ಮೂರನೇ ಕಣ್ಣು : ಜಾತಿಮುಕ್ತ,ಅವಕಾಶವಂಚಿತರೆಲ್ಲರ ಉದ್ಧಾರಕ್ಕೆ ಬದ್ಧರಿರುವ ಪ್ರಾದೇಶಿಕ ಪಕ್ಷ ಒಂದು ಇಂದಿನ ಅಗತ್ಯ: ಮುಕ್ಕಣ್ಣ ಕರಿಗಾರ

ಇನ್ನೇನು ವಿಧಾನಸಭಾ ಚುನಾವಣೆಯ ನಾಮಪತ್ರಗಳ ಸಲ್ಲಿಕೆಯ ಅವಧಿ ಮುಕ್ತಾಯವಾಗಲು ಘಂಟೆಗಳಲ್ಲಿ ಎಣಿಸಬಹುದಾದ ಅವಧಿ ಮಾತ್ರ ಉಳಿದಿದೆ.ಎಲ್ಲ ರಾಜಕೀಯ ಪಕ್ಷಗಳ ಬಹಳಷ್ಟು ಜನ ಆಕಾಂಕ್ಷಿಗಳು ಈಗಾಗಲೇ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ರಾಜಕಾರಣಿಗಳ ವಲಸೆ,ಸ್ವಾಗತ ಜೋರಾಗಿ ನಡೆದಿದೆ.ಬಿಜೆಪಿಯಲ್ಲಿದ್ದವರು ಕಾಂಗ್ರೆಸ್ ಪಕ್ಷಕ್ಕೆ,ಕಾಂಗ್ರೆಸ್ ಪಕ್ಷದಲ್ಲಿದ್ದವರು ಬಿಜೆಪಿಗೆ ಈ ಎರಡೂ ಪಕ್ಷಗಳ ಟಿಕೆಟ್ ಸಿಗದವರು ಜೆಡಿಎಸ್ ಪಕ್ಷಕ್ಕೆ ಜಿಗಿದಿದ್ದಾರೆ.ಮತ್ತೊಂದು ಪಕ್ಷದಿಂದ ಬರುವ ಅಭ್ಯರ್ಥಿಗಳನ್ನು ಸ್ವಾಗತಿಸಲು ಇನ್ನೊಂದು ಪಕ್ಷವು ತುದಿಗಾಲಮೇಲೆ ನಿಂತಿದೆ.ರಾಜಕಾರಣಿಗಳ ಪಕ್ಷಾಂತರ ಪರ್ವ,ಅವರ ಚುನಾವಣಾ ಸಿದ್ಧತೆ,ಹುರುಪು- ಉಮೇದುಗಳನ್ನು ನೋಡಿದಾಗ ಎರಡು ಅಂಶಗಳು ಸ್ಪಷ್ಟವಾಗುತ್ತಿವೆ.ಒಂದು ಎಲ್ಲ ರಾಜಕೀಯ ಪಕ್ಷಗಳಿಗೆ ತತ್ತ್ವಸಿದ್ಧಾಂತಗಳಿಗಿಂತ ಗೆಲ್ಲುವ ಅಭ್ಯರ್ಥಿಗಳು ಬೇಕು.ಎರಡನೆಯದು ಹೇಗಾದರೂ ಮಾಡಿ ಸರಿಯೆ ಈ ಬಾರಿ ತಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವ ಪಕ್ಷಗಳ ವರಿಷ್ಠರು ಮತ್ತು ಪ್ರಮುಖರ ಒಳತೋಟಿ.

