ಬಿಜೆಪಿಯವರು ಲಿಂಗಾಯತರೆಲ್ಲ ಭ್ರಷ್ಟರು ಎನ್ನುವ ನನ್ನ ಹೇಳಿಕೆ ತಿರುಚಿದ್ದಾರೆ ಸಿದ್ದರಾಮಯ್ಯ ಸ್ಪಷ್ಟನೆ !

ಬಿಜೆಪಿಯವರು ನನ್ನ ಹೇಳಿಕೆಯ ವೀಡಿಯೋವನ್ನು ಕಟ್ ಮಾಡಿ ತಮಗೆ ಬೇಕಾದಂತೆ ಎಡಿಟ್ ಮಾಡಿಕೊಂಡು ಲಿಂಗಾಯತರೆಲ್ಲ ಭ್ರಷ್ಟರೆಂದು ಹೇಳಿದ್ದೇನೆ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಚುನಾವಣಾ ಲಾಭ ಪಡೆಯುವ ಇಂಥ ಷಡ್ಯಂತ್ರಗಳಿಗೆ ನಾಡಿನ ಲಿಂಗಾಯತ ಸಮುದಾಯ ಕಿವಿಗೊಡುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಬಿಜೆಪಿಯವರು ಲಿಂಗಾಯತ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ, ಬಸವರಾಜ ಬೊಮ್ಮಾಯಿ ಅವರೊಬ್ಬ ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದ್ದೆ.
ಲಿಂಗಾಯತರೆಲ್ಲ ಭ್ರಷ್ಟರು ಎಂದು ನಾನು ಹೇಳಿಯೇ ಇಲ್ಲ. ಅದೆಲ್ಲ ಬಿಜೆಪಿಯವರ ಸೃಷ್ಟಿಸಿದ ಸುಳ್ಳುಗಳಷ್ಟೆ.

ವೀರೇಂದ್ರ ಪಾಟೀಲರು, ನಿಜಲಿಂಗಪ್ಪನವರು, ಜೆ.ಹೆಚ್ ಪಟೇಲರು, ಬಿ.ಡಿ ಜತ್ತಿ, ಎಸ್.ಆರ್ ಕಂಠಿ ಇಂಥ ಅನೇಕ ಪ್ರಾಮಾಣಿಕ ಮುಖ್ಯಮಂತ್ರಿಗಳನ್ನು ಲಿಂಗಾಯತ ಸಮುದಾಯ ಈ ನಾಡಿಗೆ ನೀಡಿದೆ.
ಈ ಎಲ್ಲಾ ನಾಯಕರ ಬಗೆಗೆ ನನಗೆ ವಿಶೇಷ ಪ್ರೀತಿ, ಅಭಿಮಾನವಿದೆ.

ವೀರಶೈವ – ಲಿಂಗಾಯತರ ಬಗ್ಗೆ ನಮಗೆ ಗೌರವ ಇರುವುದರಿಂದಲೇ ಹೆಚ್ಚು ಟಿಕೇಟನ್ನು ಅವರಿಗೆ ನೀಡಿದ್ದೇವೆ. ಕಳೆದ ಬಾರಿ 47 ಲಿಂಗಾಯತ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡಿದ್ದರೆ, ಈ ಬಾರಿ ಅದಕ್ಕಿಂತ ಹೆಚ್ಚು ಅಂದರೆ ಸುಮಾರು 52 – 53 ಕ್ಷೇತ್ರಗಳಲ್ಲಿ ಟಿಕೇಟ್ ನೀಡಿದ್ದೇವೆ.

ನಮ್ಮಲ್ಲಿ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನ ಮಾಡುವುದಿಲ್ಲ, ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದು ನಮ್ಮಲ್ಲಿ ನಡೆದುಕೊಂಡುಬಂದ ಪದ್ಧತಿ. ಬಿಜೆಪಿಯವರು ಜಾತಿ ಮೇಲೆ ಮಾಡಿದರೆ ಅದು ಅವರ ಪಕ್ಷದ ವಿಚಾರ. ಅದಕ್ಕೆ ನಮ್ಮ ತಕರಾರಿಲ್ಲ ಎಂದು ಹೇಳಿದರು.