ಮೂರನೇ ಕಣ್ಣು : ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಳ್ಳದ ಶಾಸಕರು,ಸಚಿವರುಗಳ ವರ್ತನೆ ಸರಿಯಲ್ಲ ! : ಮುಕ್ಕಣ್ಣ ಕರಿಗಾರ

ಮೇ 10 ರಂದು ಕರ್ನಾಟಕದ ವಿಧಾನಸಭೆಯ ಚುನಾವಣೆಯು ನಡೆಯಲಿದೆ.ಮೇ ಅಂತ್ಯದೊಳಗೆ ಹೊಸ ಸರಕಾರ ರಚನೆ ಆಗಲಿದೆ.ಪ್ರಜಾಪ್ರಭುತ್ವದಲ್ಲಿ ಜನರಿಂದ ಚುನಾಯಿತರಾಗುವ ಶಾಸಕರುಗಳು ಅವರ ಕ್ಷೇತ್ರದ ಜನತೆಯ ಕಲ್ಯಾಣವನ್ನು ಸಾಧಿಸಬೇಕಿರುವುದರ ಜೊತೆಗೆ ಸಂವಿಧಾನದ ವಿಧಿಗನುಗುಣವಾಗಿ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದಾಗಿ ಪ್ರಮಾಣಸ್ವೀಕರಿಸುವ ಪ್ರತಿಯೊಬ್ಬ ಶಾಸಕ ಸಂವಿಧಾನದ ವಿಧಿ- ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿರುತ್ತದೆ.ಪ್ರಜಾಪ್ರಭುತ್ವ ಭಾರತದ ರಾಜ್ಯಾಡಳಿತದಲ್ಲಿ ಬಹುಮತಪಡೆದ ಪಕ್ಷದ ಶಾಸಕರುಗಳಲ್ಲಿ ಹಲವರು ಸೇರಿ ಸರಕಾರ ರಚಿಸುತ್ತಾರೆ ರಾಜ್ಯದ ದೈನಂದಿನ ಆಡಳಿತ ನೋಡಿಕೊಳ್ಳಲು.ಇಂತಹ ಸರಕಾರದಲ್ಲಿ ಮುಖ್ಯಮಂತ್ರಿ,ಇತರ ಸಚಿವರುಗಳು ಇರುತ್ತಾರೆ.ರಾಜ್ಯಪಾಲರು ಮುಖ್ಯಮಂತ್ರಿಯನ್ನು ಮತ್ತು ಮುಖ್ಯಮಂತ್ರಿಯ ಸಲಹೆಯಂತೆ ಇತರ ಮಂತ್ರಿಗಳನ್ನು ನೇಮಿಸುತ್ತಾರೆ.ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಚಿವರುಗಳನ್ನುಳ್ಳ ಸರಕಾರವು ಕನಿಷ್ಠವಾರಕ್ಕೆ ಒಂದು ಬಾರಿಯಾದರೂ ಸಭೆಸೇರಿ ರಾಜ್ಯಾಡಳಿತಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ಸರಕಾರ ದೈನದಿಂದ ಆಡಳಿತದ ಆಗು ಹೋಗುಗಳನ್ನು ನಿರ್ಣಯಿಸುವ ಸಭೆಯು ‘ ಸಚಿವಸಂಪುಟ ಸಭೆ’ ಇಲ್ಲವೆ‌ ಕ್ಯಾಬಿನೆಟ್ ಮೀಟಿಂಗ್ ಎಂದು ಕರೆಯಲ್ಪಡುತ್ತದೆ.