ಕರ್ನಾಟಕದಲ್ಲಿ ಇದುವರೆಗೂ ಯಾವ ರಾಜಕೀಯ ಪಕ್ಷವೂ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿಲ್ಲವಾದರೂ ಆಯಾ ಪಕ್ಷಗಳ ನೇತಾರರುಗಳು ಮಾಡಿದ ಭಾಷಣಗಳು,ಆಡಿದ ಮಾತುಗಳೇ ಪಕ್ಷಗಳ ಪ್ರಣಾಳಿಕೆಯಲ್ಲಿ ಸೇರ್ಪಡೆಗೊಳ್ಳಲಿವೆ.ಕಾಂಗ್ರೆಸ್ ಪಕ್ಷವು ಗ್ಯಾರಂಟಿ‌ಕಾರ್ಡ್ ಗಳೆಂಬ ಹೊಸ ಬಗೆಯ ಆಶ್ವಾಸನೆಗಳನ್ನು ನೀಡಿದರೆ ಬಿಜೆಪಿಯು ರಿಪೋರ್ಟ್ ಕಾರ್ಡ್ ಮುಂದಿಟ್ಟು ಮಾತನಾಡುತ್ತಿದೆ.ಜೆಡಿಎಸ್ ಪಕ್ಷವು ಪಂಚರತ್ನ ಚುನಾವಣಾ ವಿಷಯಗಳನ್ನೆತ್ತಿಕೊಂಡು ಕಣಕ್ಕಿಳಿದಿದೆ.ಕರ್ನಾಟಕದ ವಿಧಾನಸಭಾ ಚುನಾವಣೆಯು ಕಾಂಗ್ರೆಸ್,ಬಿಜೆಪಿ ಮತ್ತು ಜೆಡಿಎಸ್ ಮೂರೇ ಪಕ್ಷಗಳ ನಡುವೆ ನಡೆಯುವ ಚುನಾವಣೆಯಾಗಿದ್ದು ಈ ಮೂರುಪಕ್ಷಗಳ ಇದುವರೆಗಿನ ಚುನಾವಣಾ ಸಿದ್ಧತೆ,ರಾಜ್ಯದ ಉದ್ಧಾರದ ಬದ್ಧತೆಯ ಬಗ್ಗೆ ಪರಿಶೀಲಿಸಿದಾಗ ಮೂರು ಪಕ್ಷಗಳಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕುರಿತಾದ ದೂರದೃಷ್ಟಿಯ ಕೊರತೆ ಎದ್ದು ಕಾಣಿಸುತ್ತಿದೆ.ಬಿಜೆಪಿಯು ತಾನು ಗೆಲ್ಲಲು ಪ್ರಧಾನಮಂತ್ರಿ ನರೇಂದ್ರಮೋದಿಯವರ ವರ್ಛಸ್ಸು ಮತ್ತು ಜನಪ್ರಿಯತೆಯನ್ನು ನಚ್ಚಿಕೊಂಡಿದೆ.ಕಾಂಗ್ರೆಸ್ ದಲಿತರು,ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಉದ್ಧಾರದ ಸಾಂಪ್ರದಾಯಿಕ,ಹಳೆಯ ಸ್ಲೋಗನ್ನನ್ನೇ ಚುನಾವಣಾ ತಂತ್ರವಾಗಿ ಪರಿಗಣಿಸಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೋದಲ್ಲಿ ಬಂದಲ್ಲಿ ದಲಿತರು,ಆದಿವಾಸಿಗಳು,ಅಲ್ಪಸಂಖ್ಯಾತರ ಉದ್ಧಾರಬದ್ಧತೆಯ ಮಾತನಾಡುತ್ತ ‘ ಹಿಂದುಳಿದವರನ್ನು’ ನೆಪಮಾತ್ರಕ್ಕೆ ಸ್ಮರಿಸುತ್ತಿದ್ದಾರೆ.ಬಿಜೆಪಿಯವರಿಗಂತೂ ಹಿಂದುತ್ವ,ರಾಷ್ಟ್ರೀಯವಾದದ ಹೊರತು ಅಭಿವೃದ್ಧಿ ಪರವಾಗಿ ಚಿಂತಿಸುವ ಬೇರೆ ವಿಷಯಗಳಿದ್ದಂತಿಲ್ಲ.

ಬಿಜೆಪಿಯು ಸಮಾಜದ ಮೇಲ್ವರ್ಗದ ಜನರಿಗಷ್ಟೇ ಪ್ರಾಮುಖ್ಯತೆ ನೀಡುತ್ತದೆ ಎಂದು ಆರೋಪಿಸುವ ಕಾಂಗ್ರೆಸ್ ಪಕ್ಷವು ಎಲ್ಲರನ್ನು ಒಳಗೊಳ್ಳುವ ಪ್ರಯತ್ನ ಮಾಡಿದೆಯೆ? ದಲಿತರು,ಆದಿವಾಸಿಗಳು,ಅಲ್ಪಸಂಖ್ಯಾತರ ಉದ್ಧಾರದ ಬದ್ಧತೆಯು ರಾಜ್ಯದ ಸರ್ವತೋಮುಖ ಅಭಿವೃದ್ಧಿ ಆಗುತ್ತದೆಯೆ? ಸಾಂಪ್ರದಾಯಿಕ ಮತಬ್ಯಾಂಕ್ ಅನ್ನು ನಚ್ಚಿ ನಡೆಯುವುದಕ್ಕಿಂತ ಸರ್ವರನ್ನು ಒಳಗೊಳ್ಳುವ ಉದ್ಧಾರದ ಬದ್ಧತೆಯನ್ನು ಕಾಂಗ್ರೆಸ್ ಪಕ್ಷ ಮೈಗೂಡಿಸಿಕೊಳ್ಳಬಾರದೆ ?ಕಾಂಗ್ರೆಸ್ ಪಕ್ಷದ ನಾಯಕರುಗಳು ಆರೋಪಿಸುವಂತೆ ಬಿಜೆಪಿಯು ಭಾವನಾತ್ಮಕ ವಿಚಾರಗಳನ್ನೇ ಪ್ರಸ್ತಾಪಿಸಿದರೂ ಗ್ರಾಮೀಣಪ್ರದೇಶದ ಹೊಸಮತದಾರರು,ವಿದ್ಯಾವಂತರು ಮತ್ತು ನಗರವಾಸಿಗಳು ಏಕೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎನ್ನುವ ವಾಸ್ತವ ಕಾಂಗ್ರೆಸ್ ಪಕ್ಷದ ನಾಯಕರುಗಳಿಗೆ ಅರ್ಥವಾಗಿಲ್ಲ.ಓಲೈಕೆ ರಾಜಕಾರಣ,ಕೆಲವೇ ಜಾತಿಗಳ ಮೇಲೆ ವಿಶೇಷ‌ಪ್ರೀತಿಯೇ ಜನರು ಕಾಂಗ್ರೆಸ್ ನಿಂದ ದೂರ ಸರಿಯುತ್ತಿರುವ ಪ್ರಮುಖ ಕಾರಣ.

