ಮೂರನೇ ಕಣ್ಣು : ಅರಸೊತ್ತಿಗೆಯ ಕಾಲದ ಪ್ರಜಾಪ್ರಭುತ್ವವಾದಿ ಬಸವಣ್ಣನವರು ಮತ್ತು ಪ್ರಜಾಪ್ರಭುತ್ವಕಾಲದ ಹೈಕಮಾಂಡ್ ಸಂಸ್ಕೃತಿಯ ಗುಲಾಮರು : ಮುಕ್ಕಣ್ಣ ಕರಿಗಾರ

 

ಲೇಖನ : ಮುಕ್ಕಣ್ಣ ಕರಿಗಾರ

       ಕರ್ನಾಟಕದ ವಿಧಾನ ಸಭಾ ಚುನಾವಣೆಯ ದಿನಗಳಲ್ಲಿಯೇ ಈ ವರ್ಷ ಬಸವ ಜಯಂತಿ ಬಂದಿದೆ.ಎಪ್ರಿಲ್ 23 ರಂದು ಬಸವ ಜಯಂತಿಯನ್ನು ಆಚರಿಸಲಾಗುತ್ತಿದೆ.ಪ್ರಜಾಪ್ರಭುತ್ವ ಯುಗದಲ್ಲೂ ಗುಲಾಮಗಿರಿ ಮನೋಸ್ಥಿತಿಯಲ್ಲಿಯೇ ಇರುವ ನಮ್ಮ ರಾಜಕಾರಣಿಗಳು ಹನ್ನೆರಡನೆಯ ಶತಮಾನದ ರಾಜಪ್ರಭುತ್ವದ ಕಾಲದಲ್ಲಿಯೇ ಬಸವಣ್ಣನವರು ಪ್ರಜಾಪ್ರಭುತ್ವವಾದಿಗಳಾಗಿದ್ದರು,ಅರಸೊತ್ತಿಗೆ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಭಟಿಸುತ್ತಿದ್ದರು ಎಂಬುದನ್ನು ಸ್ಮರಿಸಿಕೊಳ್ಳಬೇಕಿದೆ.

ರಾಜಕೀಯ ಪಕ್ಷಗಳ ಟಿಕೆಟ್ ಅಥವಾ ಬಿ ಫಾರಂ ಪಡೆಯಲು ಎಲ್ಲ ಪಕ್ಷಗಳ ರಾಜಕಾರಣಿಗಳು ಅವರ ಪಕ್ಷದ ವರಿಷ್ಠರನ್ನು ಓಲೈಸಲೇಬೇಕಿದ್ದ ದಯನೀಯಸ್ಥಿತಿ ಇದ್ದದ್ದು ನಿಜಕ್ಕೂ ಹಾಸ್ಯಾಸ್ಪದ.ಕರ್ನಾಟಕದ ಮಟ್ಟಿಗೆ ಜೆ ಡಿ ಎಸ್ ಒಂದೇ ಪ್ರಾದೇಶಿಕ ರಾಜಕೀಯ ಪಕ್ಷವಾಗಿದ್ದರಿಂದ ಅದರ ಹೈಕಮಾಂಡ್ ದೇವೇಗೌಡರ ಕುಟುಂಬವೇ ಆಗಿದ್ದುದರಿಂದ ಆ ಪಕ್ಷ ಮಾತ್ರ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾರ್ಯಕರ್ತರ ಸಾಧನೆ,ಮತದಾರರ ಒಲವು ನಿಲುವುಗಳನ್ನು ಗ್ರಹಿಸಿರಬಹುದಾದರೂ ಅದು ಕೂಡ ಒಕ್ಕಲಿಗರ ಪ್ರಾಬಲ್ಯದ ಪಕ್ಷ.ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯ ಹೈಕಮಾಂಡ್ ಗಳು ರಾಜ್ಯದ ಎಂ ಎಲ್ ಎ ಆಕಾಂಕ್ಷಿಗಳಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡಿ,ಅಭ್ಯರ್ಥಿಗಳ ಆಯ್ಕೆಯಲ್ಲಿ ತಮ್ಮ ನಿರ್ಧಾರವೇ ನಿರ್ಣಾಯಕ ಎಂಬಂತೆ ವರ್ತಿಸಿದ್ದು ಮಾತ್ರ ಪ್ರಜಾಪ್ರಭುತ್ವ ವಿರೋಧಿ ನಡೆ.ಹೆಸರಿಗೆ ಮಾತ್ರ ಪಕ್ಷದ ಸ್ಥಳೀಯ ಘಟಕಗಳಿಂದ ಮಾಹಿತಿ ಪಡೆದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದೆಹಲಿ ಮಟ್ಟದಲ್ಲಿಯೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮತ್ತು ವರ್ಚಸ್ಸನ್ನೇ ನಂಬಿಕೊಂಡಿರುವ ರಾಜ್ಯ ಬಿಜೆಪಿಯು ಹೈಕಮಾಂಡ್ ಗೆ ಸಂಪೂರ್ಣ ಶರಣಾಗಿದೆ.ಹೆಸರಿಗೆ ಮಾತ್ರ ಅಭ್ಯರ್ಥಿಗಳ ಹೆಸರುಗಳನ್ಕು ಶಿಫಾರಸ್ಸು ಮಾಡಿದ್ದನ್ನು ಬಿಟ್ಟರೆ ಬಿಜೆಪಿ ರಾಜ್ಯ ಘಟಕಕ್ಕೆ ಇಂಥವರೇ ಅಭ್ಯರ್ಥಿಗಳಾಗಬೇಕು ಎಂದು ನಿರ್ಣಯಿಸುವ ಹಕ್ಕು,ಅಧಿಕಾರಗಳಿರಲಿಲ್ಲ.ಹಾಗಾಗಿಯೇ ಬಿಜೆಪಿಯ ವರಿಷ್ಠರು ಬದಲಾವಣೆಯ ಹೆಸರಿನಲ್ಲಿ ಅರವತ್ತೆರಡು ಜನ ಹೊಸಬರಿಗೆ ಅವಕಾಶ ನೀಡಿದ್ದಾರೆ.ಹೊಸಬರಿಗೆ ಅವಕಾಶ ನೀಡುವುದೆಂದರೆ ಪಕ್ಷಕ್ಕೆ ವಿಧೇಯತೆಯನ್ನು ಖಚಿತಪಡಿಸಿಕೊಳ್ಳುವುದು ಎಂದರ್ಥ.ಹಳಬರು ತಮ್ಮ ಹಿರಿತನದಿಂದ ಹೈಕಮಾಂಡ್ ಗೆ ತಲೆನೋವಾಗಬಹುದು ಎನ್ನುವ ಮುಂದಾಲೋಚನೆಯಲ್ಲಿ ಹೊಸಬರಿಗೆ ಆದ್ಯತೆ ನೀಡಲಾಗಿದೆ.ಪ್ರಧಾನಿ ನರೇಂದ್ರ ಮೋದಿಯರ ಹೆಸರಿನ ನಾಮಬಲದಿಂದಲೇ ವಿಧಾನಸಭೆ ಪ್ರವೇಶಿಸುವ ಹೊಸಬರು ಸಹಜವಾಗಿಯೇ ‘ಮೋದಿಭಕ್ತರು’ ಆಗುತ್ತಾರೆ,ಬಿಜೆಪಿ ಪಕ್ಷದ ವಿಧೇಯ ಸೇವಕರೂ ಆಗುತ್ತಾರೆ.