ಮುಖ್ಯಮಂತ್ರಿಯ ನೇತೃತ್ವದ ಸರಕಾರ ಮತ್ತು ಸಚಿವ ಸಂಪುಟವನ್ನು ಬಲಪಡಿಸಲು,ನಿರ್ದೇಶಿಸಲು ಮತ್ತು ರಾಜ್ಯಾಡಳಿತಕ್ಕೆ ಬೇಕಾದ ಕಾಯ್ದೆ ಕಾನೂನುಗಳನ್ನು ರೂಪಿಸಲು ರಾಜ್ಯದ ವಿಧಾನ ಮಂಡಲದ ಎಲ್ಲ ಸದಸ್ಯರುಗಳುಳ್ಳ ಅಧಿವೇಶನವನ್ನು ಸಂವಿಧಾನವು ನಿಯಮಿಸಿದೆ.ಭಾರತ ಸಂವಿಧಾನದ 174 ನೆಯ ಅನುಚ್ಛೇದವು ವಿಧಾನಮಂಡಲದ ಉಭಯಸದನಗಳು ಸಮಾವೇಶಗೊಳ್ಳುವ ‘ ಅಧಿವೇಶನ’ ದ ಬಗ್ಗೆ ಪ್ರಸ್ತಾಪಿಸುತ್ತದೆ.ಈ ಅನುಚ್ಛೇದದಂತೆ ವರ್ಷದಲ್ಲಿ ಎರಡು ಬಾರಿಯಾದರೂ ಅಧಿವೇಶನ ನಡೆಯಬೇಕು.ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳು ಸೇರಿ ವಿಧಾನಮಂಡಲವಾಗಿದ್ದು ವಿಧಾನಮಂಡಲದ ಸದಸ್ಯರುಗಳೆಲ್ಲರೂ ಸಮಾವೇಶಗೊಳ್ಳುವ ಸಾಂವಿಧಾನಿಕ ಸಭೆಯನ್ನು ‘ ಅಧಿವೇಶನ’ ಎಂದು ಕರೆಯಲಾಗುತ್ತಿದೆ.ಸಾಮಾನ್ಯವಾಗಿ ಮೊದಲ ಅಧಿವೇಶವನ್ನು ‘ ಮುಂಗಾರು ಅಧಿವೇಶನ’ ಎಂದು ಎರಡನೇ ಅಧಿವೇಶನವನ್ನು ‘ ಆಯವ್ಯಯ ಅಧಿವೇಶನ’ ಇಲ್ಲವೆ ‘ ಬಜೆಟ್ ಅಧಿವೇಶನ’ ಎನ್ನಲಾಗುತ್ತಿದೆ.ಅಧಿವೇಶನದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬೇಕಾದ ಶಾಸನಗಳಿಗೆ ಅನುಮೋದನೆ ನೀಡಿ ಅವುಗಳನ್ನು ಕಾಯ್ದೆಗಳನ್ನಾಗಿ ಮಾಡಲಾಗುತ್ತದೆ.ವಿಧಾನಸಭೆಯ ಅಂಗೀಕಾರವಿಲ್ಲದೆ ಯಾವುದೇ ಕಾನೂನು ಅಸ್ತಿತ್ವಕ್ಕೆ ಬರಲು ಸಾಧ್ಯವಿಲ್ಲ.ತುರ್ತು ಸಂದರ್ಭಗಳಲ್ಲಿ ಸರಕಾರವು ರಾಜ್ಯಪಾಲರ ಅನುಮೋದನೆಯೊಂದಿಗೆ ‘ ಸುಗ್ರೀವಾಜ್ಞೆ’ ಯನ್ನು ಹೊರಡಿಸಬಹುದಾದರೂ ಆರು ತಿಂಗಳ ಒಳಗೆ ನಡೆಯುವ ಅಧಿವೇಶನದಲ್ಲಿ ಆ ಸುಗ್ರೀವಾಜ್ಞೆಯು ಅಂಗೀಕಾರಗೊಳ್ಳಬೇಕು. ಇಲ್ಲದಿದ್ದರೆ ಅದು ಅನೂರ್ಜಿತವಾಗುತ್ತದೆ.ಸರಕಾರವು ಅನುಮೋದಿತ ಬಜೆಟ್ ಮೊತ್ತ ಮೀರಿ ಯಾವುದೇ ಖರ್ಚು ವೆಚ್ಚಗಳನ್ನು ಭರಿಸುವಂತಿಲ್ಲ.ಒಂದು ವೇಳೆ ಯಾವುದಾದರೂ ತುರ್ತು ಸಂದರ್ಭ,ಪ್ರಕೃತಿವಿಕೋಪ ಮೊದಲಾದ ಅನಿರೀಕ್ಷಿತ ಸಂದರ್ಭಗಳಲ್ಲಿ ಸರಕಾರವು ಬಜೆಟ್ ವ್ಯಾಪ್ತಿಗೆ ಮೀರಿದ ಹಣವನ್ನು ಖರ್ಚು ಮಾಡಿದ್ದರೆ ಅದನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಿ ಸದನದ ಒಪ್ಪಿಗೆ ಪಡೆಯಬೇಕು.ರಾಜ್ಯದ ಪ್ರಜೆಗಳ ಅಭಿವೃದ್ಧಿ,ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳು,ಯೋಜನೆಗಳು,ಕಾಯ್ದೆ- ಕಾನೂನುಗಳನ್ನು ರೂಪಿಸುವ ಜನಪ್ರತಿನಿಧಿಗಳ ಪರಮಾಧಿಕಾರವು ಅಧಿವೇಶನದ ಮೂಲಕ ಚಲಾಯಿಸಲ್ಪಡುತ್ತಿದೆ.

