ಮೂರನೇ ಕಣ್ಣು : ನೂರು ತುಂಬಿದ ಪ್ರಧಾನಿ ಮೋದಿಯವರ ‘ ಮನದ ಮಾತು’ : ಮುಕ್ಕಣ್ಣ ಕರಿಗಾರ

ಎಪ್ರಿಲ್ ಮುವ್ವತ್ತರ ಭಾನುವಾರದಂದು ಪ್ರಧಾನ ಮಂತ್ರಿ ನರೇಂದ್ರಮೋದಿಯವರ ‘ ಮನದ ಮಾತಿನ’ನೂರನೇ ಕಾರ್ಯಕ್ರಮ ಪ್ರಸಾರವಾಯಿತು.ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನದಾಳದ ಮಾತುಗಳ ಪ್ರಕಟರೂಪವಾಗಿರುವ ‘ ಮನಕಿಬಾತ್’ ಒಂದು ವಿಶಿಷ್ಟ ಕಾರ್ಯಕ್ರಮ.ಪ್ರಧಾನಿ ನರೇಂದ್ರ ಮೋದಿಯವರ ವಿರೋಧಿಗಳು ವಿರೋಧಕ್ಕಾಗಿ ವಿರೋಧ ಎಂಬಂತೆ ಇದನ್ನೂ ವಿರೋಧಿಸಿದ್ದಾರೆ.ಕೆಲವರು ಮೋದಿಯವರ ಮನಕಿಬಾತ್ ಕಾರ್ಯಕ್ರಮವನ್ನು ಕೇವಲ ಬಿಜೆಪಿ ಕಾರ್ಯಕರ್ತರು,ಮೋದಿಯವರ ಅಭಿಮಾನಗಳು ಮಾತ್ರ ಕೇಳುತ್ತಾರೆ, ದೇಶದ ಬಹಳಷ್ಟು ಜನ ಮನದಮಾತನ್ನು ಕೇಳಿಯೇ ಇಲ್ಲ ಎಂದು ಟೀಕೆ ಮಾಡಿದ್ದಾರೆ.

ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಮಂತ್ರಿಯಾಗಿ ಪ್ರಧಾನಿ ನರೇಂದ್ರ ಮೋದಿಯವರು ‘ಮನದಮಾತು’ ಕಾರ್ಯಕ್ರಮವನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ,ದೇಶದ ಪ್ರಜಾಸಮಸ್ತರೆದುರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.ಟಿ ವಿ ವಾಹಿನಿಗಳ ಅಬ್ಬರದಲ್ಲಿ ಸರಕಾರಿಸ್ವಾಮ್ಯದ ಆಕಾಶವಾಣಿಯು ತನ್ನ ನೆಲೆ ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ದೇಶವಾಸಿಗಳ ಸಂಪರ್ಕಕ್ಕಾಗಿ ಆಕಾಶವಾಣಿಯನ್ನು ಆಯ್ದುಕೊಂಡರು.ದೂರದರ್ಶನ ಇಲ್ಲದಂತಹ ದಟ್ಟಕಾಡಿನ ಪ್ರದೇಶಗಳ ಜನತೆಯನ್ನು ಮುಟ್ಟಿದರು ಪ್ರಧಾನಿಮೋದಿಯವರು ಆಕಾಶವಾಣಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ಅವರ ಮಾಸಿಕ’ ಮನ್ ಕಿ ಬಾತ್’ ನ ಮೂಲಕ.ದಟ್ಟಕಾಡು,ದುರ್ಗಮ ಕಣಿವೆಗಳಲ್ಲಿ ವಾಸಿಸುತ್ತಿರುವ ಪ್ರಜೆಗಳು ಪ್ರಧಾನಮಂತ್ರಿಯವರನ್ನು ನೋಡಲು ಆಗದೆ ಇದ್ದರೂ ಅವರ ಮಾತುಗಳನ್ನು ಕೇಳಿದರು,ಭಾವನೆಗಳನ್ನು ಅರ್ಥಮಾಡಿಕೊಂಡರು.