ಭಾರತದ ಸಂವಿಧಾನವೇ ಜಾತ್ಯಾತೀತ ತತ್ತ್ವವನ್ನು ಪ್ರತಿಪಾದಿಸುತ್ತಿದೆ.ಸಂವಿಧಾನವನ್ನು ಎತ್ತಿ ಹಿಡಿಯುತ್ತೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ನಾಯಕರುಗಳಿಗೆ ಭಾರತ ಸಂವಿಧಾನದ ಜಾತ್ಯಾತೀತ ತತ್ತ್ವವಾಗಲಿ ಅಥವಾ ಸಂವಿಧಾನದ ಪೀಠಿಕೆ( Preamble) ಆಗಲಿ ಮುಖ್ಯವೆನ್ನಿಸುವುದಿಲ್ಲ.ರಾಜ್ಯನೀತಿ ನಿರ್ದೇಶಕ ತತ್ತ್ವಗಳನ್ನು ಕಾಂಗ್ರೆಸ್ ನಾಯಕರು ಮರೆತೇಬಿಟ್ಟಿದ್ದಾರೆ.ಬಿಜೆಪಿಯವರದು ಸಂವಿಧಾನದ ಬಗ್ಗೆ ನಿರ್ಲಕ್ಷ್ಯ ಮನೋಭಾವವಾದರೆ ಕಾಂಗ್ರೆಸ್ ಪಕ್ಷದವರಿಗೆ ಸಂವಿಧಾನದ ಧ್ಯೇಯೋದ್ದೇಶಗಳ ಪೂರ್ಣ ಪರಿಚಯ ಇದ್ದಂತಿಲ್ಲ .ಬಾಬಾ ಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ಅವರು ದಲಿತರ ಉದ್ಧಾರದ ಅಗತ್ಯವನ್ನು ಪ್ರತಿಪಾದಿಸಿದರೂ ಇತರ ಹಿಂದುಳಿದ ವರ್ಗಗಳನ್ನು ಕಡೆಗಣಿಸಲಿಲ್ಲ.ದಲಿತರು,ಹಿಂದುಳಿದವರು ಸೇರಿದಂತೆ ಶೋಷಿತ ಸಮುದಾಯಗಳೆಲ್ಲರೂ ಸಾಮಾಜಿಕವಾಗಿ,ಆರ್ಥಿಕವಾಗಿ ಅಭಿವೃದ್ಧಿಹೊಂದಿ ರಾಜಕೀಯ ಅಧಿಕಾರ ಹಿಡಿಯಬೇಕು ಎನ್ನುವುದು ಬಾಬಾ ಸಾಹೇಬರ ಸ್ಪಷ್ಟ ಅಭಿಮತವಾಗಿತ್ತು.ಪ್ರಜಾಸಮೂಹದಲ್ಲಿ ಬಹುಸಂಖ್ಯಾತರಾಗಿರುವ ಶೂದ್ರಸಮುದಾಯ ಎನ್ನಬಹುದಾದ ಹಿಂದುಳಿದವರನ್ನು ಕಾಂಗ್ರೆಸ್ ಪಕ್ಷ‌ಕಡೆಗಣಿಸುತ್ತಲೇ ಬಂದಿದೆ.ರಾಜ್ಯದ ಮತದಾರರಲ್ಲಿ ಗಣನೀಯ ಸಂಖ್ಯಾಬಲ ಹೊಂದಿಲ್ಲದೆ ಇರುವ ಸಾಕಷ್ಟು ಸಣ್ಣಸಮುದಾಯಗಳಿವೆ.ಈ ಸಮುದಾಯಗಳತ್ತ ಕಾಂಗ್ರೆಸ್ ಪಕ್ಷದ ನಾಯಕರುಗಳ ದೃಷ್ಟಿ ಹರಿಯಲೇ ಇಲ್ಲ.ಜೊತೆಗೆ ಶೂದ್ರಸಮುದಾಯಗಳಲ್ಲಿ ಸಾಕಷ್ಟು ಜನರು ಬಡವರಿದ್ದಾರೆ,ಆರ್ಥಿಕವಾಗಿ ದುರ್ಬಲರಿದ್ದಾರೆ.ಅವರ ಅಭಿವೃದ್ಧಿಗೆ ಏನನ್ನಾದರೂ ಮಾಡಬೇಕು ಎಂದು ಅನ್ನಿಸಲೇ ಇಲ್ಲ ಕಾಂಗ್ರೆಸ್ ಪಕ್ಷಕ್ಕೆ.