ಮೂರನೇ ಕಣ್ಣು : ವಿರೋಧಿಗಳ ಬಗೆಗಿನ ಟೀಕೆಗಳು ಸಭ್ಯತೆ,ಸಂಸ್ಕೃತಿಯ ಎಲ್ಲೆ ಮೀರದಿರಲಿ : ಮುಕ್ಕಣ್ಣ ಕರಿಗಾರ

ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ‘ ವಿಷ ಸರ್ಪ’ ಎಂದು ಟೀಕಿಸಿ,ಜನರ ಆಕ್ರೋಶಕ್ಕೆ ತುತ್ತಾಗಿ ‘ ವಿಷದ ಸರ್ಪ ಎನ್ನುವ ಪದಬಳಕೆ ವೈಯಕ್ತಿಕವಾಗಿ ಮೋದಿಯವರನ್ನು ಗುರಿಯಾಗಿಸಿಕೊಂಡು ಹೇಳಿದ್ದಲ್ಲ,ಅವರು ಪ್ರತಿನಿಧಿಸುತ್ತಿರುವ ರಾಜಕೀಯ ಸಿದ್ಧಾಂತದ ಕುರಿತ ಹೋಲಿಕೆ’ ಅದು ಎಂದು ಸಮಜಾಯಿಷಿ ನೀಡಿದರು.ಖರ್ಗೆಯವರ ಮಾತಿನ ಪ್ರತಿಕೂಲಪರಿಣಾಮದಿಂದ ಕಾಂಗ್ರೆಸ್ ಪಕ್ಷವು ಹೊರಬರುವ ಮುನ್ನವೆ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ‘ ಸೋನಿಯಾಗಾಂಧಿಯವರೇನು ನಾಗಕನ್ಯೆಯೆ?’ ಎಂದು ಪ್ರಶ್ನಿಸಿ,ಖರ್ಗೆಯವರು ಮೋದಿಯವರ ಕುರಿತು ಆಡಿದ ‘ ವಿಷದಹಾವಿ’ ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ ಬಿಜೆಪಿಗೆ ಮುಜುಗರವನ್ನುಂಟು ಮಾಡಿದ್ದಾರೆ.

ವಿಧಾನಸಭಾ ಚುನಾವಣಾ ಪ್ರಚಾರಸಭೆಗಳಲ್ಲಿ ರಾಜಕೀಯ ನಾಯಕುರುಗಳು ತಮ್ಮ ಎದುರಾಳಿಗಳ ವಿರುದ್ಧ ಬಳಸುವ ಪದಗಳು ನಾಗರಿಕಪ್ರಪಂಚ ಸ್ವೀಕರಿಸುವ ರೀತಿಯಲ್ಲಿ ಇರಬೇಕು,ಸಂಸ್ಕೃತಿ ಸಭ್ಯತೆಯ ಎಲ್ಲೆ ಮೀರಬಾರದು.ಪ್ರಧಾನ ಮಂತ್ರಿ ನರೇಂದ್ರಮೋದಿಯವರನ್ನು ಮಲ್ಲಿಕಾರ್ಜುನ ಖರ್ಗೆಯವರು ‘ ವಿಷದ ಹಾವು’ ಎಂದು ಟೀಕಿಸಿದ್ದು ಖಂಡಿತ ಸರಿಯಲ್ಲ,ಸಮರ್ಥನೀಯವಲ್ಲ.ಖರ್ಗೆಯವರಂತಹ ಸುದೀರ್ಘ ರಾಜಕೀಯ ಜೀವನಾನುಭವ ಹೊಂದಿರುವ ಹಿರಿಯರಾಜಕಾರಣಿಯ ಬಾಯಲ್ಲಿ ಇಂಥ ಮಾತು ಬರಬಾರದಿತ್ತು.ಹಾಗೆಯೇ ಬಸನಗೌಡ ಪಾಟೀಲ ಯತ್ನಾಳ ಸೋನಿಯಾಗಾಂಧಿಯವರನ್ನು ನಾಗಕನ್ಯೆಗೆ ಹೋಲಿಸಿದ್ದು ಕೂಡ ಸಭ್ಯತೆಯಲ್ಲ,ಸಂಸ್ಕೃತಿಯಲ್ಲ.ಇಂತಹ ಮಾತುಗಳನ್ನು ವಿರೋಧಪಕ್ಷಗಳು ಟೀಕಿಸುವ ಮುಂಚೆಯೇ ಅಂತಹ ಮಾತುಗಳನ್ನಾಡಿದ ರಾಜಕಾರಣಿಗಳು ಪ್ರತಿನಿಧಿಸುತ್ತಿರುವ ರಾಜಕೀಯಪಕ್ಷಗಳ ವರಿಷ್ಠರುಗಳೇ ಇಂತಹ ಪದಗಳ ಬಳಕೆ ಸರಿಯಲ್ಲ ಎಂದು ಪಕ್ಷದ ಶಾಸಕರು,ಸಂಸದರುಗಳಿಗೆ ತಿಳಿ ಹೇಳಬೇಕು.ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಅವರಿಗೆ ಬುದ್ಧಿಹೇಳುವ ಧೈರ್ಯ ಆ ಪಕ್ಷದ ನಾಯಕರುಗಳಿಗಿಲ್ಲ.ಬಸನಗೌಡ ಪಾಟೀಲ ಯತ್ನಾಳ ಅವರು ನಾಲಿಗೆ ಬಿಗಿಹಿಡಿದುಕೊಳ್ಳಲು ಸೂಚಿಸಿದರೆ ಅದು ಬಿಜೆಪಿಗೆ‌ ಪ್ಲಸ್ ಪಾಯಿಂಟ್ ಆಗುತ್ತದೆ.ಬಿಜೆಪಿಯವರೂ ಆ ಪ್ರಯತ್ನ ಮಾಡುತ್ತಿಲ್ಲ.