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಉತ್ತಮ ವಾಕ್ಪಟುಗಳಾಗಿದ್ದರು ಮಾತ್ರವಲ್ಲದೆ ಇಂಗ್ಲಿಷಿನಲ್ಲಿ ಸುಂದರವಾಗಿ ( Beautiful English)ಬರೆಯುತ್ತಿದ್ದರು.ನೆಹರೂ ಅವರ ‘ ಭಾರತದರ್ಶನ’ ಭಾರತದ ಇತಿಹಾಸ,ಸಂಸ್ಕೃತಿ ಮತ್ತು ಪರಂಪರೆಗಳ ಮೇಲೆ ಬೆಳಕು ಚೆಲ್ಲುವ ಅದ್ಭುತ ಕೃತಿ.ಹಲವಾರು ಕೃತಿಗಳನ್ನು ಬರೆದಿರುವ ನೆಹರೂ ಅವರು ಪ್ರಧಾನಮಂತ್ರಿಯಾಗಿ ಮಾತ್ರವಲ್ಲ,ಇಂಗ್ಲಿಷ್ ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಲ್ಪಡುತ್ತಿದ್ದಾರೆ ಅವರ ವಿಶಿಷ್ಟ ಸಾಹಿತ್ಯ ಕೃತಿಗಳಿಂದ.ನರೇಂದ್ರ ಮೋದಿಯವರು ಜವಾಹರಲಾಲ್ ನೆಹರೂ ಅವರಂತೆ ಇಂಗ್ಲಿಷ ಪಂಡಿತರಲ್ಲ,ಇಂಗ್ಲಿಷಿನಲ್ಲಿ ಮಾತನಾಡುತ್ತಾರಾದರೂ ನೆಹರೂ ಅವರ ಶ್ರೀಮಂತ ಇಂಗ್ಲಿಷ್ ಮೊದಿಯವರದ್ದಲ್ಲ ಮತ್ತು ಅವರು ಸಾಹಿತಿಗಳೂ ಅಲ್ಲ.ಹಾಗಾಗಿ ಪ್ರಧಾನ ಮಂತ್ರಿಯಾಗಿ ದೇಶದ ಪ್ರಜಾಸಮಸ್ತರನ್ನು ಸಂಪರ್ಕಿಸುವ ಉದ್ದೇಶದಿಂದ ದೇಶವಾಸಿಗಳು ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಹಿಂದಿಯಲ್ಲಿ ‘ ಮನಕಿ ಬಾತ್’ ಕಾರ್ಯಕ್ರಮ ರೂಪಿಸಿದರು,ತಮ್ಮ‌ ಕನಸು- ಕಲ್ಪನೆಗಳನ್ನು ಜನರ ಮುಂದೆ ಇಟ್ಟರು.ಮೋದಿಯವರು ಸ್ವಚ್ಛಭಾರತದಂತಹ ರಾಷ್ಟ್ರಜೀವನದ ಸ್ವಸ್ಥತೆಗೆ ಅನಿವಾರ್ಯವಾದ ಕಾರ್ಯಕ್ರಮಗಳ ಬಗ್ಗೆ ‘ಮನಕಿಬಾತ್’ ನಲ್ಲಿ ಹೆಚ್ಚು ಹೆಚ್ಚು ಪ್ರಸ್ತಾಪಿಸಿದರು.ಸಮಾಜ ಕಟ್ಟುವ ಪ್ರಯತ್ನದಲ್ಲಿರುವವರನ್ನು ತಮ್ಮ ಭಾಷಣದಲ್ಲಿ ಗುರುತಿಸಿದರು,ಉತ್ತಮ ಸಾಧಕರನ್ನು ಹೊಗಳಿದರು.ವಿಶಿಷ್ಟಸಾಧನೆ ಮಾಡಿದ,ಗ್ರಾಮ- ಗ್ರಾಮ ಪಂಚಾಯತಿಗಳನ್ನು ಸ್ಮರಿಸಿದರು.ದೇಶ ಎತ್ತ ಸಾಗಬೇಕು ,ಯುವಜನತೆಯ ಆಶಯ- ಆದರ್ಶ ಏನಾಗಬೇಕು ಎಂಬುದನ್ನು ಹಂಚಿಕೊಂಡರು.ಇವೆಲ್ಲವೂ ಪಕ್ಷಾತೀತವಾಗಿ ನರೇಂದ್ರಮೋದಿಯವರು ‘ ರಾಷ್ಟ್ರಕಾಳಜಿ’ ಯಿಂದ ಪ್ರಸ್ತಾಪಿಸಲ್ಪಟ್ಟ ಸಂಗತಿಗಳು.