ಹಿಂದೆ ಇಂದಿರಾಗಾಂಧಿಯವರ ಹೆಸರು ಹೇಳಿ ಅಧಿಕಾರಕ್ಕೆ ಬರುತ್ತಿದ್ದ ಪಕ್ಷಕ್ಕೆ ಇಂದು ಅಂತಹ ವರ್ಛಸ್ಸಿ ನಾಯಕರುಗಳು ಇಲ್ಲದೆ ಇರುವುದು ಬಹುದೊಡ್ಡ ಸಮಸ್ಯೆಯಾದರೆ ಮತ್ತೊಂದು ಇರುವ ಕಾಂಗ್ರೆಸ್ ಪಕ್ಷದ ನಾಯಕರುಗಳಲ್ಲಿ ಹೊಸತನದ ತುಡಿತ ಮಿಡಿತಗಳಿಲ್ಲ,ರಾಜ್ಯದ ಪ್ರಜೆಗಳೆಲ್ಲರನ್ನು ಒಟ್ಟಿಗೆ‌ಕರೆದುಕೊಂಡು ಹೋಗುವ ಸಮಷ್ಟಿಪ್ರಜ್ಞೆಯ ಕೊರತೆ ಇದೆ.ಈ ಕಾರಣದಿಂದಲೇ ಮತದಾರರು ಕಾಂಗ್ರಸ್ ಪಕ್ಷದಿಂದ ದೂರ ಸರಿಯುತ್ತಿದ್ದಾರೆ.ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸರ್ವರನ್ನು ಒಳಗೊಳ್ಳುವ ನೀತಿ,ದೂರದೃಷ್ಟಿ,ಹಿಂದುಳಿದ ವರ್ಗದವರ ಬಗೆಗಿನ ಸ್ಪಷ್ಟ ಬದ್ಧತೆಗಳು ವ್ಯಕ್ತವಾಗುವವರೆಗೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟ.ಭಾವನಾತ್ಮಕ ವಿಷಯಗಳ ಜೊತೆಗೆ ಬಿಜೆಪಿಯು ಇಂತಹ ಸೂಕ್ಷ್ಮವಿಷಯಗಳನ್ನು ಜನಮಾನಸದಲ್ಲಿ ಹರಡುವ ಮೂಲಕ ಜನರನ್ನು ವಿಭಜಿಸಿ,ಲಾಭ ಪಡೆಯುತ್ತಿದೆ.ಕಾಂಗ್ರೆಸ್ ಪಕ್ಷವು ಎಚ್ಚೆತ್ತುಕೊಳ್ಳದಿದ್ದರೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ‘ ಕಾಂಗ್ರೆಸ್ ಮುಕ್ತ ಭಾರತ’ ದ ಪ್ರಯೋಗ ಕರ್ನಾಟಕದಲ್ಲಿಯೂ ಯಶಸ್ವಿಯಾಗಬಹುದು.

ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್,ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸರ್ವರನ್ನು ಒಳಗೊಳ್ಳುವ ಸಮಷ್ಟಿಉದ್ಧಾರದ ಪ್ರಜ್ಞೆಯ ಕೊರತೆ ಇರುವುದರಿಂದ ಸರ್ವರೋನ್ನತಿಯನ್ನು ಆದರ್ಶವಾಗಿಟ್ಟುಕೊಂಡ ಪ್ರಾದೇಶಿಕ ರಾಜಕೀಯ ಪಕ್ಷ ಒಂದರ ಉಗಮ ಅವಶ್ಯಕವಾಗಿದೆ.ಮುಂಬರುವ ದಿನಗಳಲ್ಲಿ ಸಮರ್ಥ ನಾಯಕತ್ವದ,ಸರ್ವಜನಾದರಣೀಯ ವ್ಯಕ್ತಿಯ ನೇತೃತ್ವದ ಪ್ರಾದೇಶಿಕ ಪಕ್ಷ ಒಂದು ಉದಯಿಸಬಹುದು.

About The Author