‌ ಬಿಜೆಪಿಗಿಂತ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಸರ್ವಾಧಿಕಾರಿ ಧೋರಣೆ ತಳೆದಿದೆ.ನರೇಂದ್ರಮೋದಿಯವರನ್ನು ಸರ್ವಾಧಿಕಾರಿ ಎಂದು ಟೀಕಿಸುವ ಮಲ್ಲಿಕಾರ್ಜುನ ಖರ್ಗೆಯವರೇನೂ ಪ್ರಜಾಪ್ರಭುತ್ವವಾದಿಗಳಲ್ಲ; ಕಾಂಗ್ರೆಸ್ ಪಕ್ಷದ ಮೇಲೆ ಹಳೆಯ ತಲೆಮಾರಿನ ನಾಯಕ ಎಂದು ಬಿಗಿಹಿಡಿತ ಇಟ್ಟುಕೊಂಡಿದ್ದಾರಲ್ಲದೆ ತಮ್ಮಲ್ಲಿ ಅತ್ಯಂತ ನಿಷ್ಠೆ ಉಳ್ಳವರಿಗಷ್ಟೇ ಟಿಕೆಟ್ ಕೊಡಿಸುತ್ತ ಬಂದವರು.ಈಗ ಅವರೇ ಎಐಸಿಸಿ ಅಧ್ಯಕ್ಷರಾಗಿದ್ದಾರೆ.ತಮಗೆ ಬೇಕಾದವರಿಗೆ ಟಿಕೇಟ್ ನೀಡುವಲ್ಲಿ,ತಮಗೆ ಬೇಡವಾದವರಿಗೆ ಟಿಕೆಟ್ ನಿರಾಕರಿಸುವಲ್ಲಿ ಮಲ್ಲಿಕಾರ್ಜನ ಖರ್ಗೆಯವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ.ಸಿದ್ರಾಮಯ್ಯನವರಿಗೆ ಕೋಲಾರ ಟಿಕೇಟ್ ನಿರಾಕರಿಸಿದ್ದು ಮಲ್ಲಿಕಾರ್ಜುನ ಖರ್ಗೆಯವರು.ಕೆ ಪಿ ಸಿ ಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರಿಗೆ ಖರ್ಗೆಯವರ ಖಡಕ್ ಸೂಚನೆಯನ್ನು ಪಾಲಿಸುವುದು ಬಿಟ್ಟು ಬೇರೆ ಆಯ್ಕೆಗಳಿರಲಿಲ್ಲ.ರಾಯಚೂರು ಜಿಲ್ಲೆಯ ಎರಡು ವಿದ್ಯಮಾನಗಳು ಕೂಡ ಮಲ್ಲಿಕಾರ್ಜುನ ಖರ್ಗೆಯವರ ಅಧಿಪತ್ಯವನ್ನೇ ಸೂಚಿಸುತ್ತಿವೆ.ದೇವದುರ್ಗ ಎಸ್ ಟಿ ಮೀಸಲು ಕ್ಷೇತ್ರದ ಆಕಾಂಕ್ಷಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಿ ವಿ ನಾಯಕ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.ಬಿ ವಿ ನಾಯಕ ಅವರ ತಂದೆ ದಿವಗಂತ ವೆಂಕಟೇಶ ನಾಯಕ ಅವರು ಸಂಭಾವಿತ ರಾಜಕಾರಣಿ ಎಂದು ಹೆಸರುಪಡೆದಿದ್ದರು. ಲೋಕಸಭಾ ಸದಸ್ಯರು,ಶಾಸಕರೂ ಆಗಿದ್ದ ಅವರು ಕಾಂಗ್ರೆಸ್ ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತರಾಗಿದ್ದರು.