬಗ್ಗೆ ಚರ್ಚೆ ಆಗದೆ ಎ.ಜಿ ಕಛೇರಿಯ ಆಡಿಟ್ ವರದಿಗಳನ್ನು ಸದನದ ಒಪ್ಪಿಗೆಯೊಂದಿಗೆ ವಿಧಾಯಕಗೊಳಿಸಲಾಗುತ್ತದೆ! ಎ ಜಿ ಕಛೇರಿಯ ಆಡಿಟ್ ಆಕ್ಷೇಪಣೆಗಳಿಗೆ ಸದನವು ವಿನಾಯತಿ ನೀಡುತ್ತದೆ.ಅದು ವಿಧಾನಸಭೆಯ ಪರಮಾಧಿಕಾರ! ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ! ಮುಗಿದು ಹೋಯಿತಲ್ಲ ಅಲ್ಲಿಗೆ!
       ಸಾರ್ವಜನಿಕರ ತೆರಿಗೆಯ ಹಣವನ್ನು ಆರ್ಥಿಕ ಔಚಿತ್ಯದ ನಿಯಮಗಳೊಂದಿಗೆ  ಖರ್ಚು ಮಾಡಬೇಕು ಎನ್ನುವ ನಿಯಮವೇನೋ ಇದೆ.ಆದರೆ ಅದನ್ನು ಪಾಲಿಸಬೇಕಾದವರು ಯಾರು?ನಮ್ಮ ಜನಪ್ರತಿನಿಧಿಗಳ ಪ್ರತಿಷ್ಠೆ ಮತ್ತು ‘ಹಣಹರಿಸುವ’ ಬುದ್ಧಿವಂತಿಕೆಯ ಎದುರು ಎಲ್ಲ ನಿಯಮಗಳೂ ನಿಯಮಗಳ ಪುಸ್ತಕದಲ್ಲಿಯೇ ಉಳಿಯುತ್ತವೆ.
        ಸಾವಿರಾರು ಕೋಟಿಗಳ ಅನುದಾನ ತರುವವರಿಗೆ ವೈಯಕ್ತಿಕವಾಗಿ ಅವರವರ ಯೋಗ್ಯತಾನುಸಾರ ಲಾಭ ದಕ್ಕಿರುತ್ತದೆ.ಕಾಮಗಾರಿಗಳನ್ನು ಮಂಜೂರು ಮಾಡಿಸಿ,ಅನುದಾನ ತರುವ ಕೆಲಸವನ್ನು ಶಾಸಕರುಗಳು ಮಾಡಿದರೆ ಸರಕಾರಿ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಿ,ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಬಿಲ್ಲನ್ನು ಎತ್ತುತ್ತಾರೆ.ಸರಕಾರದ ಮೇಲಿನ ಹಂತದವರು ಭ್ರಷ್ಟಾಚಾರಕ್ಕೆ ಆಸ್ಪದನೀಡದಂತಹ,ಪಾರದರ್ಶಕ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು  ಹೇಳುತ್ತಾರೆ.ತಳಮಟ್ಟದ ವಾಸ್ತವ ಏನು ಎಂಬುದು ಅವರಿಗೂ ಚೆನ್ನಾಗಿ ಗೊತ್ತಿರುತ್ತದೆ.ಜನಪ್ರತಿನಿಧಿಗಳು,ಸರಕಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕೂಟವು ಸರಕಾರಿ ಅನುದಾನದಲ್ಲಿ ಸಿಂಹಪಾಲು ಪಡೆಯುತ್ತದೆ.ಮಂಗ  ತಾನು ಮೊಸರು ತಿಂದು ಮೇಕೆಯ ಮೂತಿಗೆ ಒರೆಸಿದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತವೆ.ಸರಕಾರಿ ಅಧಿಕಾರಿಗಳೆಲ್ಲರೂ ಪ್ರಾಮಾಣಿಕರಾಗಿದ್ದರೆ,ಪಾರದರ್ಶಕವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದ್ದರೆ ಲೋಕಾಯುಕ್ತರ ಕಛೇರಿಯ ಸ್ಥಾಪನೆಯ ಅಗತ್ಯವೇ ಇರುತ್ತಿರಲಿಲ್ಲ.
       ಈಗ ಎಲ್ಲ ರಾಜ್ಯ ಸರಕಾರಗಳು ತಮ್ಮ ಅಭಿವೃದ್ಧಿ ಕಾರ್ಯಕ್ರಮಗಳು,ಯೋಜನೆಗಳು ಮತ್ತು ಕಾಮಗಾರಿಗಳಿಗಾಗಿ ಸರಕಾರಿ ಮತ್ತು ಖಾಸಗಿ ಬ್ಯಾಂಕುಗಳಲ್ಲದೆ ಎಡಿಬಿ, ಐಎಂಎಫ್,ವರ್ಲ್ಡ್ ಬ್ಯಾಂಕುಗಳಂತಹ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲ ತರುತ್ತಿವೆ.ಆ ಸಾಲ ಮತ್ತು ಅದರ ಬಡ್ಡಿಯ ಭಾರವನ್ನು ಹೊರಬೇಕಾದವರು ರಾಜ್ಯದ ಜನತೆ.ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳ ಒಳ ಒಪ್ಪಂದ,ಲಂಗುಲಗಾಮಿಲ್ಲದ ವರ್ತನೆಗಳಿಂದ ಸಾರ್ವಜನಿಕರ ತೆರಿಗೆಯ ಹಣ ದುಂದುವ್ಯಯ ಎನ್ನುವುದಕ್ಕಿಂತ ಅಪವ್ಯಯವಾಗುತ್ತದೆ.ಸಾರ್ವಜನಿಕರೂ ಬುದ್ಧಿವಂತರಾಗಬೇಕಿದೆ.ಸರಕಾರದ ಸಾಲಕ್ಕೆ ಹೊಣೆಗಾರರಾಗಬೇಕಾದವರು ನಾವೆ! ಇಂದಿಲ್ಲ ,ನಾಳೆ ತೀರಿಸಲೇಬೇಕಾದ ಈ ಸಾಲದ ಹಣದಲ್ಲಿ ಕ್ಷೇತ್ರಕ್ಕೆ ಉಪಯೋಗಿ ಕಾಮಗಾರಿಗಳೆಷ್ಟು,ಹರಿದು ಬಂದ ಅನುದಾನದಲ್ಲಿ ನಿಜವಾಗಿಯೂ ಆದ ಅಭಿವೃದ್ಧಿ ಎಷ್ಟು ,ಕೈಯಿಂದ ಕೈಗೆ ಹರಿದ ಹಣ ಎಷ್ಟು ಎನ್ನುವುದರ ಕುರಿತು ಆಲೋಚಿಸಬೇಕು.
        ಬಹುಪಕ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರಾದ ಪ್ರಜೆಗಳು ಯಾವ ಪಕ್ಷಕ್ಕಾದರೂ ನಿಷ್ಠೆ ತೋರಿಸಲಿ,ಯಾರನ್ನಾದರೂ ಆರಿಸಲಿ ಆದರೆ ಈ ಜನಪ್ರತಿನಿಧಿಗಳು ಮಾಡುತ್ತಿರುವ ಸಾರ್ವಜನಿಕ ಸಂಪನ್ಮೂಲಗಳ ಅಪವ್ಯಯಕ್ಕೆ ತಾವಲ್ಲದಿದ್ದರೂ ತಮ್ಮ ಮಕ್ಕಳು ಇಲ್ಲವೆ ಮೊಮ್ಮಕ್ಕಳು ಹೊಣೆಯಾಗಲೇಬೇಕಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

About The Author