ಜವಾಹರಲಾಲ್ ನೆಹರೂ ಅವರು ಇಂದಿರಾಗಾಂಧಿಯವರು ತಮ್ಮ ಉತ್ತರಾಧಿಕಾರಿಯಾಗಬೇಕು,ತಮ್ಮ ನಂತರ ಈ ದೇಶದ ಪ್ರಧಾನಿಯಾಗಬೇಕು ಎಂದು ಕನಸುಕಂಡಿದ್ದರು. ನೆಹರೂ ಅವರ ‘ ಮಗಳಿಗೆ ಬರೆದ ಪತ್ರಗಳು’ ಕೃತಿಯನ್ನು ಓದಿದರೆ ಈ ಅಂಶ ಸ್ಪಷ್ಟವಾಗುತ್ತದೆ.ಆದರೆ ಮದುವೆಯಾಗಿಯೂ ಬ್ರಹ್ಮಚಾರಿಯಾಗಿ ಸ್ವಂತ ಮಕ್ಕಳಿಲ್ಲದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಯುವಜನತೆಯ ಭವಿಷ್ಯದ ಬಗ್ಗೆ ಅವರೊಂದಿಗೆ ರಾಷ್ಟ್ರದಪ್ರಧಾನಿಯಾಗಿ ತಮ್ಮ ಭಾವನೆಗಳನ್ನು ಹಂಚಿಕೊಂಡರೆ ತಪ್ಪೇನು? ಮೋದಿಯವರು ಮಾಡಿದ ಎಲ್ಲವೂ ಸರಿ ಇಲ್ಲದೆ ಇರಬಹುದು; ಆದರೆ ಮೋದಿಯವರ ಎಲ್ಲ ಕಾರ್ಯ,ಚಟುವಟಿಕೆಗಳಲ್ಲಿ ತಪ್ಪುಹುಡುಕುವ ದುರ್ವ್ಯಸನಕ್ಕೆ ಗುರಿಯಾಗಬಾರದು.ನಮ್ಮ ವೈರಿಯೇ ಆದರೂ ಅವರ ಉತ್ತಮಕಾರ್ಯಗಳನ್ನು ಮೆಚ್ಚಬೇಕು ಎನ್ನುತ್ತದೆ ಭಾರತದ ರಾಜಧರ್ಮ.ಹಾಗಿದ್ದೂ ಯಾವಫಲಾಪೇಕ್ಷೆ ಇಲ್ಲದೆ ಮೋದಿಯವರು ನಡೆಸುತ್ತಿರುವ ಅವರ ಮನೋಭೂಮಿಕೆಯಲ್ಲರಳುವ ‘ ಮನಕಿ ಬಾತ್’ ಅನ್ನು ವಿರೋಧಿಸುವುದೇಕೆ ?ಪ್ರಧಾನಿ ನೆಹರೂ ಅವರು ಸಾಹಿತಿಗಳು,ಶಿಷ್ಟವರ್ಗದ ಜನರನ್ನು ತಲುಪಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರಿಗೂ ಅರ್ಥವಾಗುವ ಹಿಂದಿ ಭಾಷೆಯಲ್ಲಿ ದೇಶದ ಪ್ರಜಾಸಮಸ್ತರನ್ನು ತಲುಪುವ ಪ್ರಯತ್ನ ಮಾಡಿದ್ದು ಮತ್ತು ತಮ್ಮ ಕಾರ್ಯಬಾಹುಳ್ಯದ ನಡುವೆಯೂ ನಿರಂತರವಾಗಿ ಅದನ್ನು ನಡೆಸಿಕೊಂಡು ಬಂದಿರುವುದು ಶ್ಲಾಘನೀಯ,ಅಭಿನಂದನೀಯ.ನರೇಂದ್ರ ಮೋದಿಯವರು ವಿರೋಧಪಕ್ಷಗಳ ನಾಯಕರ ಪ್ರಶ್ನೆಗಳಿಗೆ ಉತ್ತರ ನೀಡದೆ ಇರಬಹುದು,ಸಂಸತ್ತಿನಲ್ಲಿ ಮಾತನಾಡದೆ ಇರಬಹುದು; ಆದರೆ ‘ಮನಕಿಬಾತ್’ ಕಾರ್ಯಕ್ರಮದ ಮೂಲಕ ದೇಶದ ಪ್ರಜಾಸಮಸ್ತರೆದುರು ದೇಶದ ಪ್ರಧಾನಮಂತ್ರಿಯಾಗಿ ಸ್ವಚ್ಛ,ಸುಂದರ,ಸಂಪದಮೃದ್ಧಿಯ ದೇಶ ಕಟ್ಟುವ,ವಿಶ್ವದಗುರುವಾಗಿ ಭಾರತವನ್ನು ಮುನ್ನಡೆಸುವ ಸ್ಫೂರ್ತಿದಾಯಕ ಮಾತುಗಳನ್ನಾಡಿದರೆ ಅದರಲ್ಲಿ ತಪ್ಪನ್ನೇಕೆ ಹುಡುಕಬೇಕು?

About The Author