ರಾಜ್ಯದ ಆಡಳಿತ ಮತ್ತು ಅಭಿವೃದ್ಧಿಸೇರಿದಂತೆ ರಾಜ್ಯದ ಸಮಸ್ತಕಾರ್ಯಭಾರವು ಅಧಿವೇಶನದ ಮುಖಾಂತರವೇ ನಡೆಯುತ್ತದೆ ಎಂದರೆ ಅದರ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು.ಸರಕಾರವು ರೂಪಿಸುವ ಶಾಸನಗಳ ವಿರುದ್ಧ ಮಾತನಾಡುವ,ಹಕ್ಕು ಮಂಡಿಸುವ ಅಧಿಕಾರ ವಿರೋಧ ಪಕ್ಷಗಳಿಗೆ ಇರುತ್ತದೆ.ಸರಕಾರದ ಉದ್ದೇಶಿತ ಯಾವುದಾದರೂ ಮಸೂದೆಯು ಪ್ರಜೆಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಕಂಡು ಬಂದಲ್ಲಿ ವಿರೋಧ ಪಕ್ಷಗಳು ಅಂತಹ ಮಸೂದೆಯು ವಿರೋಧಿಸಿ,ಅಂಗೀಕಾರಗೊಂಡು ಶಾಸನವಾಗದಂತೆ ತಡೆಯುವ ಕೆಲಸ ಮಾಡಬೇಕು.ಮಸೂದೆಗಳು ಅಂಗೀಕಾರವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯು ಆಡಳಿತ ಪಕ್ಷದ ಸರಕಾರದ್ದು; ಆದರೆ ಆ ಮಸೂದೆಯ ಸಾಧಕ- ಬಾಧಕಗಳನ್ನು ಒರೆಹಚ್ಚಿ ನೋಡುವ ಹೊಣೆಗಾರಿಕೆ ವಿರೋಧ ಪಕ್ಷಗಳದ್ದು.ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸದಸ್ಯರುಗಳು ಸದನದಲ್ಲಿ ಹಾಜರಿರಬೇಕಾಗುತ್ತದೆ.ಅಂದರೆ ರಾಜ್ಯದ ಜನರಿಂದ ಚುನಾಯಿತರಾದ ಶಾಸಕರುಗಳೆಲ್ಲರೂ ವಿಧಾನಸಭೆಯ ಅಧಿವೇಶನದಲ್ಲಿ ಹಾಜರಿರಬೇಕು.ಸದನದಲ್ಲಿ ಶಾಸಕರ ಹಾಜರಾತಿ ಮತ್ತು ಮಸೂದೆಗಳ ಮೇಲಿನ ಚರ್ಚೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಗಳಿಂದ ಉತ್ತಮ ಶಾಸನ,ಕಾಯ್ದೆ- ಕಾನೂನುಗಳು ಜಾರಿಗೆ ಬರುತ್ತವೆ. ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಹಾಜರಿರಬೇಕಾದದ್ದು ಎಲ್ಲ ಶಾಸಕರುಗಳ ಕರ್ತವ್ಯ,ಸಾಂವಿಧಾನಿಕ ಜವಾಬ್ದಾರಿ.