ಅವರ ಮಗ ಬಿ ವಿ ನಾಯಕ್ ಮಾನ್ವಿ ಕ್ಷೇತ್ರದಿಂದ ಸ್ಪರ್ಧಿಸಬಯಸಿದ್ದರು,ಟಿಕೆಟ್ ನಿರಾಕರಿಸಲಾಯಿತು.ರಾಯಚೂರಿನ ನಿಷ್ಠಾವಂತ ಕಾಂಗ್ರೆಸ್ ಮುಖಂಡ ಮತ್ತು ರಾಷ್ಟ್ರಮಟ್ಟದಲ್ಲಿಯೂ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವ ಹೊಂದಿದ್ದ ಎನ್ ಎಸ್ ಬೋಸರಾಜು ಅವರಿಗೂ ಟಿಕೆಟ್ ನಿರಾಕರಿಸಲಾಗಿದೆ.ಇಲ್ಲಿಯೂ ಕೂಡ ಮಲ್ಲಿಕಾರ್ಜುನ ಖರ್ಗೆಯವರ ಅಧಿಕಾರವೇ ಕೆಲಸ ಮಾಡಿದೆ.ಬಿಜೆಪಿ ಹೈಕಮಾಂಡ್ ವಿಧೇಯತೆ ನಿರೀಕ್ಷಿಸಿ ಅರವತ್ತೆರಡು ಜನ ಹೊಸಬರಿಗೆ ಅವಕಾಶ ನೀಡಿರುವಂತೆಯೇ ಯಾವುದೋ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಮಲ್ಲಿಕಾರ್ಜುನ ಖರ್ಗೆಯವರು ತಮಗೆ ಅಡ್ಡಗಾಲು ಆಗಬಹುದು ಎನ್ನುವ ನಾಯಕರುಗಳನ್ನು ಕಟ್ಟಿಹಾಕಲು ಪ್ರಯತ್ನಿಸಿದ್ದಾರೆ ಇಲ್ಲವೆ ಟಿಕೆಟ್ ನಿರಾಕರಿಸಿದ್ದಾರೆ. ರಾಯಚೂರಿನಲ್ಲಿ ಎನ್ ಎಸ್ ಬೋಸರಾಜು ಅವರ ಹಿರಿತನಕ್ಕಾದರೂ ಮನ್ನಣೆನೀಡಿ ಅವರಿಗೆ ಟಿಕೇಟ್ ನೀಡಬೇಕಿತ್ತು.ಬೋಸರಾಜು ಅವರು ರಾಜಕಾರಣದಲ್ಲಿ ಪಳಗಿದ ರಾಜಕೀಟಪಟುವಾಗಿರುವುದರಿಂದ ತಮ್ಮ ವಿರೋಧಿಗಳನ್ನು ಸದೆಬಡಿಯುತ್ತಾರೆ ಎನ್ನುವ ಆರೋಪಗಳಿದ್ದರೂ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಅವರು ಇತರರಿಗೆ ಮಾದರಿ.

ಬಸವಣ್ಣನವರು ಹನ್ನೆರಡನೆಯ ಶತಮಾನದ ರಾಜಪ್ರಭುತ್ವದ ಕಾಲದಲ್ಲಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಪ್ರಜಾಪ್ರಭುತ್ವದ ಗಾಳಿ ಬೀಸುವಂತೆ ಮಾಡಿದ್ದರು.ಬಸವಣ್ಣನವರು ಪ್ರಜಾಪ್ರಭುತ್ವ ಎನ್ನುವ ಪದವನ್ನು ಬಳಸಿಲ್ಲ ಎನ್ನುವುದನ್ನು ಬಿಟ್ಟರೆ ಅವರ ಬದುಕೆಲ್ಲ ಪ್ರಜಾಪ್ರಭುತ್ವದ ತತ್ತ್ವ,ಆಶಯಗಳನ್ನೇ ಅಭಿವ್ಯಕ್ತಿಸುತ್ತಿತ್ತು.