ಚುನಾವಣೆಯಲ್ಲಿ ಎದುರಾಳಿಗಳ ರಾಜಕೀಯ ದೌರ್ಬಲ್ಯಗಳನ್ನು ಟೀಕಿಸಬೇಕೇ ಹೊರತು ವಿರೋಧಿಗಳನ್ನು ವೈಯಕ್ತಿಕವಾಗಿ ಟೀಕಿಸಬಾರದು ಎನ್ನುವುದು ಸಭ್ಯರಾಜಕಾರಣದ ಸರಳಸೂತ್ರ.ವಿರೋಧ ಪಕ್ಷ ಮತ್ತು ಎದುರಾಳಿಗಳ ಭ್ರಷ್ಟಾಚಾರ,ಅದಕ್ಷತೆ,ಮತದಾರರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವುದು ಇವೇ ಮೊದಲಾದ ವಿಷಯಗಳನ್ನು ಟೀಕಿಸಬಹುದು,ಆದರೆ ಎದುರಾಳಿಗಳ ವೈಯಕ್ತಿಕ ಜೀವನ,ಕೌಟುಂಬಿಕ ಜೀವನ ಮತ್ತು ಅವರ ವ್ಯಕ್ತಿತ್ವಕ್ಕೆ ಧಕ್ಕೆಯೊದಗುವಂತಹ ಹೇಳಿಕೆಗಳನ್ನು ನೀಡಬಾರದು.ನಮ್ಮ ರಾಜಕಾರಣಿಗಳು ಬಾಯಿಹರಕುರುಗಳೇ ಹೊರತು ವಾಕ್ಪಟುಗಳಲ್ಲ,ಭಾಷಣ ಕಲೆಯ ನೆಲೆ ಬೆಲೆಯನ್ನರಿತವರಲ್ಲ.ಶೀಲ- ಅಶ್ಲೀಲತೆಯ ಪರಿವೆಯನ್ನೂ ಲೆಕ್ಕಿಸದೆ ಮನಸ್ವೀ ಮಾತನಾಡುವುದು,ತೋಚಿದಂತೆ ಮಾತನಾಡುವುದು,ಮಾತಿನ ಪರಿಣಾಮದಿಂದ ಪರಿತಪಿಸುವುದು ಇಂದಿನ ರಾಜಕಾರಣದಲ್ಲಿ ಸಹಜವಾಗಿದೆ.ಮೈಕ್ ನ ಮುಂದೆ ಬಂದೊಡನೆ ಮೈಯಲ್ಲಿ ದೆವ್ವ ಹೊಕ್ಕವರಂತೆ ಮಾತನಾಡುವವರು ಉತ್ತಮ ಪ್ರಜಾಪ್ರತಿನಿಧಿಗಳಲ್ಲ.ಏಕವಚನ ಪದಪ್ರಯೋಗ ಸಲ್ಲದು,ಅಸಂವಿಧಾನಿಕ ಪದಗಳ ಬಳಕೆ ಕೂಡದು.ಆವೇಶದ ಭರದಲ್ಲಿ ಅನರ್ಥಕಾರಿ ಮಾತುಗಳನ್ನಾಡಬಾರದು.ಆದರೆ ರಾಜಕಾರಣಿಗಳಿಗೆ ಇಂತಹ ಬುದ್ಧಿವಾದ ಹೇಳಬೇಕಾದವರು ಯಾರು? ತಮ್ಮ ಪಕ್ಷದ ಶಾಸಕರು,ಸಂಸದರುಗಳ ತುಟಿತಪ್ಪಿದ ಮಾತುಗಳಿಂದ ಖುಷಿಪಡುವ ಪಕ್ಷದ ವರಿಷ್ಠರುಗಳನ್ನು ಸಹ ಸುಸಂಸ್ಕೃತ ಮನಸ್ಕರುಗಳಲ್ಲ ಎಂದೇ ಭಾವಿಸಬೇಕಾಗುತ್ತದೆ.