ಆದರೆ ಈಗ ಮುಕ್ತಾಯಗೊಳ್ಳುತ್ತಿರುವ ಐದುವರ್ಷಗಳ ವಿಧಾನಸಭೆಯ ಅವಧಿಯಲ್ಲಿ ಶಾಸಕರುಗಳ ಹಾಜರಾತಿ ಬಹಳ ಕಡಿಮೆ ಎನ್ನುವ ಅಂಕಿಸಂಖ್ಯೆಗಳು ಹೊರಬಿದ್ದಿವೆ.ಶಾಸಕರುಗಳು ಮಾತ್ರವಲ್ಲ ,ಕೆಲವು ಜನ ಸಚಿವರುಗಳೂ ಸದನಕ್ಕೆ ಬಹಳ ಕಡಿಮೆ ಅವಧಿಗೆ ಹಾಜರಾಗಿದ್ದಾರೆ.ಐದುವರ್ಷಗಳ ಅವಧಿಯಲ್ಲಿ ಸರಕಾರದ ಭಾಗವಾಗಿರುವ ಸಚಿವರುಗಳ( ಒಂದುವರೆ ವರ್ಷ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ಸರಕಾರ ಮತ್ತು ಉಳಿದ ಬಿಜೆಪಿ ಸರಕಾರದ ಅವಧಿ ಸೇರಿ) ಹಾಜರಾತಿಯ ಪ್ರಮಾಣ 24% ಮಾತ್ರ. ಸಚಿವರುಗಳಾದವರಿಗೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇಲ್ಲವೆಂದರೆ ಶಾಸಕರುಗಳಿಂದ 100% ಹಾಜರಾತಿ ನಿರೀಕ್ಷಿಸಬಹುದೆ ?ಪ್ರಜಾಸತ್ತಾತ್ಮಕ ಹಕ್ಕುಗಳ ಸಂಘಟನೆ ( Association for Democratic Rights — ADR)ಎನ್ನುವ ಖಾಸಗಿ ಸಂಸ್ಥೆಯೊಂದು ಮಾಹಿತಿಹಕ್ಕಿನಡಿ ಹಾಗೂ ಪಬ್ಲಿಕ್ ಡೊಮೆನಿಯನ್ನಿನಲ್ಲಿನ ಮಾಹಿತಿಯನ್ನಾಧರಿಸಿದ ಅಧಿವೇಶನದಲ್ಲಿ ಶಾಸಕರು ಮತ್ತು ಸಚಿವರುಗಳ ಹಾಜರಾತಿಯ ಪ್ರಮಾಣವನ್ನು ಬಿಡುಗಡೆ ಮಾಡಿದೆ.ಎರಡು ಅಧಿವೇಶನಗಳು ಸೇರಿ ಒಂದು ವರ್ಷದಲ್ಲಿ ಒಂದುನೂರಾ ಐವತ್ತುದಿನಗಳ ಕಾಲ ಅಧಿವೇಶನ ನಡೆದರೆ ಅದರಲ್ಲಿ 113 ಸ್ವಂತ ಸದಸ್ಯರನ್ನು ಹೊಂದಿರುವ ಆಡಳಿತ ಪಕ್ಷ ಬಿಜೆಪಿಯ 30 ಶಾಸಕರುಗಳು ಮತ್ತು 25 ಜನ ಸಚಿವರುಗಳ ಹಾಜರಾತಿಯ ಪ್ರಮಾಣ ಕೇವಲ 24% !.