ಬಿಜ್ಜಳನ ಪ್ರಧಾನಿಯಾಗಿಯೂ ಜನಸಾಮಾನ್ಯರೊಂದಿಗೆ ಬೆರೆಯುತ್ತಿದ್ದರು.ಸಮಾಜದ ಎಲ್ಲ ಜಾತಿಗಳಿಂದ ಬಂದಿದ್ದ ಶರಣರನ್ನು ತಮ್ಮ ಮಹಾಮನೆಗೆ ಆಹ್ವಾನಿಸಿ ದಾಸೋಹ ಮಾಡುತ್ತಿದ್ದರು.ಕಂಬಳಿ ನಾಗಿದೇವನೆಂಬ ಶ್ವಪಚ ಶರಣನ ಮನೆಯಲ್ಲಿ ಪ್ರಸಾದ ಸ್ವೀಕರಿಸಿದರು.ವೈಷ್ಣವರು ಮತ್ತು ಜೈನರ ಕಟುಟೀಕೆಗಳಿಗೆ ಅರಸ ಬಿಜ್ಜಳ ಸಹಮತ ವ್ಯಕ್ತಪಡಿಸಿದಾಗ ಮಂತ್ರಿ ಪದವಿಯನ್ನೇ ತೊರೆದು ಹೊರಡಲನುವಾದರು.ಆ ಸಂದರ್ಭದಲ್ಲಿ ಬಿಜ್ಜಳನ ಕೋರಿಕೆಯಂತೆ ಮುಂದುವರೆದರಾದರೂ ಬಸವಣ್ಣನವರಿಗೆ ಬಿಜ್ಜಳನ ಆಸ್ಥಾನವು ಮನುಷ್ಯತ್ವವಿರೋಧಿ ಸ್ಥಾನ ಎಂದೇ ಮನವರಿಕೆಯಾಗಿತ್ತು.ಬಿಜ್ಜಳನ ಹಂಗಿನ ಪ್ರಧಾನಿಯ ಪಟ್ಟವನ್ನು ತೊರೆದುಹೋಗಲು ಬಯಸುತ್ತಿತ್ತು ಸ್ವಾತಂತ್ರ್ಯಪ್ರೇಮಿಯಾಗಿದ್ದ,ಪ್ರಜಾಪ್ರಭುತ್ವವಾದಿಯಾಗಿದ್ದ ಬಸವಣ್ಣನವರ ಮನಸ್ಸು.ಇಂತಹ ಗಟ್ಟಿ ನಿರ್ಧಾರವನ್ನು ತಳೆದಿದ್ದರಿಂದಲೇ ‘ ಭವಿ ಬಿಜ್ಜಳನಿಗೆ ಆನಂಜುವೆನೆ?’ ಎಂದು ಪ್ರಶ್ನಿಸಿದರು ಬಸವಣ್ಣನವರು. ಹನ್ನೆರಡನೆಯ ಶತಮಾನದ ಪ್ರಜಾಪ್ರಭುತ್ವದ ಗಂಧ- ಗಾಳಿಯೇ ಇಲ್ಲದ ಕಾಲದಲ್ಲಿ ಬಸವಣ್ಣನವರು ಪ್ರಭುತ್ವವನ್ನೇ ಧಿಕ್ಕರಿಸುವ ಇಂತಹ ಮಾತುಗಳನ್ನಾಡಿದರು.

ಆದರೆ ಈಗ ನೋಡಿ ಪರಿಸ್ಥಿತಿ ಹೇಗಿದೆ.ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳಾಗಿವೆ.ಸರ್ವರಿಗೂ ಸಮಾನತೆ ಮತ್ತು ಉನ್ನತಿಯ ಹಕ್ಕು ಅವಕಾಶಗಳನ್ನು ನೀಡಿದ ವಿಶ್ವದ ಉತ್ಕೃಷ್ಟ ಸಂವಿಧಾನಗಳಲ್ಲಿ ಒಂದು ಎಂಬ ಹಿರಿಮೆಗೆ ಪಾತ್ರವಾದ ಸಂವಿಧಾನವನ್ನೂ ಹೊಂದಿದ್ದೇವೆ.ಆದರೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಅವರವರ ಕ್ಷೇತ್ರದಲ್ಲಿ ಸ್ವಂತ ಬಲದಿಂದ ಟಿಕೆಟ್ ಪಡೆಯುವ ಸಾಮರ್ಥ್ಯ ಇಲ್ಲ ! ಪಕ್ಷದ ವರಿಷ್ಠರ ವಿರುದ್ಧ ಮಾತನಾಡುವ ಧೈರ್ಯ ಯಾವ ಪಕ್ಷದ ರಾಜಕಾರಣಿಯಲ್ಲಿಯೂ ಇಲ್ಲ! ಪಕ್ಷದ ವರಿಷ್ಠರ ಆಣತಿಯನ್ನು ಶಿರಸಾವಹಿಸಿ ಪಾಲಿಸಿ,ವರಿಷ್ಠರ ಕೈಕಾಲುಗಳಿಗೆ ನಮಸ್ಕರಿಸುವ ದೈನೇಸಿ ಸ್ಥಿತಿಗಳಲ್ಲಿ ಶಾಸಕರುಗಳಾದವರು ಇದ್ದಾರೆ ಎಂದರೆ ಇದಕ್ಕೇನೆನ್ನಬೇಕು? ಪಕ್ಷನಿಷ್ಠೆಯ ಹೆಸರಿನಲ್ಲಿ ತಮ್ಮಲ್ಲಿ ಸಂಪೂರ್ಣಶರಣಾಗತಿಯ ವಿಧೇಯತೆಯನ್ನು ನಿರೀಕ್ಷಿಸುವ ಮನೋಸ್ಥಿತಿ ರಾಜ್ಯದ ಮೂರು ಪಕ್ಷಗಳ ವರಿಷ್ಠರಲ್ಲಿದೆ.

ಬಿಜ್ಜಳನ ಆಸ್ಥಾನದಿಂದ ಹೊರನಡೆದು ಪ್ರಭುತ್ವಕ್ಕೆ ಪರ್ಯಾಯವಾಗಿ ಅನುಭವ ಮಂಟಪವನ್ನು ಕಟ್ಟಿದ ಬಸವಣ್ಣನವರು ತಳಸಮುದಾಯದಿಂದ ಬಂದಿದ್ದ ಯೋಗಿ ಅಲ್ಲಮ ಪ್ರಭುವನ್ನು ಶೂನ್ಯಸಿಂಹಾಸನದ ಅಧ್ಯಕ್ಷರನ್ನಾಗಿ ಮಾಡುತ್ತಾರೆ.ಅಂತ್ಯಜ- ಶ್ವಪಚರಾದಿ ಶೋಷಿತರೆಲ್ಲರನ್ನು ಶರಣರನ್ನಾಗಿಸಿ ಅನುಭವ ಮಂಟದಲ್ಲಿ ಸ್ಥಾನ -ಮಾನ ನೀಡುತ್ತಾರೆ.ಹನ್ನೆರಡನೆಯ ಶತಮಾನದಲ್ಲಿಯೇ ಸ್ತ್ರೀಸಮಾನತೆಯನ್ನು ಪ್ರತಿಪಾದಿಸಿದ್ದ ಬಸವಣ್ಣನವರು ನೂರಿಪ್ಪತ್ತಕ್ಕೂ ಹೆಚ್ಚು ಜನ ಮಹಿಳೆಯರಿಗೆ ಅನುಭವ ಮಂಟಪದಲ್ಲಿ ಅವಕಾಶನೀಡಿ ಅವರನ್ನು ಶರಣೆಯರನ್ನಾಗಿಸಿದ್ದರು.ಈಗ ನಡೆಯುತ್ತಿರುವ ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್,ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಿದ್ದು ಶೇಕಡಾ 1 ರಷ್ಟು ಮಾತ್ರ! ಎಲ್ಲಿದೆ ಪ್ರಜಾಪ್ರಭುತ್ವ ರಾಜಕೀಯ ಪಕ್ಷಗಳಲ್ಲಿ? ಲಿಂಗಸಮಾನತೆಬೇಡ,ಕನಿಷ್ಟ ಹತ್ತರಿಂದ ಹದಿನೈದು ಪ್ರತಿಶತದಷ್ಟು ಮಹಿಳೆಯರಿಗೆ ಟಿಕೆಟ್ ನೀಡುವ ಸಾಂವಿಧಾನಿಕ ಬದ್ಧತೆ ಯಾವ ರಾಜಕೀಯ ಪಕ್ಷದಲ್ಲಿಯೂ ಇಲ್ಲ.