ರಾಜಕಾರಣಿಗಳು ತಮ್ಮ ಮತ್ತು ತಮ್ಮ ಪಕ್ಷದ ಸಾಧನೆ ಹೇಳಿಕೊಳ್ಳಲಿ.ವಿರೋಧ ಪಕ್ಷಗಳ ವೈಫಲ್ಯಗಳನ್ನು ಜನರೆದುರು ತೆರೆದಿಡಲಿ.ತಾವು ಮತ್ತು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡಲು ಉದ್ದೇಶಿಸಿದ್ದೇವೆ ಎಂದು ಜನರಿಗೆ ಮನವರಿಕೆ ಮಾಡಿಕೊಡಲಿ.ಅದನ್ನು ಬಿಟ್ಟು ರಾಜಕೀಯ ಎದುರಾಳಿಗಳ ಬಗ್ಗೆ ಹಗುರವಾಗಿ ಮಾತನಾಡುವುದು,ಹದ್ದುಮೀರಿ ಮಾತನಾಡುವುದು,ಅವರ ಚಾರಿತ್ರ್ಯವಧೆಯಾಗುವಂತಹ ಮಾತುಗಳನ್ನಾಡುವುದು ಸರಿಯಲ್ಲ,ಸಮರ್ಥನೀಯವೂ ಅಲ್ಲ.’ ನಾಲಗೆ ಕುಲವನ್ನು ಹೇಳುತ್ತದೆ’ ಎನ್ನುವ ಗಾದೆಯೊಂದಿದೆ.ನಾವಾಡುವ ಮಾತುಗಳಿಂದ ನಾವು ಸುಸಂಸ್ಕೃತರೋ ಅಥವಾ ಸಂಸ್ಕೃತಿಹೀನರೋ,ನಾವು ನಾಗರಿಕರೋ ಅಥವಾ ಅನಾಗರಿಕರೋ ಎಂದು ನಮ್ಮ ವ್ಯಕ್ತಿತ್ವವನ್ನು ಗುರುತಿಸಬಹುದು ಎನ್ನುವುದು ಈ ಗಾದೆಯ ಅರ್ಥ.ಸುಸಂಸ್ಕೃತರು ಸಭ್ಯತೆಯ ಎಲ್ಲೆ ಮೀರುವುದಿಲ್ಲ,ಸಂಸ್ಕೃತಿಹೀನರಿಗೆ ಸಭ್ಯತೆ,ಶಿಷ್ಟಾಚಾರ,ಇತರರನ್ನು ಗೌರವಿಸಬೇಕು ಎನ್ನುವ ತಿಳಿವಳಿಕೆ ಇರುವುದಿಲ್ಲ.ಮತದಾರರು ಯಾರನ್ನಾದರೂ ಬೇಕಾದರೂ ಚುನಾಯಿಸುವ ಪರಮಾಧಿಕಾರ ಹೊಂದಿದ್ದಾರೆ; ಆದರೆ ಸಂಸ್ಕೃತಿವಿಹೀನರನ್ನು ಗೆಲ್ಲಿಸುವ ಮೂಲಕ ತಮ್ಮ ಬೌದ್ಧಿಕಮಟ್ಟವನ್ನು ಜಗತ್ತಿಗೆ ತೋರಿಸಬಾರದು.ಮತದಾರರು ಕೂಡ ‘ಸುಸಂಸ್ಕೃತವ್ಯಕ್ತಿಗೆ ನಮ್ಮ ಮತ’ ಎಂದು ನಿರ್ಣಯಿಸಿದರೆ ರಾಜಕಾರಣಿಗಳ ಲಂಗುಲಗಾಮಿಲ್ಲದ ಮಾತುಗಳಿಗೆ ಕಡಿವಾಣ ಬೀಳುತ್ತದೆ.ಪ್ರಜಾಪ್ರಭುತ್ವದ ಗತಿನಿರ್ಧಾರಕರಾಗಿರುವ ಮತದಾರರು ಪ್ರಬುದ್ಧ ರಾಜಕಾರಣಿಗಳನ್ನು ಆಯ್ಕೆ ಮಾಡುವ ತಮ್ಮ ವಿವೇಚನಾಧಿಕಾರ ಬಳಸಬೇಕಿದೆ.

About The Author