ಅತಿ ಕಡಿಮೆ ಹಾಜರಾತಿ ಪ್ರಮಾಣ ಹೊಂದಿರುವ ಶಾಸಕರುಗಳಲ್ಲಿ ಮೂರು ಜನ ಬಿಜೆಪಿ ಶಾಸಕರುಗಳಿದ್ದು ಅವರುಗಳಲ್ಲಿ ವಿ.ಸುನಿಲ್ ಕುಮಾರ ಅವರ ಹಾಜರಾತಿ 3%,ರಮೇಶ ಜಾರಕಿಹೊಳಿ ಅವರ ಹಾಜರಾತಿ 7%ಮತ್ತು ಡಾ.ಕೆ.ಸುಧಾಕರ ಅವರ ಹಾಜರಾತಿ 10%.ಬಿಜೆಪಿಯ ಇತರ ಶಾಸಕರುಗಳಾದ ಆನಂದಸಿಂಗ್,ಬಿ ಸಿ ಪಾಟೀಲ್,ನಾರಾಯಣಗೌಡ,ಬಿ.ಎ.ಬಸವರಾಜ,ಪ್ರಭು ಚೌಹಾಣ,ವಿಶ್ವೇಶ್ವರ ಹೆಗಡೆ ಕಾಗೇರಿ,ಡಾ.ಅಶ್ವತ್ಥನಾರಾಯಣ,ಸಿ.ಎನ್.ಕೆ.ಗೋಪಾಲಯ್ಯ,ಶಿವರಾಮ ಹೆಬ್ಬಾರ ಮತ್ತು ಎಸ್.ಟಿ.ಸೋಮಶೇಖರ ಅವರುಗಳ ಹಾಜರಾತಿಯ ಪ್ರಮಾಣವು 19% ಗಿಂತ ಕಡಿಮೆ ಇದೆ.ಕಾಂಗ್ರಸ್ ಪಕ್ಷದ 74 ಶಾಸಕರುಗಳಲ್ಲಿ ಒಂಬತ್ತು ಜನರು ತೀರ ಕಡಿಮೆಹಾಜರಾತಿಪ್ರಮಾಣವನ್ನು ಹೊಂದಿದ್ದಾರೆ.ಕಾಂಗ್ರಸ್ ಪಕ್ಷದ ಶಾಸಕರುಗಳಾದ ಅಜಯಸಿಂಗ್ (21%),ಶ್ರೀನಿವಾಸ ಮಾನೆ (26%)ಮತ್ತು ಜಿ.ಪರಮೇಶ್ವರ (28%) ತೀರ ಕಡಿಮೆ ಹಾಜರಾತಿ ಹೊಂದಿದ ಮೂವರು ಕಾಂಗ್ರೆಸ್ ಶಾಸಕರುಗಳು.ವಿರೋಧ ಪಕ್ಷದ ನಾಯಕ ಸಿದ್ರಾಮಯ್ಯನವರ ಹಾಜರಾತಿ ಪ್ರಮಾಣ 30%ನಷ್ಟು.ಜೆ.ಡಿ.ಎಸ್ ಪಕ್ಷದ 27 ಜನ ಶಾಸಕರುಗಳಲ್ಲಿ ಎಂ ಸಿ ಮನಗೂಳಿ(11%),ಎಚ್ ಡಿ ಕುಮಾರಸ್ವಾಮಿ (29%)ಮತ್ತು ಅನಿತಾಕುಮಾರಸ್ವಾಮಿ(45%) ಯವರುಗಳು ಅತಿಕಡಿಮೆ ಹಾಜರಾತಿಯನ್ನು ಹೊಂದಿದವರು.