ರಾಜಕಾರಣಿಗಳು ಅವರು ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ ಹೈಕಮಾಂಡ್ ಸಂಸ್ಕೃತಿಗೆ ಶರಣಾಗದೆ ತಮ್ಮನ್ನು ಆರಿಸುವ ಮತದಾರರೇ ತಮ್ಮ ಹೈಕಮಾಂಡ್ ಎಂದು ತಿಳಿಯಬೇಕು.ಅಧಿವೇಶನ ಮತ್ತು ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಕ್ಷೇತ್ರದಲ್ಲಿಯೇ ಇರಬೇಕು,ಮತದಾರರ ಕಷ್ಟ- ಸುಖಗಳಿಗೆ ಸ್ಪಂದಿಸಬೇಕು.ಮತದಾರರ ಪ್ರೀತಿ,ವಿಶ್ವಾಸ ಗಳಿಸಿಕೊಂಡರೆ ಪಕ್ಷದ ಹೈಕಮಾಂಡ್ ನ ಅಡಿಯಾಳು ಆಗುವ ದೈನ್ಯತೆ ಬಂದೊದಗದು.ಆದರೆ ಒಮ್ಮೆ ಆರಿಸಿ ಬಂದೊಡನೆ ಬೆಂಗಳೂರಿನ ಶಾಸಕರ ಭವನದ ಸುಖಸವಲತ್ತು,ವಿಧಾನಸೌಧವು ಕೊಡಮಾಡುವ ದರ್ಪ ಗತ್ತುಗಳನ್ನು ಮೈಗೂಡಿಸಿಕೊಂಡು,ಎ ಸಿ ರೂಮು,ಎ ಸಿ ಕಾರುಗಳಲ್ಲಿಯೇ ವಿಹರಿಸಬಯಸುವ ಎಂ ಎಲ್ ಎ ಗಳು ಕ್ಷೇತ್ರ ಮರೆಯುತ್ತಾರೆ,ಜನರಿಂದ ದೂರವಾಗುತ್ತಾರೆ.ಕಾರ್ಯಕರ್ತರುಗಳಿಗೆ ಸಿಗದ ಎಂ ಎಲ್ ಎ ಗಳು ಸಾಮಾನ್ಯ ಮತದಾರರಿಗೆ ಸಿಗುತ್ತಾರೆಯೆ? ಎಂ ಎಲ್ ಎ ಗಳು ಪಿ ಎಗಳು ಮತದಾರರ ಫೋನ್ ಸ್ವೀಕರಿಸಿ ‘ ಸಾಹೇಬರು ಬ್ಯುಸಿಯಾಗಿದ್ದಾರೆ,ಮೀಟಿಂಗ್ ನಲ್ಲಿದ್ದಾರೆ’ ಎಂದು ಪೂಸಿ ಹೊಡೆಯುತ್ತಿರುತ್ತಾರೆ.ಇದು ಕೂಡ ಶಾಸಕರಾದವರ ಪ್ರಜಾಪ್ರಭುತ್ವ ವಿರೋಧಿ,ನಿರ್ಲಜ್ಜ ನಡೆಯೇ.ಶಾಸಕರಾದವರು ಕ್ಷೇತ್ರಗಳಲ್ಲಿ ಪ್ರಜೆಗಳೊಂದಿಗೆ ಬೆರೆಯುವುದು ನಿಜವಾದ ಪ್ರಜಾಪ್ರಭುತ್ವವಾದರೆ ಮತದಾರರೊಂದಿಗೆ ಕ್ಷೇತ್ರದಲ್ಲಿ ನಿಕಟ ಸಂಪರ್ಕಹೊಂದಿರುವ ಮತ್ತು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಶಾಸಕರುಗಳಿಗೆ ಟಿಕೆಟ್ ನೀಡುವುದು ಪಕ್ಷದ ವರಿಷ್ಠರ ಪ್ರಜಾಪ್ರಭುತ್ವ ನಿಲುವು ಆಗುತ್ತದೆ.

About The Author