ಪ್ರಜಾಸತ್ತಾತ್ಮಕ ಹಕ್ಕುಗಳ ಸಂಘಟನೆ (ADR) ಯು ವಿಶ್ಲೇಷಣೆ ಮಾಡಿ ಬಿಡುಗಡೆ ಮಾಡಿದ ಈ ಅಂಕಿ ಅಂಶಗಳನ್ನು ಗಮನಿಸಿದಾಗ ರಾಜ್ಯದ ಬಹುತೇಕ ಶಾಸಕರುಗಳು ವಿಧಾನಸಭೆಯ ಅಧಿವೇಶನಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ರಾಜ್ಯದ ಹಿತಾಸಕ್ತಿಯನ್ನು ಎತ್ತಿಹಿಡಿಯಲು ಜವಾಬ್ದಾರರಾದ ಶಾಸಕರುಗಳು ರಾಜ್ಯದ ಪ್ರಗತಿಯ ಗತಿಯನ್ನು ನಿರ್ಧರಿಸುವ ಶಾಸನಗಳನ್ನು ರೂಪಿಸುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿಸುತ್ತಿಲ್ಲವೆಂದರೆ ಅವರು ಉತ್ತಮ ಜನಪ್ರತಿನಿಧಿಗಳಲ್ಲ ಎಂದೇ ಅರ್ಥ.ವರ್ಷದಲ್ಲಿ ನೂರುದಿನಗಳ ಕಾಲ ಅಧಿವೇಶನದಲ್ಲಿ‌ಪಾಲ್ಗೊಳ್ಳಲು ಆಗದಂತಹ ಯಾವ ಘನಕಾರ್ಯಗಳಿರುತ್ತವೆ ಶಾಸಕರುಗಳಾದವರಿಗೆ ? ಅತ್ತ ಅಧಿವೇಶನದಲ್ಲೂ ಪಾಲ್ಗೊಳ್ಳುವುದಿಲ್ಲ ಇತ್ತ ಕ್ಷೇತ್ರದಲ್ಲಿಯೂ ಇರುವುದಿಲ್ಲ.ಏನು ಮಾಡುತ್ತಿರುತ್ತಾರೆ ಹಾಗಾದರೆ ಶಾಸಕರುಗಳು? ಕೆಲವರು ಖಾಯಂ ಆಗಿ ಬೆಂಗಳೂರಿನಲ್ಲಿಯೇ ಬೀಡುಬಿಟ್ಟಿದ್ದರೂ ಅಧಿವೇಶನಕ್ಕೆ ಹಾಜರಾಗುವುದಿಲ್ಲ.ಮತ್ತೆ ಕೆಲವರು ವಿಲಾಸಿ ಪ್ರವಾಸ,ತೀರ್ಥಯಾತ್ರೆಗಳಲ್ಲಿರುತ್ತಾರೆ.ಅಧಿವೇಶನದ ಸಂದರ್ಭದಲ್ಲೂ ಶಾಸಕರು,ಸಚಿವರುಗಳು ತಮ್ಮ ಕ್ಷೇತ್ರದಲ್ಲಿ ನಡೆಯುವ ವಿವಿಧ ಖಾಸಗಿ ಸಭೆ- ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾರೆ,ಸರಕಾರದ ಕಾಮಗಾರಿಗಳ ಶಿಲಾನ್ಯಾಸ,ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿರುತ್ತಾರೆ.ಅಧಿವೇಶನಕ್ಕೆ ಗೈರು ಹಾಜರಾಗಲು ಸ್ಪೀಕರ್ ಅವರು ಅನುಮತಿ ಪಡೆಯಬೇಕು ಎನ್ನುವುದು ನಿಯಮ.ಶಾಸಕರುಗಳಾದವರಿಗೆ ಅದೇನು ಕಷ್ಟವಲ್ಲ,ತಮ್ಮ ಲೆಟರ್ ಹೆಡ್ಡಿನ ಒಂದು ಪತ್ರ ಇಲ್ಲವೆ ಒಂದು ಫೋನ್ ಕರೆ ಸಾಕು.ವಿಧಾನಮಂಡಲದ ಒಂದು ದಿನ ಅಧಿವೇಶನಕ್ಕೆ ಎರಡು ಮೂರು ಕೋಟಿಗಳ ಖರ್ಚು ತಗುಲುತ್ತದೆ.ಇಷ್ಟು ಖರ್ಚು ಮಾಡಿಯೂ ಶಾಸಕರು,ಸಚಿವರಾದವರುಗಳು ಅಧಿವೇಶನಕ್ಕೆ ಹಾಜರಾಗುವುದಿಲ್ಲ ಎಂದರೆ ಏನೆನ್ನಬೇಕು? ಸರಕಾರಿ ಅಧಿಕಾರಿಗಳು,ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ವ್ಯಕ್ತಿಗಳಿಗೆ ಬುದ್ಧಿವಾದ ಹೇಳುವ ಶಾಸಕರುಗಳು ಮೊದಲು ತಾವು ವಿಧಾನಸಭೆಯ ಅಧಿವೇಶನದಲ್ಲಿ 100% ಹಾಜರಾಗಬೇಕು.ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳ ಸಭಾಪತಿಗಳಲ್ಲದೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರುಗಳು,ಶಾಸಕರುಗಳು ಪ್ರತಿನಿಧಿಸುತ್ತಿರುವ ರಾಜಕೀಯ ಪಕ್ಷಗಳ ಮುಖಂಡರುಗಳು ತಮ್ಮ ಶಾಸಕರುಗಳು ಕಡ್ಡಾಯವಾಗಿ ಅಧಿವೇಶನದಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕು.ಅಧಿವೇಶನದ ಸಂದರ್ಭದಲ್ಲಿ ಸರಕಾರದ ಯಾವುದೆ ಅಡಿಗಲ್ಲು,ಉದ್ಘಾಟನಾ ಸಮಾರಂಭ ಆಯೋಜಿಸದಂತೆ ಸರಕಾರವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು.ಮೇಲಿಂದ ಮೇಲೆ ಅಧಿವೇಶನಕ್ಕೆ ಗೈರುಹಾಜರಾಗುವ ಶಾಸಕರುಗಳನ್ನು ಅಧಿವೇಶನದ ಅವಧಿಯಲ್ಲಿ ಅಮಾನತ್ತುಗೊಳಿಸಬೇಕು,ಆ ವರ್ಷದ ಅಧಿವೇಶನದಲ್ಲಿ ಯಾವುದೇ ಭತ್ತೆಗಳನ್ನು ನೀಡಬಾರದು.ಅಧಿವೇಶನಕ್ಕೆ ಗೈರು ಹಾಜರಾಗುವ ಶಾಸಕರು,ಸಚಿವರುಗಳಿಗೆ ಅವರ ಪಕ್ಷವು ನೋಟೀಸ್ ನೀಡಿ ಎಚ್ಚರಿಸಬೇಕು.ಇದೇ ಪ್ರವೃತ್ತಿ ಮುಂದುವರೆಸಿದರೆ ಮುಂದಿನ ಎಲೆಕ್ಷನ್ನಿನಲ್ಲಿ ಪಕ್ಷದ ಟಿಕೆಟ್ ಕೊಡುವುದಿಲ್ಲ ಎಂದು ಬೆದರಿಸಬೇಕು.ಸಂಖ್ಯಾಬಲವೇ ಮಹತ್ವವಾಗಿರುವಾಗ ಸತ್ತ್ವದ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ?

ಶಾಸಕರು,ಸಚಿವರಾದವರುಗಳು ಪ್ರಶ್ನಾತೀತರಲ್ಲ.ಅವರು ಸಂವಿಧಾನದ ಆಶಯಗಳಿಗೆ ಅನಗುಣವಾಗಿ,ನೀತಿ ನಿಯಮಗಳ ಪರಿಮಿತಿಯಲ್ಲಿ ಕಾರ್ಯನಿರ್ವಹಿಸಬೇಕು.ಚುನಾವಣೆಗಳಲ್ಲಿ ಆರಿಸಿ ಬರುವುದಷ್ಟೇ ಮುಖ್ಯವಲ್ಲ,ಗೆದ್ದು ಬಂದಾದ ಬಳಿಕ ಉತ್ತಮವಾಗಿ ಕಾರ್ಯನಿರ್ವಹಿಸಬೇಕು.ತಮ್ಮ ಕ್ಷೇತ್ರದ ಜನತೆಯ ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಶ್ನೆಕೇಳಬೇಕು,ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು,ಸರಕಾರದ ಒಲವು- ನಿಲುವು,ಪ್ರಜಾಬದ್ಧತೆಯ ಕುರಿತು ಸದನದಲ್ಲಿ ಪ್ರಶ್ನಿಸಬೇಕು.ಅಧಿವೇಶನದ ಗಾಂಭಿರ್ಯವನ್ನೇ ಅರಿಯದ ಶಾಸಕರುಗಳು ಬರಿ ಕೆ ಡಿ ಪಿ ಮೀಟಿಂಗ್ ಗಳಲ್ಲಿ ಕಾಲ ತಳ್ಳುತ್ತಿದ್ದರೆ ಅದು ಸರಿಯಲ್ಲ.

About The Author